ಮರೆಯೋದಂದ್ರ ಹ್ಯಾಂಗ… ಮಾವೋ ತ್ಸೆ ತುಂಗ !… ಹೀಂಗ….

– ಬೇಳೂರು ಸುದರ್ಶನ

ಚಂದ್ರಶೇಖರ ಕಂಬಾರರು ಬರೆದುಹಾಡಿದ ಸಾಲುಗಳನ್ನು ಹೀಗೆಲ್ಲ ತಿರುಚಬಹುದೆ ಎಂದು ಕೇಳಬಹುದೇನೋ. ಆದರೆ ಚೀನಾದಲ್ಲೇ ಈ ಹಾಡನ್ನು ಹೇಳುತ್ತಿದ್ದಾರಂತೆ….

ಹಾಗಂತ ಜೋಸೆಫ್ ಕಾಹ್ನ್ ಬರೆದಿದ್ದಾನೆ, `ನೂಯಾರ್ಕ್ ಟೈಮ್ಸ್’ ದಿನಪತ್ರಿಕೆಯಲ್ಲಿ. ಈ ವರ್ಷ ಪ್ರೌಢಶಾಲೆಗೆ ಹೋಗುವ ಮಕ್ಕಳಿಗೆ ಇಂಥದ್ದೊಂದು ಅಚ್ಚರಿ ಕಾದಿರುತ್ತೆ ಎಂದು ಜೋಸೆಫ್ ಉದ್ದುದ್ದ ಬರೆದಿದ್ದಾನೆ.
ಈ ಹೊಸ ಪಠ್ಯಗಳಲ್ಲಿ ಯುದ್ಧಗಳ ಕಥೆಯಿಲ್ಲ, ಮನೆತನಗಳ ಪ್ರವರವಿಲ್ಲ; ಕಮ್ಯುನಿಸ್ಟ್ ಹೋರಾಟಗಳ ರಗಳೆಯೂಇಲ್ಲವಂತೆ. ಅರ್ಥಶಾಸ್ತ್ರ, ತಂತ್ರeನ, ಸಾಮಾಜಿಕ ಕಟ್ಟುಪಾಡುಗಳು, ಜಾಗತೀಕರಣ – ಹೀಗೆ ಹೊಸ ವಿಷಯಗಳನ್ನು ಸೇರಿಸಲಾಗಿದೆಯಂತೆ. ಸಮಾಜವಾದವು ಒಂದೇ ಪುಟ್ಟ ಅಧ್ಯಾಯವಾಗಿ ಕಮರಿಹೋಗಿದೆಯಂತೆ. ೧೯೭೯ಕ್ಕಿಂತ ಮುಂಚಿನ ಕಮ್ಯುನಿಸ್ಟ್ ಆಂದೋಳನವು ಒಂದೇ ವಾಕ್ಯದಲ್ಲಿ ಮುಗಿದುಹೋಗಿದೆಯಂತೆ.

ಆಮೇಲೆ, ವಿಷಯ ಏನಪ್ಪಾ ಅಂದರೆ, ಚೀನಾ ದೇಶದ ಮಹಾನ್ ಸರ್ವಾಕಾರಿ ಮಾವೋ ಝೆಡಾಂಗ್ (ಚೀನೀ ಉಚ್ಚರಣೆಯಲ್ಲಿ ಮಾವೋತ್ಸೆ ತುಂಗ ಎಂಬುದು ಝೆಡಾಂಗ್ ಆಗುತ್ತದೆಯಂತೆ) ಹೆಸರು ಒಂದೇ ಒಂದು ಸಲ, ಅದೂ ನಡತೆ ಕುರಿತ ವಿಷಯಕ್ಕೆ ಬಂದಾಗ ಉಲ್ಲೇಖವಾಗಿದೆಯಂತೆ.

ತನ್ನ ಅಕೃತ ಸಿದ್ಧಾಂತವನ್ನೆಲ್ಲಬದಿಗೊತ್ತಿದ ಚೀನಾ ಸರ್ಕಾರ ಇನ್ನೇನು ತಾನೆ ಮಾಡೀತು ಎಂದು ಜೋಸೆಫ್ ಹೇಳುತ್ತಾನೆ. ಚೀನಾದ ಜನ ಭೂತಕಾಲವನ್ನು ಬಿಟ್ಟುಭವಿಷ್ಯತ್ತಿನ ಕಡೆಗೆ ಮೊಗ ಮಾಡಿ ಬದುಕುವುದನ್ನು ಕಲಿಯಬೇಕೆಂಬ ಇರಾದೆಯೇ ಈ ಬದಲಾವಣೆಗಳಿಗೆ ಕಾರಣವಂತೆ.

ಉದಾಹರಣೆಗೆ, ಈ ಪಠ್ಯಗಳಲ್ಲಿ ಈಗ ಜೆ.ಪಿ. ಮೋರ್ಗನ್ ಇದ್ದಾನೆ;ಬಿಲ್‌ಗೇಟ್ಸ್ ಇದ್ದಾನೆ; ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ಇದೆ; ಸ್ಪೇಸ್ ಶಟಲ್ ಇದೆ; ಜಪಾನಿನ ಬುಲೆಟ್ ಟ್ರೈನ್ ಇದೆ. ಕೊರಳಿಗೆ ಕಟ್ಟುವ ಟೈ ಬಗ್ಗೆ ಪಾಠವಿದೆ. ಫ್ರೆಂಚ್, ಬೋಲ್‌ಶೆವಿಕ್ ಕ್ರಾಂತಿಗಳು ಮೂಲೆಗುಂಪಾಗಿವೆ. ನಾನ್‌ಝಿಂಗ್ ಅತ್ಯಾಚಾರ (ಜಪಾನೀಯರಿಂದ), ವಸಾಹತುಶಾಹಿ ಶೋಷಣೆ, ಮಾವೋ, ಅವನ ಸುದೀರ್ಘ ಯಾತ್ರೆ – ಎಲ್ಲವೂ ಅಂಗೈಯಗಲದ ಸುದ್ದಿಗಳಾಗಿ ಮಾಧ್ಯಮಿಕ ಶಾಲೆಗಳಲ್ಲಿ ಮಾತ್ರ ಇದೆಯಂತೆ.

ಹೌದು. ಚೀನಾ ಬದಲಾಗುತ್ತಿದೆ. ನೀವು ಚೀನಾ ಆಕ್ರಮಿತ ಟಿಬೆಟನ್ನು ನೋಡಿದರೆ, ಅದೂ ಬದಲಾಗುತ್ತಿದೆ. ಟಿಬೆಟಿನ ರಾಜಧಾನಿ, ಟಿಬೆಟನ್ ಧರ್ಮಗುರು ದಲಾಯಿ ಲಾಮಾರವರ ಕೇಂದ್ರವಾಗಿದ್ದ ಲ್ಹಾಸಾ ಈಗ ಒಂದು ಜಾಗತಿಕ ಕಾಸ್ಮೋ – ಟೂರಿಸಮ್ ಕೇಂದ್ರವಾಗಿದೆ. ಲ್ಹಾಸಾಗೆ ಹೊಸ ರೈಲು ಬಂದಮೇಲಂತೂ ಇಲ್ಲಿಗೆ ಇನ್ನೂ ೪೦೦೦ ಹೆಚ್ಚು ಜನರು ಪ್ರವಾಸ ಮಾಡುತ್ತಿದ್ದಾರೆ. ಟಿಬೆಟನ್ನು ಚೀನಾದಲ್ಲಿ ಕರಗಿಸಲು ೨೫ ಸಾವಿರ ಕಿಲೋಮೀಟರುಗಳಷ್ಟು ರಸ್ತೆಗಳನ್ನು ನಿರ್ಮಿಸಲಾಗಿದೆ. ಈಗ ಲ್ಹಾಸಾದಲ್ಲಿ ಪಬ್‌ಗಳು, ಫ್ಯಾಶನ್ ಶಾಪಿಂಗ್ ಮಾಲ್‌ಗಳು ಬಂದಿವೆ. ಇಂಟರ್‌ನೆಟ್ ಈಗ ಲ್ಹಾಸಾದ ರಸ್ತೆಗಳಲ್ಲಿ ಹಾದುಹೋಗಿದೆ. ಟಿಬೆಟನ್ನರೆಲ್ಲ ಸಾಮಾನ್ಯವಾಗಿ ಕೆಳಹಂತದ ಕೆಲಸಗಾರರಾಗಿ ದುಡಿಯುತ್ತಿದ್ದಾರೆ. ಚೀನಾದಿಂದ ಬಂದವರೇ ಬಹುತೇಕ ಎಲ್ಲ ಅಂಗಡಿಗಳನ್ನು ನಡೆಸುತ್ತಿದ್ದಾರೆ. ನಮ್ಮ ಚಹರೆಯೇ ಮಾಯವಾಗುತ್ತಿದೆ ಎಂದು ಹೆಸರು ಹೇಳಲಿಚ್ಛಿಸದ ಟಿಬೆಟನ್ ಪಾಶ್ಚಾತ್ಯ ಪತ್ರಕರ್ತನೆದುರು ಕಣ್ಣೀರಿಡುತ್ತಾನೆ.

ಒಂದು ವಿಷಯದಲ್ಲಿ ಮಾತ್ರ ಚೀನಾ ಬದಲಾಗಿಲ್ಲ. ಅಲ್ಲಿ ಇನ್ನೂ ಬಲವಂತದ ಕಾರ್ಮಿಕ ಶಿಬಿರಗಳು ಇವೆ. ಲಾಗೋಯ್ ಎಂದು ಕರೆಯುವ ಈ ಶಿಬಿರಗಳಲ್ಲಿ ೬೦ ಲಕ್ಷ ಚೀನೀಯರಿದ್ದಾರೆ. ಲಾಗೋಯ್‌ಗಳಲ್ಲಿ ಇರುವವರು ೧೮ ತಾಸು ದುಡಿದ ಮೇಲೆ ಎಲ್ಲರೂ ಸಾಲಾಗಿ ಕೂತು ಕೊಟ್ಟಿದ್ದನ್ನು ಮುಕ್ಕುತ್ತಾರೆ. ಸಾಲು ಹಾಸಿಗೆಗಳ ಇಕ್ಕಟ್ಟಾದ ಕೋಣೆಗಳಲ್ಲಿ ಒರಗುತ್ತಾರೆ ; ದಿನಗಳ ಲೆಕ್ಕವಿಲ್ಲದೆ, ವರ್ಷಗಳ ಖುಷಿಯಿಲ್ಲದೆ. ಈ ಬಲಹೀನ ಮನುಷ್ಯರನ್ನು ಕಟ್ಟೆಚ್ಚರದಿಂದ ಕಾಯಲಾಗುತ್ತದೆ. ಲಾಗೋಯ್‌ಗಳ ಸುತ್ತಮುತ್ತ ತಂತಿಬೇಲಿ ಇದೆ. ಅವುಗಳಿಗೆ ವಿದ್ಯುತ್ ಹಾಯಿಸಲಾಗಿದೆ. ಜೀವಂತ ಹೆಣಗಳಿಗೆ ಭಾರೀ ಭದ್ರತೆ!

ಅದಕ್ಕೇ ವಿಶ್ವದ ಎಲ್ಲ ರೋಗಿಗಳು ಈಗ ಚೀನಾಕ್ಕೇ ಮುತ್ತಿಗೆ ಹಾಕಿದ್ದಾರೆ.

೧೪ ವರ್ಷಗಳಿಂದ ಚೀನಾ ದೇಶವು ೬೦ ಸಾವಿರ ಮೂತ್ರಪಿಂಡಗಳನ್ನು , ೬ ಸಾವಿರ ಪಿತ್ತಜನಕಾಂಗಳನ್ನು, ೨೫೦ ಹೃದಯಗಳನ್ನು ಅವು ಬೇಕಾಗಿದ್ದ ರೋಗಿಗಳಲ್ಲಿ ಸ್ಥಾಪಿಸಿದೆ. ಚೀನಾ ದೇಶದಲ್ಲಿ ಒದು ಮೂತ್ರಪಿಂಡಕ್ಕೆ ೩೫೦೦ ಪೌಂಡ್ ಅಂದರೆ ಸುಮಾರು ಎರಡೂವರೆ ಲಕ್ಷ ರೂಪಾಯಿ ಖರ್ಚಾಗುತ್ತದೆ. ಪಿತ್ತ ಜನಕಾಂಗಕ್ಕೆ ೧೨ ಲಕ್ಷ ರೂ. ; ವಿದೇಶಿಯರಿಗೆ ೧೬ ಲಕ್ಷ ರೂಪಾಯಿ. ಮೆದುಳನ್ನೇ ಖರ್ಚು ಮಾಡದೆ ಯಂತ್ರಗಳ ಹಾಗೆ ದುಡಿಯುವ ಕಾರ್ಮಿಕರೇ ಈ ಅಂಗಾಂಗಗಳನ್ನು ನೀಡುವ ದಾನಿಗಳು! ಯಾಕೆಂದರೆ ವರ್ಷಕ್ಕೆ ೬೦೦೦ ಜನರನ್ನು ನೇಣಿಗೆ ಹಾಕುವ `ನ್ಯಾಯ’ದಾನವೂ ಚೀನಾದಲ್ಲಿದೆ. ಚೀನಾದ ಎಲ್ಲಾ ರಾಜ್ಯಗಳಲ್ಲೂ ಲಾಗೋಯ್‌ಗಳಿವೆ. ಇವುಗಳ ಒಟ್ಟು ಸಂಖ್ಯೆ ೧೦೦೦ ಇರಬಹುದು ಎಂದು ಲಾಗೋಯ್ ಸಂಶೋಧನಾ ಪ್ರತಿಷ್ಠಾನ ಲೆಕ್ಕ ಹಾಕಿದೆ.

ಎಲ್ಲ ಬದಲಾವಣೆಗಳಿಗೆ ಸಾಕ್ಷಿಯಾಗಿ ಚೀನಾದ ಮಹಾಗೋಡೆ ನಿಂತಿದೆ.

ಪಠ್ಯಪುಸ್ತಕಗಳಲ್ಲಿ ಮಾವೋ ಮರೆಯಾಗಬಹುದು; ವಿಶ್ವದ ಬಹುದೊಡ್ಡ ಆರ್ಥಿಕ ಹುಲಿಯಾಗಿ ಚೀನಾ ಮೂಡುತ್ತಿರಬಹುದು; ಆದರೆ ಲಾಗೋಯ್‌ಗಳ ಬಗ್ಗೆ ಒಂದು ಪಾಠವೂ ಎಂದೆಂದೂ ಚೀನಾದ ಮಕ್ಕಳಿಗೆ ಇರುವುದಿಲ್ಲ.

ನಾವು? ಲಾಗೋಯ್ ಯಾತನಾಶಿಬಿರಗಳನ್ನು ನೋಡಿಯೂ ಪಾಠ ಕಲಿಯುವುದಿಲ್ಲ.

(ಕೃಪೆ: ಹೊಸದಿಗಂತ)

Leave a Reply