ಲಂಡನ್ನಿಂದ…

– ಟಿ. ಜಿ. ಶ್ರೀನಿಧಿ

ಈ ಊರಲ್ಲಿ ನ್ಯೂಸ್ ಪೇಪರ್ ಅನ್ನೋದು ಒಂದು ವಿಚಿತ್ರ ವ್ಯವಹಾರ. ಒಂದಷ್ಟು ಪೇಪರ್ಗಳು ಐವತ್ತು ಪೆನ್ನಿಗೋ ಒಂದು ಪೌಂಡಿಗೋ ಮಾರಾಟವಾದರೆ ಮಿಕ್ಕ ಇನ್ನೊಂದಷ್ಟು ಪತ್ರಿಕೆಗಳನ್ನು ನಿಮಗೆ ಫ್ರೀಯಾಗಿ ಕೊಡೋದಕ್ಕೆ ಜನ ಮೈಮೇಲೇ ಬೀಳ್ತಾರೆ. ಮೆಟ್ರೋ, ಸಿಟಿ ಎಎಂ, ಲಂಡನ್ಪೇಪರ್, ಲೈಟ್ – ಇವೆಲ್ಲ ಫ್ರೀ ಜಾತಿಗೆ ಸೇರಿದ, ಟ್ಯಾಬ್ಲಾಯ್ಡ್ ಗಾತ್ರದ ಪೇಪರ್ಗಳು (ದುಡ್ಡು ಕೊಟ್ಟು ಕೊಳ್ಳುವ ಪತ್ರಿಕೆಗಳಲ್ಲೂ ಬಹಳಷ್ಟು ಇದೇ ಸೈಜಿನಲ್ಲಿ ಪ್ರಕಟವಾಗುವುದು ವಿಶೇಷ). ಐವತ್ತರಿಂದ ಅರುವತ್ತು ಪೇಜು – ದಿನಾ ಬೆಳಿಗ್ಗೆ, ಸಂಜೆ.

ಬೆಳಿಗ್ಗೆ ಎದ್ದು ಆಫೀಸಿಗೆ ಓಡುವ ಅವಾಂತರದಲ್ಲಿ ದುಡ್ಡುಕೊಟ್ಟು ಪೇಪರ್ ಓದುವಷ್ಟು ಪುರುಸೊತ್ತು ಇನ್ನೂ ಸಿಕ್ಕಿಲ್ಲ. ಹಾಗಾಗಿ ನಾನು ಮಾತಾಡ್ತಾ ಇರೋದು ಬರೀ ಫ್ರೀ ಪೇಪರ್ಗಳ ಬಗ್ಗೆ ಮಾತ್ರ. ಜಾಹಿರಾತುಗಳೇ ಈ ಫ್ರೀ ಪತ್ರಿಕೆಗಳ ಜೀವಾಳ ಅಂತ ಅಂದುಕೊಳ್ಳಬಹುದಾದರೂ ನಮ್ಮ ಊರಿನ ಟೈಮ್ಸಾಫಿಂಡಿಯಾದಂಥ ಎಡವಟ್ಟು ಪತ್ರಿಕೆಗಳಿಗೆ ಹೋಲಿಸಿದಾಗ ಇವುಗಳಲ್ಲಿ ಅಡ್ವರ್ಟೈಸ್ಮೆಂಟ್ಗಳ ಭರಾಟೆ ಅತಿ ಅಂತೇನೂ ಅನ್ನಿಸುವುದಿಲ್ಲ. ಅದರಲ್ಲಿ ೮೫% ಜಾಹಿರಾತು ಇದ್ದರೆ ಈ ಪೇಪರ್ಗಳಲ್ಲಿ ೮೪% ಇರತ್ತೆ, ಅಷ್ಟೆ! ಪೇಜುಪೇಜಿನಲ್ಲೂ ಮೊಬೈಲ್ ಫೋನು – ಬಿಟ್ಟರೆ ಕಡಿಮೆಬೆಲೆಯಲ್ಲಿ ವಿಮಾನ ಹತ್ತಿಸುವ ನೋ ಫ್ರಿಲ್ಸ್ ಏರ್ಲೈನ್ಗಳ ಜಾಹಿರಾತುಗಳು ಇದ್ದೇ ಇರುತ್ತವೆ. ನೆಕ್ಸ್ಟ್ ಜಾಗ ಬ್ಯಾಂಕುಗಳದ್ದು. ಫ್ರೀ ಅಲ್ಲದ ಪೇಪರ್ಗಳು ‘ನಮ್ಮ ಪೇಪರ್ ಕೊಂಡುಕೊಳ್ಳಿ – ಒಂದು ಸಿನಿಮಾ ಡೀವೀಡಿ ಫ್ರೀ ಕೊಡ್ತೀವಿ’ ಅಂತೆಲ್ಲ ಜಾಹಿರಾತು ಕೊಡ್ತಾರೆ. ಒಂದು ಫ್ರೀ ಪತ್ರಿಕೆಯಲ್ಲಿ ಇನ್ನೊಂದರ ಜಾಹಿರಾತು ಪ್ರಕಟವಾಗುವುದೂ ಅಪರೂಪ ಏನಲ್ಲ.

ಆದರೆ ಇಲ್ಲಿ ಪ್ರಕಟವಾಗುವ ನ್ಯೂಸ್ಗಳದ್ದೇ ಒಂದು ವಿಚಿತ್ರ ಕ್ಯಾಟೆಗರಿ… ಯಾವುದೋ ಮೈನ್ರೋಡಿನ ಫುಟ್ಪಾತ್ ಮೇಲೆ ಟೊಮ್ಯಾಟೋ ಗಿಡ ಬೆಳೀತು ಅಂತ ಅರ್ಧಾ ಪೇಜು ಫೋಟೋ ಬಂದಿತ್ತು ಅವತ್ತು! ಯಾವ ಮಾಡೆಲ್ ಎಲ್ಲಿ ಶಾಪಿಂಗ್ ಮಾಡಿದ್ಳು, ಯಾವ ಥರ ಬಟ್ಟೆ ಹಾಕ್ಕೊಂಡಿದ್ಳು ಅಂತ ಬರ್ದು, ಫೋಟೋ ಹಾಕಿ ಸಿಕ್ಕಾಪಟ್ಟೆ ಪೇಜು ತುಂಬಿಸ್ತಾರೆ.

ಇನ್ನು ಎಲ್ಲಿ ಕೊಲೆ ಆದ್ರೂ ಅದು ಮುಖಪುಟ ಸುದ್ದಿ ಆಗೋದು ಹೆಚ್ಚೂಕಡಿಮೆ ಗ್ಯಾರಂಟಿ. ಹದಿನಾರು ವರ್ಷ ವಯಸ್ಸಿನ ಹುಡುಗ ಹದಿನೈದು ವರ್ಷದ ಇನ್ನೊಬ್ಬನನ್ನ ಕೊಂದ, ಇನ್ನೊಬ್ಬ ಪುಟ್ಟಹುಡುಗನ್ನ ಅವನ ಪಕ್ಕದ ಕ್ಲಾಸಿನವನು ಸಾಯಿಸಿದ – ಬರೀ ಇಂಥದ್ದೇ ಸುದ್ದಿಗಳು ಹೆಚ್ಚಾಗಿ ಕಾಣಸಿಗುವುದು ಗಾಬರಿಯ ವಿಷಯ. ಇಂತಹ ‘ಸೆನ್ಸಿಟಿವ್’ ಪ್ರಕರಣಗಳ ವಿಚಾರಣೆ ಯಾವ ಕಡೆ ಸಾಗುತ್ತಿದೆ ಅನ್ನುವ ಬಗ್ಗೆಯೂ ಇಷ್ಟೇ ಆಸಕ್ತಿ ಈ ಪತ್ರಿಕೆಗಳಲ್ಲಿ ಕಾಣಸಿಗುವುದು ಒಂದು ಒಳ್ಳೆಯ ಸಂಗತಿ.

ಸಾಮಾಜಿಕ ಕಳಕಳಿಯ ವಿಷಯಗಳ ಬಗ್ಗೆ ಸಣ್ಣದಾದರೂ ತುಂಬಾ ಇನ್ಫರ್ಮೆಟಿವ್ ಆದ ಸುದ್ದಿಗಳು ಪ್ರಕಟವಾಗುತ್ತವೆ. ಯುನೈಟೆಡ್ ಕಿಂಗ್ಡಂನಲ್ಲಿ ನೀರಿನ ತೊಂದರೆ ಸಿಕ್ಕಾಪಟ್ಟೆ ಜಾಸ್ತಿ ಆಗುತ್ತಿರುವ ಬಗ್ಗೆ, ವಿದ್ಯುತ್ ಉಪಕರಣಗಳ ಮಿತಿಮೀರಿದ ಬಳಕೆಯಿಂದ ಅಪಾರ ಪ್ರಮಾಣದ ವಿದ್ಯುತ್ ಅಪವ್ಯಯವಾಗುತ್ತಿರುವ ಬಗ್ಗೆ ಕೆಲವು ಒಳ್ಳೊಳ್ಳೆ ‘ಪುಟಾಣಿ’ ಲೇಖನಗಳನ್ನು ನಿನ್ನೆಮೊನ್ನೆ ತಾನೇ ಓದಿದೆ.

ಲಂಡನ್ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ‘ಥೇಮ್ಸ್ ವಾಟರ್’ ಅನ್ನೋ ಸಂಸ್ಥೆಯನ್ನ ಆಸ್ಟ್ರೇಲಿಯಾ ಮೂಲದ ಇನ್ನೊಂದು ಸಂಸ್ಥೆ ಅದೆಷ್ಟೋ ಕೋಟಿ ಪೌಂಡು ಕೊಟ್ಟು ಕೊಂಡುಕೊಂಡಿದೆ. ಲಂಡನ್ ನಗರದ ನೀರು ಸರಬರಾಜು ವ್ಯವಸ್ಥೆಯ ಪೈಪ್ಲೇನ್ಗಳು ಹೆಚ್ಚೂಕಡಿಮೆ ಪೂರ್ತಿ ಹಾಳಾಗಿ ನೂರಾರು ಮೈಲಿ ಉದ್ದದ ಪೈಪು ಬದಲಾಯಿಸಲೇಬೇಕಾದ ಪರಿಸ್ಥಿತಿ ಬಂದಿದೆಯಂತೆ. ಇಲ್ಲದಿದ್ದರೆ ಇನ್ನೊಂದಷ್ಟು ಕೋಟಿ ದಂಡ ಕಟ್ಟಬೇಕಂತೆ. ಇಂತಹ ಪರಿಸ್ಥಿತಿಯಲ್ಲಿ ಈ ವ್ಯಾಪಾರ ನಡೆದಿರುವ ಬಗ್ಗೆ ಒಂದು ಒಳ್ಳೆಯ ಲೇಖನ ಇತ್ತು ಇವತ್ತಿನ ಲಂಡನ್ಪೇಪರ್ನಲ್ಲಿ.

ತುಂಬಾ ಇಂಟರೆಸ್ಟಿಂಗ್ ಅನ್ನಿಸುವಂತ ವೈಜ್ಞಾನಿಕ ಸಂಶೋಧನೆಗಳ ಬಗೆಗೂ ಸಾಕಷ್ಟು ದೊಡ್ಡದಾದ ಲೇಖನಗಳು ಕಾಣಸಿಗುತ್ತಿರುತ್ತವೆ. ಲಂಡನ್ನಿನ ಯಾವ ಮೂಲೆಯಲ್ಲಿ ಏನು ನಡೀತಾ ಇದೆ ಅನ್ನುವ ಬಗ್ಗೆ ಕೂಡ ಕೆಲವು ಸುದ್ದಿಗಳು ಚೆನ್ನಾಗಿರುತ್ತವೆ. ರಾಜಕೀಯ, ಭಯೋತ್ಪಾದನೆ – ಇವು ಇನ್ನೊಂದಷ್ಟು ರೆಗ್ಯುಲರ್ ವಿಷಯಗಳು. ಮೊನ್ನೆಮೊನ್ನೆ ಸತ್ತುಹೋದ ಮಾಜಿ ರಷ್ಯನ್ ಗುಪ್ತಚರನ ವಿಷಯವಂತೂ ಕಳೆದ ಅದೆಷ್ಟೋ ದಿನಗಳಿಂದ ಒಂದು ದಿನವೂ ತಪ್ಪದೆ ಪ್ರಕಟವಾಗುತ್ತಲೇ ಇದೆ.

ತಕ್ಷಣಕ್ಕೆ ನೆನಪಾಗುತ್ತಿರುವ ಇನ್ನೊಂದು ವಿಷಯ ಅಂದರೆ ಲಂಡನ್ನಿನ ಜೈಲುಗಳೆಲ್ಲ ಭರ್ತಿಯಾಗಿಹೋಗಿವೆ, ಇನ್ನು ಯಾರನ್ನಾದರೂ ಹಿಡ್ಕೊಂಡು ಬಂದರೆ ಅವರನ್ನು ಕೂಡಿಹಾಕಲು ಜಾಗವೇ ಇಲ್ಲ ಎನ್ನುವುದರ ಬಗ್ಗೆ ಪ್ರಕಟವಾಗಿದ್ದ ಸುದ್ದಿ. ಈ ತೊಂದರೆಯಿಂದ ಪಾರಾಗಲು ಸರಕಾರ ಬೇರೆ ದೇಶಗಳಿಂದ ಬಂದು ಇಲ್ಲಿ ಬಂದಿಗಳಾಗಿರುವ ಕ್ರಿಮಿನಲ್ಗಳಿಗೆ ಒಂದಷ್ಟು ದುಡ್ಡುಕೊಟ್ಟು ಅವರ ದೇಶಗಳಿಗೆ ವಾಪಸ್ ಕಳುಹಿಸಲು ಪ್ರಯತ್ನಪಡುತ್ತಿದೆಯಂತೆ!

ಲಂಡನ್ನಿಂದ… ಸದ್ಯಕ್ಕೆ ಇಷ್ಟೇ! ಲಂಡನ್ನಿನ ಫ್ರೀ ಪೇಪರ್ಗಳನ್ನು ನೀವೂ ಒಂದುಸಾರಿ ನೋಡಬೇಕೆಂದರೆ www.thelondonpaper.com, www.cityam.com ಅಥವಾ www.metro.co.uk ಗೆ ಭೇಟಿಕೊಡಿ.

(ಕೊನೆಮಾತು: ಈ ಫ್ರೀ ಪೇಪರ್ಗಳ ಸಹವಾಸ ಸಾಕು ಅಂತ ಇವತ್ತು ‘ದ ಡೇಲಿ ಟೆಲಿಗ್ರಾಫ್’ ತೊಗೊಂಡೆ. ಶನಿವಾರದ ವಿಶೇಷ ಅಂತ ಹೆಚ್ಚೂಕಡಿಮೆ ಒಂದು ಕೇಜಿ ಪೇಪರ್ ಕೊಟ್ಟಿದಾರೆ. ಓದಿ ಮುಗಿದ ಮೇಲೆ ಅಭಿಪ್ರಾಯ ಹೇಳ್ತೀನಿ. ಅಲ್ಲೀತನಕ, ನಮಸ್ಕಾರ!)

Leave a Reply