ವರ್ಣಭೇದ’ ನೀತಿನಿರೂಪಕನ `ಪ್ರತಿಷ್ಠಿತ’ ಸ್ಕಾಲರ್ ಶಿಪ್
– [http://mitramaadhyama.co.in|ಬೇಳೂರು ಸುದರ್ಶನ]
ಅವನಿಗೆ ಬ್ರಿಟಿಶರೆಂದರೆ ಪಂಚಪ್ರಾಣ. ಆಂಗ್ಲೋ ಸ್ಯಾಕ್ಸನ್ ಜನಾಂಗವೇ ವಿಶ್ವದಲ್ಲೆಲ್ಲ ಶ್ರೇಷ್ಠ ಎಂದು ಆತ ಭಾವಿಸಿದ್ದ. ಹಿಟ್ಲರನಿಗಿಂತ ಮೊದಲೇ ಆತ ಜರ್ಮನರನ್ನೂ ಶ್ರೇಷ್ಠ ಜನಾಂಗವೆಂದು ಹೊಗಳಿದ್ದ. ಇಡೀ ವಿಶ್ವವೇ ಬ್ರಿಟಿಶರ ಅಡಿಯಾಳಾಗಬೇಕೆಂದು ಬಯಸಿ ಒಂದು ರಹಸ್ಯ ಸಮಾಜವನ್ನೇ ಸೃಷ್ಟಿಸಬೇಕು ಎಂದು ನಿರ್ಧರಿಸಿ ಅದಕ್ಕೆಂದೇ ತನ್ನ ಉಯಿಲಿನಲ್ಲಿ ಭಾರೀ ಪ್ರಮಾಣದ ಹಣವನ್ನು ತೆಗೆದಿರಿಸಿದ್ದ.
ಆದರೆ ಆತ ಸತ್ತಮೇಲೆ ಅವನ ಆಸೆಗಳನ್ನು ಪೂರೈಸಲೆಂದೇ, ಅದೇ ಹಣದಿಂದ ಒಂದು ಸ್ಕಾಲರ್‌ಶಿಪ್ ಸ್ಥಾಪಿಸಲಾಯಿತು. ಅದೇ ರೋಡ್ಸ್ ಸ್ಕಾಲರ್‌ಶಿಪ್. ನಮ್ಮ ಜ್ಞಾನಪೀಠ ಪುರಸ್ಕೃತ ಲೇಖಕ ಗಿರೀಶ್ ಕಾರ್ನಾಡರು ಈ `ಪ್ರತಿಷ್ಠಿತ’ ಸ್ಕಾಲರ್‌ಶಿಪ್ ಪಡೆದವರಲ್ಲಿ ಒಬ್ಬರು. ಮಾಜಿ ಅಥವಾ ಹಾಲಿ ಬ್ರಿಟಿಶ್ ವಸಾಹತುಗಳು, ಅಮೆರಿಕಾ, ಜರ್ಮನಿಯ ವಿದ್ಯಾರ್ಥಿಗಳು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದಲ್ಲಿ ಓದುವುದಕ್ಕೆಂದೇ ಈ ಸ್ಕಾಲರ್‌ಶಿಪ್ ಸ್ಥಾಪನೆಯಾಗಿದೆ.
೧೮೫೩ರಲ್ಲಿ ಹುಟ್ಟಿ ೧೯೦೨ರಲ್ಲಿ ವಿಶ್ವದ ಅತಿ ಶ್ರೀಮಂತ ವ್ಯಕ್ತಿಯಾಗಿ ಸತ್ತ ಸಸಿಲ್ ಜಾನ್ ರೋಡ್ಸ್ ಇಂದು ಪ್ರತಿಷ್ಠಿತ ಸ್ಕಾಲರ್‌ಶಿಪ್‌ನ ಮೂಲಕ ಬದುಕಿದ್ದಾನೆ. ತನ್ನದೇ ಹೆಸರಿನಲ್ಲಿ ಒಂದು ದೇಶವನ್ನೇ ನಿರ್ಮಿಸಿದ ರೋಡ್ಸ್ ಇಂದು ವಿಶ್ವವಿಖ್ಯಾತವಾಗಿರುವ ಡಿ ಬೀರ್ಸ್ ವಜ್ರಾಭರಣ ಸಂಸ್ಥೆಯ ಸ್ಥಾಪಕ. ಈ ಸಂಸ್ಥೆಯೇ ಈಗಲೂ ವಿಶ್ವದ ಶೇ. ೬೦ರಷ್ಟು ವಜ್ರ ಮಾರುಕಟ್ಟೆಯನ್ನು ವ್ಯಾಪಿಸಿದೆ.
ರೋಡ್ಸ್ ಒಬ್ಬ ವಸಾಹತುಶಾಹಿ. ತನ್ನದೇ ವಸಾಹತು ಮಾಡಿಕೊಂಡು ಸೇನೆಯನ್ನೂ ಕಟ್ಟಿಕೊಂಡು ಯುದ್ಧಗಳನ್ನೂ ಮಾಡಿದ. ಅವನ ದೇಶಕ್ಕೆ ಮೊದಲು ರೊಡೀಶಿಯಾ ಎಂಬ ಹೆಸರಿತ್ತು. ಆಮೇಲೆ ಅದು ಝಾಂಬಿಯಾ ಆಗಿ ಈಗ… ಝಿಂಬಾಬ್ವೆ ಆಗಿದೆ.
ಅವನ ವಸಾಹತುಶಾಹಿ ಧೋರಣೆಗಳು ಎಷ್ಟು ಪ್ರಬಲವಾಗಿದ್ದವು ಎಂದರೆ ವರ್ಣಬೇಧ ನೀತಿ ಎಂದು ಕೇಳಿದ್ದೀರಲ್ಲ… ಅದನ್ನು ರೂಪಿಸಿದವನೇ ರೋಡ್ಸ್. ದಕ್ಷಿಣ ಆಫ್ರಿಕಾದಲ್ಲಿ ಬ್ರಿಟಿಶರು ರೂಪಿಸಿಕೊಂಡ ಸಾಮ್ರಾಜ್ಯಶಾಹಿ ವ್ಯವಸ್ಥೆಯಲ್ಲಿ ರೋಡ್ಸ್ ನದೇ ಚಿಂತನೆಗಳು ತುಂಬಿಕೊಂಡಿವೆ. ಕೇಪ್ ಕಾಲೋನಿಯ ಮುಖ್ಯಮಂತ್ರಿಯಾಗಿದ್ದ ರೋಡ್ಸ್ ಒಮ್ಮೆ ಟ್ರಾನ್ಸ್‌ವಾಲ್ ಸರ್ಕಾರದ ವಿರುದ್ಧ ಯುದ್ಧ ಮಾಡಿ ಕೈ ಸುಟ್ಟುಕೊಂಡಿದ್ದೂ ಇದೆ. ಇದು ನಡೆದಿದ್ದು ೧೮೯೫ರಲ್ಲಿ.
ಆಫ್ರಿಕನ್ನರನ್ನು ಅತ್ಯಂತ ಕೀಳು ಪದಗಳಲ್ಲಿ ಜರೆಯುವುದು, ಅವರನ್ನು ಹಿಗ್ಗಾಮುಗ್ಗಾ ಅವಮಾನಿಸುವುದು ಇವೆಲ್ಲವೂ ರೋಡ್ಸ್‌ನ ಸಹಜ ವರ್ತನೆಗಳಾಗಿದ್ದವು. ಎಂದೂ ಆತ ತನ್ನ ವಸಾಹತು ಕನಸುಗಳನ್ನು ಬಿಟ್ಟುಕೊಡಲಿಲ್ಲ. ಮತಬೆಲೆ ಬುಡಕಟ್ಟಿನ ಜನರು ಆತನ ಸಂಸ್ಥೆಯ ವಿರುದ್ಧ ದಂಗೆ ಎದ್ದಾಗ ಅವರಿಗೆ ಸ್ವಾತಂತ್ರ್ಯ ಕೊಡುವ ಬದಲು ಮಾತುಕತೆ ನಡೆಸಿದ ರೋಡ್ಸ್ ಒಬ್ಬ ಜಾಣ ವ್ಯವಹಾರಸ್ಥನಾಗಿದ್ದ.
ರೋಡ್ಸ್ ಸ್ಕಾಲರ್‌ಶಿಪ್ ನಿಜಕ್ಕೂ ಪ್ರತಿಷ್ಠೆಯದೇ. ಅದನ್ನು ಪಡೆದವರೆಲ್ಲ ದೊಡ್ಡ ದೊಡ್ಡ ವ್ಯಕ್ತಿಗಳೇ. ಆದರೆ ಈ ಸ್ಕಾಲರ್‌ಶಿಪ್ ಹಿಂದೆ ಇರುವ ಆಫ್ರಿಕಾದ ಶೋಷಣೆ, ವರ್ಣಭೇದ ನೀತಿಯ ಕಲ್ಪನೆ, ವಸಾಹತುಶಾಹಿ ಇತಿಹಾಸ – ಯಾವುದಾದರೂ ನೆನಪಾಗಬೇಕಲ್ಲ?
ಅರೆ, ನೊಬೆಲ್ ಪ್ರಶಸ್ತಿಯ ಕಥೆ ಇನ್ನೇನು ಸ್ವಾಮಿ, ಡೈನಮೈಟ್‌ಗಳನ್ನು ಸಂಶೋಸಿ ಮಾರಿ ಬಂದ ಹಣವೇ ಅಲ್ಲವೆ ಎಂದು ನೀವು ಕೇಳಬಹುದು. ಅದೂ ನಿಜ. ಆತ ಸಾಯುವ ಮುನ್ನವೇ ಫ್ರೆಂಚ್ ಪತ್ರಿಕೆಯೊಂದು `ಸಾವಿನ ಸರದಾರ ಸತ್ತ’ ಎಂದು ಬರೆಯಿತಲ್ಲದೆ `ಹಿಂದೆಂದಿಗಿಂತ ಹೆಚ್ಚು ಬೇಗ ಹೆಚ್ಚು ಜನರನ್ನು ಕೊಲ್ಲುವ ಮಾರ್ಗ ಹುಡುಕಿದ ಡಾ|| ಆಲ್ರೆಡ್ ನೊಬೆಲ್ ನಿನ್ನೆ ಸತ್ತ’ ಎಂದು ಬಣ್ಣಿಸಿತು. ಈ ಸುಳ್ಳುಸುದ್ದಿಯೇ ನೊಬೆಲ್‌ಗೆ ತಾನು ಸತ್ತ ಮೇಲೂ ಎಲ್ಲರೂ ತನ್ನನ್ನು ನೆನಪಿಸಿಕೊಳ್ಳಬೇಕು ಅನಿಸಿತಂತೆ. ಅದಕ್ಕೇ ಆತ ತನ್ನೆಲ್ಲ ಹಣವನ್ನೂ ನೊಬೆಲ್ ಪ್ರಶಸ್ತಿಗಾಗಿ ಮೀಸಲಿಟ್ಟ ಕಥೆ ಈಗ ೧೦೫ ವರ್ಷ ಹಳೆಯದು.
ನಮ್ಮ ದೇಶದಲ್ಲೂ ಅನೇಕ ಉದ್ಯಮಿಗಳು, ವರ್ತಕರು ಪ್ರಶಸ್ತಿಗಳನ್ನು, ದತ್ತಿನಿಗಳನ್ನು ಸ್ಥಾಪಿಸಿದ್ದಾರೆ. ಅವುಗಳನ್ನು ಪಡೆದು ವಿದ್ಯಾವಂತರಾಗುವುದು ಒಳ್ಳೆಯದೋ, ಅಥವಾ ಅವರ ಇತಿಹಾಸವನ್ನೆಲ್ಲ ಕೆದಕುವುದೋ ಎಂಬ ಪ್ರಶ್ನೆ ಬರಬಹುದು. ಈ ಪ್ರಶ್ನೆ ಈವರೆಗೆ ಯಾಕೆ ಬರಲಿಲ್ಲ ? ನಮಗೆ ತಿಳಿವಳಿಕೆ ಬಂದಮೇಲಾದರೂ ಈ ಪ್ರಶ್ನೆ ಕೇಳಿಕೊಳ್ಳಬೇಕಲ್ಲವೆ? ಏನಾದರೂ ಮಾಡಿ ಬಂದ ಹಣದಿಂದ ಸ್ಕಾಲರ್‌ಶಿಪ್ ಸ್ಥಾಪಿಸುವುದಾದರೆ ನಾಳೆ ದಾವೂದ್ ಇಬ್ರಾಹಿಂ ವಿಶ್ವಶಾಂತಿಪ್ರಶಸ್ತಿಯನ್ನೂ ನಾವು ಕಾಣಬಹುದು.
ಶಸ್ತ್ರ ಝಳಪಿಸುತ್ತಿದ್ದ ಭಯೋತ್ಪಾದಕರಿಂದ ಹಲವು ಜನರ ಜೀವ ಉಳಿಸಿ ಕೊನೆಯಿಸಿರೆಳೆದ ನೀರ್ಜಾ ಭಾನೋಟ್ ನೆನಪಾಗುತ್ತಿದ್ದಾಳೆ. ೧೯೮೬ರ ಆ ದಿನ ಸಫಾರಿನಿ ಮತ್ತು ಆತನ ಸಹ ಭಯೋತ್ಪಾದಕರು ಪ್ಯಾನ್ ಆಮ್ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರನ್ನು ಮುಗಿಸಿಬಿಡಲು ಗ್ರೆನೇಡ್ ಎಸೆದು ಗುಂಡಿನ ದಾಳಿ ಶರು ಮಾಡಿದ್ದರು. ಆದರೆ ನೀರ್ಜಾ ಭಾನೋಟ್ ವಿಮಾನದ ಒಂದು ಬಾಗಿಲನ್ನು ತೆರೆದು ಪ್ರಯಾಣಿಕರನ್ನು ಹೊರಗೆ ತಳ್ಳಿದಳು. ಗುಂಡಿನದಾಳಿಗೆ ತಾನೇ ಅಡ್ಡ ನಿಂತಳು. ೧೭ ತಾಸುಗಳ ಅವಳ ಸಹನೆ, ಶೌರ್ಯ, ನಸುನಗು – ಎಲ್ಲವೂ ೭೬ ಅಮೆರಿಕನ್ ಪ್ರಯಾಣಿಕರ ನೆನಪಿನಿಂದ ಮಾಸಿಲ್ಲ. ಅವಳ ಅಪ್ಪ ಹರೀಶ್ ಭಾನೋಟ್ ಈಗ ನೀರ್ಜಾ ಭಾನೋಟ್ ಪ್ಯಾನ್ ಆಮ್ ಶೌರ್ಯ ಪ್ರಶಸ್ತಿ ಕೊಡುತ್ತಿದ್ದಾರೆ. ೨೨ರ ವಯಸ್ಸಿನಲ್ಲಿ, ಜನ್ಮದಿನಕ್ಕೆ ಇನ್ನೆರಡೇ ದಿನವಿದ್ದ ಗಳಿಗೆಯಲ್ಲಿ ಕರ್ತವ್ಯಪ್ರಜ್ಞೆ ಮೆರೆದ ಪ್ರೀತಿಯ ಮಗಳ ನೆನಪಿಗೆ. ದೌರ್ಜನ್ಯದ ವಿರುದ್ಧ ಎದ್ದುನಿಲ್ಲುವ ವ್ಯಕ್ತಿಗಳಿಗೆ ಈ ಪ್ರಶಸ್ತಿ ನೀಡಲಾಗುತ್ತಿದೆ. ೨೦೦೧ರಲ್ಲಿ ಈ ಪ್ರಶಸ್ತಿಯನ್ನು ತಮಿಳುನಾಡಿನ ಯಶೋದಾ ಪಡೆದಿದ್ದರು.
ಅವರು ಯಾರೂ ಅರುಂಧತಿ ರಾಯ್ ಥರವೋ, ಗಿರೀಶ್ ಕಾರ್ನಾಡ್ ಥರವೋ ಪ್ರಚಾರಕ್ಕೆ ಎಳಸಿದ್ದರೆ, ಕಂಡ ಕಂಡ ಸಮಸ್ಯೆಗಳಿಗೆಲ್ಲ ಹೇಳಿಕೆ ನೀಡುತ್ತಿದ್ದಾರೆ ಎಂಬ ಮಾಹಿತಿ ನನಗಂತೂ ಇಲ್ಲ.
(ಕೃಪೆ: ಹೊಸದಿಗಂತ)