ಮಾಹಿತಿ ತಂತ್ರಜ್ಞಾನಾಧಾರಿತ ಕೃಷಿ ಸಂಹವನ

ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಶಿವಮೊಗ್ಗದವರು ಪ್ರಕಟಿಸಿದ ಕೃಷಿ ವಿಜ್ಞಾನಗಳ ಸ್ನಾತಕ ಪದವಿ ಎರಡನೆ ಸೆಮಿಸ್ಟರ್‌ ಕನ್ನಡ ಪಠ್ಯ ಪುಸ್ತಕದಲ್ಲಿ (೨೦೧೭) ಪ್ರಕಟವಾದ ಒಂದು ಅಧ್ಯಾಯ

ಪೀಠಿಕೆ

ಸಾಹಿತ್ಯವನ್ನು ಕಥನ ಸಾಹಿತ್ಯ ಮತ್ತು ಮಾಹಿತಿ ಸಾಹಿತ್ಯ ಎಂದು ವಿಭಜಿಸಬಹದು. ಕಥೆ, ಕಾದಂಬರಿ, ಕವನ, ಇತ್ಯಾದಿಗಳು ಕಥನ ಸಾಹಿತ್ಯ ಎಂದೆನಿಸಿಕೊಳ್ಳುತ್ತವೆ. ವಿಜ್ಞಾನ, ತಂತ್ರಜ್ಞಾನ, ಆರೋಗ್ಯ, ಕೃಷಿ, ಕಾನೂನು, ಇತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ನೀಡುವ ಸಾಹಿತ್ಯವನ್ನು ಮಾಹಿತಿ ಸಾಹಿತ್ಯ ಎನ್ನಬಹುದು. ಮಾಹಿತಿ ಸಾಹಿತ್ಯದಲ್ಲಿ ವಿಜ್ಞಾನ ಮತ್ತು ಅದರ ಉಪಶಾಖೆಗಳಾದ ತಂತ್ರಜ್ಞಾನ, ಸಸ್ಯವಿಜ್ಞಾನ, ಕೃಷಿ, ಮಾಹಿತಿ ತಂತ್ರಜ್ಞಾನ, ಇತ್ಯಾದಿಗಳೆಲ್ಲ ಅಡಕವಾಗಿವೆ. ಇವೆಲ್ಲ ಅತಿ ವೇಗವಾಗಿ ಬೆಳೆಯುತ್ತಿರುವ ಜ್ಞಾನಶಾಖೆಗಳು. ಇವುಗಳ ಬಗ್ಗೆ ಬರೆಯುವ ಸಾಹಿತ್ಯವನ್ನು ಪ್ರಮುಖವಾಗಿ ಇನ್ನೆರಡು ವಿಭಾಗ ಮಾಡಬಹುದು.

ಮಾಹಿತಿ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಕೃಷಿ ಸಾಹಿತ್ಯ

ಮೊದಲನೆಯದಾಗಿ ಜನಪ್ರಿಯ ವಿಜ್ಞಾನ ಸಾಹಿತ್ಯ. ಈ ಲೇಖನದುದ್ದಕ್ಕೂ ವಿಜ್ಞಾನ ಎಂದು ಬರೆಯುವಾಗ ಕೃಷಿಯೂ ಅದರಲ್ಲಿ ಅಡಕವಾಗಿದೆ ಎಂದು ತಿಳಿದುಕೊಳ್ಳಬೇಕು. ಈ ಜನಪ್ರಿಯ ವಿಜ್ಞಾನ ಸಾಹಿತ್ಯ ಎಂದರೆ ಸ್ವಲ್ಪ ರಂಜನೀಯವಾಗಿ, ಓದಗರಿಗೆ ಆಸಕ್ತಿ ಹುಟ್ಟುವಂತೆ ಬರೆಯುವುದು. ದಿನಪತ್ರಿಕೆ, ವಾರಪತ್ರಿಕೆ, ಅಂತರಜಾಲತಾಣಗಳು, ಮ್ಯಾಗಝಿನ್ ಹೀಗೆ ಹಲವು ಕಡೆ ಇಂತಹ ಲೇಖನಗಳನ್ನು ನಾವು ನೋಡುತ್ತೇವೆ. ಎರಡನೆಯ ನಮೂನೆಯ ವಿಜ್ಞಾನ ಲೇಖನಗಳು ಅಥವಾ ಮಾಹಿತಿ ಸಾಹಿತ್ಯ ಎಂದರೆ ವಿಶ್ವಕೋಶದ ಶೈಲಿಯಲ್ಲಿ ಮಾಹಿತಿಯನ್ನು ನೀಡುವವು. ಇವು ಮೊದಲನೆಯ ನಮೂನೆಗೆ ಶೈಲಿಯಲ್ಲಿ ಸಂಪೂರ್ಣ ವಿರುದ್ಧವಾಗಿದ್ದು, ರಂಜನೆಯ ಭಾಷೆಯಲ್ಲಿ ಇಲ್ಲದೆ ಕೇವಲ ಮಾಹಿತಿಯನ್ನು ನೀಡುವಂತಹ ಲೇಖನಗಳಾಗಿರುತ್ತವೆ. ವಿಕಿಪೀಡಿಯದ ಲೇಖನಗಳು ಇವಕ್ಕೆ ಉದಾಹರಣೆ. ಎರಡು ನಮೂನೆಯ ಲೇಖನಗಳ ಉದ್ದೇಶ ಒಂದೇ –ಜನರಿಗೆ ಸರಿಯಾದ ಮಾಹಿತಿಯನ್ನು ತಲುಪಿಸುವುದು. ಹೇಳುವ ವಿಧಾನ ಮಾತ್ರ ಬೇರೆ ಬೇರೆ, ಅಷ್ಟೆ. ಎರಡೂ ನಮೂನೆಯ ಲೇಖನಗಳೂ ಒಂದಕ್ಕೊಂದು ಪೂರಕ ಹಾಗೂ ಅವುಗಳ ಅಗತ್ಯವಿದೆ.

ಕೃಷಿಯ ಬಗ್ಗೆ ಮಾಹಿತಿ ನೀಡುವ ಸಾಹಿತ್ಯವು ವಿಜ್ಞಾನ ಸಾಹಿತ್ಯಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಈಗಾಗಲೇ ತಿಳಿಸಿದಂತೆ ಅದು ವಿಜ್ಞಾನದ ಒಂದು ಶಾಖೆಯೇ ಆಗಿದೆ. ಕೃಷಿಯ ಬಗ್ಗೆ ಬರೆಯುವಾಗ ಮುಖ್ಯವಾಗಿ ನಾವು ಗಮನದಲ್ಲಿಟ್ಟುಕೊಳ್ಳಬೇಕಾದುದೇನೆಂದರೆ ಈ ಬರೆವಣಿಗೆ ಯಾರಿಗೋಸ್ಕರ ಎಂದು. ವಿಜ್ಞಾನ ಸಾಹಿತ್ಯಕ್ಕೆ ಎಲ್ಲ ನಮೂನೆಯ ಓದುಗರಿರುತ್ತಾರೆ. ಆದರೆ ಕೃಷಿಯ ಬಗೆಗಿನ ಬರೆವಣಿಗೆಗೆ ಪ್ರಮುಖವಾಗಿ ಕೃಷಿಕರು ಮಾತ್ರ ಓದುಗರಾಗಿರುತ್ತಾರೆ. ಅಂದರೆ ಬಹುತೇಕ ಓದುಗರು ವಿಶ್ವವಿದ್ಯಾಲಯಗಳ ಮಟ್ಟದ ಓದು ಮಾಡಿರುವುದಿಲ್ಲ. ಕನ್ನಡ ಭಾಷೆಯಲ್ಲಿ ಹೇಳಿದರೆ ಮಾತ್ರ ಅರಿತುಕೊಳ್ಳುವವರಾಗಿರುತ್ತಾರೆ. ಹಲವು ಇಂಗ್ಲಿಶ್ ಪದಗಳ ಪರಿಚಯವೂ ಇರುವುದಿಲ್ಲ. ಇವರಿಗಾಗಿ ಬರೆಯುವಾಗ ಹೆಚ್ಚಿನ ಎಚ್ಚರಿಕೆಯಿಂದ ಬರೆಯಬೇಕು. ಕ್ಲಿಷ್ಟವಾದ ಪದಗಳ ಬಳಕೆ, ತೂಕದ ವಾಕ್ಯಗಳ ಪ್ರಯೋಗ, ಇರಬಾರದು. ನಿಮ್ಮ ಉದ್ದೇಶ ಲೇಖನದಲ್ಲಿಯ ಮಾಹಿತಿ ಯಾರಿಗೆ ತಲುಪಬೇಕೋ ಅವರಿಗೆ ತಲುಪಬೇಕು ಮತ್ತು ಅದರಿಂದ ಅವರಿಗೆ ಉಪಯೋಗವಾಬೇಕು ಎಂಬುದು ಆಗಿರಬೇಕೇ ವಿನಾ ನಿಮ್ಮ ಪಾಂಡಿತ್ಯ ಪ್ರದರ್ಶನ ಅಥವಾ ಭಾಷಾಜ್ಞಾನದ ಪ್ರದರ್ಶನ ನಿಮ್ಮ ಲೇಖನದ ಉದ್ದೇಶವಾಗಿರಬಾರದು.

ಲೇಖನ ಬರೆಯುವಾಗ ಬಹುಮುಖ್ಯವಾಗಿ ಎದುರಾಗುವುದು ಪಾರಿಭಾಷಿಕ ಪದಗಳ ಸಮಸ್ಯೆ. ಕೃಷಿಯ ಬಗ್ಗೆ ಬರೆಯುವಾಗ ಆಧುನಿಕ ಸಂಶೋಧನೆ ಮತ್ತು ಸಂಬಂಧಿತ ವಿಷಯಗಳ ಬಗ್ಗೆ ಬರೆಯುವಾಗ ಈ ತೊಡಕು ಎದುರಾಗುತ್ತದೆ. ಆಧುನಿಕ ಕೃಷಿವಿಜ್ಞಾನದ ಪದಗಳು ಎಂದಿನಂತೆ ಮೂಲ ಇಂಗ್ಲಿಶಿನಿಂದ ಬಂದಿರುತ್ತವೆ. ಈ ಪದಗಳಿಗೆ ಸಮಾನಾರ್ಥ ಕನ್ನಡ ಪದಗಳ ಬಗೆಗೆ ಹೇಳುವುದಾದರೆ ಇವುಗಳಲ್ಲಿ ಎರಡು ನಮೂನೆ ಇವೆ. ಮೊದಲನೆಯದಾಗಿ ಇಂಗ್ಲಿಶ್ ಪದಕ್ಕೆ ಸಮಾನಾರ್ಥವಾದ ಕನ್ನಡ ಪದ ಇದ್ದರೆ ಅದನ್ನೇ ಬಳಸುವುದು ಅಥವಾ ಸೃಷ್ಟಿ ಮಾಡುವುದು. ಎರಡನೆಯ ವಿಧಾನದಲ್ಲಿ ಮೂಲ ಇಂಗ್ಲಿಶ್ ಪದಗಳನ್ನೇ ಬಳಸುವುದು. ನಮ್ಮದು ಮೂಲತಃ ಕೃಷಿ ಪ್ರಧಾನವಾದ ದೇಶವಾದ ಕಾರಣ ಕೃಷಿಯಲ್ಲಿ ಬಳಕೆಯಾಗುವ ಬಹುತೇಕ ವಸ್ತು, ಸಸ್ಯ, ಪ್ರಾಣಿ, ಇತ್ಯಾದಿಗಳಿಗೆ ಕನ್ನಡ ಭಾಷೆಯಲ್ಲಿ ಪದಗಳು ಇರುತ್ತವೆ. ಅಂತಹ ಸಂದರ್ಭಗಳಲ್ಲಿ ಮೂಲ ಕನ್ನಡದ ಪದವನ್ನೇ ಬಳಸಬೇಕು. ಉದಾಹರಣೆಗೆ ಆಲೂಗಡ್ಡೆ, ಗೆಣಸು, ಮಿಡತೆ, ಇತ್ಯಾದಿ. ಆಧುನಿಕ ರಾಸಾಯನಿಕ ವಸ್ತು, ಸೂಕ್ಷ್ಮಾಣು, ಹೊಸ ಹೊಸ ರೋಗ, ಇತ್ಯಾದಿಗಳಿಗೆ ಮಾತ್ರ ಇಂಗ್ಲಿಶಿನಲ್ಲೇ ಹೆಸರುಗಳು ಇರುತ್ತವೆ. ಇತ್ತೀಚೆಗೆ ಒಂದು ಹೊಸ ನಮೂನೆಯ ಭಾಷೆ ಹುಟ್ಟಿಕೊಂಡಿದೆ. ಅದೆಂದರೆ ಇಂಗ್ಲಿಶಿನಿಂದ ಕನ್ನಡಕ್ಕೆ ಶಬ್ದಾನುವಾದ ಮಾಡುವುದು. ಇದು ಖಂಡಿತಾ ತಪ್ಪು. ಉದಾಹರಣೆಗೆ ಇಂಗ್ಲಿಶಿನಲ್ಲಿ ಗೆಣಸಿಗೆ sweet potato ಎನ್ನುತ್ತಾರೆ. ಇದನ್ನು ಕೆಲವರು ಸಿಹಿ ಆಲೂಗಡ್ಡೆ ಎಂದು ಕನ್ನಡಕ್ಕೆ ಶಬ್ದಾನುವಾದ ಮಾಡಿ ಬಳಸಿದ್ದಾರೆ. ಇಂತಹವರನ್ನು ಹೀಗೆಯೇ ಬಿಟ್ಟರೆ ladies finger, eggplant ಗಳನ್ನೂ ಕನ್ನಡಕ್ಕೆ ಶಬ್ದಾನುವಾದ ಮಾಡಿ ಅವಾಂತರ ಮಾಡಿಯಾರು. ಅಂತಹ ತಪ್ಪು ಆಗದಂತೆ ಎಚ್ಚರ ವಹಿಸಬೇಕು.

ಇವಿಷ್ಟೂ ಕೃಷಿಸಾಹಿತ್ಯ ಬಗ್ಗೆ ಚಿಕ್ಕ ಪೀಠಿಕೆ. ಈಗ ಮುಖ್ಯ ವಿಷಯದ ಕಡೆಗೆ ಬರೋಣ. ಆಧುನಿಕ ವಿಜ್ಞಾನ ತಂತ್ರಜ್ಞಾನದ ಪ್ರಮುಖ ಕೊಡುಗೆ. ಮಾಹಿತಿ ತಂತ್ರಜ್ಞಾನ. ಇತ್ತೀಚೆಗೆ ಇದಕ್ಕೆ ಸಂವಹನವನ್ನೂ ಸೇರಿಸಿಕೊಂಡು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ  (Information Communication Technology, ICT) ಎಂದು ಕರೆಯುತ್ತಾರೆ. ಗಣಕ, ಲ್ಯಾಪ್‌ಟಾಪ್, ಮೊಬೈಲ್ ಫೋನ್, ಧರಿಸಬಲ್ಲ ಸಾಧನಗಳು, ಅಂತರಜಾಲ, ಇತ್ಯಾದಿಗಳೆಲ್ಲ ಇದರ ವ್ಯಾಪ್ತಿಯಲ್ಲಿ ಬರುತ್ತವೆ. ಕೃಷಿ ಬಗೆಗಿನ ಮಾಹಿತಿಗಳನ್ನು ಅದರ ಬಳಕೆದಾರರಿಗೆ ಅಂದರೆ ಪ್ರಮುಖವಾಗಿ ಕೃಷಿಕರಿಗೆ ತಲುಪಿಸುವುದು, ಅದನ್ನು ಮಾಡುವ ವಿಧಾನಗಳು, ಅಲ್ಲಿ ಬಳಸಬೇಕಾದ ಭಾಷೆ, ಎಚ್ಚರಿಕೆ -ಇವುಗಳೆಲ್ಲ ಈ ಲೇಖನದ ಪ್ರಮುಖ ವಿಷಯಗಳು. ಮಾಹಿತಿ ಮತ್ತು ಸಂವಹನ ತಂತ್ರಜ್ಞಾನದ ಎಲ್ಲ ಅಂಗಗಳಲ್ಲೂ ಈಗ ಕನ್ನಡವನ್ನು ಯಾವುದೇ ಸಮಸ್ಯೆಯಿಲ್ಲದೆ ಬಳಸಬಹುದು. ಇದಕ್ಕೆ ಕಾರಣ ಯುನಿಕೋಡ್ ಶಿಷ್ಟತೆ. ಎಲ್ಲರೂ ಯುನಿಕೋಡ್ ಶಿಷ್ಟತೆಯನ್ನು ಬಳಸುವ ಮೂಲಕ ಮಾಹಿತಿಯ ವರ್ಗಾವಣೆ ಮತ್ತು ಹುಡುಕುವಿಕೆ ಸಾಧ್ಯವಾಗಿದೆ. ಈ ಲೇಖನದಲ್ಲಿ ಅಂತರಜಾಲ ಮತ್ತು ಮಾಹಿತಿ ತಂತ್ರಜ್ಞಾನದ ಇತರೆ ಕೊಡುಗೆಗಳನ್ನು ಕೃಷಿ ಸಂವಹನಕ್ಕೆ ಬಳಸುವ ಬಗ್ಗೆ ಬರೆಯುವಾಗ ಎಲ್ಲ ಸಂವಹನಗಳೂ ಕನ್ನಡ ಯುನಿಕೋಡ್‌ನಲ್ಲಿಯೇ ಅಗುತ್ತವೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು.

ಇಮೈಲ್ (email)

ಅಂತರಜಾಲ ಮೂಲಕ ಪರಸ್ಪರ ವಿದ್ಯುನ್ಮಾನ ಪತ್ರ ಕಳುಹಿಸಲು ಮತ್ತು ಸ್ವೀಕರಿಸಲು ಇಮೈಲ್ ಬಳಕೆಯಾಗುತ್ತದೆ. ವ್ಯಕ್ತಿಯಿಂದ ವ್ಯಕ್ತಿಗೆ ವಿ-ಪತ್ರ ಕಳುಹಿಸಲು ಇದರ ಬಳಕೆಯೇ ಅಧಿಕ. ಇಮೈಲ್ ಮೂಲಕ ಹಲವು ಜನರಿಗೆ ಏಕಕಾಲಕ್ಕೆ ವಿ-ಪತ್ರ ಕಳುಹಿಸಬಹುದು. ಸುದ್ದಿ ಪತ್ರ ಕಾರ್ಯಕ್ರಮಗಳ ಆಹ್ವಾನ ಪತ್ರ, ಇತ್ಯಾದಿಗಳನ್ನು ಕಳುಹಿಸಲು ಈ ವಿಧಾನವನ್ನು ಬಳಸುತ್ತಾರೆ. ಕೆಲವೊಮ್ಮೆ ವಿಚಾರ ಸಂಕಿರಣಗಳಲ್ಲಿ ಅಥವಾ ಯಾವುದಾದರೂ ಸಭೆಯಲ್ಲಿ ಹಲವು ಭಾಷಣಗಾರರು ಇದ್ದು, ಒಬ್ಬೊಬ್ಬರಿಗೂ ಅವರ ಭಾಷಣದ ವಿಷಯ ಮತ್ತು ಸಮಯವನ್ನು ಇಮೈಲ್ ಮೂಲಕ ಕಳುಹಿಸುವಾಗ ಒಬ್ಬೊಬ್ಬರಿಗೂ ವೈಯಕ್ತಿಕವಾಗಿ ವಿವರಗಳನ್ನು ಕಳುಹಿಸಲು ಸಾಧ್ಯವಿದೆ. ಅದಕ್ಕಾಗಿ ವಿವರಗಳನ್ನು ಒಂದು ಫೈಲಿನಲ್ಲಿಟ್ಟು ಅಲ್ಲಿಂದ ತೆಗೆದುಕೊಂಡು ಪ್ರತಿಯೊಬ್ಬರಿಗೂ ಪ್ರತ್ಯೇಕ ಇಮೈಲ್ ಕಳುಹಿಸಬಹುದು.  ಇದಕ್ಕೆ ಮೈಲ್ ಮರ್ಜ್ ಎನ್ನುತ್ತಾರೆ. ಬೇರೆ ಬೇರೆ ಕೃಷಿಕರ ದತ್ತಸಂಚಯ ಇಟ್ಟುಕೊಂಡು ಅದರಲ್ಲಿ ಅವರ ಹೆಸರು, ಇಮೈಲ್ ವಿಳಾಸ, ಕೃಷಿ ಬೆಳೆಯ ವಿವರ ಎಲ್ಲ ಇಟ್ಟುಕೊಳ್ಳಬಹುದು. ಒಬ್ಬೊಬ್ಬರಿಗೂ ಪ್ರತ್ಯೇಕ ಮಾಹಿತಿಯನ್ನು ಮೈಲ್ ಮರ್ಜ್ ಮೂಲಕ ಕಳುಹಿಸಬಹುದು.

ಇಮೈಲ್ ಮೂಲಕ ಹಲವರು ಒಟ್ಟು ಸೇರಿ ಎಲ್ಲ ಸದಸ್ಯರೂ ಬೇರೆ ಬೇರೆ ವಿಷಯಗಳನ್ನು ಚರ್ಚಿಸುವ ವೇದಿಕೆಯನ್ನು ಮಾಡಿಕೊಳ್ಳಬಹುದು. ಇದಕ್ಕೆ ಮೈಲಿಂಗ್ ಲಿಸ್ಟ್ ಎನ್ನುತ್ತಾರೆ. ಗೂಗ್ಲ್ ಗ್ರೂಪ್ ಅಥವಾ ಅದೇ ಮಾದರಿಯ ಇತರೆ ಸೌಲಭ್ಯಗಳನ್ನು ಇದಕ್ಕೆ ಬಳಸಬಹುದು. ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚೆ, ಸಮಸ್ಯೆಗಳಿಗೆ ಪರಿಹಾರ, ಘೋಷಣೆ, ಇತ್ಯಾದಿಗಳಿಗೆ ಮೈಲಿಂಗ್ ಲಿಸ್ಟ್ ಬಳಕೆ ಮಾಡಬಹುದು. ಒಬ್ಬ ರೈತರು ತನಗೆ ಬಂದಿರುವ ಸಮಸ್ಯೆ, ಉದಾಹರಣೆಗೆ ಯಾವುದೋ ಬೆಳೆಗೆ ತಗುಲಿದ ರೋಗ, ಗಿಡದ ಫೋಟೋ ಎಲ್ಲ ಮೈಲಿಂಗ್ ಲಿಸ್ಟ್‌ನಲ್ಲಿ ಪೋಸ್ಟ್ ಮಾಡಿದರೆ ಇನ್ಯಾರಾದರೂ ಅದಕ್ಕೆ ಪರಿಹಾರ ನೀಡಬಹುದು. ಸರಿಯಾಗಿ ಬಳಸಿದರೆ ಮೈಲಿಂಗ್ ಲಿಸ್ಟ್ ತುಂಬ ಪ್ರಯೋಜನಕಾರಿ. ಆದರೆ ನಮ್ಮ ದೇಶದಲ್ಲಿ ಅದರ ಬಳಕೆ ಇತ್ತೀಚೆಗೆ ಅಷ್ಟಾಗಿ ಆಗುತ್ತಿಲ್ಲ. ಬಹುತೇಕ ಮಂದಿ ಫೇಸ್‌ಬುಕ್‌ನಲ್ಲಿ ಗ್ರೂಪ್ ಮಾಡಿಕೊಂಡು ಇದನ್ನೇ ಮಾಡುತ್ತಿರುವುದು ಇದಕ್ಕೆ ಕಾರಣವಾಗಿರಬಹುದು.

ಅಂತರಜಾಲ ತಾಣಗಳು (websites)

ಅಂತರಜಾಲ ತಾಣಗಳು ಅಥವಾ ಜಾಲತಾಣಗಳನ್ನು (websites) ಪೋಷಿಸುವ (hosting) ವಿಶ್ವವ್ಯಾಪಿ ಜಾಲವನ್ನೇ (world wide web or www) ಹಲವು ಮಂದಿ ಅಂತರಜಾಲ (Internet) ಎಂದು ನಂಬಿದ್ದಾರೆ. ಆದರೆ ಈ ವಿಶ್ವವ್ಯಾಪಿ ಜಾಲ ಎಂಬುದು ಅಂತರಜಾಲದ ಒಂದು ಘಟಕ ಮಾತ್ರ. ಬಹಜನರು ಬಳಸುವ ಇಮೈಲ್ ಇನ್ನೊಂದು ಘಟಕ. ವಿಶ್ವವ್ಯಾಪಿ ಜಾಲವೆಂಬುದು ಮಾಹಿತಿಯ ಬಹುದೊಡ್ಡ ಕಣಜವಾಗಿದೆ. ಕೋಟಿಗಟ್ಟಲೆ ಜಾಲತಾಣಗಳು ಇದರಲ್ಲಿ ಅಡಕವಾಗಿವೆ. ಕೃಷಿ ಸಂಬಂಧಿ ಜಾಲತಾಣಗಳೂ ಹಲವಾರಿವೆ. ಒಂದು ಪ್ರಮುಖ ಉದಾಹರಣೆ ಕೃಷಿಮಾಧ್ಯಮ ಕೇಂದ್ರದ ಜಾಲತಾಣ – http://www.krushimadhyama.org. ಈ ಜಾಲತಾಣವು ಕೃಷಿಕಪರ ಕೃಷಿಪತ್ರಿಕೋದ್ಯಮದ ಬೆಳವಣಿಗೆಗೆ, ಅದರಲ್ಲೂ ಪ್ರಮುಖವಾಗಿ ಅಂತರಜಾಲ ಮೂಲಕವಾಗಿ ಕೆಲಸ ಮಾಡುತ್ತಿದೆ. ಇದೇ ಮಾದರಿಯ ಇತರೆ ಜಾಲತಾಣಗಳನ್ನು ಸೃಷ್ಟಿ ಮಾಡಿ ಕೃಷಿ ಸಂವಹನ ಮಾಡಬಹುದು. ಕೃಷಿ ಬಗ್ಗೆ ಸುದ್ದಿ, ಲೇಖನಗಳನ್ನು ನೀಡುವ ಅಂತರಜಾಲ ಪತ್ರಿಕೆಗಳು ಇವೆ ಅಥವಾ ಅಂತಹವುಗಳನ್ನು ಹೊಸದಾಗಿ ಪ್ರಾರಂಭಿಸಬಹುದು. ಈ ಜಾಲತಾಣಗಳಲ್ಲಿ ಸುದ್ದಿ, ಲೇಖನ, ಸಹಾಯ ಅಲ್ಲದೆ ಹವಾಮಾನ, ದೈನಂದಿನ ಕೃಷಿ ಉತ್ಪನ್ನಗಳ ಬೆಲೆಗಳು, ಪರಿಣತರಿಂದ ವಿಶೇಷ ಸಂಶೋಧನೆಗಳ ವಿವರ, ಇತ್ಯಾದಿಗಳೂ ಇರಬಹುದು. ಇವೆಲ್ಲ ರೈತರಿಗಾಗಿ ಬರೆಯುವವುಗಳಾದುದರಿಂದ ಬಳಸುವ ಭಾಷೆ ಬಗ್ಗೆ ಈ ಲೇಖನದ ಪ್ರಾರಂಭದಲ್ಲಿ ನೀಡಿರುವ ಮಾರ್ಗಸೂಚಿಗಳನ್ನು ಬಳಸಿಕೊಳ್ಳುವುದು ಉತ್ತಮ.

ಬ್ಲಾಗ್ ಜಾಲತಾಣಗಳನ್ನೂ ಕೃಷಿ ಸಂವಹನಕ್ಕೆ ಬಳಸಬಹುದು. ಬ್ಲಾಗ್ ಎಂಬುದು ವೈಯಕ್ತಿಕ ಅನಿಸಿಕೆಗಳನ್ನು ಸಾರ್ವಜನಿಕವಾಗಿ ಹಂಚಿಕೊಳ್ಳಲು ಇರುವ ಒಂದು ಸವಲತ್ತು. ಉಚಿತವಾಗಿ ಬ್ಲಾಗ್ ತಯಾರಿಯ ಸವಲತ್ತನ್ನು ನೀಡುವ ಹಲವು ಜಾಲತಾಣಗಳಿವೆ. ಉದಾಹರಣೆಗೆ blogger.com, wordpress.com. ಬ್ಲಾಗ್‌ ಬರೆಹಗಳಿಗೆ ಲೇಖನದ ಕೆಳಗೆ ಅಭಿಪ್ರಾಯ ಸೇರಿಸುವ ಸವಲತ್ತೂ ಇದೆ. ಇವುಗಳ ಮೂಲಕ ರಚನಾತ್ಮಕ ಸಂವಹನ ಸಾಧ್ಯ.

ಆನ್‌ಲೈನ್ ಚರ್ಚಾ ಕೂಟಗಳು

ಅಂತರಜಾಲದಲ್ಲಿ ಹಲವು ಮಂದಿ ಒಟ್ಟಿಗೆ ಸೇರಿ ಯಾವುದಾದರೊಂಮದು ವಿಷಯದ ಬಗ್ಗೆ ಚರ್ಚೆ ಮಾಡಲು ಅನುವು ಮಾಡಿಕೊಡುವ ತಂತ್ರಾಂಶಗಳು ಹಾಗೂ ಅವುಗಳನ್ನು ಬಳಸುವ ಜಾಲತಾಣಗಳು ಹಲವಾರಿವೆ. ಇವುಗಳನ್ನು ಕೃಷಿ ಸಂಬಂಧಿ ಚರ್ಚೆಯ ವೇದಿಕೆಗಳನ್ನು ಸೃಷ್ಟಿಸಲು ಬಳಸಬಹುದು. ಈಗಾಗಲೇ ಇರುವ ಇಂತಹ ಸೌಲಭ್ಯಗಳನ್ನು ಬಳಸಿಕೊಳ್ಳಬಹುದು. ಇತ್ತೀಚೆಗೆ ಫೇಸ್‌ಬುಕ್ ತುಂಬ ಜನಪ್ರಿಯವಾಗಿರುವುದರಿಂದ ಇಂತಹ ಪ್ರತ್ಯೇಕ ಚರ್ಚಾವೇದಿಕೆಗಳ ಬಳೆಕ ಕಡಿಮೆಯಾಗಿ ಅವುಗಳ ಬದಲಿಗೆ ಫೇಸ್‌ಬುಕ್‌ನಲ್ಲೇ ಅಂತಹ ವೇದಿಕೆಗಳ ಸೃಷ್ಟಿ ಹಾಗೂ ಬಳಕೆ ಜಾಸ್ತಿಯಾಗುತ್ತಿದೆ.

ಸಾಮಾಜಿಕ ಮಾಧ್ಯಮ (social media)

ಸಾಮಾಜಿಕ ಮಾಧ್ಯಮಗಳು ಸಾಮಾನ್ಯವಾಗಿ ಅಂತರಜಾಲದ ಮೂಲಕ ಕೆಲಸ ಮಾಡುತ್ತವೆ. ಇವಗಳನ್ನು ಬಳಸಿ ಆನ್‌ಲೈನ್ ಸಮಾಜವನ್ನು ನಿರ್ಮಾಣ ಮಾಡಬಹುದು. ಸಾಮಾಜಿಕ ಮಾಧ್ಯಮಕ್ಕೆ ಕೆಲವು ಪ್ರಮುಖ ಉದಾಹರಣೆಗಳು ಟ್ವಿಟ್ಟರ್, ಫೇಸ್‌ಬುಕ್, ಲಿಂಕ್‌ಡ್‌ಇನ್, ಇನ್‌ಸ್ಟಾಗ್ರಾಂ, ಇತ್ಯಾದಿ. ಟ್ವಿಟ್ಟರ್‌ಗೆ ಮೈಕ್ರೊಬ್ಲಾಗ್ ಎಂಬ ಹೆಸರೂ ಇದೆ. ಇದರಲ್ಲಿ 280 ಅಕ್ಷರಗಳ ಮಿತಿಯೊಳಗೆ ತಮಗಿಷ್ಟಬಂದುದನ್ನು ಬರೆಯಬಹುದು. ಫೇಸ್‌ಬುಕ್ ಇತ್ತೀಚೆಗೆ ತುಂಬ ಜನಪ್ರಿಯವಾಗಿದೆ. ಇದರಲ್ಲಿ ಬೇರೆ ಬೇರೆ ವಿಷಯಗಳ ಬಗ್ಗೆ ಚರ್ಚಿಸಲು ಗ್ರೂಪ್‌ಗಳನ್ನು ತಯಾರಿಸುವ ಸೌಲಭ್ಯವಿದೆ. ಕೃಷಿ ಬಗ್ಗೆಯೂ ಗ್ರೂಪ್‌ಗಳನ್ನು ಮಾಡಬಹುದು. ಉದಾಹರಣೆಗೆ ನಗರಗಳಲ್ಲಿ ಮಾಡುವ ತಾರಸಿ ತೋಟ ಬಗ್ಗೆ ಚರ್ಚಿಸಲೆಂದೇ ಫೇಸ್‌ಬುಕ್‌ನಲ್ಲಿ ಕೆಲವು ತಂಡಗಳು (ಗ್ರೂಪ್) ಇವೆ. ಯಾವುದಾದರೊಂದು ಗಿಡವನ್ನು ನೆಟ್ಟು ಬೆಳೆಸಬೇಕಿದ್ದರೆ ಏನೆಲ್ಲ ಎಚ್ಚರಿಕೆಗಳನ್ನು ಪಾಲಿಸಬೇಕು ಎಂದು ಒಬ್ಬರು ಪ್ರಶ್ನೆ ಹಾಕಿದರೆ ಇನ್ನೊಬ್ಬ ಪರಿಣತರು ಅದಕ್ಕೆ ಉತ್ತರ ನೀಡುತ್ತಾರೆ. ಇದೇ ಮಾದರಿಯಲ್ಲಿ ಒಂದೊಂದು ನಮೂನೆಯ ಕೃಷಿಗೂ ಒಂದೊಂದು ಗ್ರೂಪ್ ಮಾಡಿಕೊಂಡು ಚರ್ಚಿಸಬಹುದು. ಸರಿಯಾಗಿ ಬಳಸಿದರೆ ಇದು ಒಂದು ಶಕ್ತಿಶಾಲಿಯಾದ ಮಾಧ್ಯಮ.

ಅಂತರಜಾಲ ಸೆಮಿನಾರ್/ವೆಬಿನಾರ್

ಅಂತರಜಾಲದ ಮೂಲಕ ಸೆಮಿನಾರ್ ಅಥವಾ ಭಾಷಣ ನೀಡಲು ಅನುಕೂಲ ಮಾಡಿಕೊಡುವ ಹಲವು ಜಾಲತಾಣಗಳಿವೆ. ಅವುಗಳನ್ನು ಬಳಸಿ ಕೃಷಿ ಬಗ್ಗೆಯೂ ಸೆಮಿನಾರ್ ನಡೆಸಬಹುದು. ಇದು ವೆಬ್ ಮೂಲಕ ನಡೆಯುವುದರಿಂದ ಇದಕ್ಕೆ ವೆಬಿನಾರ್ ಎಂಬ ಹೆಸರೂ ಇದೆ. ಒಬ್ಬರು ಕ್ಯಾಮರ ಮುಂದೆ ನಿಂತುಕೊಂಡು ಮಾತನಾಡುವುದು ಅಂತರಜಾಲದ ಮೂಲಕ ಜಗತ್ತಿಗೆಲ್ಲ ಪ್ರಸಾರ ಆಗುತ್ತದೆ. ಈ ಪ್ರಸಾರದ ವಿಳಾಸ ತಿಳಿದವರು ಆ ಹೊತ್ತಿಗೆ ಲಾಗಿನ್ ಆಗಿ ಅದನ್ನು ವೀಕ್ಷಿಸಬಹುದು. ವೀಕ್ಷಕರು ಪ್ರಶ್ನೆಗಳನ್ನೂ ಕೇಳಬಹುದು. ಕೃಷಿ ಬಗ್ಗೆ ಕೂಡ ವೆಬಿನಾರ್ ನಡೆಸಬಹುದು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ ತಾನೆ? ಇವುಗಳನ್ನು ನಡೆಸಲು ಮತ್ತು ವೀಕ್ಷಿಸಲು ಉತ್ತಮ ಬ್ಯಾಂಡ್‌ವಿಡ್ತ್ ಅಂದರೆ ಅತಿ ವೇಗದ ಅಂತರಜಾಲ ಸಂಪರ್ಕ ಅಗತ್ಯ. ವೆಬಿನಾರ್ ನಡೆಯುತ್ತಿರುವಾಗ ಭಾಗವಹಿಸಲು ಸಾದ್ಯವಾಗದಿದ್ದವರು ನಂತರ ಅದರ ರೆಕಾರ್ಡಿಂಗ್ ಅನ್ನು ವೀಕ್ಷಿಸುವ ಸೌಲಭ್ಯವೂ ಕೆಲವು ಜಾಲತಾಣಗಳಲ್ಲಿ ಇರುತ್ತವೆ. ಆದರೆ ಆಗ ಪ್ರಶ್ನೆ ಕೇಳಲು ಆಗುವುದಿಲ್ಲ.

ಧ್ವನಿ (ಆಡಿಯೊ), ವಿಡಿಯೋ, ಬಹುಮಾಧ್ಯಮ

ಅಂತರಜಾಲದಲ್ಲಿ ಭಾಷಣ, ಸಂವಾದ, ಇತ್ಯಾದಿಗಳ ಆಡಿಯೋ ರೆಕಾರ್ಡಿಂಗ್ ಮಾಡಿ ಸೇರಿಸಬಹುದು. ಇವನ್ನು ಆಸಕ್ತರು ಡೌನ್‌ಲೋಡ್ ಮಾಡಿ ಆಲಿಸಬಹುದು. ಅಂತರಜಾಲದ ಮೂಲಕ ಧ್ವನಿಯ ಪ್ರಸಾರವನ್ನೂ ಮಾಡಬಹುದು. ಇದಕ್ಕೆ ಆಡಿಯೋ ಸ್ಟ್ರೀಮಿಂಗ್ (audio streaming) ಎಂಬ ಹೆಸರಿದೆ. ಅಂತರಜಾಲದ ಮೂಲಕವೇ ಕೆಲಸ ಮಾಡುವ ಕೆಲವು ರೇಡಿಯೋ ಕೇಂದ್ರಗಳು ಇದಕ್ಕೆ ಉತ್ತಮ ಉದಾಹರಣೆ. ಕೃಷಿಯ ಬಗೆಗಿನ ವಿಷಯಗಳ ಸಂವಹನಕ್ಕಾಗಿ ಇವನ್ನು ಬಳಸಬಹುದು.

ಕೃಷಿಯ ಬಗೆಗಿನ ವಿಡಿಯೋಗಳನ್ನು ತಯಾರಿಸಿ ಅಂತರಜಾಲದಲ್ಲಿಟ್ಟು ಆಸಕ್ತರಿಗೆ ಡೌನ್‌ಲೋಡ್ ಮಾಡಿಕೊಳ್ಳಲು ಅನುವು ಮಾಡಿಕೊಡಬಹುದು. ಈ ವಿಡಿಯೋಗಳು ಬೇರೆ ಬೇರೆ ನಮೂನೆಯ ಕೃಷಿ, ಸಸ್ಯಗಳನ್ನು ಬೆಳೆಸುವ ವಿಧಾನ, ಕಾಯಿಲೆಗಳನ್ನು ಗುರುತಿಸುವುದು ಹಾಗೂ ಅವುಗಳನ್ನು ಗುಣಪಡಿಸುವುದು, ಸಂಸ್ಕರಣೆ, ಇತ್ಯಾದಿ ಹಲವು ವಿಷಯಗಳ ಬಗ್ಗೆ ಇರಬಹುದು.

ಪಠ್ಯ, ಧ್ವನಿ, ಚಿತ್ರಸಂಚಲನೆ (animation) ಎಲ್ಲ ಸೇರಿದಾಗ ಅದು ಬಹುಮಾಧ್ಯಮ (multimedia) ಎನಿಸಿಕೊಳ್ಳುತ್ತದೆ. ರೈತರಿಗೆ ಸಹಾಯಕಾರಿಯಾಗಬಲ್ಲ ಟ್ಯುಟೋರಿಯಲ್ ವಿಡಿಯೋಗಳನ್ನು ಬಹುಮಾಧ್ಯಮದಲ್ಲಿ ತಯಾರಿಸಬಹುದು. ಇವುಗಳನ್ನು ಅಂತರಜಾಲದಲ್ಲಿಟ್ಟು ಆಸಕ್ತರಿಗೆ ಡೌನ್‌ಲೋಡ್ ಮಾಡಿಕೊಳ್ಳಲು ನೀಡಬಹುದು ಅಥವಾ ಡಿ.ವಿ.ಡಿ. (ಅಥವಾ ಯುಎಸ್‌ಬಿ ಡ್ರೈವ್) ಮೂಲಕ ಹಂಚಬಹುದು. ಇವುಗಳನ್ನು ತಯಾರಿಸುವಾಗ ಬಳಸುವ ಭಾಷೆ ಜನರಿಗೆ ಸುಲಭವಾಗಿ ಅರ್ಥವಾಗುವಂತಿರಬೇಕು.

ಮೊಬೈಲ್ ಫೋನ್‌ಗಳ ಬಳಕೆ   

ಮೊಬೈಲ್ ಫೋನ್‌ಗಳು ಈಗ ಸರ್ವೇಸಾಮಾನ್ಯವಾಗಿವೆ. ಮೊಬೈಲ್ ಫೋನ್ ಇಲ್ಲದವರೇ ಇಲ್ಲದಂತಾಗಿದೆ. ಮೊಬೈಲ್ ಫೋನ್‌ಗಳಲ್ಲಿ ಪ್ರಮುಖವಾಗಿ ಎರಡು ನಮೂನೆ. ಮೊದಲನೆಯದಾಗಿ ಸರಳವಾದ ಫೋನ್‌ಗಳು. ಈ ಫೋನ್‌ಗಳನ್ನು ಬಳಸಿ ಕರೆ ಮಾಡುವುದು ಮತ್ತು ಸಂದೇಶ ರವಾನೆ (ಎಸ್‌ಎಂಎಸ್‌) ಮಾಡಬಹುದು. ಎರಡನೆಯ ನಮೂನೆ ಎಂದರೆ ಸ್ಮಾರ್ಟ್‌ಫೋನ್‌ಗಳು. ಇವುಗಳನ್ನು ಬಳಸಿ ಇಮೈಲ್, ಅಂತರಜಾಲ ವೀಕ್ಷಣೆ, ಕಿರುತಂತ್ರಾಂಶಗಳ (ಆಪ್) ಬಳಕೆ, ಆಟಗಳನ್ನು ಆಡುವುದು, ಕ್ಯಾಮರ ಬಳಸಿ ಫೋಟೋ, ವಿಡಿಯೋ ತೆಗೆಯುವುದು ಎಲ್ಲ ಮಾಡಬಹುದು.

ಎಸ್‌ಎಂಎಸ್

ಎಸ್‌ಎಂಎಸ್ ಎಂದರೆ ಮೊಬೈಲ್ ಫೋನ್‌ಗಳನ್ನು ಬಳಸಿ ಚಿಕ್ಕ ಸಂದೇಶಗಳನ್ನು ಕಳುಹಿಸುವುದು. ಎಸ್‌ಎಂಎಸ್‌ಗಳನ್ನು ಸಮರ್ಥವಾಗಿ ಬಳಸಬಹುದು. ಇತ್ತೀಚೆಗಿನ ಬೆಲೆ, ಹವಾಮಾನ, ಇತರೆ ಕೃಷಿ ಸಂಬಂಧಿ ಸುದ್ದಿಗಳನ್ನೆಲ್ಲ ಎಸ್‌ಎಂಎಸ್‌ ಮೂಲಕ ಕಳುಹಿಸಬಹುದು. ಯಾವುದಾದರು ಕಾರ್ಯಕ್ರಮ ಇದ್ದಲ್ಲಿ ಅದರ ಬಗ್ಗೆ ಮಾಹಿತಿ ನೀಡಲೂ ಇದನ್ನು ಬಳಸಬಹುದು. ಸರಳ ಫೋನ್‌ಗಳಲ್ಲೂ ಕನ್ನಡದಲ್ಲಿ ಎಸ್‌ಎಂಎಸ್‌ ಮಾಡುವ ಸೌಲಭ್ಯಗಳು ಕೆಲವು ಫೋನ್‌ಗಳಲ್ಲಿವೆ. ಬಹುತೇಕ ಸ್ಮಾರ್ಟ್‌ಫೋನ್‌ಗಳಲ್ಲಿ ಕನ್ನಡದಲ್ಲೇ ಎಸ್‌ಎಂಎಸ್‌ ಮಾಡಬಹುದು. ಇಲ್ಲಿ 160 ಅಕ್ಷರಗಳ ಮಿತಿ ಇದೆ. ಆದುದರಿಂದ ಹೇಳಬೇಕಾದ ವಿಷಯವನ್ನು ಚಿಕ್ಕದಾಗಿ ಹೇಳಬೇಕು. ಅದು ಕೂಡ ಒಂದು ಕಲೆಯೇ! ಒಂದೇ ಸಂದೇಶವನ್ನು ಹಲವರಿಗೆ ಏಕಕಾಲಕ್ಕೆ ಕಳುಹಿಸಬಹುದು. ಈ ರೀತಿ ಸಂದೇಶಗಳನ್ನು ಕಳುಹಿಸಲು ವಾಣಿಜ್ಯಕ ಸೇವೆ ನೀಡುವವರೂ ಇದ್ದಾರೆ.

ವಾಟ್ಸ್‌ಆಪ್

ಸ್ಮಾರ್ಟ್‌ಫೋನ್‌ಗಳ ಮೂಲಕ ಒಬ್ಬರಿಗೊಬ್ಬರಿಗೆ ಸಂದೇಶ ರವಾನೆಗೆ ಹಲವು ಸವಲತ್ತುಗಳಿವೆ. ಅಂತಹ ಒಂದು ಸವಲತ್ತು ವಾಟ್ಸ್‌ಆಪ್. ಇದರಲ್ಲಿ ಎಲ್ಲ ಸಂದೇಶಗಳೂ ಅಂತರಜಾಲದ ಮೂಲಕವೇ ಸಾಗುತ್ತವೆ. ವಾಟ್ಸ್‌ಆಪ್ ಮೂಲಕ ಸಂದೇಶ, ಫೋಟೋ, ವಿಡಿಯೋ ಎಲ್ಲ ಕಳುಹಿಸಬಹುದು. ವಾಟ್ಸ್‌ಆಪ್‌ನಲ್ಲಿ ಗ್ರೂಪ್‌ಗಳನ್ನು ತಯಾರಿಸುವ ಸವಲತ್ತಿದೆ. ಇದನ್ನು ಬಳಸಿಕೊಂಡು ಕೃಷಿಯ ಬಗೆಗೆ ಗ್ರೂಪ್‌ಗಳನ್ನು ಮಾಡಿಕೊಂಡು ವಿಚಾರ ವಿನಿಮಯ ಮಾಡಬಹುದು. ಸುದ್ದಿಗಳನ್ನು ಹಂಚಬಹುದು. ಸರಿಯಾಗಿ ಬಳಸಿದರೆ ಇದು ಒಂದು ತುಂಬ ಶಕ್ತಿಶಾಲಿಯಾದ ಮಾಧ್ಯಮವಾಗಿದೆ. ವಾಟ್ಸ್‌ಆಪ್‌ ಅನ್ನು ಲ್ಯಾಪ್‌ಟಾಪ್ ಅಥವಾ ಗಣಕದಲ್ಲಿ ಬಳಸಬಹುದು. ಆದರೆ ಅದನ್ನು ಮೊದಲಿಗೆ ಸ್ಮಾರ್ಟ್‌ಫೋನಿನಲ್ಲಿ ಇನ್ಸ್ಟಾಲ್ ಮಾಡಿರಬೇಕು. ಬಹುತೇಕ ಮಂದಿ ವಾಟ್ಸ್‌ಆಪ್ ಅನ್ನು ಸ್ಮಾರ್ಟ್‌ಫೋನ್‌ಗಳಲ್ಲೇ ಬಳಸುವುದು. ಅಂದರೆ ಅದರ ಪರದೆಯ ಗಾತ್ರ ಚಿಕ್ಕದು. ನೀವು ತಯಾರಿಸಿ ಕಳುಹಿಸುವ ಮಾಹಿತಿ ಚಿಕ್ಕ ಪರದೆಯಲ್ಲಿ ಮೂಡಿಬರುತ್ತದೆ. ದೊಡ್ಡ ದೊಡ್ಡ ವಾಕ್ಯಗಳನ್ನು ಮಾಡಿದರೆ ಜನರಿಗೆ ಓದಲು ಕಷ್ಟವಾಗುತ್ತದೆ. ದೊಡ್ಡ ದೊಡ್ಡ ಲೇಖನಗಳನ್ನೂ ವಾಟ್ಸ್‌ಆಪ್‌ನಲ್ಲಿ ಕಳುಹಿಸುವಂತಿಲ್ಲ. ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸಂವಹನ ಮಾಡಬೇಕು.

ಸಾರಾಂಶ

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವು ಇಪ್ಪತ್ತನೆಯ ಶತಮಾನದ ಅದ್ಭುತ ಕೊಡುಗೆ ಎಂಬುದರಲ್ಲಿ ಅನುಮಾನವಿಲ್ಲ. ಹೊಸ ಹೊಸ ಆವಿಷ್ಕಾರಗಳು ಬರುತ್ತಿದ್ದಂತೆಲ್ಲ ಅವನ್ನು ನಮ್ಮ ಭಾಷೆ, ಸಂಸ್ಕೃತಿ, ಜೀವನಕ್ಕೆ ಹೇಗೆ ಅಳವಡಿಸಿಕೊಳ್ಳುವುದು ಎಂಬುದರ ಬಗ್ಗೆ ನಾವು ಚಿಂತಿಸಿ ಆ ನಿಟ್ಟಿನಲ್ಲಿ ಕೆಲಸ ಮಾಡಬೇಕು. ಅಂತೆಯೇ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವನ್ನು ಕೃಷಿಯ ಬಗ್ಗೆ ಸಂವಹನ ಮಾಡಲೂ ಬಳಸಬೇಕು.  ಈ ಲೇಖನದದಲ್ಲಿ ಅದನ್ನು ಚುಟುಕಾಗಿ ವಿವರಿಸಲಾಗಿದೆ.

-ಡಾ. ಯು. ಬಿ. ಪವನಜ

Leave a Reply