ರೈತರ ಆತ್ಮಹತ್ಯೆ ತಡೆಗೆ ಉಪಾಯ: ಗೋ ಆಧಾರಿತ ಕೃಷಿ
ಕಗ್ಗಲಿಪುರ ಗೋಲೋಕದಲ್ಲಿ ರೈತ ಸಮಾವೇಶ
ಬೆಂಗಳೂರು, ಫೆ, ೧೭, ೨೦೦೮: ಗೋ ಆಧಾರಿತ ಸ್ವಾವಲಂಬಿ ಕೃಷಿಯಿಂದ ಮಾತ್ರ ರೈತರ ಆತ್ಮಹತ್ಯೆಗಳನ್ನು ನಿಲ್ಲಿಸಬಹುದು. ಆದುದರಿಂದ ಸರ್ಕಾರಗಳು ಗೋ ಆಧಾರಿತ ಕೃಷಿಗೆ ಬೆಂಬಲವಾಗಿ ನಿಲ್ಲಬೇಕು ಎಂದು ರಾಜ್ಯ ಪ್ರಶಸ್ತಿ ವಿಜೇತ ಗೋ ಆಧಾರಿತ ಕೃಷಿಕ ರಮೇಶರಾಜು ಅವರು ಇಲ್ಲಿ ಆಗ್ರಹಿಸಿದರು.
ಬೆಂಗಳೂರಿನ ಕಗ್ಗಲಿಪುರದ ಗೋಲೋಕದ ವಾತ್ಸಲ್ಯ ವೇದಿಕೆಯಲ್ಲಿ ಶ್ರೀರಾಮಚಂದ್ರಾಪುರ ಮಠದ ವತಿಯಿಂದ ಏರ್ಪಡಿಸಲಾಗಿದ್ದ ರೈತಸಮಾವೇಶವನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಪ್ರಸ್ತುತ ಪರಿಸ್ಥಿತಿಯಲ್ಲಿ ಭಾರತೀಯ ಕೃಷಿಕರ ದುರ್ಗತಿಗೆ ಕಾರಣವೇನು ಎಂಬುದನ್ನು ತಮ್ಮ ಅನುಭವದ ಆಧಾರದಲ್ಲಿ ಎಳೆಎಳೆಯಾಗಿ ವಿವರಿಸಿದ ಅವರು, ರೈತರು ಗೋ ಆಧಾರಿತ ಕೃಷಿ ಪದ್ಧತಿಯನ್ನು ಬಿಟ್ಟು ರಾಸಾಯನಿಕ ಗೊಬ್ಬರವನ್ನಾಧರಿಸಿದ ಆಧುನಿಕ ಕೃಷಿ ಪದ್ಧತಿಯನ್ನು ಅನುಸರಿದ್ದೇ ಇಂದಿನ ಎಲ್ಲ ಸಮಸ್ಯೆಗಳಿಗೆ ಮೂಲ ಎಂದು ಹೇಳಿದರು.
ಭಾರತೀಯ ನಾಟಿ ಹಸುವಿನ ಒಂದು ಗ್ರಾಂ ಸೆಗಣಿಯಲ್ಲಿ ೩೦೦ರಿಂದ ೫೦೦ ಕೋಟಿಯಷ್ಟು ಸೂಕ್ಷ್ಮ ಜೀವಿಗಳಿವೆ. ಒಂದು ಗ್ರಾಂನಷ್ಟು ಮಣ್ಣಿನಲ್ಲಿ ನೂರು ಕೋಟಿಯಷ್ಟು ಸೂಕ್ಷ್ಮ ಜೀವಿಗಳಿವೆ. ಸುಭಾಷ್ ಪಾಳೇಕರ್ ಅವರ ಕೃಷಿ ಪದ್ಧತಿಯಲ್ಲಿ ಇವೆರಡು ಮಿಶ್ರಗೊಳ್ಳುವುದರಿಂದ ಭೂಮಿಯಲ್ಲಿ ಸೂಕ್ಷ್ಮ ಜೀವಿಗಳ ಸಾಗರವೇ ನಿರ್ಮಾಣವಾಗಿ ಭೂಮಿ ಫಲವತ್ತಾಗುತ್ತದೆ ಎಂದು ಅವರು ನುಡಿದರು.
ವಿದೇಶೀ ಹಸುಗಳ ಒಂದು ಗ್ರಾಂ ಸೆಗಣಿಯಲ್ಲಿ ೫೦ರಿಂದ ೭೦ ಕೋಟಿಯಷ್ಟು ಮಾತ್ರ ಸೂಕ್ಷ್ಮ ಜೀವಿಗಳಿವೆ. ಅನೈಸರ್ಗಿಕ ಸಾಕಣೆ ಪದ್ಧತಿಗಳನ್ನು ಅನುಸರಿಸುವ ಕಾರಣ ಈ ಸೂಕ್ಷ್ಮ ಜೀವಿಗಳು ಭೂಮಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತವೆ ಎಂದು ಅವರು ನುಡಿದರು.
ಪಾರಂಪರಿಕ ಕೃಷಿ ಪದ್ಧತಿಯಲ್ಲಿ ರೈತರು ಗೋ ಆಧಾರಿತ ಗೊಬ್ಬರ, ಬೀಜ ತಯಾರಿಸಿ ಸ್ವಾವಲಂಬಿಗಳಾಗಿ ಕೃಷಿ ಮಾಡುತ್ತಿದ್ದರು. ಉಳುಮೆಗೆ ಎತ್ತುಗಳನ್ನೇ ಬಳಸುತ್ತಿದ್ದರು. ಆಧುನಿಕ ಪದ್ಧತಿಯಲ್ಲಿ ಉಳುಮೆಗೆ ಟ್ರ್ಯಾಕ್ಟರ್ ಬಂತು. ಬೀಜ ಮತ್ತು ರಾಸಾಯನಿಕ ಗೊಬ್ಬರಗಳು ಹೊರಗಿನ ಕಂಪೆನಿಗಳಿಂದ ಬಂದವು. ರೈತ ಪ್ರತಿಯೊಂದಕ್ಕೂ ತುಟ್ಟಿಯಾದ ಹೊರಗಿನ ಉತ್ಪನ್ನಗಳನ್ನೇ ಆಧರಿಸಬೇಕಾಗಿ ಬಂತು. ಸಾಲಕೂಪದಲ್ಲಿ ಮುಳುಗಲು ಮತ್ತು ಆತ್ಮ ಹತ್ಯೆ ಮಾಡಿಕೊಳ್ಳುವಂತಾಗಲು ಈ ದುಬಾರಿ ಆಧುನಿಕ ಪದ್ಧತಿಯೇ ಕಾರಣ ಎಂದು ಅವರು ವಿಶ್ಲೇಷಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಮಾಜಿ ಆರೋಗ್ಯ ಸಚಿವ ಆರ್. ಅಶೋಕ ಅವರು ಮಾತನಾಡಿ ಗೋ ಆಧಾರಿತ ಪಾರಂಪರಿಕ ಕೃಷಿ ಪದ್ಧತಿಯನ್ನು ಉಳಿಸಿ ಬೆಳೆಸುವಲ್ಲಿ ಎಲ್ಲರೂ ರಾಘವೇಶ್ವರ ಭಾರತಿ ಸ್ವಾಮೀಜಿಯರೊಂದಿಗೆ ಕೈಜೋಡಿಸಬೇಕು ಎಂದು ಹೇಳಿದರು.
ಹಿಂದೆ ಗೋವುಗಳ ಸಂಖ್ಯೆ ಆಧಾರದಲ್ಲಿ ಸಂಪತ್ತು ಪ್ರತಿಷ್ಠೆಯನ್ನು ಲೆಕ್ಕಹಾಕಲಾಗುತ್ತಿತ್ತು. ಗೋವನ್ನು ಬಿಟ್ಟು ಇರಲಾಗದಂತಹ ಬಾಂಧವ್ಯ ಇತ್ತು. ಇಂದು ಗೋವು ಇದ್ದರೆ ಹುಡುಗಿ ಕೊಡುವುದಿಲ್ಲ ಎಂಬ ಮಟ್ಟಕ್ಕೆ ಬಂದಿದ್ದೇವೆ ಎಂದು ಅವರು ವಿಷಾದಿಸಿದರು.
ನಮ್ಮ ಪೂರ್ವಜರು ಹೇಳಿದ್ದೆಲ್ಲವೂ ಮೂಢನಂಬಿಕೆಗಳಲ್ಲ. ಅವುಗಳ ಹಿಂದೆ ವೈಜ್ಞಾನಿಕ ಚಿಂತನೆಯಿದೆ. ಈ ಜ್ಞಾನ, ಪರಂಪರೆಯನ್ನು ನಾವಿಂದು ಕಳೆದುಕೊಳ್ಳುತ್ತಿದ್ದೇವೆ. ಬದುಕಿನ ಮೌಲ್ಯಗಳನ್ನು ಮರೆಯುತ್ತಿದ್ದೇವೆ. ಆದರೆ ವಿದೇಶೀಯರು ಎಚ್ಚೆತ್ತುಕೊಂಡಿದ್ದು ಸಾವಯವ ಮಳಿಗೆಗಳನ್ನು ತೆರೆಯುತ್ತಿದ್ದಾರೆ ಎಂದು ಅವರು ನುಡಿದರು.
ಸ್ಥಳೀಯ ಮುಖಂಡ ಶಿವಕುಮಾರ ಅವರೂ ಮಾತನಾಡಿದರು. ವೆಂಕಟೇಶ ಚೀನಿಯ, ಕಿಸಾನ್ ಸಂಘದ ಪುಟ್ಟಸ್ವಾಮಿ, ಗೋಲೋಕದ ಸ್ಥಳದಾನಿ ಬಿ. ಜೆ. ಶರ್ಮ, ಮಹಾವೀರ ಪ್ರಸಾದ ಸೋನಿಕ ಮತ್ತಿತರು ಹಾಜರಿದ್ದರು. ಕಾಮದುಘಾ ಮುಖ್ಯಸ್ಥ ಕೃಷ್ಣಮೂರ್ತಿ ಕಾರ್ಯಕ್ರಮ ನಿರ್ವಹಿಸಿದರು. ಸಿ. ಎಚ್. ಎಸ್. ಭಟ್ ಪ್ರಾರ್ಥಿಸಿದರು.
May 6th, 2012 at 9:14 pm
ritharige krushi jothege hinugarike uthamavadadu idrenda artika paristiti sudarisuthade
August 22nd, 2012 at 7:42 pm
Nijwaglu Shruthi.. nanu namma appa ammanige adanne prothsahisi.. yivaga halininda thumba laabha baruttide.
October 21st, 2012 at 5:15 pm
intha maretiruva vicharagala vishala vwaptiyalli maduva bagge navu hechhu aasaktivahisuvudu trtuagatyavagide
October 21st, 2012 at 5:17 pm
intha maretiruva vicharagala vishala vwaptiyalli maduva bagge navu hechhu aasaktivahisuvudu turtu agatyavagide