ವಿಕ್ರಾಂತ ಕರ್ನಾಟಕ -ವಸ್ತುನಿಷ್ಠ ಮ್ಯಾಗಜಿನ್

– ಬೇಳೂರು ಸುದರ್ಶನ

ಸಾಫ್ಟ್ವೇರ್ ತಂತ್ರಜ್ಞ ರವಿಕೃಷ್ಣಾರೆಡ್ಡಿಯವರು `ವಿಕ್ರಾಂತ ಕರ್ನಾಟಕ’ ಎಂಬ ಹೊಸ ಕನ್ನಡ ವಾರಪತ್ರಿಕೆಯನ್ನು ಆರಂಭಿಸುವುದರೊಂದಿಗೆ ಕನ್ನಡ ಮ್ಯಾಗಜಿನ್ ಪತ್ರಿಕೋದ್ಯಮದಲ್ಲಿ ಹೊಸ ಗಾಳಿಯನ್ನು ಬೀಸುವರೆ?
ಗೊತ್ತಿಲ್ಲ. ಆದರೆ ಅವರು ಈ ಪತ್ರಿಕೆಯನ್ನು ತರುವುದಕ್ಕೆ ಕೈಗೊಂಡ ಪೂರ್ವತಯಾರಿ, ಆಡಿದ ಮಾತುಗಳು, ಇಟ್ಟುಕೊಂಡ ಕನಸುಗಳು – ಎಲ್ಲವನ್ನೂ ನೋಡಿದರೆ ಅವರು ನಿಜಕ್ಕೂ ಹೊಸ ಗಾಳಿ ಬೀಸಲೇಬೇಕು ಎನ್ನುವಂತಿದೆ.

ಆಗಸ್ಟ್ ೧೭ರ ಸಂಜೆ ಈ ಪತ್ರಿಕೆಯ ಮೊದಲ ಪ್ರತಿಯನ್ನು ಅವರು ರಾಜ್ಯದ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ನೀಡಲಿದ್ದಾರೆ. ಸಚಿವ ಎಂ.ಪಿ.ಪ್ರಕಾಶ್, ವಿ.ಎನ್. ಸುಬ್ಬರಾವ್, ನಟಿ ತಾರಾ, ರಾಮಲಿಂಗಾರೆಡ್ಡಿ, ನಾರಾಯಣಸ್ವಾಮಿ ಮತ್ತು ಮಾಜಿ ಲೋಕಾಯುಕ್ತ ಎನ್. ವೆಂಕಟಾಚಲ – ಇವರೂ ಕಾರ್ಯಕ್ರಮದಲ್ಲಿ ಇರುತ್ತಾರೆ.

`ನನಗೆ ಇಂಗ್ಲಿಶಿನ ಔಟ್ಲುಕ್ ಮ್ಯಾಗಜಿನ್ ಮಾದರಿಯ ಮುದ್ರಣ ವಿನ್ಯಾಸದ ಮತ್ತು ಗುಣಮಟ್ಟದ ಪತ್ರಿಕೆಯನ್ನು ತರಬೇಕೆಂಬ ಉದ್ದೇಶವಿದೆ ಎಂದು ಅಮೆರಿಕದಿಂದ ಬಂದಕೂಡಲೇ ತನ್ನ ಮಿತ್ರಪತ್ರಕರ್ತರೊಡನೆ ಮಾತನಾಡುತ್ತ ರವಿಕೃಷ್ಣಾರೆಡ್ಡಿ ಹೇಳಿದ್ದರು. ಎರಡು ವಾರಗಳ ಕಾಲ ಅವರು ಬೆಂಗಳೂರಿನಲ್ಲಿ ಇರುವ ಎಲ್ಲ ಪ್ರಮುಖ ಪತ್ರಕರ್ತರನ್ನು ಭೇಟಿ ಮಾಡಿ ಪತ್ರಿಕಯ ಬಗ್ಗೆ ಮಾತನಾಡಿದ್ದರು. ಅವರೇ ಹೇಳುವಂತೆ ಅವರ ಈ ಭೇಟಿಗಳು ಅವರ ಹಲವಾರು ನಂಬಿಕೆಗಳನ್ನು ಬುಡಮೇಲು ಮಾಡಿದವು. `ಕೆಲವೊಮ್ಮೆ, ಮೂರು ವರ್ಷದ ಹಿಂದೇನಾದರೂ ಇದೇ ಸಂಗತಿ ಹೊರಗೆ ಬಂದಿದ್ದರೆ ನನ್ನ ಜೀವನ ಎಲ್ಲಿ ಯಾವಾಗ ಏನೇನು ತಿರುವು ತೆಗೆದುಕೊಳ್ಳುತ್ತಿತ್ತು ಎನ್ನುವುದರ ಕಲ್ಪನೆ ಬೆಂಗಳೂರಿನ ಆಷಾಢದ ರಾತ್ರಿಗಳಲ್ಲೂ ಬೆವರುವ ಹಾಗೆ ಮಾಡಿಬಿಟ್ಟಿತ್ತು’ ಎಂದು ರವಿ ತಮ್ಮ [http://www.vikrantakarnataka.com|ಜಾಲತಾಣದಲ್ಲಿ] ಹೇಳಿಕೊಂಡಿದ್ದಾರೆ. ಆದರೂ ‘ಕನ್ನಡದಲ್ಲಿ ಪ್ರಚಲಿತ ವಿದ್ಯಮಾನಗಳನ್ನು ಆಧರಿಸಿದ ವಸ್ತುನಿಷ್ಠ ವರದಿಗಾರಿಕೆಯ, ಅತ್ಯುತ್ತಮ ಗುಣಮಟ್ಟದ ಮುದ್ರಣದ, ಜನಪರ ವಾರಪತ್ರಿಕೆಯನ್ನು ಹೊರತರಬೇಕೆಂಬ ಯೋಜನೆ’ಯನ್ನು ಅವರು ಕಾರ್ಯಗತಗೊಳಿಸುತ್ತಿದ್ದಾರೆ.

`ಪತ್ರಿಕೆ ಪುಸ್ತಕ ಆಕಾರದಲ್ಲಿ, ಅಂದರೆ ಸುಧಾ-ತರಂಗದ ಆಕಾರದಲ್ಲಿ ಬರಲಿದೆ. ಒಟ್ಟು ಪುಟಗಳು ೬೪. ಎಲ್ಲಾ ಪುಟಗಳೂ ಬಹುವರ್ಣದಲ್ಲಿಯೇ ಇರುತ್ತವೆ. ಆಷ್ಟೇ ಮುಖ್ಯವಾದ ವಿಷಯ ಎಂದರೆ, ಎಲ್ಲಾ ಪುಟಗಳು ಉತ್ತಮ ಗುಣಮಟ್ಟದ ಗ್ಲೇಜ್‌ಡ್ ಕಾಗದದಿಂದ ಕೂಡಿರುತ್ತವೆ. ಮುಖಪುಟ ಬೆಲೆ ರೂ. ೧೦. ಅಸಲಿ ವಿಷಯ ಏನೆಂದರೆ, ಒಂದು ಪ್ರತಿಗೆ ಬೀಳುವ ಮುದ್ರಣದ ಖರ್ಚು ಓದುಗರು ನೀಡುವ ಮುಖಪುಟ ಬೆಲೆಗಿಂತ ಜಾಸ್ತಿ ಮತ್ತು ಏಜೆಂಟರು ಕಮಿಷನ್ ಕಳೆದು ನಮಗೆ ನೀಡುವ ಬೆಲೆಗಿಂತ ಬಹುಪಾಲು ಜಾಸ್ತಿ! ಈ ಖರ್ಚಿನಲ್ಲಿ ಸಂಪಾದಕ ಮಂಡಳಿ ಮತ್ತು ಪತ್ರಿಕೆಯ ಇತರೆ ಖರ್ಚು ಸೇರಿಲ್ಲ’ ಎಂಬ ಲೆಕ್ಕಾಚಾರವನ್ನೂ ಅವರು ನೀಡಿ ತಮ್ಮ ಪತ್ರಿಕೆ ಜಾಹೀರಾತಿನಿಂದಲೇ ಸ್ವಾವಲಂಬಿಯಾಗಬೇಕಿದೆ ಎಂದು ಪ್ರತಿಪಾದಿಸಿದ್ದಾರೆ. ಮಾರುಕಟ್ಟೆ ಶಕ್ತಿಗಳೇ ಇಂದು ಮಾಧ್ಯಮದ ಮೇಲೆ ಸಾಕಷ್ಟು ಹಿಡಿತ ಸಾಧಿಸಿರುವುದನ್ನು ಅವರೂ ಒಂದು ಬಗೆಯಲ್ಲಿ ಮುಕ್ತವಾಗಿ ಒಪ್ಪಿಕೊಂಡಿದ್ದಾರೆ.

`ಸದ್ಯಕ್ಕೆ ಕನ್ನಡಲ್ಲಿ ಜಾಹೀರಾತು ನಂಬಿಕೊಂಡು ಬದುಕುತ್ತಿರುವ ವಾರಪತ್ರಿಕೆ ಇಲ್ಲ . ವಾರಪತ್ರಿಕೆಗಳ ಮುಖಪುಟ ಬೆಲೆಗಿಂತ ಅವಕ್ಕೆ ಬೀಳುವ ಖರ್ಚು ಸ್ವಲ್ಪ ಕಡಿಮೆ. ಸ್ವಲ್ಪ ಕಡಿಮೆ ಎಂದು ಏಕೆ ಹೇಳಿದೆನೆಂದರೆ, ಯಾರೂ ಅನವಶ್ಯಕವಾಗಿ ಓದುಗರ ಸುಲಿಗೆ ಮಾಡುತ್ತಿಲ್ಲ. ಆದ್ದರಿಂದ ಜಾಹೀರಾತು ಇಲ್ಲದಿದ್ದರೂ, ಮುದ್ರಣದ ವಿಷಯದಲ್ಲಿ ಅಲ್ಪಸ್ವಲ್ಪ ರಾಜಿ ಮಾಡಿಕೊಂಡ ಕಾರಣವಾಗಿ ಅವರಿಗೆ ಖರ್ಚು ಗಿಟ್ಟುತ್ತಿದೆ. ಪ್ರಸಾರ ಜಾಸ್ತಿಯಾದಷ್ಟೂ ಅವುಗಳ ಖರ್ಚು ಕಮ್ಮಿಯಾಗಿ ಲಾಭಾಂಶ ಹೆಚ್ಚುತ್ತದೆ. ಆದರೆ, ಮುದ್ರಣದ ಗುಣಮಟ್ಟದಲ್ಲಿ ರಾಜಿಯಾಗಬಾರದು ಎಂಬ ಒಂದೇ ಕಾರಣಕ್ಕೆ `ವಿಕ್ರಾಂತ ಕರ್ನಾಟಕ’ಕ್ಕೆ ಜಾಹೀರಾತು ಬಹಳ ಮುಖ್ಯ’ ಎಂಬುದು ರವಿಯವರ ಪ್ರತಿಪಾದನೆ. ಓದುಗರ ಕಾಳಜಿಗೆ, ನಂಬಿಕೆ ಅಪಚಾರವಾಗದಂತೆ, ನಮ್ಮ ಪ್ರಾಮಾಣಿಕತೆಯಲ್ಲಿ ಎಂದಿಗೂ ರಾಜಿಯಾಗದಂತೆ ಇದನ್ನೆಲ್ಲ ಸಾಧಿಸಬೇಕು ಎಂಬ ತೀರ್ಮಾನವನ್ನೂ ರವಿ ಪ್ರಕಟಿಸಿದ್ದಾರೆ.

ಪತ್ರಕರ್ತ ಆನಂದೂರು ಸತ್ಯಮೂರ್ತಿಯವರು ಈ ಪತ್ರಿಕೆಯ ಸಂಪಾದಕರು. ಆನ್ಲೈನ್ ಪತ್ರಿಕೋದ್ಯಮದಲ್ಲಿ ಅನುಭವಿಯಾಗಿರುವ ರಾಜಲಕ್ಷ್ಮಿ ಕೋಡಿಬೆಟ್ಟು ಪತ್ರಿಕೆಯ ಇಂಟರ್ನೆಟ್ ಆವೃತ್ತಿಗೆ ವ್ಯವಸ್ಥಾಪಕ ಸಂಪಾದಕಿಯಾಗಿದ್ದಾರೆ.

ಒಟ್ಟಿನಲ್ಲಿ ರವಿ ಕೃಷ್ಣಾರೆಡ್ಡಿ ಕನ್ನಡ ಪತ್ರಿಕಾಕಾರಂಗದಲ್ಲಿ ಹೊಸ ಆಸಕ್ತಿಯನ್ನು ಹುಟ್ಟಿಸಿರುವುದಂತೂ ನಿಜ. ಈ ಆಸಕ್ತಿಯು ಹೇಗೆ ಕನ್ನಡಿಗರಿಗೆ ಹಿಡಿಸೀತು ಎಂಬ ನಿರೀಕ್ಷೆ ಈಗ ಇದೆ. ಕೃಷಿ ಮನೆತನದಿಂದ ಬಂದ ರವಿ ಮಾತನಾಡುವಾಗ , ಬರೆಯುವಾಗ ಭಾವುಕರಾಗುತ್ತಾರೆ. ತಮ್ಮ ಎದೆಗುದಿಯನ್ನು ಹಾಗೆಯೇ ಹೇಳಿಕೊಳ್ಳುತ್ತಾರೆ. ಎಲ್ಲರನ್ನೂ ಸ್ನೇಹದಿಂದ ಕಾಣಬಯಸುತ್ತಾರೆ. ವೃತ್ತಿಯಲ್ಲಿ ವಸ್ತುನಿಷ್ಠತೆ ಮತ್ತು ವೈಯಕ್ತಿಕ ನೆಲೆಯ ಭಾವುಕತೆ – ಎರಡನ್ನೂ ಅವರು ಹೇಗೆ ತೂಗಿಸಿಕೊಂಡು ಹೋಗುತ್ತಾರೆ ಎನ್ನುವುದು ಕುತೂಹಲಕರ!

(ಕೃಪೆ: ಹೊಸದಿಗಂತ)

Leave a Reply