ಪತ್ರಿಕಾ ಸ್ವಾತಂತ್ರ್ಯದ ಐದು ಮುಖಗಳು

– ನಾಗೇಶ ಹೆಗಡೆ

ಪತ್ರಕರ್ತನಾಗಿ ಎತ್ತರಕ್ಕೆ ಬೆಳೆಯುತ್ತ ಹೋದ ಹಾಗೆ ನೈತಿಕವಾಗಿ ಆಳಕ್ಕೆ ಕುಸಿಯುತ್ತ ಹೋಗುವ ಅನಿವಾರ್ಯತೆಯ ಒಂದು ಸರಣಿ ಚಿತ್ರಣ

ತಲಕಾವೇರಿಯಿಂದಲೇ ನಿಮ್ಮನ್ನು ಹೊರಡಿಸುತ್ತೇನೆ ಬನ್ನಿ.

ರಾಜ್ಯಮಟ್ಟದ ಪತ್ರಿಕೆಯಲ್ಲಿ ನೀವೊಬ್ಬ ವರದಿಗಾರ. ಓದುಗರಿಗೆ ಆದಷ್ಟೂ ನಿಜ ಸಂಗತಿಯನ್ನು ತಿಳಿಸಬೇಕೆಂಬ ಸಹಜ ಕಳಕಳಿ ನಿಮಗಿದೆ. ಅಕ್ಟೊಬರ್ ಎರಡನೆಯ ವಾರ ತಲಕಾವೇರಿಯ ತೀರ್ಥೋದ್ಭವದ ಬಗೆಗೆ ಬರೆಯಲು ನಿರ್ಧರಿಸಿದ್ದೀರಿ. ಬೆಂಗಳೂರಿನಿಂದ ಭಾಗಮಂಡಲಕ್ಕೆ ಬಂದಿದ್ದೀರಿ.

ಪ್ರತಿ ವರ್ಷವೂ ತುಲಾ ಸಂಕ್ರಮಣದ ದಿನವೇ ನೀರಿನ ಬುಗ್ಗೆ ಏಳುವ ಚಮತ್ಕಾರದ ಬಗ್ಗೆ ನಿಮಗೆ ಆಸಕ್ತಿ ಮೂಡಿದೆ. ಇಂಗ್ಲಿಷ್ ಕ್ಯಾಲೆಂಡರಿನ ಅಕ್ಟೋಬರ್ ೧೬-೧೭ರಂದೇ ಈ ಘಟನೆ ನಡೆಯಲು ಕಾರಣ ಏನು? ಜ್ಯೋತಿಷಿಗಳ ಲೆಕ್ಕಕ್ಕೆ ಚ್ಯುತಿ ಬಾರದಂತೆ ನಿಜಕ್ಕೂ ಆ ಪುಟ್ಟ ಕೆರೆಯಲ್ಲಿ ಅದೇ ಕ್ಷಣದಲ್ಲಿ ತೀರ್ಥೋದ್ಭವ ಆಗುತ್ತದೆಯೆ? ಅಥವಾ, ಅಂದು ಕಂಡಿಕೆಯ ಬಳಿ ಪೂಜೆ ಹವನಗಳಲ್ಲಿ ತಲ್ಲೀನರಾದ ವೈದಿಕರು ಕೈಗಡಿಯಾರ ನೋಡಿ, ನಿಗದಿತ ಮುಹೂರ್ತದಲ್ಲಿ ‘ಬಂತೂ ಬಂತೂ! ಕಾವೇರಿ ಉದ್ಭವ ಆದ್ಲೂ!!’ ಎಂದು ಕೂಗಿ, ಏರುದನಿಯಲ್ಲಿ ಮಂತ್ರ ಘೋಷಣೆ ಮಾಡಿ, ಜನರನ್ನು ನೀರಿಗೆ ಧುಮುಕುವಂತೆ ಮಾಡುತ್ತಾರೆಯೆ? ಅವರೆಲ್ಲ ಧುಮುಕಿದ್ದರಿಂದ ಸಹಜವಾಗಿಯೇ ನೀರಿನ ಮಟ್ಟ ಮೇಲಕ್ಕೇರಿದಾಗ ಅದೊಂದು ಅದ್ಭುತ ಎಂಬಂತೆ ಪ್ರತಿವರ್ಷವೂ ವರದಿ ಮಾಡಲಾಗುತ್ತಿದೆಯೆ? ನಿಜ ಸಂಗತಿ ಏನೆಂದು ಪತ್ತೆ ಮಾಡಲು ಹೋದ ವಿಜ್ಞಾನಿಗಳ ತಂಡಕ್ಕೆ ವೈದಿಕರ ಸಹಕಾರ ಏಕೆ ಸಿಗಲಿಲ್ಲ ಎಂದೆಲ್ಲ ಪ್ರಶ್ನಿಸಿ ಲೇಖನ ಬರೆಯುತ್ತೀರಿ. ಮಕರ ಸಂಕ್ರಮಣದ ದಿನ ಅಯ್ಯಪ್ಪ ಸ್ವಾಮಿಯ ಭಕ್ತರಿಗೆ ಕಾಣುವಂತೆ ದೂರದ ಬೆಟ್ಟದಲ್ಲಿ ಕರ್ಪೂರದ ರಾಶಿ ಹಾಕಿ, ‘ಮಕರ ಜ್ಯೋತಿ’ಯನ್ನು ಕೃತಕವಾಗಿ ಸೃಷ್ಟಿ ಮಾಡುತ್ತಿದ್ದವರು ವಿಜ್ಞಾನಿಗಳ ಕೈಗೆ ಸಿಕ್ಕಿಬಿದ್ದುದನ್ನು ಪ್ರಸ್ತಾಪ ಮಾಡುತ್ತೀರಿ. ತೀರ್ಥೋದ್ಭವ ವಾಸ್ತವವೆ ಅಥವಾ ಮೂಢನಂಬಿಕೆಯೆ ಎಂದೆಲ್ಲ ಪ್ರಶ್ನಿಸಿ ಒಂದು ವಿಶ್ಲೇಷಣಾತ್ಮಕ ಲೇಖನ ಅದಾಗತ್ತದೆ.

‘ಚೆನ್ನಾಗಿದೆ, ಇದು ಬೈಲೈನ್ ಸಮೇತ ಮುಖಪುಟದಲ್ಲಿ ಪ್ರಕಟವಾಗುತ್ತದೆ ನೋಡಿ; ಯಾರೂ ಈವರೆಗೆ ಈ ಆಂಗಲ್ನಲ್ಲಿ ಬರೆದಿರಲಿಲ್ಲ’ ಎಂದು ಸಹೋದ್ಯೋಗಿ ವರದಿಗಾರರು ಅಸೂಯೆಯಿಂದ ಶ್ಲಾಘಿಸುತ್ತಾರೆ. ನೀವು ಎದೆಯುಬ್ಬಿಸಿ ವರದಿಯ ಹಸ್ತಪ್ರತಿಯನ್ನು ಸಂಪಾದಕರಿಗೆ ಕೊಟ್ಟು ಮನೆಗೆ ತೆರಳುತ್ತೀರಿ.

ಬೆಳಿಗ್ಗೆ ಪತ್ರಿಕೆಯನ್ನು ನೋಡಿದರೆ ನಿಮ್ಮ ವರದಿ ನಾಪತ್ತೆಯಾಗಿರುತ್ತದೆ. ಒಳಗಿನ ಪುಟದಲ್ಲಿ ತೀರ್ಥೋದ್ಭವದ ಸಂದರ್ಭದ ಪ್ರವಾಸಿ ವ್ಯವಸ್ಥೆಗಳ ಬಗೆಗೆ ವಾರ್ತಾ ಇಲಾಖೆಯವರು ನೀಡಿದ ಕಿರು ಮಾಹಿತಿ ಬಂದಿರುತ್ತದೆ.
ನೀವು ಅಸಮಾಧಾನದಿಂದ ಧುಮುಧುಮಿಸುತ್ತ ಸಂಪಾದಕರ ಬಳಿ ಹೋಗಿ, ನಿಮ್ಮ ವರದಿಯನ್ನು ಕಿಲ್ ಮಾಡಲು ಕಾರಣವೇನೆಂದು ಕೇಳುತ್ತೀರಿ.

ಅವರು ‘ಪತ್ರಿಕಾ ಸ್ವಾತಂತ್ರ್ಯ’ದ ಇತಿಮಿತಿ ಕುರಿತು ಒಂದು ಪುಟ್ಟ ಉಪನ್ಯಾಸವನ್ನೇ ಕೊಡುತ್ತಾರೆ. ‘ನೀವು ಬರೆದಿದ್ದರಲ್ಲಿ ಸತ್ಯವೇ ಇರಬಹುದು; ಆದರೆ ಅದನ್ನು ಓದಿದ ಭಕ್ತರು ತೀರ್ಥೋದ್ಭವದ ದರ್ಶನವನ್ನು ಬಿಡುವುದಿಲ್ಲ. ಬದಲಿಗೆ ನಮ್ಮ ಪತ್ರಿಕೆಯನ್ನು ಓದುವುದನ್ನು ಬಿಟ್ಟಾರು ಅಷ್ಟೆ!’ ಎನ್ನುತ್ತಾರೆ.

ನೀತಿ ಪಾಠ ೧: ‘ಪತ್ರಿಕಾ ಸ್ವಾತಂತ್ರ್ಯ’ ಎಂದರೆ ಸಂಪಾದಕನ ಸ್ವಾತಂತ್ರ್ಯ ಅಷ್ಟೆ; ನಿಮ್ಮಂಥ ಉತ್ಸಾಹಿ ವರದಿಗಾರರಿಗೆ, ಗಂಭೀರ ಚಿಂತಕರಿಗೆ ಏನೂ ಸ್ವಾತಂತ್ರ್ಯ ಇಲ್ಲ.

ಎರಡನೆಯ ಘಟನೆ: ಬೆಂಗಳೂರಿನ ಪ್ರತಿಷ್ಠಿತ ಖಾಸಗಿ ನರ್ಸಿಂಗ್ ಹೋಮ್ ಒಂದರಲ್ಲಿ ಅನಾಥ ಶಿಶುಗಳ ಅಕ್ರಮ ಲೇವಾದೇವಿ ನಡೆದಿದೆ ಎಂಬ ಸುಳಿವು ನಿಮಗೆ ಸಿಕ್ಕಿದೆ. ಪತ್ತೇದಾರ ಪುರಷೋತ್ತಮನ ಹಾಗೆ ನೀವು ಯಾವುದೋ ರೋಗಿಯ ಸಂಬಂಧಿಯಂತೆ ನಟಿಸಿ ನರ್ಸಿಂಗ್ ಹೋಂ ಒಳಗೆಲ್ಲ ಸುತ್ತಾಡುತ್ತೀರಿ. ಒಳಕೋಣೆಯ ಮೂಲೆಯಲ್ಲಿ, ನೆಲದ ಮೇಲಿಟ್ಟ ಒಂದು ತೊಟ್ಟಿಲಲ್ಲಿ ಐದಾರು ತಿಂಗಳಿನ ಶಿಶುವೊಂದಕ್ಕೆ ನರ್ಸ್ಗಳ ಸೇವೆ ನಡೆಯುವುದನ್ನು ಪತ್ತೆ ಮಾಡುತ್ತೀರಿ. ನವಜಾತ ಶಿಶುಗಳು ಮಾತ್ರ ಇರಬೇಕಾದ ಆಸ್ಪತ್ರೆಯಲ್ಲಿ ಇಷ್ಟು ದೊಡ್ಡ ಶಿಶು ಇದೆಯೆಂದ ಮೇಲೆ ಏನೋ ರಹಸ್ಯ ಇದೆಯೆಂಬ ಗುಮಾನಿ ನಿಮಗೆ ಬರುತ್ತದೆ. ಒಂದು ವಾರ ಬಿಟ್ಟು ಮತ್ತೊಮ್ಮೆ ಅಲ್ಲಿಗೆ ಹೋಗಿ ಅದೇ ತೊಟ್ಟಿಲಲ್ಲಿ ಬೇರೊಂದು ಮಗು ಇರುವುದನ್ನು ನೋಡುತ್ತೀರಿ. ಇದೂ ಆರೆಂಟು ತಿಂಗಳ ಮಗುವೇ ಆಗಿರುತ್ತದೆ. ಇದಕ್ಕೂ ತಾಯಿ ಇಲ್ಲವೆಂಬುದನ್ನು ಖಚಿತವಾಗುತ್ತದೆ. ಏಕೆಂದರೆ ನರ್ಸ್ಗಳೇ ಅದರ ಯೋಗಕ್ಷೇಮ ನೋಡಿಕೊಳ್ಳುತ್ತಿರುತ್ತಾರೆ. ಅದು ಯಾರ ಮಗು ಎಂದು ನರ್ಸ್ ಜತೆ ಕೇಳುತ್ತೀರಿ. ಆಕೆ ಗೊತ್ತಿಲ್ಲ ಎನ್ನುತ್ತಾಳೆ. ಮತ್ತೆ ಸಾವರಿಸಿಕೊಂಡು, ‘ನೀವ್ಯಾರು, ಯಾಕೆ ಬಂದ್ರಿ? ಇಲ್ಲೇನ್ ಕೆಲಸ?’ ಎಂದು ನಿಮ್ಮನ್ನೇ ಗದರುತ್ತಾಳೆ. ನೆಲ ಒರೆಸುವ ಆಯಾಳನ್ನು ಹಿಂಬಾಲಿಸಿ, ಕೊಳೆಗೇರಿಯಲ್ಲಿರುವ ಅವಳ ಗುಡಿಸಿಲಿಗೂ ಹೋಗಿ ಮಾಹಿತಿ ಸಂಗ್ರಹಿಸುತ್ತೀರಿ. ಮತ್ತೆ ಮತ್ತೆ ನರ್ಸಿಂಗ್ ಹೋಮ್ಗೆ ಭೇಟಿ ಕೊಟ್ಟು ರಹಸ್ಯವಾಗಿ ಎರಡನೆಯ, ಮೂರನೆಯ ಮಗುವಿನ ಫೋಟೊ ತೆಗೆದು, ಕಚೇರಿಗೆ ಬಂದು ಫೋಟೊ ಸಂಸ್ಕರಣೆ ಮಾಡಿಸಿ, ನರ್ಸಿಂಗ್ ಹೋಮ್ನ ಮುಖ್ಯ ಡಾಕ್ಟರ್ಗೆ ಫೋನ್ ಮಾಡುತ್ತೀರಿ. ‘ನಿಮ್ಮಲ್ಲಿ ಅನಾಥ ಶಿಶುಗಳ ಆರೈಕೆ ನಡೀತದಲ್ಲ? ಏನು ಮಾಡ್ತೀರಾ ಅಂಥ ಶಿಶುಗಳನ್ನು?’ ಎಂದು ಕೇಳುತ್ತೀರಿ. ಅವರು ಗಾಬರಿ ಬಿದ್ದು ಸ್ಪಷ್ಟೀಕರಣ ನೀಡುವ ಯತ್ನದಲ್ಲಿ ಕಕವಕ ಎನ್ನುತ್ತಾರೆ; ‘ಇಲ್ಲ ಇವೆಲ್ಲ ಸುಳ್ಳು ಸಂಗತಿ, ನಿಮ್ಮಲ್ಲಿ ಪ್ರೂಫ್ ಎಲ್ಲಿದೆ?’ ಎಂದೆಲ್ಲ ಕೇಳುತ್ತಾರೆ. ನೀವು ಹೆಮ್ಮೆಯಿಂದ ‘ತೊಟ್ಟಿ ಶಿಶುವಿನ ಫೋಟೊ ಕೂಡ ಇದೆ’ ಎನ್ನುತ್ತೀರಿ. ವೈದ್ಯ ಶಿಖಾಮಣಿ ನಿಮ್ಮೊಂದಿಗೆ ಸಂಧಾನಕ್ಕೆ ಯತ್ನಿಸುತ್ತಾರೆ. ‘ಅದು ಹಾಗಲ್ಲ; ಇಲ್ಲಿ ಎಂಥ ಅವ್ಯವಹಾರವೂ ಇಲ್ಲ ಬನ್ನಿ, ಕೂತು ಮಾತಾಡೋಣ’ ಎನ್ನುತ್ತಾರೆ. ಆಮಿಷ ಒಡ್ಡುತ್ತಾರೆ.

ನಿಮಗೆ ವೃತ್ತಿಧರ್ಮ ದೊಡ್ಡದು. ‘ಬರೋಕಾಗೋದಿಲ್ಲ, ವರದಿ ನಾಳೆನೇ ಪ್ರಕಟ ಆಗಬೇಕು, ನಾನು ಕಣ್ಣಾರೆ ನೋಡಿದ್ದರ ವಿವರಣೆಯ ಜತೆ ನಿಮ್ಮ ಹೇಳಿಕೆಯನ್ನೂ ಪ್ರಕಟಿಸುವುದು ನನ್ನ ಧರ್ಮ; ಅದು ನಮ್ಮ ವೃತ್ತಿಯ ಧರ್ಮ; ಅದೇನು ಹೇಳಬೇಕೊ ಫೋನ್ನಲ್ಲೇ ಹೇಳಿ’ ಎನ್ನುತ್ತೀರಿ. ‘ಅವು ಅನಾಥ ಶಿಶುಗಳಲ್ಲ, ನರ್ಸ್ಗಳು ತಮ್ಮ ಮಕ್ಕಳನ್ನು ಇಲ್ಲಿಗೇ ತಂದು ಪೋಷಣೆ ಮಾಡಲು ಅವಕಾಶ ಕೊಟ್ಟಿದ್ದೇವೆ’ ಎನ್ನುತ್ತಾರೆ.

ವರದಿ ಬರೆದು, ನರ್ಸಿಂಗ್ ಹೋಮ್ ಮಾಲಿಕರ ಅಸ್ಪಷ್ಟ ಸಮಜಾಯಿಷಿಯನ್ನೂ ನಮೂದಿಸಿ, ಚಿತ್ರದ ಸಮೇತ ಸಂಪಾದಕರಿಗೆ ತೋರಿಸುತ್ತೀರಿ. ಅನಾಥ ಮಕ್ಕಳನ್ನು ಕಲೆ ಹಾಕಿ, ವಿದೇಶೀ ಪಾಲಕರಿಗೆ ದೊಡ್ಡ ಮೊತ್ತಕ್ಕೆ ಹಸ್ತಾಂತರ ಮಾಡುವವರ ಜಾಲದ ಹೆಚ್ಚುತ್ತಿದೆ ಎಂಬ ಪೊಲೀಸರ ಹಿಂದಿನ ತಿಂಗಳ ವರದಿಯನ್ನೂ ಕೋಟ್ ಮಾಡಿರುತ್ತೀರಿ. ಸಂಪಾದಕರು ‘ಶಾಭಾಸ್, ಎಕ್ಸಲಂಟ್ ಸ್ಟೋರಿ’ ಎಂದು ಹೇಳಿ, ತಾವಾಗಿ ಬೈಲೈನ್ ಬರೆದು, ‘ಪುಟ ೧ಕ್ಕೆ ತೆಗೆದುಕೊಳ್ಳಿ’ ಎಂದು ಶರಾ ಹಾಕಿ ಸುದ್ದಿ ಸಂಪಾದಕರಿಗೆ ರವಾನಿಸುತ್ತಾರೆ. ನೀವು ಅಂದು ರಾತ್ರಿ ಹನ್ನೊಂದರ ವರೆಗೂ ಕಚೇರಿಯಲ್ಲೇ ಇದ್ದು, ನಿಮ್ಮ ವರದಿಯ ಪ್ರೂಫ್ ನೋಡಿ, ಚಿತ್ರದ ಚೌಕಟ್ಟನ್ನು ಸರಿಯಾಗಿ ಕ್ರಾಪ್ ಮಾಡಿ ನಿಮ್ಮದೇ ಬೈಲೈನನ್ನು ಮತ್ತೆ ಮತ್ತೆ ಓದಿ ಹೆಮ್ಮೆ ಪಡುತ್ತ ಮನೆಗೆ ಹೋಗುತ್ತೀರಿ. ಮರುದಿನ ನಸುಕಿನಲ್ಲೇ ಎದ್ದು ಮೊದಲ ಪುಟದಲ್ಲಿ ನಿಮ್ಮ ವರದಿಗಾಗಿ ಕಣ್ಣಾಡಿಸಿದರೆ, ವರದಿ ನಾಪತ್ತೆ! ಗಡಿಬಿಡಿಯಿಂದ ಒಳಗಿನ ಪುಟಗಳಲ್ಲೆಲ್ಲ ಹುಡುಕಾಡಿದರೂ ಎಲ್ಲೂ ಆ ವರದಿ ಇಲ್ಲ.

ಸಂಪಾದಕರ ಬಳಿ ಓಡುತ್ತೀರಿ. ಅವರು ಏನನ್ನೋ ಓದುತ್ತಿದ್ದವರು ತಲೆ ಎತ್ತದೆ, ‘ನೀವು ಈಗಿನ್ನೂ ಬೆಳೀತಾ ಇರೋರು. ಇಂಥವನ್ನೆಲ್ಲ ಜೀರ್ಣಿಸಿಕೊಳ್ತಾನೇ ಬೆಳೀಬೇಕು’ ಎನ್ನುತ್ತಾರೆ. ನರ್ಸಿಂಗ್ ಹೋಮ್ನ ಮಾಲಿಕರು ತುಂಬ ಪ್ರಭಾವೀ ವ್ಯಕ್ತಿಯೆಂದೂ, ಪತ್ರಿಕಾ ಮಾಲಿಕರ ಮೇಲೆ ಸರಿರಾತ್ರಿಯಲ್ಲಿ ಒತ್ತಡ ತಂದು ವರದಿಯನ್ನು ಸ್ಥಗಿತ ಮಾಡಿಸಿದರೆಂದೂ ನಿಮಗೆ ಆಮೇಲೆ ಗೊತ್ತಾಗುತ್ತದೆ.

ನೀತಿಪಾಠ ೨: ‘ಪತ್ರಿಕಾ ಸ್ವಾತಂತ್ರ್ಯ’ ಎಂದರೆ ವರದಿಗಾರನ ಸ್ವಾತಂತ್ರ್ಯವೂ ಅಲ್ಲ; ಸಂಪಾದಕನ ಸ್ವಾತಂತ್ರ್ಯವೂ ಅಲ್ಲ. ಅದು ಪತ್ರಿಕಾ ಮಾಲಿಕರ ಸ್ವಾತಂತ್ರ್ಯ.

ಮೂರನೆಯ ಘಟನೆ:
ನೀವೀಗ ಸಾಕಷ್ಟು ಎತ್ತರದ ಹುದ್ದೆಯಲ್ಲಿದ್ದೀರಿ. ವಾರದ ಪ್ರಮುಖ ಪುರವಣಿಯ ಸಂಪಾದಕರಾಗಿದ್ದೀರಿ. ಮೂಢನಂಬಿಕೆ, ಮಠ-ಮಂದಿರ, ಢೋಂಗಿ ದೇವದೂತರ ಕುರಿತ ಲೇಖನಗಳನ್ನು ನೀವು ಎಂದೂ ಪ್ರಕಟಿಸಿದ್ದೇ ಇಲ್ಲ. ಆದರೆ ಈ ಬಾರಿ ಸಂಪಾದಕರಿಂದ ಆದೇಶ ಬಂದಿರುತ್ತದೆ. ಮುಂದಿನ ವಾರ ಮುಖ್ಯ ಲೇಖನವಾಗಿ ಶ್ರೀಶ್ರೀ ಸೋ ಅಂಡ ಸೋ ಅವರ ಪೀಠಾರೋಹಣದ ೨೩ನೇ ವಾರ್ಷಿಕೋತ್ಸವದ ಸಂಭ್ರಮವನ್ನು ಪ್ರಕಟಿಸಬೇಕು ಎನ್ನುತ್ತಾರೆ. ನೀವು ಒಪ್ಪುವುದಿಲ್ಲ. ಅದು ನಮ್ಮ ಜಾಯಮಾನಕ್ಕೆ ಹೊಂದುವುದಿಲ್ಲ; ಅದೂ ಅಲ್ಲದೆ ೨೫ನೆ ಉತ್ಸವವೂ ಅಲ್ಲ; ಈಗ ಅದನ್ನು ಪ್ರಕಟಿಸುವುದು ಅಷ್ಟೇನೂ ಉಚಿತ ಅಲ್ಲ ಎಂದು ವಾದಿಸಲು ಯತ್ನಿಸುತ್ತೀರಿ. ಸಂಪಾದಕರು ಕುಪಿತರಾಗುತ್ತಾರೆ. ಸ್ವಾಮೀಜಿಯ ಫೋಟೊಗಳಿರುವ ಸಿ.ಡಿ.ಯನ್ನು ನಿಮ್ಮತ್ತ ತಳ್ಳುತ್ತಾರೆ. ‘ಈ ಪುರವಣಿಯ ಹತ್ತು ಸಾವಿರ ಕಾಪಿಗಳನ್ನು ಖರೀದಿ ಮಾಡುವುದಾಗಿ ಸ್ವಾಮೀಜಿಯ ಶಿಷ್ಯಂದಿರು ಆಶ್ವಾಸನೆ ನೀಡಿದ್ದಾರೆ; ನೋಡಿ ಮುಂಗಡ ಚೆಕ್ ಇಲ್ಲೇ ಇದೆ. ನಾವು ಪ್ರಕಟಮಾಡದಿದ್ದರೆ ಎದುರಾಳಿ ಪತ್ರಿಕೆಯವರಿಗೆ ಈ ಲೇಖನ ಹೋಗುತ್ತದೆ. ನಮ್ಮ ಪ್ರಸರಣ ಸಂಖ್ಯೆ ಕುಸೀತಾ ಇದೆ. ಇಂಥ ಅವಕಾಶ ಬಿಡಬಾರದು’ ಎಂದು ಕಟ್ಟುನಿಟ್ಟಾಗಿ ಹೇಳಿ, ಸ್ವಾಮೀಜಿಯ ಸಾಧನೆಯನ್ನು ಉಘೇ ಉಘೇ ಎಂದು ಹೊಗಳಿ ಯಾರೋ ಬರೆದ ಹಸ್ತಪ್ರತಿಯನ್ನು ನಿಮ್ಮತ್ತ ಸರಿಸುತ್ತಾರೆ. ಅದರ ಮೇಲೆ, ಎಡಮೂಲೆಯಲ್ಲಿ ‘ಮಸ್ಟ್ ದಿಸ್ ವೀಕ್’ ಎಂಬ ಶರಾ ಕಾಣಿಸುತ್ತದೆ. ಶರಾ ಬರೆದು ಕಿರು ಸಹಿ ಮಾಡಿದ ವ್ಯಕ್ತಿ ನಿಮ್ಮ ಪತ್ರಿಕೆಯ ಪ್ರಸರಣ ವಿಭಾಗದ ಮ್ಯಾನೇಜರ್ ಆಗಿರುತ್ತಾನೆ.

ನೀತಿ ಪಾಠ ೩: : ‘ಪತ್ರಿಕಾ ಸ್ವಾತಂತ್ರ್ಯ’ ಎಂದರೆ ವರದಿಗಾರನ ಸ್ವಾತಂತ್ರ್ಯವೂ ಅಲ್ಲ; ಸಂಪಾದಕನ ಸ್ವಾತಂತ್ರ್ಯವೂ ಅಲ್ಲ. ಅದು ಪತ್ರಿಕೆಯ ಪ್ರಸರಣಾಧಿಕಾರಿಯ ಸ್ವಾತಂತ್ರ್ಯ.

ನಾಲ್ಕನೆಯ ಘಟನೆ:
ನಗರದ ಅದ್ದೂರಿ ವಸತಿ ಸಮುಚ್ಚಯಗಳ ಬಗೆಗೆ ಮುಂದಿನ ವಾರ ವಿಶೇಷ ಪುರವಣಿ ಹೊರಡಿಸೋಣ ಎಂದು ಸಂಪಾದಕರು ಸಲಹೆ ಮಾಡುತ್ತಾರೆ. ನೀವು ಉತ್ಸಾಹದಿಂದ ಇಬ್ಬರು ವರದಿಗಾರರನ್ನು ಮಾಹಿತಿ ಕಲೆಹಾಕಲು ಒಟ್ಟುತ್ತೀರಿ. ಅಕ್ರಮಗಳ ಸರಮಾಲೆಗಳೇ ವರದಿಯ ರೂಪದಲ್ಲಿ ನಿಮ್ಮೆದುರು ಬರುತ್ತವೆ. ಕೆರೆ ಅಂಗಳದ ಒತ್ತುವರಿ, ಅಕ್ರಮ ಕೊಳವೆ ಬಾವಿ ಕೊರೆತ, ಕಟ್ಟಡ ನಿಯಮಗಳ ಉಲ್ಲಂಘನೆ, ಫ್ಲ್ಯಾಟ್ಗಳನ್ನು ಬುಕ್ ಮಾಡಿದವರಿಂದ ಪದೇ ಪದೇ ಹೆಚ್ಚುವರಿ ಹಣದ ವಸೂಲಿ. ಜಲಮಂಡಲಿಯಿಂದ ಹಾಗೂ ವಿದ್ಯುತ್ ಇಲಾಖೆಯಿಂದ ಅಕ್ರಮ ಸಂಪರ್ಕ, ಮಲಿನ ನೀರಿನ ಸುರಕ್ಷಿತ ವಿಲೆವಾರಿಗೆ ಬದಲು, ಕೆರೆಗೇ ಅರ್ಪಣೆ…. ಕಾರ್ಮಿಕರ ಶೋಷಣೆ, ರಾಜಕೀಯ ಪ್ರಭಾವ ಬಳಸಿ ಲೋಕೋಪಯೋಗಿ ಇಲಾಖೆಯಿಂದಲೇ ಖಾಸಗಿ ರಸ್ತೆ ನಿರ್ಮಾಣ…. ಒಂದಲ್ಲ ಎರಡಲ್ಲ.

ಎಲ್ಲವನ್ನೂ ಕ್ರಮವಾಗಿ ಜೋಡಿಸಿ, ಫೋಟೊಗಳೊಂದಿಗೆ ಸಂಪಾದಕರ ಮೇಜಿನ ಮೇಲೆ ಇಡುತ್ತೀರಿ. ಇಪ್ಪತ್ತು ನಿಮಿಷಗಳಲ್ಲಿ ಮತ್ತೆ ಅವರಿಂದ ಕಾಲ್ ಬರುತ್ತದೆ. ‘ಛೆ ಛೆ, ಹೀಗಲ್ಲ ನಾನು ಹೇಳಿದ್ದು, ಇವೆಲ್ಲ ಪಕ್ಕಕ್ಕಿಡಿ. ಬೇರೆ ಲೇಖನಗಳು ಆಗಲೇ ಬಂದಿವೆ ಇಲ್ನೋಡಿ…’ ಎನ್ನುತ್ತ ಮೂರು ನಾಲ್ಕು ಲೇಖನಗಳು ಹಾಗೂ ಮನಮೋಹಕ ಲ್ಯಾಂಡ್ಸ್ಕೇಪ್ ಇರುವ ಫೋಟೊಗಳನ್ನು ಮುಂದಿಡುತ್ತಾರೆ.

‘ಇದು ಜಾಹೀರಾತು ಪುರವಣಿ. ಇದರಲ್ಲಿ ಸಂಪಾದಕೀಯ ವಿಭಾಗದ ಪಾತ್ರ ಏನೂ ಇಲ್ಲ. ಬಿಲ್ಡರ್ಗಳೇ ಲೇಖನಗಳನ್ನು, ಚಿತ್ರಗಳನ್ನು ಒದಗಿಸಿದ್ದಾರೆ. ನಮ್ಮದೇನಿದ್ದರೂ ಪುಟಜೋಡಣೆ ಮಾಡಿ ಪ್ರಿಂಟ್ ಮಾಡಿಸುವುದು ಅಷ್ಟೆ’ ಎನ್ನುತ್ತಾರೆ.

ನಿಮ್ಮ ಶ್ರಮಕ್ಕೆ ತದ್ವಿರುದ್ಧವಾದ, ಎಲ್ಲ ವಸತಿ ಸಮುಚ್ಚಯಗಳೂ ಸ್ವರ್ಗ ಸಮಾನವೆಂದು ಹಾಡಿ ಹೊಗಳುವ, ಅಲ್ಲಿನ ಸೌಕರ್ಯಗಳ ಕನಸಿನ ಲೋಕವನ್ನು ಹಾಡಿ ಹೊಗಳುವ ಲೇಖನಗಳನ್ನು ಹೊತ್ತ ಅದ್ಧೂರಿ ಪುರವಣಿ ನಿಮ್ಮ ಮೇಲ್ವಿಚಾರಣೆಯಲ್ಲೇ ಪ್ರಕಟವಾಗುತ್ತದೆ. ತನಿಖೆಗೆ ಶ್ರಮಿಸಿದ ಕಿರಿಯ ವರದಿಗಾರರಿಗೆ ಮುಖ ತೋರಿಸಲಾಗದೆ ನೀವು ನಾಲ್ಕು ದಿನ ನೀವು ಕಳ್ಳನಂತೆ ಓಡಾಡುತ್ತೀರಿ.

ನೀತಿಪಾಠ ೪: ‘ಪತ್ರಿಕಾ ಸ್ವಾತಂತ್ರ್ಯ’ ಎಂದರೆ ಎಳೆಯ ವರದಿಗಾರನ ಸ್ವಾತಂತ್ರ್ಯವೂ ಅಲ್ಲ; ಹಿರಿಯ ಪತ್ರಕರ್ತನ ಸ್ವಾತಂತ್ರ್ಯವೂ ಅಲ್ಲ; ಸಂಪಾದಕನ ಸ್ವಾತಂತ್ರ್ಯವೂ ಅಲ್ಲ. ಅದು ಜಾಹೀರಾತು ವಿಭಾಗದ ಮುಖ್ಯಸ್ಥನ ಸ್ವಾತಂತ್ರ್ಯ.

ಐದನೆಯ ಘಟನೆ:
ನೀವೀಗ ಸಂಪಾದಕರ ಹುದ್ದೆಗೇರಿದ್ದೀರಿ. ಎಂದಿನಂತೆ ದಿನಕ್ಕೊಮ್ಮೆ ಪತ್ರಿಕೆಯ ಮಾಲಿಕರ ಜತೆ ಭೇಟಿ ಇರುತ್ತದೆ. ಎಂದಿನಂತೆ ಇಂದೂ ಮಾಮೂಲಿ ರಾಜಕೀಯ ವಿದ್ಯಮಾನಗಳ ಚರ್ಚೆ, ಸಂಪಾದಕೀಯ ವಿಷಯಗಳ ಪ್ರಸ್ತಾವನೆ, ಪತ್ರಿಕೆಯಲ್ಲಿ ಬಂದ ಪ್ರಮಾದಗಳ ಅವಲೋಕನ, ಎಲ್ಲ ಮುಗಿದ ನಂತರ ಮಾಲಿಕರು ಒಂದು ಪುಟ್ಟ ಕಡತವನ್ನು ನಿಮ್ಮತ್ತ ತಳ್ಳುತ್ತಾರೆ. ‘ಈ ವಿಷಯದ ಬಗ್ಗೆ ಒಂದು ತನಿಖಾ ವರದಿಯನ್ನು ಸಿದ್ಧಪಡಿಸಿ. ಆ ಚುರುಕು ಹುಡುಗಿ ಲಾವಣ್ಯ ಇದಾಳಲ್ಲ, ಅವಳಿಗೇ ತನಿಖೆ ಮಾಡಲು ಹೇಳಿ; ಅವಳಿಗೆ ಬೇಕಿದ್ದ ಎಲ್ಲಾ ಸೌಲಭ್ಯ ಕೊಡಿ’ ಎನ್ನುತ್ತಾರೆ.
ನೀವು ಸ್ವಸ್ಥಾನಕ್ಕೆ ಹಿಂದಿರುಗಿ ಕಡತದ ಮೇಲೆ ಕಣ್ಣಾಡಿಸುತ್ತೀರಿ.

ಅದು ಪ್ರಸಿದ್ಧ ಔಷಧ ಕಂಪನಿಯೊಂದರ ಕರಾಳ ಕೃತ್ಯಗಳ ಟಿಪ್ಪಣಿಗಳಿದ್ದ ಕಡತ. ಟಿಪ್ಪಣಿ ಯಾರು ಸಿದ್ಧಪಡಿಸಿದರೆಂಬ ಹೆಸರು ದೆಸೆ ಏನೇನೂ ಇಲ್ಲ. ವಿದೇಶೀ ಟೆಕ್ನಾಲಜಿಯನ್ನು ಬೆಂಗಳೂರಿಗೆ ತಂದು, ಕ್ರಾಂತಿಕಾರಿ ಉದ್ಯಮವೆಂದು ಬಿಂಬಿಸಿ, ದಿಢೀರಾಗಿ ಖ್ಯಾತಿ ಪಡೆದು ಸರಕಾರದ ಶಾಭಾಸ್ಗಿರಿಯನ್ನೂ ಗಿಟ್ಟಿಸಿದ ಕಂಪನಿಯ ಹಿತ್ತಲಿನ ಕೃತ್ಯಗಳ ಸಂಕ್ಷಿಪ್ತ ಮಾಹಿತಿ ಅದರಲ್ಲಿತ್ತು. ಈ ಕಂಪನಿ ತನ್ನ ಆವರಣದ ಸುತ್ತೆಲ್ಲ ಗಬ್ಬು ಮಾಲಿನ್ಯ ಹಬ್ಬಿಸಿದೆ. ಅಂತರ್ಜಲ ಕಲುಷಿತ ಆಗಿದೆ. ತಕರಾರು ಎತ್ತಿದ ಸುತ್ತಲಿನ ಗ್ರಾಮಸ್ಥರ ವಿರುದ್ಧ ದಬ್ಬಾಳಿಕೆ ನಡೆಸಿದೆ. ತುಂಬ ಶಕ್ತಿಶಾಲಿ ಎನಿಸಿದ ಈ ಪ್ರಭಾವೀ ಕಂಪನಿಯ ವಿರುದ್ಧ ತನಿಖಾ ವರದಿ ಸಿದ್ಧಪಡಿಸಲು ಎಂಟೆದೆ ಬೇಕು….

ನೀವು ಲಾವಣ್ಯಳನ್ನು ಕರೆಸಿ ತನಿಖೆಯ ಕೆಲಸವನ್ನು ಒಪ್ಪಿಸುತ್ತೀರಿ. ‘ಪ್ರತಿ ಹಂತದಲ್ಲೂ ಸಾಕ್ಷ್ಯಾಧಾರ ಸಂಗ್ರಹಿಸಬೇಕು. ಡಿಜಿಕ್ಯಾಂ ಜತೆಗಿರಲಿ. ವಾಯ್ಸ್ ರೆಕಾರ್ಡ್ ಕೂಡ ಅಗತ್ಯ ಬಿದ್ದರೆ ಮಾಡಿಕೊಳ್ಳಿ. ಮತ್ತೆ ನಿಮ್ಮ ಸ್ಕೂಟಿಯಲ್ಲಿ ಬೇಡ, ಆಫೀಸ್ ಕಾರ್ನಲ್ಲೇ ಹೋಗಿ… ಯೂ ಲುಕ್ ಸ್ಮಾರ್ಟ್. ಡೂ ಎ ಸ್ಮಾರ್ಟ್ ಜಾಬ್’ ಎಂದು ಪ್ರೋತ್ಸಾಹಿಸುತ್ತೀರಿ.

ಆ ವರದಿಗಾರ್ತಿ ನಡುರಾತ್ರಿಯಲ್ಲಿ ಗಬ್ಬು ನಾತ ಬೀರುವ ಕೆರೆಗಳ ಸುತ್ತ ಓಡಾಡಿ, ಮಲಿನ ದ್ರವ್ಯವನ್ನು ಸುರಿಯುವ ದೃಶ್ಯದ ಫೋಟೊ ತೆಗೆದು, ಹಳ್ಳಿಗಳಲ್ಲಿ ಓಡಾಡಿ ಮಾಹಿತಿ ಸಂಗ್ರಹಿಸುತ್ತಾಳೆ. ಅಂತರ್ಜಲ ಸೇವನೆಯಿಂದ ನಾನಾ ಕಾಯಿಲೆಗಳಿಂದ ತ್ರಸ್ತರಾಗಿದ್ದವರ ಮೆಡಿಕಲ್ ರಿಪೋರ್ಟ್ಗಳನ್ನು ಕಲೆ ಹಾಕುತ್ತಾಳೆ. ಕೆರೆಯ ಕೊಳೆನೀರು ಕುಡಿದು ಸತ್ತ ಜಾನುವಾರುಗಳ ಪೋಸ್ಟ್ ಮಾರ್ಟಂ ವರಿದಯನ್ನು ವೆಟರಿನರಿ ಆಸ್ಪತ್ರೆಯಿಂದ ತರುತ್ತಾಳೆ. ಈ ಕಂಪನಿಯ ಕಾರ್ಖಾನೆಯನ್ನು ದೂರ ಸಾಗಿಸುವಂತೆ ಪಂಚಾಯತ್ ಸಭೆಯಲ್ಲಿ ಠರಾವು ಪಾಸ್ ಮಾಡಿದ್ದರೂ, ಹೇಗೋ ಠರಾವು ಕಡತವೇ ಕೆಲ ದಿನ ನಾಪತ್ತೆಯಾಗಿದ್ದು, ಆಮೇಲೆ ಅದನ್ನು ಯಾರೋ ಬದಲಿಸಿದ್ದು ಗೊತ್ತಾಗುತ್ತದೆ. ಠರಾವಿನ ಒಂದು ಪ್ರತಿ ಜಿಲ್ಲಾ ಪಂಚಾಯ್ತಿಯಲ್ಲೂ ಇರುತ್ತದೆಂಬುದು ಗೊತ್ತಾಗಿ, ಅಲ್ಲಿ ಓಡಿ, ಅದರ ಒಂದು ನಕಲನ್ನು ತರುತ್ತಾಳೆ. ಬೋರ್ವೆಲ್ ನೀರಿನ ಸ್ಯಾಂಪಲ್ಲನ್ನು ಶೇಖರಿಸಿ, ತನಗೆ ಪರಿಚಯವಿರುವ ಖಾಸಗಿ ಲ್ಯಾಬಿನಲ್ಲಿ ವಿಶ್ಲೇಷಣೆ ಮಾಡಿಸುತ್ತಾಳೆ. ಮಾಲಿನ್ಯ ನಿಯಂತ್ರಣ ಮಂಡಲಿಯ ಹಿಂದಿನ ಎಲ್ಲ ನೋಟೀಸುಗಳ ಪ್ರತಿಗಳನ್ನು ತರುತ್ತಾಳೆ. ಕಾರ್ಖಾನೆಯ ಉತ್ಪಾದನೆಯಲ್ಲಿ ಯಾವ ಯಾವ ಬಗೆಯ ಮಾಲಿನ್ಯ ಹೊರಕ್ಕೆ ಸೂಸುತ್ತದೆ ಎಂಬ ಪಟ್ಟಿ ತಯಾರಿಸಿ, ಅಂಥ ಮಾಲಿನ್ಯ ವಸ್ತುಗಳನ್ನು ತಟಸ್ಥಗೊಳಿಸಲು ಸಾಧ್ಯವಿಲ್ಲ ಎಂಬ ಕಾರಣದಿಂದಾಗಿಯೇ ಪಾಶ್ಚಾತ್ಯರು ಇಡೀ ಕಾರ್ಖಾನೆಯನ್ನು ಭಾರತಕ್ಕೆ ಸಾಗ ಹಾಕಿದ್ದು ಎಂಬ ಅಂಶವನ್ನೂ ಪ್ರಸ್ತಾಪಿಸಿ, ಆ ಕುರಿತು ಮಾಲಿನ್ಯ ತಜ್ಞರ ಅಭಿಪ್ರಾಯ ಸಂಗ್ರಹಿಸುತ್ತಾಳೆ.

ಆ ಸುದೀರ್ಘ ವರದಿಯನ್ನು ಹಿಡಿದು ನೀವು ಹೆಮ್ಮೆಯಿಂದ ಮಾಲಿಕರಿಗೆ ಒಪ್ಪಿಸುತ್ತೀರಿ. ಲಾವಣ್ಯಳ ಸಾಧನೆಯನ್ನು ಮಾಲಿಕರೆದುರು ಹೊಗಳುತ್ತೀರಿ. ವರದಿಯ ಎರಡು ದಿನಗಳ ಪರಿಶೀಲನೆ, ಮರುಪರಿಶೀಲನೆ, ಪದಪದಗಳ ಸೂಕ್ಷ್ಮ ವಿವೇಚನೆ, ಅಂಕಿ ಅಂಶಗಳ ಖಚಿತತೆಯ ಚರ್ಚೆ ಎಲ್ಲ ಆಗುತ್ತದೆ. ಮಾಲಿಕರು ತಮ್ಮ ಸಂಸ್ಥೆಯ ವಕೀಲರಿಗೂ ವರದಿಯನ್ನು ತೋರಿಸಿ, ಇದನ್ನು ಪ್ರಕಟಿಸಿದರೆ ಯಾವುದೇ ಬಗೆಯ ಮಾನಹಾನಿ ಖಟ್ಲೆಯ ಸಾಧ್ಯತೆ ಇಲ್ಲ ಎಂಬ ಆಶ್ವಾಸನೆ ಪಡೆಯುತ್ತಾರೆ. ನಾಳೆಯೇ ಪ್ರಕಟಿಸಿ ಎಂದು ಮಾಲಿಕರು ಹೇಳುತ್ತಾರೆ.

‘ಮೂರು ಕಂತುಗಳಾಗಿ ಪ್ರಕಟವಾಗಬೇಕು; ನಾಳೆಯೇ ಮೊದಲ ಕಂತು ಬರಬೇಕು, ಆಕರ್ಷಕ ಹೆಡ್ಲೈನ್ ಕೊಡಿ’ ಎಂದು ಸಂಪಾದಕರು ಚೀಫ್ಸಬ್ಗೆ ಹೇಳುತ್ತಾರೆ. ಸಂಪಾದಕೀಯ ಬರೆಯುವವರಿಗೂ ಸೂಚನೆ ಹೋಗುತ್ತದೆ..
ಮರುದಿನ ವರದಿ ಪ್ರಕಟವಾಗುವುದಿಲ್ಲ. ‘ವಿದ್ಹೋಲ್ಡ್ ಮಾಡಿ’ ಎಂದು ಮಾಲಿಕರು ಕೊನೇಕ್ಷಣದಲ್ಲಿ ಆದೇಶ ನೀಡಿದ್ದಾರೆ. ಅವರ ಆದೇಶವನ್ನು ನೀವು ಸುದ್ದಿ ಸಂಪಾದಕರಿಗೆ, ಚೀಫ್ಸಬ್ಗೆ ಹೇಳುತ್ತೀರಿ. ‘ಮಾರನೆಯ ದಿನ ಪ್ರಕಟಿಸೋಣವೆ?’ ಎಂದು ಸಂಪಾದಕೀಯ ಸಭೆಯಲ್ಲಿ ಸುದ್ದಿ ಸಂಪಾದಕರು ನಿಮ್ಮನ್ನು ಕೇಳುತ್ತಾರೆ. ನೀವು ‘ಕೀಪಿಟ್ ಇನ್ ಕೋಲ್ಡ್ ಸ್ಟೋರೇಜ್’ ಎಂದು ಗುಡುಗುತ್ತೀರಿ. ಒಂದು ವಾರ ಕಳೆದರೂ ಅದು ಪ್ರಕಟವಾಗುವುದಿಲ್ಲ. ಮಾಲಿಕರ ಒತ್ತಾಯದಿಂದಲೇ ಎಲ್ಲ ಸಿದ್ಧತೆ ಆಗಿದ್ದರಿಂದ ಅದು ಯಾಕೆ ಪ್ರಕಟವಾಗಲಿಲ್ಲ ಎಂಬುದನ್ನು ಕೇಳುವ ಧೈರ್ಯ ಯಾರಿಗೂ ಇರುವುದಿಲ್ಲ. ಲಾವಣ್ಯಳ ಪ್ರಶ್ನಾರ್ಥಕ ನೋಟವನ್ನು ಎದುರಿಸುವ ಧೈರ್ಯ ನಿಮಗೂ ಇರುವುದಿಲ್ಲ.
ಎಂಟನೆಯ ದಿನ ಇಡೀ ಪುಟದ ಭಾರೀ ಜಾಹೀರಾತು ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾಗುತ್ತದೆ. ಅದೇ ಕಾರ್ಖಾನೆಯ ಉತ್ಪನ್ನಗಳ ಬಗ್ಗೆ, ಅದರ ಮಾರುಕಟ್ಟೆಯ ಯಶಸ್ಸಿನ ಬಗ್ಗೆ, ಅದು ಸದ್ಯದಲ್ಲೇ ಷೇರು ಮಾರ್ಕೆಟನ್ನು ಪ್ರವೇಶಿಸುವ ಬಗ್ಗೆ ದೊಡ್ಡ ಜಾಹೀರಾತು. ಮರುದಿನವೂ ಬರುತ್ತದೆ. ಮತ್ತೆ ಮತ್ತೆ ಬರುತ್ತದೆ. ಕೇಂದ್ರ ಸಚಿವರು ಕಾರ್ಖಾನೆಯ ಆವರಣದ ಸುಂದರ ಉದ್ಯಾನದಲ್ಲಿ ಮಾಲಿಕರ ಜತೆ ಬ್ಯಾಟರಿಚಾಲಿತ ವಾಹನದಲ್ಲಿ ಸುತ್ತಾಡುವ ಫೋಟೊ ಸುದ್ದಿಯೂ ಪ್ರಕಟವಾಗುತ್ತದೆ.

ನೀತಿಪಾಠ ೫: ‘ಪತ್ರಿಕಾ ಸ್ವಾತಂತ್ರ್ಯ’ ಎಂದರೆ ವರದಿಗಾರನ ಸ್ವಾತಂತ್ರ್ಯವೂ ಅಲ್ಲ; ಸಂಪಾದಕನ ಸ್ವಾತಂತ್ರ್ಯವೂ ಅಲ್ಲ. ಪತ್ರಿಕಾ ಮಾಲಿಕರ ಸ್ವಾತಂತ್ರ್ಯವೂ ಅಲ್ಲ. ಅದು ದುಡ್ಡಿನ ದೊರೆಗಳ ಸ್ವಾತಂತ್ರ್ಯ.

(ಕೃಪೆ: ಕೊಡಗಿನ ಶಕ್ತಿ ಪತ್ರಿಕೆಯ ಸುವರ್ಣ ಮಹೋತ್ಸವ ವಿಶೇಷಾಂಕ)

2 Responses to ಪತ್ರಿಕಾ ಸ್ವಾತಂತ್ರ್ಯದ ಐದು ಮುಖಗಳು

  1. nice

    very nice

  2. Dr.Chamaram

    Hard reality.i fully endorse Nagesh hegde sir’s openion.these days media has been corrupt.its in a sorry state,slave before money and capitalists.Irony is the so called corrupt politiciens have enterd into mass media,papers,tv!!! wht can we expect from these scoundrels? Almost all the media have became agents of MNC”s and selling the country.Shame.Even i have written such articals in my monthly magazine SAMAJA PARIVARTHANA.
    Thank you.

Leave a Reply