ಭರ್ಜರಿ ಪ್ರಶಸ್ತಿ, ಮಾನವ ಹಕ್ಕು ಮತ್ತು ಒಂದಷ್ಟು ಬೆವರು
ಬೂಕರ್ ಪ್ರಶಸ್ತಿಯ ಹಿಂದೆ ತಣ್ಣಗೆ ಜೀವ ಕಳೆದುಕೊಂಡವರೂ ಇದ್ದಾರೆ
– [http://mitramaadhyama.co.in|ಬೇಳೂರು ಸುದರ್ಶನ]
ಇತಿಹಾಸವನ್ನು ಮರೆಯಬೇಕು ಎಂದು ನಮ್ಮ ದೇಶದ ಹಲವು ಬುದ್ಧಿಜೀವಿಗಳು ಹೇಳುತ್ತಾರೆ. ರಾಮಜನ್ಮಭೂಮಿ? ಛೆ , ಛೆ ಅದನ್ನು ಟಾಯ್ಲೆಟ್ ಮಾಡಿಬಿಡಿ ಎನ್ನುತ್ತಾರೆ. ಸಂಸತ್ ಆಕ್ರಮಣಕ್ಕೆ ಮುಂದಾದ ಅಫ್ಜಲ್ ಗುರು? ಛೆ, ಎಲ್ಲಾದ್ರೂ ಉಂಟೆ…. ಕ್ಷಮಿಸಿಬಿಡಿ ಎನ್ನುತ್ತಾರೆ. ಮಾನನವಹಕ್ಕುಗಳ ದಮನ ಮಾಡಿದ ಕೇಂದ್ರ ಸರ್ಕಾರದ ಅಕಾಡೆಮಿ ಪ್ರಶಸ್ತಿಯನ್ನು ಅರುಂಧತಿ ರಾಯ್ ನಿರಾಕರಿಸುತ್ತಾರೆ.
ಅವರು ಹೇಳುವುದಕ್ಕೆ ಕಾರಣ ಇಲ್ಲಿದೆ:
೨೦೦೨ ಅಕ್ಟೋಬರ್ ತಿಂಗಳಿನಲ್ಲಿ ಇಂಗ್ಲೆಂಡಿನ ಬಿಗ್ ಫುಡ್ ಗ್ರೂಪ್ ಎಂಬ ದೈತ್ಯ ಸಂಸ್ಥೆಯು ಪುಟ್ಟ ಗಯಾನಾ ದೇಶದ ಮೇಲೆ ಒಂದು ಒತ್ತಡ ಹೇರಿತು: ೧೯೭೬ರಲ್ಲಿ ಅದು ಆ ದೇಶಕ್ಕೆ ನೀಡಿದ ಸಾಲವನ್ನು ಬಡ್ಡಿ ಸಹಿತ ಮರುಪಾವತಿ ಮಾಡಬೇಕೆಂದು ಸಂಸ್ಥೆಯು ಗಯಾನಾ ಸರ್ಕಾರವನ್ನು ಕೇಳಿತು. ಅದು ಕೇಳಿದ ಮೊತ್ತ: ೧೨ ದಶಲಕ್ಷ ಪೌಂಡ್. ಗಯಾನಾ ಸರ್ಕಾರವು ಸಕ್ಕರೆ ಉದ್ಯಮವನ್ನು ರಾಷ್ಟ್ರೀಕರಣ ಮಾಡಿದ್ದಕ್ಕೆ ಈ ಪರಿಹಾರ ಕೊಡಬೇಕಿತ್ತು. ಮೊದಲು ಇದ್ದ ೧೩ ದಶಲಕ್ಷ ಪೌಂಡ್ಗಳಲ್ಲಿ ೬ ದಶಲಕ್ಷ ಪೌಂಡ್ಗಳನ್ನು ಗಯಾನಾ ದೇಶ ಕಕ್ಕಿದ ಮೇಲೆ, ೧೯೮೯ರಿಂದ ಸಾಲ ಪಾವತಿ ಮಾಡಲಾಗಲಿಲ್ಲ. ಅದೇ ಬಡ್ಡಿಸಮೇತ ೧೨ ದಶಲಕ್ಷ ಪೌಂಡ್ ಆಗಿತ್ತು ಅನ್ನಿ…
ಗಯಾನಾ ದೇಶದ ಆಂತರಿಕ ಉತ್ಪನ್ನ ೨.೧೫ ಬಿಲಿಯ ಪೌಂಡ್. ಬಿಗ್ ಫುಡ್ ಸಂಸ್ಥೆಯದು ೫.೨ ಬಿಲಿಯ ಪೌಂಡ್. ಈ ದೇಶದ ಒಟ್ಟು ವಾರ್ಷಿಕ ಆದಾಯವೇ ೧೨೦ ದಶಲಕ್ಷ ಪೌಂಡ್. ಅಂದರೆ ಅದರ ಶೇ. ೧೦ರಷ್ಟನ್ನು ಬಿಗ್ಫುಡ್ ಕೇಳಿದೆ. ಈ ವಿಷಯ ಕೊನೆಗೆ ವಿಶ್ವಬ್ಯಾಂಕಿನ ನ್ಯಾಯಾಲಯದ ಕಟಕಟೆ ಹತ್ತಿತು. ಆದರೆ ಜಾಗತಿಕ ಮಟ್ಟದಲ್ಲಿ ಗಯಾನಾ ದೇಶದ ಪರವಾಗಿ ವರ್ಲ್ಡ್ ಡೆವಲಪ್ಮೆಂಟ್ ಮೂವ್ಮೆಂಟ್ ಮತ್ತು ಜ್ಯುಬಿಲೀ ರಿಸರ್ಚ್ ಸಂಸ್ಥೆಗಳು ದನಿ ಎತ್ತಿದವು. ಜನಾಭಿಪ್ರಾಯ ರೂಪಿಸಿದವು. ಕೊನೆಗೆ, ೨೦೦೩ರಲ್ಲಿ ಬಿಗ್ ಫುಡ್ ಸಂಸ್ಥೆಯು ಸಾಲವನ್ನು ಮನ್ನಾ ಮಾಡಬೇಕಾಯಿತು. ಗಯಾನಾದಲ್ಲಿ ಈ ಸಂಸ್ಥೆಯು ಖರೀದಿಸಿದ ಸಂಸ್ಥೆಯ ಹೆಸರು ….. ಬೂಕರ್. ಗಯಾನಾ ದೇಶಕ್ಕೆ ಕ್ಷಮಾದಾನ ನೀಡಿ ಸಾಲ ಮನ್ನಾ ಮಾಡುವ ಯಾವ ಮಾತೂ ಸಂಸ್ಥೆಯಿಂದ ಉದುರಲಿಲ್ಲ.
ಹೌದು. ಬೂಕರ್ ಪ್ರಶಸ್ತಿ ಇದೆಯಲ್ಲ, ಇದರ ಹಿಂದೆ ಇರುವ ಬೂಕರ್ ಹೆಸರಿನ ವ್ಯಕ್ತಿಯ ಒಡೆತನದ ಬೂಕರ್ ಮ್ಯಾಕ್ ಕೊನೆಲ್ ಸಂಸ್ಥೆಯು ೧೯೭೦ರ ದಶಕದಲ್ಲಿ ಗಯಾನಾದ ಆಂತರಿಕ ಉತ್ಪನ್ನದ ಮೂರನೇ ಒಂದು ಭಾಗದಷ್ಟನ್ನು ಹೊಂದಿದ್ದ ದೈತ್ಯ ಸಂಸ್ಥೆಯಾಗಿತ್ತು. ಈ ಸಂಸ್ಥೆಯಷ್ಟೇ ಅಲ್ಲ, ದೆಮೆರಾರಾ ಬಾಕ್ಸೈಟ್ ಕಂಪನಿ, ರೇನಾಲ್ಡ್ಸ್ ಬಾಕ್ಸೈಟ್ ಕಂಪನಿ, – ಇವೆರಡೇ ದೇಶದ ಶೇ. ೪೫ರಷ್ಟು ವಿದೇಶಿ ವಿನಿಮಯದ ಪಾಲನ್ನು ಹೊಂದಿದ್ದವು.
೧೮೩೪ರಲ್ಲಿ ಸ್ಥಾಪನೆಯಾದ ಬೂಕರ್ ಮ್ಯಾಕ್ ಕೊನೆಲ್ ಸಂಸ್ಥೆಯು ಮಾಡಿದ್ದಿಷ್ಟೆ: ಭಾರತ ಮತ್ತು ಆಫ್ರಿಕಾದ ಜನರನ್ನು ಗುಲಾಮಗಿರಿಗೆ ದೂಡಿ ಸಕ್ಕರೆ ಉದ್ಯಮದಲ್ಲಿ ದುಡ್ಡು ಮಾಡಿದ್ದು! ೧೮೩೮ರಿಂದ ೧೯೧೭ ರವರೆಗೆ ಗಯಾನಾ ದೇಶಕ್ಕೆ ಮಾರಾಟವಾಗಿ ಬಂದ ಗುಲಾಮರ ಸಂಖ್ಯೆ ೨,೪೦,೦೦೦.
೭೦ರ ದಶಕದಲ್ಲೇ ಗಯಾನಾ ದೇಶದ ಶೇ. ೮೦ರಷ್ಟು ಆರ್ಥಿಕತೆಯನ್ನು ಈ ಸಂಸ್ಥೆ ಬಗಲಿಗೆ ಹಾಕಿಕೊಂಡಿತ್ತು. ಗಯಾನಾದ ಶೇ. ೧೩ರಷ್ಟು ಜನ ಈ ಸಂಸ್ಥೆಯಲ್ಲಿ ದುಡಿಯುತ್ತಿದ್ದರು. ಈ ದಮನಕಾರಿ ನೀತಿಯಲ್ಲೇ ಸಂಸ್ಥೆಯು ಬೆಳೆದು ೯೦ರ ದಶಕದ ಕೊನೆಗೆ ಸಂಸ್ಥೆಯು ೨೦ ಸಾವಿರ ಜನರ ದೊಡ್ಡ ಸಂಸ್ಥೆಯಾಗಿ ಬೆಳೆಯಿತು ಎಂದು ಫ್ಲಿಂಡರ್ಸ್ ವಿಶ್ವವಿದ್ಯಾಲಯದ ಅಮೆಂಡಾ ಮ್ಯೂಲರ್ ಪ್ರಬಂಧವೊಂದರಲ್ಲಿ ಹೇಳುತ್ತಾರೆ.
೨೦೦೨ದಲ್ಲಿ ಬೂಕರ್ ಸಂಸ್ಥೆಯು ಬಿಗ್ಫುಡ್ ಸಂಸ್ಥೆಯೊಂದಿಗೆ ವಿಲೀನವಾದ ಮೇಲೆ ಬೂಕರ್ ಪ್ರಶಸ್ತಿಗೆ ಹಣ ಕೊಡಲಾಗದು ಎಂದಿತು. ಅಲ್ಲಿಯವರೆಗೆ ಬೂಕರ್ ಸಂಸ್ಥೆಯೇ ಈ ಪ್ರಶಸ್ತಿಯನ್ನು ನೀಡುತ್ತಿತ್ತು. ಈಗ ಮ್ಯಾನ್ ಸಮೂಹ ಇದನ್ನು ಪ್ರಾಯೋಜಿಸಿದ್ದರಿಂದ ಇದಕ್ಕೆ ಮ್ಯಾನ್ ಬೂಕರ್ ಅನ್ನೋ ಹಸರು ಬಂದಿದೆ.
ಆದ್ದರಿಂದ ಇತಿಹಾಸವನ್ನು ಮರೆಯಬೇಕು ಎಂದು ಅರುಂಧತಿ ರಾಯ್ ಹೇಳಿದ್ದರೆ ಸರಿಯೇ!! ಲಕ್ಷಾಂತರ ಜನರ ಗುಲಾಮಗಿರಿಯ ಮೂಲಕ ಬೆಳೆದ ಬೂಕರ್ ಸಂಸ್ಥೆಯ ಹಣವನ್ನು ಬಹುಮಾನವಾಗಿ ಪಡೆದ ಮೇಲೆ ಅಂಥ ಕ್ರೌರ್ಯದ ಹಿನ್ನೆಲೆಯ ಹಣದ ಇತಿಹಾಸವನ್ನು ನಾವೆಲ್ಲ ಮರೆಯಬೇಕು ತಾನೆ?
ಬಹುಮಾನದ ಹಣವನ್ನು ಸಮಾಜಸೇವೆಗೆ ನೀಡಿರಬಹುದು; ಆದರೆ ಈ ಹಣದ, ಈ ಪ್ರಶಸ್ತಿಯ ಹಿಂದೆ ಇರುವ ಅಮಾನುಷ ಇತಿಹಾಸ ಮಾಸಿಹೋಗುತ್ತದೆಯೆ? ೧೯೭೬ರಲ್ಲಿ ಬರಬೇಕಾಗಿದ್ದ ಹಣವನ್ನು ದಿವಾಳಿಯ ಅಂಚಿನಲ್ಲಿದ್ದ ದೇಶದಿಂದ ಬಡ್ಡಿ ಸಮೇತ ವಸೂಲಿ ಮಾಡಹೊರಟಿದ್ದ ಸಂಸ್ಥೆಯನ್ನು ಯಾಕೆ ಅರುಂಧತಿರಾಯ್ ಮನ್ನಿಸುತ್ತಾರೆ? ಗಯಾನಾದ ಜನರಿಗೆ ಜೀವ ಇಲ್ಲವೆ?
ಈ ವರ್ಷ ಬೂಕರ್ ಪ್ರಶಸ್ತಿಯನ್ನು ಭಾರತೀಯ ಲೇಖಕಿ ಅನಿತಾ ದೇಸಾಯಿ ಪಡೆದಿದ್ದಾರೆ ಎಂದು ನಾವು ಖುಷಿ ಪಡೋಣವೆ? ಪ್ರತಿವರ್ಷವೂ ಬೂಕರ್ ಪ್ರಶಸ್ತಿಯ ಬಗ್ಗೆ ಮಾಧ್ಯಮಗಳು ಹೊಂದುವ ವಿಪರೀತ ಸಡಗರವನ್ನು ನೆನಪಿಸಿಕೊಳ್ಳಿ…. ಹಾಗೆಯೇ ಸರಿಸುಮಾರು ಒಂದೂವರೆ ಶತಮಾನದ ಕಾಲ ಬೂಕರ್ ಸಂಸ್ಥೆಗಾಗಿ ಬೆವರು ಹರಿಸಿದ `ಗುಲಾಮರನ್ನು’, ಖಾಸಗಿ ಸಂಸ್ಥೆಗೆ ತಮ್ಮ ದೇಶದ ಸಂಪತ್ತನ್ನೆಲ್ಲ ಕೊಟ್ಟುಬಿಟ್ಟ ಗಯಾನಾದ ಮೂಲ ಪ್ರಜೆಗಳನ್ನು, ಅವರೊಂದಿಗೆ ಬದುಕಲು ಹೆಣಗಿದ ಹೊರದೇಶಗಳ ಗುಲಾಮರನ್ನು ನೆನಪಿಸಿಕೊಳ್ಳಿ.
ಮುಂದಿನ ವರ್ಷವೂ ಯಾವುದೋ ಕಾದಂಬರಿಗೆ ಬೂಕರ್ ಪ್ರಶಸ್ತಿ ಬಂದಾಗ ಒಂದು ಕ್ಷಣ ಇವರನ್ನು ಸ್ಮರಿಸಿಕೊಳ್ಳುವ ಪ್ರಯತ್ನವನ್ನಾದರೂ ಮಾಡಬಹುದೆ?
(ಕೃಪೆ: ಹೊಸದಿಗಂತ)