'ಮಾಯಾಲೋಕ'ದ ಮೊದಲನೋಟ

ಬೇಳೂರು ಸುದರ್ಶನ
ಹಿರಿಯ ತಲೆಮಾರಿನ ಲೇಖಕರೆಲ್ಲ ಇನ್ನೂ A4 ಹಾಳೆಗಳ ನಡುವೆಯೇ ಬರವಣಿಗೆಯನ್ನು ನಡೆಸುತ್ತಾ ಇರೋ ಕಾಲದಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್‌ಗೂ ಕೈ ಹಾಕಿದ ಸಾಹಿತಿ ನಮ್ಮ ಪ್ರೀತಿಯ ಪೂರ್ಣಚಂದ್ರ ತೇಜಸ್ವಿಯವರು. ಎಲ್ಲರೂ ಕಥೆ ಕಾದಂಬರಿ ಬರೀತಾ ಇದ್ದರೆ ಅವರು ಅದೆಲ್ಲವನ್ನೂ ಬರೆದು ಮಾಹಿತಿ ಸಾಹಿತ್ಯಕ್ಕೂ ಬಂದರು; ಕಿರಗೂರಿನ ಗಯ್ಯಾಳಿಗಳೂ ಬೆದರುವಂಥ ಮಿಲೆನಿಯಮ್ ಬಿರುಗಾಳಿ ಬೀಸಿದರು. ಕಂಪ್ಯೂಟರಿನಲ್ಲಿ ಕನ್ನಡವು ಅರಳಬೇಕೆಂದು ಬೆಂಗಳೂರಿಗೆ ಬಂದು ಪ್ರೆಸ್‌ಮೀಟ್ ಮಾಡಿದರು. ಪಂಪ ಪ್ರಶಸ್ತಿ ಬಂದರೂ ಬನವಾಸಿಯನ್ನು ನೆನೆಯಲಿಲ್ಲ. ಅಪ್ಪನಿಗಿಂತ ಶಿವರಾಮ ಕಾರಂತರೇ ನನ್ನ ಎದುರಿನ ಮಾದರಿ ಎಂದಿದ್ದೂ ಇದೆ.

ಈಗ ಅವರು ಕನ್ನಡದಲ್ಲೇ ವಿನೂತನ ಎನ್ನಬಹುದಾದ `ಇಲ್ಲಸ್ಟ್ರೇಟೆಡ್ ಗ್ರಾಫಿಕ್ ನಾವೆಲ್’ ಎಂದು ಕರೆಯಲಾಗಿರುವ ‘ಮಾಯಾಲೋಕ’ದ ಭಾಗ – ೧ನ್ನು ಕನ್ನಡಿಗರ ಮುಂದೆ ತಂದಿಟ್ಟಿದ್ದಾರೆ. ಎಂದಿನ ಅಷ್ಟದಳ ಡೆಮಿ,ಕ್ರೌನ್ ಅಳತೆಗಳನ್ನು ಬದಿಗಿಟ್ಟು, ಕ್ರೌನ್ ಚತುರ್ದಳವನ್ನೇ ಅಡ್ಡ ತಿರುಗಿಸಿ (ಲ್ಯಾಂಡ್‌ಸ್ಕೇಪ್ ಎಂದು ಕಂಪ್ಯೂಟರ್ ಭಾಷೆಯಲ್ಲಿ ಕರೆಯುತ್ತಾರೆ. ಆಯತಾಕಾರವಾದ ಪುಸ್ತಕ,ಅಡ್ಡ ಅಳತೆಯು ಉದ್ದದ ಅಳತೆಗಿಂತ ಕಡಿಮೆ ಇರುತ್ತದೆ) ಮೂರು ಕಾಲಂಗಳಲ್ಲಿ ಪಠ್ಯವನ್ನು ಹರಿಸಿದ್ದಾರೆ. “ಈ ಕೃತಿಯಲ್ಲಿ ಹಾಸುಹೊಕ್ಕಾಗಿರುವ ಸ್ಕೆಚ್ ಮತ್ತು ರೇಖಾ ಚಿತ್ರಗಳು ಕೃತಿಯ ಸಾಂದರ್ಭಿಕ ವಿವರಣೆಯಾಗಿ ಕೊಟ್ಟಿರುವ ಚಿತ್ರಗಳಲ್ಲ. ಕೆಲವೆಡೆಗಳಲ್ಲಿ ಹಗೆ ಕಂಡುಬಂದರೂ ಅದು ಕೇವಲ ಆಕಸ್ಮಿ. ಇದು ಕೊಲಾಜ್. ಇಲ್ಲಿನ ಕಥಾ ಪ್ರತಿಮೆಗಳೂ, ದೃಶ್ಯಪ್ರತಿಮೆಗಳೂ ಓದುತ್ತ ಹೋದಂತೆ ಒಂದರ ಮೇಲೊಂದು ಸಂಯೋಜನೆಗೊಳ್ಳುತ್ತ ಮಾಯಾಲೋಕವನ್ನು ಸೃಷ್ಟಿಸುತ್ತವೆ” ಎಂದು ತೇಜಸ್ವಿ ತಮ್ಮ ಮೊದಲ ಮಾತಿನಲ್ಲಿ ಘೋಷಿಸಿದ್ದಾರೆ. ಅಂದರೆ ಇಲ್ಲಿ ಚಿತ್ರಗಳು “ಹಾಸುಹೊಕ್ಕಾಗಿವೆ” ಮತ್ತು “ಇವು ಮಾಯಾಲೋಕವನ್ನು ಸೃಷ್ಟಿಸುತ್ತವೆ” ಎಂದು ಲೇಖಕರೇ ಹೇಳಿದಂತಾಯಿತು. ಈ ಮಾತುಗಳನ್ನು ಓದಿದ ಮೇಲೆ ಓದುಗ ಮುಂದಿನ ಪುಟಗಳನ್ನು ತಿರುಗಿಸುವಾಗ ಮಾಯಾಲೋಕವನ್ನು ಸೃಷ್ಟಿಸಿಕೊಳ್ಳಲೇಬೇಕಾದ ಅನಿವಾರ್ಯ ಮಾನಸಿಕತೆಯನ್ನು ಓದುಗರು ರೂಢಿಸಿಕೊಳ್ಳಬೇಕೆ ಎಂಬ ಪ್ರಶ್ನೆಯನ್ನ ಇಷ್ಟವಿದ್ದವರು ಕೇಳಿಕೊಳ್ಳಬಹುದು!

ಈ ಪುಸ್ತಕದ ಆಕಾರವೇ ಎಲ್ಲರೂ ಕುಳಿತು, ಮೇಜಿನ ಮೇಲೋ, ನೆಲದ ಮೇಲೋ ಪುಸ್ತಕವನ್ನು ‘ಅಗಾಲವಾಗಿ’ ತೆರೆದು ಓದಬೇಕಾದ ಸ್ಥಿತಿಯೇ ಮಾಯಾಲೋಕದ ಮೊದಲನೇ ಅನುಭವ. ನಮ್ಮ ವಾರಪತ್ರಿಕೆಗಳನ್ನು ಲಾಗಾಯ್ತಿನಿಂದ ಓದುತ್ತಿರುವವರಿಗೆ ಮೂರು ಕಾಲಂಗಳ ರೂಢಿಗತ ವಿನ್ಯಾಸ ಅರಗಿಸಿಕೊಳ್ಳುವುದು ಸುಲಭ ಬಿಡಿ.

ಪುಸ್ತಕದಲ್ಲಿ ತೇಜಸ್ವಿಯವರ ನಿರೂಪಣೆಯಲ್ಲೇ ಕಥೆಗಳಿವೆ. ಅವರ ಹೆಸರು ನೇರವಾಗಿ ಪ್ರಸ್ತಾವನೆಯಾಗದಿದ್ದರೂ ಅವರ ಹೆಂಡತಿ ಮಕ್ಕಳ ಹೆಸರುಗಳು ಹಾಗೆಯೇ ಬಂದಿವೆ. ಅಷ್ಟಾಗಿಯೂ ಇದು ಗ್ರಾಫಿಕ್ ನಾವೆಲ್ ಎಂದು ಒಪ್ಪುವುದು ತೇಜಸ್ವಿಯವರ ಪಕ್ಷಿಚಟ ಮುಂತಾದ ಖಯಾಲಿಗಳನ್ನು ತಿಳಿದುಕೊಂಡವರಿಗೆ ಕಷ್ಟ ಆಗಬಹುದು.

ಈ ಪುಸ್ತಕವು ಒಂದು ಬ್ಲಾಗ್‌ನಂತಿದೆ ಎಂದು ಇದನ್ನು ಓದಲೆಂದು ಕೊಟ್ಟ ಗೆಳೆಯರು ಹೇಳಿದರು. ಮಾಯಾಲೋಕದ ಸ್ಥಳನಾಮದಲ್ಲಿ ವಾಸಿಸುತ್ತಿರೋರಿಗೆ ಬ್ಲಾಗಿಂಗ್ ಇರಲಿ, ಇಂಟರ್‌ನೆಟ್ ಏನೆಂದರೇ ತಿಳಿದಿರಲಾರದು. ಆದರೆ ತೇಜಸ್ವಿಯವರು ಇದನ್ನೆಲ್ಲ ಬಲ್ಲವರು. ಹೀಗೆ ಮಹಾನಗರಗಳ ಬ್ರಾಡ್‌ಬ್ಯಾಂಡ್ ಬದುಕಿನಲ್ಲಿ ಕಾಣಿಸಿಕೊಳ್ಳುವ ಬ್ಲಾಗ್‌ಗಳ ರೀತಿಯಲ್ಲೇ ಮಾಯಾಲೋಕದ ಕಥೆಯೂ ಇದೆ ಎನ್ನುವುದು ಮಾತ್ರ ವಾಸ್ತವ. ಈ ಉಪಮೆಯನ್ನು ಬ್ಲಾಗ್ ಬಲ್ಲವರು ಮಾತ್ರ ಬಳಸಬಹುದು. ಆದರೆ ನೋಡಿ, ಬ್ಲಾಗ್ ಬಂದಿದ್ದೇ ಇತ್ತೀಚೆಗೆ; ಆದರೆ ತೇಜಸ್ವಿಯವರ ಕಥೆ ಎಷ್ಟೋ ವರ್ಷಗಳಿಂದ ನಡೆಯುತ್ತಲೇ ಇದೆ. ಅದಲ್ಲದೇ ಅವರೇ ಹೇಳುವಂತೆ ನಮ್ಮೆದುರು ಬದಲಾವಣೆಗಳ ಮಹಾಪೂರವೇ ಹರಿಯುತ್ತಿದೆ. ನಾವೀಗ ಹೊಸ ಅಭಿವ್ಯಕ್ತಿ ವಿಧಾನಗಳ ಬಗ್ಗೆ ಗಮನ ಹರಿಸಿ ಹೊಸದಿಗಂತಗಳತ್ತ ಅನ್ವೇಷಣೆ ಹೊರಡಬೇಕಾಗಿದೆ ಎಂದೂ ತೇಜಸ್ವಿಯವರು ಮೊದಲ ಮಾತಿನಲ್ಲಿ ಹೇಳಿರುವುದೂ ನಿಜವೇ (ಬ್ಲಾಗ್ ಗೊತ್ತಿರೋರಿಗೆ ಮಾತ್ರ ಈ ಪ್ಯಾರಾ ಬರೆದಿರುವೆ).

ಇಷ್ಟಾಗಿಯೂ ಮಾಯಾಲೋಕವನ್ನು ಓದುತ್ತಿದ್ದಂತೆ ಮೂಡಿಗೆರೆಯ ದೃಶ್ಯಗಳೆಲ್ಲ ಕಣ್ಣಿಗೆ ಕಟ್ಟುತ್ತವೆ. ಊರಿನ ಹೆಸರು ಯಾವುದೇ ಇರಲಿ, ಅದರಲ್ಲಿ ಇರೋದೆಲ್ಲ ಮೂಡಿಗೆರೆ ಮತ್ತು ತೇಜಸ್ವಿಯವರ ಸುತ್ತಮುತ್ತಲಿನ ದೃಶ್ಯಗಳು, ಸನ್ನಿವೇಶಗಳು ಎಂಬುದು ಖಚಿತವಾಗುತ್ತದೆ. ಹೀಗಂತ ಅವರು ಬೆಟ್ಟು ಮಾಡಿ ತೋರಿಸದಿದ್ದರೂ ಹಾಗೆ ಅನ್ನಿಸುತ್ತದೆ. ಬಹುಶಃ ತೇಜಸ್ವಿಯವರ ಬದುಕು, ಮನೆ, ಮೀನು ಹಿಡಿಯುವ ಹವ್ಯಾಸ, ಹಕ್ಕಿ ಛಾಯಾಗ್ರಹಣ, ಎಲ್ಲವೂ ಅವರ ಸಾಹಿತ್ಯ ರಚನೆಗಳಂತೆಯೇ ಪ್ರಚುರಗೊಂಡಿರೋದ್ರಿಂದ ಈ ಥರ ಅನ್ನಿಸಿರಬಹುದೇನೋ… ತೇಜಸ್ವಿಯವರ ಕೃತಿಗಳನ್ನು ಮಾತ್ರ ಓದಿದೋರಿಗೆ ಬೇರೆ ಅನುಭವ ಆಗಬಹುದು ಎಂದು ಇಲ್ಲಿ ಒಪ್ಪಿಕೊಳ್ಳುವೆ. ನಾನು ಮೂಡಿಗೆರೆಯ ಬಸ್‌ನಿಲ್ದಾಣದಲ್ಲಿ ಎಷ್ಟೋ ಗಂಟೆಗಳ ಕಾಲ ಕರಿಮೋಡಗಳನ್ನು ನೋಡುತ್ತ, ಜಡಿಮಳೆಯಲ್ಲಿ ಇಣುಕುತ್ತ ಕಾಲ ಕಳೆದಿರುವುದರಿಂದ ಅವರು ಮೂಡಿಸೋ ಸನ್ನಿವೇಶಗಳು ದಿಢೀರನೆ ನನ್ನನ್ನು ಅಲ್ಲಿಗೇ ಕರೆದೊಯ್ಯುತ್ತವೆ.

ಮಾಯಾಲೋಕದಲ್ಲಿ ಇರುವುದೆಲ್ಲ ಬಿಡಿ ಬಿಡಿ ಎಂದು ಕಾಣಿಸಿಕೊಳ್ಳುವ ಘಟನೆಗಳು. ಇದೆಲ್ಲವೂ ಕಥಾ ನಿರೂಪಕನಿಗೆ ಕಂಡಂತೆಯೇ ಇವೆ ಎಂದೇನೂ ಇಲ್ಲ. ಹಲವು ಬಾರಿ ಇಲ್ಲಿ ನಿರೂಪಕ ತನ್ನೆದುರಿಗೆ ನಡೆಯದ ಘಟನೆಗಳನ್ನೂ ವಿವರಿಸಿದ್ದಾನೆ. ಇಲ್ಲಿ ಬರುವ ಕಥಾಪಾತ್ರಗಳಲ್ಲಿ ಕರಾಟೆ ಮಂಜ ತುಂಬಾ ಇಂಟರೆಸ್ಟಿಂಗ್ ಆಗಿದಾನೆ. ಈತ ತೇಜಸ್ವಿಯವರ ಟ್ರೇಡ್‌ಮಾರ್ಕ್ ಕ್ಯಾರೆಕ್ಟರ್. ಇನ್ನುಳಿದಂತೆ ಅಪ್ಪಣ್ಣಪ್ಪ, ಇಕ್ಬಾಲ್ ಸಾಬಿ, ಪ್ರಕಾಶ, ರುಕ್ಮಿಣಿ ಮುಂತಾದವರು ತಂತಮ್ಮ ಚಹರೆಗಳನ್ನು ಎಂದಿನ ತೇಜಸ್ವಿ ಶೈಲಿಯಲ್ಲಿ ಅನಾವರಣಗೊಳಿಸಿದ್ದಾರೆ. ಹಾಗೆ ನೋಡಿದರೆ ತೇಜಸ್ವಿಯವರು ಪಾತ್ರಪರಿಚಯ ಹಾಗೂ ನಿರೂಪಣೆಯಲ್ಲಿ ಹೊಸದಿಗಂತದತ್ತ ಸಾಗಿದ್ದಾರೆ ಎಂದೇನೂ ಅನ್ನಿಸಲ್ಲ. ಇಷ್ಟಕ್ಕೂ ಮಾಯಾಲೋಕದ ಭಾಗ ೧ ಮಾತ್ರವೇ ಈಗ ಬಿಡುಗಡೆಯಾಗಿದೆ. ಆದ್ದರಿಂದ ಈ ಬಗ್ಗೆ ಹೆಚ್ಚು ಹೇಳುವುದು ಇಲ್ಲಿ ಸಲ್ಲದು.

ಇನ್ನು ತೇಜಸ್ವಿಯವರು ಹೇಳುವಂತೆ ಪುಸ್ತಕದಲ್ಲಿ ಬಳಕೆಯಾದ ಚಿತ್ರಗಳು ಹಾಸುಹೊಕ್ಕಾಗಿವೆಯೆ ಎಂದು ನೋಡಿದರೆ, ನನಗಂತೂ ಹಾಗನ್ನಿಸಲಿಲ್ಲ. ಅಥವಾ ಪಠ್ಯದ ಜೊತೆಗೇ ಈ ಚಿತ್ರಗಳೂ ಸೇರಿಕೊಂಡು ಮಾಯಾಲೋಕವನ್ನು ಸೃಷ್ಟಿಸಿದ ಹಾಗೂ ನನಗೆ ಅನ್ನಿಸಲಿಲ್ಲ. ಈ ಬಗೆಯ ತಂತ್ರವನ್ನು ನಮ್ಮ ನಡುವಿನ ಅನೇಕ ಆಂಗ್ಲ ಪತ್ರಿಕೆಗಳು ಮಾಡಿವೆ, ಮಾಡುತ್ತಲೂ ಇವೆ. ‘ದಿ ಹಿಂದು’ ಪತ್ರಿಕೆಯ ಫೋಲಿಯೋ ಎಂಬ ಪುರವಣಿ ಇದಕ್ಕೆ ತೀರ ಇತ್ತೀಚೆಗಿನ ಉದಾಹರಣೆ (ಅದೀಗ ನಿಂತುಹೋಗಿದೆ). ನಿಂತುಹೋದ ಕನ್ನಡ ಮಾಸಿಕ ‘ಭಾವನಾ’ದಲ್ಲಿ ಕೂಡಾ ಇಂಥ ಮಾಯಾಲೋಕದ ಪ್ರಯತ್ನ ನಡೆದಂತೆ ನೆನಪಾಗುತ್ತಿದೆ. ಅಲ್ಲದೆ ಚಿತ್ರಗಳು ಅಕಸ್ಮಾತ್ ಹೊಂದಿಕೆಯಾದರೂ ಅದು ಆಕಸ್ಮಿಕ ಎಂದು ತೇಜಸ್ವಿಯವರು ಹೇಳಿದ್ದು ನೋಡಿದರೆ ಅವರು ಈ ಚಿತ್ರಗಳನ್ನು ವಿವಿಧ ಪುಟಗಳಲ್ಲಿ ರ್‍ಯಾಂಡಮ್ ಆಗಿ, ನೋಡದೆಯೇ ಸೇರಿಸಿದ್ದಾರೆಯೆ ಎಂಬ ಪ್ರಶ್ನೆ ಮೂಡುತ್ತದೆ. ಅಥವಾ ಈ ಬಗಯ ಮಾಯಾಲೋಕವನ್ನು ಸೃಷ್ಟಿಸುವ ಕಾಯಕಕ್ಕಾಗಿ ಅವರು ಯಾವುದಾದರೂ ಸೂತ್ರವನ್ನು ಅನುಸರಿಸಿದ್ದಾರೆಯೆ ಎಂದೂ ಅನುಮಾನಿಸಬಹುದು. ಚಿತ್ರಗಳಿಗೆ ಯಾವ ರೀತಿ ಸಂಬಂಧ ಇದೆ ಅಥವಾ ಇಲ್ಲ ಎಂದು ಯೋಚಿಸುವ ಕಸರತ್ತನ್ನು ಓದುಗರು ಮಾಡಿದಷ್ಟೂ ಕಥೆಯ ಸೊಗಸು ಮಾಸುವ ಅಪಾಯ ಇದೆ ಎಂದು ನನಗೆ ಅನ್ನಿಸಿತು.
ಮಾಯಾಲೋಕದಲ್ಲೂ ತೇಜಸ್ವಿಯವರ ‘ಇನ್‌ಫೋ – ಡಂಪಿಂಗ್’ ಕೆಲಸ ಮುಂದುವರಿದಿದೆ. ಆದರೆ ತೇಜಸ್ವಿಗೆ ಕಾದಂಬರಿಯಲ್ಲಿ ಹೇಗೆ ಮಾಹಿತಿ ಸಾಹಿತ್ಯವನ್ನು ಮಿಳಿತಗೊಳಿಸುವುದು ಎಂದು ಗೊತ್ತು. ಬಿ ಜಿ ಎಲ್ ಸ್ವಾಮಿಯವರು ಮಾಹಿತಿ ಸಾಹಿತ್ಯದಲ್ಲಿ ಕನ್ನಡ / ತಮಿಳು ಸಾಹಿತ್ಯವನ್ನು ತಂದಂತೆ ಇಲ್ಲಿ ತೇಜಸ್ವಿಯವರು ಕಥೆ ಹೇಳುತ್ತ ಎನ್‌ಸೈಕ್ಲೋಪೀಡಿಕ್ ಮಾಹಿತಿಗಳನ್ನೂ ತಮ್ಮದೇ ಶೈಲಿಯಲ್ಲಿ ಬೆರೆಸಿದ್ದಾರೆ. ಇದು ತೇಜಸ್ವಿಯವರ ಇನ್ನೊಂದು ಟ್ರೇಡ್‌ಮಾರ್ಕ್.

ಕಲೆ ಹಾಕಿದ ಮಾಹಿತಿಗಳೇ ಕಾದಂಬರಿ , ಸಿನಿಮಾ ಆಗುವುದಿಲ್ಲ ಎನ್ನುವುದಕ್ಕೆ ಒಂದೆರಡು ಉದಾಹರಣೆಗಳನ್ನು ಇಲ್ಲಿ ಕೊಡುವುದು ಸೂಕ್ತ ಎಂದು ಭಾವಿಸಿದ್ದೇನೆ. ಎಸ್. ಎಲ್. ಭೈರಪ್ಪನವರ ‘ಸಾರ್ಥ’ ಹಾಗೂ ಎಚ್. ನಾಗವೇಣಿಯವರ ‘ಗಾಂಧಿ ಬಂದ’ ಕಾದಂಬರಿಗಳು ಕಾದಂಬರಿಗಳಲ್ಲ, ಡಾಕ್ಯುಂಬರಿಗಳು ಎನ್ನುವುದು ನನ್ನ ವಾದ. ಡಾಕ್ಯುಂಬರಿ ಎಂದರೆ ಯಾವುದೋ ದೇವತೆಯಲ್ಲ. ಡಾಕ್ಯುಮೆಂಟರಿ ಮತ್ತು ಕಾದಂಬರಿಗಳ ನಡುವಣ ಒಂದು ಹೊಸ ಅವತಾರ; ಸಾಹಿತ್ಯ ಪ್ರಕಾರ. ಈ ಎರಡೂ ಕೃತಿಗಳು ಕನ್ನಡದ ಮಟ್ಟಿಗೆ ‘ಡಾಕ್ಯುಂಬರಿ’ಗಳ ಹೊಸ ಪರಂಪರೆಯನ್ನು ಹುಟ್ಟುಹಾಕಿವೆ ಎಂದು ನನಗನ್ನಿಸಿದೆ. ಹಾಗೆಯೇ ‘ನಮ್ಮೂರ ಮಂದಾರ ಹೂವೆ’ ಇತ್ಯಾದಿ ಸಿನೆಮಾಗಳು ಜೀವನ ಸಂಸ್ಕೃತಿ ಭಾಗವೊಂದರ ಎಲ್ಲ ಮಾಹಿತಿಗಳನ್ನೂ ಎರಡೂವರೆ ಗಂಟೆಯ ಕಥೆಯಲ್ಲಿ ತುರುಕಿರೋ ‘ಫೀಚರ್‌ಮೆಂಟರಿ’ಗಳನ್ನೂ (ಫೀಚರ್ + ಡಾಕ್ಯುಮೆಂಟರಿ) ನಾವು ನೋಡಬಹುದು. ಇವೆಲ್ಲ ಬೆಳವಣಿಗೆಗಳ ನಡುವೆ ತೇಜಸ್ವಿ ಮಾತ್ರ ತಮ್ಮ ಎಂದಿನ ಹರಟೆ ಶೈಲಿಯನ್ನೇ ಮುಂದುವರಿಸಿದ್ದಾರೆ ಎನ್ನೋದು ಹೊಸದಿಗಂತದತ್ತ ಪಯಣವೆ, ಅಲ್ಲವೆ ಎಂಬ ಚರ್ಚೆ ಮುಕ್ತವಾಗಿದೆ. ಯಾಕೆಂದರೆ ಈ ಲೇಖನ ಮೊದಲ ನೋಟದ, ತತ್‌ಕ್ಷಣದ ಪ್ರತಿಕ್ರಿಯೆ. ಈ ಥರ ಕಾದಂಬರಿಯನ್ನು ಓದಿದ ಕೂಡಲೇ ಅನ್ನಿಸಿದ್ದನ್ನು ಬರೆಯುವುದೂ ಹೊಸ ಅಭಿವ್ಯಕ್ತಿ ವಿಧಾನ ಮತ್ತು ಇನ್‌ಸ್ಟಂಟ್ ವಿಮರ್ಶೆಯ ಒಂದು ನಿದರ್ಶನ ಎಂದು ತೇಜಸ್ವಿಯವರು ಮತ್ತು ಓದುಗರಾದ ತಾವು ಒಪ್ಪಿಕೊಳ್ಳಬೇಕಂದು ನನ್ನ ನಮ್ರ ವಿನಂತಿ.

ಆದರೆ ‘ಮಾಯಾಲೋಕ’ದಲ್ಲಿ ಹರಟೆಯು ಕೆಲವೊಮ್ಮೆ ವಾಚಾಳಿತನದತ್ತ ವಾಲಿದೆ. ಕಥೆಯಲ್ಲಿ ಘಟನೆಗಳ ಚಲನೆ ಎಂಥ ಪರಿಣಾಮವನ್ನು ಬೀರುತ್ತದೆ ಎಂದು ತೇಜಸ್ವಿಯರಿಗೆ ಯಾರೂ ಹೇಳಿಕೊಡಬೇಕಿಲ್ಲ. ಅವರ ‘ಜುಗಾರಿ ಕ್ರಾಸ್’ ಓದಿದವರು ಈ ಬಗ್ಗೆ ಪ್ರಮಾಣ ಮಾಡಲೂ ಸಿದ್ಧ. ಇಲ್ಲಿ ನಡೆವ ಘಟನೆಗಳನ್ನಷ್ಟೇ ನೋಡಿದರೆ ಅವು ಶಾಕ್ ಆಗುವ ಮಟ್ಟದಲ್ಲಿ ಇಲ್ಲ. ಆದರೆ ಯಾರಿಗ್ಗೊತ್ತು, ಅವರು ಹೇಳಿದ ಹಾಗೆ ಬೆಟ್ಟು ತೋರಿಸದೇ ಹೋದ ಸೂಕ್ಷ್ಮಗಳನ್ನು ನಾನು ಅರಿಯಲಾಗದೇ ಹೋಗಿರಬಹುದು! ಆದರೆ ಒಂದಂತೂ ಹೇಳಬಲ್ಲೆ: ಮಾಯಾಲೋಕ ಕನ್ನಡದಲ್ಲಿ ಬಂದ ಒಂದು ಅತ್ಯುತ್ತಮ ಪ್ರಯೋಗ. ಹಳ್ಳಿಯ ಬೀದಿಗಳಲ್ಲೂ ಲವಲವಿಕೆಯ ಬದುಕನ್ನು ಕಂಡು ದಾಖಲಿಸುವ, ಅವರ ನಡುವಣ ಸೂಕ್ಷ್ಮ ಡೈಲಾಗ್‌ಗಳನ್ನೂ ಅಂತಂತೇನೇ ಓದುಗರಿಗೆ ಒಪ್ಪಿಸುವ ಚಾಕಚಕ್ಯತೆಯಲ್ಲಿ ತೇಜಸ್ವಿ ಮಿಂಚಿದ್ದಾರೆ. ಮೂಡಿಗೆರೆಯ/ ಅರ್ಥಾತ್ ಯಾವುದೋ ಹಳ್ಳಿಯೊಂದರ ಲ್ಯಾಂಡ್‌ಸ್ಕೇಪ್‌ನ್ನು ಲ್ಯಾಂಡ್‌ಸ್ಕೇಪ್ ಆಕಾರದಲ್ಲೇ ಕೊಡುವ ಅವರ ಪ್ರಯೋಗಶೀಲತೆ, ಚಟಪಟನೆ ನಡೆಯುವ ಘಟನೆಗಳ ಸಾಂದ್ರತೆ – ಇವೆಲ್ಲವೂ ಕನ್ನಡ ಸಾಹಿತ್ಯದಲ್ಲಿ ತುಂಬಾ ಅಪರೂಪ, ವಿಶಿಷ್ಟ.

ಬೆಲೆಯ ಬಗ್ಗೆ ಮತ್ತು ಟೈಪೋ ದೋಷಗಳ ಬಗ್ಗೆ ಒಂದಷ್ಟು ಗಮನ ಹರಿಸಿದ್ದರೆ ಮಾಯಾಲೋಕದ ಅನುಭವ ಇನ್ನಷ್ಟು ರಮ್ಯವಾಗಿರುತ್ತಿತ್ತು.

ಹಾಗಾದರೆ ಮಾಯಾಲೋಕವನ್ನು ಓದಬೇಕ ಬೇಡವಾ ಅಂತ ಕೇಳಿದರೆ ಖಂಡಿತ ಕಡ ತಂದಾದ್ರೂ ಓದಿ ಎಂದು ಖುಷಿಯಾಗಿ ಹೇಳಬಹುದು! ನಾನು ಓದಿದ್ದೇ ಹಾಗೆ ತಾನೆ? ಪತ್ರಿಕೆಗಳು (ಪ್ರಿಂಟ್ ಮೀಡಿಯಾ) ಗೌರವ ಪ್ರತಿಗಾಗಿ ಕಾದು, ಅದು ಅಕಸ್ಮಾತ್ ಬಂದರೆ, ಅದೂ ಎರಡು ಪ್ರತಿಗಳಿದ್ದರೆ, ಒಂದನ್ನು ವಿಮರ್ಶಕರಿಗೆ ಕಳಿಸಿ ಅವರ ವಿಮರ್ಶೆ ಬಂದು ಕಂಪೋಸ್ ಆಗಿ ಪ್ರಕಟವಾಗೋ ಹೊತ್ತಿಗೆ…. ಈ ಇನ್‌ಸ್ಟಂಟ್ ವಿಮರ್ಶೆನ ತೇಜಸ್ವಿಯವರೂ ಓದಿ ಮುಗಿಸಿ ಮರೆತಿರುತ್ತಾರೆ ಅನ್ನೋ ದೃಢವಿಶ್ವಾಸ ನನಗಿದೆ.

ಮಾಯಾಲೋಕ ಭಾಗ – ೧
ಕೆ ಪಿ ಪೂರ್ಣಚಂದ್ರ ತೇಜಸ್ವಿ
ಪುಸ್ತಕ ಪ್ರಕಾಶನ, ೨೦೦೬
ಪುಟಗಳು : ೨೫೦
ಬೆಲೆ : ರೂ.೨೨೨

1 Response to 'ಮಾಯಾಲೋಕ'ದ ಮೊದಲನೋಟ

  1. Gayatri Badiger, Dharwad

    super sir.. thank you

Leave a Reply