ಬೆಂಗಳೂರಿನ ಪಂಚಶೂಲಗಳು!

– ಡಾ| ಶ್ರೀನಿವಾಸ ಹಾವನೂರ

ಮೂರು ಮೊನೆಗಳುಳ್ಳ ಆಯುಧ -ತ್ರಿಶೂಲವನ್ನು ಬಲ್ಲೆವು. ಬೆಂಗಳೂರಿನದಕ್ಕೆ ಐದು ಮೊನೆಗಳು. ಆದರೆ ಇದರಿಂದ ಮನುಷ್ಯ ಸಾಯಲಿಕ್ಕಿಲ್ಲ. ಬದಲಾಗಿ ವಿಲಿವಿಲಿ ಒದ್ದಾಡುತ್ತಾನೆ. ಈ ಪಂಚಶೂಲದ ಪ್ರಹಾರವನ್ನು ನನ್ನ ಹಾಗೆ ಬೆಂಗಳೂರು ವಾಸಿಗಳೆಲ್ಲ ನಿತ್ಯ ಅನುಭವಿಸುತ್ತಿದ್ದಾರೆ. ಏನೋ, ರಾಜಧಾನಿಯಲ್ಲಿ ಜನ ಸುಖವಾಗಿದ್ದಾರೆ? ಎಂದು ಹೊರಗಿನವರು ತಿಳಿದಿರಬಹುದು. ಆ ತಪ್ಪು ಕಲ್ಪನೆಯನ್ನು ಹೋಗಲಾಡಿಸಲು, ಈ ಲೇಖ.

ದೂಷಿತ ಹವೆ, ಕಲುಷಿತ ನೀರು

ಅತೀವ ವೇದನೆಯೀವ ಶೂಲವೆಂದರೆ ಇಲ್ಲಿಯ ವಾತಾವರಣ. ಅರ್ಥಾತ್ ಹವೆ ಮತ್ತು ನೀರು. ಶುದ್ಧವಾದ ಹವೆ ಪರಿಶುದ್ಧ ನೀರು -ಎಂಬುದನ್ನು ಬೆಂಗಳೂರಿನವರು ಕನಸಿನಲ್ಲಿಯೂ ಕಾಣಲಾರರು. ಸುಮಾರು ಎರಡು ಶತಮಾನಗಳ ಹಿಂದೆ ಬ್ರಿಟಿಷರು ಬೆಂಗಳೂರಿಲ್ಲಿ ಪ್ರಥಮತಃ ಕಾಲಿರಿಸಿದಾಗ oh! what a cellubrious climate! ಎಂದು ಸಂಭ್ರಮಿಸಿದರು. ಇಲ್ಲಿಯ ಕೆರೆಗಳ ಸಿಹಿ ನೀರಿನ ಬಗ್ಗೆ ತಮ್ಮ ದೇಶದವರಿಗೆ ಪತ್ರ ಬರೆದರು.
ಇಂಥ ಹಿತಕರವಾದ ವಾತಾವರಣವು ಇಪ್ಪತ್ತನೆಯ ಶತಮಾನದ ಪೂರ್ವಾರ್ಧದವರೆಗೂ ಇತ್ತು. ಆಗ ಮುಂಬಯಿಯಲ್ಲಿಯ ಬೆಂಗಳೂರು ಮೂಲದ ಜನ `ಮೇ ತಿಂಗಳು ಯಾವಾಗ ಬಂದೀತೋ? ಕುಟುಂಬ ಸಮೇತ ಯಾರಾಗ ಬೆಂಗಳೂರಿಗೆ ಹೋದೇವೊ?’ ಎಂದು ಧಡಪಡಿಸುತ್ತಿದ್ದದ್ದು ನನಗೆ ಗೊತ್ತು. ಈಗೂ ಹಾಗೆ ಹೊರಟು ಬರುತ್ತಾರೆ. ಒಮ್ಮೆ ಬಂದರೆಂದರೆ `ಹಾಳಾದ ಬೆಂಗಳೂರು’ ಅಂತ ಶಪಿಸ್ತಾರೆ.

ಇಲ್ಲಿಯ ವಾತಾವರಣ ಕೆಟ್ಟದ್ದರ ಕಾರಣ ಗೊತ್ತಿದ್ದದೇ. ಜನದಟ್ಟಣೆ, ವಾಹನದಟ್ಟಣೆ, ಕೊಳಚೆ ನಿರ್ಮಾಣ -ಮುಂತಾದ್ದು. ಭರದಿಂದ ಬೆಳೆಯುವ ಯಾವುದೇ ನಗರದಲ್ಲಿ ಇದು ಅನಿವಾರ್‍ಯ. ಆದರೆ ಇತರ ಮಹಾನಗರಗಳಲ್ಲಿ ಪರಿಸರ ಇಷ್ಟರಮಟ್ಟಿಗೆ ಕೆಟ್ಟಿಲ್ಲವಲ್ಲ! ಚನ್ನೈನಲ್ಲಿ ಸಮುದ್ರದಿಂದಾಗಿ ಬೆವರು ಸರೀತದೆ. ಮುಂಬಯಿಯಲ್ಲಿಯೂ ಅದೇ ಪರಿಸ್ಥಿತಿ. ಜೊತೆಗೆ ಹಗಲು-ರಾತ್ರಿ ಗಿರಣಿ-ಕಾರಖಾನೆಗಳು ಹೊಗೆ ಕಾರುತ್ತವೆ. ಆದಾಗ್ಯೂ ಇಲ್ಲಿಯಷ್ಟು ಹವಾಮಾನ ಹದಗೆಟ್ಟಿಲ್ಲ.

ಇಲ್ಲಿಯ ಕಲುಷಿತ ಹವೆಗೆ, ಕಣ್ಣಿಗೆ ಕಂಡೂ ಅದರ ದುಷ್ಪರಿಣಾಮದ ಕಲ್ಪನೆ ನಮಗಿರದ ಒಂದು ಪರಿಸ್ಥಿತಿ ಇದೆ. ಅದುವೆ ಇಲ್ಲಿಯ ಅನೇಕಾನೇಕ ಖಾಲಿ ಸೈಟುಗಳು. `ನಮ್ಮ ಬಂಗಾರದಂತಹ ಬೆಂಗಳೂರಲ್ಲಿ ಒಂದು ಸೈಟು ಇರಲಿ’ ಎಂದು ಅನುಕೂಲಸ್ಥರು ಖರೀದಿಸುತ್ತಾರೆ. ಅಲ್ಲಿ ಮನೆ ಕಟ್ಟಿಸದೇ ಕಂಟಿ ಕೊರಚಲು ಗಿಡಗಳನ್ನು ಬೆಳೆಸುತ್ತಾರೆ. ಯಾವ ಖರ್ಚು ಇಲ್ಲದೆ! ಬೆಳೆಸುತ್ತಾರೆ ಅರ್ಥಾತ್ ವರ್ಷಗಟ್ಟಲೆ ಹಾಗೇ ಬಿಟ್ಟದ್ದರ ಪರಿಣಾಮವದು. ಇಂಥ ಖಾಲಿ ಸೈಟುಗಳು ಪ್ರತಿ ಎರಡು ಅರ್ಪಾಟ್‌ಮೆಂಟ್‌ಗಳ ನಡುವೆ ಒಂದೊಂದು ತಪ್ಪದೇ ಕಾಣಿಸಿಕೊಳ್ಳುತ್ತವೆ. ಹೇಳಕೇಳುವವರಿಲ್ಲದ ಜಾಗವದು. ನಾಯಿಗಳು, ಬಿಡಾಡಿ ದನಗಳು ಲೀಲಾಜಾಲವಾಗಿ ವಿಹರಿಸುತ್ತವೆ. ನೆರೆಹೊರೆಯ ಮನೆಗಳ ಕೆಲಸದಾಳುಗಳು ಹರಕು ಪ್ಲಾಸ್ಟಿಕ್ ಚೀಲಗಳಲ್ಲಿ ಕಸ-ಮುಸುರಿ-ಹೊಲಸುಗಳನ್ನು ತುಂಬಿ ತಂದು ಇಲ್ಲಿ ತೂರಾಡಿ ಚೆಲ್ಲುವ ದೃಶ್ಯವಂತೂ ಅಸಹ್ಯಕರವಾದದ್ದು. ಪರಿಣಾಮವೆಂದರೆ ಸ್ವಚ್ಛ ಹವೆಯ ಉಸಿರಾಟಕ್ಕೆ ಅವಕಾಶವೇ ಇರದು.
ಇನ್ನು ನೀರಿನ ವಿಚಾರವಂತೂ ಹೇಳೋದೇ ಬೇಡ. ಬೃಹತ್ ಪೈಪುಗಳಿಂದ ಹರಿದು ಬರುವ ನೀರು ದುರ್ಗಂಧದ ರಾಡಿ ನೀರಿನೊಂದಿಗೆ ಅದ್ಹೇಗೆ ಕೂಡಿಕೊಳ್ಳುತ್ತದೆ ಎನ್ನೂವುದನ್ನು ಸರಕಾರೀ ದೂರದರ್ಶನದಲ್ಲಿಯೇ ತೋರಿಸಿದ್ದಾರೆ. ಕೊಳವೆ ಬಾವಿಗಳ ಅಂತರ್ಜಲವಾದರೂ ಖಾತ್ರಿಯಾಗಿ ಶುದ್ಧವಾದುದಲ್ಲವಂತೆ. ನಾನು ಹತ್ತಾರು ಊರುಗಳಲ್ಲಿ ತಿರುಗಾಡಿದ್ದೇನೆ. ಪ್ರವಾಸದ ಕಾಲಕ್ಕೆ ಎಲ್ಲೆಂದರಲ್ಲಿ ನೀರು ಕುಡಿದಿದ್ದೇನೆ- ಯಾವುದೇ ರೋಗದ ಅಂಜಿಕೆಯಿಲ್ಲದೆ. ಬೆಂಗಳೂರಿನಲ್ಲಿ ಮಾತ್ರ ನೀರನ್ನು ಚೆನ್ನಾಗಿ ಕುದಿಸಬೇಕು; ಫಿಲ್ಟರ್ ಪಾತ್ರೆಯಲ್ಲಿ ಹಾಕಿ ಇಟ್ಟೇ ಕುಡಿಯಬೇಕು.

ಸಂಚಾರ ದುಷ್ಕರ

ಎಲ್ಲ ಮಹಾನಗರಗಳಲ್ಲಿ ವಾಹನಗಳ ದಟ್ಟನೆ ಅನಿವಾರ್‍ಯ. ಹಾಗಿದ್ದರೂ ಹೊತ್ತಿಗೆ ಸರಿಯಾಗಿ ಮತ್ತು ಸುಸೂತ್ರವಾಗಿ ಓಡಾಡುವುದಕ್ಕೆ ಅನುಕೂಲತೆಗಳು ಇದ್ದೇ ಇರುತ್ತವೆ. ಬೆಂಗಳೂರ ಸಂಚಾರ ಈ ರೀತಿ ಸುಕರವಾದದ್ದಲ್ಲ. ಹೇಗಪ್ಪಾ ಹೋಗೋದು? ಸುರಕ್ಷಿತವಾಗಿ ಅಲ್ಲಿಗೆ ಮುಟ್ಟಿಯೇವೆ? ಎಂಬ ದುಗುಡ ಇದ್ದದ್ದೇ. ಇಲ್ಲಿಯ ಸಾರಕ್ಕಿಯಿಂದ ಉತ್ತರದ ಮತ್ತೀಕೆರೆ, ಇಲ್ಲವೆ ಪೂರ್ವ ದಿಕ್ಕಿನ ನಾಗರಬಾವಿಯಿಂದ ಆ ತುದಿಯ ಬನ್ನೇರುಘಟ್ಟದವರೆಗಿನ ರಸ್ತೆ ಹೆಚ್ಚೆಂದರೆ ೧೫ ಕಿಲೋ ವಿಟರಿನದು. ಆದರೆ ಅಷ್ಟು ಪ್ರವಾಸಕ್ಕೆ ಎರಡು ತಾಸಾದರೂ ಬೇಕು. ಅದು ಕ್ಲುಪ್ತ ಸಮಯಕ್ಕೆ ಬಸ್ಸುಗಳು ಬಂದರೆ. ಮೊದಲೇ ವಾಹನ ದಟ್ಟಗೆ. ಆಮೇಲೆ ದೇವಸ್ಥಾನದ ರಥದಂತೆ ಆ ಬಸ್ಸು ಅನೇಕ ಸ್ಟಾಪುಗಳಲ್ಲಿ ನಿಂತು ಸಾಗಬೇಕು. ಎಕ್ಸ್‌ಪ್ರೆಸ್ ಬಸ್ಸುಗಳನ್ನು ಆಗಾಗ ಬಿಡುತ್ತಿದ್ದರೆ ಹೇಗೆ? ಮಂಗಳೂರಲ್ಲಿ ಹಂಪನಕಟ್ಟೆಯಿಂದ ಯುನಿವರ್ಸಿಟಿಗೆ ಹೋಗಲು ಮಧ್ಯೆ ಮಧ್ಯೆ ಎಕ್ಸ್‌ಪ್ರೆಸ್ ಬಸ್ಸುಗಳು ಓಡಾಡುತ್ತವೆ. ಹೀಗಾಗಿ ಆ ೧೮ ಕಿ.ವಿ. ದೂರವನ್ನು ಕ್ರಮಿಸಲು ಅರ್ಧ ಗಂಟೆ ಸಾಕಾಗುವುದು. ಮುಂಬಯಿಯಲ್ಲಂತೂ ಕೆಂಪು ನಂಬರುಗಳಿರುವ ಎಕ್ಸ್‌ಪ್ರೆಸ್ ಬಸ್ಸುಗಳು ಲೆಕ್ಕವಿಲ್ಲದಷ್ಟಿವೆ. ಬೆಂಗಳೂರಲ್ಲಿ? ಊಂಹು. ಇಲ್ಲಿಯ ಬಿ. ಟಿ. ಎಸ್. ದವರಿಗೆ `ಎಕ್ಸ್‌ಪ್ರೆಸ್’ ಎನ್ನುವ ಶಬ್ದವೇ ಗೊತ್ತಿಲ್ಲ.

ಇಷ್ಟೇ ಅಲ್ಲ, ದೂರದ ಸಂಚಾರವಿದ್ದರೆ ನೇರವಾದ ಒಂದೇ ಬಸ್ ಸರ್ವೀಸ್ ಇಲ್ಲದ ಪರಿಸ್ಥಿತಿ ಇದೆ. ವಿಜಯನಗರದಿಂದ ೧೦-೧೧ ಕಿ. ವಿ. ಅಂತರದಲ್ಲಿರುವ ಜೆ. ಪಿ. ನಗರಕ್ಕೆ ಹೋಗಲು ಒಂದೇ ಸರ್ವೀಸ್ ಇಲ್ಲ. ಜಯನಗರದಲ್ಲಿಯೋ, ಮಧ್ಯದ ಇನ್ನೆಲ್ಲಿಯೋ ಬಸ್ ಬದಲಿಸಬೇಕು.

ಆಟೋಗಳಿವೆ ಎನ್ನುತ್ತೀರ? ಆ ತ್ರೀಚಕ್ರಿಗಳ ಚಾಲಕರ ದಿಮಾಕು ಅಷ್ಟಿಷ್ಟಲ್ಲ.(ಈಗಂತೂ ದರ ಏರಿದೆ) ಅವರೊಂದಿಗೆ ಜಗಳಾಡದ ಯಾರೊಬ್ಬ ಬೆಂಗಳೂರಿಗನಂತೂ ಇರಲಿಕ್ಕಿಲ್ಲ. ಈ ಚಾಲಕರ ವಿರುದ್ಧ ಟ್ರಾಫಿಕ್ ಪೋಲಿಸರಿಗೆ ಕಂಪ್ಲೇಂಟ್ ಕೊಡಬೇಕು-ಎನ್ನುತ್ತೀರ? ಹಾಗೇ ಮಾಡುವುದೆಂದರೆ ಗಾಳಿ ಗುದ್ದಿ ಕೈ ನೋಯಿಸಿಕೊಂಡಂತೆ. ಕಂಪ್ಲೇಟ್ ಕೊಟ್ಟ ಮೇಲೆ ಆ ಚಾಲಕನ ವಿರುದ್ಧ ಏನು ಕ್ರಮ ಕೈಗೊಳ್ಳಲಾಯಿತೆಂದು ಒಂದು ಒಂದು ಮುದ್ರಿತ ಫಾರ್ಮಿನ ಕಾಗದದಲ್ಲಿ ತಿಳಿಸಲಿಕ್ಕಾಗದೇನು?

ಹಾಗೆ ತಿಳಿಸುವುದು ಬೇಡವಾದರೆ ನನ್ನದೊಂದು ಪರ್‍ಯಾಯ ಸೂಚನೆ ಇದೆ. `ವಾಹನ ಅಪಘಾತದಿಂದಾಗಿ… ಇಂತಿಷ್ಟು ಜನ ಈ ತಿಂಗಳಲ್ಲಿ ಸತ್ತರು…. ಇಷ್ಟು ಜನ ಗಾಯಗೊಂಡರು’ ಎಂದು ಕೂಟ ಸ್ಥಳಗಳಲ್ಲಿ ದೊಡ್ಡದಾಗಿ ಬೋರ್ಡ್ ಬರೆಯಿಸಿದ್ದಾರಲ್ಲವೆ. ಅಲ್ಲಿಯೇ ಕೆಳಗಡೆ “ಈ ತಿಂಗಳಲ್ಲಿ ಸಂಚಾರ ನಿಯಮ, ಮತ್ತಿತ್ತರ ಉಲ್ಲಂಘನೆಗೆ… ಇಷ್ಟು ಜನ ಆಟೋರಿಕ್ಷಾದವರಿಗೆ ದಂಡ ವಿಧಿಸಲಾಗಿದೆ” ಎಂದೂ ಕಾಣಿಸಬಹುದಲ್ಲ! ಪೋಲೀಸ್ ಡಿಪಾರ್ಟಮೆಂಟಿನ ಬಡಾ ಸಾಹೇಬರುಗಳೆಲ್ಲ ಇಲ್ಲಿಯೇ ಇದ್ದರೂ ಆಟೋದವರನ್ನು ಸ್ವಲ್ಪಾದರೂ ಹತೋಟಿಯಲ್ಲಿಡಲಾಗದಿದ್ದುದು ನಿಜಕ್ಕೂ ಭರ್ತ್ಸನೀಯವಾದುದು.

ಇತ್ತ ದ್ವಿಚಕ್ರ ವಾಹಕರು (ಸ್ಕೂಟರ್‌ನವರು) ಇನ್ನೊಂದು ರೀತಿಯಿಂದ ನಮ್ಮ ಸಿಟಿ ಸಂಚಾರವನ್ನು ದುಷ್ಕರಗೊಳಿಸುತ್ತಾರೆ. ಒಂದು ಲೈನ್ ಹಿಡಿದು ಕ್ರಮದಿಂದ ಹೋಗುವುದಾಗಲೀ ದಟ್ಟಣೆಯಿದ್ದಾಗ ತುಸು ನಿಧಾನಸುವುದಾಗಲೀ ಅವರ ಜಾಯಮಾನದಲ್ಲಿಯೇ ಇಲ್ಲ. ರೇಸಕೋರ್ಸ್‌ನಲ್ಲಿ ಕುದುರೇ ಓಡಿಸುವ ಮನೋವೃತ್ತಿಯಿಂದ ರಭಸವಾಗಿ ಮುನ್ನುಗ್ಗುವದರಲ್ಲಿ ಖುಶಿ ಪಡುತ್ತಾರೆ. ಆಗೆಲ್ಲ overtake ಮಾಡಬೇಕಾದ್ದು ಅನಿವಾರ್‍ಯ. ಮಾಡಲಿ, ಆದರೆ ತಮ್ಮ ಬಲಬದಿಗೆ ಹಾಗೇ ಸಾಗಬೇಕೆಂಬುದು ಸಂಚಾರದ ಕಟ್ಟುನಿಟ್ಟಿನ ನಿಯಮ. ಇಲ್ಲ, ಅದನ್ನು ಪಾಲಿಸುವ ಬುದ್ಧಿಯೇ ಇಲ್ಲಿಯವರಿಗಿಲ್ಲ.

ಇನ್ನೂ ರಸ್ತೆಗಳಲ್ಲಿ ನಡೆದು ಹೋಗುವುದಾದರೆ? ಸ್ವಾಭಾವಿಕವಾಗಿಯೇ ಬದಿಯಿಂದ ಸಾಗಬೇಕು. ಅದಕ್ಕಿಂತ ಪುಟ್‌ಪಾತ್ ಮೇಲೆ ಹೋಗಬೇಕಾದದ್ದು ನ್ಯಾಯ. ಆದರೆ ಇಲ್ಲಿಯ `ಏಟೀಫೀಟ್’ `ಹಡ್ರೇಡ್ ಫೀಟ್’ ಎಂಬಂತಹ ಅನೇಕ ಮಾರ್ಗರಸ್ತೆಗಳಿಗೆ ಫುಟ್‌ಬಾತ್ ಇರುವುದಿಲ್ಲ. ಹೀಗಾಗಿ ನಾವು ಎಡದ ಬದಿಗೇ ಸಾಗಿಹೋಗುತ್ತೇವೆ. ಆಗ ದ್ವಿಚಕ್ರಿಗಳಿಗೆ ಪಾದಚಾರಿಗಳಿಗೆ ಮೇಲೆ ವಾಹನ ಹಾಯಿಸುವುದು ಬಲು ಸುಲಭ. ಸಣ್ಣ ಪ್ರಮಾಣದ ಇಂಥ ಅನೇಕಾನೇಕ ಅಪಘಾತಗಳು ಪೋಲೀಸರ ಫೈಲಿಗೆ ಹೋಗುವಂತಹವೇ ಅಲ್ಲ.

ಮೈಸೂರಿನ ಸುಪ್ರಸಿದ್ಧ ಸಾಹಿತಿ ಸಿ. ಪಿ. ಕೆ. ಈ ಕುರಿತು ಒಂದು ಚುಟಕವನ್ನೇ ಬರೆದಿದ್ದಾರೆ:
ಬಸ್ಸಿನಿಂದಿಳಿದ ನನ್ನನ್ನು ಯಾರೊ ಕೇಳಿದರು;
`ಎಲ್ಲಿಗೆ ಹೋಗಿದ್ದಿರಿ?’ ಉತ್ತರಿಸಿದೆ;
`ಬೆಂಗಳೂರಿಗೆ. ಅಲ್ಲಿನ ವಾಹನಗಳಿಗೆ
ಸಿಕ್ಕದೆ ಬದುಕಿ ಬಂದೆ?

ಕೊಂಗರ ಕಾರಭಾರ

ಈ ಶೂಲವು ಹಿಂಸಾತ್ಮಕವೇನಲ್ಲ. ಆದರೆ ಸಾಕಷ್ಟು ಕಿರುಕುಳ ಕೊಡುವಂತಹದು. ಇಲ್ಲಿ ಕೊಂಗರೆಂದರೆ ಕೆಳಗಿನ ಸ್ತರದ ನೆರೆ ರಾಜ್ಯದವರು. ಈ ಕೊಂಗರ ರಾಜ್ಯದ ಗಡಿರೇಖೆ ಬೆಂಗಳೂರಿನಿಂದ ಕೇವಲ ೩೫ ಕಿ. ವಿ. ನಷ್ಟು ಹತ್ತಿರವಿದೆ. ಇವರೇನೆ ಬೆಂಗಳೂರಿನ ಅನೇಕ ಮಧ್ಯಮ ವರ್ಗೀಯ ಮನೆಗಳಲ್ಲಿಯ ಕಸ ಮುಸುರೆಯ ಕೆಲಸಗಿತ್ತಿಯರು; ಕೈಗಾಡಿಯಲ್ಲಿ ವ್ಯಾಪಾರ ಮಾಡುವವರು; ಪ್ಲಂಬರ್, ಇಲೆಕ್ಟ್ರಿಕ್ ಮೊದಲಾದ ಕಸಬುದಾರರು. ಮೇಲೆ ಹೇಳಿದ ಕಂಟಿ ಕುರಚಲುಗಳಂತೆಯೇ ನಗರದ ಎಲ್ಲೆಲ್ಲಿಯೂ ವ್ಯಾಪಿಸಿದ್ದಾರೆ. `ಹೊಸೂರು’ ಎನ್ನುವುದು ಅದರ ಗಡಿಯಲ್ಲಿಯ ಮಹಾಕೋಟೆ. ಅಲ್ಲಿಂದ ಮಿಡಿತೆಗಳಂತೆ ಬುದುಬುದು ಬರುತ್ತಲೇ ಇದ್ದಾರೆ. ತಾವು ಬೇರೊಂದು ರಾಜ್ಯದಲ್ಲಿ ಕಾಲಿಡುತ್ತಿದ್ದೇವೆ ಎನ್ನುವ ಭಾವನೆಯೇ ಇರುವುದಿಲ್ಲ. ಹಾಗೆಂದು ಹೇಳ ಹೋದರೆ ನಂಬುವುದೂ ಇಲ್ಲ!
ಈ ಕೊಂಗರು ಕೈಗಾಡಿಯಲ್ಲಿ ಇಲ್ಲವೆ ತಲೆಯ ಮೇಲೆ ಹೊತ್ತುಕೊಂಡು ಮಾರಾಟದ ವಸ್ತುಗಳನ್ನು ತರುತ್ತಾರೆ. ಸರಕುಗಳನ್ನು ಅಪದ್ಧವಾಗಿ ಉತ್ತರಿಸುವ ಬಗೆಯೇ ಬೇರೆ. `ರಂಗೆಲೇ’ `ಏರುಳ್ಳೇ’ ಇತ್ಯಾದಿ. ಒಮ್ಮೆ ಒಬ್ಬಳು `ಲೆಂಬೇ’ ಎಂದು ಒದರುತ್ತ ನಮ್ಮ ಮನೆ ಬಾಗಿಲಿಗೆ ಬಂದಳು. `ಏನು ದರ?’ ಎಂದು ಕೇಳಿದ್ದಕ್ಕೆ ತನ್ನ ತಾಯ್ನುಡಿಯಲ್ಲಿ ಒದರಿದಳು. “ಕನ್ನಡದಲ್ಲಿ ಹೇಳು” ಎಂದೆ ನಾನು. ಅದಕ್ಕೆ ಉತ್ತರವಾಗಿ ಅವಳು “ಯದಕೆ ಎನಕೆ ತಮಿಳು ತೆರೆಯಾದ?” (ನಿನಗೆ ಅಷ್ಟು ತಮಿಳು ಬರೋದಿಲ್ಲ?) ಎನ್ನುವ ಧಾಷ್ಟ ಅವಳದು. `ನಿನಗೆ’, `ನೀನು’ ಮುಂತಾದ ಏಕವಚನದಲ್ಲಿ -ಅವರು ಯಾರೇ ಇರಲಿ -ಕರೆಯುವುದು ಈ ಕೊಂಗರ ಮಾಮೂಲು.

ಬಿಡಿಗೆಲಸದ ಕೊಂಗನೊಬ್ಬ ಒಂದಷ್ಟು ರಿಪೇರಿ ಕೆಲಸ ಮಾಡಲೆಂದು ಒಪ್ಪಿ ಬರುತ್ತಾನೆ. ಯಾವುದೊ ಬಿಡಿ ಭಾಗವನ್ನು ತರಲೆಂದು ಮುಂಗಡ ಹಣವನ್ನು ತುಸು ಇಸಿದುಕೊಂಡಿರುತ್ತಾನೆ. ಮೋಸವನ್ನೇನೂ ಮಾಡಲಿಕ್ಕಿಲ್ಲ. ಆದರೆ ಹೊತ್ತಿಗೆ ಬರುವುದಿಲ್ಲ. ಇವತ್ತು ಸಂಜೆ, ನಾಳೆ ಬೆಳಿಗ್ಗೆ, ನಾಡಿದ್ದು ತಪ್ಪದೇ -ಎಂಬಂತಹ ಅವನ ಸಬೂಬು ಇದ್ದದ್ದೇ. ಈ ಬಗೆಯ ಸಣ್ಣ ಸುಳ್ಳಿನ ಹಿಂದಿರುವ ನಿರ್ಲಕ್ಷ್ಯ ನಮ್ಮನ್ನು ತುಂಬಾ ಕಿರಿಕಿರಿಗೊಳಿಸುತ್ತದೆ.

ನಾನಿರುವ ಲೇಔಟಿನಲ್ಲಿ ಬೆಳಗಿನಿಂದ ಸಂಜೆಯವರೆಗೆ ಅವರ ಮುಖದರ್ಶನದ ಭಾಗ್ಯ ನನಗಿದೆ. ಬೆಳಿಗ್ಗೆ ಹಾಲು ತರಲೆಂದು ಹೋಗುವೆ. ಆಗ ಮುಚ್ಚಿದ ಅಂಗಡಿಗಳ ಕಿರುಕಟ್ಟೆಯ ಮೇಲೆ ಕುರುಚಲು ಗಡ್ಡದವರು ಕೂತಿರುತ್ತಾರೆ. ಕೈಯಲ್ಲಿ ಬೀಡಿ ಇಲ್ಲವೆ `ಬೈಟೂ'(ಯಾವಾಗಲೂ ಅದೇ ಪ್ರಮಾಣ) ಕಾಫೀ ವಾಟಗ ಇರುತ್ತದೆ. ಹೆಂಗಸರಂತೂ ಅನಕ್ಷರಸ್ಥರು. ಗಂಡಸರು ಪೇಪರನ್ನು ಓದಬಲ್ಲ ಅಕ್ಷರಸ್ಥರು. ತಾವು ಖರೀದಿಸಿದ ದಿನಪತ್ರಿಕೆಯ ಪುಟಗಳನ್ನು ಹಂಚಿಕೊಂಡು ಓದತಿರತಾರೆ. ನಮ್ಮ ಲೇಔಟಿನಲ್ಲಿ ಕನ್ನಡ ಪೇಪರ್ ಪ್ರತಿಗಳು ಎಷ್ಟು ಖರ್ಚಾಗುತ್ತವೆಯೋ ಅಷ್ಟೇ ತಮಿಳನವೂ ಮಾರಾಟವಾಗುತ್ತದೆ ಎಂದರೆ ನಂಬಿರಿ.

ಗಂಡಸರೇ ಇರಲಿ ಹೆಂಗಸರೇ ಇರಲಿ ಅವರದು ಯಾವಾಗಲೂ ಮಾಸಲು ಬಣ್ಣದ ಹೊಲಸು ಬಟ್ಟೆ. ಸ್ವಚ್ಛವಾದ ಇಲ್ಲವೆ ಬಿಳಿಯ ಬಣ್ಣದ ಬಟ್ಟೆ ಧರಿಸಿದವರು ಯಾರಾದರೂ ಸಿಗುವರೋ ಎಂದು ಕಾಯುತ್ತಿದ್ದೇನೆ. ಇಂಥ ಕೆಳಗಿನ ಸ್ತರದವರು ನಮ್ಮಲ್ಲಿಯೂ ಅನೇಕರಿದ್ದಾರೆ. ಅವರೊಟ್ಟಿಗೆ ಕೊಂಗರೂ ಬಂದು ಇರಲಿ -ಬೆಂಗಳೂರಲ್ಲಿ; ಆದರೆ ತಾವು ಕಾಲಿರಿಸಿದ ಈ ನೆಲ ತಮಿಳುನಾಡಿನದಲ್ಲ ಎಂದು ತಿಳಿದರೆ ಮಾತ್ರ.

ಇಂಗ್ರಜೀ ದುರ್ಮೋಹ

ಯಾವುದೊಂದು ವಿಷಯವಾಗಿ ಮೋಹವಿರಬೇಕಾದದ್ದು ಸಹಜ. ಕೆಲಸಂದರ್ಭಗಳಲ್ಲಿ ವ್ಯಾಮೋಹ -ಅದಕ್ಕೆ ಅತಿಯಾದ ಪ್ರೀತ್ಯಾಸಕ್ತಿ ಇರುತ್ತದೆ. ಅದೋ ಸಹಜ ಮನೋಧರ್ಮವೇ ಆದರೆ ಇಂಗ್ಲಿಶಿನ ಈ ದುರ್ಮೋಹ!
`ಇಂಗ್ರಜೀ ಹಟವೊ, ಕನ್ನಡ ಬಚಾವೊ’ ಎಂದೇನೂ ನಾ ಹೇಳಹೊರಟಿಲ್ಲ, ದಿನ ನಿತ್ಯದ ವ್ಯವಹಾರದಲ್ಲಿ, ಅದೇಕೆ ಈ ಲೇಖನದಲ್ಲಿಯೇ ಸಹಜವೆಂಬಂತೆ ಇಂಗ್ಲಿಶ್ ಶಬ್ದ ಬಳಸಿದ್ದೇನೆ. ಇಂಗ್ಲಿಶ್ ಅಂತಾರಾಷ್ಟ್ರೀಯ ವ್ಯವಹಾರಕ್ಕೆ, ಉಚ್ಚಜ್ಞಾನ ಸಂಪಾದನೆಗೆ, ಅದಕ್ಕೆ, ಇದಕ್ಕೆ ಎಂದು ಅವಶ್ಯವಾಗಿ ಬೇಕು. ಆದರೆ -ನಿತ್ಯದ ಸಾದಾ ವ್ಯವಹರಣೆಯಲ್ಲಿ, ಅಂಗಡಿಯಲ್ಲಿ, ಬಸ್ಸಿನಲ್ಲಿ, ಗುಡಿ ಗುಂಡಾರಗಳಲ್ಲಿ ಸಹ, ಸಹಜವಾಗಿ ಬರಬೇಕಾಗಿದ್ದ ತಾಯ್ನುಡಿಯನ್ನು ದೂರೀಕರಿಸಿ ಇಂಗ್ಲಿಶಿನಲ್ಲೇ ಮಾತನಾಡುವ ಪ್ರವೃತ್ತಿ -ಈ ಊರಿನಲ್ಲಿದ್ದಷ್ಟು ದೇಶದ ಯಾವ ರಾಜಧಾನಿ ಅಥವಾ ದೊಡ್ಡ ಊರಿನಲ್ಲಿಯೂ ಇಲ್ಲ! ನಿಜಕ್ಕೂ ಇಲ್ಲ.

ದಾಸ ಸಾಹಿತ್ಯದ ಅಭ್ಯಾಸಕ್ಕಾಗಿ ನಾನು ಕಂಪ್ಯೂಟರ್ ಬಳಸುತ್ತಿದ್ದು, ಅದಕ್ಕಾಗಿ ಓರ್ವ ಕನ್ನಡ ಬಲ್ಲ ಆಪರೇಟರ್ ಬೇಕು ಎಂದು ಕಿರು ಜಾಹೀರಾತು ಕೊಟ್ಟೆ ಕನ್ನಡ ದಿನ ಪತ್ರಿಕೆಯಲ್ಲಿ. ಆ ದಿನ ಬೆಳಗಿನಿಂದ ಟೆಲಿಫೋನ್ ಗಂಟೆ ಬಾರಿಸತೊಡಗಿತು. `I saw your ad. in…..’ ಎಂದೇ ಮಾತಿನ ಆರಂಭ. ಸರಿಯಾದ ವ್ಯಕ್ತಿ ಸಿಗಲಿಲ್ಲವೆಂದು ಮತ್ತೊಮ್ಮೆ ಜಾಹೀರಾತನ್ನು ಕೊಟ್ಟೆ. ಈ ಬಾರಿ `ಚೆನ್ನಾಗಿ ಬಲ್ಲ’ ಎಂದು ಖುದ್ದಾಗಿ ಒತ್ತುಕೊಟ್ಟೆ. ಆ ದಿನವೂ ಟೆಲಿಪೋನ್ ಕರೆಗಳು ಬರತೊಡಗಿದವು.
“Sir, in todays paper…..” ಮುದ್ದಾದ ಇಂಪಾದ ಸ್ವರ.
“ಹೌದು, ನಿಮ್ಮ ವಿಷಯ ಸ್ವಲ್ಪ ಹೇಳುವಿರ?”
“ Sir, I have done a course in Foxpro and…. ”
“ ಅದು ಸರಿ. ನನಗೆ ಬೇಕಾದದ್ದು ಕನ್ನಡವನ್ನು ಚೆನ್ನಾಗಿ ಬಲ್ಲ ಓರ್ವ ಆಪರೇಟರ್.”
“I know kannada sir, we regularly get Taranga at home, sir.”

ನಾನು ಮತ್ತೂ ಒಮ್ಮೆ ಹೇಳುತ್ತೇನೆ. ಇಂಗ್ಲಿಶ್ ಶಬ್ದಗಳನ್ನು ನಾವು ಧಾರಾಳವಾಗಿ ಬಳಸೋಣ. ಕಂಪ್ಯೂಟರ್, ಟೆಲಿಪೋನ್, ಬಸ್, ಟ್ರೇನ್, ಇವಾವವೂ ಮುಂಚೆ ನಮ್ಮಲ್ಲಿರಲಿಲ್ಲ. ಅದರಂತೆ ಸೊಸೈಟಿ, ಕಾಲೇಜು, ಬ್ಯಾಂಕ್, ಇವು ಕೂಡ ಬಳಕೆಯಲ್ಲಿದ್ದ ಹಿಂದೆ ಇರದಿದ್ದ ಪರಿಕರಗಳು. ಆ ಆಂಗ್ಲ ಶಬ್ದಗಳೇ ನಮ್ಮ ಬಾಯಿ ಮಾತಿನಲ್ಲಿ ಇರಲಿ. ಅದರಂತೆ ಓ.ಕೆ. ಥ್ಯಾಂಕ್ಸ್; ಬಾಯ್ ಬಾಯ್; ಟಾ ಟಾ -ಇವೂ ಅವಶ್ಯವಾಗಿ ಇರಲಿ. `ಎಂಜಿನಿಯರ್’ ಕೂಡಾ ಪಾಶ್ಚಾತ್ಯ ಭೂಮಿಕೆಯದೇ. ಅದಕ್ಕೆ ಪ್ರತಿಯಾಗಿ `ಅಭಿಯಂತರ’ ಎಂಬ ಪದವನ್ನೇ ಬಳಸಬೇಕೆಂದೇನೂ ನಾ ಹೇಳುತ್ತಿಲ್ಲ.

ಆದರೆ ನೆಂಟಸ್ತಿಕೆಯ ಪದಗಳು -ಅಪ್ಪ ಅಮ್ಮ ಮಾವ ಅತ್ತಿಗೆ ಅಣ್ಣ ತಂಗಿ -ಇಂಥ ಎರಡೇ ಅಕ್ಷರಗಳ ಶಬ್ದಗಳಿರುವಾಗ ಸುಲಭವಾಗಿ ಉಚ್ಛರಿಸುವುದು ಸಾಧ್ಯವಿರುವಾಗ ಅದಕ್ಕೆ ಬದಲಾಗಿ ಕ್ಲಿಷ್ಟವಾದ ಇಂಗ್ರಜೀ ಪದಗಳನ್ನು ಬಳಸಬೇಕೆ? ಇದೇನೂ ಕನ್ನಡಾಭಿಮಾನದ ಮಾತಲ್ಲ. ಸುಲಭೋಚ್ಛಾರವೆಂಬ ಸ್ವಾರ್ಥದ ದೃಷ್ಟಿ ಇಲ್ಲಿದೆ. `ಇವರು ನಮ್ಮ ಫಾದರಿನ್ ಲಾ’ ಎನ್ನುವುದಕ್ಕಿಂತ `ಇವರು ನಮ್ಮ ಮಾವ’ ಎನ್ನುವುದು ಸುಲಭವಲ್ಲವೆ? ಈ ವಾಕ್ಯ ನೋಡಿರಿ.“ನಮ್ಮ ವೈಫ್ ಊರಲ್ಲಿಲ್ಲ. ಅವಳ ಬ್ರದರಿನ್ಲಾನ ಸಿಸ್ಟರ್‍ಸ್ ಹಸ್ಬೆಂಡ್ ತೀರಿಕೊಂಡಿದ್ದಾರೆ.”

“ಹಾಗೆಂದು ಎಲ್ಲ ನೆಂಟಸ್ತಿಕೆಯ ಶಬ್ದಗಳು ಕನ್ನಡದಲ್ಲೇ ಇರಬೇಕೆಂಬ ಹಟ ನನ್ನದಲ್ಲ. Brother, Sister -ಇವನ್ನು ತೆಗೆದುಕೊಳ್ಳಿರಿ. ಈ ಶಬ್ದಗಳಿಂದ ಅವರು ಚಿಕ್ಕವರೋ, ದೊಡ್ಡವರೋ ಸ್ಪಷ್ಟವಾಗುವುದಿಲ್ಲ. ಆವಾಗ elder brother, younger sister ಎಂದು ಸೇರಿಸಿ ಹೇಳುವ ಹಟವೂ ಇದೆ. ಬದಲಿಗೆ ಅಣ್ಣ, ತಂಗಿ, ಅಕ್ಕ, ತಮ್ಮ ಎಂಬ ಸುಲಭ ಪದಗಳಿದ್ದರೂ ನಾವು ಹೇಳಬಯಸುವುದಿಲ್ಲ. ಹಾಂ ಈಗೀಗ `ಅಂಕಲ್’, `ಆಂಟಿ’ ಎಂಬ ಪದಗಳನ್ನು ಎಳೆಯ ಮಕ್ಕಳಾದಿಯಾಗಿ ಬಳಸುತ್ತಾರೆ. ಅವು ಬೇಕು, ಮತ್ತೆ! ಯಾಕೆಂದರೆ ನಿಜವಾದ ರಕ್ತಸಂಬಂಧ ಇಲ್ಲದಿದ್ದು, ಪರಿಚಯದವರನ್ನು, ನೆರೆಹೊರೆಯವರನ್ನು ಸಂಬೋಧಿಸುವುದಕ್ಕೆ ಅವು ಪ್ರಯೋಜನಕಾರಿ.
ನನ್ನ ಇನ್ನೊಂದು ಗಂಭೀರ ಆಕ್ಷೇಪಣೆಯೆಂದರೆ ಈ ಅಂಗ್ರಜೀ ದುರ್ಮೋಹದಲ್ಲಿ ಕನ್ನಡವನ್ನು ಹೊಲಗೆಡಿಸುವುದು. ಇದೊಂದು ಉದಾಹರಣೆ ಸಾಕು; ಇಲ್ಲಿಯ ಒಂದು ನರ್ಸಿಂಗ್ ಹೋಮಿನಲ್ಲಿ ನಾನು ಕಿವಿಯಾರೆ ಕೇಳಿದ್ದು ; ಓರ್ವ ನರ್ಸ್‌ಮ್ಮ ಹೇಳಿದ್ದು;

“ನಿಮ್ಮ ಹುಡುಗನ್ನ ಇಲ್ಲಿ Sit ಮಾಡಿಸಿರಿ! ನಾನು ಈಗ ಬರ್‍ತೀನಿ” ಬೆಂಗಳೂರಿಗೆ ನೀವು ಆ ಈ ಕೆಲಸಕ್ಕೆಂದು ಬಂದಿರೆಂದರೆ, ಈ ದಿಶೆಯತ್ತ ಗಮನ ಹರಿಸಿದಿರೆಂದರೆ ಆಗ ನಿಮಗೆ ಇಲ್ಲಿಯವರ ಮಾತಿನಲ್ಲಿ ಎಷ್ಟು ಸಹಜವಾಗಿ ಇಂಗ್ಲಿಶ್ ಪದಗಳು ತೂರಿಬರುತ್ತವೆ ಎನ್ನುವುದನ್ನು ಕಂಡು ಅಚ್ಚರಿಗೊಳ್ಳುತ್ತೀರಿ. ಇದು ದುರ್ಮೋಹವಲ್ಲದೆ ಬೇರೆನಲ್ಲ.

ಕೆಲ ವರ್ಷಗಳ ಹಿಂದೆ ಎಚ್. ನರಸಿಂಹಯ್ಯನವರು ಲಾಲ್‌ಬಾಗ್ ಬಗ್ಗೆ ಹೇಳುತ್ತ `ಇಲ್ಲಿ ಬರುವ ನಾಯಿಗಳು ಇಂಗ್ಲಿಶ್‌ನಲ್ಲಿಯೇ ಬೊಗಳುತ್ತವೆ’ ಎಂದಿದ್ದರು. ಹೊರಗಿನ ನಾಯಿಗಳ ಸ್ಥಿತಿ ಹೀಗಾದರೆ, ಸದಾ ಮನೆಯಲ್ಲಿರುವ ಬೆಕ್ಕುಗಳು ಹೇಗೆ? ಅವು ಇಂಗ್ಲಶಿನಲ್ಲಿಯೇ ಮೆವ್ ಎನ್ನುವುದರಲ್ಲಿ ಸಂದೇಹ ಬೇಡ!

ಇದಕ್ಕೆ ಏನಾದರೂ ಉಪಾಯವಿದೆಯೆ? ಕೈಲಾಸಂ ಅವರ ಕಾಲದಿಂದ ಟೀಕೆಗೊಳಗಾದ ವಿಷಯವಿದು. ಯಾವುದೇ ಪ್ರಾಧಿಕಾರ, ಅಕಾಡೆಮಿ, ಸರಕಾರಿ ನೋಟಿಫಿಕೇಶನ್ ಇದಾವುದರಿಂದಲೂ ನೀಗುವಂಥದಲ್ಲ. ನನಗನಿಸುವದೆಂದರೆ, ಇಂಗ್ಲಿಶನ್ನು ಇಷ್ಟರ ಮಟ್ಟಿಗೆ ರಕ್ತಗತವಾಗಿ ಮಾಡಿಕೊಂಡವರು, ಶಿಶುವಿದ್ದಾಗ ಕುಡಿದ ಮೊಲೆ ಹಾಲಿನಲ್ಲಿಯೇ ಅದರ ಅರ್ಕ ಇದ್ದಿರಬೇಕು. ಇಷ್ಟು ಮಾತ್ರ ನಿಜ, ಅವರ ನಾಲಗೆಯ ಮೇಲಿನ ಇಂಗ್ಲಿಶಿನ ಜಿಡ್ಡು ಯಾವ ಡಿಟರ್ಜಂಟಿನಿಂದಲೂ ಹೋಗುವುದಂಥವಲ್ಲ.

ಅಪ್ರಮಾಣಿಕತೆ

ಇದೊಂದು ಸೂಕ್ಷ್ಮ ವಿಷಯ. ಯಾರದೇ `ಅಹಂ’ ಗೆ ತಾಗುವಂತಹದು. `ಬೆಂಗಳೂರಿನವರು ಮಾತ್ರ ಅಪ್ರಾಮಾಣಿಕರೆ? ಬೇರೆ ಊರುಗಳಲ್ಲಿ ಇರೋದಿಲ್ವೆ? ಸ್ವಂತಹ ನೀವು ಪ್ರಾಮಾಣಿಕರೆಂದು ಎದೆತಟ್ಟಿ ಹೇಳುವಿರಾ?’ ಎಂದು ಬೆಂಗಳೂರಿನ ಯಾರೂ ನನ್ನನ್ನು ಗದರಿಸಬಹುದು.

ನಾನು ಹೇಳೋದು ಸಣ್ಣ ಪ್ರಮಾಣದ, ಸಣ್ಣ ಪುಟ್ಟ ಅಂಶಗಳಲ್ಲಿಯ ಅಪ್ರಮಾಣಿಕತೆ. ಮಧ್ಯಮ ವರ್ಗೀಯರಲ್ಲಿ, ಅನುಕೂಲವಂತರಲ್ಲಿ, ವಿದ್ಯಾವಂತರೆನಿಸಿಕೊಳ್ಳುವವರಲ್ಲಿ ವಿಶೇಷ್ಟವಾಗಿ ಕಂಡು ಬರುವಂತಹದು. ಇದು ವ್ಯಕ್ತವಾಗುವುದು ನಾವಾಡುವ ಮಾತಿನಲ್ಲಿ ಮತ್ತು ಇನ್ನೊಬ್ಬರೊಡನೆ ನಡೆದುಕೊಳ್ಳುವ ರೀತಿಯಲ್ಲಿ ತಾನೇ. ಇದಕ್ಕೊಂದು ಮಾಮೂಲಿಯ ಉದಾಹರಣೆಯನ್ನು ಕೊಡುವೆ.

ಹೀಗೆಯೇ ನನ್ನದೊಂದು ಅಗತ್ಯವಾಗಿ ಆಗಬೇಕಾದ ಕೆಲಸ. ಆತ್ಮೀಯ ಸ್ನೇಹಿತನೊಬ್ಬನಿಗೆ ಫೋನಿಸಿ `ನಿನ್ನಲ್ಲಿಗೆ ಬರುತ್ತೇನೆ’ ಎಂದು ಹೇಳುವೆ. ಅವನು `ಅದಕ್ಕೇನಂತೆ ಮಾಡೋಣ. ನಾನೇ ಬರ್‍ತೇನೆ’ ಎನ್ನುತ್ತಾನೆ. `ಎಷ್ಟು ಗಂಟೆಗೆ ಬರ್‍ತೀಯ?’ ಎಂದು ನನ್ನ ಪ್ರಶ್ನೆ. ೫-೩೦ಕ್ಕೆ ಎಂದು ನಮ್ಮೊಳಗೆ ಗೊತ್ತಾಗುತ್ತದೆ. ನಾನು ಐದು ಗಂಟೆಯಿಂದನೇ ಕಾಯ್ತಾ ಇರ್‍ತೇನೆ, ೫-೩೦ಕ್ಕೆ ಆತ ಬರುವುದಿಲ್ಲ. ಆರು ಗಂಟೆಯಾಗ್ತದೆ. ಬರುವುದಿಲ್ಲ. ಗಡಿಯಾರ ೬-೩೦ರ ವೇಳೆ ತೋರಿಸ್ತದೆ. `ಫೋನ್ ಮಾಡಿಲ್ಲ, ಅಂದ ಮೇಲೆ ಬರ್‍ತಾನೆ? ಎಂದು ಇನ್ನರ್ಧ ಗಂಟೆ ಅವನ ದಾರೀ ನೋಡುವೆ. ಆಗೂ ಬಾರದಿದ್ದಾಗ ಅವನ ಮನೆಗೆ ಫೋನಿಸುವೆ. ಮನೆಯಲ್ಲಿ ಅವನಿಲ್ಲ. ಎಲ್ಲೋ ಹೋಗಿದ್ದಾನೆ ಅಂತೆ. ಮರುದಿನ ನಾನು ಕೇಳಿದಾಗ;
“sorry ಆಂ, ಅರ್ಜೆಂಟ್ ಕೆಲಸ ಇತ್ತು. ನಿನ್ನಲ್ಲೆ ಬರಲಿಕ್ಕಾಗಲಿಲ್ಲ”
“ಅಲ್ಲೋ, ಫೋನ್ ಮಾಡಬೇಕಿತ್ತು? ”
ಅದಕ್ಕೆ ನೇರ ಉತ್ತರ ಕೊಡದೆ, “ನಾಳೆ ಖಂಡಿತ ಬರ್‍ತೇನಿ” ಎನ್ನುತ್ತಾನೆ. ಹಿಂದಿನ ದಿನ ನಾನು ಕಾತುರನಾಗಿ ಅವನ ದಾರಿ ಕಾದಿದ್ದಾಗಲೀ, ನನ್ನ ಸಮಯ ಹಾಳಾದ ಬಗ್ಗೆಯಾಗಲೀ, ತಾನು ಮಾತಿಗೆ ತಪ್ಪಿದ ಬಗ್ಗೆ ಹಳಹಳಿಯಾಗಲೀ ಯಾವುದೂ ಅವನ ಈ ನಡತೆಯಲ್ಲಿ ಕಂಡುಬರಲಿಲ್ಲ. ಅಲ್ಲದೆ `ಬೇರ ಅರ್ಜಂಟ್ ಕೆಲಸವೆಂಬ ಸಣ್ಣಸುಳ್ಳನ್ನು ಹೇಳಿದ್ದುದೂ ಸ್ಪಷ್ಟವಿತ್ತು.

`ಮಾಡೋಣ’ (ನನ್ನ ಗೆಳೆಯ ಹೇಳಿದ್ದನಲ್ಲ) ಮತ್ತು `ನೋಡೋಣ’ ಎಂಬೆರಡು ಪದಗಳು ಬೆಂಗಳೂರವರಲ್ಲಿ ಬಹಳಷ್ಟು ಚಾಲ್ತಿಯಲ್ಲಿವೆ. ಅವು `ಅಪ್ರಾಮಾಣಿಕತೆ’ ಎನ್ನುವುದಕ್ಕೆ ಹೇಳಿ ಮಾಡಿಸಿದವುಗಳು! ಹೀಗೆಯೇ ಒಂದು ಸರಕಾರಿ ಕಛೇರಿಯಲ್ಲಿ ಹಿರಿಯ ಆಫೀಸರನನ್ನು ಭೇಟಿಯಾಗುತ್ತೀರಿ. ಕೆಲಸದ ಅಗತ್ಯ, ನಿಮಗಾದ ತೊಂದರೆ ಇವನ್ನು ವಿವರಿಸುತ್ತೀರಿ. ಅದನ್ನು ಕೇಳಿಸಿಕೊಂಡ ಸಾಹೇಬರು ಹೇಳುತ್ತಾರೆ “ನೋಡೋಣ ನಾಡಿದ್ದು ಬನ್ನಿ. ಈ `ನೋಡೋಣ’ ಎಂದು ನುಡಿದು ಬಿಟ್ಟ ಮರುಕ್ಷಣ ಆ ವಿಚಾರ ಅವರ ಮನಸ್ಸಿನಿಂದ ಹೊರಟೇ ಹೋಗಿರುತ್ತದೆ.
ಬೆಂಗಳೂರಲ್ಲಿ ಹಲವಾರು ಸಭೆ ಸಮಾರಂಭಗಳು ಪ್ರತಿನಿತ್ಯ ಜರುಗುತ್ತವೆ. ಅದಕ್ಕೆ ಮಾನನೀಯರೊಬ್ಬರು ಉದ್ಘಾಟಕರಾಗಿಯೋ ಅಧ್ಯಕ್ಷರಾಗಿಯೋ ಮುಖ್ಯ ಅತಿಥಿಯಾಗಿಯೋ ಬರಬೇಕೆಂದು ಕಾರ್‍ಯಕರ್ತರು ಬೇಡಿಕೊಳ್ಳುತಾರೆ. ಅದಕ್ಕೆ ಆ ಮಾನನೀಯ ಮಹನೀಯರು ಉದಾರ ದೃಷ್ಟಿಯನ್ನು ಹರಿಸಿ ಒಪ್ಪಿಕೊಳ್ಳುತ್ತಾರೆ. ಅವರ ಹೆಸರನ್ನು ಹಾಕಿದ ಆಮಂತ್ರಣ ಪತ್ರಿಕೆ ಅಚ್ಚಾಗುತ್ತದೆ. ಆಯತ್ತ ವೇಳೆಗೆ ಬರಲಾಗುವುದಿಲ್ಲ ಎಂದು ಏನೇನೊ ಗೊಡ್ಡು ಅಡಚಣೆ ಹೇಳಿ ತಪ್ಪಿಸುತ್ತಾರೆ. ಬೇರೆ ಹಲವು ಸಾಮಾಜಿಕ ಒಡನಾಟದಲ್ಲಿಯೂ ಈ ಬಗೆಯ ಗಾಂಭೀರ್ಯಪೂರಿತ ನಿರ್ಲಕ್ಷ, ಕರ್ನಾಟಕದ ಇತರ ಯಾವುದೇ ಊರಿಗಿಂತ ಇಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಇದು ರಾಜಧಾನಿ ತಾನೇ.
ಇದೇನೂ ಸ್ವಾರ್ಥವಲ್ಲ; ವಂಚನೆಯಲ್ಲ. ಇನ್ನೊಬ್ಬರನ್ನು ಮೋಸಗೊಳಿಸುವ ಇರಾದೆಯೂ ಇಲ್ಲಿ ಕಂಡುಬರದು. ಈ ವರ್ತನೆಗೆ ಇಂಗ್ಲಿಶ್‌ನಲ್ಲಿ ಸಮಾನವಾದ ಶಬ್ದ -insincerity ಎಂಬುದು. ಇದೊಂದು ಸಹಜವಾದ ನಡವಳಿಕೆಯೇ ಎಂಬಷ್ಟು ಒಗ್ಗಿಹೋಗಿದೆ -ಇಲ್ಲಿಯ ಜನರಲ್ಲಿ. ಬೇರೆ ಊರುಗಳಿಂದ ಬಂದವರು ಸಹ ಇಲ್ಲಿ ನೆಲಸಿದ ಕೆಲವೇ ವರ್ಷಗಳಲ್ಲಿ ಕೊಬ್ಬು ಮಾತು, ವೇಳೆಗೆ ಸರಿಯಾದ ಕೆಲಸ ಪೂರೈಸದಿರುವುದು ರೂಢಿಯಾಗಿ ಬಿಡುತ್ತದೆ. ಸಾರಾಂಶ, ಬೆಂಗಳೂರ ವಾಸಿಗಳಿಗೆ Time-Sense ಮತ್ತು Tongue-Sense ಎರಡೂ ಕಡಿಮೆಯೇ ಸೈ.

[೨೦೦೦]

Leave a Reply