ವಿಪ್ರೊ ಕಂಪೆನಿಯಲ್ಲಿ ರಾಜ್ಯೋತ್ಸವ
ವಿಪ್ರೊ ಕಂಪೆನಿಯ ಇತಿಹಾಸದಲ್ಲೆ ಪ್ರಪ್ರಥಮ ಬಾರಿಗೆ ಕನ್ನಡ ರಾಜ್ಯೋತ್ಸವದ ಸುವರ್ಣ ಸಂಭ್ರಮದ ಅಂಗವಾಗಿ ನವಂಬರ್ ೩೦, ೨೦೦೫ ರಂದು ಎಲೆಕ್ಟ್ರೋನಿಕ್ ಸಿಟಿಯಲ್ಲಿ ಇರುವ ವಿಪ್ರೊ ಕಚೇರಿಯಲ್ಲಿ “ವಿಸ್ಮಯ” ಎಂಬ “ನಾಡು ನುಡಿ ಕಲೆ ಭಾಷೆ ಸಾಹಿತ್ಯ ಸಂಸ್ಕೃತಿ ಸಂಗೀತಗಳ ವೈವಿಧ್ಯಮಯ ರಸಸಂಜೆ” ಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. ಸುಮಾರು ೨೫೦೦ಕ್ಕು ಹೆಚ್ಚು ಕನ್ನಡಾಭಿಮಾನಿಗಳು ಮತ್ತು ಕನ್ನಡೇತರರು ಈ ಕಾರ್ಯಕ್ರಮದ ಆನಂದವನ್ನು ಸವಿದರು.
ವಿಪ್ರೊ ಕನ್ನಡ ಬಳಗ ಎಂಬ ಒಂದು ಗುಂಪಿನ ಮೂಲಕ ವಿಪ್ರೊ ಕಚೇರಿಯಲ್ಲಿರುವ ಸಹಸ್ರಾರು ಕನ್ನಡಿಗರನ್ನು ಒಂದುಗೂಡಿಸಿ ಪ್ರಥಮ ಬಾರಿಗೆ “ವಿಸ್ಮಯ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಪಾರ ಜನಸ್ತೋಮದ ನಡುವೆ ವಿಶೇಷ ಆಹ್ವಾನಿತರಾದ ಚಿತ್ರನಟ ಪ್ರಣಯರಾಜ ಶ್ರೀನಾಥ್, ನಿರ್ದೇಶಕ ಕಟ್ಟೆ ರಾಮಚಂದ್ರ, ನೆ ಲ ನರೇಂದ್ರಬಾಬು, ಹಿರಿಯ ಸಾಹಿತಿ ಪಾರ್ವತೀಸುತ ಅವರ ಮೂಲಕ ಜ್ಯೋತಿ ಬೆಳಗಿಸುವುದರೊಡನೆ, ನಿಸಾರ್ ಅಹ್ಮೆದ್ ರವರ “ನಿತ್ಯೋತ್ಸವ” ಹಾಗು ಡಿ. ಎಸ್. ಕರ್ಕಿ ಅವರ “ಹಚ್ಚೇವು ಕನ್ನಡದ ದೀಪ” ಗೀತೆಗಳ ಗಾಯನದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ಆಯಿತು.
ಈ ಕಾರ್ಯಕ್ರಮಕ್ಕೆ ನಿರ್ವಾಹಕರಾಗಿ ಈ-ಟಿವಿ ಕನ್ನಡ ವಾಹಿನಿಯ “ಡಿಮಾಂಡಪ್ಪೊ ಡಿಮಾಂಡು” ಖ್ಯಾತಿಯ ಸಂಜೀವ ಕುಲಕರ್ಣಿ ಬಂದಿದ್ದರು. ಇವರು ಕಾರ್ಯಕ್ರಮದಲ್ಲಿ ಒಂದೇ ಒಂದು ಇಂಗ್ಲೀಶ್ ಪದ ಬಳಸದೆ ಬಹಳ ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ಕಡೆಯವರೆಗು ನಡೆಸಿಕೊಟ್ಟರು. ಉದಾಹರಣೆಗೆ ಗಣಕಯಂತ್ರ, ಕೀಲಿಮಣೆ, ಅಭಯಂತರರರು, ಇಲಿ, ಮಾಹಿತಿ ತಂತ್ರಜ್ಞಾನ ಇತ್ಯಾದಿ ಪದಗಳನ್ನು ಉಪಯೋಗಿಸಿ ನೆರೆದವರ ಚಪ್ಪಾಳೆ, ಗಿಟ್ಟಿಸಿದರು.
ಈ ಕಾರ್ಯಕ್ರಮದಲ್ಲಿ ಅನೇಕ ಸುಗಮ ಸಂಗೀತ, ಭಾವಗೀತೆ, ಚಿತ್ರಗೀತೆಗಳನ್ನು ವಿಪ್ರೊನಲ್ಲಿ ಕೆಲಸ ಮಾಡುತ್ತಿರುವವರೆ ಬಹಳ ಮಧುರವಾಗಿ ಹಾಡಿದರು. ಇವರೊಡನೆ, ಹೆಸರಾಂತ ಗಾಯಕ ಪಂಚಮ ಹಳಿಬಂಡಿ, ಸುಪ್ರಿಯ ಆಚಾರ್ಯ ಕೂಡ ಭಾವಗೀತೆಗಳನ್ನು ಹಾಡಿದರು.
ಸಂತ ಶಿಶುನಾಳ ಶರೀಫರ ಕೊಡಗನ ಕೋಳಿ ನುಂಗಿತ್ತಾ, ತರವಲ್ಲ ತಂಬೂರಿ, ಸೋರುತಿಹುದು ಮನೆಯ ಮಾಳಿಗೆ , ಟಿ. ಪಿ.ಕೈಲಾಸಂರವರ ಕೋಳೀಕೆರಂಗ, ಜಿ.ಪಿ. ರಾಜರತ್ನಂರವರ ಬ್ರಹ್ಮ ನಿನ್ಗೆ ಜೋಡಿಸ್ತೀನಿ, ಹಾಗು ರಾಷ್ಟ್ರಕವಿ ಕುವೆಂಪುರವರ ಕೆಲ ಗೀತೆಗಳನ್ನು ವಿಪ್ರೊದ ಪ್ರವೀಣ್, ವಿಕ್ರಮ್ ಹಾಗು ಪಂಚಮ್ ಅವರು ಸುಮಧುರವಾಗಿ ಹಾಡಿದರು. ಭಾವಗೀತೆಗಳಲ್ಲದೆ ಉತ್ತಮ ಚಲನಚಿತ್ರಗೀತೆಗಳನ್ನೂ ವಿಪ್ರೋದ ಉದ್ಯೋಗಿಗಳು ಪ್ರಸ್ತುತ ಪಡಿಸಿದರು.
ಇದರ ಜೊತೆಗೆ ವೇಣುವಾದನ ಮತ್ತು ಮೃದಂಗ ಸಂಗೀತಗಳು ಸಹ ಹರಿದು ಬಂದವು. ಐಟಿ ಕ್ಷೇತ್ರದಲ್ಲಿರುವ ಕನ್ನಡಿಗರಲ್ಲಿ ಇಂತಹ ಪ್ರತಿಭೆಗಳಿರುವುದು ಎಲ್ಲರಿಗು ಸಂತೋಷವನ್ನುಂಟುಮಾಡಿತು.ಇದರ ಜೊತೆ ಜೋಗಿ ಚಿತ್ರದ ಏಳು ಮಲೆ ಹಾಗು ಡಾ. ರಾಜ್ ಅವರ ಹುಟ್ಟಿದರೆ ಹಾಡುಗಳಿಗೆ ನೃತ್ಯವನ್ನು ಸಹ ಮಾಡಲಾಯಿತು.
ಜೊತೆ ನಮ್ಮ ರಾಜ್ಯದ ವಿವಿಧ ಭಾಗಗಳ ಅಂದರೆ, ಹುಬ್ಬಳ್ಳಿ-ಧಾರವಾಡ, ಮೈಸೂರು, ಕೊಡಗು, ಮಲೆನಾಡು, ಬೆಂಗಳೂರು ಇವುಗಳ ಸಾಂಪ್ರದಾಯಿಕ ವೇಶಭೂಶಣ ಪ್ರದರ್ಶನವು ಸಹ ಏರ್ಪಡಸಲಾಗಿತ್ತು. ವಠಾರ, ಮುಕ್ತ ಖ್ಯಾತಿಯ ಮೈಸೂರು ಶ್ರೀಹರಿ ಅವರು ತಮ್ಮ ಹಾಸ್ಯಚಟಾಕಿಗಳೊಟನೆ ಎಲ್ಲರನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದರು. ಕಡೆಯಲ್ಲಿ ಚಿತ್ರಗೀತೆಗಳ ನೃತ್ಯವಿತ್ತು.
ಹೆಚ್ಚಿನ ಭಾವಚಿತ್ರಗಳಿಗೆ ಇಲ್ಲಿ ಕ್ಲಿಕ್ ಮಾಡಿ.