Press "Enter" to skip to content

ಬ್ರಿಟನ್ನಿಗರ ಖಾಸಗಿ ಮಾಹಿತಿಯೂ ಅಮೆರಿಕಾದ ಕೈಯಲ್ಲಿ!

-[http://mitramaadhyama.co.in|ಬೇಳೂರು ಸುದರ್ಶನ]

ಬ್ರಿಟನ್ನಿನಿನಿಂದ ಅಮೆರಿಕಾಗೆ ಹೋಗುವ ಎಲ್ಲ ವಿಮಾನಯಾನಿಗಳ ಕ್ರೆಡಿಟ್ ಕಾರ್ಡ್ ಮತ್ತು ಈ ಮೈಲ್ ಪತ್ರವ್ಯವಹಾರಗಳನ್ನು ಆಮೂಲಾಗ್ರವಾಗಿ ಪರಿಶೀಲಿಸುವ ಹಕ್ಕನ್ನು ಅಮೆರಿಕಾವು ಪಡಕೊಳ್ಳುವುದರೊಂದಿಗೆ ಈ ದೇಶಗಳ ನಡುವಣ ಮೈತ್ರಿ ಇನ್ನಷ್ಟು ಕಾವು ಪಡೆದಿದೆ!

ಅಲ್ಲದೆ ಇನ್ನುಮುಂದೆ ಇಂಥ ಎಲ್ಲ ಪ್ರಯಾಣಿಕರ ಹತ್ತೂ ಕೈಬೆರಳುಗಳ ಮುದ್ರೆಗಳನ್ನು ಇತರೆ ಕ್ರಿಮಿನಲ್‌ಗಳೊಂದಿಗೆ ಸೇರಿಸಿ ಪರೀಕ್ಷಿಸಲಾಗುವುದು ಎಂದೂ ಬ್ರಿಟನ್ ಸರ್ಕಾರ ಪ್ರಕಟಿಸಿದೆ. ಈ ಬೆರಳಚ್ಚುಗಳನ್ನು ಅಮೆರಿಕಾದ ಫೆಡೆರಲ್‌ಬ್ಯೂರೋ ಆಫ್ ಇನ್ವೆಸ್ಟಿಗೇಶನ್ ಸದಾ ಕಣ್ಣಲ್ಲಿ ಕಣ್ಣಿಟ್ಟು ನೋಡಲಿದೆ. ಈ ಬೆ ರಳಚ್ಚುಗಳನ್ನೂ ಅಮೆರಿಕಾವು ಯಾವುದೇ ದೇಶಕ್ಕಾದರೂ ನೀಡುವ ಹಕ್ಕನ್ನು ಹೊಂದಿದೆ.
ಬ್ರಿಟನ್ನಿನಿಂದ ಅಮೆರಿಕಾಗೆ ಪ್ರತಿವರ್ಷ ನಲವತ್ತು ಲಕ್ಷ ಜನ ಪ್ರಯಾಣಿಸುತ್ತಾರೆ.

ಈಗ ಬ್ರಿಟನ್ನಿನಿಂದ ಅಮೆರಿಕಾಗೆ ಹೋಗುವಾಗ ಈ ಎಲ್ಲ ಮಾಹಿತಿಗಳೂ ಅಮೆರಿಕಾದ ಭದ್ರತಾ ಸಿಬ್ಬಂದಿಗಳ ಕೈಗೆ ಹೋಗುತ್ತವೆ. ಈಗಾಗಲೇ ಜನವರಿ ೧ರಿಂದ ನೀಡಲಾಗುವ ಎಲ್ಲ ಪಾಸ್ ಪೋರ್ಟ್‌ಗಳಲ್ಲಿ ರೇಡಿಯೋ ಫ್ರಿಕ್ವೆನ್ಸಿ ಐಡೆಂಟಿಫಿಕೇಶನ್ ಮುದ್ರಿಕೆಯನ್ನು (ಆರ್ ಎಫ್ ಐ ಡಿ) ಅಂಟಿಸಲಾಗುವುದು ಎಂದು ಅಮೆರಿಕಾ ಪ್ರಕಟಿಸಿದೆ. ಇದರಿಂದಾಗಿ ವಿಮಾನಯಾನಿಗಳು ನಿಲ್ದಾಣದೊಳಕ್ಕೆ ಬರುತ್ತಲೇ ಅವರ ಎಲ್ಲ ವಿವರಗಳೂ ಭದ್ರತಾ ಸಿಬ್ಬಂದಿಗಳಿಗೆ ಗೊತ್ತಾಗಿಹೋಗುತ್ತದೆ.

ಅಮೆರಿಕಾದ ಈ ಕ್ರಮಗಳನ್ನು ನಾಗರಿಕ ಹಕ್ಕು ವೇದಿಕೆಗಳು ಬಲವಾಗಿ ಪ್ರತಿಭಟಿಸಿವೆ. ಭಯೋತ್ಪಾದನೆಯನ್ನು ಇಂಥ ಕ್ರಮಗಳಿಂದ ತಡೆಯಬಹುದು ಎನ್ನುವುದು ಮೂರ್ಖತನ ಎಂದು ಬ್ರಿಟನ್ನಿನ `ಲಿಬರ್ಟಿ’ ಸಂಸ್ಥೆ ಹೇಳಿದೆ. `ಇದು ನಮ್ಮ ಎಲ್ಲರ ಮಾಹಿತಿಗಳನ್ನು ಅಮೆರಿಕಾಗೆ ಮಾರಿಕೊಂಡ ಸ್ಥಿತಿ ಅಷ್ಟೆ’ ಎಂದು ಲಿಬರ್ಟಿ ಸಂಸ್ಥೆಯ ನಿರ್ದೇಶಕ ಶಮಿ ಚಕ್ರವರ್ತಿ ಹೇಳುತ್ತಾರೆ. ಸಾವಿರಾರು ಅಮಾಯಕ ಬ್ರಿಟನ್ನರನ್ನು ಭಯೋತ್ಪಾದಕರ ಪಟ್ಟಿಗೆ ಸೇರಿಸುವುದು ತಪ್ಪು ಎಂದು ಪ್ರೈವಸಿ ಇಂಟರ್‌ನ್ಯಾಶನಲ್‌ನ ಸೈಮನ್ ಡೇವೀಸ್ ಹೇಳುತ್ತಾರೆ. ಈಗ ಇರುವ ಬೆರಳಚ್ಚು ದಾಖಲೆಯ ೧೫ ಪ್ರಮುಖ ಬಯೋಮೆಟ್ರಿಕ್ ಯಂತ್ರಗಳ ಪಕಿ ೧೧ ಯಂತ್ರಗಳು ಮೋಸಹೋಗಿವೆ ಎಂಬ ಅಂಕಿ ಅಂಶವನ್ನು `ಸ್ಟೇಟ್ ವಾಚ್’ ಎಂಬ ಸಂಸ್ಥೆ ಜಪಾನಿನಲ್ಲಿ ನಡೆಸಿದ ಪ್ರಯೋಗದಿಂದ ಕಂಡುಕೊಂಡಿದೆ.

ಆದರೂ ಈ ಕ್ರಮಗಳಿಗೆ ಯಾವುದೇ ತಡೆ ಸಿಕ್ಕಿಲ್ಲ. ಭಯೋತ್ಪಾದನೆಯ ಭೀಕರ ಕನಸುಗಳಿಂದ ಇನ್ನೂ ಚೇತರಿಸಿಕೊಳ್ಳದ ಅಮೆರಿಕಾದ ಈ ಹೆಜ್ಜೆಗಳಿಗೆ ಸದ್ದಾಂ ಹುಸೇನ್‌ನ ಸಾವೇ ಕಾರಣವೇ ಎಂಬುದು ಇನ್ನಷ್ಟೇ ಖಚಿತವಾಗಬೇಕಷ್ಟೆ.

ಪ್ರಯಾಣಿಕರ ಈ ಮೈಲ್ – ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆಯುವುದಕ್ಕಾಗಿ ಅಮೆರಿಕಾವು ಐರೋಪ್ಯ ಸಮುದಾಯದೊಂದಿಗೇ ಒಪ್ಪಂದ ಮಾಡಿಕೊಂಡಿದೆ. ಇದನ್ನು ಐರೋಪ್ಯ ಸಾರಿಗೆ ಇಲಾಖೆಯು ಮಾಹಿತಿ ಹಕ್ಕಿನ ಅಡಿ ಕೇಳಿದ ಪ್ರಶ್ನೆಗೆ ಉತ್ತರವಾಗಿ ಪ್ರಕಟಿಸಿದೆ.

ಈ ಎಲ್ಲ ನಿಯಮಗಳನ್ನು ಅನುಸರಿಸುವುದು ಎಲ್ಲ ವಿಮಾನ ಸಂಸ್ಥೆಗಳಿಗೆ ಕಡ್ಡಾಯವಾಗಿದೆ. ಅದಿಲ್ಲವಾದರೆ ಅವುಗಳ ಅನುಮತಿಯೇ ರದ್ದಾಗಲಿದೆ ಎಂದೂ ಅಮೆರಿಕಾ ಹೇಳಿದೆ.

ಪ್ಯಾಸೆಂಜರ್ ನೇಮ್ ರೆಕಾರ್ಡ್ (ಪಿ ಎನ್ ಆರ್) ಎಂಬ ಪ್ರಾಥಮಿಕ ಮಾಹಿತಿಗಳ ಆಧಾರದಲ್ಲಿಯೇ ತನಿಖೆ ನಡೆಸಿ ಆಮೇಲೆ ಕಾನೂನಿನ ಮಾರ್ಗಗಳನ್ನು ಅನುಸರಿಸಿ ಈ ಮೈಲ್ ಮತ್ತು ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆಯಲಾಗುವುದು ಎಂದೂ ಅಮೆರಿಕಾ ಹೇಳಿದೆ. ಅಂದರೆ ಹೀಗೆ ಹೆಚ್ಚಿನ ಮಾಹಿತಿ ಪಡೆಯುವುದಕ್ಕೆ ಅಮೆರಿಕಾದ ಭದ್ರತಾ ಅಧಿಕಾರಿಗಳು ನ್ಯಾಯಾಲಯದ ಮೂಲಕ ಆದೇಶ ಪಡೆಯಬೇಕು. ಆದರೆ ಇದು ಎಷ್ಟು ಕಾರ್ಯಸಾಧ್ಯ ಎಂದು ಅಮೆರಿಕಾದ ಕಾನೂನು ತಜ್ಞರು ಹುಬ್ಬೇರಿಸಿದ್ದಾರೆ. ಅಮೆರಿಕಾದಲ್ಲಿ ಇಂಥ ಒಂದು ಪ್ರಕರಣ ದಾಖಲಾದರೂ, ದೂರು ಎದುರಿಸುವ ಪ್ರಯಾಣಿಕ ಅಮೆರಿಕಾದಲ್ಲೇ ವಕೀಲನನ್ನು ನೇಮಿಸಿಕೊಳ್ಳಬೇಕು!

ಆರ್ ಎಫ್ ಐ ಡಿ ಮುದ್ರಿಕೆಗಳನ್ನು ಮೆತ್ತಗೆ ಸುತ್ತಿಗೆಯಿಂದ ಜಜ್ಜಿದರೆ ಭದ್ರತಾ ಸಿಬ್ಬಂದಿಗಳು ಏನೂ ಮಾಡಲು ಬರುವುದಿಲ್ಲ ಎಂದು ಒಂದು ಜಾಲತಾಣದಲ್ಲಿ ಉಚಿತ ಸಲಹೆಯನ್ನು ನೀಡಲಾಗಿದೆ. ಆದರೆ ಅಕಸ್ಮಾತ್ ಹೀಗೆ ಉದ್ದೇಶಪೂರ್ವಕವಾಗಿಯೇ ಮಾಹಿತಿ ನಾಶ ಮಾಡಿದ ಬಗ್ಗೆ ಖಚಿತವಾದರೆ ೨೫ ವರ್ಷಗಳ ಸೆರೆಮನೆವಾಸ ತಪ್ಪಿದ್ದಲ್ಲ!

ಅಮೆರಿಕಾ – ಬ್ರಿಟನ್ – ಐರೋಪ್ಯ ಸಮುದಾಯದ ಈ ಕ್ರಮಗಳು ಮುಂದೆ ಇತರೆ ದೇಶಗಳಿಗೂ ವ್ಯಾಪಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

(ಕೃಪೆ: ಹೊಸದಿಗಂತ)

Be First to Comment

Leave a Reply

Your email address will not be published. Required fields are marked *