ರಾಜಾಜಿನಗರ ಹಬ್ಬ – ೨೦೦೫

ರಾಜಾಜಿನಗರದಲ್ಲಿ ಕಳೆದ ಬಾರಿ ಜನಮನ್ನಣೆಗೆ ಪಾತ್ರವಾದ ‘ರಾಜಾಜಿನಗರ ಹಬ್ಬ’ ಬರಿ ಕನ್ನಡ ರಾಜೋತ್ಸವವೆಂಬ ಒಣ ಆಚರಣೆಗೆ ಮಾತ್ರ ಮೀಸಲಾಗಿರದೆ ಸಾಂಸ್ಕೃತಿಕವಾಗಿ, ಗ್ರಾಮೀಣ ಸೊಗಡನ್ನು ಜನಮನಗಳಿಗೆ ತಲುಪಿಸುವ ಸಲುವಾಗಿ ಈ ವಾರದಲ್ಲಿ ಅಂದರೆ ದಿನಾಂಕ ೧೯-೧೧-೨೦೦೫ ರಿಂದ ೨೫-೧೧-೨೦೦೫ರ ವರೆಗೆ ಜಾನಪದ ಲೋಕದ ದಿಗ್ಗಜ ಶ್ರೀ ಎಚ್ .ಎಲ್ . ನಾಗೇಗೌಡ ರ ಸ್ಮರಣಾರ್ಥ ‘ಜಾನಪದ ಜಾತ್ರೆ’ಯನ್ನು ಶಾಸಕರಾದ ಅದಕ್ಕಿಂತ ಹೆಚ್ಚಾಗಿ ರಾಜಾಜಿನಗರದ ಹೆಮ್ಮೆಯ ಮಗನಾದ ನೆ.ಲ. ನರೇಂದ್ರಬಾಬು ರವರ ನೇತೃತ್ವದಲ್ಲಿ ಹಮ್ಮಿಕೋಳ್ಳಲಾಗಿದೆ.

ಸುಮಾರು ೪೦ಕ್ಕೂ ಹೆಚ್ಚು ಜಾನಪದ ತಂಡಗಳು ೬ ದಿನಗಳ ಕಾಲ ರಾಜಾಜಿನಗರದ ನವರಂಗ ಆಟದ ಮೈದಾನದಲ್ಲಿ ತಮ್ಮ ಜಾನಪದ ಕಲಾ ಕೌಶಲ್ಯ ಮೆರೆಯಲು ಸಿದ್ಧರಾಗಿದ್ದಾರೆ. ಜಾನಪದ ಜಾತ್ರೆಯ ನಡುವೆ ನಾಟಕೋತ್ಸವ, ಗ್ರಾಮೀಣ ತಿಂಡಿ ತಿನಿಸುಗಳು, ಕಸಬುಗಳು ಹಾಗೂ ವೇಷ- ಭೂಷಣಗಳ ಮಳಿಗೆಗಳು ಹಬ್ಬದ ಸಡಗರಕ್ಕೆ ಮೆರಗು ನೀಡಲಿವೆ.

ಇದಲ್ಲದೇ ಕನ್ನಡ ನಾಡಿನ ಏಳಿಗೆಗಾಗಿ ದುಡಿದಂಥ ವ್ಯಕ್ತಿಗಳನ್ನು ಹಾಗೂ ಸಂಘ, ಸಂಸ್ಥೆಗಳನ್ನೂ ಗೌರವಿಸುವ ಕಾರ್ಯಕ್ರಮವಿದೆ. ನಾಗರಿಕರಿಗೆ ಜಾನಪದ ಹಾಡುಗಳ ಸ್ಪರ್ಧೆ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ.
ಜಾನಪದ ಉತ್ಸವದ ಅಂಗವಾಗಿ ನವೆಂಬರ್ ೧೪ ರಿಂದ ಬೆಂಗಳೂರಿನ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಏರ್ಪಡಿಸಿರುವ ಜಾನಪದ ಸ್ಪರ್ಧೆಗಳಿಗೆ ಕೇವಲ ಒಂದು ರೂಪಾಯಿ ಶುಲ್ಕ ವಿಧಿಸಿರುವುದು ಶ್ಲಾಘನೀಯ.
ಹೀಗೆ ಬೆಂಗಳೂರಿನ ಜನತೆಗೆ ಜಾನಪದದ ಸೊಗಡನ್ನು ಪರಿಚಯಿಸುವ ಪ್ರಯತ್ನದಲ್ಲಿ ಸಮಸ್ತ ಜನತೆ ಭಾಗವಹಿಸಿ, ರಾಜಾಜಿನಗರದ ಹಬ್ಬವನ್ನು ಯಶಸ್ವಿಯನ್ನಾಗಿಸಿರಿ…

Leave a Reply