ಮಾಹಿತಿ ತಂತ್ರಜ್ಞಾನ ಮತ್ತು ಇಂಗ್ಲೀಷ್‌ನ ‘ಪಿತ್ತ’
ಡಾ. ಯು. ಬಿ. ಪವನಜ
ಇನ್ಫೋಸಿಸ್ ನಾರಾಯಣಮೂರ್ತಿಯವರಿಗೆ ೧೯೯೯ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿದ ಸಂದರ್ಭದಲ್ಲಿ ಬೆಂಗಳೂರು ಆಕಾಶವಾಣಿ ಅವರೊಂದಿಗೆ ಸಾರ್ವಜನಿಕರಿಂದ ಫೋನ್-ಇನ್ ಕಾರ್ಯಕ್ರಮವನ್ನು ನೇರ ಪ್ರಸಾರಗೊಳಿಸಿತ್ತು. ಆ ಸಂದರ್ಭದಲ್ಲಿ ನಾನು ಸಂದರ್ಶಕನಾಗಿ ಭಾಗವಹಿಸಿದ್ದೆ. ಆ ದಿನ ನಾನು ಕೇಳಿದ ಒಂದು ಪ್ರಶ್ನೆ ಹೀಗಿತ್ತು: “ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೇಲೆ ಬರಬೇಕಾದರೆ ಒಂದನೆ ತರಗತಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯಬೇಕು ಎಂದು ಬಹುಪಾಲು ಜನರು ತಿಳಿದುಕೊಂಡಿದ್ದಾರೆ ಇದು ನಿಜವೇ?”. ಅದಕ್ಕೆ ನಾರಾಯಣ ಮೂರ್ತಿಯವರು ನೀಡಿದ ಉತ್ತರ ಎಲ್ಲರೂ ಗಮನಿಸಬೇಕಾದುದಾಗಿದೆ: “ಈ ನಂಬಿಕೆ ಸರಿಯಲ್ಲ. ಒಳ್ಳೆಯ ಆಲೋಚನಾ ಶಕ್ತಿ, ಮುಖ್ಯವಾಗಿ ತರ್ಕಬದ್ಧವಾಗಿ ಯೋಚಿಸುವ ಶಕ್ತಿ ಇದ್ದರೆ ಸಾಕು. ಹತ್ತನೆ ತರಗತಿಯ ತನಕ ಕನ್ನಡ ಮಾಧ್ಯಮದಲ್ಲಿ ಕಲಿತರೆ ಏನೂ ಅಡ್ಡಿಯಿಲ್ಲ. ಒಳ್ಳೆಯ ಮೆದುಳಿಗೂ ವಿದ್ಯಾಭ್ಯಾಸದ ಮಾಧ್ಯಮಕ್ಕೂ ಯಾವುದೇ ಸಂಬಂಧವಿಲ್ಲ.”
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಅಮೇರಿಕಾದ ಸಿಲಿಕಾನ್ ವ್ಯಾಲಿಯಲ್ಲಿದ್ದುಕೊಂಡು ಅದ್ಭುತ ಸಾಧನೆ ಗೈದ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಇನ್ನೊಬ್ಬ ಕನ್ನಡಿಗ ಬಿ. ವಿ. ಜಗದೀಶರನ್ನು ನಾನು ಸಂದರ್ಶಿಸಿದಾಗ ಕೇಳಿದ ಪ್ರಶ್ನೆ: “ನೀವು ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಕಲಿತದ್ದು ನೀವು ಮುಂದೆ ಮಾಹಿತಿ ತಂತ್ರಜ್ಞಾನ ಪರಿಣತನಾಗಿ ಮೂಡಿ ಬರಲು ಏನೂ ತೊಂದರೆ ಆಗಲಿಲ್ಲವೇ?”. ಅದಕ್ಕೆ ಅವರ ಉತ್ತರ: “ಖಂಡಿತಾ ಇಲ್ಲ. ಸಾಧನೆಗೆ ಬೇಕಾದುದು ಶ್ರದ್ಧೆ ಮತ್ತು ಇಚ್ಛಾಶಕ್ತಿ ಮಾತ್ರ. ಹಾಗೆ ನೋಡಿದರೆ ನಾನು ಇಂಜಿನಿಯರಿಂಗ್‌ನಲ್ಲಿ ಓದಿದ್ದು ಕಂಪ್ಯೂಟರ್ ಸಯನ್ಸ್ ಕೂಡಾ ಅಲ್ಲ.”
ಈ ಎರಡು ಉದಾಹರಣೆಗಳನ್ನು ಇಲ್ಲಿ ಉಲ್ಲೇಖಿಸಲು ಪ್ರಮುಖ ಕಾರಣವಿದೆ. ಕರ್ನಾಟಕ ಮತ್ತು ಬೆಂಗಳೂರು ಮಾಹಿತಿ ತಂತ್ರಜ್ಞಾನ (ಮಾತಂ) ಕ್ಷೇತ್ರದಲ್ಲಿ ದೇಶದಲ್ಲಿ ಮಾತ್ರವಲ್ಲ ವಿದೇಶಗಳಲ್ಲೂ ಖ್ಯಾತಿ ಮಾಡಿವೆ. “ತಮ್ಮ ಮಕ್ಕಳು ಮಾತಂ ಕ್ಷೇತ್ರದಲ್ಲೇ ಉದ್ಯೋಗವನ್ನು ಪಡೆಯಬೇಕು. ಗಣಕಗಳ ಭಾಷೆ ಇಂಗ್ಲೀಷ್. ಆದುದರಿಂದ ನಾವು ಒಂದನೇ ತರಗತಿಯಿಂದಲೇ ಮಕ್ಕಳಿಗೆ ಇಂಗ್ಲೀಷ್ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿಸಬೇಕು” -ಎಂಬ ಹುಚ್ಚು ಭ್ರಮೆಗಳನ್ನು ಪ್ರತಿ ಪೋಷಕರೂ ತಮ್ಮ ತಲೆಯಲ್ಲಿ ತುಂಬಿಕೊಂಡಿದ್ದಾರೆ. ಈ ಕಲ್ಪನೆಗಳು ಸಂಪೂರ್ಣ ತಪ್ಪು ಎಂಬುದನ್ನು ಮಾತಂ ಕ್ಷೇತ್ರದಲ್ಲಿ ಅತಿ ದೊಡ್ಡ ಸಾಧನೆ ಗೈದ ಗಣ್ಯರೇ ಹೇಳುತ್ತಿದ್ದಾರೆ ಎಂಬುದು ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಿದ ಸಂರ್ಶನಗಳಲ್ಲಿವೆ.
ಮಾತಂ ಕ್ಷೇತ್ರದಲ್ಲಿ ಕರ್ನಾಟಕ ಮತ್ತು ಬೆಂಗಳೂರು ಗೈದಿರುವ ಅಪಾರ ‘ಸಾಧನೆ’ ಕಡೆಗೆ ಸ್ವಲ್ಪ ಗಮನ ನೀಡೋಣ. ೨೦೦೪-೦೫ ರಲ್ಲಿ ಬೆಂಗಳೂರಿನ ಮಾತಂ ರಫ್ತು ೨೨,೦೦೦ ಕೋಟಿ ರೂ. ಇದು ದೇಶದ ಒಟ್ಟು ಮಾತಂ ರಫ್ತಿನ ೩೦% ರಷ್ಟಾಗುತ್ತದೆ. ನಿಜಕ್ಕೂ ‘ಹೆಮ್ಮೆ’ ಪಡುವ ಸಾಧನೆ. ನಮ್ಮ ದೇಶದ ಒಟ್ಟು ಉತ್ಪಾದನೆಗೆ ಮಾತಂ ಕ್ಷೇತ್ರದ ಕೊಡುಗೆ ಎಷ್ಟು ಗೊತ್ತೇ? ಕೇವಲ ೨%. ಇಷ್ಟು ಮಾತ್ರವಲ್ಲ. ಜಾಗತಿಕ ಮಾತಂ ಕ್ಷೇತ್ರಕ್ಕೆ ಭಾರತದ ಕೊಡುಗೆ ಕೇವಲ ೧.೪%. ದೇಶದ ಒಟ್ಟು ೧೦೦ ಕೋಟಿ ಜನಸಂಖ್ಯೆಯಲ್ಲಿ ಮಾತಂ ಕ್ಷೇತ್ರದಲ್ಲಿ ದುಡಿಯುತ್ತಿರುವವರು ಸುಮಾರು ೧೦ ಲಕ್ಷ ಮಂದಿ. ಅದರಲ್ಲಿ ಸುಮಾರು ೨.೫ ಲಕ್ಷ ಮಂದಿ ಬೆಂಗಳೂರಿನಲ್ಲಿದ್ದಾರೆ. ೨೦೧೦ರಲ್ಲಿ ಇದು ೫ ಲಕ್ಷವನ್ನು ತಲುಪುವ ನಿರೀಕ್ಷೆಯಿದೆ. ಇದರಲ್ಲಿ ಕನ್ನಡಿಗರ ಪಾಲು ಸುಮಾರು ೧.೫ ಲಕ್ಷ ಇರಬಹುದು. ಕರ್ನಾಟಕದ ಜನಸಂಖ್ಯೆ ಸುಮಾರು ೪ ಕೋಟಿ. ಅಂದರೆ ಈ ೧.೫ ಲಕ್ಷ ಉದ್ಯೋಗಕ್ಕಾಗಿ ೪ ಕೋಟಿ ಮಂದಿ ಇಂಗ್ಲೀಷಿಗೆ ಜೋತು ಬೀಳಬೇಕೆ? ಈಗಾಗಲೇ ಖ್ಯಾತನಾಮರು ತಿಳಿಸಿದಂತೆ ಮಾತಂ ಕ್ಷೇತ್ರದಲ್ಲಿ ಮೇಲೆ ಬರಬೇಕಾದರೆ ಒಂದನೇ ತರಗತಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯಬೇಕಾಗಿಲ್ಲ. ಹಾಗಿದ್ದರೆ ಈ ಮಾತಂ ಕ್ಷೇತ್ರದಲ್ಲಿ ಇಂಗ್ಲೀಷ್ ಪ್ರಾವೀಣ್ಯ ಬೇಡವೇ? ಬೇಕು. ಯಾರಿಗೆ ಗೊತ್ತೆ? ಕಾಲ್‌ಸೆಂಟರ್‌ಗಳಲ್ಲಿ ದುಡಿಯುವವರಿಗೆ. ಅವರ ಸಂಖ್ಯೆ ಸದ್ಯಕ್ಕೆ ಬೆಂಗಳೂರಿನಲ್ಲಿ ಸುಮಾರು ೫೦ ಸಾವಿರ ಇದೆ. ೨೦೧೦ರಲ್ಲಿ ಇದು ಒಂದು ಲಕ್ಷವನ್ನು ತಲುಪಬಹುದು. ಇದರಲ್ಲಿ ಕನ್ನಡಿಗರ ಪಾಲು ಸುಮಾರು ೩೦ ಸಾವಿರ ಇರಬಹುದಷ್ಟೆ. ಅಂದರೆ ಈ ೩೦,೦೦೦ ಕೆಲಸಗಳಿಗಾಗಿ ೪ ಕೋಟಿ ಕನ್ನಡಿಗರು ಒಂದನೇ ತರಗತಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯಬೇಕೆ?
ಮಾತಂ ಕ್ಷೇತ್ರದಲ್ಲಿ ನಮ್ಮ ಸಾಧನೆ ಕಡೆ ಇನ್ನಷ್ಟು ಗಮನ ಹರಿಸೋಣ. ಭಾರತೀಯರು ಅತಿಥಿ ಸೇವೆಗೆ ಪ್ರಖ್ಯಾತರು. ಈಗಿನ ಮಾತಂ ಯುಗದಲ್ಲಿ ಕೇವಲ ಸೇವೆಗೆ ಖ್ಯಾತರು. ಮಾತಂ ಕೆಲಸಗಳಲ್ಲಿ ಎರಡು ವಿಧ -ಉತ್ಪನ್ನ ಮತ್ತು ಸೇವೆ. ಭಾರತೀಯ ಮಾತಂ ಕಂಪೆನಿಗಳು ಸೇವೆಗೆ ಮಾತ್ರ ಹೆಸರು ಮಾಡಿದ್ದಾರೆ. ಅಮೇರಿಕದ ಬಹುಪಾಲು ಕಂಪೆನಿಗಳು ತಮ್ಮ ಕೆಲಸಗಳನ್ನು ಭಾರತಕ್ಕೆ ದಾಟಿಸುತ್ತಿದ್ದಾರೆ. ಆದರೆ ಅವು ಯಾವುವೂ ತಾಂತ್ರಿಕವಾಗಿ ಉನ್ನತ ಮಟ್ಟದ ಕೆಲಸಗಳಲ್ಲ. ಬಹು ಸರಳವಾದ, ಹತ್ತನೇ ತರಗತಿ ಪಾಸಾದ ಯಾರು ಬೇಕಾದರೂ ಮಾಡಬಲ್ಲ ತಂತ್ರಾಂಶ ಸೇವೆಗಳು ಮತ್ತು ತಂತ್ರಾಂಶಾಧಾರಿತ ಸೇವೆಗಳು. ಭಾರತದ ಮಾತಂ ರಫ್ತಿನ ಶೇಕಡ ೯೫ರಷ್ಟು ಸೇವೆಯಿಂದಲೇ ಬರುತ್ತಿದೆ. ಅಮೇರಿಕಾದ ಕಂಪೆನಿಗಳಿಗೆ ಅಲ್ಲೇ ಕೆಲಸಕ್ಕೆ ಜನ ನೇಮಿಸಿದರೆ ಎಷ್ಟು ಖರ್ಚು ಬರುತ್ತದೋ ಅದರ ಹತ್ತನೇ ಒಂದರಷ್ಟು ಖರ್ಚಿನಲ್ಲಿ ಭಾರತೀಯರಿಂದ ಭಾರತದಲ್ಲೇ ಕೆಲಸ ಮಾಡಿಸಿಕೊಳ್ಳಬಹುದು. ಮಾತಂ ಕ್ಷೇತ್ರದ ಉತ್ಪನ್ನಗಳೇನಿದ್ದರೂ ಅಮೇರಿಕದ ಕಂಪೆನಿಗಳಿಂದ ಬರುತ್ತಿವೆ. ಅಲ್ಲಿ ಕೆಲಸಗಾರರಾಗಿ ಭಾರತೀಯರಿದ್ದಾರೆ. ಆದರೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಭಾರತೀಯ ಮಾತಂ ಉತ್ಪನ್ನ ಯಾವುದೂ ಇಲ್ಲ. ನಾವು ಮಾತಂ ಕ್ಷೇತ್ರದಲ್ಲಿ ತುಂಬ ಮುಂದೆ ಇದ್ದೇವೆ ಎಂದು ಹೆಮ್ಮೆ ಪಟ್ಟುಕೊಳ್ಳುವಾಗ ಈ ಒಂದು ಅಂಶವನ್ನು ಚೆನ್ನಾಗಿ ಗಮನಿಸಬೇಕು. ಮಾತಂ ಕ್ಷೇತ್ರದಲ್ಲಿ ನಮ್ಮವರು ಅಮೇರಿಕ ಮತ್ತು ಯುರೋಪಿನ ದೇಶಗಳಿಗೆ ಕೂಲಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರೆ ಅದು ತುಂಬ ನಿಷ್ಠುರ ಮಾತು ಎನ್ನಿಸಬಹುದು. ಆದರೆ ಇದು ಬಹುಮಟ್ಟಿಗೆ ಸತ್ಯ ಸಂಗತಿಯಾಗಿದೆ.
ಈಗ ಹೇಳಿ. “ನೀವು ನಿಮ್ಮ ಮಕ್ಕಳನ್ನು ಒಂದನೆಯ ತರಗತಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲೇ ಕಲಿಸಿ ವಿದೇಶಗಳಿಗೆ ಕೂಲಿಗಳನ್ನಾಗಿ ತಯಾರಿಸಲು ಇಚ್ಛಿಸುತ್ತೀರಾ?”
(ಉಷಾಕಿರಣ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
August 13th, 2014 at 5:37 pm
jai kannadambe