Press "Enter" to skip to content

ಹಾಂಗ್ ಕಾಂಗ್ ಕನ್ನಡ ಸಂಘದಲ್ಲಿ ಯುಗಾದಿ ಆಚರಣೆ

ಅದು ಸಂಜೆಯ ೬ ಘಂಟೆಯ ಸಮಯ, ಹಾಂಗ್ ಕಾಂಗ್ ಕನ್ನಡಿಗರಿಗೆ ಹಬ್ಬದ ವಾತಾವರಣ. “ಯುಗ ಯುಗಾದಿ ಕಳೆದರೂ ಯುಗದಿ ಮರಳಿ ಬರುತಿದೆ, ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ” ಎಂಬ ಕವಿವಾಣಿ ಹಾಂಗ್ ಕಾಂಗ್ ಕನ್ನಡಿಗರಿಗರಲ್ಲಿ ಹೊಸ ರೂಪ ಪಡೆದಿತ್ತು. ಹೊರನಾಡ ಕನ್ನಡಿಗರಿಂದ ದಿನಾಂಕ ೨೪ ರಂದು ಯುಗಾದಿ ಹಬ್ಬದ ಆಚರಣೆ ಸಂಭ್ರಮದಿಂದ ನಡೆಯಿತು.

ವಿಘ್ನನಿವಾರಕ ವಿಘ್ನೇಶ್ವರನ ಪೂಜೆಯಿಂದ ಆರಂಭಗೊಂಡ ಕಾರ್ಯಕ್ರಮ ರಾಷ್ಟ್ರಗೀತೆಯೊಂದಿಗೆ ಮುಕ್ತಾಯಗೊಂಡಿತು. ಪೂಜೆಯ ನಂತರ ಎಲ್ಲರಿಗೂ ಬೇವು ಬೆಲ್ಲ ವಿತರಿಸಲಾಯಿತು. ಮೊದಲಿಗೆ ಪ್ರಸಕ್ತ ಸಾಲಿನ ಕನ್ನಡ ಸಂಘದ ಅದ್ಯಕ್ಷರಾದ ಶ್ರೀ ರಾಜೇಶ ಕುಲಕರ್ಣಿಯವರು ಸ್ವಾಗತಿಸುತ್ತಾ ಮಾತನಾಡಿ ಕಳೆದ ಸಾಲಿನ ಕಾರ್ಯಕ್ರಮಗಳ ಬಗ್ಗೆ ತಿಳಿಸಿದರು ಹಾಗೂ ಈ ಸಾಲಿನ ಕಾರ್ಯಕ್ರಮಗಳ ಪಕ್ಷಿನೋಟ ಒದಗಿಸಿದರು. ಈ ವರ್ಷದ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ಶ್ರೀ ರಾಜೇಶ ಕುಲಕರ್ಣಿ, ಶ್ರೀ ರವಿ ಪ್ರಕಾಶ ಹಾಗೂ ಡಾ. ಗುರುಮೂರ್ತಿ ಹೆಗಡೆ ಅವರ ಕಿರು ಪರಿಚಯ ಮಾಡಿ ಕೊಟ್ಟರು. ಕರ್ನಾಟಕದಲ್ಲಿ ಪ್ರತಿಭೆಗಳಿಗೆ ಬರವಿಲ್ಲ ಎಂಬುದು ಹಾಂಗ್ ಕಾಂಗ್ ನಲ್ಲೂ ಧೃಡಪಟ್ಟಿತು. ಪುಟ್ಟ ಪುಟ್ಟ ಮಕ್ಕಳ ಪ್ರತಿಭಾ ಪ್ರದರ್ಶನ ನೋಡುಗರ ಮನ ಸೂರೆಗೊಂಡಿತು. ಬಗೆ ಬಗೆಯ ನೃತ್ಯ, ಬಗೆ ಬಗೆಯ ಹಾಡುಗಳು, ನಾಟಕ, ರಸಪ್ರಶ್ನೆ, ಎಲ್ಲವೂ ಕಣ್ಣಿಗೆ ಕಟ್ಟುವಂತಿದ್ದವು.
ಹಳೆ ಬೇರು ಹೊಸ ಚಿಗುರು, ಕೂಡಿದರೆ ಮರ ಸೊಬಗು ಎಂಬಂತೆ ಮಕ್ಕಳೊಂದಿಗೆ ದೊಡ್ಡವರೂ ಕಾರ್ಯಕ್ರಮ ನೀಡಿದರು. ಹಿರಿಯರು, ಕಿರಿಯರ ಮಿಶ್ರಣದ ಮನರಂಜನಾ ಕಾರ್ಯಕ್ರಮ ನೆರೆದ ಜನರಿಗೆ ತಾಯ್ನಾಡನ್ನೇ ನೆನಪಿಗೆ ತರಿಸುವಂತಿತ್ತು. ಮಕ್ಕಳ ಸೃಜನಶೀಲತೆಯನ್ನು ಬೆಳಕಿಗೆ ತರುವ ಹಾಂಗ್ ಕಾಂಗ್ ಕನ್ನಡ ಸಂಘದ ಪ್ರಯತ್ನ ನಿಜಕ್ಕೂ ಶ್ಲಾಘನೀಯ. ಹೊರನಾಡ ಕನ್ನಡಿಗರ ಕನ್ನಡ ಪ್ರೀತಿ ಎಲ್ಲರ ಮನವ ಗೆದ್ದಿತ್ತು ಎನ್ನಬಹುದು.
ಕೊನೆಯಲ್ಲಿ ಗುರುಮೂರ್ತಿ ಹೆಗಡೆಯವರ ವಂದನಾರ್ಪಣೆ, ನಾಡಗೀತೆ, ರಾಷ್ತ್ರಗೀತೆ ಮತ್ತು ಸಿಹಿತಿಂಡಿ ವಿತರಣೆಯೊಂದಿಗೆ ಸಂಭ್ರಮದ ಸರ್ವಜಿತು ಸಂವತ್ಸರವನ್ನು ಬರಮಾಡಿಕೊಳ್ಳಲಾಯಿತು.

Be First to Comment

Leave a Reply

Your email address will not be published. Required fields are marked *