ಕನ್ನಡ, ಕನ್ನಡಿಗ, ಕರ್ನಾಟಕ!

ಡಾ. ಯು.ಬಿ. ಪವನಜ

“ಜೈ! ಭಾರತ ಜನನಿಯ ತನುಜಾತೆ
ಜಯ ಹೇ ಕರ್ನಾಟಕ ಮಾತೆ!
ಜೈ! ಸುಂದರ ನದಿವನಗಳ ನಾಡೆ
ಜಯ ಹೇ ರಸಋಷಿಗಳ ಬೀಡೆ!”
ಎಂದು ರಾಷ್ಟ್ರಕವಿ ಕುವೆಂಪು ಅವರು ಕರ್ನಾಟಕ ಬಗ್ಗೆ ಪರಿಚಯಿಸುತ್ತಾ ರಚಿಸಿರುವ ಸುಂದರವಾದ ಗೀತೆ ಇದು. ಭಾರತ ಜನನಿಯ ತನುಜಾತೆಯಾಗಿಸಿದ ಕರ್ನಾಟಕ ಇಂದು ನಿಜವಾದ ಅರ್ಥದಲ್ಲಿ ರಸಋಷಿಗಳ ಬೀಡಾಗಿದೆಯೇ ಎನ್ನುವುದು ನಮ್ಮ ಆತ್ಮ ವಿಮರ್ಶೆಯ ಪ್ರಶ್ನೆ. ಈ ನೆಲದ ಸುಂದರ ನದಿವನಗಳು ಇಂದು ಆಗಿರುವುದಾದರೂ ಏನು? ಕವಿ ವರ್ಣಿಸಿದ ಸುಂದರವಾದ ತಿಳಿನೀರಿನ ನದಿಗಳು ಕಲರವಗುಟ್ಟುತ್ತಿವೆಯೇ? ಹಸಿರು ವರ್ಣದ ವನಗಳು ದಟ್ಟೈಸಿ ನಿಂತಿವೆಯೇ? ಹರಿವ ನದಿಗಳೆಲ್ಲ ಕಲುಷಿತಗೊಂಡು ಮಾನವ ಹಾಗೂ ಪ್ರಾಣಿಗಳ ಬದುಕಿಗೆ ಮಾರಕವಾಗಿರುವುದು ಸುಳ್ಳೇ? ದಟ್ಟ ಕಾಡೆಲ್ಲ ನಾಶವಾಗಿ ಪ್ರಾಣಿ ಪಕ್ಷಿಗಳು ದಿಕ್ಕಿಲ್ಲದೇ ಪಲಾಯನಗೈದುದು ವಾಸ್ತವದ ಕನ್ನಡಿಯಲ್ಲವೇ?

ಕವಿ ಯಾವತ್ತೂ ಆಶಾವಾದಿ ಎಂಬುದು ನಿಜ. ಕವಿಯ ಆಶಯಕ್ಕೆ ತಕ್ಕಂತೆ ನಮ್ಮ ಬದುಕಿನ ದಿನಚರಿ ನಡೆದಿದೆಯೇ ಎಂಬ ವೇದನೆ ಈ ಮೇಲಿನ ಗ್ರಹಿಕೆಯಲ್ಲಿ ನಮ್ಮ ಅರಿವಿಗೆ ಬರುವುದಾದರೂ, ಇಂದು ಕರ್ನಾಟಕ ಹೊಸದೊಂದು ಬದುಕಿನಲ್ಲಿ ವಿಶ್ವದ ಗಮನ ಸೆಳೆದಿರುವುದಂತೂ ಸತ್ಯ. ನವಂಬರ್ ೧ ಕರ್ನಾಟಕ ರಾಜ್ಯೋತ್ಸವದ ದಿನವಾದರೂ ಇಲ್ಲಿನ ಇಂದು ನಿನ್ನೆಗಳ ಬದುಕನ್ನು ತೆರೆದ ಕಣ್ಣಿನಿಂದ ನೋಡುವ ಕಾಲ ಇದಾಗಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಕರ್ನಾಟಕ ಭಾರತದ ಯಾವುದೇ ರಾಜ್ಯಕ್ಕಿಂತ ಮುಂಚೂಣಿಯಲ್ಲಿ ಇರುವುದಾದರೂ ಕನ್ನಡಕ್ಕೆ ಮಾನ್ಯತೆ ಸಿಕ್ಕಿದೆಯೇ ಎಂಬುದು ನಮ್ಮ ಪ್ರಶ್ನೆ.

ನವಂಬರ್ ಒಂದನ್ನು ಕರ್ನಾಟಕ ರಾಜ್ಯೋತ್ಸವ ಎನ್ನಬೇಕೋ, ಕನ್ನಡ ರಾಜ್ಯೋತ್ಸವ ಎನ್ನಬೇಕೋ ಎಂಬ ಜಿಜ್ಞಾಸೆ ನನ್ನೊಳಗಿದೆ. ಹಾಗೆ ನೋಡಿದರೆ ಕರ್ನಾಟಕಕ್ಕೆ ಸೇರಬೇಕಾದ ಮಹಾರಾಷ್ಟ್ರ ಗಡಿಭಾಗದ ಸೊಲ್ಲಾಪುರ, ಅಕ್ಕಲಕೋಟೆ, ಆಂಧ್ರದ ಆದೋನಿ, ಅನಂತಪುರ ಜಿಲ್ಲೆಯ ಕೆಲ ಗ್ರಾಮಗಳು, ಕೇರಳದ ಕಾಸರಗೋಡು ಇತ್ಯಾದಿಗಳು ಹೊರಗೆ ಉಳಿದದ್ದು, ಅಲ್ಲಿನ ಕನ್ನಡಿಗರು ಭಾವನಾತ್ಮಾಕವಾಗಿ ಕರ್ನಾಟಕದೊಂದಿಗೆ ಇರುವುದು ವಾಸ್ತವ. ನ್ಯಾಯ ಸಮ್ಮತವಾದ ಮಹಾಜನ ವರದಿ ನೆನೆಗುದಿಗೆ ಬಿದ್ದಿದೆ. ಹೀಗಿದ್ದು ಕಾವೇರಿಯಿಂದ ಗೋದಾವರಿವರೆಗಿನ ಕನ್ನಡನಾಡು ಈಗಿಲ್ಲದ ಸಂದರ್ಭ ನೆನೆದರೆ ಇದು ಕನ್ನಡ ರಾಜ್ಯೋತ್ಸವವೋ, ಕರ್ನಾಟಕ ರಾಜ್ಯೋತ್ಸವವೋ?

ಹತ್ತಾರು ಪ್ರಶ್ನೆಗಳ ನಡುವೆ ಕನ್ನಡ, ಕರ್ನಾಟಕ ಉಳಿಯಬೇಕಾಗಿದೆ. ಕನ್ನಡ ಭಾಷೆ ಹಲವು ಸಂಸ್ಕೃತಿಗಳ ಸಂಗಮದಲ್ಲಿ ಮೇಳೈಸಬೇಕಾಗಿದೆ. ಇಲ್ಲಿನ ಗಾಳಿ, ನೀರುಂಡು ಸುಖಿಸಿದ ಜನ ಭಾಷೆಯನ್ನು ಗೌರವಿಸುವವರಾಗಬೇಕು. ನೆಲದ ಸಂಸ್ಕೃತಿಯನ್ನು ಪ್ರೀತಿಸುತ್ತ ಎಲ್ಲರೊಳಗೆ ಒಂದಾಗುವ ಮಾನವೀಯತೆ ಮೆರೆಯಬೇಕು. ಆಗಲೇ ಕವಿ ಕಂಡ ಕನಸು ಕನ್ನಡಿಗರಲ್ಲಿ ಮತ್ತೊಮ್ಮೆ ಚೇತನ, ಉತ್ಸಾಹ, ಹುಮ್ಮಸ್ಸು ಕೊಟ್ಟೀತು ಎಂಬುದು ನಮ್ಮ ಆಶಯವೂ ಕೂಡ. ಈ ಆಶಯಕ್ಕೆ ಕನ್ನಡದ ಏಳು ಜ್ಞಾನಪೀಠಗಳ ಕೋಡು ನಮ್ಮನ್ನು ಅಹಂಕಾರಿಗಳನ್ನಾಗಿಸಬಾರದು ಅಲ್ಲವೇ?

(೨೦೦೧)

Leave a Reply