ಅಪರಾಧಿಗೆ ಖುಲಾಸೆ ಸಾಕ್ಷಿಗೆ ಸಜಾ

ಗೊರೂರು ರಾಮಸ್ವಾಮಿ ಅಯ್ಯಂಗಾರ್

 

 

ನಾನು ಕೆಲವು ವರುಷಗಳ ಹಿಂದೆ, ಇಂಗ್ಲೆಂಡಿನ ನ್ಯಾಯಾಲಯವೊಂದರಲ್ಲಿ ಒಂದು ಘಟನೆ ನಡೆದುದನ್ನು ಓದಿದ್ದೆ. ಯಾವುದೋ ಮೊಖದ್ದಮೆಯ ವಿಚಾರಣೆಯಾಗಿ, ಅಪರಾಧಿಗೆ ಮರಣದಂಡನೆಯಾಗಿತ್ತು. ವಿಚಾರಣೆ ನಿಷ್ಪಕ್ಷವಾಗಿ ನ್ಯಾಯಬದ್ಧವಾಗಿ ನಡೆದಿರಲಿಲ್ಲವೆಂದು ತೋರುತ್ತದೆ. ಅಪರಾಧಿಯನ್ನು ದಂಡಾಧಿಕಾರಿಗಳು ಎಳೆದುಕೊಂಡು ಹೋಗುತ್ತಿರುವಾಗ, ವಿಚಾರಣೆಯನ್ನು ನಿರೀಕ್ಷಸಲು ಬಂದಿದ್ದ ಒಬ್ಬ ಸಭ್ಯ ಗೃಹಸ್ಥ “ದೇವರ ದಯವಿಲ್ಲದಿದ್ದಲ್ಲಿ; ಅಲ್ಲಿ ಮರಣದಂಡನೆಗೆ ಹೋಗುತ್ತಿರುವವವನು ನಾನೇ ಆಗಿರಬಹುದಾಗಿತ್ತು" ಎಂದು ಉದ್ಗರಿಸಿದ.
ಈಗ ಕೆಲವು ವರುಷಗಳ ಹಿಂದೆ -ಸ್ವರಾಜ್ಯವನ್ನು ಗಳಿಸಿದ ಮೇಲೆ ನಮ್ಮೂರಿನಿಂದ ನಾಲ್ಕು ಮೈಲಿ ದೂರವಿರುವ ಹಳ್ಳಿಯೊಂದರಲ್ಲಿ, ಜಮೀನು ಒತ್ತುವರಿಯ ವಿಷಯದಲ್ಲಿ ನೆರೆಹೊರೆಯ ರೈತರಿಗೆ ಘರ್ಷಣೆಯುಂಟಾಗಿ ಇಬ್ಬರೂ ಒಬ್ಬರನ್ನೊಬ್ಬರು ಬಡಿದರು. ಒಬ್ಬ ರೈತ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಮೊಖದ್ದಮೆ ದಾಖಲುಮಾಡಿದ (ಪೋಲೀಸ್ ಕೇಸು). ನನಗೆ ಇಬ್ಬರು ರೈತರು ಆಪ್ತರು. ಇಬ್ಬರು ರೈತರಿಗೂ ರಾಜಿಮಾಡಿಸಲು ನಾನು ಬಹಳ ಪ್ರಯತ್ಮಪಟ್ಟೆ. ರಾಜಿಯಾಗುವ ಘಟ್ಟಕ್ಕೆ ಬಂದಿತ್ತು. ಆದರೆ ಒಬ್ಬ ರೈತನ ಭಾವಮೈದುನ ಪೋಲೀಸ್ ಇಲಾಖೆಯಲ್ಲಿದ್ದ. ಅವನು “ಎದುರಾಳಿ ರೈತನಿಗೆ ಸರಿಯಾಗಿ ಬುದ್ಧಿ ಕಲಿಸುತ್ತೇನೆಂದು" ಮೊಖದ್ದಮೆ ನಡೆಸಲು ತನ್ನ ಭಾವನನ್ನು ಪ್ರೋತ್ಸಾಹಿಸಿದ.
ಒಂದು ದಿನ, ನಮ್ಮ ತಾಲ್ಲೂಕಿನ ಒಬ್ಬ ಇನಸ್ಪೆಕ್ಟರು, ನನ್ನ ಮನೆಗೆ ಬಂದು, ನನ್ನ ಸಾಹಿತ್ಯವನ್ನು ಕುರಿತು ತುಂಬ ಪ್ರಶಂಸೆ ಮಾಡಿದರು. ಸಾಹಿತಿಗಳಿರುವ ದೌರ್ಬಲ್ಯಗಳಲ್ಲಿ ಪ್ರಶಂಸೆಯ ಆಶೆ ಹೆಚ್ಚಿನದು. ಎಲ್ಲ ಕಲೆಗಾರರಿಗೂ ಹಾಗೆಯೇ. ನನಗೆ ಪೋಲೀಸಿನವರಾದರೂ ಎಷ್ಟು ಸಾಹಿತ್ಯಾಭಿಮಾನಿಗಳು ಸುಸಂಸ್ಕೃತರು ಎಂದು ಅಭಿಮಾನವುಂಟಾಯಿತು. ಅವರು ಹೀಗೆ ಎರಡು ಮೂರು ಸಲ, ಒಂದೇ ವಾರದಲ್ಲಿ ನನ್ನನ್ನು ಸಂದರ್ಶಿಸಿ, ತುಂಬ ಸ್ನೇಹವನ್ನೇ ಬೆಳೆಸಿದರು. ನಂತರ ಒಂದು ದಿನ “ನಿಮ್ಮಂಥವರ ಸಹವಾಸ ದೊರೆತಿದ್ದು ನನ್ನ ಪುಣ್ಯ. ನಿಮ್ಮದು ಏನು ಜ್ಞಾನ, ಎಂಥ ಸಾಧನೆ, ಎಂಥ ಸೇವೆ, ಛೆ ಛೆ ಅದ್ಭುತ. ನಾನು ಒಂದೆರೆಡು ದಿನ ನಿಮ್ಮ ಜೊತೆಯಲ್ಲಿಯೇ ನಿಮ್ಮ ಸಹವಾಸದಲ್ಲಿಯೇ ಇದ್ದು ನಿಮ್ಮ ನಡವಳಿಕೆ, ಜೀವನಕ್ರಮ, ಪುಸ್ತಕ ಭಂಡಾರ ಎಲ್ಲವನ್ನೂ ನೋಡಬೇಕು. ಇದು ಎಲ್ಲರಿಗೂ ದೊರೆಯುವ ಭಾಗ್ಯವಲ್ಲ" ಎಂದರು. ನನಗೆ ಹಿಗ್ಗೊ ಹಿಗ್ಗು! ಜಾನ್ಸನ್‌ಗೆ ಬಾಸ್ವೆಲ್ ಸಿಕ್ಕಿದಂತೆ ನನಗೊಬ್ಬ ಚರಿತ್ರೆಕಾರನೇ ಸಿಕ್ಕಿದ ಎಂದು ಉಬ್ಬಿದೆ. ನಾನು “ಹಾಗೇ ಆಗಲಿ, ಬನ್ನಿ. ನಿಮಗೆ ಬೇಕಾದಾಗ ಬನ್ನಿ. ನಮ್ಮ ಮನೆಯಲ್ಲಿಯೇ ಇರಿ" ಎಂದೆ. ಎರಡು ದಿನಗಳ ನಂತರ ಸವಾರಿ, ಪೋಲೀಸ್ ಪೇದೆಯ ಕೈಯಲ್ಲಿ “ಹೋಲ್ಡಾಲ್" ಹೊರಿಸಿಕೊಂಡು ನನ್ನ ಮನೆಯಲ್ಲಿ ಬಂದು ಇಳಿಯಿತು. ಹಳ್ಳಿಯಲ್ಲಿ ಒಬ್ಬ ಸಾಮಾನ್ಯನ ಮನೆಯಲ್ಲಿ ಸಬ್‌ಇನಸ್ಪೆಕ್ಟರರು ಬಂದು ಉಳಿದುಕೊಳ್ಳುವುದೆಂದರೆ ಆ ಮನುಷ್ಯ ಘನತೆ ತುಂಬ ಮೇಲೆ ಏರಿದಂತೆಯೆ. ಸರಿ, ಒಂದಿಲ್ಲೊಂದು ನೆಪದಲ್ಲಿ ಊರವರೆಲ್ಲ ಬಂದು, ಸಬ್‌ಇನಸ್ಪೆಕ್ಟರೊಡನೆ ಪೆದ್ದ ನಗೆಯನ್ನು ನಕ್ಕು ಒಂದು ಎರಡು ಮಾತನಾಡಿ ಕೈ ಮುಗಿದು ಹೋದರು. ನಾನಂತು ಬಹುಮಟ್ಟಿಗೆ ನನ್ನ ಮಹಿಮೆಯ ವಿಷಯಕ್ಕೆ ಎಚ್ಚೆತ್ತು, ಜಗತ್ತೆಲ್ಲ ನನ್ನ ಚಲನವಲನಗಳನ್ನು ಈಕ್ಷಿಸುತ್ತಿದೆಯೋ ಎಂಬಂತೆ -ಒಬ್ಬ ನಾಟಕ ಪಾತ್ರಧಾರಿಯಂತೆ -ನನ್ನ ನಡವಳಿಕೆ ಮಾತು ಭಾವ ಎಲ್ಲವನ್ನೂ ಸಬ್‌ಇನಸ್ಟೆಕ್ಟರರ ಮನಸ್ಸಿನಲ್ಲಿ ಅಚ್ಚು ಒತ್ತುವುದಕ್ಕಾಗಿ ಹೇಗೆ ಹೇಗೋ ಆಡಿ ಬಿಟ್ಟೆ. ಸಬ್‌ಇನಸ್ಪೆಕ್ಟರು ನನ್ನ ಮನೆಯಿಂದ ಹೋದ ಕೆಲವು ದಿನಗಳ ನಂತರ, ನನಗೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಿಂದ ಹಿಂದೆ ಹೇಳಿದ, ನಮ್ಮ ನೆರೆ ಹಳ್ಳಿಯ ರೈತರ ವ್ಯಾಜ್ಯದಲ್ಲಿ ನಾನು ಫಿರ್‍ಯಾದಿಯ ಪರ-ಅಂದರೆ ಪೋಲೀಸರ ಪರ-ಸಾಕ್ಷಿಯಾಗಿ ಬರಬೇಕೆಂದು ಆಜ್ಞಾಪತ್ರ ಬಂದಿತು. ಸರ್ಕಾರದ ಪರ ನಾನು ಯಾಕೆ ಸಾಕ್ಷಿ ಎಂದು ನನಗೆ ದಿಗ್ಭ ಮೆಯೇ ಆಯಿತು. ನನ್ನನ್ನು ಯಾರು ಕೇಳಲೂ ಇಲ್ಲ. ನಾನು ಒಪ್ಪಿಯೂ ಇರಲಿಲ್ಲ. ಹಾಗಾದರೆ “ನನ್ನನ್ನು ಕೇಳದೆಯೇ ನನ್ನನ್ನು ಸಾಕ್ಷಿಯಾಗಿ ಮಾಡಬಹುದೇ?" ಎಂದು ಒಬ್ಬ ವಕೀಲರನ್ನು ನಾನು ಕೇಳಿದೆ. ಅವರು “ಮಾಡಬಹುದು. ಪೋಲೀಸಿನವರು ಸಾಕ್ಷ್ಯಗಳನ್ನು ಸಂಗ್ರಹಿಸುವುದೇ ಹಾಗೆ. ಲೋಕಾಭಿರಾಮವಾಗಿ ನೀವು ಅವರಿಗೆ ಏನನ್ನೋ ಹೇಳಿದ್ದರೂ ಅವೆಲ್ಲ ಅಧಿಕೃತ ಸಾಕ್ಷಗಳಾಗುತ್ತವೆ" ಎಂದರು. ನಾನು ನನ್ನ ಉತ್ಸಾಹದಲ್ಲಿ ನನ್ನ ಅತಿಥಿ ಸಬ್‌ಇನಸ್ಪಕ್ಟರನ ಹತ್ತಿರ ಏನೇನು ಹೇಳಿದೆನೊ ಎಂದು ಚಿಂತಾಕ್ರಾಂತನಾದೆ. ಆ ಮೊದಲನೆಯ ವಿಚಾರಣೆಗೆ ನಾನು ಹೋಗಲಿಲ್ಲ. ಮುಂದಲ ವಿಚಾರಣಾದಿನ ಬರುವನೆಂದು ಬರೆದು ಹಾಕಿದೆ.

 

ಇದ್ದಕ್ಕಿದ್ದಂತೆ ಒಂದು ದಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಒಬ್ಬ ನೌಕರ ಬಂದು ನನಗೆ “ಅರೆಸ್ಟ್ ವಾರಂಟ್" ತಂದಿರುವುದಾಗಿ ಹೇಳಿದ. ಬ್ರಿಟಿಷರ ಕಾಲದಲ್ಲಿ ಮಾತ್ರ ಹೋರಾಟಗಾರನಾಗಿ ದಸ್ತಗಿರಿಯಾದದ್ದು ನನಗೆ ಅಭ್ಯಾಸ. ನೌಕರ ಆವತ್ತಿನಿಂದ ಮುಂದೆ ಎರಡು ದಿನಕ್ಕೆ ಒತ್ತುವರಿ ವ್ಯಾಜ್ಯದ ವಿಚಾರಣೆಯಲ್ಲಿ ನನ್ನ ಸಾಕ್ಷ್ಯವಿರುವುದೆಂದೂ ನಾನು ಹಿಂದಲ ತಾರೀಖುಗಳಲ್ಲಿ ಹೋಗದುದರಿಂದ ನನಗೆ ದಸ್ತಗಿರಿ ವಾರಂಟು ತಂದಿರುವುದಾಗಿಯೂ ಹೇಳಿದ. ನಾನು “ವಿಚಾರಣೆ ನಾಡದ್ದು ಇರುವುದರಿಂದ ನಾನು ಇವತ್ತೇ ಯಾಕೆ ಬರಬೇಕು, ನಾಡದ್ದು ಬರುತ್ತೇನೆ" ಎಂದೆ. ನೌಕರನು “ಅದು ಸಾಧ್ಯವಿಲ್ಲ. ನಾಡದ್ದು ವಿಚಾರಣೆ ಇದ್ದರೂ, ನಾಳೆ ನನಗೆ ಬೇರೆ ಕೆಲಸವಿರುವುದರಿಂದ ಇವತ್ತೇ ನಿಮ್ಮನ್ನು ಕರೆದುಕೊಂಡು ಹೋಗಬೇಕು. ನಾಡದ್ದು ಬರುವುದಕ್ಕೆ ಅವಕಾಶವಿಲ್ಲ" ಎಂದ. ನಾನು “ಹಾಗಾದರೆ ಒಂದು ವಾಹನವನ್ನು ತೆಗೆದುಕೊಂಡು ಬಾ" ಎಂದೆ. (ನನ್ನ ಆರೋಗ್ಯ ನಿಜವಾಗಿ ಸ್ವಲ್ಪ ಕೆಟ್ಟಿತ್ತು) ಅವನಿಗೆ ಕಷ್ಟ ಬಂದಿತು.
ಹಳ್ಳಿಯಲ್ಲಿ ಯಾವುದೇ ವಾಹನ ಇರಲಿಲ್ಲ. ಅವನು “ವಾಹನಕ್ಕೆ ಮಂಜೂರಾತಿ ಇಲ್ಲ" ಎಂದ ಕೊನೆಗೆ ಅವನೇ “ಯಾರನ್ನಾದರೂ ಜಾಮೀನು ಕೊಡಿ. ವಿಚಾರಣೆಯ ದಿನ ನ್ಯಾಯಾಲಯಕ್ಕೆ ಬರಬಹುದು." ಎಂದ. ನಾನು “ಜಾಮೀನು ಕೊಡಲು ನಾನೇನೂ ತಪ್ಪು ಮಾಡಿಲ್ಲ ಹೋಗು" ಎಂದೆ. ಅನಂತರ ಅವನೇ ಗ್ರಾಮದ ಪಟೇಲರಲ್ಲಿ ಹೋಗಿ ಅವರನ್ನು ಒಪ್ಪಿಸಿ “ಅವರು ಜಾಮೀನಾಗ್ತಾರೆ. ನೀವು ರುಜು ಹಾಕಿ" ಎಂದ. ನಾನು ವಾರಂಟಿನ ಮೇಲೆಯೇ “ಫಿರ್‍ಯಾದಿಗಳೂ ಅಪರಾಧಿಗಳೂ ಸ್ವತಂತ್ರವಾಗಿ ತಿರುಗಾಡುತ್ತಿದ್ದಾರೆ. ಸಾಕ್ಷಿಯಾಗಿ ನನಗೆ ವಾರಂಟ್. ಹೀಗಿದೆ ನ್ಯಾಯಾಲಯದ ನ್ಯಾಯವಿತರಣಾವೈಖರಿ" ಎಂದು ಬರೆದು ರುಜು ಹಾಕಿದೆ.
ಆ ವಿಚಾರಣೆಯ ದಿನ-ಮತ್ಯಾವುದೋ ಬೇರೆ ಮೊಖದ್ದಮೆಯಿಂದಾಗಿ ನ್ಯಾಯಾಲಯದಲ್ಲಿ ಜನಸಂದಣಿ ಹೆಚ್ಚಾಗಿ, ಕೂರುವುದಕ್ಕೂ ಸಹ ಸ್ಥಳವಿಲ್ಲದೆ ನಾನು ವಕೀಲರ ಕೊಠಡಿಯಲ್ಲಿ ಕುಳಿತಿದ್ದೆ. ನಾನು ಪೋಲೀಸರ ಪರ ಸಾಕ್ಷಿಯಾದುದರಿಂದ, ಯಾರಾದರೂ ಬಂದು ನನ್ನನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗುತ್ತಾರೆಂದು ಭಾವಿಸಿದೆ. ಅವರು ಬಂದು ಮೊಖದ್ದಮೆಯ ವಿಷಯ, ನನಗೆ ಏನಾದರೂ ಸಲಹೆ ಕೊಡಬಹುದೆಂದು ಭಾವಿಸಿದೆ. ಆದರೆ ಯಾರೊಬ್ಬರೂ ಬರಲೇ ಇಲ್ಲ. ಪೋಲೀಸಿನವರು ನನ್ನನ್ನು ಅಲ್ಲಿ ಕಂಡರೂ ಸಾಕ್ಷಿ ಹೇಳಬೇಕೆಂದು ಕರೆಯಲಿಲ್ಲ. ಮಧ್ಯಾಹ್ನ ೩ ಗಂಟೆಯ ಸಮಯ. ನ್ಯಾಯಾಲಯಕ್ಕೆ ಹೋಗಿದ್ದ, ನನ್ನ ವಕೀಲ ಮಿತ್ರರಿಬ್ಬರು ವಕೀಲರ ವಿಶ್ರಾಂತಿ ಕೊಠಡಿಗೆ ಹಿಂದಿರುಗಿದರು. “ನಿಮ್ಮ ಮೇಲೆ ಎರಡನೆಯ ವಾರಂಟು ಗೀರಂಟು ಎಂದು ಪ್ರಸ್ತಾಪಮಾಡುತ್ತಿದ್ದರು. ಹೋಗಿ ನೋಡಿ" ಎಂದರು. ನಾನು ಸಂಗತಿಗಳನ್ನೆಲ್ಲ ಅವರಿಗೆ ಹೇಳಿ “ವಾರಂಟಿನಿಂದಾಗಿಯೇ ಇಲ್ಲಿ ಬಂದಿದ್ದೇನೆ. ಯಾರೂ ಕರೆಯಲಿಲ್ಲ." ಎಂದೆ. ಅವರು “ಹೋಗಿ ನೋಡಿ ಇಲ್ಲದಿದ್ದರೆ ನಿಮ್ಮ ಮೇಲೆ ಇನ್ನೊಂದು ವಾರಂಟು ಹುಟ್ಟಬಹುದು" ಎಂದರು. ನಾನು ಕೂಡಲೇ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹೋದೆ. ಅಲ್ಲಿ ಗದ್ದಲ ಕಡಿಮೆಯಾಗಿರಲಿಲ್ಲ. ನಾನು ಮ್ಯಾಜಿಸ್ಟ್ರೇಟ್‌ರಿಗೆ ಕೈಮುಗಿದು, ಗೋಡೆ ಮಗ್ಗುಲಲ್ಲಿದ್ದ ಬೆಂಚಿನ ತುದಿಯಲ್ಲಿ ಕುಳಿತೆ. ಮ್ಯಾಜಿಸ್ಟ್ರೇಟರು ತಲೆ ಬಗ್ಗಿಸಿಕೊಂಡು ಏನನ್ನೋ ಬರೆಯುತ್ತಿದ್ದರು. ನಾನು ಸ್ವಲ್ಪ ಹೊತ್ತಿನನಂತರ ಎದ್ದು “ನನ್ನ ಮೇಲೆ ವಾರಂಟು ಹುಟ್ಟಿತ್ತು. ನಾನು ಕೋರ್ಟ್ ಪ್ರಾರಂಭವಾದ ಹೊತ್ತಿನಿಂದ ಹೊರಗಡೆಯೇ ಕುಳಿತಿದ್ದೇನೆ. ನನ್ನನ್ನು ಯಾರೂ ಕರೆಯಲಿಲ್ಲ. ಮೊಖದ್ದಮೆ ಕೂಗಿಸಿದ್ದೂ ಕೇಳಿಸಲಿಲ್ಲ" ಎಂದೆ. ಮ್ಯಾಜಿಸ್ಟ್ರೇಟರು ಗುಮಾಸ್ತರ ಕಡೆ ನೋಡಿ “ಕೇಸು ಕೂಗಿಸಿಲ್ಲವೆ? ಯಾಕೆ ಕೂಗಿಸಲಿಲ್ಲ?" ಎಂದರು. ಗುಮಾಸ್ತರು ಸ್ವಲ್ಪ ಬಗ್ಗಿ ಸಣ್ಣಧ್ವನಿಯಲ್ಲಿ “ಇನಸ್ಪಕ್ಟರ ಮೊಖದ್ದಮೆ ಸಿದ್ಧವಾಗಿಲ್ಲ ಎಂದು ಹೇಳಿದುದರಿಂದ, ಕೋರ್ಟ್ ಅಡ್ಜರ್‍ನ್‌ಮೆಂಟು ಕೊಟ್ಟಿದೆಯಲ್ಲ" ಎಂದು ಮೆತ್ತಗೆ ಇನ್ನೂ ಏನೋ ಹೇಳಿದರು. ಎರಡನೆಯ ವಾರಂಟು ಎಂಬ ಮಾತು ನನಗೆ ಕೇಳಿಸಿತು. ಕೇಳಿದ ಕೂಡಲೇ ಮ್ಯಾಜಿಸ್ಟ್ರೇಟರು ಸರ್ರನೆ ತಲೆಯೆತ್ತಿ ನುಂಗುವಂತೆ ನನ್ನನ್ನೇ ನೋಡಿ, ಸ್ವಲ್ಪ ಎತ್ತರಿಸಿದ ಧ್ವನಿಯಲ್ಲಿ “ಕಡತವನ್ನು ತನ್ನಿ" ಎಂದರು. ಗುಮಾಸ್ತರು ಅಲ್ಲಿಯೆ ಸ್ವಲ್ಪ ಹಿಂದುಗಡೆಯ ಬೀರುವಿನಲ್ಲಿದ್ದ ಕಡತವನ್ನು ತಂದುಕೊಟ್ಟರು. ಮ್ಯಾಜಿಸ್ಟ್ರೇಟರು ಸರಸರನೆ ಕಡತವನ್ನು ಬಿಚ್ಚಿ, ನಾನು ವಾರಂಟಿನ ಮೇಲೆ ಬರೆದಿದ್ದನ್ನು “ಸಾಕ್ಷಿಗೆ ಸಜ" ತೋರಿಸಿ, “ಹೀಗೆಲ್ಲ ವಾರಂಟ್ ಮೇಲೆ ಬರೆಯೋದು ತಪ್ಪು. ಇದು ನೇರ ಕೋರ್ಟ್ ನಿಂದನೆ" ಎಂದರು. ನಾನು “ಇದರಲ್ಲಿ ಕೋರ್ಟ್ ನಿಂದನೆ ಏನೂ ಇಲ್ಲ. ಇರುವ ಸಂಗತಿ ಬರೆದಿದ್ದೇನೆ. ಈಗ ನೋಡಿ ಅಪರಾಧಿ ಸ್ವತಂತ್ರವಾಗಿದ್ದಾನೆ. ನನ್ನ ಮೇಲ
ೆ ಎರಡು ವಾರಂಟು" ಎಂದೆ. ಮ್ಯಾಜಿಸ್ಟ್ರೇಟರಿಗೆ ವಿಷಯ ಸರಿಯಾಗಿ ಅರ್ಥವಾದುದು ಆಗಲೇ. ಅವರು ಗುಮಾಸ್ತರಿಗೆ “ಈ ವಿಷಯ ನೀವು ನನಗೆ ಸ್ಪಷ್ಟವಾಗಿ ತಿಳಿಸಲಿಲ್ಲ, ಇವರು `ಪ್ರಾಸಿಕ್ಯೂಷನ್ ಸಾಕ್ಷಿ’ ಎಂದೂ ಹೇಳಲಿಲ್ಲ" ಎಂದರು. ಗುಮಾಸ್ತನು ನಿರುಪಾಯನಾಗಿ `ಸಾಕ್ಷಿ ಬಂದಿಲ್ಲ’ ಎಂದು ನಾನು ಅರಿಕೆ ಮಾಡಿದಾಗ ತಾವು `ನಿಯಮದಂತೆ ಅರೆಸ್ಟ್ ವಾರಂಟ್ ಕೊಡಿ’ ಎಂದು ಅಪ್ಪಣೆ ಮಾಡಿದಿರಿ ಎಂದನು. ಮ್ಯಾಜಿಸ್ಟ್ರೇಟರಿಗೆ ಸ್ವಲ್ಪ ಕಿರಿಕಿರಿಯಾಯಿತು. ಅವರು “ವಾರಂಟ್ ವಜಾ ಮಾಡಿ" ಎಂದರು. ಅನಂತರ ತಮ್ಮ ಮನಸ್ಸಮಾಧಕ್ಕೋ ಎಂಬಂತೆ ನನ್ನ ಕಡೆ ತಿರುಗಿ “ಮುಂದಲ ವಿಚರಣಾ ತಾರೀಖು ನಿಮಗೆ ತಿಳಿದಿರುವುದಕ್ಕೆ ರುಜು ಮಾಡಿ" ಎಂದರು. ಗುಮಾಸ್ತ ಕಡತದ ಮೇಲೆ ನನ್ನ ರುಜು ಪಡೆದ. ಮುಂದಲ ವಿಚಾರಣೆಯ ದಿನಾಂಕ ವಿಚಾರಣೆ ನಡೆಯಿತು. ನನ್ನ ಸಾಕ್ಷಿಯೂ ಆಯಿತು. ಮೊಖದ್ದಮೆ ವಜ ಆಯಿತು.
ಆ ವೇಳೆಗೆ ಆಡ್ವೊಕೇಟ್ ಎಂ. ಆರ್. ನಾರಾಯಣರಾವ್ ಬಂದರು. ನಾನು ಯಾಕೆ ಅಲ್ಲಿ ಬಂದಿದ್ದೆ ಎಂದು ವಿಚಾರಿಸಿದರು. ನಾನು ವಕೀಲರನ್ನು ಆಗಾಗ ವಿನೋದ ಮಾಡುತ್ತಿದ್ದೆ. “ವಕೀಲರೂ ನ್ಯಾಯಾಲಯಗಳೂ ಇಲ್ಲದಿದ್ದರೆ ಜನ ಸುಖವಾಗಿರುತ್ತಾರೆ. ವಕೀಲರದು ಅನ್ಯಾಯದ ದುಡ್ಡು" ಎಂದೆಲ್ಲ ಹೇಳುತ್ತಿದ್ದೆ. ನಾರಾಯಣರಾಯರು ನನಗೆ “ನೀವು ವಕೀಲರನ್ನು ನಿಂದನೆ ಮಾಡುತ್ತಿದ್ದಿರಿ. ಈಗ ನೋಡಿ, ಧರ್ಮರಾಯನಿಗೆ ನರಕ ದರ್ಶನವಾದಂತೆ ನಿಮಗೆ ಕ್ರಿಮಿನಲ್ ಕೋರ್ಟ್ ವಾರಂಟು ಬಂತು" ಎಂದರು.

Leave a Reply