ವಾಹನಗಳಿಗೆ ಕನ್ನಡದಲ್ಲಿ ನೋಂದಣಿ ಫಲಕ

– ಡಾ| ಯು. ಬಿ. ಪವನಜ

ಇತ್ತೀಚಿಗೆ ಕನ್ನಡ ಭಾಷೆ ಮಾತನಾಡುವ ಜನರ ನಾಡಾದ ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ವಿಚಿತ್ರ ಸಂಗತಿ ನಡೆಯಿತು. ರಾಜ್ಯದ ಬಾಷೆಯಾದ ಕನ್ನಡದಲ್ಲಿ ನೋಂದಣಿ ಫಲಕ ಬರೆಸಿದ ರಿಕ್ಷಾ ಚಾಲಕರ ವಿರುದ್ಧ ಪೋಲೀಸರು ಕ್ರಮ ಕೈಗೊಂಡರು. ನಾಡಿನ ಜನರ ಭಾಷೆಯಲ್ಲಿ ನೋಂದಣಿ ಫಲಕ ಬರೆಸಿದ್ದು ಅವರ ತಪ್ಪು. ಭಾರತದ ಮೋಟಾರು ವಾಹನ ಕಾಯಿದೆ ಪ್ರಕಾರ ವಾಹನಗಳ ನೋಂದಣಿ ಫಲಕ ನಮ್ಮ ಭಾಷೆಯ ಬದಲು ಸಹಸ್ರಾರು ಮೈಲು ದೂರವಿರುವ ಬ್ರಿಟಿಷರ ಭಾಷೆಯಲ್ಲಿರಬೇಕು! ಈ ಕಾಯಿದೆ ಮಾಡಿದವರು ಕೇಂದ್ರ ಸರಕಾರದವರು. ವಾಹನಗಳ ನೋಂದಣಿ ಫಲಕ ಇಂಗ್ಲೀಷ್ ಭಾಷೆಯಲ್ಲಿರಬೇಕು ಎಂದು ಅಧಿಕಾರಿಗಳು, ಮುಖ್ಯವಾಗಿ ಪೋಲೀಸರು ಹೇಳುವುದಕ್ಕೆ ಅವರು ಕೊಡುವ ಕಾರಣ `ಯಾವುದಾದರೂ ವಾಹನ ಅಪಘಾತ ಮಾಡಿ ತಪ್ಪಿಸಿಕೊಂಡು ಹೋದರೆ ಅದರ ನೋಂದಣಿ ಸಂಖ್ಯೆಯನ್ನು ಬರೆದಿಟ್ಟುಕೊಳ್ಳಲು ಇತರ ಭಾಷಿಕರಿಗೆ ಇದು ಸಹಾಯಕಾರಿಯಾಗುತ್ತದೆ’. ಮೇಲ್ನೋಟಕ್ಕೆ ಇದು ತರ್ಕಬದ್ಧವಾಗಿದೆ.
ಎರಡು ವರ್ಷಗಳ ಹಿಂದೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸುತ್ತೋಲೆ ಹೊರಡಿಸಿ ಸರಕಾರಿ ವಾಹನಗಳ ನೋಂದಣಿ ಫಲಕ ಕನ್ನಡದಲ್ಲೂ ಇರಬೇಕು ಎಂದು ವಿಧಿಸಿತು. ಅದರಂತೆ ಎಲ್ಲಾ ಸರಕಾರಿ ವಾಹನಗಳು ಇಂಗ್ಲೀಷ್ ಭಾಷೆಯ ಜೊತೆ ಕನ್ನಡದಲ್ಲೂ ನೋಂದಣಿ ಸಂಖ್ಯೆ ಪ್ರದರ್ಶಿಸಲು ತೊಡಗಿದವು. ಕೆಲವು ಸರಕಾರಿ ವಾಹನಗಳು, ಸಚಿವರ ಕಾರುಗಳು ಕೇವಲ ಕನ್ನಡದಲ್ಲಿ ನೋಂದಣಿ ಸಂಖ್ಯೆ ಪ್ರದರ್ಶಿಸುತ್ತಿವೆ. ಇದನ್ನು ಕೆಲವು ಕನ್ನಡಾಭಿಮಾನಿಗಳು ಮತ್ತು ರಿಕ್ಷಾ ಚಾಲಕರೂ ಅನುಸರಿಸಿದರು. ಹೀಗಿರುವಾಗ ಕೇವಲ ರಿಕ್ಷಾ ಚಾಲಕರನ್ನು ಪೋಲೀಸರು ಗುರಿಯಾಗಿಸಿದ್ದೇಕೆ? ಕೆಲವು ದುರುದ್ದೇಶಪೂರಿತ ರಿಕ್ಷಾ ಚಾಲಕರು ಕನ್ನಡ ನೋಂದಣಿ ಫಲಕವನ್ನು ಕೆಟ್ಟ ಉದ್ದೇಶದಿಂದ ಬರೆಸುತ್ತಿದ್ದರು. ಇವರು ರೈಲು ನಿಲ್ದಾಣ ಮತ್ತು ಬಸ್ಸು ನಿಲ್ದಾಣದ ಸುತ್ತಮುತ್ತ ರಿಕ್ಷಾ ಓಡಿಸುತ್ತಿದ್ದರು. ಪರ ಊರಿನಿಂದ ಬರುವ ಮುಗ್ಧ ಪ್ರಯಾಣಿಕರನ್ನು ಊರೆಲ್ಲ ಸುತ್ತಿಸಿ ಜಾಸ್ತಿ ಹಣ ವಸೂಲಿ ಮಾಡುವದು ಅವರು ಕಾರ್ಯವೈಖರಿ. ಹೀಗೆ ಹಣ ದೋಚಿ ಓಡಿ ಹೋಗುವಾಗ ವಾಹನದ ಸಂಖ್ಯೆಯನ್ನು ಕನ್ನಡ ಬಾರದ ಹೊರನಾಡಿನ ಪ್ರಯಾಣಿಕರಿಗೆ ಓದಲು ಅಸಾಧ್ಯವಾಗುವಂತೆ ಕನ್ನಡ ಭಾಷೆಯಲ್ಲಿ ಮಾತ್ರ ಬರೆಸುತ್ತಿದ್ದರು. ಈ ರೀತಿಯಾಗಿ ಕೆಲವು ಚಾಲಕರು ಕನ್ನಡವನ್ನು ದುರುದ್ದೇಶಕ್ಕೆ ಬಳಸಿದ್ದು ಇತರ ಕನ್ನಡಾಭಿಮಾನಿಗಳು ಪೋಲೀಸರ `ಕೃಪೆ’ಗೆ ಪಾತ್ರರಾಗುವಂತೆ ಮಾಡಿತು. ಪೋಲೀಸರಿಗೆ ಇವೆಲ್ಲ ತಿಳಿಯದ ವಿಷಯಗಳೇನಲ್ಲ. ದುಷ್ಕರ್ಮಿಗಳ ಜೊತೆ ಮುಗ್ಧರನ್ನೂ ಹಿಂಸಿಸುವುದನ್ನು ಅವರು ಶತಮಾನಗಳಿಂದ ರೂಢಿಸಿಕೊಂಡು ಬಂದಿದ್ದಾರೆ.
ನಮ್ಮ ಮಾತೃಭಾಷೆಯನ್ನು ಉಪಯೋಗಿಸಲೂ ಅಸಾಧ್ಯವಾಗಿದೆ ನಮ್ಮ ದೇಶದಲ್ಲಿ. ತೈವಾನಿನಲ್ಲಿ ಎಲ್ಲರೂ ತಮ್ಮ ಭಾಷೆಯಲ್ಲೇ ವ್ಯವಹರಿಸುತ್ತಾರೆ, ಅಂಕಿಗಳ ಸಹಿತ. ವಾಹನಗಳ ನೋಂದಣಿ ಫಲಕವೂ ಚೀನೀ ಭಾಷೆಯಲ್ಲಿವೆ. ಅಲ್ಲಿ ಯಾರೂ ದೂರುವದಿಲ್ಲ. ಅಷ್ಟೇಕೆ? ನಮ್ಮದೇ ದೇಶದ ಮಹಾರಾಷ್ಟ್ರದಲ್ಲಿ ಮರಾಠಿ (ದೇವನಾಗರಿ) ಮತ್ತು ಗುಜರಾತ್‌ನಲ್ಲಿ ಗುಜರಾತಿ ಭಾಷೆಯ ಅಂಕಿಗಳ ಉಪಯೋಗ ವ್ಯಾಪಕವಾಗಿದೆ. ಕನ್ನಡ ನಾಡಿನಲ್ಲಿ ಮಾತ್ರ ಕನ್ನಡ ಅಂಕಿಗಳನ್ನು ಉಪಯೋಗಿಸದರೆ ದೊಡ್ಡ ಗದ್ದಲವೇಳುತ್ತದೆ. ಕನ್ನಡ ನಾಡಿನ ರಾಜಧಾನಿಯಲ್ಲಿ ಬೀಡುಬಿಟ್ಟಿರುವ ಇಂಗ್ಲೀಷ್ ಪತ್ರಿಕೆಗಳು ಈ ಬೆಂಕಿಗೆ ತುಪ್ಪ ಎರೆಯುವ ಕೆಲಸವನ್ನು ಸಮರ್ಪಕವಾಗಿ ಮಾಡುತ್ತವೆ.
ಮೋಟಾರು ವಾಹನಗಳ ಕಾಯಿದೆ ಮಾಡಿರುವವರು ಕೇಂದ್ರ ಸರಕಾರದವರು. ಅವರು ಅದನ್ನು ನಮ್ಮ ಸಂವಿಧಾನದ ಆಧಾರದಲ್ಲಿ ರಚಿಸಿದ್ದಾರೆ. ಸಂವಿಧಾನ ರಚನೆಯಾದದು ಭಾಷಾವಾರು ಪ್ರಾಂತ್ಯಗಳ ರಚನೆಯ ಮೊದಲು. ಸಹಜವಾಗಿಯೇ ರಾಜ್ಯಗಳ ಮತ್ತು ರಾಜ್ಯ ಭಾಷೆಗಳ ಪ್ರಸ್ತಾಪ ಸಂವಿಧಾನದಲ್ಲಿಲ್ಲ. ಈಗ ನಮ್ಮ ರಾಜ್ಯ ಸರಕಾರದವರು ಕೇಂದ್ರ ಸರಕಾರಕ್ಕೆ ಒತ್ತಡ ಹೇರಿ ರಾಜ್ಯ ಭಾಷೆ, ಭಾಷೆಯ ಅಂಕಿಗಳಿಗೆ ಸೂಕ್ತ ಸ್ಥಾನಮಾನ ದೊರಕಿಸಬೇಕಾಗಿದೆ. ದ್ವಿಭಾಷಾ ಸೂತ್ರವನ್ನು ವಾಹನಗಳ ನೋಂದಣಿ ಫಲಕಗಳಿಗೆ ದೇಶಮಟ್ಟದಲ್ಲಿ ಸಾರ್ವತ್ರಿಕವಾಗಿ ಅನ್ವಯಿಸಬೇಕಾಗಿದೆ. ಕನ್ನಡ ಆಭಿವೃದ್ಧಿ ಪ್ರಾಧಿಕಾರದವರು ಕರ್ನಾಟಕ ಸರಕಾರದ ಮೂಲಕ ಇದನ್ನು ಬೇಗನೇ ಮಾಡಿಸುತ್ತಾರೆ ಎಂದು ಆಶಿಸೋಣವೇ?

(ಜೂನ್ ೨೦೦೧)

Leave a Reply