ನಿಮ್ಮಿ

– ಡಾ. ಯು. ಬಿ. ಪವನಜ

ಆಕೆಯ ಹೆಸರು ನಿರ್ಮಲ. ಆದರೆ ಎಲ್ಲರೂ ಕರೆಯುವುದು ನಿಮ್ಮಿ ಎಂದು. ಮನೆ ಎಂದು ಹೇಳುಕೊಳ್ಳುವಂತಹ ಮನೆಯೇನೂ ಆಕೆಗೆ ಇಲ್ಲ. ಕೊಳೆಗೇರಿಯಲ್ಲೊಂದು ಚಿಕ್ಕ ಗುಡಿಸಲು. ಅಲ್ಲಿ ಅಮ್ಮನ ಜೊತೆ ಸಂಸಾರ. ಅಮ್ಮ ಅಲ್ಲಿ ಇಲ್ಲಿ ಮನೆಗೆಲಸ ಮಾಡಿಕೊಂಡಿರುತ್ತಾಳೆ. ನಿಮ್ಮಿ ಅಮ್ಮನ ಜೊತೆ ಕೆಲವೊಮ್ಮೆ ಆ ಮನೆಗೆಳಿಗೆ ಹೋಗುವುದೂ ಇದೆ. ಅಮ್ಮ ಕೆಲಸ ಮಾಡುತ್ತಿದ್ದಾಗ ನಿಮ್ಮಿ ಬೀದಿಯ ಬದಿಯಲ್ಲಿರುವ ಕಸದ ತೊಟ್ಟಿ ಜಾಲಾಡುತ್ತಿರುತ್ತಾಳೆ. ಪ್ಲಾಸ್ಟಿಕ್, ಡಬ್ಬ, ಕಾಗದ, ಇತ್ಯಾದಿಗಳೆಲ್ಲ ಸಂಗ್ರಹಿಸಿ ಪಕ್ಕದ ಬೀದಿಯ ಖಾನ್ ಸಾಹೇಬನಿಗೆ ಕೊಟ್ಟರೆ ಕೈಗೆ ಸ್ವಲ್ಪ ಚಿಲ್ಲರೆ ಕಾಸು ಬೀಳುವುದು. ಒಂದು ಹೊತ್ತಿನ ಹೊಟ್ಟೆಯ ಸಮಸ್ಯೆ ಪರಿಹಾರವಾದಂತೆ. ಕಸದ ತೊಟ್ಟಿಯಲ್ಲೇ ಅಕೆಗೆ ಕೆಲವೊಮ್ಮೆ ಉಪಯುಕ್ತ ಸಾಮಾನು ಸಿಕಿದ್ದೂ ಇದೆ. ಉದಾಹರಣೆಗೆ ಕಳೆದ ತಿಂಗಳು ಸಿಕ್ಕಿದ ಪೆನ್ನು. ಶಾಲೆಗೆ ಸರಿಯಾಗಿ ಹೋಗದಿದ್ದರೂ ಅಲ್ಪ ಸ್ವಲ್ಪ ಬರೆಯಲು ಆಕೆಗೆ ಗೊತ್ತಿದೆ. ಆ ಪೆನ್ನು ಈಗಲೂ ನಿಮ್ಮಿಯ ಬಳಿ ಇದೆ.
ತನ್ನ ಪ್ರಾಯದ ಮಕ್ಕಳು ಸಮವಸ್ತ್ರ ಚಿಮ್ಮಿಸಿಕೊಂಡು ಶಾಲೆಗೆ ಹೋಗುವಾಗ ತಾನೂ ಶಾಲೆಗೆ ಹೋಗಬೇಕೆಂದು ನಿಮ್ಮಿ ಆಸೆಪಟ್ಟಿದ್ದೂ ಉಂಟು. ಆದರೆ ಏನು ಮಾಡುವುದು? ಆಸೆಪಟ್ಟಿದ್ದೆಲ್ಲ ಸಿಗಬೇಕಲ್ಲ? ಹೊಟ್ಟೆ ತುಂಬಿಸಲೇ ಸಾಕಷ್ಟು ಹಣವಿಲ್ಲದಿರುವಾಗ ಇನ್ನು ಪುಸ್ತಕಕ್ಕೆಲ್ಲಿಂದ ತರುವುದು?
ಅದೊಂದು ದಿನ. ನಿಮ್ಮಿ ಎಂದಿನಂತೆ ಕಸದ ತೊಟ್ಟಿಯನ್ನು ಸಮೀಪಿಸುತ್ತಿದ್ದಾಳೆ. ಆಗ ಒಂದು ಕಪ್ಪು ಬಣ್ಣದ ಮೋಟಾರು ಸೈಕಲು ಝುಮ್ ಎಂದು ಬಂತು. ಕಸದ ತೊಟ್ಟಿಯ ಪಕ್ಕ ನಿಂತಿತು. ಅದನ್ನು ನಡೆಸುತ್ತಿದ್ದಾತ ಏನೋ ಒಂದು ಪೊಟ್ಟಣವನ್ನು ತೊಟ್ಟಿಗೆ ಎಸೆದು ಮೋಟಾರು ಸೈಕಲ್ಲನ್ನು ಪುನಃ ಝುಮ್ ಎಂದು ಓಡಿಸಿಕೊಂಡು ಹೋದ. ಇಂತಹ ದೃಶ್ಯ ನಿಮ್ಮಿಗೇನೂ ಹೊಸತಲ್ಲ. ನಿಮ್ಮಿ ಎಂದಿನಂತೆ ತೊಟ್ಟಿಯನ್ನು ಸಮೀಪಿಸಿದಳು. ತೊಟ್ಟಿಯ ಮೇಲೆ ಈಗಷ್ಟೆ ಬೈಕಿನಲ್ಲಿ ಬಂದಾತ ಎಸೆದ ಪೊಟ್ಟಣ ಇತ್ತು. ಕಂದು ಬಣ್ಣದ ಕಾಗದದ ಪೊಟ್ಟಣ. ಸಮಾನ್ಯವಾಗಿ ಅಂಗಡಿಗಳಲ್ಲಿ ಸಾಮಾನು ಕಟ್ಟಿ ಕೊಡುವಂತಹದು. ನಿಮ್ಮಿ ಅದನ್ನು ಎತ್ತಿಕೊಂಡು ಬಿಡಿಸಿ ನೋಡಿದಳು. ಕೆಲವು ಹರಿದು ಚಿಂದಿ ಮಾಡಿದ ಕಾಗದದ ತುಣುಕುಗಳು, ಬ್ರೆಡ್ಡಿನ ಅಂಚಿನ ತುಣುಕುಗಳು ಸಿಕ್ಕವು. ಅವುಗಳ ಜೊತೆಗೆ ಒಂದು ಫ್ಲಾಪಿಯೂ ಇತ್ತು. ನಿಮ್ಮಿ ಬ್ರೆಡ್ಡಿನ ತುಣುಕುಗಳನ್ನು ತಿಂದು, ಕಾಗದದ ಪೊಟ್ಟಣ ಎಸೆದು, ಫ್ಲಾಪಿಯನ್ನು ತೆಗೆದುಕೊಂಡಳು.
ಒಮ್ಮೆ ಅಮ್ಮನ ಜೊತೆಗೆ ಹೋದಾಗ ಒಂದು ಮನೆಯಲ್ಲಿ ಕಂಪ್ಯೂಟರ್ ನೋಡಿದ್ದಳು. ಆ ಮನೆಯಲ್ಲೊಬ್ಬ ಕಾಲೇಜಿಗೆ ಹೋಗುವ ಹುಡುಗನಿದ್ದ. ಆತ ಕಂಪ್ಯೂಟರಿನಲ್ಲಿ ಕೆಲಸ ಮಾಡುತ್ತಿದ್ದ. ಅದನ್ನು ನಿಮ್ಮಿ ನೋಡಿದ್ದಳು. ಅಲ್ಲಿ ಮೇಜಿನ ಮೇಲೆ ಇದ್ದ ಕೆಲವು ಫ್ಲಾಪಿಗಳನ್ನೂ, ಅವುಗಳನ್ನು ಕಂಪ್ಯೂಟರಿಗೆ ತುರುಕಿಸುವುದನ್ನೂ ಆಕೆ ಗಮನಿಸಿದ್ದಳು. ಆಕೆಗೆ ಈಗ ಕಸದ ತೊಟ್ಟಿಯಲ್ಲಿ ಸಿಕ್ಕ ಫ್ಲಾಪಿ ಕಂಪ್ಯೂಟರಿನಲ್ಲಿ ಬಳಕೆಯಾಗುವಂತಹುದು ಎಂದು ಮನವರಿಕೆಯಾಗಿತ್ತು. ಇದನ್ನು ತೆಗೆದುಕೊಂಡು ಹೋಗಿ ಆ ಹುಡುಗನಿಗೆ ಕೊಟ್ಟರೆ ಏನಾದರೂ ಹಣ ಸಿಗಬಹುದೇ ಎಂಬ ಆಸೆ ಸಹಜವಾಗಿಯೇ ಮೂಡಿತು. ನಿಮ್ಮಿ ಫ್ಲಾಪಿಯನ್ನು ಹಿಡಿದುಕೊಂಡು ಅಮ್ಮ ಕೆಲಸ ಮಾಡುತ್ತಿದ್ದ ಮನೆಗೆ ಹೋದಳು. ಆ ಹುಡುಗನಿಗೆ ಎಲ್ಲ ವಿವರಿಸಿ ಫ್ಲಾಪಿ ಕೊಟ್ಟಳು. ಅವಳು ಅಂದುಕೊಂಡಂತೆ ಆತ ಹಣವನ್ನೇನೂ ಕೊಡಲಿಲ್ಲ. ಫ್ಲಾಪಿಯನ್ನೂ ಉಡಾಫೆಯಿಂದಲೇ ಕಂಪ್ಯೂಟರಿಗೆ ತುರುಕಿಸಿದ.
ಆತ ಫ್ಲಾಪಿಯನ್ನು ಕಂಪ್ಯೂಟರಿಗೆ ಹಾಕಿ ಕೀಬೋರ್ಡಿನಲ್ಲಿ ಏನೇನೋ ಕುಟ್ಟತೊಟಗಿದ. ಮೌಸ್ ಹಿಡಿದು ಏನೇನೋ ಮಾಡಿದ. ನಿಮ್ಮಿಗೆ ಏನೂ ಅರ್ಥವಾಗಲಿಲ್ಲ. ತನಗೆ ಈತ ಹಣ ಕೊಡುತ್ತಾನೋ ಇಲ್ಲವೋ ಎಂದೇ ಆಕೆಗೆ ಚಿಂತೆ. ಆತನಂತೂ ಕಂಪ್ಯೂಟರಿನಲ್ಲೇ ಮಗ್ನನಾಗಿ ಬಿಟ್ಟ. ನಿಮ್ಮಿ ತನಗೆ ಏನಾದರೂ ಸಿಗಬಹುದೇನೋ ಎಂಬ ಆಸೆಯಲ್ಲಿ ನಿಂತೇ ಇದ್ದಳು. ಕಂಪ್ಯೂಟರಿನ ಪರದೆಯಲ್ಲಿ ಏನೇನೋ ಚಿತ್ರಗಳು ಮೂಡಿಬರುತ್ತಿದ್ದವು. ಕೊನೆಗೊಮ್ಮೆ ಆತ ಬಾಯಿಬಿಟ್ಟ. “ನಿಮ್ಮೀ, ನೀನು ತಂದಿರುವ ಫ್ಲಾಪಿಯಲ್ಲಿ ಏನೇನೋ ಇದೆ ಗೊತ್ತಾ? ಅದನ್ನು ಎಸೆದು ಹೋದವನನ್ನು ನೀನು ಗುರುತು ಹಿಡಿಯಬಲ್ಲೆಯಾ?”. ನಿಮ್ಮಿಗೆ ಸರಿಯಾಗಿ ಅರ್ಥವಾಗಲಿಲ್ಲ. ಆತ ಇನ್ನೊಮ್ಮೆ ಕಂಡರೆ ಗುರುತು ಹಿಡಿಯಬಲ್ಲೆ ಎಂದಳು. ಆದರೆ ಅದು ಯಾಕೆ ಎಂದು ಕೇಳಲು ಅವಳಿಗೆ ಧೈರ್ಯವಾಗಲಿಲ್ಲ.
ಆತ ಫೋನ್ ಎತ್ತಿಕೊಂಡು ಮಾತನಾಡತೊಡಗಿದಾಗ ನಿಮ್ಮಿ ಇನ್ನು ತನಗೆ ಏನೂ ದೊರೆಯಲಾರದು ಎಂದು ಅಲ್ಲಿಂದ ಕಾಲು ಕೀಳತೊಡಗಿದಳು. ಆದರೆ ಆತ ಆಕೆಗೆ ಅಲ್ಲೇ ನಿಲ್ಲಲು ಹೇಳಿದ. ಸ್ವಲ್ಪ ಹೊತ್ತಿನಲ್ಲಿ ಕೆಲವು ಪೋಲೀಸರು ಬಂದರು. ನಿಮ್ಮಿಗೆ ಭಯವಾಗತೊಡಗಿತು. ಆದರೆ ಪೋಲೀಸಿನವರು ಆಕೆಗೆ ಧೈರ್ಯ ತುಂಬಿದರು. ಆ ಬೈಕಿನಲ್ಲಿ ಬಂದ ವ್ಯಕ್ತಿ ಮತ್ತು ಬೈಕು ಮತ್ತೆ ಕಂಡರೆ ಗುರುತು ಹಿಡಿಯ ಬಲ್ಲೆಯಾ ಎಂದು ವಿಚಾರಿಸಿದರು. ಬೈಕಿನ ಬಲದ ಬದಿಯಲ್ಲಿದ್ದ ಡಬ್ಬದ ಮೇಲಿದ್ದ ಹಕ್ಕಿಯ ಚಿತ್ರ ನಿಮ್ಮಿಯ ನೆನಪಿಗೆ ಬಂತು. ಅದನ್ನೇ ವಿವರಿಸಿದಳು. ಪೋಲೀಸರಿಗೆ ಖುಷಿಯಾಯಿತು.
ಪೋಲೀಸರೇನೋ ಹೋದರು. ನಿಮ್ಮಿಗೆ ಮಾತ್ರ ಏನೂ ಅರ್ಥವಾಗಲಿಲ್ಲ. ಅಮ್ಮನಿಗೆ ಕೇಳಿದಳು. ಅಮ್ಮನಿಗೂ ಪೂರ್ತಿ ಅರ್ಥವಾಗಿರಲಿಲ್ಲ. ಆ ಹುಡುಗ ಮತ್ತು ಪೋಲೀಸರ ಮಾತಿನಿಂದ ಆಕೆಗೆ ತಿಳಿದು ಬಂದುದೇನೆಂದರೆ ಬೈಕಿನಲ್ಲಿ ಬಂದ ವ್ಯಕ್ತಿ ಒಬ್ಬ ಕೆಟ್ಟ ವ್ಯಕ್ತಿ. ಪೋಲೀಸರಿಗೆ ಬೇಕಾದವ. ಆತ ಏನೋ ಕಿತಾಪತಿ ನಡೆಸಲು ದೊಡ್ಡದೊಂದು ಯೋಜನೆ ಹಾಕಿದ್ದ. ಅದರ ವಿವರಗಳು ಫ್ಲಾಪಿಯಲ್ಲಿದ್ದವು. ಅಂತೂ ನಿಮ್ಮಿಗೆ ಎಣಿಸಿದಂತೆ ಹಣ ಸಿಗಲಿಲ್ಲ. ಆದರೆ ತಾನು ಫ್ಲಾಪಿ ತಂದುದು ಪೋಲೀಸರಿಗೆ ಸಹಾಯವಾಯಿತು ಎಂಬ ಅಂಶ ಮಾತ್ರ ಆಕೆಗೆ ಏನೋ ಒಂದು ಚಿಕ್ಕ ತೃಪ್ತಿ ನೀಡಿತು.
ಇದು ನಡೆದು ಸುಮಾರು ಒಂದು ವಾರ ಕಳೆದಿತ್ತು. ಒಂದು ದಿನ ಅದೇ ಮನೆಯವರು ನಿಮ್ಮಿಯನ್ನು ಕರೆದು ತರಲು ಆಕೆಯ ಅಮ್ಮನಿಗೆ ಹೇಳಿದರು. ನಿಮ್ಮಿ ಬಂದಾಗ “ಬಾ ನಡೆ, ನಮ್ಮ ಜೊತೆ. ಪೋಲೀಸ್ ಸ್ಟೇಶನ್ನಿಗೆ ಹೋಗಬೇಕು” ಎಂದಾಗ ಆಕೆಗೆ ಸ್ವಲ್ಪ ಭಯವಾಯಿತು. ಆದರೂ ಅವರನ್ನು ಒಮ್ಮೆ ನೋಡಿ ಮಾತನಾಡಿ ಅನುಭವವಿದ್ದುದರಿಂದ ಪೋಲೀಸ್ ಸ್ಟೇಶನ್ನಿಗೆ ಮನೆಯವರು ಮತ್ತು ಅಮ್ಮನ ಜೊತೆಗೆ ಹೋದಳು. ಸ್ಟೇಶನ್ನಿನಲ್ಲಿ ಆಕೆಯನ್ನು ತುಂಬ ಹೊಗಳಿ ಅವಳಿಗೆ ಐದು ಸಾವಿರ ರೂಪಾಯಿ ಬಹುಮಾನ ಕೊಟ್ಟರು. ಜೊತೆಗೆ ಶಾಲೆಗೆ ಉಚಿತವಾಗಿ ಸೇರ್ಪಡೆ. ನಿಮ್ಮಿಯಿಂದಾಗಿ ಒಬ್ಬ ಕುಖ್ಯಾತ ಅಂತಾರಾಷ್ಟ್ರೀಯ ಮಟ್ಟದ ಕೇಡಿ ಸಿಕ್ಕಿಬಿದ್ದಿದ್ದ. ನಿಮ್ಮಿಗೆ ಇನ್ನು ಮುಂದೆ ತಾನೂ ಇತರ ಮಕ್ಕಳಂತೆ ಶಾಲೆಗೆ ಹೋಬಹುದು, ಹೊಟ್ಟೆ ತುಂಬ ತಿನ್ನಬಹುದು ಎಂದು ಖುಷಿಯಾಯಿತು.

(ಪ್ರಜಾವಾಣಿ ಮತ್ತು ಅಕ್ಷರ ಫೌಂಡೇಶನ್ ಜೊತೆಯಾಗಿ ನಡೆಸಿದ ಮಕ್ಕಳ ಕಥಾಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದಿದೆ)

4 Responses to ನಿಮ್ಮಿ

  1. Prakash.B

    good sir

  2. PG

    What an inspirational small story?… I loved the innocence of the Girl character…

  3. kalakesh goravar

    gud one sir

  4. Bhargavi

    So nice

Leave a Reply