ಮುಖಗವಸುಗಳು
N95, N99, N100 ಮಾಸ್ಕ್ ಎಂದರೇನು?
ಕೋವಿಡ್-19 ರಿಂದಾಗಿ ಒಂದು ಹೊಸ ವಸ್ತು ನಮ್ಮ ದಿನನಿತ್ಯದ ಜೀವನದ ಒಂದು ಅವಿಭಾಜ್ಯ ಅಂಗವಾಗಿದೆ. ಅದುವೇ ಮುಖಗವಸುಗಳು (mask). ಮಾರುಕಟ್ಟೆಯಲ್ಲಿ ಹಲವಾರು ನಮೂನೆಯ ಮುಖಗವಸುಗಳು ಲಭ್ಯವಿವೆ. ಹಲವು ಬಣ್ಣಗಳಲ್ಲಿ, ಹಲವು ನಮೂನೆಗಳಲ್ಲಿ, ಹಲವು ಬೆಲೆಗಳಲ್ಲಿ ಮುಖಗವಸುಗಳು ದೊರೆಯುತ್ತಿವೆ. ಕೇವಲ ಒಂದೇ ವರ್ಷದ ಹಿಂದೆ ಈ ಮುಖಗವಸುಗಳನ್ನು ಆಸ್ಪತ್ರೆಯಲ್ಲಿ ವೈದ್ಯರು ಮತ್ತು ದಾದಿಯರು ಬಳಸುತ್ತಿದ್ದುದನ್ನು ಮಾತ್ರ ನಾವು ಕಂಡಿದ್ದೆವು. ಈಗ ಎಲ್ಲರೂ ಬಳಸುತ್ತಿದ್ದಾರೆ ಅಥವಾ ಬಳಸಲೇಬೇಕು ಎಂದು ಸರಕಾರವೇ ಹೇಳುತ್ತಿದೆ. ಬಟ್ಟೆಗಳ ಜೊತೆ ಅವುಗಳ ಬಣ್ಣ, ವಿನ್ಯಾಸಕ್ಕೆ ಸರಿಹೊಂದುವ ಮುಖಗವಸುಗಳೂ ದೊರೆಯುತ್ತಿವೆ. ಕೆಲವು ಕಂಪೆನಿಗಳು ತಮ್ಮ ಕಂಪೆನಿಯ ಲಾಂಛನವನ್ನು ಮುಖಗವಸುಗಳಲ್ಲಿ ಮುದ್ರಿಸಿ ತಮ್ಮ ಉದ್ಯೋಗಿಗಳಗೆ ಹಂಚಲೂ ಪ್ರಾರಂಭಿಸಿವೆ. ಹಲವು ಬಣ್ಣಗಳ ಮುಖಗವಸುಗಳು ವೈಯಕ್ತಿಕ ಆಯ್ಕೆ ಎನ್ನಬಹುದು. ಆದರೆ ಈ ಎಲ್ಲ ವೈವಿಧ್ಯಗಳ ನಡುವೆ N95, N99, N100 mask ಎಂಬ ಪದಗಳೂ ಕೇಳಿಬರುತ್ತಿವೆ. ಹಾಗಂದರೆ ಏನು ಎಂದು ಈ ಲೇಖನದಲ್ಲಿ ತಿಳಿಯೋಣ.
ಈಗ ಮಾರುಕಟ್ಟೆಯಲ್ಲಿ ಎಲ್ಲವನ್ನೂ ಮಾಸ್ಕ್ ಎಂಬ ಹೆಸರಿನಲ್ಲೇ ಮಾರುತ್ತಿದ್ದಾರೆ. ವೈಜ್ಞಾನಿಕವಾಗಿ ನೋಡಿದರೆ ಇದು ಪೂರ್ತಿ ಸರಿಯಲ್ಲ. ಇವುಗಳಲ್ಲಿ ಎರಡು ಪ್ರಮುಖ ವಿಧಗಳಿವೆ. ಹಲವು ಕಾಲಗಳಿಂದ ವೈದ್ಯಕೀಯ ಕ್ಷೇತ್ರದಲ್ಲಿ ಬಳಕೆಯಲ್ಲಿರುವ ವೈದ್ಯಕೀಯ ಮುಖಗವಸುಗಳು ಅರ್ಥಾತ್ surgical mask ಮೊದಲನೆಯ ನಮೂನೆಯದ್ದು. ಇವುಗಳು ಮುಖದ ಮೇಲೆ ಅಷ್ಟು ಗಟ್ಟಿಯಾಗಿ ಅಂಟಿ ಕುಳಿತುಕೊಳ್ಳುವುದಿಲ್ಲ. ಬದಲಿಗೆ ಮುಖಗವಸು ಮತ್ತು ಮುಖದ ಮಧ್ಯೆ ಸ್ವಲ್ಪ ಜಾಗ ಇರುತ್ತದೆ. ಈ ಜಾಗದ ಮೂಲಕ ಗಾಳಿ ಓಡಾಡಬಹುದು. ಇವುಗಳ ಪ್ರಮುಖ ಉದ್ದೇಶ ಚಿಕ್ಕ ಚಿಕ್ಕ ವಸ್ತುಗಳು ನೇರವಾಗಿ ಬಾಯಿಗೆ ಬರದಂತೆ ತಡೆಯುವುದು ಮತ್ತು ಬಾಯಿಯಿಂದ ಚಿಕ್ಕ ಚಿಕ್ಕ ಹನಿಗಳು ಹೊರಬಾರದಂತೆ ತಡೆಯುವುದು. ಅಂದರೆ ಗಾಳಿಯ ಮೂಲಕ ಬರಬಹುದಾದ ಸೂಕ್ಷ್ಮ ಕಣಗಳು, ವೈರಸ್ಸುಗಳಿಂದ ಇವುಗಳು ರಕ್ಷಣೆ ನೀಡಲಾರವು.
ಇನ್ನೊಂದು ನಮೂನೆಯವುಗಳು N95, N99, N100 mask ಇತ್ಯಾದಿ ಹೆಸರುಗಳಿಂದ ಮಾರಾಟವಾಗುತ್ತಿರುವವು. ಇವುಗಳ ನಿಜವಾದ ವೈಜ್ಞಾನಿಕ ಹೆಸರು respirators. ಇವುಗಳು ಮಖಕ್ಕೆ ಗಟ್ಟಿಯಾಗಿ ಅಂಟಿ ಕುಳಿತುಕೊಂಡು ಉಸಿರಾಡಲು ಗಾಳಿಯಾಡಲು ಅನುವು ಮಾಡಿಕೊಟ್ಟು ಕಣಗಳನ್ನು ಒಳಗೆ ಬಾರದಂತೆ ಅಥವಾ ಹೊರಗೆ ಹೋಗದಂತೆ ತಡೆಯುತ್ತವೆ. ಈಗಿನ ಕೋವಿಡ್ ಸಂದರ್ಭದಲ್ಲಿ ಇವುಗಳು ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತವೆ. ಇವುಗಳ ಹೆಸರಿನಲ್ಲಿರುವ N ಮತ್ತು 95, 99, 100 ಈ ಸಂಖ್ಯೆಗಳು ಏನನ್ನು ಸೂಚಿಸುತ್ತವೆ? ಅವುಗಳನ್ನು ತಿಳಿಯುವ ಮೊದಲು ಇನ್ನೂ ಒಂದು ಅಂಶವನ್ನು ತಿಳಿಯಬೇಕಾಗಿದೆ.
N ಮಾತ್ರವಲ್ಲ. R ಮತ್ತು P ಎಂಬ ಹೆಸರುಗಳೂ ಇವೆ. ಅವುಗಳ ವಿವರಗಳು ಹೀಗಿವೆ – N is non-resistant; R is oil-resistant; P is oil-proof. ಇವು ಎಣ್ಣೆಯ ಬಗ್ಗೆ ಇವೆ. ಎಣ್ಣೆಗೂ ಇವಕ್ಕೂ ಏನು ಸಂಬಂಧ? ಎಣ್ಣೆ ಎನ್ನುವುದಕ್ಕಿಂತಲೂ ಜಿಡ್ಡು ಪದಾರ್ಥ ಎನ್ನುವುದೇ ಸರಿ. ಕೈಗಾರಿಕಾ ಪ್ರದೇಶಗಳಲ್ಲಿ ಯಂತ್ರೋಪಕರಣಗಳಿಂದ ಚಿಮ್ಮುವ ಕಣಗಳಲ್ಲಿ ಬಹುತೇಕ ಜಿಡ್ಡು ಅಥವಾ ಜಿಡ್ಡಿನ ಕವಚ ಇರುವಂತಹವು. ಇವು ಮೂಗು ಬಾಯಿಗಳ ಮೂಲಕ ದೇಹದೊಳಕ್ಕೆ ಪ್ರವೇಶಿಸಬಾರದು ಎಂದು ಇಂತಹ ಸ್ಥಳಗಳಲ್ಲಿ ಕೆಲಸ ಮಾಡುವವರು ಈ ನಮೂನೆಯ ಮುಖಗವಸುಗಳನ್ನು ಧರಿಸುತ್ತಾರೆ. ಮೊದಲನೆಯದಾಗಿ N ಅಂದರೆ ಎಣ್ಣೆಯ ಜೊತೆ (ಜಿಡ್ಡಿಗೆ) ಕ್ರಿಯೆ ನಡೆಸದವು. ಅವುಗಳ ಹೆಸರು ಹಾಗಿದ್ದರೂ ಅದರ ಅರ್ಥವೇನೆಂದರೆ ಜಿಡ್ಡಿನ ಲೇಪವಿರುವ ಕಣಗಳನ್ನು ಹಾದುಹೋಗಲು ಬಿಡುತ್ತವೋ ಇಲ್ಲವೋ ಎಂದು ಅದರ ಅರ್ಥ. N ಶ್ರೇಣಿಯವು ಅವುಗಳನ್ನು ಹಾದುಹೋಗಲು ಬಿಡುತ್ತವೆ. R ಶ್ರೇಣಿಯವು ಸ್ವಲ್ಪ ತಡೆಯುತ್ತವೆ. P ಶ್ರೇಣಿಯವು ಪೂರ್ತಿ ತಡೆಯುತ್ತವೆ. ಈ R ಮತ್ತು P ಶ್ರೇಣಿಯವುಗಳನ್ನು ಕೈಗಾರಿಕಾ ಪ್ರದೇಶಗಳಲ್ಲಿ ಮಾತ್ರ ಬಳಸುತ್ತಾರೆ. 95, 99, 100 ಅಂದರೆ ಎಷ್ಟು ಶೇಕಡ ತಡೆಯುತ್ತವೆ ಎಂಬುದರ ಮಾಪನ. N95 ಮುಖಗವಸು ಎಂದರೆ ಜಿಡ್ಡಿನ ಜೊತೆ ಕ್ರಿಯೆ ನಡೆಸದ (ಜಿಡ್ಡಿನ ಕಣಗಳನ್ನು ತಡೆಯದ), 95% ಕಣಗಳನ್ನು ತಡೆಯುವ ಮುಖಗವಸು. N99 ಅಂದರೆ 99% ಕಣಗಳನ್ನು ತಡೆಯುವ ಮುಖಗವಸು. N100 ಮಾದರಿಯ ಮುಖಗವಸು 99.97% ಕಣಗಳನ್ನು ತಡೆಯುತ್ತದೆ. ಸಂಪೂರ್ಣ ಸುರಕ್ಷತೆ ನೀಡುವ P100 ಮಾದರಿಯ ಮುಖಗವಸನ್ನು ತುಂಬ ಹೊತ್ತು ಧರಿಸಲು ಕಷ್ಟ. ಯಾಕೆಂದರೆ ಅದನ್ನು ಧರಿಸಿ ಉಸಿರಾಡಲು ಅಷ್ಟು ಸುಲಭವಿಲ್ಲ. ಎಲ್ಲಕ್ಕಿಂತ ಕಡಿಮೆ ಸುರಕ್ಷತೆಯನ್ನು ನೀಡುವ N95 ಮಾದರಿಯ ಮುಖಗವಸನ್ನು ಹೆಚ್ಚು ಕಾಲ ಧರಿಸಬಹುದು.
ಈಗ ಕೊರೋನಾ ವಿಷಯಕ್ಕೆ ಬರೋಣ. ಈ ಸಂದರ್ಭದಲ್ಲಿ ಮುಖಗವಸನ್ನು ಬಳಸುವುದು ಎರಡು ಕಾರಣಗಳಿಗೆ. ಸೋಂಕು ಇರುವವರು ತಮ್ಮ ಬಾಯಿಯಿಂದ ಚಿಮ್ಮುವ ಚಿಕ್ಕ ಚಿಕ್ಕ ಕಣಗಳು (ನೆಗಡಿ, ಉಗುಳು) ಇತರರಿಗೆ ತಗುಲಬಾರದು ಹಾಗೂ ಅವರಿಗೆ ಸೋಂಕು ಬರಬಾರದು ಎನ್ನುವುದು ಮೊದಲ ಕಾರಣ. ಎರಡನೆಯದಾಗಿ ಸೋಂಕು ಇರುವವರಿಂದ ಹರಡಬಹುದಾದ ನೆಗಡಿ, ಕಫ, ಉಗುಳು ಇತ್ಯಾದಿಗಳ ಚಿಕ್ಕ ಚಿಕ್ಕ ಕಣಗಳು ನಮ್ಮ ದೇಹದೊಳಕ್ಕೆ ಬರಬಾರದು ಎಂಬುದಾಗಿ. ಆದರೆ ಇವು ಅನ್ವಯವಾಗುವುದು ವ್ಯಕ್ತಿಗಳು ಅತಿ ಹತ್ತಿರವಿದ್ದಾಗ ಮಾತ್ರ. ಕೊರೊನಾ ಕಾಲದ ನಿಯಮಗಳನ್ವಯ ಯಾರೂ ಒಬ್ಬರಿಗೊಬ್ಬರು ಅಷ್ಟು ಹತ್ತಿರ ಇರಬಾರದು. ಕೊರೊನಾ ವೈರಸ್ ಗಾಳಿಯಲ್ಲೂ ಹಬ್ಬುತ್ತದೆ ಎಂಬುದಾಗಿಯೂ ವರದಿಗಳಿವೆ. ಆದರೆ ತುಂಬ ದೂರಕ್ಕಲ್ಲ. ಅತಿ ಹತ್ತಿರದಲ್ಲಿರುವ ವ್ಯಕ್ತಿಯಿಂದ ಇನ್ನೋರ್ವ ವ್ಯಕ್ತಿಗೆ ಮಾತ್ರ. ವೈರಸ್ ಅತಿ ಸೂಕ್ಷ್ಮ ಗಾತ್ರದ್ದು. ಅದು ಎಷ್ಟು ಸೂಕ್ಷ್ಮ ಗಾತ್ರದ್ದೆಂದರೆ ಯಾವ ಮಾದರಿಯ (N, R, P) ಮುಖಗವಸು ಕೂಡ ಅದನ್ನು ತಡೆದು ನಿಲ್ಲಿಸಲಾರದು.
ಹಾಗಿದ್ದರೆ ಈ ಮುಖಗವಸು ಧರಿಸುವ ಅಗತ್ಯವೇ ಇಲ್ಲವೇ? ವಿಶ್ವ ಆರೋಗ್ಯ ಸಂಸ್ಥೆಯ ಸಲಹೆ ಪ್ರಕಾರ ಸಾಮಾನ್ಯ ಸಂದರ್ಭಗಳಲ್ಲಿ, ಆರೋಗ್ಯವಂತ ವ್ಯಕ್ತಿ, ಇನ್ನೊಬ್ಬ ಆರೋಗ್ಯವಂತ ವ್ಯಕ್ತಿಯ ಸಮೀಪ ಇದ್ದಾಗ ಅದರ ಅಗತ್ಯವಿಲ್ಲ. ಸೋಂಕು ಇಲ್ಲದ ವ್ಯಕ್ತಿ ಅದನ್ನು ಧರಿಸಿದರೆ ಇನ್ನೋರ್ವ ವ್ಯಕ್ತಿಯಿಂದ ನೇರವಾಗಿ ಉಗುಳು, ಕಫ, ನೆಗಡಿ ಇತ್ಯಾದಿ ಚಿಕ್ಕ ಚಿಕ್ಕ ಹನಿಗಳ ಮೂಲಕ ವೈರಸ್ ಬಾರದಂತೆ ತಡೆಯಬಹುದು. ಅದೂ ಆ ಇನ್ನೋರ್ವ ವ್ಯಕ್ತಿ ಸೋಂಕಿತನಾಗಿದ್ದರೆ ಮಾತ್ರ. ಸೋಂಕು ತಗುಲಿದ ವ್ಯಕ್ತಿಯ ಅತಿ ಸಮೀಪ ಹೋಗುವುದಿದ್ದಲ್ಲಿ, ಅವರನ್ನು ಮುಟ್ಟಬೇಕಾಗಿದ್ದಲ್ಲಿ, ಅವರಿಗೆ ಚಿಕಿತ್ಸೆ ನೀಡಬೇಕಾಗಿದ್ದಲ್ಲಿ, ಸಂಪೂರ್ಣ ಸುರಕ್ಷತೆಯನ್ನು ನೀಡುವ ವ್ಯಕ್ತಿಗತ ಸುರಕ್ಷಾ ಕವಚ (PPE) ಧರಿಸಬೇಕು.
ವಿಶ್ವ ಆರೋಗ್ಯ ಸಂಸ್ಥೆ ಮೂರು ಪದರಗಳ ಮುಖಗವಸುಗಳನ್ನು ಸಲಹೆ ಮಾಡಿದೆ. ಹನಿಗಳನ್ನು ಹೀರುವಂತಹ ಹತ್ತಿಯ ಬಟ್ಟೆಯ ಒಳಗಿನ ಪದರ ಮೊದಲನೆಯದು. ಪೋಲಿಪ್ರೊಪೈಲೀನ್ ಮಾದರಿಯ ಮಧ್ಯದ ಪದರ. ಹೀರಿಕೊಳ್ಳದ ಪೋಲಿಯೆಸ್ಟರ್ ಅಥವ ಅದೇ ಮಾದರಿಯ ಮೂರನೆಯ ಪದರ. ಇಂತಹ ಮುಖಗವಸುಗಳು ಈಗ ಮಾರುಕಟ್ಟೆಯಲ್ಲಿ ಸಾಕಷ್ಟು ದೊರೆಯುತ್ತಿವೆ.
ಮುಖಗವಸುಗಳನ್ನು ಬಳಸುವಲ್ಲಿ ಕೆಲವು ಎಚ್ಚರಿಕೆಗಳನ್ನು ಪಾಲಿಸಬೇಕು. ಪ್ರತಿ ಸಲ ಬಳಸಿದ ನಂತರವೂ ಅದನ್ನು ಸಾಬೂನು ಬಳಸಿ ತೊಳೆಯಬೇಕು. ಮುಖಗವಸು ಧರಿಸುವ ಮುನ್ನ ಕೈಯನ್ನು ಸಾಬೂನಿನಿಂದ ತೊಳೆದೇ ಅದನ್ನು ಮುಟ್ಟಬೇಕು. ಧರಿಸಿರುವಾಗ ಆಗಾಗ ಅದನ್ನು ಮುಟ್ಟಬಾರದು. ಕೆಲವರು ಮುಖಗವಸನ್ನು ಮೂಗು ಬಾಯಿಯಿಂದ ಜಾರಿಸಿ ಗಂಟಲಿಗೆ ಅಂಟಿಕೊಂಡಂತೆ ನೇತುಹಾಕುತ್ತಾರೆ. ಇದು ಸಂಪೂರ್ಣ ತಪ್ಪು. ಯಾವುದೇ ಕಾರಣಕ್ಕೂ ಮುಖಗವಸು ತೆಗೆಯಬೇಕಾಗಿದ್ದಲ್ಲಿ (ಉದಾ – ಏನಾದರೂ ಕುಡಿಯಲು ಅಥವಾ ತಿನ್ನಲು) ಅದನ್ನು ಮುಖದಿಂದ ಸಂಪೂರ್ಣವಾಗಿ ತೆಗಯಬೇಕೇ ವಿನಾ ಗಂಟಲಿಗೆ ಅಂಟಿದಂತೆ ನೇತುಹಾಕಬಾರದು. ಹಾಗೆ ಮಾಡುವುದರಿಂದ ಗಂಟಲಿನ ಪ್ರದೇಶದಲ್ಲಿರುವ ಧೂಳು ಬೆವರು ಎಲ್ಲ ಮುಖಗವಸಿಗೆ ಅಂಟಿಕೊಳ್ಳುತ್ತವೆ. ನಂತರ ಮುಖಗವಸನ್ನು ಮೂಗು ಬಾಯಿ ಮುಚ್ಚುವಂತೆ ಧರಿಸಿದಾಗ ಅವು ದೇಹದೊಳಕ್ಕೆ ಹೋಗುತ್ತವೆ.
-ಡಾ| ಯು.ಬಿ. ಪವನಜ
gadgetloka @ gmail . com
— *** —
May 28th, 2021 at 12:24 pm
ಮಾಸ್ಕ ಕುರಿತು ತುಂಬಾ ಚೆನ್ನಾಗಿ ತಮ್ಮ ಲೇಖನ ಮೂಡಿಬಂದಿದೆ.