ಜೆ.ಎಸ್.ಡಬ್ಲ್ಯು ಸ್ಟೀಲ್‌ಗೆ ಪ್ರಶಸ್ತಿ

ಬೆಂಗಳೂರು, ನವೆಂಬರ್‍ ೯, ೨೦೦೭: ಜೆ ಎಸ್ ಡಬ್ಲ್ಯು ಸ್ಟೀಲ್ ಲಿಮಿಟೆಡ್ ವಿಜಯನಗರ ಸ್ಥಾವರವು ಸತತ ಮೂರನೇ ವರ್ಷವೂ ಸಿ ಐ ಐ – ಎಕ್ಸಿಮ್ ಬ್ಯಾಂಕಿನ ಬ್ಯುಸಿನೆಸ್ ಎಕ್ಸೆಲೆನ್ಸ್ ಅವಾರ್ಡ್ ೨೦೦೭ರಲ್ಲಿ ಗಮನಾರ್ಹ ಸಾಧನೆಯ ಕಮೆಂಡೇಶನ್ ಸರ್ಟಿಫಿಕೇಟ್ ಪಡೆದು ಹ್ಯಾಟ್ರಿಕ್ ಸಾಧಿಸಿದೆ. ಕಳೆದ ಎರಡು ವರ್ಷಗಳಲ್ಲೂ ಸಂಸ್ಥೆಯು ಈ ಕಮೆಂಡೇಶನ್ ಸರ್ಟಿಫಿಕೇಟನ್ನು ಪಡೆದಿತ್ತು. ಇದೇ ನವೆಂಬರ್ ೧ರಂದು ಬೆಂಗಳೂರಿನಲ್ಲಿ ನಡೆದ ಸಿ ಐ ಐ ಇನ್ಸ್ಟಿಟ್ಯೂಟ್ ಆಫ್ ಕ್ವಾಲಿಟಿಯ ೧೫ನೇ ಗುಣಮಟ್ಟ ಶೃಂಗಸಭೆಯಲ್ಲಿ ಈ ಪ್ರಕಟಣೆ ಮಾಡಲಾಗಿದೆ. ಇದು ಭಾರತದಲ್ಲಿ ವ್ಯವಹಾರ ದಕ್ಷತೆಗಾಗಿ ಇರುವ ಕೆಲವೇ ಪ್ರತಿಷ್ಠಿತ ಪ್ರಶಸ್ತಿಗಳಲ್ಲಿ ಒಂದಾಗಿದೆ.

೧೯೯೪ರಲ್ಲಿ ಸಿ ಐ ಐ (ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರೀಸ್) ಮತ್ತು ಎಕ್ಸ್ಪೋರ್ಟ್ ಇಂಪೋರ್ಟ್ ಬ್ಯಾಂಕ್ ಆಫ್ ಇಂಡಿಯಾ ಜಂಟಿಯಾಗಿ ಸ್ಥಾಪಿಸಿದ ಈ ಪ್ರಶಸ್ತಿಯು “ಸಂಘಟನಾ ಸ್ಪರ್ಧಾತ್ಮಕತೆಯಲ್ಲಿ ಗಮನಾರ್ಹ ಅಂಶವಾಗಿ ವ್ಯವಹಾರ ಕಾರ್ಯದಕ್ಷತೆಯನ್ನು ಸಾಧಿಸಿದ್ದನ್ನು’ ಗುರುತಿಸುತ್ತದೆ. ಎಲ್ಲಾ ಸ್ವರೂಪಗಳಲ್ಲಿ ಇರುವ ಸಂಘಟನಾ ಕಾರ್ಯದಕ್ಷತೆಯನ್ನು ಗುರುತಿಸಿ, ಉತ್ತೇಜಿಸುವುದೇ ಸಿ ಐ ಐ – ಎಕ್ಸಿಮ್ ಬ್ಯಾಂಕ್ ಪ್ರಶಸ್ತಿಯ ಉದ್ದೇಶವಾಗಿದೆ. ೨೦೦೮ರ ಹೊತ್ತಿಗೆ ವಾರ್ಷಿಕ ಏಳು ದಶಲಕ್ಷ ಟನ್ ಉಕ್ಕು ಉತ್ಪಾದನೆಯ ಗುರಿಯನ್ನು ಸಾಧಿಸುವತ್ತ ದಾಪುಗಾಲಿಟ್ಟಿರುವ ಜೆ ಎಸ್ ಡಬ್ಲ್ಯು ಸ್ಟೀಲ್ ವಿಜಯನಗರ ಸ್ಥಾವರವು ೨೦೧೦ರಲ್ಲಿ ಹತ್ತು ವಾರ್ಷಿಕ ದಶಲಕ್ಷ ಟನ್ ಉಕ್ಕು ಉತ್ಪಾದನೆಯನ್ನು ಸಾಧಿಸಲಿದೆ. ಆಗ ಇದು ದೇಶದಲ್ಲೇ ಒಂದೇ ಸ್ಥಾವರದಲ್ಲಿ ಅತಿಹೆಚ್ಚು ಉಕ್ಕು ಉತ್ಪಾದಿಸುವ ಸ್ಥಾವರವಾಗಲಿದೆ.


ಪ್ರಶಸ್ತಿ – ಪ್ರಮಾಣಪತ್ರ ಸ್ವೀಕರಿಸುತ್ತಿರುವ ಜೆ ಎಸ್ ಡಬ್ಲ್ಯು ಸ್ಟೀಲ್ ಕಂಪೆನಿಯ ಜೆ.ಪಿ.ಎನ್.ಲಾಲ್, ವೆಂಕಟೇಶನ್ ಮತ್ತಿತರರು

ಈ ವಿತ್ತವರ್ಷದ ಎರಡನೇ ತ್ರೈಮಾಸಿಕ ಅವಧಿಯಲ್ಲಿ ೫೧೧.೨೩ ಕೋಟಿ ರೂ.ಗಳ ನಿವ್ವಳ ಲಾಭವನ್ನು ಗಳಿಸಿ ಕಳೆದ ವರ್ಷದ ಇದೇ ಅವಧಿಯ ಲಾಭಕ್ಕಿಂತ ಶೇ. ೪೮ರಷ್ಟು ಹೆಚ್ಚಳವನ್ನು ಸಂಸ್ಥೆಯು ಸಾಧಿಸಿದೆ. ಇಳಿಯುತ್ತಿರುವ ಬೆಲೆ, ಹೆಚ್ಚುತ್ತಿರುವ ವೆಚ್ಚದ ನಡುವೆಯೂ ರೂಪಾಯಿಯ ಬೆಲೆಗಳಿಕೆ ಮತ್ತು ಉತ್ಪಾದನಾ ಪ್ರಮಾಣದ ಹೆಚ್ಚಳದಿಂದಾಗಿ ಈ ಲಾಭ ಸಾಧ್ಯವಾಗಿದೆ.

ಅತ್ಯುನ್ನತ ಉಕ್ಕು ತಯಾರಿಕಾ ಸಂಸ್ಥೆಯಾಗಿ ಸಂಸ್ಥೆಯು ಕಳೆದ ವರ್ಷ ಇಂಡಿಯಾ ಮ್ಯಾನುಫ್ಯಾಕ್ಚರಿಂಗ್ ಆವಾರ್ಡ್, ಫ್ರಾಸ್ಟ್ ಎಂಡ್ ಸಲ್ಲಿವಾನ್ನ ಲೋಹ ವಿಭಾಗದಲ್ಲಿ ಕಾರ್ಪೋರೇಟ್ ಗೋಲ್ಡ್ ಆವಾರ್ಡ್, ಐ ಎಂ ಸಿ ರಾಮಕೃಷ್ಣ ಬಜಾಜ್ ರಾಷ್ಟ್ರೀಯ ಗುಣಮಟ್ಟ ಪ್ರಶಸ್ತಿ, ತೇರಿ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಅವಾರ್ಡ್ನ ಕಮೆಂಡೇಶನ್ ಸರ್ಟಿಫಿಕೇಟ್ಗಳನ್ನು ಪಡೆದಿದೆ ಎಂಬುದು ಇಲ್ಲಿ ಉಲ್ಲೇಖನೀಯ.

ಜೆ ಎಸ್ ಡಬ್ಲ್ಯು ಸ್ಟೀಲ್ ಲಿಮಿಟೆಡ್

ಎಂಟು ಬಿಲಿಯ ಡಾಲರ್ಗಳ ಓ ಪಿ ಜಿಂದಾಲ್ ಸಮೂಹಕ್ಕೆ ಸೇರಿದ ಜೆ ಎಸ್ ಡಬ್ಲ್ಯು ಸಮೂಹದ ಜೆ ಎಸ್ ಡಬ್ಲ್ಯು ಸ್ಟೀಲ್ ಲಿಮಿಟೆಡ್ ಸಂಸ್ಥೆಯು ವಿಶ್ವದಲ್ಲೇ ಅತಿ ಕಡಿಮೆ ವೆಚ್ಚದಲ್ಲಿ ಉಕ್ಕು ತಯಾರಿಸುವ ಸಂಸ್ಥೆಗಳಲ್ಲಿ ಒಂದಾಗಿದೆ. ಈ ಸಮೂಹವು ಗಣಿಗಾರಿಕೆ, ಕಾರ್ಬನ್ ಉಕ್ಕು, ವಿದ್ಯುತ್ತು, ಔದ್ಯಮಿಕ ಅನಿಲಗಳು ಮತ್ತು ಬಂದರು ಸೌಲಭ್ಯಗಳ ಉದ್ಯಮದಲ್ಲಿ ನಿರತವಾಗಿದೆ. ಜೆ ಎಸ್ ಡಬ್ಲ್ಯು ಸ್ಟೀಲ್ ಲಿಮಿಟೆಡ್ ಸಂಸ್ಥೆಯು ಮುಖ್ಯವಾಗಿ ಎಚ್ ಆರ್ ಕಾಯಿಲ್, ಸಿ ಆರ್ ಕಾಯಿಲ್, ಗಾಲ್ವನೈಸಡ್ ಉತ್ಪನ್ನಗಳು, ಆಟೋಗ್ರೇಡ್ / ವೈಟ್ ಗೂಡ್ಸ್ ಗ್ರೇಡ್ ಸಿ ಆರ್ ಸಿ ಎ ಸ್ಟೀಲ್ ಮತ್ತು ವಿದ್ಯುತ್ ಉತ್ಪಾದನೆಯಲ್ಲಿ ತೊಡಗಿದೆ. ೧೯೯೪ರಲ್ಲಿ ಆರಂಭವಾದ ಸಂಸ್ಥೆಯು ಕಳೆದ ಒಂದೇ ದಶಕದಲ್ಲಿ ೨.೫ ಬಿಲಿಯ ಆಮೆರಿಕನ್ ಡಾಲರ್ ಸಂಸ್ಥೆಯಾಗಿ ಬೆಳೆದಿದೆ. ಜೆ ಎಸ್ ಡಬ್ಲ್ಯು ಸ್ಟೀಲ್ ಲಿಮಿಟೆಡ್ ಸಂಸ್ಥೆಯು ಭಾರತದಲ್ಲೇ ಗರಿಷ್ಠ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿರುವ ಗಾಲ್ವನೈಸಡ್ ಉತ್ಪನ್ನ ತಯಾರಿಕಾ ಘಟಕವನ್ನು ಹೊಂದಿದೆಯಲ್ಲದೆ ಐದು ಖಂಡಗಳ ೭೪ ದೇಶಗಳಲ್ಲಿ ವಹಿವಾಟು ಹೊಂದಿರುವ ಭಾರತದ ಅತಿದೊಡ್ಡ ಗಾಲ್ವನೈಸಡ್ ಉತ್ಪನ್ನಗಳ ರಫ್ತು ಸಂಸ್ಥೆಯಾಗಿದೆ.

Leave a Reply