ಎ ಹಿಸ್ಟಾರಿಕಲ್ ಅಟ್ಲಾಸ್ ಆಫ್ ಕರ್ನಾಟಕ
ಸ್ವರೂಪ ಭೂಷಣ
ನಮ್ಮ ನಾಡಿನ ಸಾಂಪ್ರದಾಯಕ ಹೆಸರಾದ “ಕರ್ನಾಟಕ” ಎಲ್ಲಿಂದ ಬಂತು? ಕಪ್ಪು ವರ್ಣದ ಮಣ್ಣಿನ ಸಂಕೇತವಾಗಿ ಬಂದ ಬಿರುದೇ ಇದು? ಅಥವ ಅತಿ ಎತ್ತರವಿರುವ ನಮ್ಮ ಭೂಮಾತೆ, ಕರುನಾಡು ಎಂದು ಕರೆಯಲ್ಪಟ್ಟಿತೆ? ಕರ್ನಾಟಕ ಹಾಗು ಕನ್ನಡಿಗರ ನಿಜ ಸ್ವರೂಪವು ಅವರ ಹಿನ್ನೆಲೆಯಲ್ಲಿಯೇ ಅಡಗಿದೆ. ಈ ಹಿನ್ನೆಲೆಯನ್ನು ಸಚಿತ್ರವಾಗಿ “ಕರ್ನಾಟಕದ ಐತಿಹಾಸಿಕ ಭೂಪಟ ಗ್ರಂಥ” ಯಲ್ಲಿ ಪ್ರಸ್ತುತಿಸಲ್ಪಟ್ಟಿದೆ. ಆಂಗ್ಲ ಭಾಷೆಯಲ್ಲಿರುವ ಈ ಪುಸ್ತಕದ ಹೆಸರು “ಎ ಹಿಸ್ಟಾರಿಕಲ್ ಅಟ್ಲಾಸ್ ಆಫ್ ಕರ್ನಾಟಕ” ಎಂದು.
ಜನಗಣತಿ ಕಾರ್ಯಕ್ರಮಗಳ ನಿರ್ದೇಶನಾಲಯದ (ಡೈರೆಕ್ಟೊರೇಟ್ ಆಫ್ ಸೆನ್ಸಸ್ ಆಪರೇಶನ್ಸ್) ನೇತೃತ್ವದಲ್ಲಿ ಹೊರಬಂದಿರುವ ಈ ಮಾಹಿತಿ ಭಂಡಾರ ಈಗ ಎಲ್ಲ ಪುಸ್ತಕ ಮಳಿಗೆಗಳಲ್ಲಿ ದೊರೆಯುತ್ತಿದೆ. ಐ. ಏ. ಎಸ್. ಶ್ರೀ. ಎಚ್. ಶಶಿಧರ ಹಾಗು ಭೂಗೋಳ ಶಾಸ್ತ್ರಜ್ಞ ಶ್ರೀ. ಎನ್. ಶ್ರೀನಿವಾಸ ಮೂರ್ತಿಗಳ ಸುಮಾರು ಎರಡು ವರ್ಷಗಳ ಈ ಆಳವಾದ ಕೆಲಸದ ಉದ್ದೇಶವು “ಇತಿಹಾಸ ಒಂದು ಪ್ರದೇಶದ ಸರಹದ್ದುಗಳ ಮೆಲೆ ಬೀರಿದ ಪರಿಣಾಮ”ವನ್ನು ಎತ್ತಿತೋರಿಸುವುದು.
ಪ್ರಾಚೀನ ಕರ್ನಾಟಕದ ವಿಸ್ತಾರ ಮತ್ತು ಗಡಿಗಳು ಹೇಗಿದ್ದವು? ಇಲ್ಲಿ ನೆಲೆದಂತಹ ಗಿರಿಜನಗಳ ವಂಶಗಳು ಎಲ್ಲಿಂದ ಬಂದವು? ಇಲ್ಲಿ ಉನ್ನತಿ ಅವನತಿ ಪಡೆದ ಮಹಾ ಸಾಮ್ರಾಜ್ಯಗಳ ದೊರೆಗಳು ಎಲ್ಲೆಲ್ಲಿ ಆಳಿದರು? ಈ ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ಪೀಠಿಕೆಯಲ್ಲಿ ಕಾಣಬಹುದು.
ಮುಖ್ಯ ಭಾಗದಲ್ಲಿ ಸಾಮ್ರಾಜ್ಯಗಳ ವಿಶೇಷ ಅಂಶಗಳನ್ನು ಅನುಕ್ರಮವಾಗಿ ಪಟ್ಟಿರೂಪದಲ್ಲಿಟ್ಟಿದ್ದಾರೆ. ಪ್ರತಿಯೊಂದು ಕಾಲದಲ್ಲಿ ನೆಲೆದಿದ್ದ ರಾಜರು, ಅವರ ಆಳುವಿಕೆಯ ವಿಸ್ತಾರ, ಅವರ ಜನರು ಆಡಿದ ಭಾಷೆಗಳು, ಪೂಜಿಸಿದ ದೇವರುಗಳು, ಮುಂತಾದ ಅಮೂಲ್ಯ ಮಾಹಿತಿಗಳನ್ನು ಲೇಖಕರು ಇಲ್ಲಿ ವರ್ಣಿಸಿದ್ದಾರೆ.
ಪ್ರತಿಯೊಂದು ಹಾಳೆಯಲ್ಲು ಎಡ ಭಾಗದಲ್ಲಿ ತಿಪ್ಪಣಿ, ಬಲ ಭಾಗದಲ್ಲಿ ನಕ್ಷೆಯಿರುವ ವಿನ್ಯಾಸದಂತೆ ೨೫೦ ಬಿ. ಸಿ. ದಲ್ಲಿದ್ದ ಶಾತವಾಹನರಿಂದ ಹಿಡಿದು, ಕದಂಬರು, ಗಂಗರು ಮುಂತಾದ ಎಲ್ಲ ಸಾಮ್ರಾಜ್ಯಗಳ ಪ್ರದೇಶಗಳನ್ನು ಕಾಲಸಂಚಾರ ಮಾಡಿ, ೧೯೭೩ ರ “ಕರ್ನಾಟಕ”ದ ನಾಮಕರಣದವರೆಗೂ ಸಚಿತ್ರ ವಿವರಗಳನ್ನು ನೀಡಿದ್ದಾರೆ.
‘ಕೊನೆಗೆ ಉಳಿದದ್ದು ಸವಿಯೋಣ’ ಎಂದಂತೆ, ಪುಸ್ತಕದ ಹಿಂದಿನ ಕವಚದೊಂದಿಗೆ ಅಗಲವಾದ ಹಾಳೆಯಲ್ಲಿ ಅಲ್ಲಿಯತನಕ ಕಂಡ ಎಲ್ಲ ನಕ್ಷೆಗಳ ಕಡೆನೋಟವನ್ನು ಒಟ್ಟಿಗೆ ಕಾಣಬಹುದು. ಕರ್ನಾಟಕದ ಹಿನ್ನೆಲೆಯ ವಿಷಯದಲ್ಲಿ ಸಂಶೋಧನೆ ಮಾಡುವವರಿಗೆ, ಅಥವ ನಾಡಿನ ಇತಿಹಾಸದ ಚಿತ್ರೀಕರಣವನ್ನು ನೋಡಬಯಸುವವರಿಗೆ ಈ ಪುಸ್ತಕ ಬಹಳ ತೃಪ್ತಿಕರವಾಗುತ್ತದೆ.
ಬೆಲೆ: ರೂ. ೪೦೦.