Press "Enter" to skip to content

ಕರ್ನಾಟಕ ಜನಪದ ಕಲೆಗಳು – ಭಾಗ ೬

ಸಂ: ಗೊ. ರು. ಚನ್ನಬಸಪ್ಪ

ಯಕ್ಷಗಾನ:

ಯಕ್ಷಗಾನ ಗೀತ-ವಾದ್ಯ-ನೃತ್ಯಗಳ ಸಮ್ಮಿಶ್ರ ಕಲೆ. ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಂiಲ್ಲಿ ಮನೆಮಾತಾಗಿರುವ ಈ ಬಯಲಾಟದ ಕಲೆ ತನ್ನದೇ ಆದ ವೈಶಿಷ್ಟ್ಯವನ್ನು ಉಳಿಸಿಕೊಂಡು ಬಂದಿದೆ. ಬಯಲುನಾಡಿನಲ್ಲಿ ಇದನ್ನು `ಮೂಡಲ ಪಾಯ’ ಎಂದು ಕರೆದರೆ ಕರಾವಳಿ ಪ್ರದೇಶದಲ್ಲಿ `ಪಡುವಲ ಪಾಯ’ ಎನ್ನುತ್ತಾರೆ. ಪಡುವಲ ಪಾಯದಲ್ಲಿ ತೆಂಕ ತಿಟ್ಟು ಹಾಗೂ ಬಡಗ ತಿಟ್ಟು ಎಂಬ ಎರಡು ಪ್ರಭೇದಗಳಿದ್ದು, ಇವುಗಳು ಮೂಲಸ್ವರೂಪದಲ್ಲಿ ಒಂದೇ ಆಗಿದ್ದರೂ ಬೆಳೆದು ಬಂದ ಪ್ರಾದೇಶಿಕ ಪರಿಸರ ಭಿನ್ನತೆಯಿಂದ ಈ ಹೆಸರುಗಳು ಬಳಕೆಯಲ್ಲಿ ಬಂದಿವೆ. ಇದು ಹವ್ಯಾಸಿ ಕಲೆಯಾಗಿರುವಂತೆ ವೃತ್ತಿಕಲೆಯೂ ಆಗಿದೆ.
ಯಕ್ಷಗಾನ ಕಲೆಯನ್ನು ಪ್ರದರ್ಶಿಸುವ ಗುಂಪಿಗೆ `ಮೇಳ’ ಎಂದು ಕರೆಯುತ್ತಾರೆ. ಊರಿನ ಪ್ರಮುಖ ದೇವಾಲಯಗಳ ಆಶ್ರಯದಲ್ಲಿ ಇಂಥ ಮೇಳಗಳು ಮಳೆಗಾಲ ಮುಗಿದ ನಂತರ `ಸೇವೆ’ ಆಟವಾಡಿ ಪ್ರವಾಸವನ್ನು ಆರಂಭಿಸಿ ನಾಲ್ಕೈದು ತಿಂಗಳು ಆಹ್ವಾನದ ಮೇರೆಗೆ ಬೇರೆ ಬೇರೆ ಊರುಗಳಲ್ಲಿ ಕಲೆಯನ್ನು ಪ್ರದರ್ಶಿಸುತ್ತಾರೆ. ಇವರು ಮಹಾಭಾರತ, ರಾಮಾಯಣ, ಭಾಗವತ ಮುಂತಾದ ಪೌರಾಣಿಕ ಕಥೆಗಳಲ್ಲಿ ಬರುವ ಪ್ರಸಂಗಗಳನ್ನು ಆರಿಸಿಕೊಳ್ಳುತ್ತಾರೆ. ಬಬ್ರುವಾಹನ ಕಾಳಗ, ಸುಧನ್ವ ಕಾಳಗ, ತಾಮ್ರಧ್ವಜನ ಕಾಳಗ, ಸುಭದ್ರಾ ಪರಿಣಯ, ಕನಕಾಂಗಿ ಪರಿಣಯ, ದ್ರೌಪದೀ ಸ್ವಯಂವರ, ರತಿ ಕಲ್ಯಾಣ ಮುಂತಾದ ಪ್ರಸಂಗಗಳನ್ನು ಪ್ರದರ್ಶಿಸುತ್ತಾರೆ. ಪ್ರದರ್ಶನ ಪ್ರವಾಸ ಮುಗಿದ ನಂತರ ತಮ್ಮ ಊರಿಗೆ ಬಂದು ದೇವಾಲಯದ ಮುಂದೆ ಮತ್ತೊಮ್ಮೆ ಸೇವೆ ಆಟವಾಡಿ, ಆ ವರ್ಷದ ಪ್ರದರ್ಶನಕ್ಕೆ ಮಂಗಳ ಹಾಡುತ್ತಾರೆ. ಇತ್ತೀಚೆಗೆ ಈ ಮೇಳಗಳು ರಾಷ್ಟ್ರೀಯ ಖ್ಯಾತಿಯನ್ನು ಗಳಿಸಿರುವುದು ಯಕ್ಷಗಾನದ ಶ್ರೀಮಂತಿಕೆಯ ಸಂಕೇತವಾಗಿದೆ.

ಯಕ್ಷಗಾನಕ್ಕೆ ರಂಗಸಜ್ಜಿಕೆಯು ಮುಖ್ಯವಾದುದು. ಸುಮಾರು ೨೫೦-೩೦೦ ಚದರಡಿ ಅಳತೆಯಲ್ಲಿ ನಾಲ್ಕು ಕಂಬಗಳನ್ನು ನೆಟ್ಟು ಚಪ್ಪರವನ್ನು ಸಿದ್ಧಪಡಿಸಿ ಮೇಲೆ ತೆಂಗು ಅಥವಾ ಅಡಿಕೆಯ ಸೋಗೆಯನ್ನೋ ಹುಲ್ಲು ಅಥವಾ ಬಿದಿರಿನ ತಟ್ಟೆಯನ್ನೋ ಹೊದಿಸುತ್ತಾರೆ. ಹಾಗೆಯೇ ಸುತ್ತ ಮೂರು ಕಡೆ ಬಿದಿರಿನ ಸೋಗೆ ಅಥವಾ ತಗಡಿನಿಂದ ಮುಚ್ಚುತ್ತಾರೆ. ಒಳಗಡೆ ಕಲಾವಿದರು ಬಣ್ಣ ಬಳಿದುಕೊಳ್ಳಲು ಒಂದು ಕೋಣೆ ಕಟ್ಟಿಕೊಂಡಿರುತ್ತಾರೆ. ಇದಕ್ಕೆ `ಚೌಕದ ಮನೆ’ ಎನ್ನುತ್ತಾರೆ.

ಹಿಂದೆ ವಿದ್ಯುಚ್ಛಕ್ತಿ ಅಥವಾ ಆಧುನಿಕ ಬೆಳಕಿನ ವ್ಯವಸ್ಥೆ ಇರಲಿಲ್ಲ. ಔಡಲ ಎಣ್ಣೆಯಿಂದ ಉರಿಯುವ ಢಾಳಾದ ಹಿಲಾಲುಗಳನ್ನು ರಂಗದ ನಾಲ್ಕು ಕಡೆ ಹೊತ್ತಿಸಿರುತ್ತಿದ್ದರು. ರಂಗಮಂಟಪದ ಹಿಂಬದಿಯಲ್ಲಿ ಮಣೆಯ ಮೇಲೆ ಭಾಗವತ ಹಿಮ್ಮೇಳದವರೊಂದಿಗೆ ಕುಳಿತಿರುತ್ತಾನೆ. (ಹಿಂದೆ ಇವರೆಲ್ಲ ನಿಂತಕೊಂಡೇ ಮೇಳ ನಡೆಸುತ್ತಿದ್ದರು) ಪಾತ್ರಧಾರರು ಸಾಮಾನ್ಯವಾಗಿ ಭಾಗವತರ ಎಡಭಾಗದಿಂದ ರಂಗಪ್ರವೇಶ ಮಾಡಿ ಬಲಭಾಗದಿಂದ ನಿರ್ಗಮಿಸುತ್ತಾರೆ.

ಯಕ್ಷಗಾನ ಭಾಗವತನೇ ಸೂತ್ರಧಾರ. ಕೈಯಲ್ಲಿ ತಾಳ ಹಿಡಿದು ಕತೆಯ ಪಾತ್ರಕ್ಕನುಗುಣವಾಗಿ ಹಾಡನ್ನು ಹಾಡುತ್ತಾನೆ. ಹಾಡಿನ ಮೇಳಕ್ಕೆ ಮದ್ದಲೆಗಾರ, ಚಂಡೆಗಾರ ಹಾಗೂ ಶೃತಿ ಹಿಡಿಯುವವನು ಸಹಾಯಕರು. ಯಕ್ಷಗಾನ ವೈಭವವಿರುವುದೇ ವೇಷಭೂಷಣಗಳಲ್ಲಿ. ಪ್ರಮುಖವಾಗಿ ಕಿರೀಟ, ಗಡೆ ಕೇದಿಗೆ ಎದೆಹಾರ, ಭುಜಕೀರ್ತಿ, ಕೈಕಟ್ಟು, ತೋಳಬಂದಿ, ನಡುಕಟ್ಟು, ಕರ್ಣಮಂಡಲ, ವೀರಗಾಸೆ, ಕಾಲ್ಕಡಗ ಮುಂತಾದವುಗಳನ್ನು ಪುರುಷ ಪಾತ್ರಧಾರಿಗಳು ಬಳಸಿದರೆ ಹೊನ್ನೋಲೆ, ಬುಗಡಿ ಸೊಂಟಕ್ಕೆ ಒಡ್ಯಾಣ, ಕೊರಳಿಗೆ ಟೀಕಿಸರ, ಬಳೆಗಳು, ಮೂಗುತಿ, ಕೈಚಿನ್ನ ರುsಲ್ಲರಿಗಳು, ಉಂಗುರ, ಗೆಜ್ಜೆಗಳನ್ನು ಸ್ತ್ರೀ ಪಾತ್ರಧಾರಿಗಳು ಧರಿಸುತ್ತಾರೆ.

ಬಹುತೇಕವಾಗಿ ಈ ಭೂಷಣಗಳಲ್ಲಿ ಕೆಲವನ್ನು ಮರದಿಂದಲೂ, ಕೆಲವನ್ನು ಬಟ್ಟೆಯಿಂದಲೂ ತಯಾರಿಸುತ್ತಾರೆ. ಈ ವೇಷಭೂಷಣ ಪಾತ್ರಗಳಿಗೆ ಅನುಗುಣವಾಗಿ ವಿವಿಧ ಬಗೆಯಲ್ಲಿರುತ್ತದೆ. ಒಂದೊಂದು ಕಲಾತ್ಮಕ. ಕಿರೀಟವು ಮರದಿಂದ ತಯಾರಾಗಿದ್ದು ಇದರ ಎರಡು ಬದಿಗೆ ಆನೆಯ ಮೇಲೆತ್ತಿದ ಸೊಂಡಲಿನ ಆಕಾರದ ಕೊಂಬುಗಳಿರುತ್ತವೆ. ಟೊಪ್ಪಿಗೆಯಂತಹ ಮುಖ್ಯಭಾಗ ಹಾಗೂ ಕೊಂಬುಗಳ ಮೇಲೆ ಆಕರ್ಷಕವಾಗಿರುವಂತೆ ಕುಸುರಿ ಕೆಲಸ ಮಾಡಿರುತ್ತಾರೆ. ಕಿರೀಟ ಚೆನ್ನಾಗಿ ಕಾಣಲು `ಬೇಗಡೆ’ ಕಾಗದವನ್ನು ಅಂಟಿಸಿ ಅಲ್ಲಲ್ಲಿ ಹೊಳೆಯುವ ಹರಳುಗಳು ಅಥವಾ ಮುತ್ತುಗಳನ್ನು ಜೋಡಿಸಿರುತ್ತಾರೆ.

`ಪಗಡೆ’ ಯಕ್ಷಗಾನದ ವೇಷಭೂಷಣಗಳಲ್ಲಿ ಸುಂದರವಾದುದು. ಇದು ಹೆಚ್ಚಾಗಿ ಕಿರಿಯ ವಯಸ್ಸಿನ ಸುಕುಮಾರ ಪಾತ್ರಗಳಿಗೆ ಹೆಚ್ಚು ರಂಜಿಸುವುದಾದರೂ ಸಾಮಾನ್ಯವಾಗಿ ಸಾತ್ವಿಕ ಸ್ವಭಾವದ ಧೀರ ಲಲಿತನಾಯಕ ಪಾತ್ರಗಳಿಗೂ ಇದನ್ನು ಬಳಸುತ್ತಾರೆ. ಪಾತ್ರಗಳಿಗನುಗುಣವಾಗಿ ಆಕಾರದಲ್ಲಿ ವ್ಯತ್ಯಾಸವಿರುತ್ತದೆ. ಸಾಮಾನ್ಯವಾಗಿ `ಪಗಡೆ’ಯ ಆಕಾರದ ಇಸ್ಪೀಟಿನ `ಆಟೀನ’ನ್ನು ಹೋಲುತ್ತದೆ. ಇದನ್ನು ಬಿಡಿ ಭಾಗಗಳಿಂದ ಸೇರಿಸಿ ಮಾಡುತ್ತಾರೆ. ಮೊದಲು ಚಿಂದಿ ಬಟ್ಟೆಗಳನ್ನು ಸುತ್ತಿ ಪಗಡೆಯ `ಅಟ್ಟೆ’ಗಳನ್ನು ಸಿದ್ಧಪಡಿಸಿ ನಂತರ ಇಂತಹ ಅಟ್ಟೆಗಳನ್ನು ಒಂದರ ಮೇಲೊಂದರಂತೆ ಇಟ್ಟು ನಾರಿನ ದಾರದಿಂದ ಬಿಗಿದು ಪಗಡೆಯ ಆಕಾರಕ್ಕೆ ಅದನ್ನು ತರುತ್ತಾರೆ. ಇದರ ತುದಿಗೆ ನವಿಲುಗರಿ ಆಕಾರದ ಮೊನಚಾದ ತಗಡನ್ನು ಚುಚ್ಚಿರುತ್ತಾರಲ್ಲದೆ ಸ್ವಲ್ಪ ಭಾಗ ಹೂವಿನ ಹಾರವನ್ನು ಸಿಗಸಿರುತ್ತಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದರ ಆಕಾರ ಚಿಕ್ಕದಾಗಿದ್ದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೊಡ್ಡದಾಗಿರುತ್ತದೆ.

ಬಣ್ಣಗಾರಿಕೆಯೂ ಕೂಡ ಪಾತ್ರಗಳನ್ನು ಅವಲಂಬಿಸಿರುತ್ತದೆ. ಸಾತ್ವಿಕ, ಸೌಮ್ಯ ಸ್ವಭಾವದವರಿಗೆ ಒಂದು ರೀತಿಯ ಬಣ್ಣವಾದರೆ, ವೀರ ಪಾತ್ರಗಳಿಗೆ ಮತ್ತೊಂದು ರೀತಿಯ ಬಣ್ಣವನ್ನು ಬಳಸುತ್ತಾರೆ. ದೈತ್ಯಪಾತ್ರಗಳ ವೇಷಭೂಷಣ, ಬಣ್ಣಗಳಂತೂ ಉಗ್ರವಾಗಿದ್ದು ನೋಡಲು ಭಯವನ್ನುಂಟುಮಾಡುವಂತಿರುತ್ತವೆ. ಸ್ತ್ರೀ ಪಾತ್ರಗಳನ್ನು ಪುರುಷರೇ ವಹಿಸುತ್ತಾರೆ.

ಪ್ರದರ್ಶನ ಸಾಮಾನ್ಯವಾಗಿ ರಾತ್ರಿ ಹತ್ತು ಗಂಟೆಗೆ ಪ್ರಾರಂಭವಾಗಿ ಸೂರ್ಯೋದಯವಾಗುವವರೆಗೆ ನಡೆಯುವುದುಂಟು. ಸಂಜೆಯ ವೇಳೆಗೆ ಕಲಾವಿದರೆಲ್ಲ ಬಣ್ಣದ ಕೋಣೆಗೆ ಬಂದು ವೇಷಭೂಷಣಗಳನ್ನು ಧರಿಸಿಕೊಳ್ಳಲು ಸಿದ್ಧರಾಗುತ್ತಾರೆ. ವೇಷಧಾರಿಗಳು ಸಿದ್ಧವಾಗುವಾಗ ಚಂಡೆ, ಮೃದಂಗ, ತಾಳಗಳ ಧ್ವನಿ ಮೊಳಗುತ್ತದೆ. ಇದನ್ನು `ಶುಷ್ಕವಾದ್ಯ’ ಎನ್ನುತ್ತಾರೆ. ಮೊದಲು ರಂಗಪ್ರವೇಶ ಮಾಡುವುದು `ಕೋಡಂಗಿ’ಯ ಪಾತ್ರ. ಇವನಿಗೆ `ಹನುಮನಾಯಕ’ ಎಂದೂ ಹೇಳುತ್ತಾರೆ. ಉದ್ದನೆಯ ಚಣ್ಣ, ಶೇರವಾನಿ, ಸೊಂಟ ಹಾಗೂ ತಲೆಗೆ ಬಣ್ಣದ ವಸ್ತ್ರ, ಹಣೆಯ ಮೇಲೆ ನಾಮ, ಕೈಯಲ್ಲಿ ದೊಣ್ಣೆ -ಇದು ಕೋಡಂಗಿಯ ವೇಷ. ಈ ಪಾತ್ರಧಾರಿಗೆ ಆಟದ ಬಗ್ಗೆ ಸಾಕಷ್ಟು ಅನುಭವವಿರಬೇಕಾಗುತ್ತದೆ. ಆಟದ ಪಾತ್ರಗಳು ರಂಗದ ಮೇಲೆ ಬರುವುದು ತಡವಾದ ಸಂದರ್ಭದಲ್ಲಿ ಪ್ರೇಕ್ಷಕರನ್ನು ರಂಜಿಸಲು ಈ ಕೋಡಂಗಿ ನಾನಾ ಭಾವ ಭಂಗಿಗಳನ್ನು ತೋರುತ್ತಾ, ವಿಲಕ್ಷಣ ಮಾತುಗಳನ್ನು ಆಡುತ್ತಾ ಇರುತ್ತಾನೆ.

ಭಾಗವತರು ಮೊದಲು ಅಂದಿನ ಅಖ್ಯಾನದ ಪರಿಚಯವನ್ನು ಮಾಡಿಕೊಡುತ್ತಾರೆ. ಸಾಮಾನ್ಯವಾಗಿ ಕಥೆ ಆರಂಭವಾಗುವುದು ಒಡ್ಡೋಲಗದಿಂದಲೇ. ಪ್ರತಿಯೊಬ್ಬ ವೇಷಧಾರಿಯೂ ಮೊದಲಿಗೆ ರಂಗ ಪ್ರವೇಶ ಮಾಡುವಾಗ ಅವರ ಮುಖಭಾಗ ಕಾಣದಂತೆ ತೆರೆ ಹಿಡಿಯುತ್ತಾರೆ. ತೆರಯನ್ನು ನಿಧಾನವಾಗಿ ಕೆಳಗೆ ಸರಿಸಿ, ಕ್ರಮೇಣ ಪಾತ್ರಧಾರಿಯು ಪೂರ್ಣವಾಗಿ ಕಂಡ ನಂತರ ತೆಗೆಯುತ್ತಾರೆ. ವೇಷಧಾರಿಗಳ ಪಾತ್ರ ಕುಣಿತದೊಂದಿಗೇ ಆರಂಭವಾಗುತ್ತದೆ. ಮೊದಲು ಕುಣಿತದ ನಂತರ ಭಾಗವತನು ಪಾತ್ರಧಾರಿಗಳ ಬಾಯಿಂದಲೇ ಬಂದವರು ಯಾರು, ಬಂದ ಉದ್ದೇಶವೇನು, ಎಂಬುದನ್ನು ಹೇಳಿಸಿ ಪ್ರೇಕ್ಷಕರಿಗೆ ಪರಿಚಯ ಮಾಡಿಸಿಕೊಡುತ್ತಾನೆ. ಆ ಸಮಯಕ್ಕೆ ಸರಿಯಾಗಿ ಹನುಮನಾಯಕನು ಕಾಣಿಸಿಕೊಂಡು ಸ್ತುತಿಪಾಠಕನ ಕೆಲಸವನ್ನು ಮಾಡುತ್ತಾನೆ. ಪ್ರತಿಯೊಂದು ಪಾತ್ರದ ಹಾಡನ್ನು ಭಾಗವತ ಮತ್ತು ಅವನ ಸಂಗಡಿಗರೇ ಹಾಡುತ್ತಾರೆ. ಕುಣಿತ ಮತ್ತು ಸಂಭಾಷಣೆ ಪಾತ್ರಧಾರಿಗಳ ಕೆಲಸ.

ಕುಣಿತದಲ್ಲಿ ಸ್ತ್ರೀ ಹಾಗೂ ಪುರುಷ ವೇಷಗಳಲ್ಲಿ ವ್ಯತ್ಯಾಸವಿದೆ. ಪುರುಷ ವೇಷದಲ್ಲಿ ಯುದ್ಧ, ವೀರ, ಪೌರುಷಗಳಿಗೆ ತಕ್ಕ ಭಾವಗಳನ್ನು ಕುಣಿತದಲ್ಲಿ ಕಾಣಬಹುದು. ಸಂತೋಷ, ದುಃಖ, ಭಕ್ತಿ, ನಿರಾಶೆ, ಭಯ, ದ್ವೇಷ, ರೋಷ ಮುಂತಾದ ಭಾವಗಳನ್ನು ತೋರಿಸುವ ನೈಪುಣ್ಯತೆಯನ್ನು ಸ್ತ್ರೀವೇಷದ ಕಲಾವಿದರು ಪಡೆದಿರುತ್ತಾರೆ. ಯುದ್ಧದ ಸಮಯದಲ್ಲಿ ಕುಣಿತ ತೀವ್ರಗತಿಯನ್ನು ಮುಟ್ಟುತ್ತದೆ.
ಯಕ್ಷಗಾನದಲ್ಲಿ ವೇಷಭೂಷಣ ಮತ್ತು ಕುಣಿತಗಳಂತೆ ಸಂಗೀತದ್ದೂ ವಿಶಿಷ್ಟ ಪಾತ್ರ. ಪ್ರಸಂಗದ ಸಂದರ್ಭಗಳಿಗೆ ಅನುಗುಣವಾಗಿ ಕಂದ, ಶ್ಲೋಕ ಮತ್ತು ಪದ್ಯಗಳನ್ನು ವಿವಿಧ ತಾಳ, ಲಯ ಮತ್ತು ರಾಗಗಳಲ್ಲಿ ಹಾಡುತ್ತಾರೆ. ಕುಣಿತಕ್ಕೆ ಗತ್ತು ಒದಗಿಸುವುದೇ ಈ ಮೇಳ.

ಪೂಜಾ ಕುಣಿತ:


ಪೂಜಾ ಕುಣಿತ ಶಕ್ತಿ ದೇವತೆಗಳಿಗೆ ಸಂಬಂಧಿಸಿದ ಕುಣಿತವಾದರೂ ಒಳ್ಳೆಯ ಮನರಂಜನೆ ನೀಡುವ ಕಲೆ. ದೇವತೆಯ ವಿಗ್ರಹ (ಮುಖವಾಡ)ವನ್ನು ಬಿದಿರಿನ ತಳಿ (ತಟ್ಟೆ)ಯ ಮಧ್ಯೆ ಕಟ್ಟಿ ಅದನ್ನು ಹೊತ್ತು ಕುಣಿಯುವುದೇ `ಪೂಜಾ ಕುಣಿತ’. ಬೆಂಗಳೂರು, ಮಂಡ್ಯ ಮತ್ತು ಕೋಲಾರ ಜಿಲ್ಲೆಗಳಲ್ಲಿ ಇದು ಹೆಚ್ಚು ಪ್ರಚಲಿತ.
ಪೂಜೆಯನ್ನು ಸುಮಾರು ೫ ಅಡಿ ಉದ್ದ ೪ ಅಡಿ ಅಗಲವಿರುವ ಬಿದಿರ `ಗಳು’ ಮತ್ತು ಹಚ್ಚೆಗಳನ್ನು ಜೋಡಿಸಿ ಮಾಡಿರುತ್ತಾರೆ. ಮಂಡ್ಯ ಜಿಲ್ಲೆಯಲ್ಲಿ ಇದನ್ನು `ತಳಿ’ ಎಂದು ಕರೆಯುತ್ತಾರೆ. ಇದರ ಮಧ್ಯಭಾಗದಲ್ಲಿ ಮರದ ಹಲಗೆಯನ್ನು ಜೋಡಿಸಿ, ಅದಕ್ಕೆ ದೇವತೆಯ ಮುಖವಾಡವನ್ನು ಕಟ್ಟಿ, ಇದರ ಎರಡೂ ಕಡೆಯೂ ತಳಿಯ ಉದ್ದಕ್ಕೂ ತುದಿಯ ಕಳಸದ ಕತ್ತಿನಿಂದ ಬಣ್ಣದ ಸೀರೆಗಳನ್ನು ಇಳಿಬಿಟ್ಟಿರುತ್ತಾರೆ. ತಳಿಯ ಮೇಲ್ತುದಿ ಸಾಮಾನ್ಯವಾಗಿ ಬೆಳ್ಳಿಯಿಂದ ತಯಾರಿಸಿದ ಏಳು ಅಥವಾ ಒಂಬತ್ತು ಕಳಸಗಳಿಂದ ಅಲಂಕರಿಸಲ್ಪಟ್ಟಿರುತ್ತದೆ. ಬೆಳ್ಳಿಯ ಮುಖರಿಸಿ ಹಾಕಿದ ಮುಖವಾಡಕ್ಕೆ ಸೇರಿದಂತೆ ತಳಿಯ ಮೇಲ್ಭಾಗಕ್ಕೆ ಅರ್ಧಚಂದ್ರಾಕಾರದ ಹಿತ್ತಾಳೆ ಪ್ರಭಾಳೆ (ಪ್ರಭಾವಳಿ) ಕಟ್ಟಿ ಅದರ ಮೇಲ್ಭಾಗಕ್ಕೆ ತಳಿಯ ಎರಡು ಕಡೆಯೂ ಹಿತ್ತಾಳೆಯ ಪಟ್ಟಿಗಳನ್ನು (ಪೂರ್ಣಚಂದ್ರನ ಆಕಾರ) ಕಟ್ಟಿರುತ್ತಾರೆ. ತಳಿಯ ಒಳಗಡೆ ಮುಖವಾಡದ ಎರಡೂ ಬದಿಗೂ ಭಕ್ತಾದಿಗಳು ಹರಕೆ ಹೊತ್ತು ಸಲ್ಲಿಸಿದ ಕಡಗ, ಕಾಲುಮುರಿ, ಹಸ್ತ, ಓಲೆ, ಡಾಬು ಮುಂತಾದುವುಗಳನ್ನು ಇಟ್ಟು ದೇವಿಯ ವಿಗ್ರಹಕ್ಕೆ ಹೂವಿನ ಹಾರ ಹಾಕಿ ಇಡೀ ತಳಿಯನ್ನು ಬಿಡಿ ಹೂವಿನಿಂದ ಅಲಂಕರಿಸಿರುತ್ತಾರೆ. ತಳಿಯ ಹಿಂಬದಿಗೆ `ಬೆನ್‌ಬಟ್ಟೆ’ ಕಟ್ಟಿರುತ್ತಾರೆ. ತಳಿಯ ತಳಭಾಗದ ಮಧ್ಯಭಾಗದಲ್ಲಿ ಹೊತ್ತು ಕುಣಿಯಲು ಅನುಕೂಲವಾಗುವಂತೆ ಕಂಚು ಅಥವಾ ಹಿತ್ತಾಳೆಯ ಒಂದು ಗಿಂಡಿಯನ್ನು ಸೇರಿಸಿ ಬಿಗಿದಿರುತ್ತಾರೆ. ಇದು ತಲೆಯ ಮೇಲೆ ಅಲುಗಾಡದಂತೆ ಕುಳಿತುಕೊಳ್ಳುತ್ತದೆ. ಪೂಜೆಯ ಒಳಭಾಗದಲ್ಲಿ ಮಾರಮ್ಮ, ಚೌಡಮ್ಮ, ಮುತ್ಯಾಲಮ್ಮ, ಗೌಡಚಂದ್ರಮ್ಮ ಮುಂತಾದ ಸ್ಥಳೀಯ ದೇವತೆಯರ ವಿಗ್ರಹಗಳನ್ನಿಟ್ಟುಕೊಂಡು ಆಯಾ `ದೇವರ ಪೂಜಾ ಕುಣಿತ’ ವೆಂದು ಕರೆಯುವ ವಾಡಿಕೆಯಲ್ಲಿದೆ. ಈ ಎಲ್ಲಾ ದೇವತೆಗಳಿಗೂ ಒಬ್ಬೊಬ್ಬ ಗುಡ್ಡ (ಪೂಜಾರಿ) ನಿರುತ್ತಾರೆ. ಇವನು ದೇವತೆಯ ಪೂಜಾರಿ ಅಷ್ಟೆ. ಪೂಜೆಯನ್ನು ಹೊತ್ತು ಕುಣಿಯುವವರು ಬೇರೆ ಇರುತ್ತಾರೆ.


ಹಬ್ಬ ಹರಿದಿನಗಳಲ್ಲಿ ಊರ ದೇವತೆಯ ಉತ್ಸವಗಳಲ್ಲಿ ಮತ್ತು ಕೆಲವು ಸಮಯ ಹರಕೆ ಮಾಡಿಕೊಂಡ ಭಕ್ತಾದಿಗಳ ಮೇರೆಗೆ ಪೂಜೆಕುಣಿತದ ಕಲಾವಿದರು ತಮ್ಮ ಹಳ್ಳಿಯ ಬಯಲಲ್ಲಿ ಅಥವಾ ದೇವರ ಗುಡಿಯ ಮುಂಭಾಗದಲ್ಲಿ ಪ್ರದರ್ಶನ ನೀಡುತ್ತಾರೆ. ಪೂಜೆಯನ್ನು ಹೊತ್ತು ಕುಣಿಯುವ ಕಲಾವಿದರು ಹಣೆಗೆ ಕುಂಕುಮ ಇಟ್ಟು, ಬಿಳಿ ಬಣ್ಣದ ಬನೀನು, ನಿಕ್ಕರ್ ಅಥವಾ ವೀರಗಾಸೆ ರೀತಿಯಲ್ಲಿ ಪಂಚೆ ಧರಿಸಿ, ಕಾಲಿಗೆ ಗೆಜ್ಜೆ ಕಟ್ಟಿರುತ್ತಾರೆ. ಕಲಾವಿದರು ಅನೇಕ ಭಾವಭಂಗಿಗಳಲ್ಲಿ ಬಾಗುತ್ತಾ ಬಳುಕುತ್ತಾ ಕುಣಿಯುತ್ತಾರೆ. ಕುಶಲ ಕಲಾವಿದ ವಾದ್ಯದ ಬಡಿತಕ್ಕೆ ತಕ್ಕಂತೆ ಪೂಜೆಯನ್ನು ತನ್ನ ಕತ್ತಿನಿಂದಲೇ ಒಂದೊಂದೇ ದಿಕ್ಕಿಗೆ ತಿರುಗಿಸುತ್ತಾನೆ. ಅವನು ಮಾತ್ರ ಸ್ಥಿರವಾಗಿ ಒಂದೇ ದಿಕ್ಕಿಗೆ ಮುಖಮಾಡಿಕೊಂಡು ನಿಂತು, ಪೂಜೆ ಮಾತ್ರ ಒಂದು ಸುತ್ತು ಗತ್ತಿನ ಮೇಲೆ ತಿರುಗುತ್ತದೆ. ಇಂತಹ ಕಲೆ ಅನುಭವಿ ಕಲಾವಿದರಿಗೆ ಮಾತ್ರ ಸಾಧ್ಯ. ಸಾಲಾಗಿ ಇಟ್ಟ ಮಡಿಕೆಯ ಮೇಲೆ ತಾಳಕ್ಕೆ ತಕ್ಕಂತೆ ಒಂದೊಂದು ಹೆಜ್ಜೆ ಇಟ್ಟುಕೊಂಡು ಮಡಿಕೆ ಒಡೆಯದಂತೆ ನಡೆಯುವುದಂತೂ ಸೋಜಿಗ ಪಡುವಂತಹದ್ದು. ತಮಟೆ, ನಗಾರಿ, ತಾರಸಿ, (ಪಾರ್ಚಿ), ಹರೆ, ತುಡಂ ಮುಂತಾದ ಪಕ್ಕವಾದ್ಯಗಳು ಈ ಕುಣಿತಕ್ಕೆ ಬೇಕು. ಕೆಲವು ಕಡೆ ಪೂಜಾ ಕುಣಿತದ ಜೊತೆಯಲ್ಲಿ ಒನಕೆ ಕುಣಿತವೂ ನಡೆಯುವುದುಂಟು.

ಪೂಜಾಕುಣಿತದಲ್ಲಿ ತೊಟ್ಟಿಲು ಕುಣಿತ, ತಾಯ್ಗುಣಿತ, ಹೆಜ್ಜೆ ಕುಣಿತ, ಗೆಜ್ಜೆಕುಣಿತ, ಸುತ್ತು ಕುಣಿತ, ಎದುರು ಕುಣಿತ ಮೊದಲಾಗಿ ನಾನಾ ವಿಧಗಳಿವೆ. ಕುಣಿತಕ್ಕೆ ಒಂದು ಗತ್ತು ಒದಗಿಸುವ ಪ್ರಮುಖ ವಾದ್ಯ ಹಲಗೆ. ಕೆಲವು ಕಡೆ ಐದಾರು ಜನ ಹಲಗೆ ಬಾರಿಸುವವರೂ ಇರುತ್ತಾರೆ.

ಪೂಜೆ ಹೊತ್ತು ಹೆಗಲ ಮೇಲೆ ಎಂಟು ವರ್ಷದ ಹುಡುಗನನ್ನು ಕೂರಿಸಿಕೊಂಡು ಕುಣಿಯುವುದು, ಹಗ್ಗದ ಮೇಲೆ ನಡೆಯುವುದು, ಕುಣಿಯುತ್ತಲೇ ನೆಲದ ಮೇಲಿಟ್ಟ ನೋಟು ಅಥವಾ ಕಾಗದ ಚೂರನ್ನು ತುಟಿಯಿಂದ ಕಚ್ಚಿ ಮೇಲೆತ್ತುವುದು, ಮರಳಿನ ಸಣ್ಣ ಗುಡ್ಡೆಯ ಗುಡ್ಡೆಯ ಮೇಲೆ ಅಡ್ಡಗಾಗಿಟ್ಟ ಸೂಜಿಯನ್ನು ಕಣ್ಣಿನ ರೆಪ್ಪೆಯಿಂದ ಎತ್ತುವುದು ಮೊದಲಾಗಿ ನಾನಾ ಚಮತ್ಕಾರಗಳನ್ನು ತೋರಿಸುವ ನುರಿತ ಕಲಾವಿದರೂ ಇದ್ದಾರೆ.

One Comment

  1. Venkatesh murthy Venkatesh murthy April 11, 2018

    Pooja kunitha kaliyuva ista

Leave a Reply

Your email address will not be published. Required fields are marked *