ಕರ್ನಾಟಕದ ದೃಶ್ಯಕಲಾ ಪರಂಪರೆ : ಭಾಗ ೨
– ಕೆ. ವಿ. ಸುಬ್ರಹ್ಮಣ್ಯಂ
ಹಲವು ನೆಲೆಗಳಲ್ಲಿ ನಡೆದು ಬಂದ ನಮ್ಮ ವಾಸ್ತುಶಿಲ್ಪ
ಕೆಂಪು ಹಾಗೂ ಬಿಳಿ ಬಣ್ಣಗಳೇ ಹೆಚ್ಚು ಬಳಸಲ್ಪಟ್ಟಿರುವ ನಮ್ಮ ದೇಶದ ಬಂಡೆ-ಗುಹಾಶ್ರಯ ಚಿತ್ರಗಳಂತೆ, ಕರ್ನಾಟಕದ ಚಿತ್ರಗಳೂ ಮೂಡಿಬಂದಿವೆ. ಸಾಂಕೇತಿಕ ರೂಪಗಳನ್ನು ಗುಲ್ಬರ್ಗದ ಯಾದಗೀರ್ ಬಳಿಯ ಬಿಳಿಚಕ್ರದ ಎತ್ತರದ ಬೆಟ್ಟದ ತುದಿಯ ಬಂಡೆಯಾಶ್ರಯ, ಆನೆಗೊಂದಿಯ ಚಿತ್ರ ಸಮೂಹಗಳಲ್ಲಿ ಕಾಣಬಹುದು. ಈ ಚಿತ್ರಭಾಷೆಯ ಬಗೆಗೆ ಇಂದಿಗೂ ಆ ಹಳ್ಳಿಗಳ ಜನರಿಗೆ ಕುತೂಹಲವಿದೆ. ಈಗಾಗಲೇ ಹೇಳಿರುವ ಬಹುತೇಕ ಶಿಲಾಶ್ರಯಗಳಲ್ಲಿ ಆದಿಯ ಜನರು (ಕಲಾವಿದರು) ಕಂದು ಅಥವಾ ಕಪ್ಪುಬಣ್ಣದ ಕಬ್ಬಿಣದ ಅದಿರನ್ನು ಬಳಸಿದ್ದಾರೆ. ಮಣ್ಣಿನ ಮೂಲದ ಬಣ್ಣಗಳನ್ನು ದುಡಿಸಿಕೊಂಡಿದ್ದಾರೆ. ನೂತನ ಶಿಲಾಯುಗಕ್ಕಿಂತಲೂ ಸ್ವಲ್ಪ ಹಿಂದಿನ, ಬಾದಾಮಿಯ ಬಳಿಯ ಕುಟಕನ ಕೇರಿ ಹತ್ತಿರದ ಅರೆಗುಡ್ಡ ಮತ್ತು ಹಿರೇಗುಡ್ಡಗಳ ಶಿಲಾಶ್ರಯಗಳಲ್ಲಿನ ಕೆಮ್ಮಣ್ಣು ಬಣ್ಣದ ಚಿತ್ರಗಳಲ್ಲಿ ಮಾನವ ರೂಪಗಳೇ ಹೆಚ್ಚು. ಸಾಮಾನ್ಯ ಕಣ್ಣಿಗೆ ತಟಕ್ಕನೆ ಕಾಣದ, ತರಬೇತಾದ ಕಣ್ಣಿಗೆ ಕಾಣುವ ಈ ಚಿತ್ರಗಳು ಉದ್ದನೆಯ ಮುಂಡ, ಉರುಟಾದ ಕೈಕಾಲುಗಳನ್ನು ಹೊಂದಿವೆ.
ಇಂದಿಗೂ ಕುಟಕನಕೇರಿ ಬಳಿಯ ಈ ಮೊದಲು ಹೇಳಿರುವ ಕೋಳಿಫಡಿ ಹಾದಿಯ, ರಸ್ತೆಯ ಹೊಲಗಳ ಬದಿಯ ಶಿಲಾಶ್ರಯಗಳ ಸನಿಹದಲ್ಲಿಯೇ ಮತಾಚರಣೆ ಸಂಬಂಧಿತ ನೆಲದ ಮೆಲ್ಮೈನಲ್ಲಿ ರೂಪಿಸುವ ಮಣ್ಣಿನ ಇಂಥ ರೂಪಗಳನ್ನು ಗಮನಿಸಬಹುದು. ಇವೆಲ್ಲವುಗಳ ಜತೆಗೆ ಈ ಭಾಗದಲ್ಲಿ ಪ್ರಾಣಿಗಳ ಚಿತ್ರಗಳೂ ವಿಶಿಷ್ಟವಾಗಿ ರೇಖಿಸಲ್ಪಟ್ಟಿವೆ. ಬಾದಾಮಿಯಿಂದ ಮಹಾಕೂಟಕ್ಕೆ ಹೋಗುವ ಹಾದಿಯಲ್ಲಿನ ಬಲಭಾಗದ ಸೀತೆದೋಣಿ ಹತ್ತಿರದ ಬೃಹತ್ ಶಿಲಾಶ್ರಯದ ಸೂರಿನಡಿ ಬಲೆಯಂಥ ರೇಖಾಚಿತ್ರದಲ್ಲಿ ಕೆಲವು ಪ್ರಾಣಿಗಳ ಚಿತ್ರಣವಿದೆ. ಹಾಗೆಯೇ ಬಾದಾಮಿಯಿಂದ ಹೊರಟು ರಾಮದುರ್ಗದ ಹೊರಗೆ ಸುಮಾರು ೩ ಕಿಲೋಮೀಟರುಗಳ ದೂರದ ಮೇಗುಂಡೇಶ್ವರ ದೇವಾಲಯದ ಬಳಿ ಹರಿವ ಹೊಳೆ ದಾಟಿ ಖಾಜಿಗುಡ್ಡದ ಜರುಗಿನ ದಾರಿಯ ಕಲ್ಲಾಸರೆಯಲ್ಲಿ ಹಲವು ಪ್ರಾಣಿಗಳ ಚಿತ್ರಗಳು ಕೆಮ್ಮಣ್ಣುಬಣ್ಣದಿಂದ ಕೂಡಿವೆ.
ರಾಯಚೂರಿನ ಹಿರೇಬೆನ್‌ಕಲ್‌ನ ಬೆಟ್ಟದ `ದುರ್ಗದ ದಡಿ’ ಎಂದು ಕರೆವ ಸ್ಥಳದ ಬೃಹತ್ ಶಿಲಾಯುಗದ ಸಂಸ್ಕೃತಿಯ ಕುದುರೆ ಸೂರದ, ನರ್ತಿಸುವ ಜನರ, ಸಾಕುಪ್ರಾಣಿಗಳ ಚಿತ್ರಗಳು ಅದರಲ್ಲೂ ಜಿಂಕೆ, ಹಸು, ಎತ್ತು ಇತ್ಯಾದಿಗಳು ಇನ್ನೂ ಹಲವಾರು ಅಸ್ಪಷ್ಟ, ಸಂಕೀರ್ಣ ಚಿತ್ರಕಲ್ಪನೆಗಳೂ ಇವೆ. ಸಾಲು ಜನರ ಕಲ್ಪನೆ, ಸಮೂಹ ಕುಣಿತ, ಗೋಗ್ರಹಣ ಇತ್ಯಾದಿ ಆಕರ್ಷಕ ಸಂಯೋಜನೆಗಳು ಗಮನಿಸುವಂತಿವೆ.
ಪಟ್ಟದಕಲ್ ಬಳಿಯ ಅರೆಗುಡ್ಡ, ಬಾದಾಮಿ ಬಳಿಯ ಹಿರೇಗುಡ್ಡ, ಐಹೊಳೆ, ಪಿಕ್ಕಿಹಾಳ, ತೆಕ್ಕಲಕೋಟೆ, ಹಿರೇಬೆನಕಲ್ ಇತ್ಯಾದಿ ಶಿಲಾಶ್ರಯಗಳ ಪ್ರಾಣಿ ಚಿತ್ರಗಳ ರೇಖಾಕಲ್ಪನೆಯ ವೈವಿಧ್ಯ ಅಚ್ಚರಿ ಮೂಡಿಸುವಂತಿದೆ. ಜತೆಗೆ ಕೋಲಾರ ಜಿಲ್ಲೆಯ ಟೇಕಲ್ ಬಳಿಯ ಹಲವು ಕಲ್ಲಾಸರೆಗಳ ಚಿತ್ರಗಳೂ ಇತ್ತೀಚೆಗೆ ಗಮನವಿಟ್ಟು ನೋಡುವಂತೆ ಮಾಡಿವೆ. ಈ ರೇಖೆ-ಬಣ್ಣಗಳ ರೂಪಗಳು ಕಾಲದ ಹಲವು ಅಡಚಣೆಗಳನ್ನು ಮೀರಿ ಇಂದಿಗೂ ನಾವು-ನೀವು ನೋಡುವಂತಿವೆ ಎಂಬುದೇ ಒಂದು ವಿಶೇಷ. ಎಷ್ಟೋಬಾರಿ ಮಣ್ಣಿನ ಬಣ್ಣಗಳು, ಅಥವಾ ಪ್ರಕೃತಿಯಿಂದ ಪಡೆದ ಬಣ್ಣಗಳು, ಕೆಲವೊಮ್ಮೆ ಪ್ರಾಣಿಗಳ ರಕ್ತ ಇತ್ಯಾದಿಗಳು ಅವುಗಳನ್ನು ರೇಖಿಸಿಕೊಂಡ, ಲೇಪಿಸಿಕೊಂಡ ಶಿಲ್ಪಗಳ ಮೂಲಧಾತುಗಳೊಂದಿಗೆ ಸಂಯೋಗಗೊಂಡು ಕಾಲಾನಂತರ ರಸಾಯನಿಕ ಪ್ರಕ್ರಿಯೆಯಿಂದ ಬಣ್ಣಬದಲಿಸಿಕೊಂಡು ಶಾಶ್ವತವಾಗಿ ಉಳಿದುಕೊಂಡಿರುವುದೂ ಉಂಟು. ಆದರೂ ಬಹುತೇಕ ನೀರಿನ ಆಸರೆಯ ಹತ್ತಿರದಲ್ಲಿ, ನಮ್ಮ ನೆಲದಲ್ಲಿ ಸುಮಾರು ೧೦,೦೦೦ ವರ್ಷಗಳ ಹಿಂದೆ, ೬೦ಕ್ಕೂ ಹೆಚ್ಚಾದ ಗುಹೆ, ಶಿಲಾಶ್ರಯಗಳಲ್ಲಿ ವೈವಿಧ್ಯಮಯವಾಗಿ ಮೂಡಿಬಂದಿರುವ ನಿಗೂಢ ಉದ್ದೇಶದ, ಆಕರ್ಷಕ ರೂಪಗಳ ದೃಶ್ಯಕಲೆ ಮುಂದಿನ ವರ್ಷಗಳ ಇತಿಹಾಸ ಕಾಲದ ಕಲೆಗೆ ಕರಡು ರೂಪದಂತೆ, ಸ್ಕೆಚ್‌ನಂತೆ ಬಹುಮುಖ್ಯ ಭೂಮಿಕೆಯನ್ನು ಕನ್ನಡದ ದೃಶ್ಯಕಲಾ ಇತಿಹಾಸಕ್ಕೆ ಒದಗಿಸಿಕೊಟ್ಟಿತು.
ಈ ಚಿತ್ರಗಳ ವಿಚಿತ್ರ ಪ್ರಾರಂಭದ ಹೆಜ್ಜೆಗಳು, ಮಾಂತ್ರಿಕ ಗುಣ-ನಂಬಿಕೆಗಳು, ಅವುಗಳನ್ನು ಅವರು ದೃಶ್ಯಾರ್ತಕ `ನೋಟ’ಕ್ಕಿಂತಲೂ `ಬಳಸು’ವಿಕೆಗೆ ಒತ್ತುನೀಡಿ ಸೃಷ್ಟಿಸಿರಬಹುದೆಂಬ ಊಹೆಯ ಅನಿಸಿಕೆಯನ್ನು ತಂದುಕೊಡುತ್ತವೆ; ಹೌದು, ಇದು ಊಹೆ ಮಾತ್ರ. ನಮ್ಮ ಪೂರ್ವಜರ ಈ ಕುಶಲತೆಯ ಚಹರೆಯ ನಮೂದುಗಳು ನಿರ್ದಿಷ್ಟ ಬುಡಕಟ್ಟುಗಳ ನಿರ್ದಿಷ್ಟ ರೂಪ, ಬಣ್ಣ ರೇಖೆ, ಸಂಕೇತಗಳನ್ನು ಹೊಂದಿರುತ್ತಿದ್ದವು. ಹೀಗಾಗಿ ಅಂದಿನ ಚಿತ್ರಕಾರ `ನಿರ್ದಿಷ್ಟ’ ಪಡಿಸಿದ `ರೀತಿ’ಯಲ್ಲಿಯೇ ಚಿತ್ರಿಸಬೇಕಾಗಿತ್ತು. ಈ ವಿಷಯದಲ್ಲಿ ಸ್ವಾತಂತ್ರ್ಯವಿರದಿದ್ದರೂ (ಇಲ್ಲಿ ನಾವು ನಿರ್ಧರಿಸಿಕೊಂಡು ಬಳಸಿಕೊಳ್ಳುತ್ತಿರುವ ರಾಷ್ಟ್ರೀಯ ಧ್ವಜದ ಬಣ್ಣಗಳು, ಸಂಚಾರ-ಸೂಚನೆಗಳ ಸಂಕೇತ, ರೂಪ, ಬಣ್ಣ ಇತ್ಯಾದಿಗಳನ್ನು ಹೋಲಿಸಿ ನೋಡಬಹುದು.) ಆ ರೂಪ, ಬಣ್ಣಗಳನ್ನು ನಿರ್ವಹಿಸಿಕೊಳ್ಳುವಿಕೆಯಲ್ಲಿ ಚಿತ್ರಕಾರ ತನ್ನ ವಿಶಿಷ್ಟ ಕುಶಲತೆಯನ್ನು ಮೆರೆಸಲು ಅವಕಾಶ ಇದ್ದೇ ಇತ್ತು ಎಂಬುದನ್ನು ಈಗಿರುವ ಆ ಸಂದರ್ಭದ ಚಿತ್ರಗಳು ಹೇಳುತ್ತವೆ. ಜತೆಗೆ ಹಲವು ಬುಡಕಟ್ಟುಗಳ ಜನರು ಅವರು ಬಳಸುತ್ತಿದ್ದ ದಿನಬಳಕೆಯ ಮಣ್ಣಿನ ಸುಟ್ಟ ಪಾತ್ರೆ ಪಡಗ, ಬುಟ್ಟಿ ಚರ್ಮ, ಲೋಹಗಳ ಅವಕಾಶಗಳಲ್ಲೂ, ತಮ್ಮ ಸರಳ ಸಾಧನಗಳಿಂದಲೇ ಇಂದಿಗೂ ಅಚ್ಚರಿಗೊಳಿಸುವ ಕುಶಲತೆಯನ್ನು ಸಾಧಿಸಿದ್ದರು ಕೌತುಕವನ್ನು ಉಂಟುಮಾಡುತ್ತದೆ. ರೇಖೆ, ರೂಪ, ಅಕ್ಷರ (?) ಸಂಕೇತ, ಇತ್ಯಾದಿಗಳು ನಮ್ಮ ಪೂರ್ವಜರ ರಕ್ತ ಸಂಬಂಧಿ ಸಹಯೋಗವನ್ನು ಹೊಂದಿ ನಡೆದುಬಂದಿವೆ ಎಂಬುದರ ಜತೆಜತೆಗೆ ಈ ಎಲ್ಲರ ಅಂದರೆ ವಿಶ್ವದಾದ್ಯಂತ ಅದಿಮ (primitive) ಕಲಾಸೃಷ್ಟಿಯ ಹಿಂದೆ ಒಂದು ರೀತಿಯಲ್ಲಿ `ವಿಶ್ವಾತ್ಮಕತೆ’ (universality)ಯ ಗುಣಲಕ್ಷಣಗಳು ಬೆಳೆದುಬಂದಿವೆ. ವಿಶ್ವದ ಇತರೆಡೆಗಳ ಇತಿಹಾಸಪೂರ್ವ ಗುಹೆ, ಶಿಲಾಶ್ರಯ ಚಿತ್ರಗಳೊಂದಿಗೆ ರೇಖೆ, ಬಣ್ಣ, ರೂಪ ನಿರ್ವಹಣೆ ಇತ್ಯಾದಿಗಳಿಂದ ಸ್ವಲ್ಪವಾದರೂ ಹೋಲುವ ಗುಣ ಲಕ್ಷಣಗಳು ನಮ್ಮ ದೇಶದ ಹಲವೆಡೆಯ ಇಂಥ ಸೃಷ್ಟಿಗಳಲ್ಲೇ ಅಲ್ಲದೆ ಕನ್ನಡದ ಗುಹೆ-ಶಿಲಾಶ್ರಯ ಚಿತ್ರಗಳಲ್ಲೂ ಇವೆ ಎಂಬುದೇ ಇಂದು ಭೌಗೋಳೀಕರಣದ ರಾಜಕಾರಣದ ಹಿನ್ನೆಲೆಯಲ್ಲೂ ಮನುಕುಲದ ವೈವಿಧ್ಯತೆಯಲ್ಲೂ ಏಕತೆಗೆ ಪುಳಕ ನೀಡುವ ಸಂಗತಿಯಾಗಬಲ್ಲದು.
ಐತಿಹಾಸಿಕ ಪ್ರಜ್ಞೆ, ಇತಿಹಾಸಪೂರ್ವ ನೆಲೆ, ಅಲ್ಲಿನ ಚಿತ್ರ ಇತ್ಯಾದಿಗಳು ಇಂದಿಗೂ ನಮ್ಮನ್ನು ಕಾಡುವುದು ಸಹಜವೆಂಬಂತೆ ಜರ್ಮನಿಯ ಉಲ್ರಿಚ್ ಅರ್ನಾಲ್ಡ್ ೨೦೦೧ರ ಮೊದಲ ವಾರಗಳಲ್ಲಿ ಬಾದಾಮಿಯ ಸಿಡಿಲಪಡಿ ಶಿಲಾಶ್ರಯದ ಬಳಿ ನಡೆದಾಡಿ ವಿಶಿಷ್ಟ ಅನುಭವವನ್ನು ಗ್ರಹಿಸಿ ಅಭಿವ್ಯಕ್ತಿಸಿದ್ದು ಅಂಥ ಸುದ್ದಿಯಾಗಲಿಲ್ಲ. ಇತಿಹಾಸಪೂರ್ವ ಚಿತ್ರಗಳಿರುವ ನೆಲೆಯ ಎದುರಿನ ಬಂಡೆಗಳ ಅವಕಾಶದಲ್ಲಿ ಆಕೆಯೂ ಚಿತ್ರಿಸಿದಳು! ಈ ನೋಡುವ, ಗ್ರಹಿಸುವ, ಅಭಿವ್ಯಕ್ತಿಸುವ ರಾಜಕಾರಣದ ಪ್ರಕ್ರಿಯೆಯ ಕೌತುಕ ಕಾಲ ಕಾಲಕ್ಕೆ ವಿಶಿಷ್ಟರೀತಿಗಳಲ್ಲಿ ನಡೆದು ಬರುತ್ತಿದೆ; ಕಲೆಯ, ಕಲಾವಿದನ ಸ್ಥಾನ, ಅರ್ಥ-ವಿವರಣೆಗಳೂ ಹೊಸ ಹೊಸ ಆಯಾಮಗಳನ್ನು ಪಡೆದುಕೊಳ್ಳುತ್ತಲೇ ಬಂದಿವೆ. `ಮಾಂತ್ರಿಕ’ ಲಕ್ಷಣದ ಇತಿಹಾಸ ಪೂರ್ವ ಕಲಾವಿದನ ಸ್ಥಾನ ಇಂದಿನ ಭೌಗೋಳೀಕರಣದ ಫಲವಾದ `ಸರಕು ಸಂಸ್ಕೃತಿ’ ಯ ಅಡಿಯಾಳಿನಂಥ ಕಲಾವಿದನ ಸ್ಥಾನಗಳ ನಡುವಿನ ಅಂತರ ಬಹಳ. ಈ ನಡುವೆ ಹಲವು ವೈಶಿಷ್ಟ್ಯಪೂರ್ವ ನಡೆಗಳು ಕನ್ನಡದ ಕಲಾ ಇತಿಹಾಸದಲ್ಲಿ ನಡೆದು ಹೋಗಿವೆ. ವಾಸ್ತು, ಚಿತ್ರ, ಶಿಲ್ಪ ಈ ಮೂರು ಮಾಧ್ಯಮಗಳು ಈ `ನಡೆ’ಗಳಲ್ಲಿ ಪರಸ್ಪರ ಮುಖಾಮುಖಿಯಾಗುತ್ತಲೇ ಬೆಳೆದುಬಂದಿವೆ. ಇತಿಹಾಸವನ್ನು ಜೀವಂತವಾಗಿಟ್ಟಿವೆ.
ಇತಿಹಾಸಕಾಲದ ವಾಸ್ತು, ಇತಿಹಾಸ ಪೂರ್ವಕಾಲಕ್ಕಿಂತಲೂ ಹಲವು ನೆಲೆಗಳಿಂದಾಗಿ ವಿಶಿಷ್ಟ ಬೆಳವಣಿಗೆ ಕಂಡಿತು. ಅದರೊಟ್ಟಿಗೆ ಅರಮನೆ, ದೇವಾಲಯ ಇತ್ಯಾದಿ ವಾಸ್ತುಗಳೇ ಅಲ್ಲದೆ ಗುಹಾಂತರ ದೇವಾಲಯಗಳ ಭಿತ್ತಿಗಳ ಹಾಗೂ ಸೂರಿನ ಅವಕಾಶವನ್ನು ಅನುಸರಿಸಿ ಉಬ್ಬು ಶಿಲ್ಪಗಳು ಬೆಳವಣಿಗೆ ಕಂಡವು. ಇತಿಹಾಸ ಪೂರ್ವ ಶಿಲಾಶ್ರಯ ಚಿತ್ರಗಳಂತೆ, ಇತಿಹಾಸ ಕಾಲದಲ್ಲಿಯೂ ಶಿಲಾಶ್ರಯಗಳಲ್ಲಿ, ಗುಹೆಗಳಲ್ಲಿ ವರ್ಣಚಿತ್ರಗಳು ಮೂಡಿಬಂದದ್ದುಂಟು. ಈ ದೃಷ್ಟಿಯಿಂದ `ಶೈಲಿ’ ಮತ್ತು `ವಿಷಯ’, ಈ ಎರಡರಲ್ಲೂ ವಿಭಿನ್ನವಾಗಿರುವ ಬಾದಾಮಿಯ ಇತಿಹಾಸಕಾಲದ ವರ್ಣಚಿತ್ರಗಳು ಬಹಳ ಮುಖ್ಯವಾದವು. ಹಾಗೆಯೇ ಮಾನ್ವಿಯ ಗುಡ್ಡದ ಚಿತ್ರಗಳೂ ಗಣನೀಯ. ಬಾದಾಮಿಯ ಮೊದಲನೆಯ ಪುಲಿಕೇಶಿಯ ಕೋಟೆ, `ಮೇಲಣ’ ಹಾಗೂ `ಕೆಳಗಣ’ ಶಿವಾಲಯಗಳನ್ನು ಹೊಂದಿರುವ ಎತ್ತರದ ಗುಡ್ಡದ ಉತ್ತರದ ಬೆಟ್ಟದ ಸಾಲಿನ ೬ ಗವಿಚಿತ್ರಗಲ್ಲಿನ ಒಂದು, ಆ ಭಾಗದ ಕಲ್ಲಾಸರೆಯ ಹಿಂಬದಿಯ ಕಲ್ಲು ಬಂಡೆಯ ಮೇಲಿದೆ. ಹಳದಿ ಬಣ್ಣದ ಸುಣ್ಣದ ಲೇಪದ ಅವಕಾಶದಲ್ಲಿ ಕೆಂಪು / ಕೆಂಗಾವಿ ಬಣ್ಣದ ರೇಖೆಗಳ ಪ್ರಮಾಣಬದ್ಧ, ಗಣ್ಯವ್ಯಕ್ತಿಗಳ ಚಿತ್ರಗಳವು. ಈ ಚಿತ್ರಗಳು ತಮ್ಮ ಶೈಲಿ, ರೇಖೆ-ರೂಪ-ಬಣ್ಣಗಳ ನಿರ್ವಹಣೆಯಿಂದ ಬಾದಾಮಿಯ ಮೂರನೆಯ ವಿಷ್ಣುಲಯಣದಲ್ಲಿರುವ ವರ್ಣಚಿತ್ರಗಳಿಗೆ ಸಮೀಪವಾಗಿವೆ. ಬಾದಾಮಿ ಚಾಲುಕ್ಯರ ಕಾಲದ ಈ ಚಿತ್ರಗಳು ಈ ಕಾರಣದಿಂದ ಗಮನಿಸುವಂತಿವೆ. ಈ ಮೊದಲೇ ಹೇಳಿರುವಂತೆ ಮಾನ್ವಿ ಬಳಿಯ ಬೈಲ್ ಮರ್ಚೇಡ ಹಳ್ಳಿಯ ಚಿತ್ರಗಳು ವಿಜಯನಗರ ಶೈಲಿಯ ಹೊಳಪುಗಳನ್ನು ಹೊಂದಿವೆ. ಅಲ್ಲಿನ ಕಾಟಮಯ್ಯನ ಗುಂಡಿನ ಸ್ವಲ್ಪ ಹಳದಿ ಮಿಶ್ರಿತ ಸುಣ್ಣದ ಅವಕಾಶದಲ್ಲಿ ಕಂದು, ಕೆಂಪು, ಕೆಮ್ಮಣ್ಣಿನ ಬಣ್ಣಗಳಲ್ಲಿ ಮೂಡಿಬಂದಿರುವ ಕುದುರೆ ಸವಾರರ ಮತ್ತು ಗೂಳಿಗಳ ಚಿತ್ರಗಳು `ಗೋ ಗ್ರಹಣ’ದ ನೆನಪು ತರುತ್ತವೆ. ಹಾಗೆಯೇ ಯಾದಗಿರಿ ತಾಲ್ಲೂಕಿನ ಬಳಿಚಕ್ರದ ಪೂರ್ವಕ್ಕೆ ಇರುವ ಎತ್ತರದ ಗುಡ್ಡದ ತುದಿಯಲ್ಲಿನ ವಿಶಾಲ ಅವಕಾಶದ ಕಲ್ಲಾಸರೆಯಲ್ಲಿ ವಿಶಿಷ್ಟ-ವಿಚಿತ್ರವರ್ಣ ಚಿತ್ರಗಳಿವೆ. ಇವೆಲ್ಲ ಸುಮಾರು ೭-೮ನೆಯ ಶತಮಾನದ ಇತಿಹಾಸಕಾಲದಲ್ಲಿ ಚಿತ್ರಿಸಲ್ಪಟ್ಟ ಚಿತ್ರಗಳೆಂದು ಊಹಿಸಲು ಕೆಲವು ಹೊಳಪುಗಳು ಈ ಚಿತ್ರಸಂಕುಲದಲ್ಲಿವೆ. ಚಿತ್ರದ ಅವಕಾಶದ ಮೇಲ್ಭಾಗದಲ್ಲಿ ಕಂದುಬಣ್ಣದಲ್ಲಿ ಬರೆದ ಸುಮಾರು ೭ನೆಯ ಶತಮಾನದ ಐದು ಅಕ್ಷರಗಳ ಒಂದು ಐದು ಅಕ್ಷರಗಳ ಒಂದು ಸಾಲಿನ ಶಾಸನವಿದೆ. “ಶ್ರೀ ಉಗ್ರಮಿಟ್ವಿ” (?), ಬಹುಷಃ ಬಾದಾಮಿಯ ಚಾಲುಕ್ಯರ ಆ ಭಾಗದ ಅಧಿಕಾರಿಯ ಹೆಸರು ಇದಾಗಿರಬಹುದಾದ ಸಾಧ್ಯತೆ ಇದೆ. ಮಾನ್ವಿಯ (ರಾಯಚೂರು ಜಿಲ್ಲೆ) ಕಲ್ಲಿನ ಗುಡ್ಡದ ವರ್ಣಚಿತ್ರಗಳ ರಂಗೋಲಿ ಗುಹೆಗಳಲ್ಲಿನ ಪುರಾಣಗಳಿಗೆ ಹತ್ತಿರವಾದ, ಕಥೆಹೇಳುವ ಕೆಮ್ಮಣ್ಣಿನ ಬಣ್ಣದ ಚಿತ್ರಗಳು ವಿಜಯನಗರ ಕಾಲದ ಶೈಲಿಗೆ ಹೊಂದಿಕೊಳ್ಳುವಂತಿವೆ; ಶಿಷ್ಟ ಸಂಪ್ರದಾಯಕ್ಕೆ ಸಹಯೋಗ ನೀಡಿವೆ.
ವಾಸ್ತುಶಿಲ್ಪದ ಹುಟ್ಟನ್ನು ಹೇಳುವ `ಮಾನಸಾರ’, ಶಿಲ್ಪರತ್ನ, ವಾಸ್ತುಚಂದ್ರಿಕ ಮೊದಲಾದ ಗ್ರಂಥಗಳ ಮಿತಿಗಳನ್ನು ಮೀರಿ ವಾಸ್ತುಶಿಲ್ಪವು ನಮ್ಮ ನೆಲದಲ್ಲಿ ಅರಳಿದೆ. `ಉಪಯುಕ್ತತೆ’ ಹಾಗೂ `ಸೌಂದರ್ಯದೃಷ್ಟಿ’ ಗಳೆರಡನ್ನೂ ಹೊಂದಿಸಿಕೊಂಡು ಬೆಳೆದಿದೆ. `The art of organising space’ನಂಥ ವಾಸ್ತುಶಿಲ್ಪ ನಿರಾಕಾರವಾದ ಆಕಾಶವನ್ನೇ (ಅವಕಾಶ) ವ್ಯವಸ್ಥೆಗೊಳಿಸಿ ಅದಕ್ಕೊಂದು ರೂಪು ಕೊಡುವ ಕಲೆ; ಗೋಡೆ, ಛಾವಣಿ, ಗೋಪುರಗಳ ವ್ಯತ್ಯಾಸದಿಂದ `ಅವಕಾಶ’ ಕ್ಕೆ ಅನಂತರೂಪ ನೀಡುವ ಪ್ರಕ್ರಿಯೆ. ಅರಮನೆ, ಮಸೀದಿ, ಗೋರಿ ಇತ್ಯಾದಿಗಳು ನಮ್ಮ ಇತಿಹಾಸದ ಹಲವು ರಾಜಮನೆತನಗಳ ಕಾಲಗಳಲ್ಲಿ ಅಂದಂದಿನ ಭೌಗೋಳಿಕ ಸನ್ನಿವೇಶ, ಸಾಮಾಜಿಕ ಮತ್ತು ರಾಜಕೀಯ ಪರಿವರ್ತನೆಗಳು ಹಾಗೂ ಐತಿಹಾಸಿಕ ಘಟನೆಗಳು ಪ್ರಭಾವಗಳಿಂದ ಹಾಗೂ ಬದಲಾಗುತ್ತ ಬಂದ `ಅಭಿರುಚಿ’ಯ ಪ್ರಭಾವದಿಂದಲೂ ಹತ್ತು ಹಲವು ಹೊಸ ಮಜಲುಗಳನ್ನು ಕಾಣುವಂತಾದವು. ಹಾಗೇ ನೋಡಿದರೆ ಕನ್ನಡ ಜನಾಂಗದ ಅಭಿರುಚಿಯ ಚರಿತ್ರೆಯನ್ನೇ ವಾಸ್ತುಶಿಲ್ಪ ಬೆಳವಣಿಗೆಯಲ್ಲಿ ನೋಡಬಹುದು.
ಕ್ರಿಸ್ತಪೂರ್ವ ೩ನೆಯ ಶತಮಾನದವರೆಗೆ ನಮ್ಮ ದೇಶದ ವಾಸ್ತುಶಿಲ್ಪ ಕಲೆಯ ಮೇಲೆ ಬೀರಿದ ಪ್ರಭಾವ ಬಹುಮುಖ್ಯ ಪಾತ್ರ ವಹಿಸಿದೆ. ಸ್ತೂಪ, ಗುಹೆಗಳ ನಿರ್ಮಾಣಗಳು ವಾಸ್ತುಶಿಲ್ಪಕಲೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತಂದವು. ಚೈತ್ಯಾಲಯಗಳೂ, ವಿಹಾರಗಳೂ ಪ್ರಮುಖವಾಗಿ ರೂಪುಗೊಂಡವು. ಹಾಗೆಯೇ ಗುಹಾಂತರ ದೇವಾಲಯಗಳ ನಿರ್ಮಾಣವೂ ಉದ್ಘಾಟನೆಗೊಂಡಿತು. ಕಲ್ಲು ಗುಡ್ಡಗಳನ್ನು ಕೊರೆದು ದೇವಾಲಯಗಳನ್ನು ನಿರ್ಮಿಸುವ ಸಾಹಸವಿದು. ಬೌದ್ಧರ ವಾಸ್ತುಶಿಲ್ಪ ಕುಶಲತೆಯ ಜತೆಗೆ ಜೈನರ ಕೊಡುಗೆಯೂ ಸೇರಿತು. ವಾಸ್ತುಶಿಲ್ಪವು ಈ ಹಿಂದೆ ಕಟ್ಟಡಗಳ ನಿರ್ಮಾಣ ಉದ್ದೇಶಕ್ಕೆ ಸೀಮಿತವಾಗಿದ್ದದ್ದು `ದೇವಾಲಯಗಳ ನಿರ್ಮಾಣ’ ಎಂಬ ಅರ್ಥವ್ಯಾಪ್ತಿಯನ್ನು ಪಡೆಯಲಾರಂಭಿಸಿತು. `ಧರ್ಮ’ ತಳಹದಿಯಾದ ವಾಸ್ತುಶಿಲ್ಪ ಕಲೆ ಕನ್ನಡ ನೆಲದಲ್ಲಿ ಬೇರು ಬಿಟ್ಟಿತು. ಭಾರತದ ಇನ್ಯಾವುದೇ ಪ್ರದೇಶಕ್ಕಿಂತಲೂ ನಮ್ಮಲ್ಲಿ ಹೆಚ್ಚಿನ ವೈವಿಧ್ಯತೆ, ವಿಶೇಷತೆಗಳನ್ನು ಕಾಣಬಹುದಾಗಿರುವುದೂ ಕುತೂಹಲವನ್ನು ಉಂಟುಮಾಡುತ್ತದೆ.
ಒಂದು ರೀತಿಯಲ್ಲಿ ನಮ್ಮವರ ಉದಾತ್ತ ಅಭಿರುಚಿ ಹಾಗೂ ದೇಶದ ಇನ್ನಿತರ ಪ್ರದೇಶಗಳ ವಾಸ್ತುಶಿಲ್ಪದ ಉತ್ತಮ ಅಂಶಗಳನ್ನು ಕಸಿ ಮಾಡಿಕೊಂಡದ್ದರ ಫಲವಿದು. ಈ ವಿಶಿಷ್ಟ ವಾಸ್ತುಶಿಲ್ಪ ಕಸಿ ಕ್ರಿ. ಶ. ಸುಮಾರು ೫ನೆಯ ಶತಮಾನದಿಂದ ಇಂದಿನ ವರೆಗೂ ಮುಂದುವರೆದಿರುವುದು ಸಹಜವಾಗಿಯೇ ಇದೆ. ಚಾಲುಕ್ಯ ಪೂರ್ವಯುಗದಿಂದಾರಂಭಿಸಿ, ಚಾಲುಕ್ಯ, ಹೊಯ್ಸಳ, ವಿಜಯನಗರ, ನಾಯಕ, ಮುಸ್ಲಿಂ ಹಾಗೂ ಆನಂತರದ ಪಶ್ಚಿಮದ ಪ್ರಭಾವದ ಇಂದಿನ ಸಂದರ್ಭದ ವಾಸ್ತುಶಿಲ್ಪ ಕಲಾ ಪ್ರಕಾರಗಳು ಹಲವು ವೈಶಿಷ್ಟ್ಯಗಳೊಂದಿಗೆ ಮೂಡಿಬಂದಿವೆ. ಚಾಲುಕ್ಯರಿಗಿಂತ ಹಿಂದೆ ನಿರ್ಮಿತವಾದ ಪ್ರಾಚೀನ ದೇವಾಲಯ ವಾಸ್ತುವನ್ನು `ಕದಂಬ ಶೈಲಿ’ ಎಂದು ಕರೆಯಬಹುದಾಗಿದೆ. ಹೀಗಾಗಿ ಚಾಲುಕ್ಯಶೈಲಿಗಿಂದ ವಿಭಿನ್ನವಾದ, ಪ್ರಾಚೀನ ಶೈಲಿಯೊಂದು ಕನ್ನಡ ನಾಡಿನಲ್ಲಿತ್ತೆಂದು ಜಿ. ಎಂ. ಮೋರೇಸ್ ಹೇಳುತ್ತಾರೆ. ಅಂದರೆ ಚಾಲುಕ್ಯರ ಕಾಲಕ್ಕೆ ಹಿಂದೆಯೇ ನಡೆದಿದ್ದ ನಮ್ಮ ದೇವಾಲಯಗಳ ವಾಸ್ತು ಸೃಷ್ಟಿಯಲ್ಲಿ ಅವರಿಗಿಂತ ಹಿಂದೆ ಆಳಿದ ಶಾತವಾಹನರ ವಾಸ್ತುಶಿಲ್ಪಕಲೆ ಪ್ರಚೋದನೆ ನೀಡಿರಬಹುದು. ಅದೇ ಕಾಲದಲ್ಲಿ ಈ ಬರಹದಲ್ಲಿ ಈ ಮೊದಲು ಹೇಳಿರುವಂಥ ಬೌದ್ಧರ ಸ್ತೂಪ, ಚೈತ್ಯಾಲಯಗಳನ್ನು ನಮ್ಮ ಸಮಾಜ ಹೊಂದಿಸಿಕೊಂಡಿರಬಹುದು. ಆದರೂ ನಮ್ಮ ವಾಸ್ತುಶಿಲ್ಪಕಲೆ ಸಮೃದ್ಧವಾಗಿ ಅರಳಿದ್ದು ಚಾಲುಕ್ಯರ ಕಾಲದಲ್ಲಿ. ಐಹೊಳೆಯ ನೂರಾರು ಪ್ರಯೋಗಗಳಲ್ಲಿ ಲಾಡ್‌ಖಾನ್ ದೇವಾಲಯದ ವಾಸ್ತುವಿನ ಕಲ್ಪನೆ ಅನನ್ಯವಾದುದು. ದುರ್ಗಾದೇವಾಲಯವೂ ಅಷ್ಟೆ. ಬಾದಾಮಿ ಮಹಾಕೂಟಗಳ ಕೆಲವು ದೇವಾಲಯಗಳ ವಿನ್ಯಾಸವೂ ಗಮನಾರ್ಹ. ಇನ್ನು ಬಾದಾಮಿಯ ಗುಹಾಂತರ್ದೇವಾಲಯಗಳ ಹಿನ್ನೆಲೆ ಈ ನಿರ್ಮಾಣಕ್ಕೆ ಇದ್ದಿತಾದರೂ ಚಾಲುಕ್ಯ ಅರಸರು ಶೈವ, ವೈಷ್ಣವ ಗುಹೆಗಳನ್ನು ಕೊರೆಯಿಸಿದ್ದು ವಿಶೇಷವೇ ಆಗಿತ್ತು. ಈ ಹಾದಿಯಲ್ಲಿ ಆಕರ್ಷಕವಾಗಿ ಹೆಜ್ಜೆಯಿಟ್ಟು ನಡೆದ ರಾಷ್ಟ್ರಕೂಟರು ಎಲ್ಲೋರಾದಲ್ಲಿ ವಾಸ್ತುಶಿಲ್ಪ ಕಲೆಯ ಪರಾಕಾಷ್ಠೆಯನ್ನು ಮೆರೆದರು. ಬಾದಾಮಿಯ ಗುಹಾಂತರ್ದೇವಾಯಲಗಳಲ್ಲಿ ವಾಸ್ತುಶಿಲ್ಪ, ಶಿಲ್ಪ, ಚಿತ್ರ, ಈ ಮೂರರ ಸಂಗಮವಿದೆ. ಎಲ್ಲೋರದ ಕೈಲಾಸ ದೇವಾಲಯ, ದೇವಾಲಯ ವಾಸ್ತುಕಲೆಯ ಭವ್ಯಕಲಾಕೃತಿ. ಇಲ್ಲೂ ಶಿಲ್ಪಕಲೆಯ ಜತೆಜತೆಗೆ ಚಿತ್ರಕಲೆಯ ಪದರಗಳು ಸೂರುಗಳನ್ನು ಅಲಂಕರಿಸಿವೆ ಎಂಬುದು ಬಹುತೇಕರಿಗೆ ತಿಳಿದಿರಲಾರದು. ಹೊಯ್ಸಳರು ಚಾಲುಕ್ಯರ ವಾಸ್ತುಶಿಲ್ಪ ಕಲೆಗೆ ತಮ್ಮ ಅಸಾಮಾನ್ಯ ಶಿಲ್ಪಿಗಳ ಕುಶಲತೆಯನ್ನು ಲೇಪಿಸಿ ಹೆಚ್ಚಿನ ಸಂಖ್ಯೆಯ ದೇವಾಲಯ ಸೃಷ್ಟಿಯಿಂದಾಗಿಯೂ ನೆನಪಿನಲ್ಲುಳಿಯುತ್ತಾರೆ. ಇವರ ವಾಸ್ತುಶಿಲ್ಪ ಕಲೆಯನ್ನು ರಕ್ಷಿಸಿ, ಉಳಿಸಿದ ವಿಜಯನಗರದರಸರು ಗ್ರಾನೈಟ್ ಶಿಲೆಯಿಂದ ಇಂದಿಗೂ ಅಚ್ಚರಿಗೊಳಿಸುವ ಬೃಹದಡೆ ಹಾಗೂ ದ್ರಾವಿಡ ಶೈಲಿಯ ವೈಭವಯುತ ನೆನಪಿನ ಕಾಣಿಕೆಯಂಥ ದೇವಾಲಯ ವಾಸ್ತು ನಿರ್ಮಾಣಗಳಿಗೆ ಕಾರಣರಾದರು.
ವಿಜಯನಗರದರಸರ ಹಿಂದೂ ವಾಸ್ತುಶಿಲ್ಪ ಪೋಷಣೆ, ರಕ್ಷಣೆಯ ಸಂದರ್ಭದಲ್ಲಿಯೇ ನಮ್ಮ ನೆಲವನ್ನು ಅನಿವಾರ್ಯ ಕಾರಣಗಳಿಂದ ಆಳಲಾರಂಭಿಸಿದ್ದ ಬಹಮನಿ ಸುಲ್ತಾನರ ಕಾಲದಲ್ಲಿ `ದಖ್ಖನಿ ಶೈಲಿ’ ಯ ವಾಸ್ತುಶಿಲ್ಪಕಲೆ ಮೈದೋರಿತು. ಗುಲ್ಬರ್ಗಾ, ಬೀದರ್, ಬಿಜಾಪುರಗಳಲ್ಲಿ ಮುಸ್ಲಿಂ ವಾಸ್ತುಶಿಲ್ಪ ಅಪೂರ್ವ ರೀತಿಯಲ್ಲಿ ಸೃಷ್ಟಿಯಾಯಿತು. ಗುಲ್ಬರ್ಗಾದ `ಬಂದೇ ನವಾಝ್ ದರ್ಗಾ’, `ಜಾಮಿ ಮಸೀದಿ’, ಬೀದರ್‌ನ `ರಂಗೀನ್ ಮಹಲ್’, `ದರ್ಬಾರ್ ಮಹಲ್’, ಬಿಜಾಪುರದ `ಇಬ್ರಾಹಿಂ ರೋಜಾ’, `ಗೋಲ್ ಗುಂಬಜ್’ ಇತ್ಯಾದಿಗಳು ಇಂದು ವಿಖ್ಯಾತ. ವಿಜಯನಗರದರಸರ ಸಹವರ್ತಿಗಳಾಗಿದ್ದ ನಾಯಕರು, ಮೈಸೂರು, ಇಕ್ಕೇರಿ, ಸುರಪುರ, ಕೆಳದಿ, ಶ್ರೀರಂಗಪಟ್ಟಣಗಳ ದೇವಾಲಯ ಹಾಗೂ ಇನ್ನಿತರ ವಾಸ್ತುಗಳನ್ನು ವಿಶಿಷ್ಟ ರೀತಿಯಲ್ಲಿ ನಿರ್ಮಿಸಿದರು. ಇದೇ ಸಂದರ್ಭದಲ್ಲಿ ಕ್ರಿಶ್ಚಿಯನ್ ಚರ್ಚ್‌ಗಳ ವಾಸ್ತುಶಿಲ್ಪವೂ ಗಣನೀಯ.
ಬ್ರಿಟೀಷ್ ಆಳ್ವಿಕೆಯ ವಸಾಹತುಶಾಹೀ ಸಂದರ್ಭದ ವಾಸ್ತುಶಿಲ್ಪವು ಹೆಚ್ಚಿನ ರೀತಿಯಲ್ಲಿ `ಉಪಯುಕ್ತತೆ’ಗೇ ಹೆಚ್ಚಿನ ಒಲವು ನೀಡಿ ಮುಂದಡಿಯಿಟ್ಟಿತು. ವಾಸ್ತುಶಿಲ್ಪಿಗಳು, ಶಿಲ್ಪಿಗಳು ಅವರ ವಾಸ್ತುಶಿಲ್ಪ ಕಲ್ಪನೆಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿದ್ದರು. ಸ್ವಾತಂತ್ರ್ಯಾನಂತರದ ನಮ್ಮ ವಾಸ್ತುಶಿಲ್ಪ ಕಲ್ಪನೆ ವಸಾಹತುಶಾಹೀ ಪ್ರಭಾವದಿಂದ ಮುಕ್ತಗೊಳ್ಳದೇ ಅದೇ ನೆರಳಿನಲ್ಲಿ ಉಸಿರಾಡುತ್ತಿತ್ತು. ಆದರೆ ಪರಿಸರ, ಭೂದೃಶ್ಯಗಳಿಗೆ ವಾಸ್ತುವನ್ನು ಹೊಂದಿಸುವ ಪರಂಪರೆ, ದೇಶೀ ಅನುಭವಗಳಿಗೆ, ದೊರೆತ ಪ್ರಾಮುಖ್ಯತೆ ಇತ್ಯಾದಿ ಕಾರಣಕ್ಕಾಗಿ, ಪಶ್ಚಿಮ ರಾಷ್ಟ್ರಗಳೇ ಅಲ್ಲದೆ ಯೂರೋಪಿನ ದೇಶಗಳ ವಾಸ್ತುಶಿಲ್ಪ ಅಧ್ಯಯನದ ಫಲಗಳು, ಪ್ರಭಾವಗಳು ನಮ್ಮ ನೆಲಕ್ಕೆ ಪೂರಕವಾಗಿ ಒಗ್ಗಿಸುವ ಪ್ರಯತ್ನಗಳು ಉತ್ತರ ಭಾರತದಲ್ಲಿ ಹೆಚ್ಚು ಹೆಚ್ಚು ಕಾಣಿಸಿಕೊಂಡಿತು. ಆ ಗಾಳಿ ನಮ್ಮಲ್ಲಿಗೂ ಬೀಸಿ ಇಂದು ನಮ್ಮ ಸಮಕಾಲೀನ ಸಂವೇದನೆಯ ವಾಸ್ತುಶಿಲ್ಪಿಗಳು ಉಪಯುಕ್ತತೆಯ ಜತೆಗೆ ಪರಿಸರಕ್ಕೆ ಹೊಂದಿಕೊಳ್ಳುವಂತೆಯೂ ಕಟ್ಟಡಗಳ ಕಲ್ಪನೆ ಹಾಗೂ ಸೃಷ್ಟಿಗಳಲ್ಲಿ ತೊಡಗಿದ್ದಾರೆ. ಭೌಗೋಳೀಕರಣ ಹಾಗೂ ನವ-ವಸಾಹತುಶಾಹೀ ಪ್ರವೃತ್ತಿಯ ಹಿನ್ನೆಲೆಯೂ ಇಂದಿನ ೨೧ನೆಯ ಶತಮಾನದ ವಾಸ್ತುಶಿಲ್ಪ ಹುಟ್ಟಿಕೊಳ್ಳುತ್ತಿದೆ. ಇಂದು ಕಮಾಡಿಟಿಯಾದ ಇದನ್ನು `ಕಲೆ’ ಎಂದು ಒಪ್ಪಿಕೊಳ್ಳದ, ಹೆಚ್ಚಿನ `ಸರಳೀಕರಣ’ದ ಮೊರೆಹೋಗುವ ವಾಸ್ತುಶಿಲ್ಪಿಗಳು `ರಕ್ಷಣೆ’ಗೂ ಒತ್ತುಕೊಡುತ್ತಾರೆ. ಇಲ್ಲಿ ಕಲೆಯು ಕಟ್ಟಡದ ಉದ್ದೇಶ ಸಾಧಿಸುವುದರ ಜತೆಗೆ ಕಣ್ಣಿಗೂ ಕೆಲಸ ನೀಡುವ ದೃಷ್ಟಿಯಲ್ಲಿ ನಡೆಯಬೇಕಾಗಿದೆ. ಖ್ಯಾತ ಚಿತ್ರಕಾರ ಕೆ. ಟಿ. ಶಿವಪ್ರಸಾದ್‌ರಂಥವರೂ ವಾಸ್ತುಶಿಲ್ಪ ವಿನ್ಯಾಸ, ನಿರ್ಮಾಣ ಇತ್ಯಾದಿಗಳಲ್ಲಿ ತೊಡಗಿರುವುದು ಆಶಾದಾಯಕ. ನಗರೀಕರಣದ ಇಂದಿನ ಬದುಕಿನ ನಡುವೆ ಹಲವು ಅಂತಸ್ತುಗಳ ಅಸಾಮಾನ್ಯ ವಿನ್ಯಾಸ, ನಿರ್ಮಾಣದ ವಾಸ್ತುಶಿಲ್ಪಗಳು ನಮ್ಮ ನಡುವೆ ತಲೆ ಎತ್ತಿ ನಿಲ್ಲುತ್ತವೆ.
[೨೦೦೧]
ನೋಡಿ: ಕರ್ನಾಟಕ ಚಿತ್ರಕಲಾ ಪರಂಪರೆ : [http://vishvakannada.com/node/178|ಭಾಗ ೧]