ಸ್ಫೂರ್ತಿವನ ಜಾಲತಾಣದ ಉದ್ಘಾಟನೆ
ಬೆಂಗಳೂರು, ಜನವರಿ ೨೬, ೨೦೦೬: ಪರಿಸರ ಮತ್ತು ಬೆಂಗಳೂರು ಜಲಮಂಡಳಿ ಸಂಯುಕ್ತವಾಗಿ ನಡೆಸುತ್ತಿರುವ “ಸ್ಫೂರ್ತಿವನ” ಯೋಜನೆಯ ಜಾಲತಾಣವನ್ನು ಶ್ರೀ ಚಿರಂಜೀವಿ ಸಿಂಗ್ ಅವರು ಬೆಂಗಳೂರಿನಲ್ಲಿ ಇಂದು ಉದ್ಘಾಟಿಸಿದರು. ಅವರು ಮಾತನಾಡುತ್ತ “ಇಂದು ಅಂದರೆ ಗಣರಾಜ್ಯೋತ್ಸವದ ದಿನ ಎಲ್ಲರಿಗೂ ಸ್ಫೂರ್ತಿಯ ದಿನ. ಇಂದೇ ಸ್ಫೂರ್ತಿವನದ ಜಾಲತಾಣದ ಉದ್ಘಾಟನೆಯಾಗುತ್ತಿರುವುದು ಸಂತಸದ ವಿಷಯ” ಎಂದರು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧ್ಯಕ್ಷರಾದ ಶ್ರೀ ಅಶೋಕ ಕುಮಾರ ಮನೋಲಿಯವರು ಅಧ್ಯಕ್ಷ ಭಾಷಣ ಮಾಡಿ “ಸ್ಫೂರ್ತಿವನ ಒಂದು ಒಳ್ಳೆಯ ಕೆಲಸ. ನಮ್ಮ ಉದ್ಯೋಗಿಗಳು ಕೂಡ ತಮ್ಮ ನಿವೃತ್ತಿ, ಮಕ್ಕಳಿಂದ ಪರೀಕ್ಷೆಯಲ್ಲಿ ಉತ್ತಮ ಸಾಧನೆ, ಹೀಗೆ ಯಾವುದೇ ಕಾರಣಕ್ಕೂ ಸ್ಫೂರ್ತಿವನದಲ್ಲಿ ಮರಗಳನ್ನು ಪ್ರಾಯೋಜಿಸಬಹುದು” ಎಂದರು. ಪರಿಸರದ ಮತ್ತು ಸ್ಫೂರ್ತಿವನದ ಸಂಚಾಲಕ ಶ್ರೀ ಈಶ್ವರ ಪ್ರಸಾದ ಅವರು ಸ್ಫೂರ್ತಿವನ ಯೋಜನೆಯ ಬಗ್ಗೆ ವಿವರ ನೀಡಿದರು.