ಕೊರಳ್‌ಗೆ ಬೆರಳ್

– ಡಾ. ಯು. ಬಿ. ಪವನಜ


ಈಗ ಯುಎಸ್‌ಬಿ ಡ್ರೈವ್‌ಗಳ ಕಾಲ ಬಂದಿದೆ. ಗಣಕದ ಮಾಹಿತಿಗಳಿಗೆ ಒಂದು ಥಂಬ್ ಡ್ರೈವ್, ಹಾಡು ಕೇಳಲೊಂದು ಎಂಪಿ-೩ ಪ್ಲೇಯರ್, ಫೋಟೋ ತೆಗೆಯಲೊಂದು ಯುಎಸ್‌ಬಿ ಕ್ಯಾಮರಾಗಳನ್ನು ಕುತ್ತಿಗೆಯಲ್ಲಿ ಜೋತಾಡಿಸಿ ಅಲೆದಾಡುವ ಆಧುನಿಕ ಅಂಗುಲಿಮಾಲರನ್ನು ಬೀದಿಗಳಲ್ಲಿ ನೋಡುವ ಕಾಲ ದೂರವಿಲ್ಲ.

 

ಅಮಿತಳಿಗೆ ಪತ್ರಿಕೆಯೊಂದರಲ್ಲಿ ಕೆಲಸ. ಆಕೆ ಹೊಸಯುಗದ ಹುಡುಗಿ. ತಂತ್ರಜ್ಞಾನವನ್ನು ಚೆನ್ನಾಗಿ ಬಳಕೆ ಮಾಡುತ್ತಾಳೆ. ಮನೆಯಲ್ಲಿ ಸ್ವಂತ ಗಣಕ ಮತ್ತು ಅಂತರಜಾಲ ಸಂಪರ್ಕಗಳನ್ನು ಹೊಂದಿದ್ದಾಳೆ. ಬೆಳಿಗ್ಗೆ ಮನೆಯಿಂದ ಹೊರಡುವ ಮೊದಲು ಪರ್ಸ್‌ನಿಂದ ಚಿಕ್ಕ ಸಾಧನವೊಂದನ್ನು ಹೊರತೆಗೆದು ಗಣಕಕ್ಕೆ ಜೋಡಿಸುತ್ತಾಳೆ. ಆ ಸಾಧನ ಒಂದು ಹೆಬ್ಬರಳಿನಷ್ಟು ಗಾತ್ರದ್ದಾಗಿದೆ. ಗಣಕದಿಂದ ಎಂಪಿ-೩ ರೂಪದಲ್ಲಿರುವ ತನಗೆ ತುಂಬ ಇಷ್ಟವಾದ ಕೆಲವು ಭಾವಗೀತೆಗಳನ್ನು ಆ ಸಾಧನಕ್ಕೆ ಪ್ರತಿಮಾಡುತ್ತಾಳೆ. ಆ ಸಾಧನವನ್ನು ಕುತ್ತಿಗೆಗೆ ನೇತಾಡಿಸಿ ಅದಕ್ಕೆ ಸಂಪರ್ಕ ಹೊಂದಿದ ಇಯರ್‌ಫೋನನ್ನು ಕಿವಿಯೊಳಕ್ಕೆ ತುರುಕಿಸಿ ತಲೆಗೆ ಹೆಲ್ಮೆಟ್ ಧರಿಸಿ ಸ್ಕೂಟರ್ ಹೊರಡಿಸುತ್ತಾಳೆ. ಆಕೆ ಹೊಸ ನಮೂನೆಯ ಹೆಬ್ಬರಳಿನ ಗಾತ್ರದ ಚಿಕ್ಕ ಮೊಬೈಲ್ ಫೋನನ್ನು ಕುತ್ತಿಗೆಯಲ್ಲಿ ನೇತಾಡಿಸಿಕೊಂಡು ಅದರ ಇಯರ್‌ಫೋನನ್ನು ಕಿವಿಯೊಳಗೆ ಇಟ್ಟುಕೊಂಡಿದ್ದಾಳೇನೋ ಎಂಬ ಭಾವನೆ ನೋಡುವವರ ಮನದಲ್ಲಿ ಬರಬಹುದು. ಆಕೆ ಭಾವಗೀತೆಗಳನ್ನು ಕೇಳುತ್ತ ಹೊಂಡಗಳಿಂದ ತುಂಬಿದ ಬೆಂಗಳೂರಿನ ರಸ್ತೆಗಳಲ್ಲಿ ಎಚ್ಚರಿಕೆಯಿಂದ ಸ್ಕೂಟರ್ ಚಲಾಯಿಸುತ್ತ ಬಡಾವಣೆಯೊಂದನ್ನು ತಲುಪುತ್ತಾಳೆ. ಅಲ್ಲಿರುವ ಖ್ಯಾತನಾಮರೊಬ್ಬರನ್ನು ಆಕೆ ತನ್ನ ಪತ್ರಿಕೆಗಾಗಿ ಸಂದರ್ಶಿಸಬೇಕಾಗಿದೆ. ಮನೆಯೊಳಗೆ ಪ್ರವೇಶಿಸಿ ಉಭಯಕುಶಲೋಪರಿ ಮುಗಿಸಿಯಾಯಿತು. ಈಗ ಆಕೆ ಅದೇ ಪುಟ್ಟ ಸಾಧನವನ್ನು ಕುತ್ತಿಗೆಯಿಂದ ತೆಗೆದು ಕೈಯಲ್ಲಿ ಹಿಡಿದುಕೊಂಡು ಸಂದರ್ಶನ ಪ್ರಾರಂಭಿಸುತ್ತಾಳೆ. ನೋಟ್ ಪುಸ್ತಕದಲ್ಲಿ ಏನನ್ನೂ ಬರೆದುಕೊಳ್ಳದೆ ಆಕೆ ಸಂದರ್ಶನ ಮುಗಿಸುತ್ತಾಳೆ. ಅಲ್ಲಿಂದ ಹೊರಟು ತನ್ನ ಪತ್ರಿಕೆಯ ಕಚೇರಿ ತಲುಪಿ ತನ್ನ ಗಣಕಕ್ಕೆ ಅದೇ ಸಾಧನವನ್ನು ಜೋಡಿಸುತ್ತಾಳೆ. ಅದರಲ್ಲಿ ಧ್ವನಿಮುದ್ರಿತವಾಗಿರುವ ಸಂದರ್ಶನವನ್ನು ಗಣಕದ ಸ್ಪೀಕರಿನಲ್ಲಿ ಕೇಳುತ್ತ ಸಂದರ್ಶನ ಲೇಖನವನ್ನು ಕೀಲಿಮಣೆಯನ್ನು ಕುಟ್ಟುವ ಮೂಲಕ ತಯಾರಿಸುತ್ತಾಳೆ.

ಇದೆಲ್ಲ ನಡೆಯುತ್ತಿರುವುದು ರಾಜಶೇಖರ ಭೂಸನೂರಮಠರ ವೈಜ್ಞಾನಿಕ ಕಾಬಂಬರಿಯಲ್ಲಲ್ಲ. ನಮ್ಮ ಬೆಂಗಳೂರಿನಲ್ಲಿ. ಅದೂ ವರ್ತಮಾನದಲ್ಲಿ. ಹಾಗೆಂದು ಹೇಳಿ ಅಂತಹ ಪತ್ರಿಕಾಕರ್ತೆಯನ್ನು ಹುಡುಕುತ್ತ ಬೆಂಗಳೂರಿನಲ್ಲಿ ಅಲೆದಾಡಬೇಡಿ ಮತ್ತೆ. ಅಂತಹ ಪತ್ರಿಕಾಕರ್ತೆ ಇರಲು ಸಾಧ್ಯ. ಆಕೆ ಬಳಸಿದ ಸಾಧನ ಬೆಂಗಳೂರಿನಲ್ಲಿ ದೊರೆಯುತ್ತದೆ. ಅದಕ್ಕಾಗಿ ವಿದೇಶಕ್ಕೆ ಹೋಗಬೇಕಾಗಿಲ್ಲ. ಅದೇನೋ ಸರಿ. ಆ ಸಾಧನ ಏನೆಂದು ವಿವರಿಸಲೇ ಇಲ್ಲವಲ್ಲ ಎನ್ನುತ್ತೀರಾ? ಬನ್ನಿ. ಇದೊಂದೇ ಅಲ್ಲ. ಅಂತಹ ಹಲವಾರು ಸಾಧನಗಳ ಪರಿಚಯ ಮಾಡಿಕೊಳ್ಳೋಣ.

ಗಣಕಕ್ಕೆ ಜೋಡಿಸುವ ಇಂತಹ ಚಿಕ್ಕ ಸಾಧನಗಳನ್ನು ಕಂಪ್ಯೂಟರ್ ಪರಿಭಾಷೆಯಲ್ಲಿ ಥಂಬ್ ಡ್ರೈವ್ (thumb drive) ಎಂದು ಕರೆಯುತ್ತಾರೆ. ಬಹುಶಃ ಹೆಬ್ಬರಳಿನ ಗಾತ್ರದಷ್ಟಿರುವುದರಿಂದ ಈ ಹೆಸರನ್ನು ಇವುಗಳನ್ನು ತಯಾರಿಸುವ ಕಂಪೆನಿಯವರು ಬಳಸಿರಲೂ ಬಹುದು. ಯುಎಸ್‌ಬಿ ಡ್ರೈವ್ ಎನ್ನುವುದು ಸರಿಯಾದ ವೈಜ್ಞಾನಿಕ ಪದ. ಕೆಲವರು ಇವುಗಳನ್ನು ಪೆನ್ ಡ್ರೈವ್ ಎಂದೂ ಕರೆಯುತ್ತಾರೆ. ಈ ಥಂಬ್ ಡ್ರೈವ್‌ಗಳಿಗೆ ಕುತ್ತಿಗೆಗೆ ನೇತಾಡಿಸಲು ಮೊಬೈಲ್ ಫೋನುಗಳಿಗೆ ಇರುವಂತಹ ಹಗ್ಗವೂ ಇರುತ್ತದೆ. ಮಾಹಿತಿ ತಂತ್ರಜ್ಞಾನ ಕಂಪೆನಿಗಳಲ್ಲಿ ಉದ್ಯೋಗಿಗಳು ಇಂತಹ ಥಂಬ್ ಡ್ರೈವ್‌ಗಳನ್ನು ಕತ್ತಿಗೆಗೆ ನೇತಾಡಿಸಿಕೊಂಡು ಓಡಾಡುತ್ತಿರುವ ದೃಶ್ಯ ಕಂಡುಬರುವುದು ಬಲು ಸಾಮಾನ್ಯ.

ಗಣಕಗಳಲ್ಲಿ ಯುಎಸ್‌ಬಿ ಹೆಸರಿನ ಪುಟ್ಟ ಕಿಂಡಿ ಇರುತ್ತದೆ. ಕೊರಳಲ್ಲಿ ನೇತಾಡುವ ಬೆರಳುಗಳಂತಹ ಡ್ರೈವ್‌ಗಳು ಬಳಸುವುದು ಈ ಯುಎಸ್‌ಬಿ ಕಿಂಡಿಗಳನ್ನು (USB port). ಈ ಕಿಂಡಿಯಲ್ಲಿ ಥಂಬ್ ಡ್ರೈವ್‌ಗಳನ್ನು ಜೋಡಿಸಿ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತದೆ. ಥಂಬ್ ಡ್ರೈವ್‌ಗಳಲ್ಲಿ ಯುಎಸ್‌ಬಿ ಕಿಂಡಿಗೆ ಸರಿಹೋಗುವ ಯುಎಸ್‌ಬಿ ಕನೆಕ್ಟರ್‌ಗಳಿರುತ್ತವೆ. ಗಣಕಗಳಲ್ಲಿ ಸಾಮಾನ್ಯವಾಗಿ ಹಿಂದುಗಡೆ (ಈಗೀಗ ಮುಂದುಗಡೆ ಜಾಸ್ತಿ) ಕಾಣಸಿಗುವ ಸುಮಾರು ಒಂದೂಕಾಲು ಸೆಂಟಿಮೀಟರು ಅಗಲ, ಅರ್ಧ ಸೆಂಟಿಮೀಟರು ಎತ್ತರದ ಕಿಂಡಿಯೇ ಯುಎಸ್‌ಬಿ ಕಿಂಡಿ (ಚಿತ್ರ ನೋಡಿ). ಯುಎಸ್‌ಬಿ ಮೂಲಕ ಗಣಕಕ್ಕೆ ಜೋಡಿಸಲ್ಪಡುವ ಉಪಕರಣಗಳ ಪಟ್ಟಿ ಬಲುದೊಡ್ಡದಿದೆ. ಅವುಗಳಲ್ಲಿ ಸರಳವಾದುದು ಮತ್ತು ಅತಿಯಾಗಿ ಬಳಕೆಯಲ್ಲಿರುವುದು ಈ ಥಂಬ್ ಡ್ರೈವ್‌ಗಳು.

ಈ ಥಂಬ್ ಡ್ರೈವ್‌ಗಳ ಮಾಹಿತಿ ಸಂಗ್ರಹಣಾ ಶಕ್ತಿ ಅಗಾಧ. ೧೬ ಮೆಗಾಬೈಟ್‌ನಿಂದ ಹಿಡಿದು ಕೆಲವು ಗಿಗಾಬೈಟ್‌ಗಳ ತನಕ ಇವೆ. ಒಂದು ಅಕ್ಷರವನ್ನು ಗಣಕದಲ್ಲಿ ಸಂಗ್ರಹಿಸಡಲು ಒಂದು ಬೈಟ್ ಜಾಗ ಬೇಕು. ೧೦೨೪ ಬೈಟ್‌ಗೆ ಒಂದು ಮೆಗಾಬೈಟ್, ೧೦೨೪ ಮೆಗಾಬೈಟ್‌ಗೆ ಒಂದು ಗಿಗಾಬೈಟ್. ಒಂದು ಪುಟದಲ್ಲಿ ಸುಮಾರು ೫೦ ಸಾಲು ಮತ್ತು ಒಂದು ಸಾಲಿನಲ್ಲಿ ಸುಮಾರು ೫೦ ಅಕ್ಷರಗಳಿವೆ ಎಂದು ನಾವು ಲೆಕ್ಕ ಹಾಕಿದರೆ ೨೫೬ ಮೆಗಾಬೈಟ್ ಮಾಹಿತಿ ಸಂಗ್ರಹಣಾ ಸಾಮರ್ಥ್ಯದ ಥಂಬ್ ಡ್ರೈವ್‌ನಲ್ಲಿ ಸುಮಾರು ಒಂದು ಲಕ್ಷ ಎಂಟು ಸಾವಿರ ಪುಟಗಳಷ್ಟು ಮಾಹಿತಿಯನ್ನು ಸಂಗ್ರಹಿಸಿಡಬಹುದು. ಈ ಥಂಬ್ ಡ್ರೈವ್‌ಗಳಲ್ಲಿ ಬರಿ ಪಠ್ಯ ಮಾತ್ರವಲ್ಲ, ಗಣಕದಲ್ಲಿ ಸಂಗ್ರಹಿಸಿಡಬಹುದಾದ ಯಾವ ಮಾಹಿತಿಯನ್ನು ಬೇಕಾದರೂ ಶೇಖರಿಸಿಡಬಹುದು. ಅವು, ಪಠ್ಯ, ಚಿತ್ರ, ಹಾಡು, ಚಲನಚಿತ್ರ, ಪ್ರೋಗ್ರಾಂ -ಯಾವುದೂ ಆಗಿರಬಹುದು. ಅಂದರೆ ಈ ಥಂಬ್ ಡ್ರೈವ್‌ಗಳನ್ನು ಗಣಕದ ಮಾಹಿತಿ ಸಂಗ್ರಹಣೆಯ ಬ್ಯಾಕ್‌ಅಪ್ ಆಗಿಯೂ ಬಳಸಬಹುದು. ಮನೆಯ ಗಣಕದಿಂದ ಕಚೇರಿಯ ಗಣಕಕ್ಕೆ, ನಿಮ್ಮಿಂದ ನಿಮ್ಮ ಸ್ನೇಹಿತನಿಗೆ, ಹೀಗೆ ಒಂದು ಗಣಕದಿಂದ ಇನ್ನೊಂದು ಗಣಕಕ್ಕೆ ಕಡತಗಳ (files) ಹಂಚುವಿಕೆಗೆ ಈ ಥಂಬ್ ಡ್ರೈವ್‌ಗಳ ಬಳಕೆ ಆಗುತ್ತಿದೆ. ಅಷ್ಟೇಕೆ? ಈ ಲೇಖನಕ್ಕೇ ಬರೋಣ. ಕೇವಲ ಲೇಖನ ಮಾತ್ರವೇ ಆದರೆ ಇ-ಮೈಲ್ ಮೂಲಕ ಕಳುಹಿಸಬಹದು. ಪೂರಕ ಚಿತ್ರಗಳು ತುಂಬ ಇದ್ದಲ್ಲಿ ಇ-ಮೈಲ್ ಮೂಲಕ ಕಳುಹಿಸಲು ಸಾಧ್ಯವಿಲ್ಲ. ನಾನು ಈ ಲೇಖನವನ್ನು ನನ್ನ ಮನೆಯ ಗಣಕದಲ್ಲಿ ತಯಾರಿಸಿ ಲೇಖನ ಮತ್ತು ಅದಕ್ಕೆ ಪೂರಕವಾದ ಚಿತ್ರಗಳನ್ನು ಒಂದು ಥಂಬ್ ಡ್ರೈವ್‌ನಲ್ಲಿ ಹಾಕಿ ಪತ್ರಿಕೆಯವರ ಕಚೇರಿಗೆ ಹೋಗಿ ಅಲ್ಲಿ ಅವರ ಗಣಕಕ್ಕೆ ವರ್ಗಾಯಿಸಿರುವುದು.

ಲೇಖನದ ಪ್ರಾರಂಭದಲ್ಲಿ ವಿವರಿಸಿರುವುದು ಯುಎಸ್‌ಬಿ ಎಂಪಿ-೩ ಪ್ಲೇಯರ್. ಗಣಕಗಳಲ್ಲಿ ಹಾಡುಗಳ ಕಡತಗಳ ಗಾತ್ರವನ್ನು ಕುಗ್ಗಿಸಿ ಶೇಖರಿಸಿಡುವ ಒಂದು ವಿಧಾನಕ್ಕೆ ಎಂಪಿ-೩ ಎಂದು ಕರೆಯುತ್ತಾರೆ. ಒಂದು ಭಾವಗೀತೆಯ ಎಂಪಿ-೩ ಹಾಡಿನ ಕಡತದ ಗಾತ್ರ ಸುಮಾರು ೫ ಮೆಗಾಬೈಟ್‌ಗಳಷ್ಟಿರುತ್ತದೆ. ೨೫೬ ಮೆಗಾಬೈಟಿನ ಒಂದು ಎಂಪಿ-೩ ಪ್ಲೇಯರಿನಲ್ಲಿ ಸುಮಾರು ೫೦ ಹಾಡುಗಳನ್ನು ಸಂಗ್ರಹಿಸಿಬಹುದು. ಅಂದರೆ ಸುಮಾರು ೬ ಗಂಟೆ ಕಾಲ ತಡೆಯಿಲ್ಲದೆ ಹಾಡು ಕೇಳಬಹುದು. ಬೆಂಗಳೂರಿನಿಂದ ಹೊರಡುವಾಗ ಹಾಡು ಕೇಳಲು ಪ್ರಾರಂಭಿಸಿದರೆ ಉಪ್ಪಿನಂಗಡಿ ತಲುಪುವ ತನಕವೂ ಹಾಡು ಕೇಳುತ್ತಿರಬಹುದು. ಈ ಸಾಧನದ ಗಾತ್ರ ಕೇವಲ ಒಂದು ಹೆಬ್ಬರಳಿನಷ್ಟು ಎಂಬುದನ್ನು ನೆನಪಿಟ್ಟುಕೊಳ್ಳಿ. ಎಲ್ಲ ಥಂಬ್ ಡ್ರೈವ್‌ಗಳಲ್ಲೂ ಹಾಡು ಕೇಳಬಹುದು ಎಂದುಕೊಳ್ಳಬೇಡಿ. ಕೇವಲ ಮಾಹಿತಿ ಸಂಗ್ರಹಣೆಗಷ್ಟೇ ಬಳಕೆಯಾಗುವ ಸಾಧನಗಳನ್ನೇ ಥಂಬ್ ಡ್ರೈವ್ ಎನ್ನುವುದು.

ಒಂದು ಗಣಕದಿಂದ ಇನ್ನೊಂದು ಗಣಕಕ್ಕೆ ಮಾಹಿತಿ ವಿನಿಮಯಕ್ಕೆ ಈ ಯುಎಸ್‌ಬಿ ಥಂಬ್ ಡ್ರೈವ್‌ಗಳನ್ನು ಬಳಸುತ್ತಾರೆ. ಎಲ್ಲ ಗಣಕಗಳಲ್ಲೂ ಈ ಯುಎಸ್‌ಬಿ ಕಿಂಡಿ ಇವೆಯೇ? ಎಲ್ಲ ರೀತಿಯ ಗಣಕಗಳಲ್ಲೂ ಈ ಥಂಬ್‌ಡ್ರೈವ್‌ಗಳು ತಮ್ಮಲ್ಲಿರುವ ಮಾಹಿತಿಯನ್ನು ತೆರೆದಿಡಲು ಒಪ್ಪುತ್ತವೆಯೇ? -ಈ ಪ್ರಶ್ನೆಗಳು ನಿಮ್ಮಲ್ಲಿ ಉದ್ಭವಿಸಿದ್ದರೆ ಅದು ಸಹಜ. ವಿಂಡೋಸ್ ಎಕ್ಸ್‌ಪಿ ಕಾರ್ಯಾಚರಣ ವ್ಯವಸ್ಥೆಯನ್ನು (operating system) ಬಳಸುವ ಗಣಕವಾದರೆ ಯಾವುದೇ ಸಮಸ್ಯೆಯಿಲ್ಲದೆ ಇವುಗಳನ್ನು ಬಳಸಬಹುದು. ವಿಂಡೋಸ್ ೯೮ನ್ನು ಬಳಸುತ್ತೀರಾದರೆ ನಿಮ್ಮ ಥಂಬ್ ಡ್ರೈವ್‌ನ ಜೊತೆ ಬರುವ ಡ್ರೈವರ್ ತಂತ್ರಾಂಶವನ್ನು (software) ಬಳಸಬೇಕಾಗುತ್ತದೆ. ಕೆಲವೊಮ್ಮೆ ಹೀಗೂ ಆಗುವುದುಂಟು. ನಿಮ್ಮ ಮನೆಯಲ್ಲಿ ವಿಂಡೋಸ್ ಎಕ್ಸ್‌ಪಿ ಇದೆ. ಅದರಿಂದ ಥಂಬ್ ಡ್ರೈವ್‌ಗೆ ಮಾಹಿತಿಯನ್ನು ಪ್ರತಿಮಾಡಿ ನಿಮ್ಮ ಗೆಳೆಯನ ಮನೆಗೆ ತೆಗೆದುಕೊಂಡು ಹೋದಾಗ ಆತನ ಗಣಕದಲ್ಲಿ ಆ ಡ್ರೈವ್ ಕೆಲಸ ಮಾಡಿಲ್ಲವೆಂದಾದಲ್ಲಿ ಆತನದು ವಿಂಡೋಸ್ ೯೮ ಆಗಿರುವ ಸಾಧ್ಯತೆಯೇ ಹೆಚ್ಚು. ಆಗ ನೀವು ನಿಮ್ಮ ಥಂಬ್ ಡ್ರೈವ್ ಜೊತೆ ಬಂದಿರುವ ಡ್ರೈವರ್ ತಂತ್ರಾಂಶವನ್ನು ಆತನ ಗಣಕದಲ್ಲಿ ಅನುಸ್ಥಾಪಿಸಬೇಕಾಗುತ್ತದೆ (installing).

ಈ ಯುಎಸ್‌ಬಿ ಮತ್ತು ಅವುಗಳ ಮೂಲಕ ಗಣಕಕ್ಕೆ ಜೋಡಿಸಲ್ಪಡುವ ಸಾಧನಗಳ ಪ್ರಪಂಚದ ಚಿತ್ರಣ ಮಾಡಿಕೊಳ್ಳೋಣ. ಅಂತರಜಾಲದಲ್ಲಿ ಯುಎಸ್‌ಬಿ ಸಾಧನಗಳಿಗೆಂದೇ ಮೀಸಲಾದ ತಾಣಗಳು ಹಲವಾರಿವೆ. ಅಲ್ಲಿಗೆ ಭೇಟಿ ನೀಡಿದರೆ ಚಿತ್ರವಿಚಿತ್ರ ಸಾಧನಗಳ ಸಂತೆಯನ್ನೇ ನೋಡಬಹುದು. ಮಾಮೂಲಿಯಾದ ಮೌಸ್, ಕೀಲಿಮಣೆ, ಮುದ್ರಕಗಳಿಂದ ಹಿಡಿದು ಎಂಪಿ-೩ ಪ್ಲೇಯರ್ ಒಳಗೊಂಡ ತಂಪು ಕನ್ನಡಕಗಳ ತನಕ ಜೇಮ್ಸ್ ಬಾಂಡಿನ ಸಿನಿಮಾದಲ್ಲಿ ಬಳಸುವಂತಹ ಸಾಧನಗಳನ್ನು ಅಲ್ಲಿ ಕಾಣಬಹುದು. ಥಂಬ್ ಡ್ರೈವ್‌ಗಳನ್ನು ಪೆನ್ ಡ್ರೈವ್ ಎಂದೂ ಕರೆಯುತ್ತಾರೆ ಎಂದು ಹೇಳಿದ್ದು ನೆನಪಿದೆ ತಾನೆ? ಈಗ ನಿಜವಾದ ಪೆನ್ನಿನ ಒಳಗೂ ಈ ಯುಎಸ್‌ಬಿ ಡ್ರೈವ್ ದೊರೆಯುತ್ತದೆ. ಕೇವಲ ಪೆನ್ ಡ್ರೈವ್ ಮಾತ್ರವಲ್ಲ. ಎಂಪಿ-೩ ಪ್ಲೇಯರ್ ಕೂಡ ಇರುವ ಪೆನ್ನುಗಳು ಇವೆ. ರಾತ್ರಿ ಹೊತ್ತು ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಿರುವಾಗ ವಿದ್ಯುತ್ ಸರಬರಾಜು ನಿಂತುಹೋದರೆ ಏನು ಮಾಡುವುದು? ಲ್ಯಾಪ್‌ಟಾಪ್ ಏನೋ ಎರಡು ಮೂರು ಗಂಟೆಗಳ ಕಾಲ ಬ್ಯಾಟರಿಯಲ್ಲಿ ಕೆಲಸ ಮಾಡುತ್ತದೆ. ಆದರೆ ಕೀಲಿಮಣೆಯನ್ನು ಸರಿಯಾಗಿ ನೋಡುವುದು ಹೇಗೆ? ಇದಕ್ಕೆ ಬಂದಿದೆ ಪರಿಹಾರ ರೂಪದಲ್ಲಿ ಯುಎಸ್‌ಬಿ ಲ್ಯಾಪ್‌ಟಾಪ್ ಲ್ಯಾಂಪ್. ಇದನ್ನು ಲ್ಯಾಪ್‌ಟಾಪ್‌ನ ಯುಎಸ್‌ಬಿ ಕಿಂಡಿಗೆ ಸಂಪರ್ಕಿಸಿ ಕತ್ತಲಲ್ಲೂ ಕೀಲಿಮಣೆ ಕುಟ್ಟಬಹುದು. ಕೈಬರಹದಲ್ಲಿ ಬರೆದುದನ್ನೇ ಗಣಕಕ್ಕೆ ವರ್ಗಾಯಿಸಲು ವಿಶೇಷ ಪೆನ್ ಇದೆ. ಕೇವಲ ಮಾಹಿತಿ ಸಂಗ್ರಹಣೆಗೆಂದೇ ಇರುವ ಡ್ರೈವ್‌ಗಳೂ ಸಿಗಡಿ ಮೀನು, ಬಾರ್ಬಿ ಬೊಂಬೆ, ಕೀಚೈನ್, ಬಾತುಕೋಳಿ, ಕೈಗೆ ಕಟ್ಟುವ ಪಟ್ಟಿ, ಕೈಗಡಿಯಾರ, ಹೀಗೆ ಹಲವು ರೂಪಗಳಲ್ಲಿ ದೊರೆಯುತ್ತಿವೆ. ಗಣಕದಲ್ಲಿ ಕೆಲಸ ಮಾಡುತ್ತಿದ್ದಂತೆ ಪಕ್ಕದಲ್ಲಿ ಕಪ್‌ನಲ್ಲಿರುವ ಕಾಫಿ ಮರೆತೇ ಹೋಯಿತೆ? ಅದು ತಣ್ಣಗಾಯಿತೆಂಬ ಚಿಂತೆಯೇ? ಈ ಚಿಂತೆಯಲ್ಲಿ ಬಿಸಿಯಾದ ನಿಮ್ಮ ತಲೆಯನ್ನು ತಣಿಸಲು ಅಂದರೆ ನಿಮ್ಮ ಕಾಫಿಯ ಲೋಟವನ್ನು ಬಿಸಿ ಮಾಡಲು ಯುಎಸ್‌ಬಿ ಕಿಂಡಿಯ ಮೂಲಕ ಗಣಕದಿಂದ ವಿದ್ಯುತ್ ಪಡೆದು ಲೋಟ ಬಿಸಿ ಮಾಡುವ ಕೋಸ್ಟರ್ ಕೊಳ್ಳಿರಿ. ಗಣಕದಲ್ಲಿ ಕೆಲಸ ಮಾಡುತ್ತ ಧೂಮಾಪಾನ ಮಾಡುತ್ತೀರೇನು? ನಿಮ್ಮ ಸಹೋದ್ಯೋಗಿಯು ನನಗೆ ಸೆಕೆಂಡ್ ಹ್ಯಾಂಡ್ ಹೊಗೆ ಬೇಕಾಗಿಲ್ಲೆಂದು ಎಂದು ದೂರುತ್ತಿದ್ದಾನೆಯೇ? ಚಿಂತಿಸಬೇಡಿ. ಧೂಮಪಾನಿಗಳಿಗಾಗಿ ಯುಎಸ್‌ಬಿ ಆಶ್ ಟ್ರೇ ಬಂದಿದೆ. ಅದರಲ್ಲಿ ಉರಿಯುವ ಸಿಗರೇಟು ಇಟ್ಟರೆ ಅದು ಹೊಗೆಯನ್ನು ಸ್ವಾಹಾ ಮಾಡುತ್ತದೆ. ನಿಮ್ಮಲ್ಲಿ ಓಬೀರಾಯನ ಕಾಲದ ಗ್ರಾಮಾಫೋನ್ ರೆಕಾರ್ಡ್ ಇದ್ದಲ್ಲಿ ನಿಮಗಾಗಿ ಯುಎಸ್‌ಬಿ ರೆಕಾರ್ಡ್ ಪ್ಲೇಯರ್ ಬಂದಿದೆ. ಅದನ್ನು ಗಣಕಕ್ಕೆ ಯುಎಸ್‌ಬಿ ಕಿಂಡಿ ಮೂಲಕ ಜೋಡಿಸಿ ನಿಮ್ಮಲ್ಲಿರುವ ಚೌಡಯ್ಯನವರ ಪಿಟೀಲಿನ ರೆಕಾರ್ಡನ್ನು ನುಡಿಸಿ. ಈ ಪ್ಲೇಯರ್ ಜೊತೆ ಬರುವ ತಂತ್ರಾಂಶವು ಆ ಹಾಡನ್ನು ನಿಮಗೆ ಎಂಪಿ-೩ ರೂಪಕ್ಕೆ ಪರಿವರ್ತಿಸಿ ಕೊಡುತ್ತದೆ. ಯುಎಸ್‌ಬಿ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಚಿತ್ರವಿಚಿತ್ರ ಸಾಧನಗಳಿಗಾಗಿ www.everythingusb.com ಮತ್ತು www.computerkitchen.com ತಾಣಗಳನ್ನು ವೀಕ್ಷಿಸಬಹುದು.

ಇತ್ತೀಚೆಗೆ ಒಂದು ರಾಕ್ ತಂಡದವರು ಹಾಡುಗಳನ್ನು ಯುಎಸ್‌ಬಿ ಡ್ರೈವ್‌ಗಳಲ್ಲಿ ಹಾಕಿ ಆ ರೂಪದಲ್ಲಿ ಮಾತ್ರ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ. ಒಂದಾನೊಂದು ಕಾಲದಲ್ಲಿ ಎಲ್ಲರೂ ಫ್ಲಾಪಿ ಬಳಸುತ್ತಿದ್ದರು. ನಂತರ ಸಿ.ಡಿ.ಗಳ ಕಾಲ ಬಂತು. ಈಗ ಯುಎಸ್‌ಬಿ ಡ್ರೈವ್‌ಗಳ ಕಾಲ ಬರುತ್ತಿದೆ. ಗಣಕದ ಮಾಹಿತಿಗಳಿಗೆ ಒಂದು ಥಂಬ್ ಡ್ರೈವ್, ಹಾಡು ಕೇಳಲೊಂದು ಎಂಪಿ-೩ ಪ್ಲೇಯರ್, ಫೋಟೋ ತೆಗೆಯಲೊಂದು ಯುಎಸ್‌ಬಿ ಕ್ಯಾಮರಾಗಳನ್ನು ಕುತ್ತಿಗೆಯಲ್ಲಿ ಜೋತಾಡಿಸಿ ಅಲೆದಾಡುವ ಆಧುನಿಕ ಅಂಗುಲಿಮಾಲರನ್ನು ಬೀದಿಗಳಲ್ಲಿ ನೋಡುವ ಕಾಲ ದೂರವಿಲ್ಲ.

ಯುಎಸ್‌ಬಿ ಬಗ್ಗೆ ಹೆಚ್ಚಿನ ಮಾಹಿತಿಗಳಿಗೆ ಮಕ್ತವಿಶ್ವಕೋಶವನ್ನು ನೋಡಿ.

(ಕೃಪೆ: ಉಷಾಕಿರಣ)

Leave a Reply