ದೇಶದ ಹಿರಿಮೆ ಸಾರಲು ವೆಂಕಟೇಶ್ ಬ್ಲಾಗ್

– ಬೇಳೂರು ಸುದರ್ಶನ

ಕೇವಲ ಒಳ್ಳೆಯ ಸುದ್ದಿಗಳನ್ನೇ ಓದಬೇಕೆಂದರೆ ನೀವು [http://venkatesh.blogspot.com|venkatesh.blogspot.com] -ಇಲ್ಲಿಗೆ ಬನ್ನಿ.

೧೫ನೇ ಶತಮಾನದ ರಶಿಯನ್ ವ್ಯಾಪಾರಿ ಅಫನಾಸಿ ನಿಕಿತಿನ್ ದಕ್ಷಿಣ ಭಾರತದವರೆಗೂ ಬಂದಿದ್ದ.ರಶಿಯಾ, ಜಾರ್ಜಿಯಾ, ಅರ್ಮೇನಿಯಾ, ಇರಾನ್, ಮುಂಬಯಿ – ಹೀಗೆ ಈ ಪ್ರವಾಸಿಯ ಮಾರ್ಗದಲ್ಲೇ ಈಗ ಒಂದು ಅತ್ಯಾಧುನಿಕ ಸಲಕರಣೆಗಳನ್ನು ಹೊತ್ತ ಅಂತಾರಾಷ್ಟ್ರೀಯ ತಂಡವೊಂದು ಪ್ರವಾಸ ಕೈಗೊಂಡಿದೆ. ಈ ಸುದ್ದಿ ತೆಲುಗುಪೋರ್ಟಲ್ ಜಾಲತಾಣದಲ್ಲಿ ಬಂದಿದೆ.

ಮುಂಬಯಿ ಮೂಲದ ಅನೀಶ್ ಕಪೂರ್ ಈಗ ವಿಶ್ವದ ೧೦೦ ಅತಿಪ್ರಭಾವಿ ಕಲಾವಿದರಲ್ಲಿ ಒಬ್ಬರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಸುದ್ದಿ ಹಿಂದುಸ್ತಾನ್ ಟೈಮ್ಸ್ನಲ್ಲಿ ಪ್ರಕಟವಾಗಿದೆ.

ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ರಾಯಿಟರ್ ಇನ್ಸ್ಟಿಟ್ಯೂಟ್ ಆಫ್ ಸ್ಟಡಿ ಆಫ್ ಜರ್ನಲಿಸಮ್ ನ ನಿರ್ದೇಶಕಿಯಾಗಿ ಭಾರತೀ – ಅಮೆರಿಕಾ ಸಂಜಾತೆ ಶರ್ಮಿಲಾ ಬೋಸ್ ನೇಮಕವಾಗಿದ್ದಾರೆ. ಆಕೆಯ ಸಾಧನೆಗಳ ಬಗ್ಗೆ ಹೆಚ್ಚಿನ ಮಾಹಿತಿಗಳನ್ನು ನೀವು ಐ ಬಿ ಎನ್ ಲೈವ್ ಜಾಲತಾಣದಲ್ಲಿ ಪಡೆಯಬಹುದು.

೧೯೯೩ರ ಗಲಭೆಗಳಲ್ಲಿ ಆಸಿಡ್ ದಾಳಿಗೆ ತುತ್ತಾದ ನಿತೀಶ್ ಸೋನಾವಣೆ ಮತ್ತೆ ಬದುಕನ್ನು ಕಟಿಕೊಂಡ ಸುದ್ದಿಯನ್ನು ಡಿ ಎನ್ ಎ ಇಂಡಿಯಾ ಜಾಲತಾಣದಲ್ಲಿ ನೀವು ಕಾಣಬಹುದು. ಆಂಧ್ರಪ್ರದೇಶದ ವಿಜಿಯನಗರಂ ಜಿಲ್ಲೆಯ ಭೀಮಾವರಂ ಎಂಬ ಹಳ್ಳಿಯಲ್ಲಿ ೭೦೦ಕ್ಕೂ ಹೆಚ್ಚು ಜನರು ನೇತ್ರದಾನ ಮಾಡಿದ ಸುದ್ದಿಯನ್ನು ನೀವು ಝೀ ನ್ಯೂಸ್ ಜಾಲತಾಣದಲ್ಲಿ ನೋಡಬಹುದು. ವಿದೇಶೀಯರಿಗೆ ಭಾರತವು ಹೆಚ್ಚು ಅರ್ಥವಾಗುವ ಹಾಗೆ ಮಾಡುವ ಗ್ಲೋಬಲ್ ಅಡ್ಜಸ್ಟ್ಮೆಂಟ್ ಸಂಸ್ಥೆಯ ಮುಖ್ಯಸ್ಥೆ ರಂಜಿನಿಯ ಸುದ್ದಿಯನ್ನು, ಫಾರ್ವರ್ಡ್ ಬಹುಮಾನ ಪಡೆದ ತಿಶಾನಿ ದೋಶಿಯ ಸುದ್ದಿಯನ್ನು, ದಿನಕ್ಕೊಂದು ಒಳ್ಳೆಯ ಕೆಲಸ ಮಾಡುವ ಚೆನ್ನೈನ ಶ್ರೀ ಕೃಷ್ಣ ಸ್ವೀಟ್ಸ್ ಕಥೆಯನ್ನು, ಭಾರತೀಯ ತಿಂಡಿ ತಿನಿಸುಗಳ ಪುಸ್ತಕ ಬರೆದು ಪ್ರಖ್ಯಾತವಾದ ವಿಕ್ರಂ ವಿಜ್ ಪರಿಚಯವನ್ನು, ವೆಸ್ಟ್ ಮಿನಿಸ್ಟರ್ ವಿಶ್ವವಿದ್ಯಾಲಯದ ಪ್ರಥಮ ಚಾನ್ಸೆಲರ್ ಆದ ಸ್ವರಾಜ್ಪಾಲ್ ಗಾಥೆಯನ್ನು, ನ್ಯೂಯಾರ್ಕ್ನಲ್ಲಿ ಸಭಿಕರ ಮನಗೆದ್ದ ಬಿರ್ಜು ಮಹಾರಾಜ್ರ ನೃತ್ಯವೈಭವವದ ಸುದ್ದಿಯನ್ನು…..

ಎಲ್ಲವನ್ನೂ ನೀವು ಎಲ್ಲಿ ನೋಡಬಹುದು? ವೆಂಕಟೇಶ್ರವರ ಬ್ಲಾಗ್ಸ್ಪಾಟ್ನಲ್ಲಿ ಮೇಲೆ ತಿಳಿಸಿದ ಎಲ್ಲ ಸುದ್ದಿಗಳನ್ನೂ ಓದಬಹುದು.

ಸಿನಿಮಾ, ಸೆಕ್ಸ್, ಕ್ರೈಮ್ ಮತ್ತು ಪಾಲಿಟಿಕ್ಸ್ – ಇವುಗಳಿಂದ ಹೊರತಾದ ಅಭ್ಯುದಯ ಪತ್ರಿಕೋದ್ಯಮವನ್ನು ನಾವು ರೂಪಿಸೋಣ ಎಂದು ಹಿರಿಯ ಫ್ರೀಲ್ಯಾನ್ಸ್ ಪತ್ರಕರ್ತ `ಶ್ರೀ’ ಪಡ್ರೆ ಹೇಳುತ್ತಿರುತ್ತಾರೆ (ಅವರೀಗ `ಅಡಿಕೆ ಪತ್ರಿಕೆಗೆ ಮರಳಿದ್ದಾರೆ, ಶುಭಾಶಯಗಳು). `ಶ್ರೀ’ ಪಡ್ರೆಯವರೂ `ಇಂಡಿಯಾ ಟುಗೆದರ್’ ಎಂಬ ಜಾಲತಾಣದಲ್ಲಿ ಒಳ್ಳೆಯ ಸುದ್ದಿಚಿತ್ರಗಳನ್ನು ನೀಡುತ್ತಿದ್ದಾರೆ. ಈ ಹಾದಿಯಲ್ಲಿ ಜಗತ್ತಿನ ವಿವಿಧ ಪತ್ರಿಕೆಗಳಲ್ಲಿ ಬಂದ ಭಾರತದ ಬಗೆಗಿನ ಒಳ್ಳೆಯ ಮತ್ತು ಖುಷಿಕೊಡುವ ಸುದ್ದಿಗಳನ್ನು ಮಾತ್ರ ನೀಡುವ ಯತ್ನ ವೆಂಕಟೇಶ್ರದು.

ಮೊದಲೇ ಹೇಳಿದ ಹಾಗೆ ಇದೊಂದು ಬ್ಲಾಗ್. ಆಂದರೆ ವೆಂಕಟೇಶ್ರವರ ವೈಯಕ್ತಿಕ ಆಸಕ್ತಿಯ ಅಭಿವ್ಯಕ್ತಿ. ಸತ್ಯಂ ಸಂಸ್ಥೆಯ ಸಿಫಿ (sifys)ಯಲ್ಲಿ ಹಿರಿಯ ಪತ್ರಕರ್ತರಾಗಿರುವ ವೆಂಕಟೇಶ್ಗೆ ಇದೊಂದು ಕ್ರೇಝ್. `ಎಲ್ಲಾ ಪತ್ರಿಕೆಗಳಲ್ಲೂ ಒಳ್ಳೆಯ ಸುದ್ದಿಗಳು ಬರುತ್ತವೆ. ಆದರೆ ಅವೆಲ್ಲವನ್ನೂ ಎಲ್ಲೆಲ್ಲೋ ಹಾಕುತ್ತಾರೆ. ಅವೆಲ್ಲವನ್ನೂ ಜೋಡಿಸಿ ಓದುಗರಿಗೆ ನೀಡುವುದಕ್ಕೆಂದೇ ಈ ಬ್ಲಾಗ್ ಶುರು ಮಾಡಿದ್ದೇನೆ’ ಎಂದು ವೆಂಕಟೇಶ್ ಹೇಳುತ್ತಾರೆ.

`ಭಾರತದಲ್ಲಿ ಅನೇಕ ಸಾಮಾನ್ಯರು ಯಾವುದೇ ಸಿದ್ಧಾಂತಗಳ ಬೆಂಬಲವಿಲ್ಲದೇ ಅಪಾರ ಸಾಧನೆಯ ಬದುಕನ್ನು ನಡೆಸುತ್ತಿದ್ದಾರೆ. ಅವರಲ್ಲದೆ ಪ್ರಚಾರವೇ ಇಲ್ಲದ ಹಲವು ಭಾರತೀಯರೂ ನಮ್ಮ ನಡುವೆ ಇದ್ದಾರೆ. ಅದಕ್ಕೇ ಈ ಯಾವ ಭೇದವೂ ಇಲ್ಲದೆ ಎಲ್ಲ ಭಾರತೀಯರ ಸಾಧನೆಗಳನ್ನು ದಾಖಲಿಸುವ ಯತ್ನ ನಡೆಸಿದ್ದೇನೆ’ ಎಂದು ವೆಂಕಟೇಶ್ ಚೆನ್ನೈನಿಂದಲೇ ಈ ಲೇಖಕನಿಗೆ ತಿಳಿಸಿದರು.

ಮೂಲತಃ ಎಡಪಂಥೀಯ ಸಿದ್ಧಾಂತಗಳಲ್ಲಿ ನಂಬಿಕೆ ಇಟ್ಟುಕೊಂಡು ಅನೇಕ ಚಳವಳಿಗಳಲ್ಲಿ ಪಾಲ್ಗೊಂಡ ವೆಂಕಟೇಶ್ ಕೊನೆಗೆ `ಭಾರತದಂಥ ದೇಶದಲ್ಲಿ ಇಂಥ ಸಿದ್ಧಾಂತಗಳಿಗೆ ಅವಕಾಶವಿಲ್ಲ’ ಎಂಬ ನಿಲುವನ್ನು ಅನುಭವದಿಂದ ಪಡೆದುಕೊಂಡರು. ಸದಾ ದೇಶದ ರಾಜಕೀಯ ವರ್ತಮಾನಗಳ ಕಡೆಗೆ ವಾರೆನೋಟ ಇಟ್ಟುಕೊಂಡಿರುವ ವೆಂಕಟೇಶ್ ಕಳೆದ ಜೂನ್ ತಿಂಗಳಿನಿಂದ ಈ ಕಾಯಕದಲ್ಲಿ ನಿರತರು.

ಮುಂದೆ ಇದೇ ಹಾದಿಯನ್ನು ಬೆಳೆಸಿ ಸ್ವಂತ ಸುದ್ದಿಗಳೂ ಇರುವ ಜಾಲತಾಣವೊಂದನ್ನು ರೂಪಿಸುವುದು ಅವರ ಕನಸು. ಆಮೇಲೆ ಮುದ್ರಣಮಾಧ್ಯಮದಲ್ಲ ಇಂಥದ್ದೊಂದು ಮ್ಯಾಗಜಿನ್ ತರುವುದೂ ಅವರ ಕಾರ್ಯಸೂಚಿಯಲ್ಲಿದೆ.
ದಿನವೂ ಹೊಸ ಒಳ್ಳೆ ಸುದ್ದಿಗಳನ್ನು ಓದುಗರಿಗಾಗಿ ಹುಡುಕಿಕೊಡಲು ವೆಂಕಟೇಶ್ ಸಾಕಷ್ಟು ಶ್ರಮ ವಹಿಸಿದ್ದಾರೆ. ಈವರೆಗೆ ೨೦೦ ಇಂಥ ಸುದ್ದಿಗಳನ್ನು ಅವರು ಪ್ರಕಟಿಸಿದ್ದಾರೆ.

(ಕೃಪೆ: ಹೊಸದಿಗಂತ)

Leave a Reply