ಮಾನವನ ಇಂದ್ರಿಯಗಳಲ್ಲಿ ಮೂಗು ಕೂಡ ಒಂದು. ಕಣ್ಣು ದೃಶ್ಯವನ್ನು ನೋಡುತ್ತದೆ. ಕಿವಿ ಧ್ವನಿಯನ್ನು ಕೇಳುತ್ತದೆ. ನಾಲಗೆ ರುಚಿಯನ್ನು ನೋಡುತ್ತದೆ. ಮೂಗು ವಾಸನೆಯನ್ನು ಗ್ರಹಿಸುತ್ತದೆ. ದೃಶ್ಯ ಮತ್ತು ಧ್ವನಿಗಳನ್ನು ತಂತ್ರಜ್ಞಾನ ಮೂಲಕ ಗ್ರಹಿಸಲು ಸಾಧ್ಯವಿದೆ. ದೃಶ್ಯವನ್ನು ಕ್ಯಾಮೆರ ಮೂಲಕ ಮತ್ತು ಧ್ವನಿಯನ್ನು ಮೈಕ್ರೋಫೋನ್ ಮೂಲಕ ಗ್ರಹಿಸಲಾಗುತ್ತದೆ. ಹೀಗೆ ಮುಂದುವರೆದು ವಾಸನೆಯನ್ನು ತಂತ್ರಜ್ಞಾನ ಮೂಲಕ ಗ್ರಹಿಸಲು ಸಾಧ್ಯವಿಲ್ಲವೇ ಎಂದು ಯಾವತ್ತಾದರೂ ಆಲೋಚಿಸಿದ್ದೀರಾ? ಹೌದು, ಅದೂ ಸಾಧ್ಯವಿದೆ. ಅದನ್ನು ವಿದ್ಯುನ್ಮಾನ ಮೂಗು (electronic nose) ಎಂದು ಕರೆಯಲಾಗುತ್ತದೆ. ಅದುವೇ ನಮ್ಮ ಈ ಸಂಚಿಕೆಯ ವಿಷಯ.
ವಿದ್ಯುನ್ಮಾನ ಮೂಗು ಎಂದರೆ ವಾಸನೆಯನ್ನು ಗ್ರಹಿಸಲು ಬಳಸುವ ಒಂದು ಇಲೆಕ್ಟ್ರಾನಿಕ್ ಸಾಧನ. ಮನುಷ್ಯರು ಯಾವ ರೀತಿ ವಾಸನೆಯನ್ನು ಗ್ರಹಿಸುತ್ತಾರೋ ಅದೇ ರೀತಿ ಇಲೆಕ್ಟ್ರಾನಿಕ್ ಸಾಧನ ಮೂಲಕ ವಾಸನೆಯನ್ನು ಗ್ರಹಿಸುವ ತಂತ್ರಜ್ಞಾನ ಇದಾಗಿದೆ. ಮನುಷ್ಯರ ಮೂಗಿನಲ್ಲಿ ವಾಸನೆಗೆ ಸ್ಪಂದಿಸುವ ಲಕ್ಷಗಟ್ಟಲೆ ಸಂವೇದಕಗಳಿವೆ. ಸಹಸ್ರಾರು ನಮೂನೆಯ ವಾಸನೆಗಳನ್ನು ಅವು ಪತ್ತೆ ಹಚ್ಚಬಲ್ಲವು. ವಿದ್ಯುನ್ಮಾನ ಮೂಗಿನಲ್ಲಿ ಅಷ್ಟೆಲ್ಲ ಸಂವೇದಕಗಳಿಲ್ಲ. ಅವುಗಳು ಅಷ್ಟೆಲ್ಲ ನಮೂನೆಯ ವಾಸನೆಗಳನ್ನು ಪತ್ತೆಹಚ್ಚಲೂ ಬಾರವು. ಆದರೂ ಅವುಗಳ ಉಪಯೋಗಗಳಿವೆ.
ಮನುಷ್ಯರು ಗ್ರಹಿಸಬಲ್ಲ ವಾಸನೆಗಳನ್ನು ಎಂಟು ವಿಭಾಗಗಳಾಗಿಸಬಹುದು. ಅವುಗಳೆಂದರೆ – ಮಣ್ಣು, ಹೂವು, ಹಣ್ಣು, ಮಸಾಲೆ, ಮೀನು, ಚರಂಡಿ ಗಲೀಜು, ಔಷಧಿ ಮತ್ತು ರಾಸಾಯನಿಕ. ಇವು ಪ್ರಮುಖ ವಿಭಾಗಗಳು. ಇವುಗಳೊಳಗೆ ಹಲವು ಉಪ ವಿಭಾಗಗಳಿವೆ. ಉದಾಹರಣೆಗೆ ಹೂವು ಎಂಬುದನ್ನು ತೆಗೆದುಕೊಳ್ಳೋಣ. ಕಣ್ಣು ಮುಚ್ಚಿ ಯಾವುದಾದರೊಂದು ಹೂವನ್ನು ನಮ್ಮ ಮೂಗಿನ ಮುಂದೆ ಹಿಡಿದರೆ ಅದು ಹೂವು ಎಂದು ಮಾತ್ರವಲ್ಲ -ಮಲ್ಲಿಗೆ, ಸಂಪಿಗೆ, ಗುಲಾಬಿ, ಇತ್ಯಾದಿಯಾಗಿ ಯಾವ ಹೂವು ಎಂದೂ ನಾವು ಗುರುತಿಸಬಲ್ಲೆವು. ನಮ್ಮ ಮೂಗಿನಲ್ಲಿರುವ ಲಕ್ಷಗಟ್ಟಲೆ ಸಂವೇದಕಗಳಲ್ಲಿ ಬೇರೆ ಬೇರೆ ವಾಸನೆಯನ್ನು ಗ್ರಹಿಸಲು ಬೇರೆ ಬೇರೆ ಸಂವೇದಕಗಳಿವೆ.
ವಿದ್ಯುನ್ಮಾನ ಮೂಗಿನಲ್ಲೂ ಹಲವಾರು ಸಂವೇದಕಗಳಿವೆ. ಬೇರೆ ಬೇರೆ ವಾಸನೆಗೆ ಬೇರೆ ಬೇರೆ ಸಂವೇದಕಗಳು ಸ್ಪಂದಿಸುತ್ತವೆ. ಇವು ಬಹುತೇಕ ವಿದ್ಯುತ್ತನ್ನು ಪ್ರವಹಿಸಬಲ್ಲ ಪಾಲಿಮರುಗಳಾಗಿರುತ್ತವೆ. ಬಹುತೇಕ ಸ್ಪಂಜಿನ ಮಾದರಿಯಲ್ಲಿರುತ್ತವೆ. ವಾಸನೆಯ ಗಾಳಿ ಅದರ ಮೇಲೆ ಹಾದಾಗ ಅದು ಉಬ್ಬುತ್ತದೆ. ಇದರಿಂದಾಗಿ ಅದರಲ್ಲಿ ಪ್ರವಹಿಸುವ ವಿದ್ಯುತ್ ಸಂಚಾರದಲ್ಲಿ ಏರುಪೇರಾಗುತ್ತದೆ. ಈ ಏರುಪೇರು ಯಾವ ವಾಸನೆಗೆ ಎಷ್ಟು ಎಂದು ಮೊದಲು ಅಳತೆ ಮಾಡಿ ನಿಗದಿ ಮಾಡಿರುತ್ತಾರೆ. ನಂತರ ಈ ಕೋಷ್ಟಕ ಬಳಸಿ ಯಾವ ವಾಸನೆ ಎಷ್ಟಿದೆ ಎಂದು ಮಾಪನ ಮಾಡುತ್ತಾರೆ.
ವಿದ್ಯುನ್ಮಾನ ಮೂಗುಗಳಲ್ಲಿ ಮೂರು ಅಂಗಗಳಿರುತ್ತವೆ. ಮೊದಲನೆಯದು ಯಾವುದರ ವಾಸನೆಯನ್ನು ಗ್ರಹಿಸಬೇಕೋ ಆ ವಸ್ತುವನ್ನು ಊಡಿಸುವ ಅಂಗ. ಊಡಿಕೆ ಗಾಳಿಯ ಅಥವಾ ಆವಿಯ ರೂಪದಲ್ಲಿರುತ್ತದೆ. ಘನ ವಸ್ತುಗಳ ವಾಸನೆಯನ್ನು ವಿದ್ಯುನ್ಮಾನ ಮೂಗು ಗ್ರಹಿಸಲಾರದು. ವಾಸನೆಯನ್ನು ಗ್ರಹಿಸಬೇಕಾದರೆ ಆ ವಸ್ತು ಸಂವೇದಕವನ್ನು ತಲುಪಬೇಕು. ಇದಕ್ಕಾಗಿ ಆ ವಸ್ತು ಆವಿಯ ರೂಪದಲ್ಲಿರಬೇಕು. ಇದು ಮಾನವರ ಮೂಗಿಗೂ ಅನ್ವಯಿಸುತ್ತದೆ. ಎರಡನೆಯ ಅಂಗ ವಾಸನೆಯನ್ನು ಗ್ರಹಿಸುವ ಅಂಗ. ಅದು ಹೇಗಿರುತ್ತದೆ ಎಂದು ಈಗಾಗಲೇ ವಿವರಿಸಿದ್ದೇನೆ. ಮೂರನೆಯ ಅಂಗ ಯಾವ ವಾಸನೆ ಎಷ್ಟಿದೆ ಎಂದು ಲೆಕ್ಕ ಹಾಕುವ ಅಂಗ ಅರ್ಥಾತ್ ಕಂಪ್ಯೂಟರ್.
ಚಾಲಕರು ಹೆಂಡ ಕುಡಿದು ವಾಹನ ಚಲಾಯಿಸುತ್ತಿದ್ದಾರೋ ಎಂದು ರಸ್ತೆ ಬದಿಯಲ್ಲಿ ವಾಹನಗಳನ್ನು ಅಡ್ಡಗಟ್ಟಿ ಪೋಲೀಸರು ಪರೀಕ್ಷಿಸುತ್ತಾರಲ್ಲ? ಅದನ್ನು ವಿದ್ಯುನ್ಮಾನ ಮೂಗನ್ನು ಬಳಸಿ ಮಾಡುತ್ತಾರೆ. ಚಾಲಕರಿಗೆ ಒಂದು ಸಾಧನದ ಪೈಪಿಗೆ ಊದಲು ಹೇಳುತ್ತಾರೆ. ಹಾಗೆ ಊದಿದಾಗ ಬಾಯಿಯಿಂದ ಹೊರಬರುವ ಗಾಳಿ ಆ ಯಂತ್ರದೊಳಕ್ಕೆ ಹೋಗುತ್ತದೆ. ಆ ಯಂತ್ರವು ಮದ್ಯದ ವಾಸನೆಗೆ ಸ್ಪಂದಿಸುವ ಸಂವೇದಕವನ್ನು ಹೊಂದಿರುತ್ತದೆ. ಅಂದರೆ ಅದು ಬೇರೆ ವಾಸನೆಗಳನ್ನು ಗ್ರಹಿಸಲಾರದು. ಮದ್ಯದ ವಾಸನೆ ಆ ಗಾಳಿಯಲ್ಲಿ ಇದ್ದರೆ ಅಲ್ಲಿರುವ ಸಂವೇದಕವು ಸ್ಪಂದಿಸಿ ವಿದ್ಯುತ್ ಪ್ರವಾಹದಲ್ಲಿ ಏರಿಳಿತಗಳಾಗುತ್ತವೆ. ಈ ಏರಿಳಿತವನ್ನು ಅಳತೆಯ ಕೋಷ್ಟಕ ನೋಡಿ ತಾಳೆ ಹಾಕಿ ಎಷ್ಟು ಪ್ರಮಾಣದ ಮದ್ಯ ಊದಿದ ಗಾಳಿಯಲ್ಲಿದೆ ಎಂದು ಅದು ಲೆಕ್ಕ ಹಾಕಿ ತೋರಿಸುತ್ತದೆ. ಅದರ ಪ್ರಕಾರ ಪೋಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಾರೆ. ಆ ಸಾಧನವು ಮದ್ಯದ ವಾಸನೆಗೆ ಮಾತ್ರ ಸ್ಪಂದಿಸುತ್ತದೆ. ಬೇರೆ ವಾಸನೆಯನ್ನು ಅದು ಗ್ರಹಿಸುವುದಿಲ್ಲ. ಬೇರೆ ವಾಸನೆ ಎಷ್ಟಿದ್ದರೂ ಅದರ ಗಣನೆಗೆ ಬರುವುದಿಲ್ಲ. ಅಂದರೆ ಮದ್ಯದ ವಾಸನೆ ಬರಬಾರದು ಎಂದು ಮದ್ಯ ಸೇವಿಸಿದವರು ಮಿಂಟ್, ಏಲಕ್ಕಿ ಇತ್ಯಾದಿ ತಿಂದರೂ ಪ್ರಯೋಜನವಿಲ್ಲ.
ಮನುಷ್ಯರು ಲಕ್ಷಗಟ್ಟಲೆ ವಿಧದ ವಾಸನೆಗಳನ್ನು ಗುರುತಿಸಬಲ್ಲರು, ಅವುಗಳನ್ನು ಗ್ರಹಿಸಬಲ್ಲರು. ಆದರೆ ವಿದ್ಯುನ್ಮಾನ ಮೂಗು ಗ್ರಹಿಸಬಲ್ಲ ವಾಸನೆಗಳು ನೂರನ್ನು ಮೀರಲಾರವು. ಆದರೂ ಅವುಗಳ ಉಪಯೋಗಗಳಿವೆ. ಒಂದು ಉಪಯೋಗವನ್ನು ಈಗಾಗಲೇ ವಿವರಿಸಿದ್ದೇನೆ. ಫ್ಯಾಕ್ಟರಿಗಳಲ್ಲಿ ತಯಾರಾಗುವ ರಾಸಾಯನಿಕ ವಸ್ತುಗಳ ಗುಣಮಟ್ಟವನ್ನು ಅಳೆಯಲು, ಉದ್ಯಮದಲ್ಲಿ ಬಳೆಕಯಾಗುವ (ಮೂಲ)ವಸ್ತುಗಳ ಗುಣಮಟ್ಟವನ್ನು ಅಳೆಯಲು, ಬೇರೆ ಬೇರೆ ಬ್ಯಾಚ್‌ಗಳಲ್ಲಿ ತಯಾರಾಗುವ (ರಾಸಾಯನಿಕ) ವಸ್ತುಗಳು ಒಂದೇ ಗುಣಮಟ್ಟವನ್ನು ಹೊಂದಿವೆ ಎಂದು ಖಾತ್ರಿಪಡಿಸಿಕೊಳ್ಳಲು, ರಾಸಾಯನಿಕ ವಸ್ತುಗಳಲ್ಲಿ ಆಗಿರಬಹುದಾದ ಪ್ರದೂಷಣವನ್ನು ಪರಿಶೀಲಿಸಲು, ಮಾಂಸ ಉದ್ದಿಮೆಯಲ್ಲಿ ತಯಾರಾಗುವ ಮಾಂಸದ ಗುಣಮಟ್ಟವನ್ನು ಪರಿಶೀಲಿಸಲು, ಹೀಗೆ ಹಲವು ರಿತಿಯಲ್ಲಿ ಉದ್ದಿಮೆಗಳಲ್ಲಿ ವಿದ್ಯುನ್ಮಾನ ಮೂಗನ್ನು ಬಳಕೆ ಮಾಡಬಹುದು. ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಬ್ಯಾಗುಗಳಲ್ಲಿ ಪ್ರತಿಬಂಧಿತ ರಾಸಾಯನಿಕ ವಸ್ತುಗಳು, ಉದಾಹರಣೆಗೆ ಮಾದಕ ಔಷಧಿಗಳು, ಇದೆಯೋ ಎಂದು ಪರಿಶೀಲಿಸಲು, ಕ್ಯಾನ್ಸರ್ ಅನ್ನು ಪ್ರಾರಂಭಿಕ ಹಂತದಲ್ಲೇ ಪತ್ತೆ ಹಚ್ಚಲು, ಮಾನವರು ಪ್ರವೇಶಿಸಲು ಸಾಧ್ಯವಿಲ್ಲದ ರಾಸಾಯನಿಕ ವಸ್ತುಗಳು ಇರುವ ಪ್ರದೇಶದಲ್ಲಿ ಬಳಕೆ – ಹೀಗೆ ಹಲವು ರೀತಿಯಲ್ಲಿ ವಿದ್ಯುನ್ಮಾನ ಮೂಗಿನ ಬಳಕೆ ಆಗುತ್ತದೆ.
–ಡಾ| ಯು.ಬಿ. ಪವನಜ
gadgetloka @ gmail . com
Be First to Comment