“ನನಗೊಂದು ಪೈಥೋನ್ ಪ್ರೋಗ್ರಾಂ ಬರೆದುಕೊಡು”
“ನನಗೆ ಬೋರ್ ಆಗಿದೆ, ಏನು ಮಾಡಲಿ?”
“ಇಡ್ಲಿ ಯಾಕೆ ಜಗತ್ತಿನ ಸರ್ವಶ್ರೇಷ್ಠ ತಿಂಡಿಯಾಗಿದೆ?”
“ನನಗೊಂದು ಕವನ ಸೃಷ್ಠಿಸಿ ಕೊಡು”
ಇವೆಲ್ಲ ಆದೇಶಗಳನ್ನು ನೀವು ನಿಮ್ಮ ಸಹಾಯಕನಿಗೆ ನೀಡುತ್ತಿಲ್ಲ. ಬದಲಿಗೆ ಕೃತಕ ಬುದ್ಧಿಮತ್ತೆಯ ಮೂಲಕ ಕೆಲಸ ಮಾಡುವ ಒಂದು ಅತ್ಯಾಧುನಿಕ ಚಾಟ್ ಇಂಜಿನ್‌ಗೆ ಹೇಳುತ್ತೀರಿ. ಅದು ಸಂದರ್ಭಕ್ಕೆ ಸರಿಯಾಗಿ ಬಹುಮಟ್ಟಿಗೆ ಸರಿಯೆನಿಸುವಂತಹ ಪ್ರತಿಕ್ರಿಯೆ ನೀಡುತ್ತದೆ. ಈ ಕೃತಕ ಬುದ್ಧಿಮತ್ತೆಯ ಚಾಟ್ ಇಂಜಿನ್ ಸದ್ಯಕ್ಕೆ ಅಂತರಜಾಲದಲ್ಲಿ ಬಹುದೊಡ್ಡ ಸುದ್ದಿಯಾಗಿದೆ. ಇದರ ಹೆಸರು ಚಾಟ್‌ಜಿಪಿಟಿ (ChatGPT). ಏನಿದು ಎಂದು ಈ ಸಂಚಿಕೆಯಲ್ಲಿ ತಿಳಿಯೋಣ.

ಆನ್‌ಲೈನ್ ಮೂಲಕ ಯಾವುದಾದರೂ ಉತ್ಪನ್ನ ಕೊಳ್ಳುವ ಮೊದಲು ಆ ಜಾಲಮಳಿಗೆಯಲ್ಲಿ ನಮ್ಮೊಡನೆ ಮಾತುಕತೆ ನಡೆಸಿ ಎಂದು ಒಂದು ಮೂಲೆಯಲ್ಲಿ ಬರೆದುದನ್ನು ಗಮನಿಸಿ ಅಲ್ಲಿ ಕ್ಲಿಕ್ ಮಾಡಿ ಮಾತುಕತೆ ನಡೆಸಿದ ನೆನಪಿರಬಹುದು. ಬಹುತೇಕ ಸಂದರ್ಭಗಳಲ್ಲಿ ಇದು ಜೀವಂತ ವ್ಯಕ್ತಿಯಾಗಿರದೆ ಒಂದು ಸ್ವಯಂಚಾಲಿತ ತಂತ್ರಾಂಶ ಆಗಿರುತ್ತದೆ. ಇಂತಹ ತಂತ್ರಾಂಶಗಳಿಗೆ ಚಾಟ್‌ಬೋಟ್ (chatbot) ಎನ್ನುತ್ತಾರೆ. ಇಲ್ಲಿ ಬೋಟ್ ಎನ್ನುವುದು ರೋಬೋಟ್ ಎನ್ನುವುದರ ಕಿರುರೂಪ. ಇಲ್ಲಿ ರೋಬೋಟ್ ಎನ್ನುವುದು ನೀವು ಅಂದುಕೊಂಡ ಯಂತ್ರಮಾನವ ಅಲ್ಲ. ಬದಲಿಗೆ ಒಂದು ತಂತ್ರಾಂಶ. ಚಿಕ್ಕದಾಗಿ ಹೇಳುವುದಾದರೆ ಸಾಫ್ಟ್‌ವೇರ್ ರೋಬೋಟ್‌ಗೆ ಬೋಟ್ ಎನ್ನುತ್ತಾರೆ. ಚಾಟ್ (ಮಾತುಕತೆ) ಮಾಡಲು ಬಳಸುವ ಸಾಫ್ಟ್‌ವೇರ್ ರೋಬೋಟ್‌ಗೆ ಚಾಟ್‌ಬೋಟ್ ಎನ್ನುತ್ತಾರೆ. ಈ ಚಾಟ್‌ಬೋಟ್‌ಗಳು ಅಷ್ಟೇನು ಬುದ್ಧಿವಂತವಾಗಿಲ್ಲ. ಬಹುತೇಕ ಸಂದರ್ಭಗಳಲ್ಲಿ ಎಲ್ಲೆಲ್ಲೋ ಸುತ್ತಿಸಿ ಕೊನೆಗೂ ನಮಗೆ ಬೇಕಾದ ಮಾಹಿತಿ ದೊರೆಯುವುದಿಲ್ಲ. ಈ ಸಮಸ್ಯೆಗೆ ಒಂದು ಮಟ್ಟಿನ ಪರಿಹಾರವಾಗಿ ಈ ಚಾಟ್‌ಜಿಪಿಟಿ ಬಂದಿದೆ. ಏನದು ಎಂದು ತಿಳಿಯೋಣ.
ಚಾಟ್‌ಜಿಪಿಟಿ ಎಂಬುದು ಒಂದು ಕೃತಕ ಬುದ್ಧಿಮತ್ತೆ ಮೂಲಕ ಮಾತುಕತೆ ನಡೆಸುವ ಒಂದು ತಂತ್ರಾಂಶ, ಅಥವಾ ಕೃತಕಬುದ್ಧಿವಂತ ಚಾಟ್‌ಬೋಟ್. ಕೃತಕ ಬುದ್ಧಿಮತ್ತೆ (artificial intelligence) ಎನ್ನುವುದು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇತ್ತೀಚೆಗೆ ತುಂಬ ಸುದ್ದಿ ಮಾಡುತ್ತಿರುವ ವಿಷಯ. ಇದರಲ್ಲಿ ಯಂತ್ರಗಳು ತಾವೇ ವಿಷಯಗಳನ್ನು ಅರ್ಥಮಾಡಿಕೊಂಡು, ಅವುಗಳಿಗೆ ಸ್ಪಂದಿಸಿ, ತಾವೇ ತೀರ್ಮಾನ ತೆಗೆದುಕೊಂಡು ಕೆಲಸ ಮಾಡುತ್ತವೆ. ಕೆಲವು ಪ್ರಮುಖ ಉದಾಹರಣೆಗೆಳು – ಯಂತ್ರಾನುವಾದ, ಪಠ್ಯದಿಂದ ಧ್ವನಿಗೆ ಹಾಗೂ ಧ್ವನಿಯಿಂದ ಪಠ್ಯಕ್ಕೆ ಪರಿವರ್ತನೆ, ಚಿತ್ರದಿಂದ ಪಠ್ಯಕ್ಕೆ, ಇತ್ಯಾದಿ.
ಚಾಟ್‌ಜಿಪಿಟಿಯಲ್ಲಿ ಜಿಪಿಟಿ ಎಂದರೆ Generative Pre-trained Transformer. ಇದೊಂದು ಚಾಟ್‌ಬೋಟ್ ಅಂದರೆ ಕೃತಕ ಬುದ್ಧಿಮತ್ತೆ ಮೂಲಕ ಮಾತುಕತೆ ನಡೆಸುವ ಒಂದು ತಂತ್ರಾಂಶ. ಇತರೆ ಚಾಟ್‌ಬೋಟ್‌ಗಳಿಗಿಂತ ಇದು ತುಂಬ ವಿಭಿನ್ನ. ಅವುಗಳೆಲ್ಲ ಮಾಮೂಲಿ ಪ್ರಶ್ನೆ – ಉತ್ತರ ಮಾದರಿಯಲ್ಲಿ ಕೆಲಸ ಮಾಡುತ್ತವೆ. ಅವುಗಳ ದತ್ತಾಂಶಸಂಗ್ರಹದಲ್ಲಿರುವ ಪ್ರಶ್ನೆಗಳಿಗೆ ಮಾತ್ರ ಅವು ಅಲ್ಲಿರುವ ಉತ್ತರಗಳ ಸಂಗ್ರಹದಿಂದ ಆರಿಸಿ ಉತ್ತರಿಸಬಲ್ಲವು. ಆದರೆ ಚಾಟ್‌ಜಿಪಿಟಿ ಹಾಗಲ್ಲ. ಅದರಲ್ಲಿ ಈಗಾಗಲೇ ಲಕ್ಷಾಂತರ ಮಾಹಿತಿ ಇರುವುದೇನೋ ಸರಿಯೇ. ಅದು ಅಲ್ಲಿಂದ ಮುಂದುವರೆದು ಪ್ರಶ್ನೆಗಳಿಗೆ ತಾನೇ ವಿಶ್ಲೇಷಿಸಿ ಬಹುಮಟ್ಟಿಗೆ ಮನುಷ್ಯರು ಉತ್ತರಿಸುವ ಮಾದರಿಯಲ್ಲೇ ಉತ್ತರಿಸಬಲ್ಲುದು.
ಚಾಟ್‌ಜಿಪಿಟಿ ಮುಕ್ತ ಕೃತಕಬುದ್ಧಿಮತ್ತೆಯ ಒಕ್ಕೂಟದ ಉತ್ಪನ್ನ ಎನ್ನಬಹುದು. ಇದನ್ನು OpenAI ಎನ್ನುತ್ತಾರೆ. ಇದು ಬಹುಮಟ್ಟಿಗೆ ಮುಕ್ತ ತಂತ್ರಾಂಶ ಮತ್ತು ಮುಕ್ತಜ್ಞಾನದ ಸಮೀಪವರ್ತಿ ಎನ್ನಬಹುದು. ಮುಕ್ತಜ್ಞಾನದ ವಿಕಿಪೀಡಿಯ ನಿಮಗೆಲ್ಲರಿಗೂ ತಿಳಿದೇ ಇರಬಹುದು. ಈ ಓಪನ್‌ಏಐಗೆ ಹಲವರು ಹಣ ಹಾಕಿದ್ದಾರೆ. ಇದನ್ನು ಪ್ರಾರಂಭಿಸಿದವರಲ್ಲಿ ಎಲೊನ್ ಮಸ್ಕ್ ಕೂಡ ಒಬ್ಬರು. ಜಗತ್ತಿನ ಅತಿ ಶ್ರೀಮಂತರಲ್ಲೊಬ್ಬರಾದ ಎಲೊನ್ ಮಸ್ಕ್ ಗೊತ್ತಿರಬಹುದು. ಸ್ಪೇಸ್‌ಎಕ್ಸ್ ಮತ್ತು ಟೆಸ್ಲಾಗಳಿಂದ ಮತ್ತು ಇತ್ತೀಚೆಗೆ ಟ್ವಿಟ್ಟರ್ ಕೊಳ್ಳುವುದರ ಮೂಲಕ ಅವರ ಹೆಸರು ಪ್ರಖ್ಯಾತವಾಗಿದೆ. ಎಲೊನ್ ಮಸ್ಕ್ ಈಗ ಓಪನ್‌ಏಐಯ ನಿರ್ದೇಶಕ ಮಂಡಳಿಯಲ್ಲಿಲ್ಲ. ಆದರೆ ಅದಕ್ಕೆ ಹಣ ಹಾಕಿದ್ದಾರೆ. ಓಪನ್‌ಏಐಗೆ ಮೈಕ್ರೋಸಾಫ್ಟ್‌ನಂತಹ ದೈತ್ಯ ಕೂಡ ಹಣ ಹಾಕಿದೆ. ಇದು ಭವಿಷ್ಯದಲ್ಲಿ ದೊಡ್ಡ ಹೆಸರು ಮಾಡಲಿದೆ. ಚಾಟ್‌ಜಿಪಿಟಿ ಪ್ರಾರಂಭ ಎನ್ನಬಹುದು.
ಚಾಟ್‌ಜಿಪಿಟಿಯು ಮನುಷ್ಯರು ನಡೆಸುವ ಸಂಭಾಷಣೆಯನ್ನು ಅನುಕರಿಸಲು ತಯಾರಾದುದು. ಅದು ಬಹುಮಟ್ಟಿಗೆ ಇದರಲ್ಲಿ ಯಶಸ್ವಿಯೂ ಆಗಿದೆ. ಪತ್ರಕರ್ತರು ಇದನ್ನು ತಮಗೆ ತಿಳಿಯದ ಹಲವು ವಿಷಯಗಳನ್ನು ತಿಳಿಯಲು ಬಳಸುತ್ತಿದ್ದಾರೆ. ಇದು ಒಂದು ರೀತಿಯಲ್ಲಿ ಗೂಗ್ಲ್ ಅನುವಾದದಂತೆ. ಇದು ನೀಡುವ ಉತ್ತರಗಳು ಸಂಪೂರ್ಣ ಸತ್ಯವಾಗಿರಬೇಕಾಗಿಲ್ಲ. ಆದರೂ ಆ ಉತ್ತರಗಳನ್ನು ಪ್ರಾರಂಭದ ಹೆಜ್ಜೆಯಂತೆ ಬಳಸಬಹುದು. ಗೂಗ್ಲ್ ಅನುವಾದವೂ ಅಂತೆಯೇ. ಅದನ್ನು ಪ್ರಾರಂಭದ ಹಂತದಂತೆ ಬಳಸಬಹುದು. ಚಾಟ್‌ಜಿಪಿಟಿ ಬುದ್ಧಿವಂತ ಎಂದೆನಲ್ಲ. ಅದು ಮಾತುಕತೆ ನಡೆಸುತ್ತ ತನ್ನನ್ನು ತಾನೆ ಸುಧಾರಿಸಿಕೊಳ್ಳುತ್ತದೆ. ಈ ಒಂದು ಗುಣವೈಶಿಷ್ಟ್ಯವು ಚಾಟ್‌ಜಿಪಿಟಿಯನ್ನು ತುಂಬ ಉಪಯುಕ್ತ ಮಾಡಲಿದೆ. ಈಗಾಗಲೇ ಅದು ತುಂಬ ಕಲಿತಿದೆ. ಒಂದು ವಾರದ ಹಿಂದೆ ನಾನು ಅದಕ್ಕೆ ಕೇಳಿದ ಪ್ರಶ್ನೆಗಳಿಗೆ ಅದು ನೀಡಿದ ಉತ್ತರಗಳಿಗಿಂತ ಅದು ಈಗ ನೀಡುತ್ತಿರುವ ಉತ್ತರಗಳು ಹೆಚ್ಚು ಉಪಯುಕ್ತವಾಗಿವೆ.
ಚಾಟ್‌ಜಿಪಿಟಿಗೆ ನಾನು ಕೇಳಿದ ಕೆಲವು ಪ್ರಶ್ನೆಗಳು ಮತ್ತು ಅದು ನೀಡಿದ ಉತ್ತರಗಳು ಇಲ್ಲಿವೆ. ಅದು ಇನ್ನೂ ಕನ್ನಡ ಕಲಿತಿಲ್ಲ. ಇಂಗ್ಲಿಷಿನಲ್ಲಿ ನಡೆದ ಮಾತುಕತೆಗಳ ಸಾರಾಂಶವನ್ನು ಕನ್ನಡದಲ್ಲಿ ನೀಡುತ್ತಿದ್ದೇನೆ.
“ಇಡ್ಲಿ ಯಾಕೆ ಜಗತ್ತಿನ ಸರ್ವಶ್ರೇಷ್ಠ ತಿಂಡಿಯಾಗಿದೆ?”
“ಇಡ್ಲಿ ಒಂದು ದಕ್ಷಿಣಭಾರತೀಯ ಪಾರಂಪರಿಕ ತಿಂಡಿಯಾಗಿದೆ. ಇದು ತುಂಬ ಆರೋಗ್ಯದಾಯಕ ಮತ್ತು ಪೌಷ್ಠಿಕಾಂಶಗಳಿಂದ ಕೂಡಿದ್ದು ಎಂದು ಭಾವಿಸಲಾಗುತ್ತಿದೆ. ಯಾಕೆಂದರೆ ಅದರಲ್ಲಿ ಪ್ರೊಟೀನ್ ತುಂಬ ಇದೆ ಹಾಗೂ ಜಿಡ್ಡಿನ ಅಂಶಗಳಿಲ್ಲ. ಅದು ಸುಲಭವಾಗಿ ಜೀರ್ಣವಾಗುತ್ತದೆ. ಅದು ಸಂಪೂರ್ಣ ಸಸ್ಯಾಹಾರವಾಗಿದ್ದು ಯಾವುದೇ ಪ್ರಾಣಿಜನ್ಯ ಆಹಾರ ಅದರಲ್ಲಿಲ್ಲ.”
“ನ್ಯೂಟನ್‌ಗೆ ಯಾಕೆ ನೋಬೆಲ್ ಪುರಸ್ಕಾರ ದೊರೆಯಲಿಲ್ಲ?”
“ನೋಬೆಲ್ ಪುರಸ್ಕಾರವನ್ನು 1901ರಲ್ಲಿ ಸ್ಥಾಪಿಸಲಾಯಿತು. ನ್ಯೂಟನ್ 1727ರಲ್ಲೇ ಮರಣ ಹೊಂದಿದ್ದರು. ನ್ಯೂಟನ್ ಕಾಲದಲ್ಲಿ ನೋಬೆಲ್ ಪುರಸ್ಕಾರ ಇರಲಿಲ್ಲ.”
“5 ಶ್ರೇಷ್ಠ ದಕ್ಷಿಣಭಾರತೀಯ ಆಹಾರಗಳನ್ನು ಹೆಸರಿಸು”
“ದೋಸೆ, ಇಡ್ಲಿ, ಒಡೆ, ಉಪ್ಪಿಟ್ಟು, ಸಾಂಬಾರು”.
ಕನ್ನಡದಲ್ಲೇ ಪ್ರಶ್ನೆ ಕೇಳಿದರೆ ಅದು ಅದನ್ನು ಗೂಗ್ಲ್ ಅನುವಾದ ಬಳಸಿ ಇಂಗ್ಲಿಷಿಗೆ ಅನುವಾದಿಸಿ ದೊರೆತ ಉತ್ತರವನ್ನು ಮತ್ತೆ ಕನ್ನಡಕ್ಕೆ ಅನುವಾದಿಸಿ ನೀಡುತ್ತದೆ. ಬಹುತೇಕ ಸಂದರ್ಭಗಳಲ್ಲಿ ಇದು ಅಸಂಬದ್ಧವಾಗಿರುತ್ತದೆ. ಅದು ಕನ್ನಡವನ್ನೂ ಕಲಿಯುವ ಕಾಲ ದೂರವಿಲ್ಲ.
–ಡಾ| ಯು.ಬಿ. ಪವನಜ
gadgetloka @ gmail . com
ದಿ : 07-01-2023
Be First to Comment