– ಬೇಳೂರು ಸುದರ್ಶನ
ರಸ್ತೆಗಳು ಕೇವಲ ಪೆಟ್ರೋಲ್ ಚಾಲಿತ ವಾಹನಗಳ ಆಸ್ತಿಯಲ್ಲ ಎಂಬುದನ್ನು ಕಾನೂನೂ ಮರೆತಿದೆ!
ಅಕ್ಟೋಬರ್ ೪ರಂದು ಕರ್ನಾಟಕ ಬಂದ್ ಆಗಿದ್ದಾಗ ಪತ್ರಿಕೆಗಳಲ್ಲಿ ಟಾಂಗಾ ಸವಾರಿಯ ಚಿತ್ರಗಳು ರಾರಾಜಿಸಿದವು. ನಾಗರಿಕರಿಗೆ ಟಾಂಗಾಗಳು ಎಷ್ಟು ನೆರವಾದವು ಎಂದು ಪ್ಯಾರಾಗಟ್ಟಳೆ ಬರೆದವು. ಟೆಲಿವಿಜನ್ ವಾಹಿನಿಗಳಲ್ಲೂ ಟಾಂಗಾಗಳು ಕಾಣಿಸಿಕೊಂಡವು.
ಮತ್ತೆ ಈ ಟಾಂಗಾಗಳು ಕಾಣಿಸಿಕೊಳ್ಳುವುದು ಮುಂದಿನ ಬಂದ್ ಹೊತ್ತಿಗೇ. ಅಲ್ಲಿಯವರೆಗೆ ಅವು ಮತ್ತೆ ಬಸ್ಸು, ಕಾರು, ಲಾರಿ, ಬೈಕುಗಳ ಅಬ್ಬರದಲ್ಲಿ ಹೇಗೋ ಜಾಗ ಮಾಡಿಕೊಂಡು ಸಾಗಬೇಕು. ಟಾಂಗಾ ಬಾಡಿಗೆಯನ್ನಷ್ಟೇ ನೀಡುವ `ಖರೀದಿ ಸಾಮರ್ಥ್ಯ’ ಇರುವವರು ಮಾತ್ರವೇ ಟಾಂಗಾಗಳಲ್ಲಿ ಸಂಚರಿಸುತ್ತಾರೆ. ಬೆಂಗಳೂರಿನಲ್ಲಿ ತರಕಾರಿಯಿಂದ ಹಿಡಿದು, ಉದ್ದುದ್ದದ ಕಬ್ಬಿಣದ ಕಂಬಿಗಳವರೆಗೆ ಹಲವು ಸರಕುಗಳನ್ನು ಸಾಗಿಸಲು ಟಾಂಗಾ ಬಳಸುತ್ತಾರೆ. ಉಳಿದಂತೆ ಟಾಂಗಾಗಳದ್ದು ನೀರಸ ಬದುಕು.
ನಿನ್ನೆಯಷ್ಟೇ `ದಿ ಹಿಂದೂ’ ಪತ್ರಿಕೆಯಲ್ಲಿ ದಿಲ್ಲಿಯ ಟಾಂಗಾವಾಲಾಗಳ ಬಗ್ಗೆ ಮನ ಕರಗುವ ಲೇಖನ ಬಂದಿದೆ. ಟಾಂಗಾವಾಲಾಗಳು ಹೇಗೆ ಲಂಚ ಕೊಟ್ಟೂ ದಂಡವನ್ನೂ ಕಕ್ಕುತ್ತಾರೆ ಎಂಬ ಚಿತ್ರಣ ಈ ಲೇಖನದಲ್ಲಿದೆ.
ಅದಿರಲಿ, ಈಗ ಬೆಂಗಳೂರಿನಲ್ಲಿ ಆಟೋರಿಕ್ಷಾಗಳಿಗೆ ಎಡ ಬದಿಯಲ್ಲಿ (ಒನ್ವೇಗಳಲ್ಲಿ ಎರಡೂ ಬದಿಗಳಲ್ಲಿ) ಪ್ರತ್ಯೇಕ ಸಾಲುಗಳನ್ನು ಮಾಡಲಾಗಿದೆ. ಸಂಜೆಯಾಯಿತೆಂದರೆ ಪೊಲೀಸರು ಈ ಸಾಲುಗಳಿಗೆ ಆಟೋರಿಕ್ಷಾಗಳನ್ನು ದಬ್ಬುತ್ತಿರುವ ದೃಶ್ಯ ಸಾಮಾನ್ಯ. ಆಟೋ ಚಾಲಕರು ಯಾವುದೋ ಅಪರಾಧ ಮಾಡಿದವರ ಹಾಗೆ ಕಮಕ್ ಕಿಮಕ್ ಎನ್ನದೆ ಈ ಸಾಲುಗಳಲ್ಲಿ ಸೇರಿಹೋಗುತ್ತಾರೆ. ಮುಂದಿನ ಆಟೋರಿಕ್ಷಾದ ವೇಗ ಆಮೆಗತಿಯಲ್ಲಿದ್ದರಂತೂ ಮುಗಿದೇ ಹೋಯಿತು. ಬೇಗ ಬಸ್ಸು – ರೈಲು ಹಿಡಿಯುವುದಕ್ಕೆ ಆಟೋದಲ್ಲಿ ಕುಳಿತವರು ಮೈ ಪರಚಿಕೊಳ್ಳಬೇಕು. ಆಸ್ಪತ್ರೆಗೆ, ಶಾಲೆಗೆ ಹೋಗುವವರು, ಎಲ್ಲರೂ ಹೀಗೆ ಆಟೋ ಸಾಲು ನಿರ್ಬಂಧಕ್ಕೆ ತುತ್ತಾಗುತ್ತಿರುವ ಪ್ರಜೆಗಳು.
ಕೆಲ ವರ್ಷಗಳ ಹಿಂದೆ ಬೈಸಿಕಲ್ ಓಡಿಸುವವರಿಗೆಂದೇ ಪ್ರತ್ಯೇಕ ಸಾಲುಗಳನ್ನು ಆಗಿನ ಅಧಿಕಾರಿ ಸಾಂಗ್ಲಿಯಾನಾ ರೂಪಿಸಿದ್ದರು. ಕೆಲವೆಡೆ ಬೈಸಿಕಲ್ಗಳನ್ನೇ ನಿಷೇಧಿಸಿದ್ದರು! ಈಗ ಆಟೋಗಳಿಗೆ ಪ್ರತ್ಯೇಕ ಸಾಲಿನ ನೂತನ ಯೋಜನೆ ಜಾರಿಗೆ ಬಂದಿದೆ. ಎಲ್ಲರಿಗೂ ಸಾಧನೆಯ ಗರಿ ಸಿಕ್ಕಿಸಿಕೊಳ್ಳುವ ತವಕ. ಸಾಮಾನ್ಯರು ಬೇಕಾದರೆ ನೆಗೆದುಬೀಳಲಿ ಎಂಬ ಧಿಮಾಕು.
ನೀವು ಕೆ.ಆರ್. ಮಾರುಕಟ್ಟೆಗೆ ಹೋದರೆ ಆಟೋ, ಟಾಂಗಾ, ಟ್ರಕ್ಕುಗಳು, ಸಿಟಿಬಸ್ಸುಗಳ ವೈವಿಧ್ಯಮಯ ಮಿಶ್ರಣದಲ್ಲಿ ಸಿಕ್ಕಿಕೊಳ್ಳುತ್ತೀರಿ. ನಿಜಭಾರತ ಇರುವುದು ಇಲ್ಲೇ ಎಂಬುದು ಅರಿವಾಗುತ್ತದೆ. ಇಂಥ ಬಹುವಾಹನಗಳನ್ನು ಹೊರುವ ಸಾಮರ್ಥ್ಯ ರಸ್ತೆಗೆ ಇಲ್ಲವೇ ಇಲ್ಲ. ಈ ರಸ್ತೆಗಳಂತೂ ನಿಜವಾಗಿಯೂ ದರಿದ್ರವಾಗಿವೆ. ಯಾಕೆಂದರೆ ರಸ್ತೆಗಳನ್ನು ನಿರ್ಮಿಸುವುದು ಟಯರುಗಳ ಒತ್ತಡದ ಮತ್ತು ತಿಕ್ಕಾಟದ (ಫ್ರಿಕ್ಷನ್) ಆಧಾರದ ಮೇಲೆಯೇ ಹೊರತು, ಎತ್ತಿನ ಬಂಡಿಯ ಕಬ್ಬಿಣದ ಗಾಲಿಯನ್ನಲ್ಲ!
ಟಾಂಗಾ, ಆಟೋರಿಕ್ಷಾ ಮತ್ತು ಬೈಸಿಕಲ್ಗಳು ಎಂದರೆ ಎರಡನೇ ದರ್ಜೆಯ ನಾಗರಿಕರ ಸಾಧನಗಳು ಎಂಬಂತೆ ನಮ್ಮ ಪೊಲೀಸರು ವರ್ತಿಸುತ್ತಾರೆ. ಇನ್ನು ಸಿಲಿಕಾನ್ ಸಿಟಿಯ ಬೈಕ್ ಸವಾರರಂತೂ ಫುಟ್ಪಾತ್ನಿಂದ ಹಿಡಿದು ಎಲ್ಲ ಖಾಲಿ ಜಾಗದಲ್ಲೂ ತೂರಿಕೊಳ್ಳುತ್ತ ತಮ್ಮ ಶಿಕ್ಷಣಮಟ್ಟವನ್ನು ತೋರಿಸಿಕೊಳ್ಳುತ್ತಿದ್ದಾರೆ. ರಸ್ತೆ ತುಂಬಿ ಫುಟ್ಪಾತ್ಗೂ ಚೆಲ್ಲಿಕೊಳ್ಳುವ ಈ ವಾಹನದಟ್ಟಣೆಯಲ್ಲಿ ನಡೆದಾಡುವ ನಾಗರಿಕರಂತೂ ಜೀವವನ್ನು ಕೈಯಲ್ಲೇ ಹಿಡಿದುಕೊಳ್ಳಬೇಕಿದೆ.
ಅದಕ್ಕೇ ಈಗ ಬೇಕಿದೆ, ಸಮಾನ ರಸ್ತೆ ಹಕ್ಕಿನ ಕಾಯ್ದೆ. ಪರಂಪರಾಗತ ಎತ್ತಿನ ಬಂಡಿಗಳಿಂದ ಹಿಡಿದು ಇಂದಿನ ಮಧ್ಯಮವರ್ಗಕ್ಕೆ ಎಟಕುವ ಆಟೋರಿಕ್ಷಾದವರೆಗೆ ಎಲ್ಲವೂ ಸಂಚಾರದ ವಿವಿಧ ಮಾಧ್ಯಮಗಳೇ. ಅವುಗಳಲ್ಲಿ ಕಡಿಮೆ ವೇಗದ್ದು, ಅತಿವೇಗದ್ದು ಎಂದು ವಿಂಗಡಿಸುವ ಕಾನೂನೇ ತಪ್ಪು. ದಟ್ಟಣೆ ಇರುವಾಗ ವೋಲ್ವೋ ಕೂಡಾ ವೇಗಮಿತಿಯಲ್ಲಿ ಸಾಗುವುದಿಲ್ಲವೆ? ರಸ್ತೆಗಳಲ್ಲಿ ಎಲ್ಲ ಬಗೆಯ ವಾಹನಗಳಿಗೂ ಸಮಾನ ಅವಕಾಶ ಇರಬೇಕು. ಕೇವಲ ಕಾರಿನಲ್ಲಿ ಹೋಗುವವರಿಗೆ ಮಾತ್ರವೇ ಅಲ್ಲ, ಆಟೋದಲ್ಲಿ ಹೋಗುವರಿಗೂ ತುರ್ತು ಇರುತ್ತದೆ. ಸೈಕಲ್ ತುಳಿಯುವವನಿಗೂ ಅವನದ್ದೇ ಆದ ತುರ್ತು ಕೆಲಸ ಇರುತ್ತದೆ.
ವಿದೇಶಗಳಲ್ಲಿ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಬೈಸಿಕಲ್ ಓಡಿಸುವವರಿಗೆ ಮತ್ತು ಎಲ್ಲ ಬಗೆಯ ವಾಹನಗಳನ್ನು ಬಳಸುವವರಿಗೆ ರಸ್ತೆಯ ಮೇಲೆ ಸಮಾನ ಹಕ್ಕುಗಳಿವೆ ಇವೆ ಎಂದು ಕಾನ್ಸಾಸ್ನ ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಬೈಸಿಕಲ್ ಸವಾರರಿಗೂ ಸಮಾನ ಅವಕಾಶ ಕೊಡಿ ಎಂದು ಫ್ಲೋರಿಡಾದ ಪೊಲೀಸರು ನಾಗರಿಕರಿಗೆ ಮನವಿ ಮಾಡಿಕೊಂಡಿದ್ದಾರೆ. ಸ್ಕಾಟ್ಲ್ಯಾಂಡಿನಲ್ಲಂತೂ ಬೈಸಿಕಲ್ ಸವಾರರು ಹಾಗೂ ಉಳಿದೆಲ್ಲ ವಾಹನ ಬಳಕೆದಾರರ ಬಗ್ಗೆ ದೊಡ್ಡ ಸಮೀಕ್ಷೆಯೇ ನಡೆದಿದೆ. ಈ ವರದಿಯಲ್ಲೂ ಕಡಿಮೆ ವೇಗದ ವಾಹನಗಳಿಗೆ ಕೂಡಾ ರಸ್ತೆಯ ಮೇಲೆ ಹಕ್ಕಿದೆ ಎಂಬ ಮಾತು ಖಚಿತವಾಗಿ ಮೂಡಿದೆ.
ನಮ್ಮ ದೇಶದಲ್ಲಿ ಸ್ವರ್ಣಚತುಷ್ಕೋನದ ಹೆಸರಿನಲ್ಲಿ ದೇಶದ ಮಹಾನಗರಗಳನ್ನು ಜೋಡಿಸುವ ಯೋಜನೆ ಆರಂಭವಾಗಿ ಯು ಪಿ ಎ ಸರ್ಕಾರಕ್ಕೆ ಸಿಕ್ಕಿಕೊಂಡು ನಲುಗುತ್ತಿರುವ ಬಗ್ಗೆ ಮಾಧ್ಯಮಗಳಲ್ಲಿ ಯಾವಾಗಲೂ ಚರ್ಚೆಯಾಗುತ್ತದೆ. ರೈಲುಮಾರ್ಗಗಳೇ ಇಲ್ಲದ ಬಗ್ಗೆ ಸಾಕಷ್ಟು ಚರ್ಚೆಯೂ ನಡೆಯುತ್ತದೆ. ಡೆಕ್ಕನ್ ಏರ್ವೇಸ್ ಪ್ರಯಾಣಿಕರು ಪರದಾಡಿದ ಬಗ್ಗೆ ಮುಖಪುಟದಲ್ಲಿ ಬಾಕ್ಸ್ ಐಟಂ ಬರುತ್ತದೆ. ಮೆಟ್ರೋ ಬೇಕೇ ಬೇಡವೇಎಂಬ ಬಗ್ಗೆ ಅಂಗಡಿ ಮಾಲೀಕರು ನಡೆಸಿದ ಮುಷ್ಕರ, ಮಲ್ಲೇಶ್ವರ ಅಂಡರ್ಪಾಸ್ನ ಔಚಿತ್ಯದ ಬಗ್ಗೆ ನಡೆಯುವ ಧರಣಿ ಎಲ್ಲವೂ ಸಾಕಷ್ಟು ಪ್ರಚಾರ ಪಡೆಯುತ್ತವೆ. ಶಾಸಕರು, ಸಂಸತ್ ಸದಸ್ಯರು ಈ ಬಗ್ಗೆ ನೂರಾರು ಹೇಳಿಕೆಗಳನ್ನು ನೀಡಿದ್ದಾರೆ.
ಆದರೆ ಮಲ್ಲೇಶ್ವರದ ಟಾಂಗಾ ಸ್ಟಾಂಡಿನಲ್ಲಿ ಕಂದಿಹೋದ ಮುಖಗಳನ್ನು ಗಮನಿಸುವವರಾರು? ಆಟೋದಲ್ಲಿ ದುಗುಡ ಹೊತ್ತು ಕುಳಿತಿರುವವರ ಬಗ್ಗೆ ಹೋರಾಡುವುದಿರಲಿ, ಬರೆಯುವವರಾರು? ಬೈಸಿಕಲ್ ಸವಾರಿ ಮಾಡುವುದೇ ಅವಮಾನಕರ ಎಂಬಂತೆ ಬೈಕ್ ಸವಾರರು ದುರುಗುಟ್ಟಿ ನೋಡುವ ವರ್ತನೆಯನ್ನು ಖಂಡಿಸುವವರಾರು? ಫುಟ್ಪಾತಿನ ಮೇಲೆ ಬೇಕಾಬಿಟ್ಟಿ ಹಾಯುವ ಶಿಕ್ಷಿತರನ್ನು ಶಿಕ್ಷಿಸುವವರಾರು?
(ಕೃಪೆ: ಹೊಸದಿಗಂತ)
Be First to Comment