ಶುದ್ಧಾಶುದ್ಧ ಕನ್ನಡ

– ಪ್ರೊ| ಎಂ. ರಾಜಗೋಪಾಲಾಚಾರ್ಯ

ಕನ್ನಡದಲ್ಲಿ ಬಹಳವಾಗಿ ರೂಢಿಯಲ್ಲಿರುವ ಕೆಲವು ಸಂಸ್ಕೃತ ಪದಗಳ ಕಾಗುಣಿತದ ವ್ಯತ್ಯಾಸದಿಂದ ಅರ್ಥಭೇದವುಂಟಾಗುವುದು. ಒಂದೇ ಪದಕ್ಕೆ ಹಲವಾರು ರೂಪಗಳಿರುವುದೂ ಉಂಟು. ಆಗ ಅವುಗಳ ಕಾಗುಣಿತದಲ್ಲಿ ವ್ಯತ್ಯಾಸವಿದ್ದರೂ ಅರ್ಥಭೇದವಿಲ್ಲ. ಮುಂದಿನ ಉಲ್ಲೇಖದಲ್ಲಿ ಪ್ರಚಲಿತವಾಗಿರುವ ಅಂತಹ ಕೆಲವು ಪದಗಳನ್ನು ಕೊಟ್ಟಿದೆ. ಇದು ಸ್ಥೂಲದರ್ಶನವೇ ಹೊರತು ಎಲ್ಲ ಪದಗಳೂ ಇಲ್ಲಿ ಸೇರಿಲ್ಲ.

ಕಾಗಣಿತದ ಸ್ವಲ್ಪ ವ್ಯತ್ಯಾಸದಿಂದಲೂ ಅರ್ಥಭೇದವುಂಟಾಗುವ ಸಂಸ್ಕೃತ ಪದಗಳು :

ಅನುಮತಿ=ಅಪ್ಪಣೆ, ಕಲಾಹೀನವಾದ ಹುಣ್ಣಿಮೆ; ಅನುಮಿತಿ=ಅನುಮಾನ, ಊಹೆ.
ಅಪತ್ಯ=ಮಗು; ಅಪಥ್ಯ=ಹಿತವಲ್ಲದುದು
ಅಸ್ತಿ= ಇರುವಿಕೆ; ಅಸ್ಥಿ=ಎಲುಬು
ಆತರ= ದೋಣಿ ದಾಟಿಸಿದವನಿಗೆ ಕೊಡುವ ಹಣ; ಆತುರ=ರೋಗಿ
ಆರ್ತ= ಪೀಡಿತ; ಆರ್ಥ=ಅರ್ಥದಿಂದ ಸಿದ್ಧವಾದ
ಆಸ್ತೇ= ಇದ್ದಾನೆ; ಆಸ್ಥೆ=ನಿಷ್ಠೆ
ಉತ್ತಾನ=ಅಂಗಾತನೆ, ಆಳವಲ್ಲದ, ಮುಗ್ಧ ; ಉತ್ಥಾನ=ಮೇಲ್ಮೆ , ಏಳುವಿಕೆ
ಉದ್ವೇಗ=ಭಯ, ಗಾಬರಿ; ಉದ್ರೇಕ=ಆಧಿಕ್ಯ
ಉಪಗೃಹ=ಹೊರಮನೆ; ಉಪಗ್ರಹ=ಗ್ರಹದ ಸುತ್ತ ತಿರುಗುವ ಆಕಾಶಕಾಯ
ಉಪಧಿ=ಕಪಟ; ಉಪಾಧಿ=ಬಾಹ್ಯಕಾರಣ
ಉಪಹಾರ=ಬಲಿ, ಬಹುಮಾನ; ಉಪಾಹಾರ=ಸ್ವಲ್ಪ ಆಹಾರ
ಕಲ=ಮಧುರ ಧ್ವನಿ; ಖಲ=ನೀಚ, ಅಂಗಣ
ಕರ=ಕೈ , ಕಪ್ಪ ; ಖರ=ತೀಕ್ಷ್ಣ
ಗೃಹ=ಮನೆ; ಗ್ರಹ=ಆಕಾಶಕಾಯ, ಪಿಶಾಚ
ಚಲ=ಚಂಚಲ(ಕನ್ನಡದಲ್ಲಿ ಹಟ); ಛಲ= ನೆಪ, ಹಟ, ಮೋಸ
ನಿದಾನ=ಮೂಲಕಾರಣ; ನಿಧಾನ=ನಿಧಿ
ನಿರ್ವಾಣ=ದಿಗಂಬರ, ದೀಪವಾರುವಿಕೆ; ನಿರ್ವಾತ=ಗಾಳಿಯಿಲ್ಲದ ಪ್ರದೇಶ
ಪಲ= ಒಂದು ತೂಕ, ಮಾಂಸ; ಫಲ=ಹಣ್ಣು, ಪರಿಣಾಮ
ಪೃಥೆ=ಕುಂತಿ; ಪ್ರಥೆ=ಖ್ಯಾತಿ
ಪ್ರಕಾರ=ರೀತಿ; ಪ್ರಾಕಾರ=ಪಾಗಾರ, ಸುತ್ತುಗೋಡೆ
ಪ್ರದಾನ=ಕೊಡುವಿಕೆ; ಪ್ರಧಾನ= ಮುಖ್ಯ, ಮುಖ್ಯ ಮಂತ್ರಿ
ಪ್ರಹರ=ಯಾಮ; ಪ್ರಹಾರ=ಹೊಡೆತ
ಪಾತಕ=ಪಾಪ; ಪಾತುಕ=ಬೀಳುವ ಸ್ವಭಾವದವ
ಬಾಲ=ಹುಡುಗ; ಭಾಲ=ಹಣೆ
ಮದ=ಅಹಂಕಾರ; ಮುದ=ಸಂತೋಷ
ಮೂರ್ತ=ಘನವಾದ, ಗಟ್ಟಿಯಾದ; ಮುಹೂರ್ತ=೩ ೩/೪ ಗಳಿಗೆ
ಮುಕುರ=ಕನ್ನಡಿ; ಮುಖರ=ಶಬ್ದಮಾಡುವ
ಲಕ್ಷ=ಚಿಹ್ನೆ, ನೂರು ಸಾವಿರ; ಲಕ್ಷ್ಯ=ಗುರಿ, ಚಿಹ್ನೆ
ವಿತತ=ವಿಸ್ತಾರವಾದ; ವಿತಥ=ಸುಳ್ಳು
ವಿಸ್ತರ=ಮಾತಿನ ಹರಹು; ವಿಸ್ತಾರ=ದೇಶದ ಹರಹು
ವಿಶಯ=ಸಂಶಯ; ವಿಷಯ=ಇಂದ್ರಿಯಾರ್ಥಗಳು, ದೇಶ
ವೃತ=ಸ್ವೀಕರಿಸಿದ; ವ್ರತ=ನಿಯಮ
ವೇಶ=ವೇಶ್ಯೆಯರ ವಾಸ(ಅಲಂಕಾರ); ವೇಷ=ಅಲಂಕಾರ
ಶಂಕರ=ಈಶ್ವರ; ಸಂಕರ=ಮಿಶ್ರ
ಶಾಕ=ಕಾಯಿಪಲ್ಲೆಗಳು; ಶಾಖ=ಬಿಸಿ
ಶ್ವಾನ=ನಾಯಿ; ಸ್ವಾನ=ದನಿ
ಸಕಲ=ಎಲ್ಲ; ಶಕಲ=ತುಂಡು
ಸಭಿಕ=ಜೂಜಾಡುವ; ಸಭ್ಯ=ಸಭೆಯಲ್ಲಿರುವವ,
ಆದರೆ ಈಗ ಸಭಿಕ ಎಂಬುದನ್ನು ಸಭೆಯಲ್ಲಿರಲು ಯೋಗ್ಯ ಎಂಬ ಅರ್ಥದಲ್ಲೇ ಬಳಸುತ್ತಾರೆ. ಕನ್ನಡದಲ್ಲಿ `ಇಕ’ ಪ್ರತ್ಯಯವು ಶೀಲಾರ್ಥದಲ್ಲಿದೆ.

(ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗವು ಪ್ರಕಟಿಸಿದ ಇದೇ ಹೆಸರಿನ ಪುಸ್ತಕದಿಂದ ಆಯ್ದ ಭಾಗ)

Leave a Reply