ವಿಕಿಪೀಡಿಯ ಲೇಖನ ಬರಹ

-ಡಾ. ವಿಶ್ವನಾಥ ಬದಿಕಾನ

ವಿಕಿಪೀಡಿಯ ಎಂದರೇನು

ಆಧುನಿಕ ಬದುಕಿನ ಜ್ಞಾನ-ವಿಜ್ಞಾನ ಕ್ಷೇತ್ರದಲ್ಲಿನ ಅದ್ಭುತ ಆವಿಷ್ಕಾರಗಳಲ್ಲೊಂದಾದ ಮಾಹಿತಿ ತಂತ್ರಜ್ಞಾನದ ಒಂದು ವಿನೂತನ ಪರಿಕಲ್ಪನೆ ‘ವಿಕಿಪೀಡಿಯ’.  ವಿಕಿಪೀಡಿಯ (Wikipedia)ವು ವೆಬ್ ಆಧಾರಿತ ಅಂತರಜಾಲದ (Internet) ಮೂಲಕ ಬರೆಯುವ ಉಚಿತ, ಸಹಕಾರಿ, ಬಹುಭಾಷಾ ಸ್ವತಂತ್ರ ವಿಶ್ವಕೋಶ.  ಇದೊಂದು ವಿಶ್ವಕೋಶ ಜಾಲತಾಣ (Encyclopaedia Website) ವಾಗಿದ್ದು www.wikipedia.org ಅಂತರಜಾಲದ ಮೂಲಕ ಮಾಹಿತಿ ಸೇರಿಸಬಹುದು ಅಥವಾ ಹುಡುಕಬಹುದು.  ವಿಕಿಪೀಡಿಯವು ಅಂತರಜಾಲದ ಒಂದು ಸ್ವತಂತ್ರ ವಿಶ್ವಕೋಶವಾಗಿದ್ದು, ಪ್ರಪಂಚದ ಲಕ್ಷಾಂತರ ಮಂದಿ ಸ್ವಯಂಸೇವಕರ ಸಮುದಾಯವೊಂದು ಒಟ್ಟಿಗೆ ಸೇರಿ ಸಹಯೋಗಿ ಮನೋಭಾವದಿಂದ ಸಂಪಾದಿಸಿದ್ದಾಗಿದೆ.  ವಿಕಿಪೀಡಿಯವು ಮಾಹಿತಿಗಳ ಜ್ಞಾನಕೋಶ.  ಜ್ಞಾನ, ವಿಜ್ಞಾನ, ತಂತ್ರಜ್ಞಾನ, ತಂತ್ರಾಂಶಗಳನ್ನು ಸ್ವತಂತ್ರವಾಗಿ ಮತ್ತು ಮುಕ್ತವಾಗಿ ಇರುವಂತೆ ನೋಡಿಕೊಳ್ಳುವ ಯೋಜನೆಗಳಲ್ಲಿ ವಿಕಿಪೀಡಿಯ ಕೂಡ ಒಂದು.  ವಾಸ್ತವ ಜಗತ್ತಿನಲ್ಲೂ ಸಮುದಾಯವೊಂದನ್ನು ಕಟ್ಟಿ, ಅದರಲ್ಲೂ ಸ್ವತಂತ್ರತೆಯ ಅಂಶವನ್ನು ಎತ್ತಿ ಹಿಡಿದಿರುವ ವಿಕಿಪೀಡಿಯ ವಿಶ್ವದ ಭಾಷೆಗಳನ್ನು ತನ್ನ ಒಡಲಲ್ಲಿರಿಸಿಕೊಂಡಿದೆ.  ಜಗತ್ತಿನ ಎಲ್ಲಾ ವಿಚಾರಗಳನ್ನು ಆಯಾ ಭಾಷೆಗಳಲ್ಲಿ ಬರೆದು ಪ್ರಪಂಚಜ್ಞಾನವಾಗಿ ರೂಪಿಸಲು ವಿಕಿಪೀಡಿಯದಲ್ಲಿ ಸಾಧ್ಯವಿದೆ.  ನಮ್ಮ ಸ್ಥಳೀಯ ವಿಚಾರಗಳಾದ ಸಂಸ್ಕೃತಿ, ಚರಿತ್ರೆ, ವಿಜ್ಞಾನ, ಪ್ರಕೃತಿ, ಪರಿಸರ, ಸಮಾಜ, ಜಾನಪದ, ಸ್ಥಳನಾಮ, ಧರ್ಮ, ವ್ಯಕ್ತಿಪರಿಚಯ, ಕಲೆ, ನೃತ್ಯ ಇತ್ಯಾದಿ ಮಾಹಿತಿಗಳನ್ನು ವಿಕಿಪೀಡಿಯದಲ್ಲಿ ಬರೆಯುವುದರಿಂದ ಅವುಗಳು ನಾಳೆಯ ಜ್ಞಾನಗಳಾಗಿ ಮಾರ್ಪಡುವಂತೆ ಇಂದಿನವರು ಪ್ರಯತ್ನಿಸಬಹುದಾದ ಆನ್‌ಲೈನ್ ಮಾಹಿತಿ ಕೋಶ.

 

ವಿಕಿಪೀಡಿಯ ಪದದ ನಿಷ್ಪತ್ತಿ

ವಿಕಿಪೀಡಿಯವು ವಿಕಿ ಮತ್ತು ಪೀಡಿಯ ಎಂಬ ಎರಡು ಪದಗಳ ಸಂಮಿಶ್ರವಾಗಿದೆ.  ವಿಕಿ ಪದವು ಹವಾಯಿ ಭಾಷೆಯಿಂದ ಬಂದಿದೆ.  ಹವಾಯಿ ಭಾಷೆಯ ‘ವಿಕಿ’ ಪದಕ್ಕೆ ಶೀಘ್ರ , ವೇಗ, ತ್ವರಿತಗತಿ ಎಂಬರ್ಥವಿದೆ.  ಇಂಗ್ಲಿಷಿನಲ್ಲಿ Encyclopaedia  ಪದಕ್ಕೆ ವಿಶ್ವಕೋಶ ಎಂದರ್ಥ.  ಹವಾಯಿ ಭಾಷೆಯ ವಿಕಿ ಮತ್ತು ಎನ್‌ಸೈಕ್ಲೋಪೀಡಿಯದ ಪೀಡಿಯ ಈ ಎರಡೂ ಪದಗಳನ್ನು ಸಂಯೋಜಿಸಿ ವಿಕಿಪೀಡಿಯ (Wikipedia) ಎಂಬ ಗಣಕೀಕೃತ ವಿಶ್ವಕೋಶದ ಮಾದರಿಯಲ್ಲಿ ಅಭಿವೃದ್ಧಿಗೊಳಿಸಲಾಗಿದೆ.  ಕನ್ನಡದಲ್ಲಿ ವಿಕಿಪೀಡಿಯವನ್ನು ‘ತ್ವರಿತ ವಿಶ್ವಕೋಶ’ವೆಂದೂ ಹೆಸರಿಸಿದ್ದಾರೆ.

 

ವಿಕಿಪೀಡಿಯದ ಹುಟ್ಟು

ವಿಕಿಪೀಡಿಯವನ್ನು ಅಮೆರಿಕದಲ್ಲಿರುವ ವಿಕಿಮೀಡಿಯ ಫೌಂಡೇಶನ್ ನಡೆಸುತ್ತಿದೆ. ಇದು ಅಮೇರಿಕ ದೇಶದ ಸ್ಯಾನ್‌ಫ್ರಾನ್ಸಿಸ್ಕೋ ನಗರದಲ್ಲಿ ಆಡಳಿತ ಕಚೇರಿಯನ್ನು ಹೊಂದಿದ್ದು ಒಂದು ಲಾಭರಹಿತ ಹಾಗು ದಾನಶೀಲ ಸಾಮಾಜಿಕ ಸಂಘಟನೆಯಾಗಿದೆ.  ವಿಕಿಪೀಡಿಯದ ಸೇವೆಯು ಉಚಿತವಾಗಿದ್ದು ಅಂತರಜಾಲ ಹೊಂದಿರುವ ಯಾವುದೇ ವ್ಯಕ್ತಿಯೂ ಈ ಸಾಮಾಜಿಕ ಜಾಲತಾಣದಲ್ಲಿ ಕೊಡುಗೆಯನ್ನು ನೀಡಬಹುದು.  ಪ್ರಪಂಚದ ಅತಿ ಪ್ರಸಿದ್ಧ ಜಾಲತಾಣಗಳ ಸಾಲಿನಲ್ಲಿ ವಿಕಿಪೀಡಿಯವು ಐದನೇ ಸ್ಥಾನವನ್ನು ಪಡೆದಿದೆ.

ನ್ಯುಪೀಡಿಯ (http://www.new-pedia.com/) ಎಂಬ ಇನ್ನೊಂದು ವಿಶ್ವಕೋಶ ಯೋಜನೆಯಿಂದ ವಿಕಿಪೀಡಿಯ ವಿಶ್ವಕೋಶವು ಮೂಡಿ ಬಂದಿದೆ.  ಜನವರಿ ೧೫, ೨೦೦೧ರಲ್ಲಿ ಜಿಮ್ಮಿ ವೇಲ್ಸ್ (Jimmy Wales)  ಮತ್ತು ಲ್ಯಾರಿ ಸ್ಯಾಂಗರ್ (Larry Sanger)  ಎಂಬರು ವಿಕಿಪೀಡಿಯವನ್ನು ಪ್ರಾರಂಭಿಸಿದರು.  ಜಿಮ್ಮಿ ವೇಲ್ಸ್ ಅವರು ವಿಕಿಪೀಡಿಯದ ಸಂಸ್ಥಾಪಕರಾಗಿದ್ದು, ಹಂಟಿಸ್‌ವಿಲ್ಲೆ ಅಲಬಾಮಾ (Huntsville, Alabama) ಎಂಬ ನಗರದವರು. ಲ್ಯಾರಿ ಸ್ಯಾಂಗರ್ ಅವರು ಅಮೇರಿಕದಲ್ಲಿ ಅಂತರಜಾಲ ಯೋಜನೆಯನ್ನು ಅಭಿವೃದ್ಧಿ ಪಡಿಸುವ ವಿಕಿಪೀಡಿಯದ ಸಹ ಸಂಸ್ಥಾಪಕ.

ವಿಕಿಪೀಡಿಯದ ಬೆಳವಣಿಗೆ

ಕ್ರಿ.ಶ. ೨೦೦೧ರಲ್ಲಿ ಹುಟ್ಟಿಕೊಂಡ ಈ ವಿಶ್ವಕೋಶವು ಅತ್ಯಂತ ಶೀಘ್ರವಾಗಿ ಬೆಳವಣಿಗೆ ಹೊಂದಿ ಇಂದು ಅತ್ಯಂತ ಬೃಹತ್ತಾದ ಮತ್ತು ಅಸಂಖ್ಯಾತ ಆಕರಗಳನ್ನು ಹೊಂದಿರುವ ಅಂತರಜಾಲ ತಾಣವಾಗಿ ಅಭಿವೃದ್ಧಿ ಹೊಂದಿದೆ.    ವಿಕಿಪೀಡಿಯದಲ್ಲಿ ಪ್ರಪಂಚದ ೨೯೬ ಭಾಷೆಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ.  ಇನ್ನೂ ೨೮೫ ಭಾಷೆಗಳಲ್ಲಿ ವಿಕಿಪೀಡಿಯವು ಲೈವ್ ಆಗಲು ಕಾಯುತ್ತಿವೆ.    ಜಗತ್ತಿನ ಎಲ್ಲಾ ಭಾಷೆಯ ವಿಕಿಪೀಡಿಯಗಳು ಇಂಗ್ಲಿಷ್ ಭಾಷೆಯನ್ನು ಅವಲಂಬಿಸಿ ಬೆಳೆಯುತ್ತಿವೆ.  ಈ ತಾಣವನ್ನು ಪ್ರತಿ ತಿಂಗಳು ಸುಮಾರು ೪೦೦ ದಶಲಕ್ಷ ಮಂದಿ ಸಂದರ್ಶಿಸುತ್ತಾರೆಂದು ಹೇಳಲಾಗಿದೆ.  ಪ್ರಪಂಚದ ಎಲ್ಲಾ ಭಾಷಾಕ್ಷೇತ್ರಗಳಲ್ಲಿ ಸುಮಾರು ೮೨ ಸಾವಿರ ಮಂದಿ ೧೭ ದಶಲಕ್ಷ ಲೇಖನಗಳನ್ನು ಈ ಸಾಮಾಜಿಕ ಜಾಲತಾಣಕ್ಕೆ ಕಳುಹಿಸುತ್ತಾರೆ. ಈಗ ಭಾರತದಲ್ಲಿ ೨೩ ಭಾಷೆಗಳಲ್ಲಿ ವಿಕಿಪೀಡಿಯ ಕೆಲಸ ನಡೆಯುತ್ತಿದೆ.  ಇತ್ತೀಚೆಗೆ ಆಗಸ್ಟ್ ೫, ೨೦೧೬ರಂದು ತುಳು ವಿಕಿಪೀಡಿಯ (tcy.wikipedia.org) ಜೀವಂತಗೊಂಡಿದೆ.

ವಿಕಿಪೀಡಿಯವನ್ನು ಉಪಯೋಗಿಸುವವರು ಯಾರು?

ವಿಕಿಪೀಡಿಯವನ್ನು ಉಪಯೋಗಿಸುವವರನ್ನು ಎರಡು ವರ್ಗವಾಗಿ ವಿಂಗಡಿಸಿಕೊಳ್ಳಬಹುದು.

ವಿಕಿಪೀಡಿಯವನ್ನು ನೋಡುವವರು ಮತ್ತು ಓದುವವರು

ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ವಿಕಿಪೀಡಿಯವನ್ನು ನೋಡುತ್ತಾರೆ.  ಓದುತ್ತಾರೆ.  ಈಗಿನ ಶಿಕ್ಷಣಕ್ರಮದಲ್ಲಿ ಪ್ರಬಂಧ ರಚಿಸುವುದು ಅಂಕ ಪಡೆಯುವ ಚಟುವಟಿಯಾಗಿದ್ದು, ವಿದ್ಯಾರ್ಥಿಗಳು ತರಗತಿ ಪ್ರಬಂಧ (ಅಸೈನ್‌ಮೆಂಟ್) ತಯಾರಿಗಾಗಿ ವಿಕಿಪೀಡಿಯವನ್ನು ಅವಲಂಭಿಸುತ್ತಾರೆ.  ಬರೆದಂತಹ ಪ್ರಬಂಧಗಳಿಗೆ ವಿಕಿಪೀಡಿಯವನ್ನೇ ಉಲ್ಲೇಖವಾಗಿ ನೀಡುತ್ತಾರೆ.

ಯಾವುದೇ ತಾಣದಲ್ಲೂ ವಿಕಿಪೀಡಿಯ ಜಾಲವು ಮೊದಲಿಗೆ ಕಾಣಿಸಿಕೊಳ್ಳುತ್ತದೆ.  ಬೇರೆ ಜಾಲತಾಣಗಳ ಜೊತೆಗೆ ವಿಕಿಪೀಡಿಯವನ್ನು ನೋಡುವವರು ಬಹಳಷ್ಟು ಮಂದಿ ಇದ್ದಾರೆ.  ಇವರು ಮಾಹಿತಿಗಾಗಿ ಅಂತರಜಾಲವನ್ನು ನೋಡುತ್ತಾರೆ.

ಐಎಎಸ್, ಕೆಎಎಸ್ ಇತ್ಯಾದಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೂ ವಿಕಿಪೀಡಿಯವನ್ನು ವೀಕ್ಷಿಸುತ್ತಾರೆ.

.       ವಿಕಿಪೀಡಿಯವನ್ನು ಸಂಪಾದಿಸುವವರು.

ಅಕ್ಷರಜ್ಞಾನವಿರುವ ಯಾರೂ ವಿಕಿಪೀಡಿಯವನ್ನು ಸಂಪಾದಿಸಬಹುದು.  ಶಾಲಾ-ಕಾಲೇಜುಗಳಲ್ಲಿ ಓದುವವರು, ಅಧ್ಯಾಪಕರು, ಉದ್ಯೋಗದಲ್ಲಿರುವವರು, ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಚರಿತ್ರೆ ಇತ್ಯಾದಿ ವಿಷಯಗಳಲ್ಲಿ ಪರಿಣತರು ಮತ್ತು ದೈನಂದಿನ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿರುವವರು ವಿಕಿಪೀಡಿಯವನ್ನು ಸಂಪಾದಿಸುವರು.

 

ವಿಕಿಪೀಡಿಯದ ವೈಶಿಷ್ಟ್ಯವೇನು?

ವಿಕಿಪೀಡಿಯವು ಮುಕ್ತ ವಿಶ್ವಕೋಶವಾಗಿದ್ದು, ಇಂಟರ್‌ನೆಟ್ ಸಂಪರ್ಕ ಹೊಂದಿರುವ ಯಾರು ಬೇಕಾದರೂ ವಿಶ್ವದ ಯಾವುದೇ ಮೂಲೆಯಿಂದ ಯಾವುದೇ ಭಾಷೆಯ ವಿಕಿಪೀಡಿಯದಲ್ಲಿ ಯಾವುದೇ ವಿಷಯದ ಲೇಖನಗಳ ಸಂಪಾದನೆಗೆ ತೊಡಗಿಸಿಕೊಳ್ಳಲು ಇಲ್ಲಿ ಅವಕಾಶವಿದೆ.  ಸಂಪಾದಕರು ಲೇಖನಗಳನ್ನು ಸಂಪಾದಿಸಬಹುದು, ಪರಿಷ್ಕರಿಸಬಹುದು ಹಾಗೂ ಹೊಸ ಮಾಹಿತಿ ಲೇಖನಗಳನ್ನು ಸೇರಿಸಬಹುದು. ಹೀಗೆ ಸಂಪಾದಿಸುವುದರಿಂದ ಇಂದು ಜಗತ್ತಿನ ಹಲವು ವಿಷಯಗಳ ಮಾಹಿತಿಯ ಲೇಖನಗಳು ಅಂತರಜಾಲದಲ್ಲಿ ಲಭ್ಯವಾಗುತ್ತಿವೆ.  ವಿಕಿಪೀಡಿಯದಲ್ಲಿ ಲೇಖನ ಬರೆಯುವವರು ಈ ಕೆಳಗಿನ ಅಂಶಗಳನ್ನು ಗಮನದಲ್ಲಿರಿಸಬೇಕು.

ಲಾಗಿನ್ ಆಗುವುದು : ಲಾಗಿನ್ ಆಗಿ ಮಾಹಿತಿ ಭರಿತ ವಿಶ್ವಕೋಶ ಮಾದರಿಯ ಲೇಖನಗಳನ್ನು ವಿಕಿಪೀಡಿಯದಲ್ಲಿ ಬರೆಯುವುದು ಉಪಯುಕ್ತ.  ಆದರೆ ನೆನಪಿಡಿ ವಿಕಿಪೀಡಿಯ ಒಂದು ವಿಶ್ವಕೋಶವಾದುದರಿಂದ ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಗಿರಬೇಕು.

ಚಿತ್ರ ಸೇರಿಸುವುದು : ಪ್ರತಿಯೊಂದು ಲೇಖನಕ್ಕೂ ಕನಿಷ್ಟಪಕ್ಷ ಒಂದು ಚಿತ್ರವನ್ನು ನೀಡಬೇಕು.  ಈ ಸ್ವಂತ ತೆಗೆದ ಚಿತ್ರವನ್ನು ವಿಕಿಮಿಡಿಯ ಕಾಮನ್ಸ್ (https://commons.wikimedia.org) ಮೂಲಕ ಸೇರಿಸಬೇಕು.  ಗೂಗಲ್‌ನಿಂದ ಅಥವಾ ಇತರ ಜಾಲತಾಣಗಳಿಂದ ಚಿತ್ರಗಳನ್ನು ಪಡೆದು ಅವನ್ನು ಸೇರಿಸುವಂತಿಲ್ಲ.

 

3)      ಆಂತರಿಕ ಕೊಂಡಿ ನೀಡುವುದು : ವಿಕಿಪೀಡಿಯದಲ್ಲಿನ ಲೇಖನಗಳು ಒಂದಕ್ಕೊಂದು ಕೊಂಡಿ (Hyperlink) ಯಾಗಿದ್ದು, ಅವು ಪರಸ್ಪರ ಉಲ್ಲೇಖಗಳೊಂದಿಗೆ ಪ್ರತಿಯೊಂದು ಲೇಖನವು ಕಡಿಮೆ ಪಕ್ಷ ೫ ಕೊಂಡಿಯನ್ನು ಹೊಂದಿರುತ್ತವೆ.  ಈ ಕೊಂಡಿ ಪದವನ್ನು ಒತ್ತಿದಾಗ ಪ್ರತ್ಯೇಕ ಪುಟವನ್ನು ತೆರೆದುಕೊಳ್ಳುತ್ತದೆ.

 

4)      ಬಾಹ್ಯ ಕೊಂಡಿ ನೀಡುವುದು : ಪ್ರತಿಯೊಂದು ಲೇಖನದ ಅಂತ್ಯದಲ್ಲೂ ಹಲವಾರು ಬಾಹ್ಯ ಕೊಂಡಿಗಳಿರುತ್ತವೆ.  ಅವುಗಳು ಇತರ ಕುತೂಹಲಕಾರಿ ಲೇಖನಗಳು ಅಥವಾ ಸೂಕ್ತ ಬಾಹ್ಯ ಜಾಲತಾಣಗಳು, ಪುಟಗಳೂ, ಆಕರ ವಿಷಯಗಳು ಅಥವಾ ನಿರ್ದಿಷ್ಟ ಜ್ಞಾನಕ್ಷೇತ್ರದ ವ್ಯವಸ್ಥಿತ ವಿಭಾಗಗಳ ಬಗ್ಗೆ ಮಾಹಿತಿಯನ್ನು ನೀಡಬಲ್ಲವು.  ಯಾವುದಾದರೂ ಕೆಲವು ನಿರ್ದಿಷ್ಟ ಬೆಸುಗೆಗಳು ಅಲಭ್ಯವಾಗಿದ್ದಲ್ಲಿ ಅವುಗಳನ್ನು ಸೇರಿಸಲು ಸಹ ಬಾಹ್ಯ ಬೆಸುಗೆಯಲ್ಲಿ ಅವಕಾಶವಿದೆ.

5)      ಉಲ್ಲೇಖ ನೀಡುವುದು : ಪ್ರತಿಯೊಂದು ಲೇಖನಕ್ಕೂ ಉಲ್ಲೇಖವನ್ನು (Reference) ಸೂಚಿಸುವ ಇಂಟರ್‌ನೆಟ್‌ನ ಅತಿ ದೊಡ್ಡ ಮತ್ತು ಪ್ರಸಿದ್ದ ಜಾಲತಾಣ ವಿಕಿಪೀಡಿಯ.  ಒಂದು ಲೇಖನದಲ್ಲಿ ಬರೆದಿರುವ ಮಾಹಿತಿಗೆ ಉಲ್ಲೇಖಗಳನ್ನು ಕೊಡುವುದು ಕಡ್ಡಾಯವಾಗಿತ್ತದೆ.

6)      ಇತಿಹಾಸ ಪುಟ : ವಿಕಿಪೀಡಿಯದಲ್ಲಿ ಬರೆದ ಯಾವುದೇ ಲೇಖನದ ಲೇಖಕರ ಹೆಸರು ಇತಿಹಾಸ ಪುಟದಲ್ಲಿ ದಾಖಲಾಗಿರುತ್ತದೆ.  ಇದರಿಂದ ಯಾವುದೇ ಲೇಖನದ ಹಿಂದಿನ ಮತ್ತು ನಂತರದ ಆವೃತ್ತಿಯ ಬದಲಾವಣೆಗಳನ್ನು ನೋಡಬಹುದು.  ಹಾಗೂ ಅವಶ್ಯವಿಲ್ಲದ ಬದಲಾವಣೆಗಳನ್ನು ತೆಗೆದುಹಾಕಬಹುದು.

7)      ಚರ್ಚಾಪುಟ : ವಿಕಿಪೀಡಿಯದಲ್ಲಿ ಹಲವು ಸಂಪಾದಕರ ಕೆಲಸಗಳನ್ನು ಸರಿಯಾಗಿ ರಚಿಸಲು ಸಹಕಾರಿಯಾಗಿ ‘ಚರ್ಚೆ’ ಪುಟಗಳಿವೆ.  ಇದೊಂದು ವಿಕಿಪೀಡಿಯ ಸಂವಾದ ವ್ಯವಸ್ಥೆಯಾಗಿದ್ದು, ಲೇಖನದ ಬಗೆಗೆ ಭಿನ್ನಾಭಿಪ್ರಾಯಗಳಿದ್ದರೆ ಚರ್ಚಾ ಪುಟದಲ್ಲಿ ಸಂಪಾದಕರು ಅಭಿಪ್ರಾಯ ತಿಳಿಸಬಹುದು.

8)      ಸದಸ್ಯರ ಪುಟ : ವಿಕಿಪೀಡಿಯಕ್ಕೆ ಲಾಗಿನ್ ಆದ ಕೂಡಲೇ ಪುಟದ ಮೇಲ್ಭಾಗದಲ್ಲಿ ನಿಮ್ಮ ಹೆಸರು ಕಾಣಿಸಿಕೊಳ್ಳುತ್ತದೆ.  ಆ ಹೆಸರನ್ನು ಒತ್ತಿದ್ದಾಗ ಒಂದು ಹೊಸ ಪುಟ ತೆರೆದುಕೊಳ್ಳುತ್ತದೆ.  ಅಲ್ಲಿ ನಿಮ್ಮನ್ನು ನೀವೇ ಪರಿಚಯಿಸಿಕೊಳ್ಳಿ.  ಸಾಧ್ಯವಾದರೆ ನಿಮ್ಮ ವೈಯಕ್ತಿಕ ಮಾಹಿತಿ (ರೆಸ್ಯೂಮ್) ತಯಾರಿಸಬಹುದು.  ಫೋಟೋ ಹಾಕಬಹುದು.

9)      ಲೇಖನಗಳ ವರ್ಗೀಕರಣ : ವಿಕಿಪೀಡಿಯ ಲೇಖನ ಬರೆದಾದ ನಂತರ ವರ್ಗೀಕರಿಸಿಕೊಳ್ಳಬೇಕು.  ಒಂದೇ ಮಾಹಿತಿಯ ಹಲವು ಲೇಖನಗಳನ್ನು ಗುರುತಿಸಿಕೊಳ್ಳಲು ಸಾಧ್ಯವಾಗದಿದ್ದರೂ ವರ್ಗೀಕರಣದಲ್ಲಿ ಅವುಗಳ ಪತ್ತೆಯಾಗುತ್ತದೆ.  ಉದಾ: ಕುವೆಂಪು, ದ.ರಾ. ಬೇಂದ್ರೆ, ಶಿವರಾಮ ಕಾರಂತ, ಇತ್ಯಾದಿ ಲೇಖನಗಳಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡ ಲೇಖಕರು ಎಂಬುದಾಗಿ ವರ್ಗೀಕರಣ ಮಾಡುವುದು.

10)     ಸ್ವಪರಿಚಯ : ವ್ಯಕ್ತಿಪರಿಚಯಿಸುವಾಗ ಸಾಧಕರನ್ನು ಮಾಹಿತಿ ಲೇಖನವಾಗಿ ಬರೆಯಬೇಕು.  ಉದಾ: ಕವಿಪರಿಚಯ ಮಾಡುವಾಗ ಅನುಸರಿಸುವ ಕ್ರಮವನ್ನು ಇಲ್ಲೂ ಮಾಡಬಹುದು.  ಕವಿ-ಕವಿಕಾಲ,ದೇಶ-ಆಸಕ್ತಿಯ ಕ್ಷೇತ್ರ-ಸಾಧನೆಗಳು-ಪ್ರಶಸ್ತಿಗಳು-ಉಲ್ಲೇಖಗಳು ಇತ್ಯಾದಿ ಅಂಶಗಳು ಇರಬೇಕು.  ಹಾಗಾಗಿ ಲೇಖಕರು ತಮ್ಮನ್ನು ತಾವೇ ಲೇಖನವಾಗಿ ಬರೆಯುವಂತಿಲ್ಲ.  ತಮ್ಮ ಪರಿಚಯವನ್ನು ತಾವೇ ಸದಸ್ಯರ ಪುಟದಲ್ಲಿ ಮಾತ್ರ ನೀಡಬಹುದು.

11)     ಗಮನಾರ್ಹತೆ ಅಂಶ : ವಿಕಿಪೀಡಿಯ ಲೇಖನಗಳು ಗಮನಾರ್ಹ ವಿಷಯಗಳ ಬಗ್ಗೆ ಇರಬೇಕು.  ಅಂದರೆ ವಿಷಯಗಳು ವಿಶ್ವದ ಗಮನ ಸೆಳೆಯುವಂತಿರಬೇಕು.  ಗಮನಾರ್ಹ ಪ್ರಸಾರವ್ಯಾಪ್ತಿ ಇರಬೇಕು.

12)     ನಿಷ್ಪಕ್ಷಪಾತ ದೃಷ್ಟಿಕೋ : ಲೇಖನಗಳು ಯಾವುದೇ ಪಕ್ಷ, ಸಿದ್ಧಾಂತವನ್ನು ಬೆಂಬಲಿಸಬಾರದು.  ಆದರೆ ಎರಡು ಪಕ್ಷಗಳ ವಾದವನ್ನೂ ವಿವರಿಸಬೇಕು.  ವೈಯಕ್ತಿಕ ಅಭಿಪ್ರಾಯಗಳಿರಬಾರದು.  ತಟಸ್ಥ ಭಾಷೆ ಬಳಸಬೇಕು.

13)     ಕೃತಿಚೌರ್ಯ : ಬೇರೆಯವರ ಕೆಲಸವನ್ನು ತನ್ನದೆಂದು ಹಕ್ಕು ಸಾಧಿಸಲು ವಿಕಿಪೀಡಿಯನ್ನರು ಬಯಸುವುದಿಲ್ಲ.  ಎಲ್ಲಿ ಸಾಧ್ಯವೋ ಅಲ್ಲಿ ಮೂಲಕ್ಕೆ ಮನ್ನಣೆ ಕೊಡಬೇಕು.  ಮೂಲಕ್ಕೆ ಸಂಬಂಧಿಸಿದ ಉಲ್ಲೇಖವನ್ನು ನೀಡಬೇಕು.  ಉದಾ: ಪತ್ರಿಕೆಗಳು, ನಿಯತಕಾಲಿಕೆಗಳು, ಪುಸ್ತಕಗಳು, ಅಂತರಜಾಲ ಪುಟಗಳು, ಶೈಕ್ಷಣಿಕ ಪ್ರಕಟಣೆಗಳು ಇತ್ಯಾದಿ. ಕೃತಿಚೌರ್ಯದಿಂದ ಮೂಲ ಬರಹಗಾರನಿಗೆ ಮೋಸಮಾಡಿದಂತಾಗುತ್ತದೆ.  ಕಾನೂನು ರೀತ್ಯಾ ಅಪರಾಧವೂ ಆಗುತ್ತದೆ.

14)     ವಿಕಿಪೀಡಿಯದಲ್ಲಿ ಏನು ಬೇಕು? ಏನು ಬೇಡ?  :

ಬೇಕು – ವಿಶ್ವಕೋಶದ ಶೈಲಿಯ ಲೇಖನಗಳು ಬೇಕು. ಲೇಖನದ ವಿಷಯ ಪ್ರಪಂಚಕ್ಕೆಲ್ಲ ಉಪಯುಕ್ತವಾಗುವಂತಿರಬೇಕು. ವಿಜ್ಞಾನ, ತಂತ್ರಜ್ಞಾನ, ಮಾಹಿತಿ ಸಾಹಿತ್ಯ ಇತ್ಯಾದಿ ಅಗತ್ಯವಾಗಿ ಇರಬೇಕು.

ಬೇಡ – ಯಾವುದೇ ಬ್ಲಾಗ್ ಮಾದರಿಯ ಪ್ರಬಂಧಗಳು, ಲೇಖನಗಳು, ವಿಮರ್ಶಾ ಬರಹಗಳು, ವೈಯಕ್ತಿಕ ಅಭಿಪ್ರಾಯಗಳು, ಜಾಹೀರಾತು ಮಾದರಿ ಲೇಖನಗಳು, ಕಥೆ, ಕವನ, ಕಾದಂಬರಿ, ಮಹಾಕಾವ್ಯ, ಜನಪದ ಕತೆ, ಗಾದೆ, ಒಗಟು, ಲಾವಣಿ, ಪಾಡ್ದನ, ಹೊಗಳಿಕೆ-ತೆಗಳಿಕೆ ಭಾಷೆ, ನಿಮ್ಮ ಬಗ್ಗೆ ಬರೆಯುವುದು, ಲೇಖನದಲ್ಲಿ ನಿಮ್ಮ ಹೆಸರು ಬರೆಯುವುದು ಮುಂತಾದವನ್ನು ವಿಕಿಪೀಡಿಯದಲ್ಲಿ ಸೇರಿಸುವಂತಿಲ್ಲ.

15)     ಉಪಯುಕ್ತತೆ : ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗೆಗೆ ಮಾತ್ರ ಇರಲಿ.  ಅದರಲ್ಲೂ ವಿಜ್ಞಾನ, ತಂತ್ರಜ್ಞಾನ, ಭಾಷೆ, ಸಾಹಿತ್ಯ, ಚರಿತ್ರೆ ವಿಷಯಗಳ ಲೇಖನಗಳನ್ನು ಅತೀಅಗತ್ಯವಾಗಿ ಸೇರಿಸುವ ಕೆಲಸ ಆಗಬೇಕಿದೆ.  ಹೀಗೆ ಸೇರಿಸುವಾಗ ಇದೇ ವಿಷಯದಲ್ಲಿ ಬೇರೆ ಶೀರ್ಷಿಕೆಯಲ್ಲಿ ಲೇಖನಗಳಿವೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಿ.

ವಿಕಿಪೀಡಿಯ ಮಾಹಿತಿಗಳು ವಿಶ್ವಾಸಾರ್ಹವೇ?

ವಿಕಿಪೀಡಿಯದಲ್ಲಿನ ದಾಖಲೆಗಳು ಮತ್ತು ಮಾಹಿತಿಗಳು ಅವು ಸ್ವಯಂ ಪರಿಪೂರ್ಣವೆಂದು ಭಾವಿಸಬಾರದು.  ಅವುಗಳನ್ನು ನಿರಂತರವಾಗಿ ಪರಿಷ್ಕರಣೆ ಹಾಗೂ ಸುಧಾರಣೆಗೆ ಒಳಪಡಿಸಲಾಗುತ್ತಿರುತ್ತದೆ.  ಇದರಿಂದ ಕ್ರಮೇಣ ಅವುಗಳ ದರ್ಜೆ ಮತ್ತೆ ಗುಣಮಟ್ಟಗಳ ಮೌಲ್ಯವರ್ಧನೆಗೆ ಸಹಾಯವಾಗುತ್ತದೆ.  ವಿಕಿಪೀಡಿಯದ ಎಲ್ಲ ಮಾಹಿತಿಗಳೂ ಲೇಖನ ತಯಾರಿಯ ಪ್ರಾರಂಭದಲ್ಲಿಯೇ ಗುಣಮಟ್ಟದ ಮಾಹಿತಿಯೆಂದು ಬಳಕೆದಾರರು ಭಾವಿಸಬಾರದು.  ಕೆಲವು ಲೇಕನಗಳಲ್ಲಿ ಬರೆದ ವಾಕ್ಯಗಳು ಚರ್ಚಾಸ್ಪದ ವಿಷಯಗಳಾಗಿರುವ ಸಾಧ್ಯತೆಗಳಿವೆ.  ಕೆಲವು ವಾಕ್ಯಗಳು ಒಂದು ದೃಷ್ಟಿಕೋನವನ್ನು ಮಾತ್ರ ಪ್ರತಿನಿಧಿಸಬಹುದು.   ವಾದ ವಿವಾದಗಳು ಮತ್ತು ಚರ್ಚೆಗಳಿಂದ ಕೂಡಿದ ಸುದೀರ್ಘ ವೈಚಾರಿಕ ಪ್ರಕ್ರಿಯೆಯ ನಂತರವೇ ಒಂದು ಒಮ್ಮತದ ಮತ್ತು ಅಲಿಪ್ತ ದೃಷ್ಟಿಕೋನವನ್ನು ನಿರ್ಧರಿಸಲಾಗುವುದು.  ಅಲ್ಲದೆ ತಜ್ಞ ಪರಿಷ್ಕರಣಕಾರರು ಯಾವುದೇ ಒಂದು ಲೇಖನದ ವಿಷಯ ಅಥವಾ ವಿಧಾನಗಳ ಬಗೆಗೆ ಅಭಿಪ್ರಾಯ ಭೇದವನ್ನು ತೋರಿದರೆ ಅಂತಹ ಸಂದರ್ಭಗಳಲ್ಲಿ ಅವರು ಸೂಕ್ತ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಅವರಿಗೆ ನೆರವಾಗಲು ವಿಕಿಪೀಡಿಯ ಹಲವಾರು ಆಂತರಿಕ ವಿವಾದ ನಿವಾರಣಾ ಪ್ರಕ್ರಿಯೆಗಳನ್ನು ವ್ಯವಸ್ಥೆಗೊಳಿಸಿದೆ. ವಿಕಿಪೀಡಿಯಕ್ಕೆ ತಕ್ಕುದಲ್ಲದ ಲೇಖನಗಳನ್ನು ನಿರ್ವಾಹಕರು ಅಳಿಸುವ ಹಾಕುವ ಪ್ರಕ್ರಿಯೆಯೂ ವಿಕಿಪೀಡಿಯದಲ್ಲಿದೆ.

 

ವಿಕಿಪೀಡಿಯ ಮಾಹಿತಿಗಳನ್ನು ಸಂಶೋಧನ ಆಕರಗಳನ್ನಾಗಿ ಬಳಸಬಹುದೇ?

ವಿಕಿಪೀಡಿಯದಲ್ಲಿನ ಲೇಖನಗಳೂ ಕೆಲವು ಆದರ್ಶ ಲಕ್ಷಣಗಳನ್ನು ಹೊಂದಿರುತ್ತವೆ.  ಅವು ಉತ್ತಮ ಶಬ್ದ ಸಂಪತ್ತಿನಿಂದ ಕೂಡಿದ್ದು ಸಮತೋಲಿತ, ತಟಸ್ಥ ಹಾಗೂ ಮಾಹಿತಿಕೋಶ ದರ್ಜೆಯ ಮಾಹಿತಿಯನ್ನು ಹೊಂದರುತ್ತವೆ.  ಅಲ್ಲದೆ ಅವು ವ್ಯಾಪಕ ಪುರಾವೆಗಳನ್ನು ಒದಗಿಸಲು ಸಮರ್ಥವಾದ ದಾಖಲೆಗಳಾಗಿರುತ್ತವೆ.

ವಿಕಿಪೀಡಿಯದಲ್ಲಿ ಕಂಡು ಬರುವ ಮಾಹಿತಿಗಳನ್ನು ಸಂಶೋಧನ ಆಕರಗಳನ್ನಾಗಿ ಬಳಸಬೇಕಾದಲ್ಲಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾದುದು ಅವಶ್ಯಕ.  ಏಕೆಂದರೆ ಇಲ್ಲಿನ ಹಲವಾರು ಲೇಖನಗಳ ಮಾಹಿತಿಗಳು ಸ್ವಾಭಾವಿಕವಾಗಿ ತಮ್ಮ ಪ್ರಬುದ್ಧತೆ ಮತ್ತು ಬೌದ್ಧಿಕ ದರ್ಜೆಗಳಲ್ಲಿ ಗಣನೀಯ ಪ್ರಮಾಣದ ಏರುಪೇರುಗಳನ್ನು ತೋರಿಸಬಹುದು.  ಸಂಶೋಧಕರು ಈ ಬಗ್ಗೆ ಜಾಗೃತರಾಗುವಂತೆ ನೆರವಾಗಲು ಹಲವಾರು ಮಾರ್ಗಸೂಚಿಗಳು ಮತ್ತು ಸೂಚನಾ ಪುಟಗಳನ್ನು ವ್ಯವಸ್ಥೆಗೊಳಿಸಲಾಗಿದೆ.

ವಿಕಿಪೀಡಿಯದಲ್ಲಿನ ಮಾಹಿತಿಗಳನ್ನು ಯಾರು ಬೇಕಾದರೂ ಪರಿಷ್ಕರಿಸಲು ಸಾಧ್ಯವಿರುವುದರಿಂದ ಕೆಲವು ತಪ್ಪು ಮಾಹಿತಿಗಳು ಸೇರ್ಪಡೆ ಆಗುವ ಹಾಗೂ ಆಗಿರುವ ಸಾಧ್ಯತೆಗಳೂ ಉಂಟು.  ಹಾಗಾಗಿ ಅಂತಹ ಮಾಹಿತಿಗಳನ್ನು ತೆಗೆದುಕೊಳ್ಳುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ.

ಆಗಾಗ ತಲೆದೋರಬಹುದಾದ ದುರ್ಬಳಕೆ ಅಥವಾ ವಿವಾದಗಳನ್ನು ಪರಿಹರಿಸಲು ವಿಕಿಪೀಡಿಯ ಸಮೃದ್ಧವಾದ ವಿಧಾನಗಳನ್ನು ಹೊಂದಿದೆ.  ಆ ವಿಧಾನಗಳನ್ನು ತೀವ್ರ ಪರೀಕ್ಷೆಗಳಿಗೆ ಒಳಪಡಿಸಲಾಗಿದ್ದು, ಅವುಗಳ ವಿಶ್ವಾಸಾರ್ಹತೆ ಅತಿ ಉನ್ನತಮಟ್ಟದ್ದಾಗಿದೆ.

ವಿಕಿಪೀಡಿಯಕ್ಕೆ ಸಮಗ್ರ ಮಾಹಿತಿ ಬಂದರೆ ಭಾಷೆ, ಜನಪದ ಸಂಸ್ಕೃತಿ, ಚರಿತ್ರೆ ಇತ್ಯಾದಿ ಕ್ಷೇತ್ರಗಳಲ್ಲಿ ಸಂಶೋಧನೆ ಮಾಡುವವರಿಗೆ ಹೆಚ್ಚು ಪ್ರಯೋಜನವಾಗಬಹುದು.

ಕನ್ನಡ ವಿಕಿಪೀಡಿಯ ಅಗತ್ಯವೇ?

ಕನ್ನಡ ವಿಕಿಪೀಡಿಯವು ಜೂನ್ ೨೦೦೩ರಂದು ಪ್ರಾರಂಭವಾಯಿತು.  ಭಾರತದ ೨೩ ಭಾಷೆಗಳಲ್ಲಿ ವಿಕಿಪೀಡಿಯವು ಕಾರ್ಯನಿರ್ವಹಿಸುತ್ತಿದ್ದು ಅವುಗಳಲ್ಲಿ ಕನ್ನಡವೂ ಪ್ರಮುಖ ಭಾಷೆಯಾಗಿ ಗುರುತಿಸಿಕೊಂಡಿದೆ.  ಕನ್ನಡ ಭಾಷೆ ಉಳಿದು ಬೆಳೆಯಬೇಕಾದರೆ ಕನ್ನಡದಲ್ಲಿ ಜನರಿಗೆ ಅಗತ್ಯವಾದ ಪ್ರಪಂಚಜ್ಞಾನದ ಮಾಹಿತಿ ಲಭ್ಯವಿರಬೇಕು.  ಕನ್ನಡ ಭಾಷೆಯಲ್ಲಿ ಪ್ರಪಂಚಜ್ಞಾನವನ್ನು ಸುಲಭವಾಗಿ ತರಲು ಸಹಾಯ ಮಾಡುವುದು ಸ್ವತಂತ್ರ ವಿಶ್ವಕೋಶ ಕನ್ನಡ ವಿಕಿಪೀಡಿಯ.  ಕನ್ನಡ ವಿಕಿಪೀಡಿಯದಲ್ಲಿ ಬರೆಯುವುದಕ್ಕೆ ನೀವು ತಜ್ಞರಾಗಿರಬೇಕೆಂಬ ಕಟ್ಟಳೆಯಿಲ್ಲ.  ವಾಸ್ತವವಾಗಿ ವಿಕಿಪೀಡಿಯದ ಯಾವುದೇ ಬರಹ ಒಬ್ಬನೇ ಲೇಖಕ ಬರೆದುದಲ್ಲ.  ಬೇರೆ ಬೇರೆ ದೇಶ-ಭಾಷೆಗಳ ಹಿನ್ನೆಲೆ ತಿಳಿದ ಅನೇಕ ಮಂದಿಯ ಸಹಕಾರದಲ್ಲಿ ಪ್ರತಿಯೊಂದು ಪುಟವೂ ರೂಪುಗೊಳ್ಳುತ್ತದೆ.  ವಿಕಿಪೀಡಿಯ ಒಂದು ಸಹಯೋಗಿ ವಿಶ್ವಕೋಶ.  ನಿಮಗೆ ತಿಳಿದಷ್ಟನ್ನು ನೀವು ಸೇರಿಸಿ.  ನೀವು ಬಿಟ್ಟಿರುವುದನ್ನು ವಿಷಯ ತಿಳಿದ ಬೇರೆ ಯಾರಾದರೂ ಸೇರಿಸುತ್ತಾರೆ.

 

ಕನ್ನಡ ವಿಕಿಪೀಡಿಯ

೨೦೧೭ ಮೇ ತಿಂಗಳಲ್ಲಿ ಕನ್ನಡದ ವಿಕಿಪೀಡಿಯದಲ್ಲಿ ೨೧,೯೫೭ ಲೇಖನಗಳು ಇವೆ. ೯೬ ಮಂದಿ ಸಂಪಾದಕರು ಕನ್ನಡ ವಿಕಿಪೀಡಿಯದಲ್ಲಿ ಸಕ್ರಿಯವಾಗಿ ಸಂಪಾದಿಸುತ್ತಿದ್ದಾರೆ.  ಕನ್ನಡ ವಿಕಿಪೀಡಿಯಕ್ಕೆ ಈ ವರೆಗೆ ಲಾಗಿನ್ ಆದವರು ೩೭,೫೯೬.  ತಿಂಗಳಿಗೆ ಸುಮಾರು ೪,೬೧೨ರಷ್ಟು ಸಂಪಾದನೆಗಳು ಆಗುತ್ತಿವೆ.  ಸುಮಾರು ೧೧ ಲಕ್ಷ ಮಂದಿ ಪ್ರತಿ ತಿಂಗಳಿಗೆ ಕನ್ನಡ ವಿಕಿಪೀಡಿಯವನ್ನು ವೀಕ್ಷಿಸುತ್ತಿದ್ದಾರೆ.

 

ವಿಕಿಪೀಡಿಯಕ್ಕೆ ಲೇಖನವನ್ನು ಬರೆಯುವುದರಿಂದ, ಸಂಪಾದಿಸುವುದರಿಂದ ಏನು ಲಾಭ?

ಭಾಷಾಭಿಮಾನಿಗಳು ಯಾವುದೇ ಲಾಭದ ಆಕಾಂಕ್ಷಿಗಳಾಗಿರಬಾರದು.  ಕನ್ನಡ ವಿಕಿಪೀಡಿಯದಲ್ಲಿ ಬರೆಯುವ ಲೇಖಕರಿಗೆ ಆರ್ಥಿಕ ಲಾಭವೇನೂ ಇಲ್ಲ.  ಲೇಖಕರ ಹೆಸರನ್ನೂ ಲೇಖನದ ಕೆಳಗೆ ಬರೆಯುವ ಪರಿಪಾಠವಿಲ್ಲ.  ವಿಕಿಪೀಡಿಯದಲ್ಲಿ ಬರೆಯುವವರು ನಿಜವಾದ ಸ್ವಾರ್ಥರಹಿತ ಸಮಾಜಸೇವಕರಾಗುತ್ತಾರೆ.  ನಮ್ಮ ಕನ್ನಡ ಭಾಷೆಯ ಉಳಿವಿಗಾಗಿ ವಿಕಿಪೀಡಿಯದಲ್ಲಿ ಲೇಖನ ಬರೆಯುವುದು ಅತೀ ಅಗತ್ಯ.

 

ವಿಕಿಪೀಡಿಯದಲ್ಲಿ ಲೇಖನ ಬರೆಯುವುದರಿಂದ ವಿದ್ಯಾರ್ಥಿಗಳ ಭಾಷಾ ಕೌಶಲ್ಯ, ಬರವಣಿಗೆ ಕ್ರಮ, ಸ್ಥಳೀಯ ಸಂಸ್ಕೃತಿಗಳ ತಿಳುವಳಿಕೆ, ಸಂಶೋಧನ ಪ್ರವೃತ್ತಿ, ಚಿಂತನಕ್ರಮಗಳ ಗುಣಮಟ್ಟವನ್ನು ಹೆಚ್ಚಿಸಬಹುದು.

ನಿಮ್ಮ ಬರವಣಿಗೆಯ ಶೈಲಿಯನ್ನು ಉತ್ತಮ ಪಡಿಸಿಕೊಳ್ಳಬಹುದು, ನಿಮ್ಮ ವಿಮರ್ಶಾತ್ಮಕ ಆಲೋಚನೆಯನ್ನು ತೀಕ್ಷ್ಣಗೊಳಿಸಬಹುದು, ನಿಮ್ಮ ಭಾಷೆ ಹಾಗೂ ಸಂಸ್ಕೃತಿಯನ್ನು ಉಳಿಸಲು, ಸಹಕಾರದೊಂದಿಗೆ ಕೆಲಸ ಮಾಡುವುದನ್ನು ಕಲಿಯಲು, ನಿಮ್ಮ ಬರವಣಿಗೆಯನ್ನು ವಿಶ್ವವ್ಯಾಪಿ ಹಂಚಿ ಓದುಗರನ್ನು ಪಡೆಯಲು, ನಿಮ್ಮ ಸಂಶೋಧನಾ ಕೌಶಲವನ್ನು ಉತ್ತಮಗೊಳಿಸಲು ಮತ್ತು ನಿಮ್ಮ ವೈಯಕ್ತಿಕ ಮಾಹಿತಿ (resume)  ಯನ್ನು ಬರೆದುಕೊಳ್ಳಲು ವಿಕಿಪೀಡಿಯ ಸಹಕಾರಿ.

ವಿದ್ಯಾರ್ಥಿಗಳಲ್ಲಿ ಕನ್ನಡ ಟೈಪಿಂಗ್ ಮತ್ತು ಕಂಪ್ಯೂಟರ್ ತಿಳುವಳಿಕೆಯನ್ನು ಹೆಚ್ಚಿಸಬಹುದು.  ಕನ್ನಡ ನುಡಿ, ಬರಹ, ಲಿಪ್ಯಂತರ ಇತ್ಯಾದಿ ತಂತ್ರಾಂಶಗಳನ್ನು ಬಳಸಿ ಸುಲಭವಾಗಿ ಟೈಪ್ ಮಾಡಲು ಅಭ್ಯಾಸವಾಗುವುದು.

ವಿದ್ಯಾರ್ಥಿಗಳಿಗೆ ಅನ್ಯಭಾಷೆಯಿಂದ ಕನ್ನಡಕ್ಕೆ ಅನುವಾದಿಸುವ ಕಾರ್ಯ ಸುಲಭವಾಗಿ ತಿಳಿಯುವುದು.

ಕನ್ನಡವನ್ನು ಜಾಗತಿಕ ಭಾಷೆಯಾಗಿ ಕೊಂಡೊಯ್ಯುವ ಪ್ರಯತ್ನ ಮಾಡಬಹದು.

ಕನ್ನಡ ಭಾಷೆಯಲ್ಲಿ ಜ್ಞಾನಸಾಹಿತ್ಯ ಸೃಷ್ಟಿಮಾಡುವ ಮೂಲಕ ಕನ್ನಡ ಭಾಷೆ ಬೆಳೆಯಲು ಸಹಾಯವಾಗುವುದು.

ಜ್ಞಾನವನ್ನು ಹೆಚ್ಚಿಸಿಕೊಳ್ಳಲು, ತಮ್ಮ ಭಾಷೆ ಮತ್ತು ಸಂಸ್ಕೃತಿಯನ್ನು ಆಚರಿಸಲು ಮತ್ತು ರಕ್ಷಿಸಲು, ಬರೆಯಲು, ವಿಷಯಾಸಕ್ತಿಗಾಗಿ, ಸಹಕಾರ ಮನೋಭಾವಕ್ಕಾಗಿ (collaborate) ಸಂಪಾದಿಸುತ್ತಾರೆ.

ವಿಕಿಪೀಡಿಯದ ಖಾತೆ ತೆರೆದು ಲೇಖನ ಬರೆಯುವುದು ಹೇಗೆ?

ಕನ್ನಡ ವಿಕಿಪೀಡಿಯ ಸಂಪಾದಕರಾಗುವುದು ತುಂಬ ಸುಲಭ. kn.wikipedia.org ಜಾಲತಾಣವನ್ನು ತೆರೆದು ಹೊಸ  ಖಾತೆ ತೆರೆಯಿರಿ.

 

ಸಹಾಯ ಪುಟಕ್ಕೆ ಭೇಟಿ ನೀಡಿ.  ಅಲಲ್ಲಿ ಕೊಂಡಿ ನೀಡಿರುವ ಟ್ಯುಟೊರಿಯಲ್ ಕಡತ ಮತ್ತು ವೀಡಿಯೋಗಳನ್ನ ವೀಕ್ಷಿಸಿ.  ಪ್ರಯೋಗಪುಟದಲ್ಲಿ ಲೇಖನ ಬರೆಯುವುದನ್ನು ಅಭ್ಯಾಸ ಮಾಡಿ, ಸಹಾಯ ಪುಟವನ್ನು ನೋಡಿ, ಅಲ್ಲಿ ನೀಡಿರುವ ಟ್ಯುಟೋರಿಯಲ್ ವೀಡಿಯೋ ನೋಡಿ, ಈಗಾಗಲೇ ರಚನೆಯಾಗಿರುವ ಲೇಖನಗಳ ವ್ಯಾಕರಣ ತಿದ್ದುಪಡಿ,  ಸಂಪಾದಿಸಿ, ವಿಷಯ ಸೇರ್ಪಡೆ ಮತ್ತು ಶೈಲಿ ಬದಲಾವಣೆ ಮಾಡಲು ಪ್ರಯತ್ನಿಸಿ.  ಬರೆಯಬೇಕೆಂದಿರುವ ಲೇಖನವನ್ನು ಬೇರೆ ಬೇರೆ ವಿಧಾನದಲ್ಲಿ ಹುಡುಕಿ.  ಉದಾ: ಕುವೆಂಪು, ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ, ಕೆ.ವಿ.ಪುಟ್ಟಪ್ಪ ಹೀಗೆ ಒಂದೇ ವಿಷಯಕ್ಕೆ ಸಂಬಂಧಿಸಿದ ಹಲವು ಲೇಖನಗಳು ತಯಾರಾಗದಂತೆ ಜಾಗ್ರತೆವಹಿಸಿ.  ಹೊಸ ಲೇಖನಗಳನ್ನು ಸೃಷ್ಟಿ ಮಾಡಿ.  ಸಾಧ್ಯವಾದರೆ ಫೇಸ್‌ಬುಕ್‌ನಲ್ಲಿ ಕನ್ನಡ ವಿಕಿಪೀಡಿಯ ಗುಂಪಿಗೆ ಸೇರಿಕೊಂಡು ಜಗತ್ತಿನಾದ್ಯಂತ ವಿಕಿಪೀಡಿಯ ಸಮುದಾಯದ ಸದಸ್ಯರೊಂದಿಗೆ ಸಂಪರ್ಕವನ್ನು ಬೆಳೆಸಿಕೊಳ್ಳಿ.  ನೀವು ಬರೆಯುತ್ತಿರುವುದನ್ನು ನಿಮ್ಮ ಬ್ಲಾಗಿನಲ್ಲಿ ಬರೆದು ಸುದ್ದಿ ಮಾಡಿ.

 

ಕಾಲೇಜುಗಳಲ್ಲಿ ‘ವಿಕಿಪೀಡಿಯ ಶೈಕ್ಷಣಿಕ ಯೋಜನೆ’ ಆರಂಭಿಸುವುದು ಹೇಗೆ?

ಪದವಿ ವಿದ್ಯಾರ್ಥಿಗಳು WEP ಎಂಬ ಯೋಜನೆಯನ್ನು ಕಾಲೇಜುಗಳಲ್ಲಿ ಅಳವಡಿಸಿಕೊಳ್ಳಬಹುದು. WEP ಎಂದರೆ ವಿಕಿಪೀಡಿಯ ಶಿಕ್ಷಣ ಯೋಜನೆ (Wikipedia Education Program).  ಪದವಿ ಕಾಲೇಜುಗಳು ನ್ಯಾಕ್ ಮೌಲ್ಯಮಾಪನಕ್ಕೆ ಒಳಗಾಗುವುದರಿಂದ ಈ ಯೋಜನೆಯನ್ನು ರೂಪಿಸಿಕೊಳ್ಳಬಹುದು.

ಈ ಯೋಜನೆ ಪರಿಣಾಮಕಾರಿ ಆಗಬೇಕಾದರೆ ಈ ಕೆಳಗಿನ ಕೆಲವು ಅಂಶಗಳನ್ನು ಬಳಕೆಗೆ ತರಬಹುದು.

ಕಾಲೇಜಿನಲ್ಲಿ ವಿಕಿಪೀಡಿಯ ಸಂಘವೊಂದನ್ನು ರಚಿಸುವುದು.

ಸಂಘವು ಪ್ರತೀ ಸೆಮಿಸ್ಟರ್‌ಗೆ ೫೦ ಅಂಕಗಳ ವ್ಯವಸ್ಥೆ ಹೊಂದಿರುವುದರಿಂದ ಕಾಲೇಜಿನ ಒಬ್ಬ ಪ್ರಾಧ್ಯಾಪಕರು ಮತ್ತು ಕಂಪ್ಯೂಟರ್ ಲಾಬ್‌ನ್ನು ಕಾಲೇಜು ಒದಗಿಸಕೊಡಬೇಕಾಗುತ್ತದೆ.

ಸಂಘಕ್ಕೆ ಸೇರಿದ ಪ್ರತಿಯೊಬ್ಬರೂ ವಿಕಿಪೀಡಿಯಕ್ಕೆ ಲಾಗಿನ್ ಆಗುವುದು.

ಒಟ್ಟು ನಾಲ್ಕು ಸೆಮಿಸ್ಟರ್‌ಗಳಲ್ಲ್ಲಿ ಸಂಘದ ಕಾರ್ಯಚಟುವಟಿಕ ಇರುವುದರಿಂದ ವಿದ್ಯಾರ್ಥಿಗಳಿಗೆ ವಿಕಿಪೀಡಿಯದಲ್ಲಿ ಲೇಖನ ಬರೆಯುವ ಬೇರೆ ಬೇರೆ ಕಾರ್ಯಾಗಾರಗಳನ್ನು ನಡೆಸಿ ಮಾಹಿತಿ ನೀಡಬಹುದು.

ವಿದ್ಯಾರ್ಥಿಗಳು ಕನ್ನಡ, ತುಳು, ಕೊಂಕಣಿ, ಇಂಗ್ಲಿಷ್, ಹಿಂದಿ ಇತ್ಯಾದಿ ಭಾಷೆಗಳಲ್ಲಿ ಲೇಖನಗಳನ್ನು ಬರೆಯಬಹುದು.

ಲಾಗಿನ್ ಆದ ಸಂಘದ ವಿದ್ಯಾರ್ಥಿಗಳಿಗೆ ಎರಡು ವಿಕಿಪೀಡಿಯ ಸರ್ಟಿಫಿಕೇಟ್ ಕೋರ್ಸ್ ತಯಾರಿಸಬಹುದು.

ವಿಕಿಪೀಡಿಯ ಚಟುವಟಿಕೆಯನ್ನು ಆರಂಭಿಸಲು ಕರಾವಳಿ ವಿಕಿಮೀಡಿಯನ್ಸ್ ಮಂಗಳೂರು ಮತ್ತು ದಿ ಸೆಂಟರ್ ಫಾರ್ ಇಂಟರ್‌ನೆಟ್ ಆಂಡ್ ಸೊಸೈಟಿ, ಬೆಂಗಳೂರು ಈ ಎರಡು ಸಂಘಟನೆಗಳ ಸಹಾಯವನ್ನು ಪಡೆಯಬಹುದು.

 

(ಮೇ ೨೦೧೭ರ ವರೆಗಿನ ವಿಕಿಪೀಡಿಯ ಮಾಹಿತಿ ಆಧರಿಸಿ)

 

(ಮಂಗಳೂರು ವಿಶ್ವ ವಿದ್ಯಾಲಯದ ಡಿಗ್ರಿ ಕನ್ನಡ ಪಠ್ಯ ಪುಸ್ತಕ “ನುಡಿನಡೆ“ಯ ಒಂದು ಅಧ್ಯಾಯ)

 

ರಚನೆ:

-ಡಾ. ವಿಶ್ವನಾಥ ಬದಿಕಾನ,

ಸಹಾಯಕ ಪ್ರಾಧ್ಯಾಪಕ, ಕನ್ನಡ ವಿಭಾಗ,

ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ), ಮಂಗಳೂರು-೦೩

 

 

2 Responses to ವಿಕಿಪೀಡಿಯ ಲೇಖನ ಬರಹ

  1. vidyadhar

    Nice

  2. ಬಸವರಾಜ ಐಗೋಳ್

    ತುಂಬಾ ಚೆನ್ನಾಗಿ ಮಾಹಿತಿ ನೀಡಿದ್ದೀರಿ !!

Leave a Reply