ತುಳುಕ್ಲಾ ಒಂತೆ ಜಾಗೆ ಕೊರ್ಲೆ
– ಡಾ. ಯು. ಬಿ. ಪವನಜ
ದಕ್ಷಿಣ ಕನ್ನಡದ ಬಸ್ಸುಗಳಲ್ಲಿ ಸಾಮಾನ್ಯವಾಗಿ ಕೇಳಿ ಬರುವ ಮಾತು “ಒಂತೆ ಜಾಗೆ ಕೊರ್ಲೆ” (ಸ್ವಲ್ಪ ಜಾಗ ನೀಡಿ). ಈ ಮಾತನ್ನು ತುಳು ಭಾಷಿಗರು ಈಗ ಜಗತ್ತಿನ ಮುಂದೆ ಕೇಳಬೇಕಾಗಿದೆ. ಗಣಕದಲ್ಲಿ ಜಗತ್ತಿನ ಎಲ್ಲ ಭಾಷೆಗಳ ಪ್ರತಿ ಅಕ್ಷರಕ್ಕೂ ಸಂಕೇತ ನೀಡುವ ವ್ಯವಸ್ಥೆ ಯುನಿಕೋಡ್. ಈ ಯುನಿಕೋಡ್‌ನಲ್ಲಿ ತುಳು ಭಾಷೆಗೂ ತನ್ನದೇ ಆದ ಸ್ಥಾನ ಬೇಕಾಗಿದೆ.
ಗಣಕದಲ್ಲಿ ಭಾರತೀಯ ಭಾಷೆಗಳನ್ನು ಅಳವಡಿಸಿ ಬಳಸುವುದು ಎಂದರೆ ನಮ್ಮ ಭಾಷೆಯಲ್ಲಿ ಬೆರಳಚ್ಚು ಮಾಡಿ ಮುದ್ರಿಸುವುದು ಎಂದೇ ಬಹುಜನರಲ್ಲಿ ತಪ್ಪು ಕಲ್ಪನೆ ಇದೆ. ಗಣಕದಲ್ಲಿ ಇಂಗ್ಲೀಶ್ ಭಾಷೆಯಲ್ಲಿ ಏನೇನು ಸಾಧ್ಯವೋ ಅವೆಲ್ಲವೂ ಕನ್ನಡ ಮತ್ತು ಇತರೆ ಭಾಷೆಗಳಲ್ಲಿ ಸಾಧ್ಯ. ಅಂದರೆ ನಮ್ಮ ಭಾಷೆಯ ಪ್ರಕಾರ ಮಾಹಿತಿಯ ಅಕಾರಾದಿ ವಿಂಗಡಣೆ, ಹುಡುಕುವುದು, ಸಂಬಳ, ಸಾರಿಗೆ -ಇತ್ಯಾದಿ ಆನ್ವಯಿಕ ತಂತ್ರಾಂಶಗಳ (ಅಪ್ಲಿಕೇಶನ್ ಸಾಪ್ಟ್ವೇರ್) ತಯಾರಿ, ಪ್ರತಿಸ್ಪಂದನಾತ್ಮಕ ಅಂತರಜಾಲ ತಾಣಗಳು, ಬಿಲ್ಲು, ರಶೀದಿ ನೀಡಿಕೆ -ಹೀಗೆ ಹಲವು ಕ್ಷೇತ್ರಗಳಿಗೆ ನಮ್ಮ ಭಾಷೆಯಲ್ಲಿ ಗಣಕಗಳನ್ನು ಬಳಸಬಹುದು. ಇವೆಲ್ಲವೂ ಸಾಧ್ಯವಾಗಿರುವುದು ಜಾಗತಿಕ ಶಿಷ್ಟತೆಯಾದ ಯುನಿಕೋಡ್ ವಿಧಾನದಿಂದ.
ಯುನಿಕೋಡ್ ಬರುವ ಮೊದಲು ಗಣಕಗಳಲ್ಲಿ ನಮ್ಮ ಭಾಷೆಗಳನ್ನು ಇಂಗ್ಲೀಶಿನ ಜಾಗದಲ್ಲಿ ಕೂರಿಸಿ ಕೆಲಸ ಮಾಡುತ್ತಿದ್ದರು. ಈ ವಿಧಾನದಿಂದ ಬೆರಳಚ್ಚು ಮತ್ತು ಮುದ್ರಣ ಮಾತ್ರ ಸಾಧ್ಯವಾಗುತ್ತಿತ್ತು. ಏನು ಈ ಯುನಿಕೋಡ್? ಗಣಕಗಳಲ್ಲಿ ಮಾಹಿತಿಯನ್ನು ಸಂಗ್ರಹಿಸಲು ಬಳಸುವ ಜಾಗತಿಕ ಸಂಕೇತೀಕರಣ ವ್ಯವಸ್ಥೆಯೇ ಯುನಿಕೋಡ್. ಇದರ ವೈಶಿಷ್ಟ್ಯವೆಂದರೆ ಜಗತ್ತಿನ ಎಲ್ಲ ಭಾಷೆಗಳಿಗೂ ಇದರಲ್ಲಿ ಪ್ರತ್ಯೇಕ ಸಂಕೇತವನ್ನು ನೀಡಲಾಗಿದೆ. ಅಂದರೆ ಇಂಗ್ಲೀಶ್ನ ಜಾಗದಲ್ಲಿ ನಮ್ಮ ಭಾಷೆಯನ್ನು ಕೂರಿಸಬೇಕಾಗಿಲ್ಲ. ಯುನಿಕೋಡ್ ವಿಧಾನದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಪರದೆಯಲ್ಲಿ (ಮೋನಿಟರ್) ಸರಿಯಾಗಿ ತೋರಿಸಲು ಓಪನ್ಟೈಪ್ ಎಂಬ ವಿಧಾನದ ಅಕ್ಷರಶೈಲಿಯನ್ನು (ಫಾಂಟ್) ಬಳಸಬೇಕಾಗುತ್ತದೆ. ಈ ಅಕ್ಷರಶೈಲಿಯ ವೈಶಿಷ್ಟ್ಯವೆಂದರೆ ಎಷ್ಟು ಬೇಕಾದರೂ ಅಕ್ಷರಭಾಗಗಳನ್ನು ಬಳಸಬಹುದು. ಅಷ್ಟು ಮಾತ್ರವಲ್ಲ, ಯುನಿಕೋಡ್ ವಿಧಾನದಿಂದ ಮಾಹಿತಿಯನ್ನು ಶೇಖರಿಸುವುದರಿಂದ ಪ್ರಪಂಚದ ಎಲ್ಲ ಭಾಷೆಗಳನ್ನು ಒಂದೇ ಕಡತದಲ್ಲಿ ಸಂಗ್ರಹಿಸಲು ಸಾಧ್ಯ. ಯುನಿಕೋಡ್ ಮಾಹಿತಿಯನ್ನು ಕಾರ್ಯಾಚರಣೆ ವ್ಯವಸ್ಥೆಗಳು (ಆಪರೇಟಿಂಗ್ ಸಿಸ್ಟಮ್) ಅರ್ಥಮಾಡಿಕೊಳ್ಳುವುದರಿಂದ ಕಡತಗಳಲ್ಲಿ ಸಂಗ್ರಹವಾದ ಮಾಹಿತಿಯನ್ನು ಹುಡುಕಬಹುದು.
ಯುನಿಕೋಡ್‌ನಲ್ಲಿ ಭಾರತೀಯ ಭಾಷೆಗಳ ಲಿಪಿಗಳಿಗೆ ಒಂದೊಂದಕ್ಕೂ ತನ್ನದೇ ಆದ ಪ್ರತ್ಯೇಕ ಸ್ಥಾನ ನೀಡಲಾಗಿದೆ. ಅವುಗಳೆಂದರೆ -ದೇವನಾಗರಿ, ಬಾಂಗ್ಲಾ, ಗುರುಮುಖಿ, ಗುಜರಾತಿ, ಒರಿಯಾ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ. ಇಲ್ಲಿ ಗಮನಿಸಬೇಕಾದ ಅಂಶ ಎಂದರೆ ಇವು ಲಿಪಿಗಳು. ಈ ಲಿಪಿಗಳಲ್ಲಿ ಕೆಲವನ್ನು ಒಂದಕ್ಕಿಂತ ಹೆಚ್ಚು ಭಾಷೆಗಳು ಬಳಸುತ್ತವೆ. ಉದಾಹರಣೆಗೆ ದೇವನಾಗರಿ ಲಿಪಿಯನ್ನು ಸಂಸ್ಕೃತ, ಹಿಂದಿ, ಮರಾಠಿ, ಕೊಂಕಣಿ, ನೇಪಾಳಿ ಭಾಷೆಗಳಿಗೆ ಯುನಿಕೋಡ್ನಲ್ಲಿ ಅಳವಡಿಸಲಾಗಿದೆ. ಯುನಿಕೋಡ್‌ನಲ್ಲಿರುವ ಇನ್ನೊಂದು ಸವಲತ್ತೆಂದರೆ ಅಕಾರಾದಿ ವಿಂಗಡಣೆಯ ಕೋಷ್ಟಕ. ಅದರ ಪ್ರಕಾರ ಪ್ರತಿ ಭಾಷೆಗೂ ತನ್ನದೇ ಆದ ಪ್ರತ್ಯೇಕ ವಿಂಗಡಣೆಯ ಕೋಷ್ಟಕ ನೀಡಲಾಗಿದೆ. ಹಿಂದಿ ಮತ್ತು ಮರಾಠಿ ಭಾಷೆಗಳು ಒಂದೇ ಲಿಪಿಯನ್ನು ಬಳಸುತ್ತಿದ್ದರೂ ಅವುಗಳ ವಿಂಗಡಣೆಯ ಕೋಷ್ಟಕಗಳು ಮಾತ್ರ ಬೇರೆ. ಹಾಗಯೇ ಮರಾಠಿ ಭಾಷೆಯಲ್ಲಿ ಹಿಂದಿಗಿಂತ ಒಂದರೆಡು ಅಕ್ಷರಗಳು ಹೆಚ್ಚಿಗೆ ಇವೆ. ಇದಕ್ಕಾಗಿ ದೇವನಾಗರಿ ಲಿಪಿಯಲ್ಲಿ ಆ ಲಿಪಿಯನ್ನು ಬಳಸುವ ಎಲ್ಲ ಭಾಷೆಗಳಿಗೆ ಬೇಕಾಗುವ ಅಕ್ಷರಗಳನ್ನು ಸೇರಿಸಲಾಗಿದೆ. ಅಂದರೆ ದೇವನಾಗರಿ ಲಿಪಿಯಲ್ಲಿರುವ ಎಲ್ಲ ಅಕ್ಷರಗಳು ಹಿಂದಿಗೆ ಬೇಡವಾಗಿದ್ದರೂ ಮರಾಠಿ ಮತ್ತು ಸಂಸ್ಕೃತ ಭಾಷೆಗಳಿಗೆ ಅವು ಬೇಕಾಗುತ್ತವೆ.
ನಾವು ತುಳು ಭಾಷೆಗೂ ಇದೇ ವಿಧಾನವನ್ನು ಬಳಸಬೇಕಾಗಿದೆ. ಅಂದರೆ ಕನ್ನಡ ಲಿಪಿಯಲ್ಲಿ ತುಳು ಭಾಷೆಗೆ ಬೇಕಾಗಿರುವ ಕೆಲವು ಅಕ್ಷರಗಳನ್ನು ಸೇರಿಸಬೇಕು. ಹಾಗೆಯೇ ತುಳುವಿನ ಅಕಾರಾದಿ ವಿಂಗಡಣೆಯ ಕೋಷ್ಟಕವನ್ನು ಯುನಿಕೋಡ್‌ಗೆ ಸೇರಿಸಬೇಕು. ತುಳು ಭಾಷೆಗೆ ತನ್ನದೇ ಆದ ಲಿಪಿ ಇತ್ತು. ಈಗ ಅದು ಬಳಕೆಯಲ್ಲಿಲ್ಲ. ಆದುದರಿಂದ ಅದನ್ನು ಮರೆತುಬಿಟ್ಟು ಕನ್ನಡ ಲಿಪಿಯಲ್ಲಿ ತುಳುವಿಗೆ ಅಗತ್ಯವಿರುವ ಹೆಚ್ಚಿಗೆ ಅಕ್ಷರಗಳನ್ನು ಸೇರಿಸುವುದೇ ಸೂಕ್ತ. ಯುನಿಕೋಡ್ ವಿಧಾನದಲ್ಲಿ ಶೇಖರಿಸಿದ ಮಾಹಿತಿಯನ್ನು ಪರದೆಯಲ್ಲಿ ಪ್ರದರ್ಶಿಸಲು ಮತ್ತು ಮುದ್ರಕದಲ್ಲಿ ಮುದ್ರಿಸಲು ಬಳಸುವುದು ಓಪನ್‌ಟೈಪ್ ಫಾಂಟ್‌ಗಳನ್ನು. ಇವುಗಳಲ್ಲಿ ಎಷ್ಟು ಬೇಕಾದರೂ ಅಕ್ಷರಭಾಗಗಳನ್ನು ಸೇರಿಸಿಕೊಳ್ಳಬಹುದು. ಅಂದರೆ ತುಳುವಿಗೆ ಬೇಕಾದ ಹೆಚ್ಚಿಗೆ ಅಕ್ಷರಭಾಗಗಳನ್ನು ಕನ್ನಡ ಲಿಪಿಯ ಓಪನ್‌ಟೈಪ್ ಫಾಂಟ್‌ಗೆ ಸೇರಿಸಿಕೊಂಡರೆ ಆಯಿತು.
ಈಗ ತುಳು ಭಾಷಿಗರು ಮಾಡಬೇಕಾಗಿರುವುದು -ಕನ್ನಡ ಭಾಷೆಯಲ್ಲಿಲ್ಲದ ಆದರೆ ತುಳುವಿನಲ್ಲಿರುವ ಅಕ್ಷರಗಳನ್ನು ಪಟ್ಟಿ ಮಾಡುವುದು, ಈ ಹೆಚ್ಚಿನ ಅಕ್ಷರಗಳು ಹೇಗಿರಬೇಕು ಎಂದು ತೀರ್ಮಾನಿಸುವುದು ಮತ್ತು ತುಳುವಿನ ವಿಂಗಡಣೆಯ ಕೋಷ್ಟಕ ತಯಾರಿಸುವುದು. ಇದರ ಬಗ್ಗೆ ಒಂದು ಕಡತ ತಯಾರಿಸಿ ಅದನ್ನು ಸಂಬಂಧಪಟ್ಟವರಿಗೆ ತಲುಪಿಸುವುದು. ತುಳು ಸಾಹಿತ್ಯ ಅಕಾಡೆಮಿ ಮತ್ತು ತುಳು ಭಾಷಾಸಕ್ತರು ಈ ಬಗ್ಗೆ ಕಾರ್ಯನಿರ್ವಹಿಸುತ್ತಾರೆ ಎಂದು ಆಶಿಸುತ್ತೇನೆ.
ನಾನು ಈ ಬಗ್ಗೆ ಈಗಾಗಲೇ ಕೈಗೊಂಡಿರುವ ಕೆಲವು ಕೆಲಸಗಳನ್ನು ಇಲ್ಲಿ ನಮೂದಿಸಿದರೆ ತಪ್ಪಾಗಲಾರದೇನೋ? ಯುನಿಕೋಡ್ ಬಗ್ಗೆ ಚರ್ಚಿಸಲು ಒಂದು ಇಮೈಲ್ ಚರ್ಚಾವೇದಿಕೆಯಿದೆ. ಆ ಮೈಲಿಂಗ್ ಲಿಸ್ಟಿನಲ್ಲಿ ನಾನು ತುಳು ನಿಘಂಟಿನ ಮೊದಲ ಆರು ಪುಟಗಳನ್ನು ಸ್ಕ್ಯಾನ್ ಮಾಡಿ ಹಾಕಿದ್ದೆ. ಅದರಲ್ಲಿ ತುಳುವಿನ ಅಕ್ಷರಗಳ ಪಟ್ಟಿ ಮತ್ತು ವಿಂಗಡಣೆಯ ಕೋಷ್ಟಕವಿದೆ. ಅದರ ಪ್ರಕಾರ ಯುನಿಕೋಡ್ ಕನ್ಸೋರ್ಶಿಯಂನ ಸದಸ್ಯರಾದ ಮೈಕೇಲ್ ಎವರ್ಸನ್ ಎಂಬುವರು ಈಗಾಗಲೇ ತುಳು ಯುನಿಕೋಡ್‌ನ ಕರಡು ತಯಾರಿಸಿ ಅಂತರಜಾಲದಲ್ಲಿ ಹಾಕಿದ್ದಾರೆ. ಯುನಿಕೋಡ್ ಕನ್ಸೋರ್ಶಿಯಂನವರು ನಮ್ಮ ಅಂತಿಮ ಕಡತಕ್ಕೆ ಕಾಯುತ್ತಿದ್ದಾರೆ.
ಗಣಕ, ಅಂತರಜಾಲ, ಮೊಬೈಲ್ ಫೋನು, ಎಟಿಎಂ -ಹೀಗೆ ಮಾಹಿತಿ ತಂತ್ರಜ್ಞಾನದ ಎಲ್ಲ ಅಂಗಗಳು ಇನ್ನು ಮುಂದೆ ಯುನಿಕೋಡ್ ವಿಧಾನದಲ್ಲೇ ಕೆಲಸ ಮಾಡಲಿವೆ. ಆಗ ತುಳು ಭಾಷೆಯೂ ಇವುಗಳಲ್ಲೆಲ್ಲ ಬಳಕೆಗೆ ಬರಬೇಕಾದರೆ ತುಳುವಿಗೆ ಯುನಿಕೋಡ್‌ನಲ್ಲಿ ಜಾಗ ಇರಲೇಬೇಕು. “ಅಯಿಕ್ಕೇ ಪಣ್ಪುನ, ತುಳುಕ್ಲಾ ಒಂತೆ ಜಾಗೆ ಕೊರ್ಲೆ” (ಅದಕ್ಕೇ ಹೇಳಿದ್ದು, ತುಳುವಿಗೂ ಸ್ವಲ್ಪ ಜಾಗೆ ಕೊಡಿ ಎಂದು).
(ಕೃಪೆ: ಉದಯವಾಣಿ, ೯-೯-೨೦೦೬)
ನೋಡಿ:
ತುಳು ನಿಘಂಟುವಿನ ಮೊದಲ ಮೂರು ಪುಟಗಳು –
ಪುಟ -೧ (ದೊಡ್ಡ ಕಡತ 1.2MB, ಚಿಕ್ಕ ಕಡತ 153KB)
ಪುಟ -೨ (ದೊಡ್ಡ ಕಡತ 1.7MB, ಚಿಕ್ಕ ಕಡತ 190KB)
ಪುಟ -೩ (ದೊಡ್ಡ ಕಡತ 1.2MB, ಚಿಕ್ಕ ಕಡತ 144KB)
June 29th, 2010 at 6:05 am
ನಾವು ’ಒಸಿ ಎಡೆ ಕೊಡಿ’ ಮೇಣ್ ’ವಸಿ ಎಡೆ ಕೊಡಿ’ ಅಂತಾ ಹೇಳೋದು.
ಒಸಿ(ಕನ್ನಡ) = ಒಂತೆ(ತುಳು).