ಕರ್ನಾಟಕ ಜನಪದ ಕಲೆಗಳು – ಭಾಗ ೩

ಸಂ: ಗೊ. ರು. ಚನ್ನಬಸಪ್ಪ

ವೀರಗಾಸೆ:

‘ವೀರಗಾಸೆ’ ಕುಣಿತದ ಹಿನ್ನಲೆ ಬಗ್ಗೆ ಪ್ರಚಲಿತವಿರುವ ಒಂದು ಪೌರಾಣಿಕ ಪ್ರಸಂಗ ಹೀಗಿದೆ: “ಹಿಂದೆ ದಕ್ಷಬ್ರಹ್ಮನಿಗೂ ಅವನ ಅಳಿಯನಾದ ಈಶ್ವರನಿಗೂ ವೈರತ್ವ ಬಂದು ದಕ್ಷಬ್ರಹ್ಮನು ತಾನು ಮಾಡುವ ಯಾಗಕ್ಕೆ ಈಶ್ವರನನ್ನು ಬಿಟ್ಟು ಉಳಿದ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ಯಜ್ಞದಲ್ಲಿ ಈಶ್ವರನಿಗೆ ನ್ಯಾಯವಾಗಿ ಸಲ್ಲಬೇಕಾದ ಆವಿರ್ಭಾಗವನ್ನು ಕೊಡದೆ ತಿರಸ್ಕರಿಸುತ್ತಾನೆ. ಈಶ್ವರನು ಬೇಡವೆಂದರೂ ತಂದೆ ಮಾಡುವ ಯಾಗದಲ್ಲಿ ಭಾಗವಹಿಸಲು ಪಾರ್ವತಿ ಬರುತ್ತಾಳೆ. ದಕ್ಷಬ್ರಹ್ಮ ಅಳಿಯನ ಮೇಲಿನ ಕೋಪದಿಂದ, ಮಗಳೆಂಬ ಮಮತೆಯನ್ನೂ ತೊರೆದು, ಕಂಡೂ ಕಾಣದಂತೆ ತಿರಸ್ಕಾರವಾಗಿ ಕಾಣುತ್ತಾನೆ. ಅವಳೆದುರಿಗೆ ಈಶ್ವರನನ್ನು ನಿಂದಿಸುತ್ತಾನೆ. ಇದನ್ನು ಕೇಳಿದ ಪಾರ್ವತಿ ಸಹಿಸಲಾಗದೆ, ಪತಿನಿಂದೆಯನ್ನು ಹೊತ್ತು ಕೈಲಾಸಕ್ಕೆ ಹಿಂದಿರುಗಲಾಗದೆ “ಅಗ್ನಿಕೊಂಡ ಹಾಳಾಗಿ ಹೋಗಲಿ, ನಿನ್ನ ಹೆಣ್ಣು ಮಕ್ಕಳು ಮುಂಡೆಯರಾಗಲಿ, ಆಗಸ ತೂಕದ ಚಿನ್ನವಿಲ್ಲದಂತಾಗಲಿ, ಭೂಮಿ ತೂಕದ ಬೆಳ್ಳಿಯಿಲ್ಲದಂತಾಗಲಿ” ಎಂದು ತಂದೆಗೆ ಶಾಪವನ್ನು ಕೊಟ್ಟು ಅಗ್ನಿಕುಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಆಗ ಇದೆಲ್ಲವನ್ನೂ ಏಕದೃಷ್ಟಿಯಿಂದ ಗಮನಿಸಿದ ಈಶ್ವರನು ಉಗ್ರವಾಗಿ ತಾಂಡವ ನೃತ್ಯವನ್ನು ಮಾಡುವಾಗ ಹಣೆಯ ಮೇಲೆ ಬಂದ ಬೆವರಿನ ಹನಿಗಳನ್ನು ಸೆಳೆದು ತೆಗೆದು ನೆಲಕ್ಕೆ ಅಪ್ಪಳಿಸುತ್ತಾನೆ. ಆಗ ನೂರೊಂದು ಆಯುಧಗಳನ್ನು ಧರಿಸಿದಂತಹ ವೀರಭದ್ರನ ಜನನವಾಗುತ್ತದೆ. ಆಗ ಸಪ್ತ ಸಮುದ್ರಗಳು ಬತ್ತಿಹೋದವು. ಹುಟ್ಟಿದ ಮರುಕ್ಷಣದಲ್ಲಿಯೇ ವೀರಭದ್ರನು ಲೋಕವನ್ನೇ ಬಿಲ್ಲು ಮಾಡಿಕೊಂಡು, ಭೂಮಿಯನ್ನೇ ಬಾಣವನ್ನಾಗಿ ಮಾಡಿಕೊಂಡು, ‘ತಂದೆಯೇ ನಮಗೆ ವೈರಿ ಯಾರು?’ ಎಂದು ಕೇಳುತ್ತಾನೆ. ಅದಕ್ಕೆ ಶಿವನು ದಕ್ಷಬ್ರಹ್ಮನೆಂದು ಹೇಳಿ “ಅವನದು ಮುನ್ನೂರ ಅರವತ್ತು ಗಾವುದ ಪಟ್ಟಣ, ಅದಕ್ಕೆ ಮುನ್ನೂರ ಅರವತ್ತು ಬಾಗಿಲು, ಒಂದೊಂದು ಬಾಗಿಲಿಗೂ ಒಬ್ಬೊಬ್ಬ ರಾಕ್ಷಸರು ಕಾವಲಿರುತ್ತಾರೆ. ಆ ರಾಕ್ಷಸರ ಒಂದೊಂದು ತೊಟ್ಟು ರಕ್ತ ಬಿದ್ದರೆ ಒಂದು ಕೋಟಿ ರಾಕ್ಷಸರು ಜನಿಸುತ್ತಾರೆ” ಎಂದು ಹೇಳಿ ಅವನ ಹಿಂದೆಯೇ ಜನಿಸಿದ ಚೌಡೇಶ್ವರಿಯನ್ನು ಸಹಾಯಕ್ಕಾಗಿ ಕಳುಹಿಸಿ ಕೊಡುತ್ತಾನೆ.

ವೀರಭದ್ರನು ರಾಕ್ಷಸರನ್ನು ಸಂಹರಿಸಿದ ನಂತರ ದಕ್ಷಬ್ರಹ್ಮನ ಯಾಗಶಾಲೆಗೆ ಹೋಗಿ ಅವನ ತಲೆಯನ್ನು ಚಂಡಾಡುತ್ತಾನೆ. ತಲೆ ಅಗ್ನಿಕುಂಡಕ್ಕೆ ಬಿದ್ದು ಸುಟ್ಟು ಕರಿಕಾಗುತ್ತದೆ. ಇದನ್ನು ಕಂಡ ದಕ್ಷಬ್ರಹ್ಮನ ಮಡದಿಯು ವೀರಭದ್ರನಿಗೆ ಆರತಿ ಬೆಳಗಿ ಪತಿಭಿಕ್ಷೆಯನ್ನು ಬೇಡುತ್ತಾಳೆ. ಶಿವನು ಯುದ್ಧಕ್ಕೆ ಕಳುಹಿಸುವಾಗ `ಶರಣು ಹೊಕ್ಕವರನ್ನು ಕಾಯಿ’ ಎಂದು ಹೇಳಿದ್ದನ್ನು ನೆನದುಕೊಂಡು, ಅವನಿಗೆ ಪ್ರಾಣದಾನ ಮಾಡಲು ರುಂಡವಿಲ್ಲದಿರುವುದನ್ನು ಗಮನಿಸಿ, `ಉತ್ತರ ದಿಕ್ಕಿಗೆ ಮುಖ ಮಾಡಿ ಮಲಗಿರುವ ಯಾವುದಾದರೂ ಪ್ರಾಣಿಯ ತಲೆಯನ್ನು ಕತ್ತರಿಸಿ ತನ್ನಿ’ ಎಂದು ಹೇಳಿ ಕಳುಹಿಸುತ್ತಾನೆ. ದಾರಿಯಲ್ಲಿ ಉತ್ತರ ದಿಕ್ಕಿಗೆ ತಲೆ ಹಾಕಿ ಒಂದು ಟಗರು ಮಲಗಿರುತ್ತದೆ. ಅದರ ರುಂಡವನ್ನೇ ಕತ್ತರಿಸಿ ತರುತ್ತಾರೆ. ಅದನ್ನೇ ದಕ್ಷನ ಮುಂಡಕ್ಕೆ ಜೋಡಿಸಿ ಪ್ರಾಣದಾನ ಮಾಡುತ್ತಾನೆ. ಈ ಸಂದರ್ಭದಲ್ಲಿ ವೀರಭದ್ರನು ತೋರಿದ ಪ್ರತಾಪದ ಪ್ರತೀಕವೇ `ವೀರಗಾಸೆ’ ಎಂದೂ, ಅಂದಿನಿಂದಲೇ ಈ ಕಲೆ ಬೆಳೆದು ಬಂದಿತೆಂದೂ ಕಲಾವಿದರು ಹೇಳುತ್ತಾರೆ.

ಹಬ್ಬ ಹರಿದಿನಗಳಲ್ಲಿ ಜಾತ್ರೆ ಉತ್ಸವಗಳಲ್ಲಿ, ಕಾರ್ತೀಕ ಶ್ರಾವಣ ಸೋಮವಾರಗಳಲ್ಲಿ ಕಲಾವಿದರು (ಇವರಿಗೆ ಲಿಂಗದ ವೀರರು ಎಂದು ಹೇಳುತ್ತಾರೆ) ತಪ್ಪದೆ ಕಲೆಯನ್ನು ಪ್ರದರ್ಶಿಸುತ್ತಾರೆ. `ಲಿಂಗದ ವೀರ’ರನ್ನು ಊರಿಗೆ ಕರೆಸಿ ವೀರಭದ್ರನ ಪ್ರತಾಪದ ಬಗ್ಗೆ ಖಡ್ಗ ಹೇಳಿಸಿ ಕಥೆ ಕೇಳುವುದರಿಂದ ಗ್ರಾಮಕ್ಕೆ ಒಳ್ಳೆಯದಾಗುತ್ತದೆಂದೂ ದನಕರುಗಳಿಗೆ ರೋಗರುಜಿನಗಳಿದ್ದರೆ ಅವು ನಿವಾರಣೆಯಾಗುತ್ತವೆಂದೂ ನಂಬಿಕೆಯಿದೆ. ಕಲಾವಿದರಲ್ಲಿಯೂ `ಈ ಕಲೆಯನ್ನು ಬಿಟ್ಟರೆ ತಮಗೆ ದರಿದ್ರ ಬರುತ್ತದೆ’ ಎಂಬ ಭಾವನೆ ಇದೆ. ಕಲಾವಿದರು ಎಷ್ಟೇ ಶ್ರೀಮಂತರಾಗಿದ್ದರೂ ಶಿವರಾತ್ರಿ, ಯುಗಾದಿ ಹಬ್ಬದಂದು ಕಾವಿ ಧರಿಸಿ ಮೂರು ಮನೆಗಾದರೂ `ಕ್ವಾರಣ್ಯ’ಕ್ಕೆ ಹೋಗಬೇಕು. ಇವರನ್ನು ವೀರಭದ್ರನ ಅವತಾರವೆಂದೇ ಭಾವಿಸಿರುವ ಗ್ರಾಮೀಣರು ಎಂದೂ ಬರಿಗೈಯಲ್ಲಿ ಕಳುಹಿಸದೆ `ಭಿಕ್ಷೆ’ ನೀಡಿ ನಮಸ್ಕರಿಸುತ್ತಾರೆ.

ಕಲಾವಿದರ ವೇಷಭೂಷಣ ವೈಶಿಷ್ಟ್ಯಪೂರ್ಣ. ತಲೆಗೆ ಬಿಳಿಯ ಚೌಲಿಯನ್ನು ಹಾಕಿಕೊಂಡಿರುತ್ತಾರೆ. ಕಾವಿ ಅಂಗಿ, ಕಾವಿ ಕಾಸೆಪಂಚೆ, ಕಿವಿಗೆ ರುದ್ರಾಕ್ಷಿ, ಹಣೆ ಹುಬ್ಬು, ಕಿವಿಗಳಿಗೆ ವಿಭೂತಿ, ಕೊರಳು ತೋಳು ಮುಂಗೈಗಳಲ್ಲಿ ರುದ್ರಾಕ್ಷಿ ಮಾಲೆ, ನಾಗಾಭರಣ, ಎದೆಯ ಹತ್ತಿರ ವೀರಭದ್ರಸ್ವಾಮಿಯ ಹಲಗೆ- ಇಷ್ಟನ್ನು ಧರಿಸಿರುತ್ತಾರೆ. ಸೊಂಟದಲ್ಲಿ ಚೌಲಿ ಹಾಕಿದ ಹಿತ್ತಾಳೆಯ ನರಸಿಂಹ ಮತ್ತು ದಕ್ಷಬ್ರಹ್ಮನ ಶಿರಗಳನ್ನು ಕಟ್ಟಿಕೊಂಡಿರುತ್ತಾರೆ. ಮೊಣಕಾಲಿಗೆ ಜಂಗು ಧರಿಸಿರುತ್ತಾರೆ. ಬಲಗೈಯಲ್ಲಿ ಕತ್ತಿ, ಎಡಗೈಯಲ್ಲಿ ವೀರಭದ್ರನ ಹಲಗೆಯನ್ನು ಹಿಡಿದಿರುತ್ತಾರೆ. ದೇವರ ಉತ್ಸವದ ಮುಂದೆ ಕರಡಿ ಮತ್ತು `ಚಮಾಳ’ ವಾದ್ಯದ ಗತ್ತಿಗೆ ಲಯಬದ್ಧವಾಗಿ ಕುಣಿಯುತ್ತಾರೆ. ಕುಣಿತದ ಮಧ್ಯೆ ವೀರಭದ್ರನ ಒಡಪುಗಳನ್ನು ಹೇಳುತ್ತಾರೆ. ಜಾತ್ರೆ ಉತ್ಸವಗಳಲ್ಲಿ ಇವರು ಕೊಂಡ ಹಾಯ್ದನಂತರ, ಇವರ ಹಿಂದೆ ಕಳಸದವರು ಹಾಗೂ ಹರಕೆ ಹೊತ್ತ ಭಕ್ತರು ಹಾಯುತ್ತಾರೆ. `ಶಸ್ತ್ರ ಪವಾಡ’ ನಡೆಸುವುದು ವೀರಗಾಸೆಯವರ ಮತ್ತೊಂದು ವಿಶೇಷ.

ಹುಲಿವೇಷ:

`ಹುಲಿ ವೇಷ’ದಲ್ಲಿ ಪ್ರಮುಖವಾದುದು ಬಣ್ಣಗಾರಿಕೆ. ಕಲಾವಿದನು ಚಡ್ಡಿಯೊಂದನ್ನು ಬಿಟ್ಟು ಬರಿ ಮೈಯಲ್ಲೇ ಇರುತ್ತಾನೆ. ಮುಖಕ್ಕೆ ಹುಲಿಯ ಮುಖವಾಡವನ್ನು ಧರಿಸಿರುತ್ತಾನೆ. ಮೈಗೆ ಹುಲಿಯ ಚರ್ಮವನ್ನು ಹೋಲುವಂತಹ ಹಳದಿ-ಕಪ್ಪು ಪಟ್ಟೆಗಳನ್ನು ಬಳಿದುಕೊಂಡಿರುತ್ತಾನೆ. ಕೆಲವರು ಮುಖವಾಡಕ್ಕೆ ಬದಲು ತಲೆಯ ಭಾಗಕ್ಕೆ ಹುಲಿಯ `ಕಿವಿಯಾರ’ವನ್ನು ಕಟ್ಟಿಸಿಕೊಂಡು ಉಳಿದೆಲ್ಲಾ ಭಾಗಕ್ಕೆ ಬಣ್ಣವನ್ನೇ ಬಳಸುತ್ತಾರೆ. ಕೈಗಳಿಗೆ ಹುಲಿ ಉಗುರನ್ನು ಹೋಲುವಂತಹ ಮೊನಚಾದ ದೊಡ್ಡ ಉಗುರುಗಳನ್ನು ಧರಿಸಿರುತ್ತಾರೆ. ಈ ಉಗುರಿಗೆ ಬಹುತೇಕ ಹಿಪ್ಪೆಕಾಯಿನ ತೊಗಟೆಯನ್ನು ಬಳಸುವುದೇ ಹೆಚ್ಚು. ನಾರಿನಿಂದ ಮಾಡಿದ ಬಾಲವನ್ನು ಹಿಂದಕ್ಕೆ ಕಟ್ಟಿಕೊಂಡಿರುತ್ತಾರೆ. ಒಬ್ಬ ವ್ಯಕ್ತಿಗೆ ಸರಿಯಾಗಿ ಹುಲಿ ವೇಷ ಹಾಕಬೇಕಾದರೆ ಕನಿಷ್ಟ ಮೂರು ಗಂಟೆಯಾದರೂ ಬೇಕು ಎನ್ನುತ್ತಾರೆ.

ಹುಲಿ ವೇಷ ಧರಿಸಿದ ಕಲಾವಿದ ತಮಟೆಯ ಗತ್ತಿಗೆ ವಿವಿಧ ಭಂಗಿಗಳಲ್ಲಿ ಕುಣಿಯುತ್ತಾನೆ. ಅವನ ಸೊಂಟಕ್ಕೆ ಪಟ್ಟಿಯೊಂದನ್ನು ಕಟ್ಟಿ, ಅದಕ್ಕೆ ಹಗ್ಗವನ್ನು ಸೇರಿಸಿ, ಇಬ್ಬರು-ಮೂವರು ಹಿಡಿದಿರುತ್ತಾರೆ. ಮುಂದೆ ಹಿಡಿದ ಗಜ್ಜೆ ಕಟ್ಟಿದ ಉದ್ದವಾದ ಕೋಲನ್ನು ಹಿಡಿದುಕೊಳ್ಳಲು ವೇಷಧಾರಿ ಮುಂದೆ ಜಿಗಿಯುವಾಗ ಹಗ್ಗವನ್ನು ಹಿಡಿದಿರುವವರು ಅವನನ್ನು ಹಿಂದಕ್ಕೆ ಎಳೆಯುತ್ತಾರೆ. ಬಲವಾದ ಇಬ್ಬರು ಹೆಗಲ ಮೇಲೆ ಹೊತ್ತ ಉದ್ದವಾದ ಎರಡು ಬಿದಿರಿನ ಗಳಗಳ ಮೇಲೆ, ಹುಲಿ ವೇಷಧಾರಿ ಕುಪ್ಪಳಿ ಸುತ್ತ ಕುಣಿಯುವುದು, ಲಾಗ ಹಾಕುವುದು ಮೊದಲಾದ ಆಟಗಳನ್ನು ತೋರಿಸುತ್ತಾನೆ.

ಬಾಬಯ್ಯನ ಹಬ್ಬದ ಸಂದರ್ಭದಲ್ಲಿ ಹುಲಿ ವೇಷದ ಜೊತೆಗೆ ಬರುವ ಮತ್ತೊಂದು ಮನರಂಜನೆ ಕಲೆ ಕರಿಬೇವಿನ ಸೊಪ್ಪಿನ ವೇಷ. ಚಿತ್ರದುರ್ಗ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಇದು ಕಂಡುಬರುತ್ತದೆ. ಕಲಾವಿದ ಬರಿಮೈಯಲ್ಲಿದ್ದು ಲಂಗೋಟಿಯನ್ನು ಕಟ್ಟಿರುತ್ತಾನೆ. ಮುಖಕ್ಕೆ ಮಸಿ ಬಳಿದುಕೊಂಡು ಸುಣ್ಣದಿಂದ ಅಲ್ಲಲ್ಲಿ ಚುಕ್ಕೆಗಳನ್ನು ಇಟ್ಟುಕೊಂಡಿರುತ್ತಾನೆ. ತಲೆಗೆ ರುಮಾಲಿನಂತೆ ಸುತ್ತಿಕೊಂಡ ಸೀರೆಯ ಕೊನೆಯ ಭಾಗವನ್ನು ಬೆನ್ನು ಹಿಂದಕ್ಕೆ ನರಿಗೆ ಮಾಡಿ ತೂಗುಬಿಟ್ಟಿರುತ್ತಾನೆ. ಕತ್ತೆಯ ಮೇಲೆ ಕೂತು, ಕರಿಬೇವಿನ ಸೊಪ್ಪನ್ನಿಟ್ಟುಕೊಂಡು `…ಸೊಪ್ಪಮ್ಮ ಸೊಪ್ಪಮ್ಮ ಎಂದು ಕೂಗುತ್ತ ಬೀದಿಯ ಜನರನ್ನೆಲ್ಲಾ ನಲಿಸಿ ನಗಿಸುತ್ತಾನೆ. ಕತ್ತೆಗೂ, ಕರಿಬೇವಿನ ಸೊಪ್ಪಿಗೂ ಏನು ಸಂಬಂಧವೆಂದು ತಿಳಿದು ಬಂದಿಲ್ಲ. ಸಾಮಾನ್ಯವಾಗಿ ಸಂಜೆಯ ವೇಳೆ ಪ್ರದರ್ಶಿತವಾಗುವ ಈ ಕಲೆ ಕೇವಲ ಮನರಂಜನೆಗಾಗಿಯೇ ಹುಟ್ಟಿ ಕೊಂಡಿರುವುದು.

ಕರಡಿ ಮಜಲು:

ಉತ್ತರ ಕರ್ನಾಟಕ ಭಾಗದಲ್ಲಿ ಕಂಡುಬರುವ ಜನಪ್ರಿಯ ಕಲೆ `ಕರಡಿ ಮಜಲು’. ಇದನ್ನೆ ದಕ್ಷಿಣ ಕರ್ನಾಟಕದ ಕಡೆ `ಕರಡಿ ಮೇಳ’ ಎಂದು ಕರೆಯುತ್ತಾರೆ. ಸಾಮಾನ್ಯವಾಗಿ ಗಂಡು ದೇವರ ಉತ್ಸವಾದಿ ಕಾರ್ಯಗಳ ಸಂದರ್ಭದಲ್ಲಿ ಈ ಮೇಳ ನಡೆಯುತ್ತದೆ. ಇದು ಉದ್ಯೋಗಿ ಕಲೆಯಾಗಿ ಬೆಳೆದು ಬಂದಿದೆ. ಜಾತ್ರೆ ಉತ್ಸವಗಳಲ್ಲಿ ದೇವರ ಪೂಜಾ ಸಮಯದಲ್ಲಿ ಮತ್ತು ಧಾರ್ಮಿಕ ಗುರುಗಳನ್ನು ಊರೊಳಗೆ ಬರಮಾಡಿಕೊಳ್ಳುವಾಗ ಕರಡಿ ವಾದ್ಯ ಬಳಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಮದುವೆ, ಹೂ ಮುಡಿಸುವ ಕಾರ್ಯ, ನಾಮಕರಣ ಮುಂತಾದ ಮಂಗಳ ಕಾರ್ಯಗಳಲ್ಲೂ ಬಳಕೆಯಲ್ಲಿದೆ. ಕರಡಿ ವಾದ್ಯದ ಜೊತೆಯಲ್ಲಿ ಸನಾದಿ, ಶೃತಿ, ತಾಳಗಳನ್ನು ಬಳಸಿದರೆ, ಮತ್ತೆ ಕೆಲವು ಗಡೆ ದಿಮ್ಮು, ಚೌಗಡಗಳನ್ನು ಬಳಸುತ್ತಾರೆ.

ಕರಡಿ ವಾದ್ಯದ ಕಲಾವಿದರು ಕಾಸೆಪಂಚೆ, ಕಸೆ ಅಂಗಿ, ತಲೆಗೆ ಪೇಟ, ಹಣೆಗೆ ವಿಭೂತಿ ಧರಿಸಿರುತ್ತಾರೆ. ನಡುವಿಗೆ ಕೆಂಪು ವಸ್ತ್ರವನ್ನು ಕಟ್ಟಿರುತ್ತಾರೆ. ನಂದೀಧ್ವಜ ಕುಣಿತಕ್ಕೆ ಕರಡಿ ವಾದ್ಯದ ಮೇಳ ಬೇಕೇ ಬೇಕು. ಬಡಿತದಲ್ಲಿ ಆದಿತಾಳ, ಏಕತಾಳ, ಜಂಪತಾಳ, ಚೌತಾಳ, ಚಾಲು ಬಾರಿಸುವುದು, ದೃವತಾಳ, ಸಂಕೀರ್ಣತಾಳ ಮುಂತಾದ ಬಗೆಗಳಿವೆ. ಕಲಾವಿದರು ಸಾಮಾನ್ಯವಾಗಿ ಅರ್ಧ ವೃತ್ತಾಕಾರವಾಗಿ ನಿಂತು ಹಿಂದಕ್ಕೆ ಮುಂದಕ್ಕೆ ಬಾಗುತ್ತಾ ವಾದ್ಯಗಳನ್ನು ನುಡಿಸುವ ರೀತಿ ರಂಜನೀಯ. ನಿಧಾನವಾಗಿ ಪ್ರಾರಂಭವಾದ ಕರಡಿಮಜಲಿನ ಗತ್ತು-ಗತಿಗಳು ಹಂತ-ಹಂತವಾಗಿ ಏರಿ ಕ್ರಮೇಣ ಅದೇ ರೀತಿಯಲ್ಲಿ ನಿಧಾನವಾಗಿ ಮುಕ್ತಾಯವಾಗುತ್ತವೆ. ಇದರಲ್ಲಿ ಒಂದ್ಹೆಜ್ಜೆ ಕುಣಿತ, ಎರಡ್ಹೆಜ್ಜೆ ಕುಣಿತ, ಮೂರ್‍ಹೆಜ್ಜೆ ಕುಣಿತ ಮತ್ತು ಮಂಡಲ ಕುಣಿತ ಮುಂತಾದ ಗತ್ತುಗಳಿವೆ. ಕೆಲವು ಕಲಾವಿದರು ಕುಳಿತು ಬಾರಿಸುವುದು, ಮಂಡಿ ಬಡಿತ ಮುಂತಾದ ಪ್ರಕಾರಗಳನ್ನೂ ತೋರಿಸುತ್ತಾರೆ.

ಲಾವಣಿ:

ಗ್ರಾಮದ ಸಾಮಾಜಿಕ ಬದುಕು ಒಮ್ಮೊಮ್ಮೆ ಆಕಸ್ಮಿಕವಾಗಿ ತಾಳ ತಪ್ಪುವುದುಂಟು. ಹಾಗೆ ತಾಳ ತಪ್ಪಿದಾಗ ಬುದ್ಧಿಯ ಮಾತು ಹೇಳಿ ಸರಿಪಡಿಸಬೇಕಾಗುತ್ತದೆ. ಇಂತಹ ಬುದ್ಧಿಯ ಮಾತು ಹೇಳುವ ಓರ್ವ ಸಾಮಾಜಿಕ ಶಿಕ್ಷಕ, ಸಂಸ್ಕೃತಿ ಪ್ರಸಾರಕ `ಲಾವಣಿ’ಕಾರ!
ಲಾವಣಿಕಾರ ನಿತ್ಯದ ಉಡುಪಿನಲ್ಲಿಯೇ ಇರುತ್ತಾನೆ. ತಾಳಕ್ಕೆ ಒಂದು ದಮಡಿ, ಹಾಡಲು ಒಳ್ಳೆಯ ಕಂಠ, ಕೇಳುವ ಸಹೃದಯರು -ಇಷ್ಟಿದ್ದರೆ ಸಾಕು; ಅದೇ ಲಾವಣಿಕಾರನ ಆಸ್ತಿ! ಐತಿಹಾಸಿಕ, ಪೌರಾಣಿಕ ಕಥಾವಸ್ತುಗಳೇ ಅಲ್ಲದೆ ಲಾವಣಿಗಳಲ್ಲಿ ಸಾಮಾಜಿಕ ಸುಧಾರಣೆಯ ಸೂತ್ರಗಳೂ ಪ್ರಧಾನವಾಗಿರುತ್ತವೆ.
ಅಶೋಕ ಚಕ್ರವರ್ತಿ, ಹರ್ಷವರ್ಧನ, ವಿಕ್ರಮಾದಿತ್ಯ, ಕೃಷ್ಣದೇವರಾಯ, ಮದಕರಿನಾಯಕ, ಕಿತ್ತೂರ ಚನ್ನಮ್ಮ ಟಿಪ್ಪುಸುಲ್ತಾನ್, ಒನಕೆ ಒಬ್ಬವ್ವ ಮುಂತಾದ ಐತಿಹಾಸಿಕ ಕಥೆಗಳಿಂದ ಹಿಡಿದು ಆಧುನಿಕ ವೇಶ್ಯೆಗಾರಿಕೆ, ಕಾಳಸಂತೆ, `ಫ್ಯಾಷನ್ನಿ’ನ ನಾಗರಿಕತೆ, ಹೀಗೆ ಹಲವಾರು ಸಮಸ್ಯೆಗಳನ್ನು ಕುರಿತೂ ಹಾಡುತ್ತಾರೆ. ಸ್ವಾತಂತ್ರ್ಯ ಹೋರಾಟಕಾಲದಲ್ಲಿ ನಮ್ಮ ಲಾವಣಿಕಾರರು ಮಾಡಿದ ಜನಜಾಗೃತಿಯ ಸೇವೆ ಸಣ್ಣದೇನಲ್ಲ,
ಲಾವಣಿಕಾರ ಒಬ್ಬನೇ ಹಾಡುವುದು ಸಾಮಾನ್ಯ. ಅನೇಕ ವೇಳೆ ಜೋಡಿಯಾಗಿಯೂ ಹಾಡುತ್ತಾರೆ. ಹಾಡಿಕೆಗೆ, ಕೈಯಲ್ಲಿ ಹಿಡಿದ ದಮಡಿಯ ತಾಳ ಒಳ್ಳೆಯ ಮೇಳವಾಗುತ್ತದೆ. ಹಾಡಿನ ಸಾಹಿತ್ಯ ಶ್ರೋತೃವಿಗೆ ಅರ್ಥವಾಗುವಂತೆ ಲಾವಣಿಕಾರ ಹಾಡುವಾಗ ಹಲಗೆಯ ದನಿಯನ್ನು ಕಡಿಮೆ ಮಾಡುತ್ತಾನೆ. ಪ್ರತಿಸಾರಿ ಪಲ್ಲವಿ ಹಾಡಿದ ನಂತರ ಬೆಡಗಿನಿಂದ ಹಲಗೆ ನುಡಿಸುತ್ತಾನೆ.

ಕೃತಯುಗದಿಂದ ಕಲಿಯುಗದವರೆಗೆ ಜೀವನ ರೀತಿನೀತಿಗಳನ್ನು ಚಿತ್ರಿಸುವ ಲಾವಣಿಗಳಲ್ಲಿ ಉಡನ್, ದೊಡ್ಡ ಉಡನ್, ಚಾಲು, ಶ್ಲೋಕ, ಕಂದ – ಹೀಗೆ ನಾನಾ ಮಟ್ಟುಗಳಿವೆ. ಲಾವಣಿ ಭಾಷೆಯ ಬೆಡಗು ಹಾಗೂ ಪ್ರಾಸಗಳು ಬಲು ಸೊಗಸು!

Leave a Reply