ಇತ್ತೀಚೆಗೆ ಕೃತಕ ಬುದ್ಧಿಮತ್ತೆ ತುಂಬ ಸುದ್ದಿಯಲ್ಲಿದೆ. ಅಂತಹ ಒಂದು ಚಾಟ್ ಇಂಜಿನ್ ಚಾಟ್‌ಜಿಪಿಟಿ ಬಗ್ಗೆ ಎರಡು ವಾರಗಳ ಹಿಂದೆ ಬರೆದಿದ್ದೆ. ಗೂಗ್ಲ್, ಅಮೆಜಾನ್ ಅಲೆಕ್ಸಾ, ಆಪಲ್ ಸಿರಿ ಇವುಗಳಿಗೆ ಧ್ವನಿ ಮೂಲಕ ಆಜ್ಞೆ ನೀಡುವುದೂ ಕೃತಕ ಬುದ್ಧಿಮತ್ತೆಯ ವ್ಯಾಪ್ತಿಯಲ್ಲಿ ಬರುತ್ತವೆ. ಸದ್ಯಕ್ಕೆ ಇವು ಯಾವುವೂ ಕನ್ನಡವನ್ನು ಕಲಿತಿಲ್ಲ. ಆದುದರಿಂದ ಕೃತಕ ಬುದ್ಧಿಮತ್ತೆಯ ಸವಲತ್ತುಗಳಿಂದಾಗಿ (ತಂತ್ರಾಂಶಗಳಿಂದ) ನಮ್ಮ ಕೆಲಸ ಹೋಗಬಹುದು ಎಂದು ಶಿಕ್ಷಕರು ಮತ್ತು ಲೇಖಕರುಗಳು ಚಿಂತೆ ಪಡಬೇಕಾಗಿಲ್ಲ. ಆದರೆ ಕೃತಕ ಬುದ್ಧಿಮತ್ತೆಯ ಸವಲತ್ತುಗಳು ಕನ್ನಡದಲ್ಲೂ ದೊರೆಯುವ ಕಾಲ ತುಂಬ ದೂರವಿಲ್ಲ. ಗೂಗ್ಲ್ ಅನುವಾದ ಮೊದಲು ಕನ್ನಡಕ್ಕೆ ಕೆಟ್ಟದಾಗಿತ್ತು. ಇತ್ತೀಚೆಗೆ ಅದು ತುಂಬ ಸುಧಾರಿಸಿದೆ. ಬಹುತೇಕ ಅನುವಾದದ ಕೆಲಸಗಳಿಗೆ ಅದು ನೀಡುವ ಅನುವಾದ ಒಂದು ಪ್ರಾರಂಭದ ಹೆಜ್ಜೆಯನ್ನಾಗಿ ಹಲವರು ಬಳಸುತ್ತಿದ್ದಾರೆ. ಗೂಗ್ಲ್ ಅನುವಾದ ನೀಡಿದ ಪಠ್ಯವನ್ನು ಸುಧಾರಿಸಿ ಅಂತಿಮ ರೂಪು ನೀಡುತ್ತಿದ್ದಾರೆ. ವಿಕಿಪೀಡಿಯಾದಲ್ಲೂ ಈ ಯಂತ್ರಾನುವಾದ ಲಭ್ಯವಿದೆ. ಅಂದರೆ ಇಂಗ್ಲಿಷ್ (ಅಥವಾ ಇತರೆ) ಭಾಷೆಯ ವಿಕಿಪೀಡಿಯ ಲೇಖನವನ್ನು ಕನ್ನಡಕ್ಕೆ (ಅಥವಾ ಇತರೆ ಭಾಷೆಗೆ) ವಿಕಿಪೀಡಿಯದಲ್ಲೇ ಅಡಕವಾಗಿರುವ ಯಂತ್ರಾನುವಾದದ ಮೂಲಕ ಅನುವಾದ ಮಾಡಬಹುದು. ಆದರೆ ಈ ಅನುವಾದ ಸುಮಾರು 85% ದಷ್ಟು ಮಾತ್ರ ಸರಿಯಿದೆ. ಅದನ್ನು ಮೂಲವಾಗಿಟ್ಟುಕೊಂಡು ಅದನ್ನು ಸುಧಾರಿಸಿ ಲೇಖನ ಅಂತಿಮಗೊಳಿಸಬಹುದು. ಬಹುತೇಕ ಜನರು ಹಾಗೆ ಮಾಡುತ್ತಿದ್ದಾರೆ ಕೂಡ. ಕೃತಕ ಬುದ್ಧಿಮತ್ತೆಯ ಸವಲತ್ತುಗಳು ಚಾಟ್‌ಜಿಪಿಟಿಯಿಂದ ಮುಂದುವರೆದು ಕಾನೂನು ಕ್ಷೇತ್ರಕ್ಕೂ ಕಾಲಿಟ್ಟರೆ? ಅಂತಹ ಒಂದು ಸುದ್ದಿ ಬಂದಿದೆ.
ನಾನು ಹೇಳಲು ಹೊರಟಿರುವುದು ಕೃತಕ ಬುದ್ಧಿಮತ್ತೆಯ ಮೂಲಕ ಕೆಲವು ಕಾನೂನುಗಳ ಅನುವಾದ ಅಲ್ಲ. ಇದು ರೋಬೋಟ್ ಲಾಯರ್ ಕಥೆ. ಹಾಗೆಂದು ಹೇಳಿ ಸಿನಿಮಾಗಳಲ್ಲಿ ತೋರಿಸುವಂತೆ ಯಂತ್ರಮಾನವನೊಂದು ನ್ಯಾಯಾಲಯದಲ್ಲಿ ವಾದ ಮಾಡುವ ದೃಶ್ಯವನ್ನು ಊಹಿಸಿಕೊಳ್ಳಬೇಕಾಗಿಲ್ಲ. ಬದಲಿಗೆ ಕಾನೂನು ಕಲಿತು ಸಂದರ್ಭಕ್ಕೆ ಸರಿಯಾಗಿ ಸೂಕ್ತ ಕಾನೂನಿನ ಉಲ್ಲೇಖ ಮಾಡಿ ನ್ಯಾಯಾಲಯದಲ್ಲಿ ಕಕ್ಷಿದಾರನ ಪರವಾಗಿ ವಾದ ಮಂಡಿಸುವ ಕೃತಕ ಬುದ್ಧಿಮತ್ತೆಯ ಇಂಜಿನ್ ತಂತ್ರಾಂಶ ಎನ್ನಬಹುದು.

ಕೃತಕ ಬುದ್ಧಿಮತ್ತೆ (artificial intelligence) ಎನ್ನುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗೆ ತುಂಬ ಸುದ್ದಿ ಮಾಡುತ್ತಿರುವ ವಿಷಯ. ಇದರಲ್ಲಿ ಯಂತ್ರಗಳು ತಾವೇ ವಿಷಯಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಸ್ಪಂದಿಸಿ, ತಾವೇ ತೀರ್ಮಾನ ತೆಗೆದುಕೊಂಡು ಕೆಲಸ ಮಾಡುತ್ತವೆ. ಕೆಲವು ಪ್ರಮುಖ ಉದಾಹರಣೆಗೆಳು – ಯಂತ್ರಾನುವಾದ, ಪಠ್ಯದಿಂದ ಧ್ವನಿಗೆ ಹಾಗೂ ಧ್ವನಿಯಿಂದ ಪಠ್ಯಕ್ಕೆ ಪರಿವರ್ತನೆ, ಚಿತ್ರದಿಂದ ಪಠ್ಯಕ್ಕೆ, ಇತ್ಯಾದಿ. ಈ ಬಗ್ಗೆ ಹಿಂದೊಮ್ಮೆ ಹೀಗೆಂದು ಇದೇ ಅಂಕಣದಲ್ಲಿ ಬರೆಯಲಾಗಿತ್ತು.
ಹಲವು ಕ್ಷೇತ್ರಗಳಂತೆ ಕಾನೂನು ಮತ್ತು ನ್ಯಾಯಾಲಯಗಳಿಗೂ ಕೃತಕ ಬುದ್ಧಿಮತ್ತೆ ಪ್ರವೇಶ ಮಾಡುತ್ತಿದೆ. ಅಮೆರಿಕದಲ್ಲಿ ಕೃತಕಬುದ್ಧಿಮತ್ತೆಯ ನ್ಯಾಯವಾದಿ ತಯಾರಾಗಿದೆ. ಇದನ್ನು ವ್ಯಾಪಕವಾಗಿ ರೋಬೋಟ್ ಲಾಯರ್ ಎಂದು ಕರೆಯಲಾಗುತ್ತಿದೆ. ಅಮೆರಿಕದಲ್ಲಿ 2015ರಲ್ಲಿ ಜೋಶುವ ಬ್ರೌಡರ್ ಎಂಬವರು ಡುನಾಟ್‌ಪೇ ಎಂಬ ಕಾನೂನು ಸಲಹೆಗಾರ ತಂತ್ರಾಂಶವನ್ನು ಬಿಡುಗಡೆ ಮಾಡಿದರು. ಅದು ಕೂಡ ಚಾಟ್‌ಜಿಪಿಟಿಯಂತೆ ಒಂದು ಚಾಟ್‌ಬೋಟ್ ಆಗಿತ್ತು. ಜೋಶುವ ಅದನ್ನು ಪ್ರಪಂಚದ ಮೊದಲ ರೋಬೋಟ್ ಲಾಯರ್ ಎಂದು ಕರೆದರು. ಅದಕ್ಕೆ ಕಾನೂನು ಸಂಬಂಧಿ ಪ್ರಶ್ನೆ ಕೇಳಿದರೆ ಅದು ಉತ್ತರಿಸುತ್ತಿತ್ತು. ಪ್ರಾರಂಭದಲ್ಲಿ ಕೆಲವು ಸರಳವಾದ ಸಂದರ್ಭಗಳಲ್ಲಿ ಏನೆಲ್ಲ ಸಾಧ್ಯತೆಗಳಿವೆ ಎಂಬುದನ್ನು ಅದು ವಿವರಿಸುತ್ತಿತ್ತು. ಉದಾಹರಣೆಗೆ ಹಣ ನೀಡಬೇಕಾಗಿತ್ತು, ಅವಧಿಯೊಳಗಡೆ ನೀಡಿಲ್ಲ, ಈಗ ನೋಟೀಸು ಬಂದಿದೆ – ಈ ಸಂದರ್ಭದಲ್ಲಿ ಏನೆಲ್ಲ ಮಾಡಬಹುದು ಎಂಬುದನ್ನು ಅದು ಹೇಳುತ್ತದೆ. ಈ ಕಿರುತಂತ್ರಾಂಶ (ಆಪ್) ಗೂಗ್ಲ್ ಪ್ಲೇ ಸ್ಟೋರಿನಲ್ಲಿದೆ. ನಾನು ಅದನ್ನು ನನ್ನ ಮೊಬೈಲಿನಲ್ಲಿ ಹಾಕಿಕೊಂಡು ಬಳಸಿ ನೋಡಲು ಪ್ರಯತ್ನಿಸಿದೆ. ಆದರೆ ಅದು ಅಮೆರಿಕ, ಆಸ್ಟ್ರೇಲಿಯ ಮತ್ತು ಕೆಲವು ಯುರೋಪಿನ ದೇಶಗಳಿಗೆ ಸೀಮಿತವಾಗಿತ್ತು. ಭಾರತ ಅದರ ಪಟ್ಟಿಯಲ್ಲಿರಲಿಲ್ಲ. ಆದುದರಿಂದ ಅದು ನಿಜವಾಗಿಯೂ ಹೇಗೆ ಕೆಲಸ ಮಾಡುತ್ತಿದೆ ಎಂದು ಪರಿಶೀಲಿಸಲು ನನಗೆ ಆಗಲಿಲ್ಲ.
ಈ ಡುನಾಟ್‌ಪೇ ಚಾಟ್‌ಬೋಟ್ ಅಥವಾ ರೋಬೋಟ್ ಲಾಯರ್ ಅನ್ನು ನಿಜವಾದ ನ್ಯಾಯಾಲಯದಲ್ಲಿ ಕಾನೂನು ಹೋರಾಟವೊಂದರಲ್ಲಿ ಬಳಸಲು ಸಿದ್ಧತೆ ಆಗಿತ್ತು. ಅತಿ ವೇಗವಾಗಿ ವಾಹನ ಚಾಲನೆ ಮಾಡಿದ್ದೀಯ ಎಂದೊಬ್ಬರಿಗೆ ಸಾರಿಗೆ ಪೋಲೀಸರಿಂದ ನೋಟೀಸು ಬಂದಿತ್ತು. ಅವರು ನ್ಯಾಯಾಲಯದಲ್ಲಿ ಹಾಜರಾಗಿ ತಮ್ಮ ವಾದವನ್ನು ಮಂಡಿಸಬೇಕಿತ್ತು. ಇಲ್ಲಿ ವಾದ ಮಂಡಿಸಲು ರೋಬೋಟ್ ಲಾಯರ್ ಸಹಾಯ ಪಡೆಯುವುದೆಂದು ತೀರ್ಮಾನ ಆಗಿತ್ತು. ಆ ಕೇಸು ಕೋರ್ಟಿನಲ್ಲಿ ಫೆಬ್ರವರಿ 22ಕ್ಕೆ ನ್ಯಾಯಾಧೀಶರ ಮುಂದೆ ಬರುವುದಿತ್ತು. ಆದರೆ ಜೋಶುವ ಅವರು ಒಂದು ಟ್ವೀಟ್ ಮೂಲಕ ರೋಬೋಟ್ ಲಾಯರ್ ಅನ್ನು ಕೋರ್ಟಿಗೆ ಕಳುಹಿಸುವ ತಮ್ಮ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಲಾಯರುಗಳ ಸಂಘದ ಪ್ರತಿಭಟನೆ ಹಾಗೂ ಎಚ್ಚರಿಕೆ. ರೋಬಾಟ್ ಲಾಯರ್ ತಂದರೆ ಜೋಶುವ ಅವರಿಗೆ 6 ತಿಂಗಳುಗಳ ಜೈಲು ಸಾಧ್ಯತೆಯಿದೆ ಎಂಬ ಭಯದಿಂದ ಅವರು ಈ ತೀರ್ಮಾನ ತೆಗೆದುಕೊಂಡುದುದಾಗಿ ತಮ್ಮ ಟ್ವೀಟ್‌ನಲ್ಲಿ ತಿಳಿದಿದ್ದಾರೆ. ಕೋರ್ಟಿನಲ್ಲಿ ವಾದ ಮಾಡುವ ವ್ಯಕ್ತಿ ಇಯರ್‌ಫೋನ್ ಧರಿಸಿ ಅದು ಮೊಬೈಲಿನಲ್ಲಿರುವ ಡುನಾಟ್‌ಪೇ ತಂತ್ರಾಂಶಕ್ಕೆ ಸಂಪರ್ಕ ಹೊಂದುತ್ತದೆ. ಆ ತಂತ್ರಾಂಶವು ವಾದವನ್ನು ಆಲಿಸಿ ತನ್ನ ಉತ್ತರವನ್ನು ಇಯರ್‌ಫೋನ್ ಮೂಲಕ ತಿಳಿಸುತ್ತದೆ. ಕಕ್ಷಿದಾರ ಕೋರ್ಟಿನಲ್ಲಿ ರೋಬೋಟ್ ಲಾಯರ್ ತಿಳಸಿದಂತೆ ವಾದ ಮಾಡುತ್ತಾರೆ. ಇದು ಅವರ ಯೋಜನೆ ಆಗಿತ್ತು. ಮೊಬೈಲ್ ಫೋನ್ ಮತ್ತು ಇಯರ್‌ಫೋನ್‌ಗಳನ್ನು ಕೋರ್ಟಿನಲ್ಲಿ ಬಳಕೆ ಮಾಡುವಂತಿಲ್ಲ. ಆದುದರಿಂದ ಇಯರ್‌ಫೋನ್ ಅನ್ನು ಕಿವಿ ಕೇಳದವರು ಬಳಸುವ ಸಾಧನ ಎಂಬಂತೆ ಬಿಂಬಿಸುವ ಯೋಜನೆ ಅವರದಾಗಿತ್ತು. ಆದರೆ ಸದ್ಯಕ್ಕೆ ರೋಬೋಟ್ ಲಾಯರ್ ಕೇವಲ ಸಲಹೆಗೆಳಿಗೆ ಮಾತ್ರ ಸೀಮಿತ. ಕೋರ್ಟಿನಲ್ಲಿ ನಿಜವಾದ ವಾದ ಸದ್ಯಕ್ಕಿಲ್ಲ.
–ಡಾ| ಯು.ಬಿ. ಪವನಜ
gadgetloka @ gmail . com
Be First to Comment