ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ ಮಾಹಿತಿ

– ನಾಗೇಶ ಹೆಗಡೆ

ಈ ಲೇಖನವನ್ನು ನಾನು ಮಾರುಗೊಂಡನಹಳ್ಳಿಯ ಒಂದು ಕುಟೀರದಲ್ಲಿ ಕೂತು ಬರೆದು ಇಂದೇ ಬೆಂಗಳೂರಿನಲ್ಲಿರುವ ಮಾಧ್ಯಮ ಅಕಾಡೆಮಿಗೆ ರವಾನಿಸಬೇಕಿದೆ. ಕೈಬರಹದ ರೂಢಿ ಎಂದೋ ತಪ್ಪಿ ಹೋಗಿದೆ. ಹಾಗೆ ಒಂದೊಮ್ಮೆ ಪೆನ್ ಹಿಡಿದು ಬರೆದರೂ ಇಲ್ಲಿ ಕೊರಿಯರ್ ಸೇವೆ ಇಲ್ಲ. ಕಂಪ್ಯೂಟರ್ ಕೀಬೋರ್ಡ್ನಲ್ಲಿ ಬರೆಯೋಣವೆಂದರೆ ವಿದ್ಯುತ್ ಇಲ್ಲ. ಆದ್ದರಿಂದ ಲ್ಯಾಪ್ಟಾಪ್ನಲ್ಲಿ ಬ್ಯಾಟರಿ ಸಹಾಯದಿಂದ ಬರೆಯಬೇಕಿದೆ.

ಬರೆದು ಮುಗಿಸುತ್ತೇನೆ ಅನ್ನಿ. ಆದರೆ ಈ ಹಳ್ಳಿಯಲ್ಲಿ ಟೆಲಿಫೋನ್ (ಲ್ಯಾಂಡ್ಲೈನ್) ಸೌಕರ್ಯ ಇಲ್ಲ. ಮೊಬೈಲ್ಗಳ ಈ ಯುಗದಲ್ಲಿ ಲ್ಯಾಂಡ್ಲೈನ್ ಯಾರು ಕೇಳುತ್ತಾರೆ? ಆ ವ್ಯವಸ್ಥೆ ಇದ್ದಿದ್ದರೆ ನಾನು ನಿಶ್ಚಿಂತೆಯಿಂದ ಈ-ಮೇಲ್ ಮೂಲಕ ಇದನ್ನು ರವಾನಿಸಬಹುದಿತ್ತು. ಮೊಬೈಲ್ ಮೂಲಕ ಇಂಟರ್ನೆಟ್ ಸೇವೆಯನ್ನು ಪಡೆಯಬಹುದಾದರೂ ಈ ಹಳ್ಳಿಯಲ್ಲಿ ಮೊಬೈಲ್ ಟವರ್ ಇಲ್ಲದ್ದರಿಂದ ಮಾತು ಆಗಾಗ ಕಟ್ ಆಗುತ್ತಿರುತ್ತದೆ. ಅದರ ಮೂಲಕ ಇಂಟರ್ನೆಟ್ ಸಂಪರ್ಕ ಸಿಕ್ಕರೂ ಅರ್ಧಕ್ಕೇ ತುಂಡಾಗುವ ಸಂಭವ ಇದೆ.

ಬೆಂಗಳೂರಿನಲ್ಲಿ ಕೆಲವು ವೈಫೈ ಕ್ಷೇತ್ರಗಳಿವೆ. ವಿಮಾನ ನಿಲ್ದಾಣ, ವಿಧಾನ ಸೌಧ, ಐಟಿ ಕಾರಿಡಾರ್, ಸೈನ್ಸ್ ಕ್ಯಾಂಪಸ್ ಮತ್ತು ಕೆಲವು ಪಂಚತಾರಾ ಹೊಟೆಲ್ಗಳ ಸುತ್ತ ಉದ್ಯಾನದಲ್ಲಿ ಕೂತಿದ್ದರೂ ನನ್ನ ಈ ಲ್ಯಾಪ್ಟಾಪ್ನಿಂದ ನೇರವಾಗಿ ಈ ಲೇಖನವನ್ನು ಗಾಳಿಯಲ್ಲಿ ತೇಲಿಬಿಡಬಹುದಿತ್ತು. ತಂತಿಯ ಸಂಪರ್ಕ ಇಲ್ಲದೆ ವೈಫೈ (ವಯರ್ಲೆಸ್ ಫಿಡೆಲಿಟಿ) ವ್ಯವಸ್ಥೆಯಿಂದಾಗಿ ಅದು ಮಾಧ್ಯಮ ಅಕಾಡೆಮಿಯ ಇ-ಮೇಲ್ ವಿಳಾಸಕ್ಕೆ ಸೇರುತ್ತಿತ್ತು. ಆದರೆ ನಾನಿದ್ದ ಹಳ್ಳಿಯಲ್ಲಿ ಅದೆಲ್ಲಿ ಬರಬೇಕು?

ಇಂಥ ತುರ್ತು ಸ್ಥಿತಿಗೆಂದೇ ನಾನು ನನ್ನ ಲ್ಯಾಪ್ಟಾಪ್ ಕಂಪ್ಯೂಟರ್ಗೆ ಒಂದು ಮಾಡೆಮ್ ಕಾರ್ಡ್ ತಂದು ಸಿಕ್ಕಿಸಿಕೊಂಡಿದ್ದೇನೆ. ತುಂಬ ದುಬಾರಿ ಕಾರ್ಡ್ ಅದು; ಬೆಂಗಳೂರಿನಿಂದ ಕೇವಲ ೨೫ ಕಿಮೀ ದೂರ ಇರುವ ಈ ಹಳ್ಳಿಯಲ್ಲಿ ಬಿಸಿಲೊಂದನ್ನು ಬಿಟ್ಟರೆ ಇನ್ನುಳಿದ ಎಲ್ಲಕ್ಕೂ ಭಾರೀ ಬೆಲೆ ತೆರಬೇಕು, ಆ ಮಾತು ಬಿಡಿ. ನನ್ನ ಲ್ಯಾಪ್ಟಾಪ್ಗೆ ಸಿಕ್ಕಿಸಿದ ಈ ಮಾಡೆಮ್ ಕಾರ್ಡ್ಗೆ ಒಂದು ಪುಟ್ಟ ಆಂಟೆನಾ ಇದೆ. ಅದು ನನ್ನ ಈ ಲೇಖನವನ್ನು ಸೂಕ್ಷ್ಮ ತರಂಗಗಳ ರೂಪದಲ್ಲಿ ಪರಿವರ್ತಿಸಿ, ವಿದ್ಯುತ್ ಕಾಂತೀಯ ಅಲೆಗಳ ಮೂಲಕ ಯಾವುದೋ ಉಪಗ್ರಹದ ಟ್ರಾನ್ಸ್ಪಾಂಡರ್ನ ಒಳಕ್ಕೆ ತೂರಿಸಿ ಅಲ್ಲಿಂದ ಭೂಮಿಗೆ ರವಾನಿಸಿ ಟವರ್ಗಳ ಮೂಲಕ ಮಾಧ್ಯಮ ಅಕಾಡೆಮಿಯ ಇ-ಮೇಲ್ ವಿಳಾಸಕ್ಕೆ ತಲುಪಿಸುತ್ತದೆ; ಕ್ಷಣಾರ್ಧದಲ್ಲಿ.

ಓದುತ್ತಿದ್ದೀರಲ್ಲ? ಈವರೆಗೆ ಬರೆದ ಇವಿಷ್ಟರಲ್ಲಿ ವಿಜ್ಞಾನ ಎಷ್ಟಿದೆ? ಇದು ವಿಜ್ಞಾನ ಸಾಹಿತ್ಯವೆ? ಪರೀಕ್ಷೆ ಮಾಡೋಣ.
ನನ್ನ ಕುಟೀರದ ಎದುರಿನ ಹೊಲದಲ್ಲಿ ರಾಮಯ್ಯ ಎಂಬ ರೈತ ಉಳುಮೆ ಮಾಡುತ್ತಿದ್ದಾನೆ. ಆತ ಆಗಾಗ ತನ್ನ ಎತ್ತುಗಳಿಗೆ ನೀರು ಕುಡಿಸಲೆಂದು ನನ್ನ ಪುಟ್ಟ ಕೃಷಿಹೊಂಡದ ಬಳಿ ಬರುತ್ತಾನೆ. ಅದೂ ಇದೂ ತುಸು ಲೋಕಾಭಿರಾಮ ಮಾತನಾಡುತ್ತಾನೆ. ಅವನಿಗೆ ಈ ಲೇಖನದ ಇಷ್ಟು ಭಾಗವನ್ನು ಓದಿ ಹೇಳುತ್ತೇನೆ. ಆತ ಈವರೆಗೆ ಲ್ಯಾಪ್ಟಾಪ್ ಕಂಪ್ಯೂಟರನ್ನು ನೋಡಿದ್ದೇ ಇಲ್ಲ. ಹಾಗಾಗಿ ಇದರಲ್ಲಿ ಬರೆದ ಇ-ಮೇಲ್ ಅಥವಾ ಮಾಡೆಮ್ ಕಾರ್ಡ್ ಆತನಿಗೆ ಏನೂ ಅರ್ಥವಾಗಲು ಸಾಧ್ಯವೇ ಇಲ್ಲ. `ಬತ್ತೀನಿ ವಡಿಯಾ, ಮಗ ಮಿಷ್ಕಾಲ್ ಕೊಟ್ಟವ್ನೆ-ವಸಿ ಮನೀ ತವಾ ವೋಗ್ಬೇಕು’ ಎಂದು ಹೇಳಿ ಆತ ಮೆಲ್ಲಗೆ ಜಾರಿಕೊಳ್ಳುತ್ತಾನೆ.

ರಾಮಯ್ಯನ ಪಾಲಿಗೆ ಇದು ಅರ್ಥವಾಗದ ಬರಹ. ಇದನ್ನೇ ಕನ್ನಡದ ಐಟಿ ಗೆಳೆಯ ಡಾ. ಪವನಜನಿಗೆ ತೋರಿಸಿ, `ಹೇಗಿದೆ?’ ಕೇಳುತ್ತೇನೆ. `ಏನಿಲ್ಲ, ಬೆಂಗಳೂರಿಗೆ ವೈಫೈ ವ್ಯವಸ್ಥೆ ಬಂದು ಮೂರು ವರ್ಷ ಆಗಿದೆ. ಆ ಹಳೇ ಸುದ್ದೀನೇ ಅತ್ಯಾಶ್ಚರ್ಯ ಅನ್ನೋ ಹಾಗೆ ನಿಮ್ಮ ಟಿಪಿಕಲ್ ಶೈಲಿಯಲ್ಲಿ ಬರೆದಿದ್ದೀರಿ ಅಷ್ಟೆ. ನೀವು ಮೊನ್ನೆ ಹಾಕಿಸಿಕೊಂಡ ಮಾಡೆಮ್ ಕಾರ್ಡ್ ಈಗಾಗಲೇ ಔಟ್ಡೇಟೆಡ್ ಆಗಿದೆ’ ಎಂದು ಹೇಳಿ ಹೊರಡುತ್ತಾನೆ.

ಈಗ ಹೇಳಿ, ನಾನು ಯಾರಿಗಾಗಿ ಬರೆಯಬೇಕು? ಹಳ್ಳಿಯವನಿಗೆ ಅರ್ಥ ಆಗೋದಿಲ್ಲ; ನಗರದಲ್ಲಿ ವೆಬ್ ಸರ್ಫಿಂಗ್ ಮಾಡುವ ಕನ್ನಡಿಗನಿಗೆ ಇದು ನಿರರ್ಥಕ ಬರಹ.

ಕನ್ನಡ ಮಾಧ್ಯಮಗಳಲ್ಲಿ ವಿಜ್ಞಾನ ಮಾಹಿತಿಗಳನ್ನು ನೀಡುವವರ ಸಂದಿಗ್ಧ ಇದು. ರಾಜಕೀಯ, ಸಿನಿಮಾ, ಅಪರಾಧ, ಕೆಲವು ಬಗೆಯ ಆಟೋಟಗಳಿಗೆ ಸಂಬಂಧಿಸಿದ ಸುದ್ದಿಗಳಾದರೆ ಎಲ್ಲರಿಗೂ ಅರ್ಥವಾಗುತ್ತವೆ. ವಿಜ್ಞಾನ, ತಂತ್ರಜ್ಞಾನದ ವಿಷಯಗಳಾದರೆ ತೀರಾ ದುರ್ಬಲ ದ್ರಾವಣದ ರೂಪದಲ್ಲಿ ನಿರೂಪಿಸಬೇಕು. ಹಾಗೆ ಮಾಡಿದರೆ ಅದು ಪರಿಣತರಿಗೆ ತೀರಾ ನೀರಸವಾಗಿ ಕಾಣುವ ಸಂಭವ ಇರುತ್ತದೆ. ವಿಜ್ಞಾನವೊಂದೇ ಅಲ್ಲ, ಎಲ್ಲ ಬಗೆಯ ಅಗ್ರಶ್ರೇಣಿಯ ಜ್ಞಾನಗಳಿಗೂ ಇದು ಅನ್ವಯಿಸುತ್ತದೆ. ಅದು ಅಂತರರಾಷ್ಟ್ರೀಯ ಹಣಕಾಸು ವಿಚಾರ ಇರಬಹುದು, ತರ್ಕಶಾಸ್ತ್ರ ಇರಬಹುದು ಇಲ್ಲವೆ ನದಿನೀರಿನ ಹಂಚಿಕೆ ಕುರಿತ ಕಾನೂನು ಇರಬಹುದು. ಏರ್ಲೈನ್ಸ್ ಮ್ಯಾನೇಜ್ಮೆಂಟ್ ವಿಚಾರ ಇರಬಹುದು. ಅಥವಾ ಋಗ್ವೇದದಲ್ಲಿ ಬರುವ ಪೃಥ್ವೀಸೂಕ್ತದ ಭಾಷ್ಯ ಇರಬಹುದು. ವಿಶೇಷ ಜ್ಞಾನಕ್ಕೆ ಗಿರಾಕಿಗಳು ಕಮ್ಮಿ.

ಈಚಿನ ದಶಕಗಳಲ್ಲಿ ವಿಜ್ಞಾನ ಅದೆಷ್ಟು ಸಂಕೀರ್ಣವಾಗಿದೆ ಎಂದರೆ, ಇಂದು ಭೌತ ವಿಜ್ಞಾನಕ್ಕೆ ಸಂಬಂಧಿಸಿದ ಮಹತ್ವದ ಘಟನೆ ಏನಾದರೂ ಸಂಭವಿಸಿದರೆ ಅದು ಜೀವ ವಿಜ್ಞಾನಿಗೆ ಅರ್ಥವಾಗುವುದಿಲ್ಲ. ಭೌತ ವಿಜ್ಞಾನದಲ್ಲೂ `ಪಾರ್ಟಿಕಲ್ ಪಿಸಿಕ್ಸ್’ ತಜ್ಞನಿಗೆ `ಸಾಲಿಡ್ ಸ್ಟೇಟ್ ಫಿಸಿಕ್ಸ್’ನ ಬೆಳವಣಿಗೆಗಳು ಅರ್ಥವಾಗುವುದು ಕಷ್ಟ. `ಪಾರ್ಟಿಕಲ್ ಫಿಸಿಕ್ಸ್’ನಲ್ಲೂ ಹತ್ತಾರು ಶಾಖೆಗಳಾಗಿರುವುದರಿಂದ ಅದರಲ್ಲೂ ಎಲ್ಲ ಸಂಗತಿಗಳೂ ಎಲ್ಲರಿಗೂ ಅರ್ಥವಾಗುತ್ತದೆ ಎನ್ನುವಂತಿಲ್ಲ. ಜೀವ ವಿಜ್ಞಾನದಲ್ಲೂ ಅಷ್ಟೆ. ಒಬ್ಬ ಪಂಡಿತ ಗಳಿಸಿದ ಜ್ಞಾನವನ್ನು ಇನ್ನೊಬ್ಬ ಅರ್ಥ ಮಾಡಿಕೊಳ್ಳಬೇಕೆಂದರೆ ಆತನೂ ಅದೇ ವಿಷಯದಲ್ಲಿ ಅಷ್ಟೇ ಆಳಕ್ಕಿಳಿದು ಅಧ್ಯಯನ ಮಾಡಬೇಕಾಗುತ್ತದೆ. ವಿಜ್ಞಾನದ ಶಾಖೋಪಶಾಖೆಗಳು ಎಲ್ಲರ ಕೈಮೀರಿ ಬೆಳೆಯುತ್ತಿವೆ. ಅದು ಬೆಳೆದಷ್ಟೂ ತನ್ನದೇ ತಾಂತ್ರಿಕ ಭಾಷೆಯನ್ನು ರೂಪಿಸಿಕೊಳ್ಳುತ್ತ ಬೆಳೆಯುತ್ತದೆ. ಹಾಗಾಗಿ ಜನಸಾಮಾನ್ಯರಿಗೆ ಅದು ಅರ್ಥವಾಗುವುದಿಲ್ಲ. ಇಂಗ್ಲಿಷ್ ಗೊತ್ತಿದ್ದವರಿಗೂ ಅದು ಅರ್ಥವಾಗುವುದಿಲ್ಲ. ವಿಜ್ಞಾನದ ಬೇರೊಂದು ಶಾಖೆಯ ಪಂಡಿತನಿಗೂ ಅರ್ಥವಾಗುವುದಿಲ್ಲ.

ಈ ಸಂದಿಗ್ಧದಲ್ಲಿ ಜನಸಾಮಾನ್ಯರಿಗೆ ವಿಜ್ಞಾನ ಸಂಬಂಧಿ ಮಾಹಿತಿಗಳನ್ನು ನೀಡುವುದೆಂದರೆ ಅದು ದೊಡ್ಡ ಸವಾಲಾಗುತ್ತದೆ. ವಿಜ್ಞಾನ ಜಗತ್ತಿನಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಗಮನಿಸುತ್ತಿರುವುದೇ ಒಂದು ದೊಡ್ಡ ಸಾಹಸದ ಕೆಲಸವಾಗುತ್ತದೆ. ಒಂದೆಡೆ ನ್ಯಾನೊ ಟೆಕ್ನಾಲಜಿ, ಇನ್ನೊಂದೆಡೆ ಕಂಪ್ಯೂಟರ್ ಟೆಕ್ನಾಲಜಿ, ಮೂರನೆಯ ದಿಕ್ಕಿನಲ್ಲಿ, ಬಯೊಟೆಕ್ನಾಲಜಿ, ಮೇಲ್ಗಡೆ ಖಗೋಲ ವಿಜ್ಞಾನ, ಕೆಳಗಡೆ ಸೀಬೆಡ್ ಮೈನಿಂಗ್, ಮಿಥೇನ್ ಹೈಡ್ರೇಟ್, ಒಳಗಡೆ ಮೆಡಿಕಲ್ ಟೆಕ್ನಾಲಜಿ, ಹೊರಗಡೆ ಮಟೀರಿಯಲ್ ಸೈನ್ಸ್…. ಎಲ್ಲವೂ ಬೆನ್ ಜಾನ್ಸನ್ ವೇಗದಲ್ಲಿ ಧಾವಿಸುತ್ತಿವೆ. ಅವುಗಳ ಮೇಲೆ ನಿಗಾ ಇಡಲಿಕ್ಕೆ ಇಂಗ್ಲಿಷ್ ಮಾಧ್ಯಮಗಳಿಗೂ ಕಷ್ಟದ ಕೆಲಸವೇ ಆಗುತ್ತಿದೆ.

ಕನ್ನಡ ಪತ್ರಿಕೆಗಳು ವಿಜ್ಞಾನ ಸಂಬಂಧಿ ಸುದ್ದಿಗಳಿಗೆ ಅದೆಷ್ಟು ಮಹತ್ವ ನೀಡುತ್ತವೆ ಎಂಬುದನ್ನು ನೋಡಬೇಕಾದರೆ ಬೇರೆ ಭಾಷೆಗಳ ಪತ್ರಿಕೆಗಳೊಂದಿಗೆ ನಮ್ಮ ಪತ್ರಿಕೆಗಳನ್ನು ಹೋಲಿಸಿ ನೋಡಬೇಕಾಗುತ್ತದೆ. ಸುಲಭವಾಗಿ ಹೋಲಿಕೆಗೆ ಸಿಗುವುದು ಇಂಗ್ಲಿಷ್ ಭಾಷೆಯ ಪತ್ರಿಕೆಗಳು ಮಾತ್ರ. ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲಿಷ್ ಭಾಷೆಯಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪ್ರೊಫೆಶನಲ್ ಪತ್ರಿಕೆಗಳನ್ನು ಇಲ್ಲಿ ಹೋಲಿಕೆಗೆ ಪರಿಗಣಿಸುವಂತಿಲ್ಲ. ಇಂಟರ್ನೆಟ್ನಲ್ಲಿ `ಸೈನ್ಸ್ ಡೇಲಿ’ `ಸೈನ್ಸ್ ಟುಡೇ’ ಮುಂತಾದವು ಗಂಟೆಗಂಟೆಗೂ ಮಾಹಿತಿಗಳ ಮಹಾಪೂರವನ್ನು ಹರಿಸುತ್ತಿವೆ. ಅಂಥ ಸುದ್ದಿಮೂಲಗಳನ್ನು ಜಾಲಾಡಿ, ಜನರಿಗೆ ಆಸಕ್ತಿ ಇರುವ ಮಹತ್ವದ ಬೆಳವಣಿಗೆಗಳನ್ನು ಮಾತ್ರ ಎತ್ತಿ ಕೊಡುವ ರಾಯಿಟರ್ಸ್, ಎಪಿ, ಎಎಫ್ಪಿ ಮುಂತಾದ ಸುದ್ದಿ ಸಂಸ್ಥೆಗಳನ್ನೂ ಇಲ್ಲಿ ಹೋಲಿಸುವಂತಿಲ್ಲ. ಈ ಸುದ್ದಿ ಸಂಸ್ಥೆಗಳಿಂದ ಬರುವ ಮಾಹಿತಿಗಳಲ್ಲೂ ಕೇವಲ ಶೇಕಡಾ ೨೦-೩೦ ಭಾಗಗಳನ್ನು ಮಾತ್ರ ಇಂಗ್ಲಿಷ್ ದಿನಪತ್ರಿಕೆಗಳು ಎತ್ತಿಕೊಂಡು ಮುದ್ರಿಸುತ್ತವೆ. ಕನ್ನಡದಲ್ಲಿ ಇನ್ನೂ ಕಡಿಮೆ. ಎಂಟನೇ ಪುಟದ ಮೂಲೆಯಲ್ಲಿ ವಾರಕ್ಕೆ ಒಂದೆರಡು ಸುದ್ದಿ ತುಣುಕುಗಳನ್ನು ನೀಡಿದರೆ ಹೆಚ್ಚು. ಶನಿ ಗ್ರಹದ ಉಂಗುರದ ಮೂಲಕ ಕ್ಯಾಸಿನಿ ಶೋಧನೌಕೆ ಹಾದು ಹೋಗುತ್ತಿರುವಂಥ ಉತ್ತಮ, ನಾಟಕೀಯ ದೃಶ್ಯಗಳ ತುಣುಕು ಸಿಕ್ಕರೆ ನಮ್ಮ ಕನ್ನಡ ಟಿವಿ ಚಾನೆಲ್ಗಳೂ ಬಿತ್ತರಿಸುತ್ತವೆ. ಕೊರಿಯಾ ದೇಶದ ಅತ್ಯುನ್ನತ ವಿಜ್ಞಾನಿ ವಿಜ್ಞಾನದ ಹೆಸರಿನಲ್ಲಿ ವಂಚನೆ ಮಾಡಿ ಸಿಕ್ಕಿಬಿದ್ದರೆ, ಆ ಸಂಗತಿಯನ್ನು ಬಿಬಿಸಿ, ಸಿಎನ್ಎನ್ಗಳು ದಿನಕ್ಕೆ ಐದಾರು ಬಾರಿ ಬಿತ್ತರಿಸಿದರೆ ನಮ್ಮ ಮಾಧ್ಯಮಗಳೂ ಅವನ್ನು ಮರುಪ್ರಸಾರ ಮಾಡುತ್ತವೆ.

ಅದೂ ಎಷ್ಟೋ ಬಾರಿ ಕೈತಪ್ಪಿ ಹೋಗುತ್ತದೆ. ಅದು ತೀರ ಮಹತ್ವದ ಸುದ್ದಿ ಎಂದು ವಾರ್ತಾ ಏಜನ್ಸಿಗಳು ಆರಂಭದಲ್ಲೇ ಬರೆದಿದ್ದರೆ ಮಾತ್ರ ಕನ್ನಡ ಮಾಧ್ಯಮಗಳ ಚೀಫ್ಸಬ್ಗಳು ಅವನ್ನು ಭಾಷಾಂತರ ಮಾಡಿಸುತ್ತಾರೆ. ಇಲ್ಲಾಂದರೆ ಅವು ಕಸದ ಬುಟ್ಟಿ ಅಥವಾ ರೀಸೈಕಲ್ ಬಿನ್ಗೆ ಸೇರುವ ಸಂಭವ ಹೆಚ್ಚಾಗಿರುತ್ತದೆ. ನಮ್ಮ ಸಬ್ ಎಡಿಟರ್ಗಳು ಇಂಗ್ಲಿಷ್ನ ತಾಂತ್ರಿಕ ಪದಗಳು ಬಂದಾಗಲೆಲ್ಲ ಬೆದರುತ್ತಾರೆ; ನಿಘಂಟುಗಳಿಗೆ ತಡಕಾಡುತ್ತಾರೆ. ಹೆವಿ ವಾಟರ್, ಎನ್ರಿಚ್ಮೆಂಟ್ನಂಥ ಹಳೇ ಪದಗಳು ಕನ್ನಡ ನಿಘಂಟುಗಳಲ್ಲಿ ಇರುವುದಿಲ್ಲ. ಇನ್ನು ಸ್ಟೆಮ್ಸೆಲ್, ಬ್ಲೂಟೂಥ್ನಂಥ ಹೊಸ ಪದಗಳು ಹಳೇ ಇಂಗ್ಲಿಷ್ ನಿಘಂಟುಗಳಲ್ಲೂ ಸಿಗುವುದಿಲ್ಲ.

ಅಂದರೆ, ನಾವು ವಿಜ್ಞಾನ ಸಂವಹನದ ಎರಡನೇ ಅಡೆತಡೆಯ ಬಳಿ ಬಂದಿದ್ದೇವೆ. ವಿಜ್ಞಾನ ಎಂಬುದು ವಜ್ರದ ಕಡಲೆ ಎಂಬುದು ಮೊದಲನೆಯ ಅಡೆತಡೆ. ಎರಡನೆಯದಾಗಿ, ಅದನ್ನು ತುಸು ಸರಳಗೊಳಿಸಬಲ್ಲ ನಿಘಂಟುಗಳು, ಆಕರ ಗ್ರಂಥಗಳು ಲಭ್ಯವಿಲ್ಲ.

ಈಗ ಮೂರನೆಯ ಅಡೆತಡೆಗೆ ಬರೋಣ: ವಿಜ್ಞಾನದ ಮಾಹಿತಿ ಧಾರೆ ಯಾವಾಗಲೂ ಪಶ್ಚಿಮದಿಂದ ಪೂರ್ವಕ್ಕೆ, ಮೇಲಿನಿಂದ ಕೆಳಕ್ಕೆ ಹರಿಯುತ್ತಿರುತ್ತದೆ. ಸ್ಟ್ಯಾನ್ಫೋರ್ಡ್ ಯುನಿವರ್ಸಿಟಿಯ ಯಾವುದೋ ತಜ್ಞನೊಬ್ಬ ಪ್ರೋಟಾನ್ನ ಅವಸಾನ ಸ್ಥಿತಿಯನ್ನು ತನ್ನ ಉಪಕರಣದಲ್ಲಿ ದಾಖಲು ಮಾಡಿದರೆ ಅದು ಸುದ್ದಿಯಾಗುತ್ತದೆ. ನಮ್ಮ ಮಧ್ಯಪ್ರದೇಶದ ಹಳ್ಳಿಯ ಎಂಜಿನಿಯರೊಬ್ಬ ತನ್ನ ಊರಿನ ಕೆರೆಯ ಜೊಂಡು ಕಳೆಯನ್ನೇ ಕೊಳೆಯಿಸಿ ಶಕ್ತಿ ಉತ್ಪಾದನೆ ಮಾಡಿ, ಅದೇ ಜೊಂಡಿನ ನಾರಿನಿಂದ ಕಾಗದ ತಯಾರಿಸಿದರೆ ಅದು ಸುದ್ದಿಯಾಗುವುದಿಲ್ಲ. ನಮ್ಮವರ ಬದುಕಿಗೆ ಹತ್ತಿರವಾದ, ಅವರ ಜೀವನಮಟ್ಟವನ್ನು ತುಸುಮಟ್ಟಿಗೆ ಸುಧಾರಿಸಬಲ್ಲ ವಿಜ್ಞಾನ ತಂತ್ರಜ್ಞಾನ ವಾರ್ತೆಗಳು ಬೆಳಕು ಕಾಣುವ ಸಂಭವ ತೀರ ಕಮ್ಮಿ.

ನಾವು ವಿಜ್ಞಾನ ತಂತ್ರಜ್ಞಾನದಲ್ಲಿ ಪಾಶ್ಚಾತ್ಯರಷ್ಟು ಮುಂದುವರೆದಿಲ್ಲ ಆದ್ದರಿಂದಲೇ ಭಾರತೀಯ ವಿಜ್ಞಾನದ ವಾರ್ತೆಗಳು ಬರುವುದೇ ತೀರ ಅಪರೂಪ ಎಂಬ ವಾದವನ್ನು ಎಲ್ಲರೂ ಸುಲಭವಾಗಿ ಮಂಡಿಸುತ್ತಾರೆ. ಅದು ನಿಜ, ಭಾರತೀಯ ವಿಜ್ಞಾನದ ವಾರ್ತೆಗಳು ಪತ್ರಿಕೆಗಳಲ್ಲಿ ಅಪರೂಪಕ್ಕೆ ಬರುತ್ತವೆ. ಎಲ್ಲೋ ಪೋಖ್ರಾನ್ನಲ್ಲಿ ಸ್ಫೋಟಕವನ್ನು ಸಿಡಿಸಿದರೆ ಅಥವಾ ಅಗ್ನಿ ಕ್ಷಿಪಣಿಯನ್ನು ಚಿಮ್ಮಿದರೆ ನಮ್ಮ ವಿಜ್ಞಾನಿಗಳ ಸಾಹಸಗಳು ಮೊದಲ ಪುಟದಲ್ಲೇ ಬರುತ್ತವೆ. ಯಾಕೆ ಬರುತ್ತವೆ ಎಂದರೆ, ರೆಡಿಮೇಡ್ ಸುದ್ದಿಯನ್ನು ಪ್ಲೇಟ್ನಲ್ಲಿ ಇಟ್ಟು ಮಾಧ್ಯಮಗಳಿಗೆ ಉಣಿಸಲಾಗುತ್ತದೆ. ಮಾಧ್ಯಮ ಪ್ರತಿನಿಧಿಗಳನ್ನು ಫ್ಲೈಟ್ನಲ್ಲಿ ಒಯ್ದು, ಆದರಾತಿಥ್ಯ ನೀಡಿ, ಅವರ ಎದುರಿನಲ್ಲೇ ಸುದ್ದಿಯನ್ನು ಸ್ಫೋಟಿಸಲಾಗುತ್ತದೆ ಇಲ್ಲವೆ ಚಿಮ್ಮಿಸಲಾಗುತ್ತದೆ. ಬೆಂಗಳೂರಿನ ಬಯೊಕಾನ್ ಕಂಪನಿ ಯಾವುದೋ ಒಂದು ಬಗೆಯ ಕ್ಯಾನ್ಸರ್ಗೆ ಔಷಧವನ್ನು ಸಿದ್ಧಪಡಿಸಿದರೆ ಆ ಕಂಪನಿಯ ಮುಖ್ಯಸ್ಥೆ ಕೇಂದ್ರ ಹಣಕಾಸು ಸಚಿವರನ್ನು ಕರೆಸಿ, ಹೆಸರಾಂತ ಪತ್ರಿಕೆಗಳ ಹಾಗೂ ವಾರ್ತಾ ಏಜೆನ್ಸಿಗಳ ಫೊಟೊಗ್ರಾಫರ್ಗಳನ್ನು ಕರೆಸಿ, ಮುದ್ದಾದ ಬ್ಯಾಟರಿಚಾಲಿತ ಜೀಪ್ನಲ್ಲಿ ಮೆರವಣಿಗೆ ಹೊರಟ ದೃಶ್ಯವನ್ನು ತೆಗೆಸಿ ಮಾಧ್ಯಮಗಳಿಗೆ ರವಾನೆ ಮಾಡಿಸುತ್ತಾರೆ.
ವರದಿಗಾರರು ತಾವಾಗಿ ವಿಜ್ಞಾನ ರಂಗದ ಪ್ರಮುಖ ವಿದ್ಯಮಾನಗಳನ್ನು ಅರಸುತ್ತ ಹೋಗುವ ಸಂಸ್ಕೃತಿ ನಮ್ಮ ಮಾಧ್ಯಮಗಳಲ್ಲಿ ಬೆಳೆದಿಲ್ಲ. ಅದು ತುಸು ವೆಚ್ಚದ ಬಾಬ್ತು ಆಗಿದ್ದರಿಂದ ಯಾವ ಪತ್ರಿಕೆಗಳೂ ವಿಜ್ಞಾನ ವರದಿಗಾರರನ್ನು ಇಟ್ಟುಕೊಂಡಿಲ್ಲ. ವಿಜ್ಞಾನ ರಂಗದ ಪ್ರಮುಖ ಘಟನೆಗಳನ್ನು ಅರಸುತ್ತ ದೂರ ಹೋಗಬೇಕಿಲ್ಲ. ಇಲ್ಲೇ ಬೆಂಗಳೂರಿನಲ್ಲೇ ಅನೇಕ ಲ್ಯಾಬೊರೇಟರಿಗಳಲ್ಲಿ ದಿನವೂ ಹೊಸ ಹೊಸ ಸಂಗತಿಗಳು ಬೆಳಕಿಗೆ ಬರುತ್ತಿರುತ್ತವೆ. ಆದರೆ ವಿಧಾನಸೌಧಕ್ಕೆ, ಪೊಲೀಸ್ ಕಮೀಶನರ್ ಕಚೇರಿಗೆ, ಗಾಂಧೀನಗರಕ್ಕೆ ವರದಿಗಾರರ `ಬೀಟ್’ ಇದ್ದಂತೆ ವಿಜ್ಞಾನದ ಪ್ರಯೋಗಾಲಯಗಳಿಗೆ ಯಾರೂ ಬೀಟ್ ಹಾಕುವುದಿಲ್ಲ.

ಯಾಕೆ ಎಂಬ ಪ್ರಶ್ನೆಗೆ ಉತ್ತರ ಬೇಕಿದ್ದರೆ ಮತ್ತೆ ಈ ಲೇಖನದ ಆರಂಭಕ್ಕೇ ಹೋಗಬೇಕು. ಜನಸಾಮಾನ್ಯರಿಗೆ ವಿಜ್ಞಾನ ಅರ್ಥವಾಗುವುದಿಲ್ಲ. ಅವರಿಗೆಂದು ವಿಜ್ಞಾನವನ್ನು ತೀರ ಸರಳವಾಗಿ, ಡೈಲ್ಯೂಟ್ ಮಾಡಿ ನಿರೂಪಿಸಿದರೆ ತಜ್ಞರಿಗೆ ಅದು ಹಿಡಿಸುವುದಿಲ್ಲ. ಈ ಸಂದಿಗ್ಧದಿಂದ ಪಾರಾಗಲೆಂದು ಕೆಲವು ದಿನಪತ್ರಿಕೆಗಳು ವಾರಕ್ಕೊಮ್ಮೆ ಅಂಕಣರೂಪದಲ್ಲಿ ಒಂದಿಷ್ಟು ತಮಾಷೆಯ, ಸ್ವಾರಸ್ಯದ ಸಂಗತಿಗಳನ್ನು ಹೊರಗಿನವರಿಂದ ಬರೆಸಿ ಪ್ರಕಟಿಸುತ್ತಿವೆ. ಅಷ್ಟರಮಟ್ಟಿಗೆ ವಿಜ್ಞಾನ ಜೀವಂತವಾಗಿದೆ. ಆದರೆ ಒಬ್ಬ ಪತ್ರಕರ್ತನೇ ವಿಜ್ಞಾನ ವಿಷಯಗಳನ್ನು ಅಧಿಕೃತವಾಗಿ ಬರೆಯುವ ಅಥವಾ ವರದಿ ಮಾಡುವ ಸಂದರ್ಭ ಕನ್ನಡದ ಮಟ್ಟಿಗೆ ಈಗಂತೂ ಇಲ್ಲ. ಭಾರತೀಯ ಸಂದರ್ಭದಲ್ಲಿ ಇಂಗ್ಲಿಷ್ ಪತ್ರಿಕೆಗಳಲ್ಲೂ ಪೂರ್ಣಾವಧಿ ಸೈನ್ಸ್ ರಿಪೋರ್ಟರ್ ಇಲ್ಲದಿರುವಾಗ ಇದೇನೂ ಮಹತ್ವದ ಸಂಗತಿ ಎನ್ನಿಸಲಿಕ್ಕಿಲ್ಲ.

ಆದರೆ ಸಾಮಾನ್ಯ ಓದುಗರಿಗೆ ತುಸುವಾದರೂ ವಿಜ್ಞಾನ ವಾರ್ತೆಯನ್ನು ತಪ್ಪದಂತೆ, ತಪ್ಪಿಲ್ಲದಂತೆ ಕೊಡಬೇಕು; ವಿಜ್ಞಾನ ರಂಗದ ಪ್ರಮುಖ ಘಟನೆಗಳು ಕಣ್ತಪ್ಪಿ ಬಿಟ್ಟು ಹೋಗಬಾರದು. ಇದು ಸಾಧ್ಯವಾಗಬೇಕೆಂದರೆ, ಪ್ರತಿ ಮಾಧ್ಯಮ ಕಚೇರಿಯಲ್ಲೂ ಒಬ್ಬನಾದರೂ ವಿಜ್ಞಾನ ಪದವೀಧರ ಇರಬೇಕು. ಆತ ಸಮರ್ಥ ಬರಹಗಾರನೂ ಆಗಿರಬೇಕು. ಆತ ಕ್ರೀಡಾ ವರದಿಗಾರನಾಗಿಯೊ `ಸುಡೊಕು’ ಸಬ್ಬಿಂಗ್ ಸಿಬ್ಬಂದಿಯೋ ಇಲ್ಲವೆ ನಾಟಕ ಸಿನಿಮಾಗಳ ವಿಮರ್ಶಕನಾಗಿಯೊ ಬೆಳೆಯುವ ಬದಲು ವಿಜ್ಞಾನ ವಿದ್ಯಮಾನಗಳತ್ತ ವಿಶೇಷ ಆಸಕ್ತಿ ತಳೆಯುವಂತೆ ಹಿರಿಯ ಪತ್ರಕರ್ತರು ಅವನಿ/ಳಿಗೆ ಉತ್ತೇಜನ ನೀಡಬೇಕು. ವೈಜ್ಞಾನಿಕ ಕಥೆ, ಕಾದಂಬರಿ, ಸಿನಿಮಾಗಳನ್ನು ನೋಡುತ್ತ, ಆಗಾಗ ನಡೆಯುವ ವಿಜ್ಞಾನ ಲೇಖಕರ ಶಿಬಿರಗಳಲ್ಲಿ ಪಾಲ್ಗೊಳ್ಳುತ್ತ, ಐಟಿ-ಬಿಟಿ-ಎನ್ಟಿ ಸೆಮಿನಾರ್ಗಳಲ್ಲಿ ಭಾಗವಹಿಸುತ್ತ, ಕ್ರಮೇಣ ನಾಲ್ಕಾರು ವರ್ಷಗಳಲ್ಲಿ ಆತ/ಆಕೆ ಪಳಗಿರುತ್ತಾರೆ. ತನಗೆ ಬೇಕಾದ ನಿಘಂಟು, ತಾಂತ್ರಿಕ ಪದಕೋಶಗಳಂಥ ಪರಿಕರಗಳನ್ನು ತಾನೇ ಸಜ್ಜುಗೊಳಿಸಿಕೊಂಡು, ಮಹತ್ವದ ಕಾಂಟಾಕ್ಟ್ಗಳನ್ನು ರೂಢಿಸಿಕೊಂಡು ಹೊಸಬರಿಗೆ ಮಾರ್ಗದರ್ಶನ ನೀಡಬಲ್ಲ ತಜ್ಞನೆನಿಸುತ್ತಾನೆ.

ಅಷ್ಟು ಮಾಡದಿದ್ದರೆ ವಿಜ್ಞಾನ ಕನ್ನಡಿಗರ ಕೈಗೆಟುಕದಷ್ಟು ದೂರಕ್ಕೆ, ಎತ್ತರಕ್ಕೆ ಸಾಗಿರುತ್ತದೆ. ಈಗಾಗಲೇ ಕನ್ನಡದಲ್ಲಿ ವಿಜ್ಞಾನವನ್ನು ಬರೆಯಬಲ್ಲವರ ಸಂಖ್ಯೆ ಬೆರಳೆಣಿಕೆಯಷ್ಟು ಇಳಿದಿದೆ. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಕಳೆದ ೨೫ ವರ್ಷಗಳಿಂದ ಪ್ರತಿ ವರ್ಷ ವಿಜ್ಞಾನ ಬರವಣಿಗೆಯ ಕಮ್ಮಟವನ್ನು ನಡೆಸುತ್ತ ಬಂದಿದೆಯಾದರೂ ಈವರೆಗೆ ಐವರು `ಹೊಸ’ ವಿಜ್ಞಾನ ಲೇಖಕರು ಸೃಷ್ಟಿಯಾಗಿಲ್ಲ. ಹೀಗಾದರೆ ಕನ್ನಡ ಪತ್ರಿಕೆಗಳಿಗೆ ಫ್ರೀಲಾನ್ಸ್ ಅಂಕಣಕಾರರೂ ಸಿಗುವುದು ದುರ್ಲಭವಾಗುತ್ತದೆ.

ನಿಂತರೆ, ಕೂತರೆ, ಕಿವಿ ತೆರೆದರೆ, ಕಣ್ಣು ಮುಚ್ಚಿದರೆ ವಿಜ್ಞಾನದ ಹೊಸ ಹೊಸ ಸಾಧನೆಗಳು ನಮ್ಮನ್ನು ತಟ್ಟುತ್ತಿರುತ್ತವೆ. ಮಾರಗೊಂಡನಹಳ್ಳಿಯ ಅಲ್ಪಾಕ್ಷರಿ ಕೃಷಿಕ ರಾಮಯ್ಯನ ನಾಲಗೆಯ ಮೇಲೂ ಮೊಬೈಲ್ನ `ಮಿಷ್ಕಾಲ್’ ಉಲಿಯುತ್ತದೆ. ವಿಜ್ಞಾನ-ತಂತ್ರಜ್ಞಾನದ ಸಾಧನೆಗಳು ಕಾಲಿಟ್ಟಲ್ಲೆಲ್ಲ ಇಂಗ್ಲಿಷ್ ಭಾಷೆಯೂ ದಾಂಗುಡಿ ಇಡುತ್ತ ಬರುತ್ತಿದೆ. ಕನ್ನಡ ಹೊಸಕಿ ಹೋಗದಂತೆ ನೋಡಿಕೊಳ್ಳುವ ಹೊಣೆ ಕನ್ನಡದ ಸಮೂಹ ಮಾಧ್ಯಮಗಳ ಮೇಲೆಯೇ ಇದೆ.

(ಕೃಪೆ: ಕರ್ನಾಟಕ ಮಾಧ್ಯಮ ಅಕಾಡೆಮಿ)

1 Response to ಕನ್ನಡ ಪತ್ರಿಕೆಗಳಲ್ಲಿ ವಿಜ್ಞಾನ ಮಾಹಿತಿ

  1. ಕೊಳ್ಳೇಗಾಲ ಶರ್ಮ

    ಕಾಲಾತೀತವಾದ ಬರೆಹ ಇದು. ಅದಕ್ಕೇ ಇದರಲ್ಲಿ ದಿನಾಂಕ ನಮೂದಿಸಿಲ್ಲವೇನೋ ಅನಿಸುತ್ತದೆ. ಬಹುಶಃ ಇನ್ನೂಹತ್ತು ವರ್ಷಗಳುಕಳೆದು ಅನಂತರ ಓದಿದರೂ ಈ ಬರೆಹದ ಸತ್ಯ, ಸತ್ವ ಮರೆಯಾಗಿರುವುದಿಲ್ಲ. ಅದು ಅಂದಿಗೂ ವಾಸ್ತವವಾಗಿಯೇ ಇರುತ್ತದೆ ಎನ್ನುವುದು ವಿಜ್ಞಾನ ಪತ್ರಿಕೋದ್ಯಮಕ್ಕೆ ಹಿಡಿಯುವ ಕನ್ನಡಿ. ಕನ್ನಡದಲ್ಲಿಯಷ್ಟೆ ಅಲ್ಲ. ಇಂಗ್ಲೀಷಿನಲ್ಲಿಯಷ್ಟೆ ಅಲ್ಲ. ಪ್ರಪಂಚದ ಎಲ್ಲ ಭಾಷೆಗಳಲ್ಲಿಯೂ ಈ ಸಂದಿಗ್ಧವಿದೆ. ಇಂಗ್ಲೀಷಿನಲ್ಲಿ ಇದು ತುಸು ಕಡಿಮೆ ಎನ್ನುವುದಕ್ಕೆ ಆ ಭಾಷೆಯನ್ನೇ ಮಾತನಾಡುವ ಹಾಗೂ ತಮ್ಮ ಅರಿವನ್ನು ಸರಳವಾಗಿ ತಿಳಿಸುವ ಪ್ರಯತ್ನ ಮಾಡುವ ವಿಜ್ಞಾನಿಗಳು ಇರುವುದು ಕಾರಣ. ಪತ್ರಿಕೆಗಳು ಎಂದರೆ ಯಾರೋ ಭಯೋತ್ಪಾದಕರು ಅಂತಲೋ, ವಿಜ್ಞಾನದ ಬಗ್ಗೆ ಆಸಕ್ತಿ ಇಲ್ಲದವರು ಅಂತಲೋ ತಿಳಿಯುವ ವಿಜ್ಞಾನಿಗಳೂ ಈ ಪರಿಸ್ಥಿತಿಗೆ ಕೊಡುಗೆ ನೀಡಿದ್ದಾರೆ. ಇವೆಲ್ಲಕ್ಕಿಂತಲೂ ಹೆಚ್ಚಾಗಿ ವಿಜ್ಞಾನ ಎನ್ನುವುದು ಜನತೆಯಿಂದ ದೂರವಿರುವ, ದೂರವಿಡಬೇಕಾದ ಸಂಸ್ಕೃತಿ ಎನ್ನುವ ಅನಿಸಿಕೆಯೂ ಪತ್ರಿಕೋದ್ಯಮದಲ್ಲಿ ಇದೆ. ರಾಜಕೀಯ, ಸಿನಿಮಾಗಳಂಥ ವಿಷಯಗಳು ವಿಜ್ಞಾನಕ್ಕಿಂತಲೂ ಅವಶ್ಯಕ ಸಂಸ್ಕೃತಿಯ ಅಂಗಗಳು ಎನ್ನುವವರೂ ಇದ್ದಾರೆ. ಇವೆಲ್ಲವೂ ಬದಲಾಗಲು ದಶಕಗಳೇ ಬೇಕು. ಅಲ್ಲಿಯವರೆಗೂ ವಿಜ್ಞಾನದಲ್ಲ ಆಸಕ್ರಿ ಇರುವ ಬರವಣಿಗೆಗಾರರು, ಅತ್ತ ಪತ್ರಕರ್ತರೂ ಆಗದೆ, ಇತ್ತ ಸಾಹಿತಿಗಳೂ ಆಗದೆ ವಿಜ್ಙಾನದ ಆಗುಹೋಗುಗಳನ್ನು ತಮ್ಮ ಸಮಾಧಾನಕ್ಕೆ ಚಿತ್ರಿಸುತ್ತ ನಡೆಯುವುದಷ್ಟೆ ಉಳಿಯುತ್ತದೆ. ಅಷ್ಟೆ.

Leave a Reply