ಸ್ಫೂರ್ತಿವನ: ಹೊಸ ಬಗೆಯ ಸಾಫ್ಟ್‌ವೇರ್ ಪಾರ್ಕ್?
– ನಾಗೇಶ ಹೆಗಡೆ
ಬೆಂಗಳೂರಿನಲ್ಲಿ ಒಂದು ‘ನೆನಪಿನ ವನ’ ಸೃಷ್ಟಿಯಾಗುತ್ತಿದೆ. ವಿಸ್ತೀರ್ಣದಲ್ಲಿ ಲಾಲ್‌ಬಾಗನ್ನೂ ಮೀರಿಸುವ ಇದು ಜನರೇ ನಿರ್ಮಿಸುವ ಉದ್ಯಾನವಾಗಲಿದೆ. ಬೆಂಗಳೂರಿನ ಪರಿಸರ ಹದಗೆಡಲು ಸಾಫ್ಟ್‌ವೇರ್ ಕಂಪನಿಗಳೇ ಕಾರಣ ಎಂಬ ಆಪಾದನೆಯನ್ನು ತುಸು ಮಟ್ಟಿಗಾದರೂ ತೊಡದು ಹಾಕುವ ನಿಟ್ಟಿನಲ್ಲಿ ಖ್ಯಾತ ಸಾಫ್ಟ್‌ವೇರ್ ಕಂಪನಿಯೊಂದರ ಉದ್ಯೋಗಿಗಳು ಸ್ವಯಂಸ್ಫೂರ್ತಿಯಿಂದ ಇಲ್ಲಿ ಗಿಡ ನೆಡಲು ಬಂದಿದ್ದಾರೆ. ಈ ಯತ್ನದ ಹಿಂದಿರುವ ಈಶ್ವರ್ ಪ್ರಸಾದ್ ಎಂಬ ಒಬ್ಬ ವ್ಯಕ್ತಿ, ಒಂದು ಶಕ್ತಿಯ ಪರಿಚಯ ಇಲ್ಲಿದೆ.
ಸುಮಾರು ಇಪ್ಪತ್ತು ವರ್ಷಗಳ ಹಿಂದೆ ಪುಣೆಯಲ್ಲಿ ‘ಮೆಮರಿ ಪಾರ್ಕ್’ ಎಂಬ ಹೊಸ ಕಲ್ಪನೆಯ ಉದ್ಯಾನವೊಂದು ಸೃಷ್ಟಿಯಾಗುತ್ತಿರುವ ಬಗ್ಗೆ ನನ್ನ ಅಂಕಣದಲ್ಲಿ ಬರೆದಿದ್ದೆ. ಅಗಲಿದ ಬಂಧುವಿನ ಹೆಸರಿನಲ್ಲಿ ಒಂದೊಂದು ಗಿಡವನ್ನು ನೆಡುವ ಯೋಜನೆ ಅದಾಗಿತ್ತು. ನಾವು ಜೀವನವಿಡೀ ಇಂಧನಭಕ್ಷಕರಾಗುತ್ತ ಬೆಳೆಯುತ್ತೇವೆ; ಎಣ್ಣೆ ತಿನ್ನುತ್ತೇವೆ, ತುಪ್ಪ ತಿನ್ನುತ್ತೇವೆ; ಕೊಬ್ಬುತ್ತೇವೆ. ಕೊನೆಗೆ ಸತ್ತ ಮೇಲೂ ದೇಹ ಸಂಸ್ಕಾರಕ್ಕೆ ಕಟ್ಟಿಗೆ ಖರೀದಿ ಮಾಡುತ್ತೇವೆ. ನಾವು ಶೇಖರಿಸಿದ್ದನ್ನು ನಿಸರ್ಗಕ್ಕೆ ಮರಳಿಸುವುದು ಯಾವಾಗ? ಸತ್ತವರ ನೆನಪಿಗೆ ಒಂದು ಮರವನ್ನು ಬೆಳೆಸುವುದು ಉತ್ತಮ ಐಡಿಯಾ ಎಂದೇನೊ ಬರೆದಿದ್ದೆ.
ಅದನ್ನು ಓದಿ ಮೈಸೂರಿನಿಂದ ಈಶ್ವರ್ ಪ್ರಸಾದ್ ಎಂಬ ಯುವ ಎಂಜಿನಿಯರ್ ಫೋನ್ ಮಾಡಿದ್ದರು. ‘ನಾಗೇಶಣ್ಣ, ಒಳ್ಳೇ ಐಡಿಯಾ ಕೊಟ್ರಿ. ನಮ್ಮಲ್ಲೂ ಅಂಥದೇ ನೆನಪಿನ ಅರಣ್ಯ ಬೆಳೆಸಬೇಕು ಅಂತಿದೀನಿ’ ಎಂದರು. ಗೆಳೆಯರ ಜತೆ ಕೂಡಿ ಗಿಡ ಮರ ಬೆಳೆಸುವ ಕೆಲಸಕ್ಕೆ ಇಳಿದಾಗಲೆಲ್ಲ ನನ್ನನ್ನೂ ಮೈಸೂರಿಗೆ ಕರೆಯುತ್ತಿದ್ದರು. ಮಾತು ತುಸು ಒರಟು. ಆದರೆ ಅಪ್ಪಟ ಪರಿಸರ ಪ್ರೇಮ. ‘ಒಂಥರಾ ಹುಚ್ಚು’ ಅಂತೀವಲ್ಲ, ಹಾಗೆ. ನನ್ನ ಪುಸ್ತಕ ಪ್ರಕಟವಾದಾಗಲೆಲ್ಲ ಹತ್ತಿಪ್ಪತ್ತು ಪ್ರತಿ ಖರೀದಿಸಿ ಗೆಳೆಯರಿಗೆ ಹಂಚುವವರು. ತೇಜಸ್ವಿ ಬರಹಗಳೆಂದರೆ ಮಹಾ ಗೀಳು. ಕಟ್ಟಿಗೆ ಉಳಿತಾಯ ಮಾಡಲೆಂದು ‘ನಿರಂತರ’ ಹೆಸರಿನಲ್ಲಿ ಚಿಕ್ಕ ಮಗಳೂರಿನಲ್ಲಿ ಕಾಫಿ ಸಿಪ್ಪೆಯನ್ನು ಒತ್ತಿ ಸೌದೆ ಇಟ್ಟಿಗೆ (ಫ್ಯುಯೆಲ್ ಬ್ರಿಕ್ಸ್) ಮಾಡಲೆಂದು ನಾಲ್ಕಾರು ವರ್ಷ ಗುದ್ದಾಡಿ, ಕೈ ಸುಟ್ಟುಕೊಂಡವರು. ಗಣಿ ಅಗೆತದಿಂದಾಗಿ ಗಿಡಮರ ನಾಶ ಆದಲ್ಲೆಲ್ಲ ಗೆಳೆಯರೊಂದಿಗೆ ಹೋಗಿ ಪ್ರತಿಭಟಿಸಿ ಬರುವ ಉತ್ಸಾಹ. ಅನ್ಯಾಯ, ಅತಿಯಾಸೆ, ಅತಿಕ್ರಮಣ, ಅತಿಭಕ್ಷಣೆ ಏನೇ ಕಂಡರೂ ‘ಬೋಳಿ ಮಕ್ಕಳ್ರಾ’ ಎಂದು ಅದೇ ಒರಟು ಭಾಷೆಯಲ್ಲಿ ಬೈಯುತ್ತ ಪರಿಸರ ಪ್ರೀತಿಯನ್ನು ತೋರಿಸುವವರು.
ಎರಡು ವರ್ಷಗಳ ಹಿಂದೆ ಮತ್ತೆ ಬೆಂಗಳೂರಿನಲ್ಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷ ಆಗಿ ‘ನಾಗೇಶಣ್ಣ ನಮ್ಮ ಡ್ರೀಮು ನಿಜ ಆಗೋ ಲಕ್ಷಣ ಕಾಣ್ತಿದೆ ಬನ್ನಿ’ ಎಂದು ಒಮ್ಮೆ ಜಲಮಂಡಲಿಯ ಬೋರ್ಡ್‌ರೂಮಿಗೆ ಕರೆದೊಯ್ದರು. ಸಾರ್ವಜನಿಕರ ನೆರವಿನಿಂದಲೇ ತಿಪ್ಪಗೊಂಡನ ಹಳ್ಳಿ (ಟಿಜಿ ಹಳ್ಳಿ) ಜಲಾಶಯದ ಸುತ್ತ ಗಿಡಮರ ಬೆಳೆಸುವ ಯೋಜನೆಯ ಪ್ರಸ್ತಾವನೆಯ ಕುರಿತು ಚರ್ಚೆ ಅಲ್ಲಿ ನಡೆಯುವುದಿತ್ತು. ಅಲ್ಲೊಂದು ಮೆಮರಿ ಫಾರೆಸ್ಟ್ -ನೆನಪಿನ ವನ ಆರಂಭಿಸುವ ಕುರಿತು ನನ್ನನ್ನೂ ಸಲಹಾ ಸಮಿತಿಯ ಸದಸ್ಯನನ್ನಾಗಿ ಈಶ್ವರ ಪ್ರಸಾದ್ ಸೇರಿಸಿದ್ದರು. ಜತೆಗೆ ಅರಣ್ಯ ಇಲಾಖೆ, ಕೃಷಿ ವಿವಿಯ ಸಸ್ಯತಜ್ಞ ಬಾಲಕೃಷ್ಣ, ಚಿರಂಜೀವಿ ಸಿಂಗ್, ವಿಜಯ್‌ಗೋರೆ ಎಲ್ಲ ಇದ್ದರು.
‘ಬರೀ ಸತ್ತವರ ನೆನಪಿಗೆ ಯಾಕೆ, ಇದ್ದು ಜೈಸಿದವರ ನೆನಪಿಗೂ ಗಿಡ ನೆಡೋಣ. ಸವಿನೆನಪಿನ ಯಾವುದೇ ಘಟನೆಯ ನೆಪದಲ್ಲೂ ಗಿಡ ನೆಡೋಣ’ ಎಂದರು ಚಿರಂಜೀವಿ ಸಿಂಗ್. ‘ಇಂಥದ್ದೊಂದು ಮಹತ್ವದ ಸಭೆಗೆ ಅಧ್ಯಕ್ಷನಾದ ಸವಿ ನೆನಪು ನನಗಿರಲಿ; ಈ ಕ್ಷಣದ ನೆನಪಿಗೆ ಮೊದಲ ಗಿಡದ ದೇಣಿಗೆ ನನ್ನದು’ ಎಂದು ಹೇಳಿ ಕರ್ನಾಟಕ ಸರಕಾರದ ನಿವೃತ್ತ ಎಡಿಶನಲ್ ಚೀಫ್ ಸೆಕ್ರೆಟರಿ ವಿಜಯ್ ಗೋರೆ ಐದು ನೂರು ರೂಪಾಯಿಗಳ ಮೊದಲ ದೇಣಿಗೆ ನೀಡಿದರು. ಇಂದಿನವರ ಸುಕೃತ್ಯಗಳೇ ಮುಂದಿನವರಿಗೆ ಸ್ಫೂರ್ತಿಯಾಗುವಂತೆ ಈ ವನಕ್ಕೆ ‘ಸ್ಫೂರ್ತಿವನ’ ಎಂಬ ಹೆಸರಿಡೋಣವೆಂದು ತೀರ್ಮಾನಿಸಲಾಯಿತು.
ನನಗೆ ಆಗಲೇ ಹೊಳೆದಿದ್ದು; ಈ ಈಶ್ವರ್ ಪ್ರಸಾದ್ ತಿಂಗಳಿಂದ ಸರಕಾರಿ ಕಚೇರಿಗಳನ್ನು ಸುತ್ತುತ್ತ ಎಲ್ಲ ಬಗೆಯ ಪೂರ್ವ ಸಿದ್ಧತೆ ಮಾಡಿಕೊಂಡೇ ನನ್ನನ್ನು ಕರೆದಿದ್ದರು. ಜಲಮಂಡಲಿಯ ಒಡೆತನದಲ್ಲಿದ್ದ ಟಿಜಿ ಹಳ್ಳಿ ಜಲಾಶಯದ ಸುತ್ತಲಿನ ೩೫೦ ಎಕರೆ ಕ್ಷೇತ್ರವನ್ನು ಸಾರ್ವಜನಿಕರಿಗೆ ಬಿಟ್ಟುಕೊಡಲು ಮಂಡಲಿ ಒಪ್ಪಿದ್ದು; ಅದಕ್ಕೆ ಕರ್ನಾಟಕ ಸರಕಾರ ಅಂಗೀಕಾರ ಮುದ್ರೆ ಒತ್ತಿದ್ದು; ಅದಕ್ಕೆ ನೆರವು ನೀಡಲು ಅರಣ್ಯ ಇಲಾಖೆ, ಕೃಷಿ ಇಲಾಖೆ ಒಪ್ಪಿದ್ದು; ಅದಕ್ಕೆ ಟಿಜಿ ಹಳ್ಳಿಯ ಸುತ್ತಲಿನ ಜನರ ಸಹಕಾರ ಸಿಗುವಂತೆ ಅಲ್ಲಿನ ಜನಪ್ರತಿನಿಧಿಗಳ ಹಾಗೂ ತಾಲ್ಲೂಕ್ ಪಂಚಾಯ್ತಿಯ ಮನ ಒಲಿಸಿದ್ದು… ಈ ಒಂದೊಂದೂ ವರ್ಷಗಟ್ಟಲೆ ಸಮಯ ಬೇಡುವಂಥದ್ದು. ಅವೆಲ್ಲ ಆಗಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ಅಲ್ಲಿ ಗಿಡ ನೆಡುವ ಮುನ್ನ ಹಿನ್ನೆಲೆ ಸಿದ್ಧತೆಗೆ ಅಂದರೆ ಬೇಲಿ ಹಾಕುವ, ಗುಂಡಿ ತೋಡುವ, ನೀರೊದಗಿಸುವ ಕೆಲಸಗಳ ಆರಂಭಿಕ ವೆಚ್ಚವನ್ನು ಜಲಮಂಡಲಿಯೇ ಭರಿಸಲು ಸಿದ್ಧವಾಗಿದ್ದು. ನಮ್ಮ ಕೆಲಸ ಏನಿತ್ತೆಂದರೆ ಸಹಿ ಹಾಕುವುದಷ್ಟೇ. ಜತೆಗೆ ಜನರ ಮನವೊಲಿಸುವ ಕೆಲಸ ಮಾಡುವುದು. ಏಕೆಂದರೆ, ಒಂದು ಗಿಡವನ್ನು ಮೊಳಕೆ ಬರಿಸಿ, ನರ್ಸರಿ ರೂಪಿಸಿ, ನಾಟಿ ಮಾಡಿ, ನೀರು-ಬೇಲಿಗಳ ರಕ್ಷಣೆ ಒದಗಿಸಿ ಬೆಳೆಸಬೇಕೆಂದರೆ ಕನಿಷ್ಠ ಪ್ರತಿ ಗಿಡಕ್ಕೂ ೫೦೦ ರೂಪಾಯಿ ಬಂಡವಾಳ ಹಾಕಲೇಬೇಕು. ಅಷ್ಟು ಹಣವನ್ನು ಕೊಡಿ ಎಂದರೆ ಸುಲಭಕ್ಕೆ ಯಾರು ಕೊಡುತ್ತಾರೆ? ಮಗುವಿನ ಹುಟ್ಟು ಹಬ್ಬಕ್ಕೆ ಐದು ಸಾವಿರ ಬೇಕಿದ್ದರೂ ಖರ್ಚು ಮಾಡುವ ನಮಗೆ ಒಂದು ಗಿಡಕ್ಕಾಗಿ ೫೦೦ ರೂಪಾಯಿ ನೀಡಬೇಕೆಂದರೆ ಭಾರೀ ಮಾನಸಿಕ ಸಿದ್ಧತೆ ಬೇಕಾಗುತ್ತದೆ. ಬೇಕಿದ್ದರೆ ಮನೆಯಂಗಳದಲ್ಲೇ ಒಂದು ಗಿಡ ನೆಟ್ಟು ಬೆಳೆಸ್ಕೋತೀವಿ ಎಂಬ ಭಾವನೆ ಸಹಜವಾಗಿ ಬರುತ್ತದೆ.
ನಮಗೆಲ್ಲ ಗೊತ್ತೇ ಇದೆ: ಬೆಂಗಳೂರಿನಲ್ಲಿ ‘ಟೆಕ್‌ಪಾರ್ಕ್’ ಪರಿಕಲ್ಪನೆ ಕಾಲಿಟ್ಟಿದ್ದೇ ತಡ, ಉದ್ಯಾನ ನಗರಿ ಎಂಬ ಕೀರ್ತಿ ಮಸಕಾಗುತ್ತ ಹೋಯಿತು. . ಸಾಫ್ಟ್‌ವೇರ್ ಪಾರ್ಕ್‌ಗಳ ಸಂಖ್ಯೆ ಹೆಚ್ಚುತ್ತ ಹೋದಷ್ಟೂ ಪಾರ್ಕ್ ಮಾಡಲೂ ಸ್ಥಳವಿಲ್ಲದಷ್ಟು ವಾಹನ ದಟ್ಟಣೆ ಹೆಚ್ಚುತ್ತ ಹೋಯಿತು. ಇನ್ನು ಅಸಲೀ ಪಾರ್ಕ್‌ಗೆ ಸ್ಥಳವೆಲ್ಲಿ?
ಫುಟ್‌ಪಾಥ್‌ನಲ್ಲಿ ಲೋಕಾಭಿರಾಮ ಹರಟುತ್ತ ಪಾರ್ಕ್‌ವರೆಗೆ ಹೋಗಿ ಸಿಮೆಂಟ್ ಬೆಂಚ್ ಮೇಲೆ ಒಂದೆರಡು ಗಂಟೆ ಕೂತು ಬರುತ್ತಿದ್ದ ಹಿರಿಯ ನಾಗರಿಕರ ಪಾಲಿಗೆ ಈಗಂತೂ ಮನೆಯ ಪಕ್ಕದ ಪಾರ್ಕ್ ವರೆಗೆ ಸಾಗಿ ಹೋಗುವುದೂ ಕಷ್ಟದ ಕೆಲಸವಾಗಿದೆ. ಲಾಲ್‌ಬಾಗ್, ಕಬ್ಬನ್ ಪಾರ್ಕ್, ಕೆನ್ಸಿಂಗ್ಟನ್ ಪಾರ್ಕ್ ಇವೆಲ್ಲ ಕೈಗೆಟುಕದಷ್ಟು ದೂರವಾಗಿವೆ.
ಸಾಫ್ಟ್‌ವೇರ್ ಕಂಪನಿಗಳ ಸಂಖ್ಯೆ ಹೆಚ್ಚುತ್ತ ಹೋದಂತೆಲ್ಲ ಇನ್ನೂ ದೊಡ್ಡ, ಮತ್ತೂ ದೊಡ್ಡ ಹೊಟೆಲ್‌ಗಳ ಬಂದವು; ಬೃಹತ್ ಗಾತ್ರದ ಶಾಪ್ಪಿಂಗ್ ಮಾಲ್‌ಗಳು ಬಂದವು. ರೆಸಾರ್ಟ್‌ಗಳು ಬಂದವು; ಕ್ಲಬ್‌ಗಳು ಬಂದವು. ಮಕ್ಕಳ ಮನರಂಜನೆಗೆ ಮಾಯಾಲೋಕಗಳು ಬಂದವು. ಆದರೆ ಹಿಂದಿನ ಪಾರ್ಕ್‌ಗಳನ್ನು ಮೀರಿಸುವ ಹೊಸ ಉದ್ಯಾನ ಯಾಕೆ ಬಂದಿಲ್ಲ? ನಗರ ಬೆಳೆಯುತ್ತ ಹೋದಂತೆಲ್ಲ ಶುದ್ಧ ಗಾಳಿಯನ್ನು ಒದಗಿಸುವ ಉದ್ಯಾನಗಳ ಸಂಖ್ಯೆ ಕೂಡ ಹೆಚ್ಚಬೇಕಲ್ಲ? ಬಿಸಿ ಗಾಳಿಗೆ ತಂಪೆರೆಯಬಲ್ಲ ಸರೋವರಗಳು ಹೆಚ್ಚಬೇಕಲ್ಲ?
ಹೆಚ್ಚಬೇಕಿತ್ತು. ಆದರೆ ರಿಯಾಲಿಟಿ ಏನೆಂದರೆ ಹೊಸ ಉದ್ಯಾನವನ್ನು ಸೃಷ್ಟಿಸಲು ಸ್ಥಳವೇ ಇಲ್ಲ. ಇನ್ನು ಇದ್ದಬದ್ದ ಕೆರೆಗಳೂ ಒತ್ತುವರಿಯಾಗಿವೆ. ರಸ್ತೆಗಳ ಪಕ್ಕದಲ್ಲಿದ್ದ ಗಿಡಮರಗಳೂ ಕಣ್ಮರೆಯಾಗುತ್ತಿವೆ. ಬೇರೆಡೆ ಹಾಗಿರಲಿ, ಇಂದು ಮನೆ ಎದುರಿಗೆ ಗಿಡ ಬೆಳೆಸುತ್ತೇನೆಂದರೂ ಅವಕಾಶ ತೀರ ಕಡಿಮೆ. ೩೦-೪೦ ಸೈಟ್‌ನಲ್ಲಿ ದೊಡ್ಡ ಮರ ಬೆಳೆಸಲು ಅವಕಾಶವಿಲ್ಲ. ಫುಟ್‌ಪಾತ್ ಮೇಲೆ ಬೆಳೆಸಲು ಹೋದರೆ ಹತ್ತಾರು ಬಗೆಯ ಅಪಾಯಗಳು. ತಂತಿಗಳಿಗೆ ಅವು ಅಡ್ಡ ಬರುತ್ತವೆ. ಕೊಂಬೆ ಕಡಿದರೆ ಮರ ಸಮತೋಲ ಕಳೆದುಕೊಂಡು ಮೈಮೇಲೆ ಬೀಳುವ ಅಪಾಯ. ಇನ್ನು ಕೆಲವರಿಗೆ ವಾಸ್ತು ಚಿಂತೆ; ಬೇರು ಮನೆಯೊಳಕ್ಕೆ ನುಗ್ಗೀತೆಂಬ ಚಿಂತೆ.
ಬೇರೆಲ್ಲಾದರೂ ‘ಸಾರ್ವಜನಿಕ ಸ್ಥಳ’ ಇವೆಯೆ? ಅವೂ ಇಲ್ಲ. ಕ್ರೀಡಾಂಗಣದಲ್ಲಿ ಮರ ಬೆಳೆಸುವಂತಿಲ್ಲ. ಶಾಲಾ ಮೈದಾನದಲ್ಲಿ ಮಕ್ಕಳ ಆಟಕ್ಕೆ ಪಾರ್ಕಿಂಗ್‌ಗೇ ಸ್ಥಳವಿಲ್ಲ. ಗಿಡಮರಗಳನ್ನು ಬೆಳೆಸುವ ಇಚ್ಛೆ ನಾಗರಿಕರಿಗೆ ಇದ್ದರೂ ಎಲ್ಲಿದೆ ಗಿಡಮರ ಬೆಳೆಸುವ ತಾಣ?
ಅಂಥವರಿಗಾಗಿ ‘ಸ್ಫೂರ್ತಿವನ’ ಸಿದ್ಧವಾಗುತ್ತಿದೆ. ‘ಪರಿಸರ’ ಹೆಸರಿನ ಖಾಸಗಿ ಸಂಸ್ಥೆಯನ್ನು ನಡೆಸುತ್ತಿರುವ ಈಶ್ವರ್ ಪ್ರಸಾದ್ ಅವರೇ ‘ಸ್ಫೂರ್ತಿವನ’ದ ಸೆಕ್ರೆಟರಿ ಆಗಿದ್ದಾರೆ. ಈ ‘ಪರಿಸರ’ವೇನೂ ಲಕ್ಷಾಂತರ ರೂಪಾಯಿಗಳ ವಹಿವಾಟು ನಡೆಸುವ ಪ್ರತಿಷ್ಠಿತ ಎನ್‌ಜಿಓ ಅಲ್ಲ. ಹಣವೇ ಇಲ್ಲದ, ಬಿಡುವಿನ ವೇಳೆಯಲ್ಲಿ ಏನಾದರೂ ಉಪಯುಕ್ತ ಕೆಲಸವನ್ನು ಸ್ವಂತ ಖರ್ಚಿನಲ್ಲಾದರೂ ಮಾಡಬೇಕೆಂಬ ಆಸಕ್ತ ಸ್ವಯಂಸೇವಕರೇ ಅದರ ಬಂಡವಾಳ. ಅಂಥ ಗೆಳೆಯರೇ ‘ಸ್ಫೂರ್ತಿವನ’ ವೆಬ್‌ಸೈಟನ್ನು ಸೃಷ್ಟಿಸಿದ್ದು, (www.spoorthivana.org) ಕರಪತ್ರ, ಕ್ಯಾಲೆಂಡರ್, ಬ್ಯಾನರ್‌ಗಳ ಸೃಷ್ಟಿಗೆ ಓಡಾಡಿದ್ದು; ‘ಸ್ಫೂರ್ತಿವನ’ಕ್ಕೆ ಗಿಡದೇಣಿಗೆ ಪಡೆಯಲೆಂದು ಶಾಲೆ, ಕಾಲೇಜು, ಬ್ಯಾಂಕು, ಪಬ್ಲಿಕ್ ಸೆಕ್ಟರ್ ಕಂಪನಿ, ಪ್ರೈವೇಟ್ ಸೆಕ್ಟರ್ ಉದ್ಯಮಗಳಿಗೆ ಓಡಾಡಿದ್ದು. ಅಂಥ ಎಲ್ಲ ಸ್ವಯಂಸೇವಕರಿಗೂ ಈಶ್ವರ್ ಪ್ರಸಾದ್ ಅವರ ಉತ್ಸಾಹವೇ ಸ್ಫೂರ್ತಿ.
ಪ್ರಸಾದ್ ಎಡೆಬಿಡದೆ ಕಂಬ ಸುತ್ತುತ್ತಾರೆ. ಇಂದು ವಿಧಾನ ಸೌಧ, ವಿಕಾಸ ಸೌಧದ ಕಂಬ ಸುತ್ತುವವರನ್ನು ಭೇಟಿ ಮಾಡಿ, ಯಾರನ್ನೋ ಯಾರಿಗೋ ಲಿಂಕ್ ಮಾಡಿ, ಸ್ಫೂರ್ತಿವನಕ್ಕೆ ಗಿಡದೇಣಿಗೆ ಪಡೆಯುತ್ತಾರೆ. ಇಲ್ಲವೆ ಸ್ಪಾನ್ಸರ್ ಮಾಡಿಸುತ್ತಾರೆ. ಮರುದಿನ ಟಿಜಿ ಹಳ್ಳಿಗೆ ಓಡಿ ಅಲ್ಲಿ ಕಂಬ ನೆಡುವವರಿಗಾಗಿ, ಬೇಲಿ ಕಟ್ಟುವವರಿಗಾಗಿ ಹುಡುಕಾಟ ನಡೆಸುತ್ತಾರೆ. ಈ ದಿನಗಳಲ್ಲಿ ಬೆಂಗಳೂರಿನ ಸುತ್ತ ಕೂಲಿಯಾಳುಗಳು ಸಿಗುವುದು ತುಂಬಾ ಕಷ್ಟ. ಎಲ್ಲರಿಗೂ ಬೆಂಗಳೂರಿನಲ್ಲೇ ಕೆಲಸ ಬೇಕು ತಾನೆ? ಕಲ್ಲು ಕಣಿವೆಯಲ್ಲಿ, ಬಿಸಿಲ ಬೇಗೆಯಲ್ಲಿ ದುಡಿಯಲು ಸಿಗುವುದೇ ಇಲ್ಲ. ಆದರೂ ಇವರು ಛಲ ಬಿಡದೆ ಕೂಲಿಗಳಿಗೆ ಇರಲು ಮನೆ, ನೀರು, ವಿದ್ಯುತ್ತು ಮುಂತಾದ ಎಲ್ಲ ಸೌಲಭ್ಯ ಒದಗಿಸಲು ಒದ್ದಾಡುತ್ತಾರೆ. ಜಲಮಂಡಲಿಗೆ ಸೇರಿದ ಭೂಮಿಯನ್ನು ಅತಿಕ್ರಮಣ ಮಾಡಿದವರನ್ನು ತೆರವು ಮಾಡಿಸಲು ಹೆಣಗುತ್ತಾರೆ. ಲ್ಯಾಂಡ್ ಮಾಫಿಯಾಗಳ ಜತೆ ಮುಖಾಮುಖಿ ಆಗುತ್ತಾರೆ. ಅವರ ಕಾಟವನ್ನು ನಿಭಾಯಿಸಲೆಂದು ಮತ್ತೆ ವಿಧಾನ ಸೌಧ, ವಿಕಾಸ ಸೌಧದ ಮೆಟ್ಟಿಲೇರುತ್ತಾರೆ. ಮತ್ತೆ ಟಿಜಿ ಹಳ್ಳಿಯ ಕಣಿವೆಗೆ ಓಡುತ್ತಾರೆ. ನೆಟ್ಟ ಗಿಡಗಳನ್ನು ಮೇಕೆಗಳು ತಿಂದು ಹಾಕಿರುತ್ತವೆ. ಮೇಕೆ ಮೇಯಿಸುವ ಜನರನ್ನು ದೂರ ಸಾಗಿಸಲು ಏಗುತ್ತಾರೆ. ಅಥವಾ ಅವರಿಗೇ ಸಸಿ ರಕ್ಷಣೆಯ ಹೊಣೆ ಹೊರಿಸುವ ಯೋಜನೆ ಹಾಕುತ್ತಾರೆ. ಬೆಂಕಿ ಬೀಳದಂತೆ (ಅಥವಾ ವಿರೋಧಿಗಳು ಬೆಂಕಿ ಬೀಳಿಸದಂತೆ) ಮಾಡಲು ಸುತ್ತಲಿನ ಗ್ರಾಮಗಳ ಜನರ ಸಹಕಾರ ಕೋರುತ್ತಾರೆ. ಇಷ್ಟಾಗಿಯೂ ಕಳೆದ ತಿಂಗಳು ನೆಟ್ಟಿದ್ದ ಎಳೆ ಸಸಿಯೊಂದು ನೀರಿಲ್ಲದೆ ಒಣಗಿದರೆ, ಒಳಗೊಳಗೇ ಗೊಣಗುತ್ತ ಮತ್ತೊಂದು ಬದಲೀ ಸಸಿ ನೆಡಲು ಸಿದ್ಧತೆ ನಡೆಸುತ್ತಾರೆ. ದೇಣಿಗೆ ಎತ್ತುವ, ಜನಸಂಪರ್ಕ ಸಭೆ ಏರ್ಪಡಿಸಲು ಸಿಟಿಗೆ ಹೊರಡುತ್ತಾರೆ. ಚಿರಂಜೀವಿ ಸಿಂಗ್, ವಿಜಯ್ ಗೋರೆಯವರ ಸಲಹೆ ಕೋರುತ್ತಾರೆ.
ಈ ಒದ್ದಾಟದ ಮಧ್ಯೆ ಆಗಾಗ ಖುಷಿ ಕೊಡುವ ಘಟನೆಗಳೂ ನಡೆಯುತ್ತವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ; ತನ್ನ ೨೦೦ನೇ ವರ್ಷದ ಸವಿನೆನಪಿಗಾಗಿ ೨೦೦ ಗಿಡಗಳನ್ನು ‘ಸ್ಫೂರ್ತಿವನ’ದಲ್ಲಿ ಬೆಳೆಸುವುದಾಗಿ ಘೋಷಿಸುತ್ತದೆ. ರಾಜ್ಯಪಾಲರು ಗಿಡನೆಡುವ ಕಾರ್ಯಕ್ರಮಕ್ಕೆ ಖುದ್ದಾಗಿ ಬರುವುದಾಗಿ ಹೇಳುತ್ತಾರೆ. ಲೂಸೆಂಟ್ ಟೆಕ್ನಾಲಜೀಸ್‌ನ ಸಾಫ್ಟ್‌ವೇರ್ ಎಂಜಿನಿಯರ್‌ಗಳು ‘ಸ್ಫೂರ್ತಿವನ’ ಯೋಜನೆಯ ಬಗ್ಗೆ ಆಸಕ್ತಿ ತೋರಿಸುತ್ತಾರೆ. ಈ ಕಂಪನಿಯ ಉದ್ಯೋಗಿ ವಿಜಯಲಕ್ಷ್ಮಿ ಸ್ವತಃ ಆಸಕ್ತಿ ವಹಿಸಿ ‘ಸ್ಫೂರ್ತಿವನ’ ಕುರಿತ ಪವರ್ ಪಾಯಿಂಟ್ ಉಪನ್ಯಾಸ ಸಿದ್ಧಪಡಿಸುತ್ತಾರೆ. ಈಶ್ವರ್ ಪ್ರಸಾದ್ ಮುಂದಾಳತ್ವದಲ್ಲಿ ಮೂರೂ ಕ್ಯಾಂಪಸ್‌ಗಳಿಗೆ ‘ಸ್ಫೂರ್ತಿವನ’ದ ಪದಾಧಿಕಾರಿಗಳು ಭೇಟಿ ಮಾಡಿ ನೆನಪಿನ ವನದ ಪರಿಕಲ್ಪನೆಯನ್ನು ಮುಂದಿಡುತ್ತಾರೆ. ಸಾಫ್ಟ್‌ವೇರ್ ಕಂಪನಿಗಳು ಬೆಂಗಳೂರಿನ ಕಲ್ಯಾಣಕ್ಕಾಗಿ ಏನಾದರೂ ಮಾಡಬೇಕೆಂದಿದ್ದರೆ ಉದ್ಯಾನ ನಿರ್ಮಾಣವೇ ಅತಿ ಯೋಗ್ಯದ, ಅತಿ ಸುಲಭದ ಕೆಲಸ ಎಂಬ ಮಾತು ಕೆಲವರಿಗೆ ಹೌದೆನಿಸುತ್ತದೆ. ‘ಗುಡ್ ಐಡಿಯಾ, ನೋಡೋಣ ವಾಟ್ ವಿ ಕೆನ್ ಡೂ’ ಎಂಬ ಪ್ರತಿಕ್ರಿಯೆ ಬರುತ್ತದೆ. ಅಷ್ಟಾದರೆ ಸಾಲದಲ್ಲ. ಜನ ಸಾಮಾನ್ಯರನ್ನು ತಲುಪಬೇಕೆಂದರೆ ಜಾಹೀರಾತುಗಳ ಮೂಲಕ ಮಕ್ಕಳ ಮನಸ್ಸನ್ನು ಮೊದಲು ಒಲಿಸಿಕೊಳ್ಳಬೇಕು ಎಂಬ ಧೋರಣೆ ಈಗ ಚಾಲ್ತಿಯಲ್ಲಿದೆ ತಾನೆ? ಈಶ್ವರ್ ಪ್ರಸಾದ್ ಅತ್ತ ಗಮನ ಹರಿಸುತ್ತಾರೆ. ಕಾಲೇಜ್‌ಗಳ ಪ್ರಿನ್ಸಿಪಲ್‌ಗಳ ಮನವೊಲಿಸಿ ಪ್ರತಿ ಕಾಲೇಜಿನಲ್ಲೂ ಒಂದೊಂದು ‘ಇಕೊ ಕ್ಲಬ್’ ಹೆಸರಿನ ಪರಿಸರ ಸಂಘಗಳನ್ನು ಸ್ಥಾಪಿಸಬೇಕು, ಅವರ ಪಠ್ಯಕ್ರಮದಲ್ಲಿ ಪರಿಸರ ವಿಷಯವನ್ನು ಕಡ್ಡಾಯ ಬೋಧನೆ ಮಾಡಬೇಕಿರುವುದರಿಂದ, ಬೋಧನೆಯ ಜತೆಜತೆಗೆ ಕ್ಷೇತ್ರ ಅಧ್ಯಯನವಾಗಿ ‘ಸ್ಫೂರ್ತಿವನ’ದ ನಿರ್ಮಾಣಕ್ಕೆ ಸಹಕರಿಸಬೇಕು ಎಂಬ ಸಲಹೆಯನ್ನು ಮುಂದಿಡುತ್ತಾರೆ. ಕಾಲೇಜು ಶಿಕ್ಷಣದ ನಿರ್ದೇಶಕರ ಮೂಲಕ ಪ್ರಿನ್ಸಿಪಲ್‌ಗಳ ಸಭೆಯನ್ನು ಏರ್ಪಡಿಸುತ್ತಾರೆ. ಆಸಕ್ತ ಉಪನ್ಯಾಸಕರ ತಂಡವೊಂದನ್ನು ಟಿಜಿ ಹಳ್ಳಿಯ ತಾಣಕ್ಕೇ ಕರೆತಂದು ಸಭೆ ಏರ್ಪಡಿಸುತ್ತಾರೆ. ಮಹಾರಾಣಿ ಕಾಲೇಜ್‌ನ ಶಿಕ್ಷಕಿಯರಿಗಾಗಿ ಪ್ರತ್ಯೇಕ ಉಪನ್ಯಾಸ ಕಾರ್ಯಕ್ರಮದ ವ್ಯವಸ್ಥೆ ಮಾಡುತ್ತಾರೆ.
ಈ ನಡುವೆ ‘ಅಲ್ಕಾಟೆಲ್-ಲ್ಯೂಸೆಂಟ್ ಟೆಕ್ನಾಲಜೀಸ್’ನಿಂದ ಸಂತಸದ ಸುದ್ದಿ ಬರುತ್ತದೆ. ನೂರಿಪ್ಪತ್ತು ಉದ್ಯೋಗಿಗಳು ತಲಾ ಒಂದೊಂದು ಗಿಡವನ್ನು ದೇಣಿಗೆ ಕೊಡುವುದಾಗಿ ವಾಗ್ದಾನ ಮಾಡುತ್ತಾರೆ. ಈ ಕಂಪನಿಯ ಹೆಸರಿನಲ್ಲೇ ಪ್ರತ್ಯೇಕ ಬ್ಲಾಕ್ ನಿರ್ಮಿಸಿ ಎಲ್ಲ ಗಿಡಗಳನ್ನೂ ಒಂದೆಡೆ ನೆಡುವಂತೆ ಪ್ರಸ್ತಾವನೆ ಬರುತ್ತದೆ. ಮಳೆಗಾಲ ರಾಜ್ಯದ ನಾನಾ ಕಡೆ ಅಬ್ಬರ ಎಬ್ಬಿಸಿದರೂ ಟಿಜಿ ಹಳ್ಳಿ ಜಲಾಶಯದ ಸುತ್ತಮುತ್ತ ಒಂದು ಹನಿ ಮಳೆ ಇಲ್ಲ. ಜಲಾಶಯದಲ್ಲೂ ನೀರಿಗೆ ಅಭಾವ. ‘ಟ್ಯಾಂಕರ್ ಮೂಲಕವಾದರೂ ನೀರೊದಗಿಸೋಣ. ಮೊದಲು ಟ್ರ್ಯಾಕ್ಟರ್ ವ್ಯವಸ್ಥೆ ಮಾಡಬೇಕು. ಗಿಡಗಳನ್ನು ತಂದು ಜೋಡಿಸಬೇಕಲ್ಲ, ನಾಳೆ ಸಾಫ್ಟ್‌ವೇರ್ ಎಂಜಿನಿಯರ್‌ಗಳು ಬಂದಾಗ ಭಣಭಣ ಎನ್ನಿಸಬಾರದಲ್ಲ!’ ಎನ್ನುತ್ತ ಓಡುತ್ತಾರೆ ಈ ಮಾಜಿ ಮೆಕ್ಯಾನಿಕಲ್ ಎಂಜಿನಿಯರ್ ಈಶ್ವರ್ ಪ್ರಸಾದ್.
ನಾಳೆ ‘ಸ್ಫೂರ್ತಿವನ’ದ ಒಂದು ಭಾಗದಲ್ಲಿ ಸಾಫ್ಟ್‌ವೇರ್ ‘ಪಾರ್ಕ್’ನ ಗುದ್ದಲಿ ಪೂಜೆ ಇದೆ.
ಬೆಂಗಳೂರಿನ ನಿಸರ್ಗಕ್ಕೆ ತುಸು ನೆಮ್ಮದಿಯ ಹೊಸ ಉಸಿರು ಕೊಡುವ ಯತ್ನ ಅದು.
ಹೆಚ್ಚಿನ ಮಾಹಿತಿಗೆ: ಈಶ್ವರ್ ಪ್ರಸಾದ್ -೯೪೪೮೦೭೭೦೧೯ ಮತ್ತು ೨೩೩೪೦೮೮೧
ಈಮೇಲ್: ecolinker@gmail.com
ಜಾಲತಾಣ – www.spoorthivana.org