ಕನ್ನಡದ ಹೆಮ್ಮೆಯ ಜ್ವಾಲಾ ಸಮರ
ಕನ್ನಡ ನಾಟ್ calm !
(ಕನ್ನಡ ಚೆನ್ನುಡಿಯ ರಕ್ಷಣೆಗೆ ಎಷ್ಟೆಲ್ಲ ದೇಶಗಳಿಂದ ದನಿ ಮೊಳಗಿ ಬಂತು!)
– ಹಾಲ್ದೊಡ್ಡೇರಿ ಸುಧೀಂದ್ರ
ಅಂತರಜಾಲದ `ಸೈಬರ್ ಲೋಕ’ದಲ್ಲಿ ಆಗೊಮ್ಮೆ ಈಗೊಮ್ಮೆ `ಫ್ಲೇಮ್ ವಾರ್'(ಜ್ವಾಲಾ ಸಮರ) ಅಂದರೆ, ಮಾತಿನ ಚಕಮಕಿ ನಡೆಯುತ್ತದೆ. ಪಟಾಕಿಯ ಸರಕ್ಕೆ ಬೆಂಕಿ ಹಚ್ಚಿದಂತೆ ವಿಶ್ವದ ಎಲ್ಲೆಲೊ ಇದ್ದವರೆಲ್ಲ ಮಾತಿಗೆ ಮಾತು ಬೆಳೆಸುತ್ತ ತಂತಮ್ಮಲ್ಲೇ ಬಣಗಳಾಗಿ ಒಡೆದು, ಬೆಸುಗೆಯಾಗಿ ಒಂದಾಗಿ ಅನೂಹ್ಯ ಚಿತ್ತಾರವನ್ನೇ ಸೃಷ್ಟಿಸುತ್ತಾರೆ. ಕಳೆದ ವಾರ ಕನ್ನಡ ಭಾಷೆಯ ಮೇಲ್ಮೆ ಕುರಿತಂತೆ ಮೊದಲ ಸೈಬರ್‌ಲೋಕದ `ಇ-ಮೇಲಾಟ’ ನಡೆಯಿತು. ಕಾಡಿನಬೆಂಕಿಯಂತೆ ಹಠಾತ್ತಾಗಿ ಹೊತ್ತಿ ಉರಿದ ಈ ಜ್ಞಾಲಾ ಸಮರಕ್ಕೆ ಕನ್ನಡ ಧ್ವಜ ಬಾನೆತ್ತರಕ್ಕೇರಿತು. ಒಂದು ವರದಿ:
ಮೊನ್ನೆ ಏಪ್ರಿಲ್ ೨೦ ಶುಕ್ರವಾರ zdnetindia.com ಎಂಬ ಸೈಟಿನಲ್ಲಿ ಭಾರತೀಯ ಭಾಷೆಗಳ ವೆಬ್‌ಸೈಟ್‌ಗಳನ್ನು ಕುರಿತಂತೆ ಒಂದು ಲೇಖನ ಪ್ರಕಟವಾಯಿತು. ಅದರಲ್ಲಿ ಪಂಜಾಬಿ, ಗುಜರಾತಿ, ಬಂಗಾಳಿ, ತಮಿಳು, ತೆಲುಗು, ಒಡಿಸ್ಸಿ, ಮರಾಠಿ, ಮಲೆಯಾಳಂ ಹೀಗೆ ಎಲ್ಲಾ ಭಾರತೀಯ ಭಾಷೆಗಳ ವೆಬ್‌ಸೈಟ್‌ಗಳ ಹೆಸರುಗಳನ್ನು ಕೊಡಲಾಗಿತ್ತು. ಆಸಕ್ತರು ನೇರವಾಗಿ ಆ ಸೈಟ್‌ಗಳನ್ನು ತಲುಪುವ ಸುಲಭ ಕೊಂಡಿಗಳನ್ನೂ ನೀಡಲಾಗಿತ್ತು. ಕನ್ನಡದ ಸೊಲ್ಲೇ ಇರಲಿಲ್ಲ!
ಅಂತರಜಾಲದಲ್ಲಿ `ವಿಶ್ವಕನ್ನಡ’ ಪತ್ರಿಕೆಯನ್ನು ೧೯೯೬ರಿಂದಲೂ ಪ್ರಕಟಿಸುತ್ತಿರುವ ಡಾ| ಯು. ಬಿ. ಪವನಜ ಅವರ ಕಣ್ಣಿಗೆ ಈ ಲೇಖನ ಬಿತ್ತು. ತಕ್ಷಣ ಅವರು `ಝಡ್‌ನೆಟ್‌ಇಂಡಿಯಾ’ದವರಿಗೆ ಪ್ರತಿಭಟನೆಯ ಒಂದು ಇ-ಮೇಲ್ ಕಳಿಸಿದರು. `ಕನ್ನಡದ ಪ್ರಸ್ತಾಪವನ್ನೇ ನೀವು ಮಾಡಲಿಲ್ಲ. `ಬೆಂಗಳೂರು ಭಾರತದ ಐಟಿ ರಾಜಧಾನಿ’ ಅನ್ನೋದು ಗೊತ್ತೇ ಇಲ್ಲವೆ? ಅಂತರಜಾಲದಲ್ಲಿ ನಮ್ಮ ಎಷ್ಟೆಲ್ಲ ಸೈಟುಗಳಿವೆ. ಒಂದೂ ನಿಮಗೆ ಕಾಣಲಿಲ್ಲವೆ? ಎಂದು ಕೇಳಿ ಒಂದು ಉದ್ದ ಪಟ್ಟಿಯನ್ನೇ ರವಾನಿಸಿದರು. ಅಷ್ಟೇ ಅಲ್ಲ, ತಮ್ಮ ಅಂಚೆಪಟ್ಟಿಯ ಎಲ್ಲ ಕನ್ನಡ ಓದುಗರಿಗೂ ಇದೇ ರೀತಿ ಪ್ರತಿಕ್ರಿಯೆ ರವಾನಿಸಲು ಸೂಚಿಸಿದರು.
ಅರ್ಧ ಗಂಟೆಯಲ್ಲೇ `ಝಡ್‌ನೆಟ್’ನಿಂದ ಉತ್ತರ ಬಂತು. `ಅಚಾತುರ್ಯ ಆಗಿದೆ. ಮುಂದಿನ ಬಾರಿ ಹೀಗಾಗದಂತೆ ಎಚ್ಚರ ವಹಿಸುತ್ತೇವೆ’ ಎಂದ ಅವರು, ಕನ್ನಡದ ಎಲ್ಲ ಸೈಟುಗಳ ಒಂದು ಪಟ್ಟಿಯನ್ನೇ ತಮ್ಮ ಲೇಖನದಲ್ಲಿ ಸೇರಿಸಿದರು. ಆದರೆ ಕ್ಷಮಾಪಣೆಯ ಸೊಲ್ಲೇ ಇರಲಿಲ್ಲ.
ಅಷ್ಟೊತ್ತಿಗಾಗಲೇ ಡಾ| ಪವನಜ ಕಳಿಸಿದ್ದ ಕನ್ನಡ ಕಹಳೆ ಎಲ್ಲೆಲ್ಲೊ ಮೊಳಗತೊಡಗಿತ್ತು. ಅಜಗರದಂದದಿ ನಿದ್ರೆಯ ಭಜಕರು ತಾವಲ್ಲ ಎಂಬುದನ್ನು ಸಾರುವಂತೆ ಎಲ್ಲೆಡೆಯಿಂದ ಕನ್ನಡ ಪ್ರೇಮಿಗಳ ಪ್ರತಿಭಟನೆಯ ಸುರಿಮಳೆಯೇ ಬರತೊಡಗಿತು. ಮೊದಮೊದಲು ಬೆಂಗಳೂರಿನ ಕಂಪ್ಯೂಟರ್ ಜಾಲ ಚುರುಕಾಯಿತು. ಗಣಕ ವಿಜ್ಞಾನ ಪರಿಷತ್ತಿನ ಸಿ. ವಿ. ಶ್ರೀನಾಥ್‌ಶಾಸ್ತ್ರೀ ಇ-ಮೇಲ್ ಜತೆ ಕೆಲವರಿಗೆ ಪೋನ್ ಮೂಲಕ ಕೂಡ ಕರೆಗಂಟೆ ಬಾರಿಸಿ ಎಲ್ಲರನ್ನೂ ಕರೆದರು. ಅತ್ತ `[http://www.thatskannada.com|ಇಂಡಿಯಾಇನ್‌ಫೋ ಡಾಟ್‌ಕಾಂನ] ಸಂಪಾದಕ ಶ್ಯಾಮ್ ತಮ್ಮ ಪೋರ್ಟಲ್ ಮೂಲಕ ವಿಶ್ವಕ್ಕೇ ಕರೆ ನೀಡಿದರು. ಎಲ್ಲ ಕಡೆಗಳಿಂದ `ಝಡ್‌ನೆಟ್’ಗೆ ಇ-ಮೇಲ್ ಮಳೆ.
ಝಡ್‌ನೆಟ್‌ಗೆ ಚುರುಕು ಮುಟ್ಟಿತು. ಅದು ಇನ್ನೊಂದು ವಿವರಣೆ ನೀಡಿತು; `ನೂರಾರು ಜನಾಂಗಗಳಿರುವ ಭಾರತದಲ್ಲಿ ಎಲ್ಲರ ವೆಬ್‌ಸೈಟ್ ಪರಿಚಯ ಕೊಡಲು ಸಾಧ್ಯವಿಲ್ಲ. ಕನ್ನಡಿಗರ ಹೆಮ್ಮೆಯನ್ನು ಕಡೆಗಣಿಸುವ ಉದ್ದೇಶ ನಮಗಿಲ್ಲ’ ಎಂಬ ಮಾತುಗಳು ಪಟಪಟ ಮೂಡತೊಡಗಿದವು. ಎಲಾ! ಕನ್ನಡಿಗರೆಂದರೆ `ಎಷ್ಟೊ ನೂರಾರು ಜನಾಂಗ’ಗಳಲ್ಲಿ ಒಬ್ಬರೆ?
ಕನ್ನಡ ಅಭಿಮಾನ ಕೆಣಕಿದಂತಾದ ಜಾಲಿಗರೊಬ್ಬರು `ಕನ್ನಡದಾ ಮಕ್ಕಳೆಲ್ಲ ಒಂದಾಗಿ ಬನ್ನಿ’ ಎಂಬ ಶೀರ್ಷಿಕೆಯ ಪತ್ರಮಾಲೆಯನ್ನೇ ಆರಂಭಿಸಿದರು. ಮುಂಬೈ, ದಿಲ್ಲಿ, ಭುವನೇಶ್ವರ, ಕಲ್ಕತ್ತಾ, ಅಮೆರಿಕಾದ ಫ್ಲೋರಿಡಾ, ಲಾಸ್ ಎಂಜಲೀಸ್, ಸೆಂಟ್ ಲೂಯಿಗಳಿಂದ, ಜಪಾನ್, ಜರ್ಮನಿ, ಕೊಲ್ಲಿ ರಾಷ್ಟ್ರಗಳಿಂದ ಇಮೇಲ್‌ಗಳು ಬಂದವು. ಪತ್ರ ಸರಮಾಲೆಯಲ್ಲಿ ೫೬ನೇ ಪ್ರತಿಭಟನಾ ಪತ್ರ ಸೇರ್ಪಡೆಯಾದಾಗ `ಝಡ್‌ನೆಟ್’ ಕ್ಷಮಾಯಾಚನೆ ಮಾಡಿತು.
ಆದರೆ ತನ್ನ ಮೂಲ ಲೇಖನದಲ್ಲಿ ತಿದ್ದುಪಡಿ ಮಾಡಿರಲಿಲ್ಲ. `ಝಡ್‌ನೆಟ್’ ಕ್ಷಮಾಯಾಚನೆ ಮಾಡಿತು. ಆದರೆ ತನ್ನ ಮೂಲ ಲೇಖನ ಹಾಗೂ ನಂತರದ ಸಂವಾದ ಎಲ್ಲವನ್ನೂ ಕ್ರೋಢಿಸರಿಸಿ ಅಮೆರಿಕದ ಕನ್ನಡಿಗರ ಒಕ್ಕೂಟ (`ಅಕ್ಕ’) ಎಲ್ಲ ಪತ್ರಲೇಖಕರಿಗೆ ಹಾಗೂ ಕನ್ನಡದ ಎಲ್ಲ ವೆಬ್‌ಸೈಟ್‌ಗಳಿಗೂ ರವಾನಿಸಿತು.
ಭಾನುವಾರ ಬೆಳಿಗ್ಗೆ ಕನ್ನಡಿಗರ ನೋವಿನ ಪ್ರತಿಭಟನೆಗಳು ಎಂಬತ್ತಕ್ಕೂ ಹೆಚ್ಚು ಪತ್ರಾವಳಿಗಳ ಸರಮಾಲೆಯೇ ಇತ್ತು. ಮುಖ್ಯಮಂತ್ರಿ ಎಸ್. ಎಂ. ಕೃಷ್ಣರೂ `ನಾನು ನಿಮ್ಮೊಂದಿಗಿದ್ದೇನೆ’ ಎಂಬ ಪತ್ರವನ್ನು ಈ ಪಟಾಕಿ ಸರಕ್ಕೆ ಜೋಡಿಸಿದರು. ಅಚ್ಚರಿ ಅಚ್ಚರಿ! ಝಡ್‌ನೆಟ್‌ಗೆ ಬೆವರು ಕಿತ್ತು ಬಂದಿರಬೇಕು. ನೆಟ್ ಬನೀನ್ ಒದ್ದೆ.
ಎಪ್ಪತ್ತೇಳನೆಯ ಪತ್ರ ಬಂದಾಗ ಅದು ತನ್ನ ಮೂಲ ಲೇಖನದಲ್ಲಿ ತಿದ್ದುಪಡಿ ತಂದಿತು. ತನ್ನ ಮೊದಲ ಪುಟದಲ್ಲೇ `ಬೆಂಗಳೂರು ಐಟಿ ರಾಜಧಾನಿ’ ಎಂದು ವಿವರಿಸಿತು. ಕನ್ನಡದ ಪ್ರಮುಖ ವೆಬ್‌ಸೈಟ್‌ಗಳನ್ನು ತಾನೇ ಜಾಲಾಡಿ ಅಲ್ಲಿ ಕಂಡ ಎಲ್ಲ ವಿಶಿಷ್ಟತೆಗಳನ್ನು ವಿವರಿಸಿತು. ಮಾಹಿತಿ, ಶಿಕ್ಷಣ, ಮನರಂಜನೆ, ಸಾಮಾಜಿಕ ಸಂಬಂಧಗಳ ಎಲ್ಲ ಸೈಟುಗಳಿಗೆ ತಾನೇ ಕೊಂಡಿಗಳನ್ನು ಸೃಷ್ಟಿಸಿಕೊಟ್ಟಿತು.
ಲೆಕ್ಕಣಿಯೆಂದರೆ ಖಡ್ಗ ಎನ್ನುತ್ತಾರೆ. ಕಾಗದ, ಲೆಕ್ಕಣಿ ಇಲ್ಲದ ಲೋಕದಲ್ಲಿ ಈಗ ಕನ್ನಡದ ಜಯಘೋಷ ಮೊಳಗುತ್ತಿದೆ.
(ಕೃಪೆ- ಪ್ರಜಾವಾಣಿ)
(ಮೇ ೨೦೦೧)
August 13th, 2014 at 5:34 pm
ee lekhana ondu romanchana anubhava.jai kannada