ಭಾರತೀಯ ಭಾಷಾ ಗಣಕಲೋಕದ ಪಿತಾಮಹ – ಶ್ರೀ ಕೆ.ಪಿ ರಾವ್

– ಎ. ಸತ್ಯನಾರಾಯಣ

ಅಲ್ಪ ಸಾಧನೆಯನ್ನೇ ತಮ್ಮ ಜೀವಮಾನದ ಅತಿದೊಡ್ಡ ಸಾಧನೆ ಎಂಬಂತೆ ಬಿಂಬಿಸಿ ಪ್ರಶಸ್ತಿ-ಪುರಸ್ಕಾರಗಳನ್ನು ಬೆಂಬತ್ತಿ ಹೋಗುವವರ ನಡುವೆ ಹಲವು ವ್ಯಕ್ತಿಗಳು ಸದ್ದು-ಗದ್ದಲವಿಲ್ಲದೆ ತಮ್ಮ ಅತ್ಯುತ್ತಮ ಸಾಧನೆಗಳಿಂದ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದು ತೆರೆಮರೆಯಲ್ಲಿಯೇ ಉಳಿದಿರುತ್ತಾರೆ. ಅಂತಹ ಸಾಧನೆಗಳನ್ನು ಮಾಡಿ ತೆರೆಮರೆಯಲ್ಲಿಯೇ ಉಳಿದಿರುವ ವ್ಯಕ್ತಿಗಳಲ್ಲಿ ಶ್ರೀ ಕೆ.ಪಿ. ರಾವ್ ಸಹ ಒಬ್ಬರು.

ನಮ್ಮ ದೇಶದಲ್ಲಿ ಆಧುನಿಕ ಮುದ್ರಣ ತಂತ್ರಜ್ಞಾನದ ಅನುಷ್ಠಾನ, ಭಾರತೀಯ ಭಾಷಾ ಲಿಪಿಗಳ ಫೋಟೋಕಂಪೋಸಿಂಗ್ ಮತ್ತು ಸುಂದರ ಮುದ್ರಣದ ಕುರಿತು ಯಾರೂ ಸಹ ಹೆಚ್ಚು ಆಲೋಚನೆಯನ್ನೇ ಮಾಡಿರದ ಅಂದಿನ ಸಂದರ್ಭದಲ್ಲಿ ಇವೆಲ್ಲವನ್ನು ಬಹಳಷ್ಟು ಧ್ಯಾನಿಸಿದ, ವಿನೂತನ ಮಾರ್ಗಗಳನ್ನು ಅನ್ವೇಷಿಸಿದ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಹತ್ತು ಹಲವು ಹೊಸ ಹೊಸ ಪ್ರಯೋಗಗಳನ್ನು ಕೈಗೊಂಡು ಅದರಲ್ಲಿ ಯಶಸ್ಸನ್ನು ಕಂಡವರಲ್ಲಿ ನಮ್ಮವರೇ ಆದ ಶ್ರೀ ಕೆ.ಪಿ ರಾವ್ ಅವರು ಮೊದಲಿಗರು. ಶ್ರೀ ಕೆ.ಪಿ ರಾವ್ ಪ್ರಸ್ತುತ, ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಕಮ್ಯುನಿಕೇಷನ್‌ನಲ್ಲಿ ಗೌರವ ಪ್ರಾಧ್ಯಾಪಕರಾಗಿ “ಸೈಂಟಿಫಿಕ್ ಕಮ್ಯುನಿಕೇಷನ್”ನ್ನು ವಿದ್ಯಾರ್ಥಿಗಳಿಗೆ ಕಲಿಸುತ್ತಿದ್ದಾರೆ.

ಭಾರತೀಯ ಭಾಷೆಗಳ ಲಿಪಿಯನ್ನು ಕಂಪ್ಯೂಟರ್ ಬಳಸಿ ಪಡಿಮೂಡಿಸುವ ತಂತ್ರಜ್ಞಾನಕ್ಕೆ ತಮ್ಮದೇ ರೀತಿಯಲ್ಲಿ ಉತ್ತಮ ಕೊಡುಗೆಯನ್ನು ಇವರು ನೀಡಿದ್ದಾರೆ. ಇದು ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ. ಅಲ್ಲದೆ, ಕನ್ನಡದ ಕಂಪ್ಯೂಟರ್ ಕ್ಷೇತ್ರದ ಹಲವು ಪ್ರಥಮಗಳಿಗೆ ಇವರು ಕಾರಣರಾಗಿದ್ದಾರೆ. ಅಂದಿನ ಸೀಮಿತ ತಂತ್ರಜ್ಞಾನವನ್ನು ಬಳಸಿ ೧೯೮೮ರಲ್ಲಿಯೇ ಕನ್ನಡಕ್ಕೆ ಪ್ರಪ್ರಥಮವಾಗಿ ಪರ್ಸನಲ್ ಕಂಪ್ಯೂಟರ್ಗಳಲ್ಲಿ ಬಳಸಬಹುದಾದ “ಸೇಡಿಯಾಪು” ಎಂಬ ಹೆಸರಿನ ತಂತ್ರಾಂಶವನ್ನು (ಡಾಸ್ ಎಡಿಟರ್) ಸಿದ್ಧಪಡಿಸಿ ಕನ್ನಡಿಗರೆಲ್ಲರ ಬಳಕೆಗೆ ಉಚಿತವಾಗಿ ನೀಡಿದವರು ಶ್ರೀಯುತ ಕೆ.ಪಿ ರಾವ್ರವರು. “ಸೇಡಿಯಾಪು” ತಂತ್ರಾಂಶವು ಕನ್ನಡ ಭಾಷೆಯಲ್ಲಿ ಪತ್ರಗಳು ಮತ್ತು ಲೇಖನಗಳನ್ನು ಕಂಪ್ಯೂಟರ್ ಬಳಸಿ ಸಿದ್ಧಪಡಿಸಲು ಬಳಕೆಗೆ ಬಂದ ಪ್ರಥಮ ಡಾಸ್ ಆಧಾರಿತ ಪದಸಂಸ್ಕಾರಕ (ವರ್ಡ್ ಪ್ರೋಸೆಸರ್). ಇವರು ಕಾಲಕಾಲಕ್ಕೆ ಲಭ್ಯವಿದ್ದ ತಂತ್ರಜ್ಞಾನಗಳನ್ನು ಬಳಸಿ ಸುಂದರವಾದ ಕಂಪ್ಯೂಟರ್ ಫಾಂಟ್ಗಳನ್ನು ನಿರ್ಮಿಸಿದರು. ಅಂತಹ ಕನ್ನಡ ಲಿಪಿಯ ಫಾಂಟ್ನ್ನು ಸುಲಭವಾಗಿ ಕಂಪ್ಯೂಟರ್ನಲ್ಲಿ ಮೂಡಿಸಲು ಸರಳ ಹಾಗೂ ತರ್ಕಬದ್ಧವಾದ ಕೀಲಿಮಣೆ ವಿನ್ಯಾಸವನ್ನು ರಚಿಸಿದ ಕೀರ್ತಿ ಶ್ರೀ ಕೆ.ಪಿ ರಾವ್ರವರಿಗೆ ಸಲ್ಲುತ್ತದೆ. ಇದೇ ಕೀಲಿಮಣೆ ವಿನ್ಯಾಸ ಕನ್ನಡದ ಅಧಿಕೃತ ವಿನ್ಯಾಸ ಎಂದು ಇಂದು ಮಾನ್ಯತೆಯನ್ನು ಪಡೆದಿದೆ.

ತರ್ಕಬದ್ಧವಾದ ಸುಲಭ ಕೀಲಿಮಣೆ ವಿನ್ಯಾಸ

ಕನ್ನಡ ಲಿಪಿ ಮೂಡಿಕೆಗಾಗಿ ವಿವಿಧ ರೀತಿಯ ವಿವಿಧ ವಿನ್ಯಾಸದ ಬೆರಳಚ್ಚು ಯಂತ್ರದ ಮಾದರಿಗಳೇ ಬಳಕೆಯಲ್ಲಿತ್ತು. ಇವುಗಳನ್ನು ಬಳಸಿ ಲಿಪಿಮೂಡಿಕೆ ಕ್ರಮಗಳನ್ನು ಕಲಿಯುವುದು ಕಷ್ಟಕರವಾಗಿತ್ತು. ಈಗಿರುವ ಇಂಗ್ಲಿಷ್ ಕೀಲಿಮಣೆಯ K ಅನ್ನು ಒತ್ತಿದರೆ ಕನ್ನಡದ “ಕ” ಮೂಡುವಂತೆ, K ಮತ್ತು a ಅನ್ನು ಕ್ರಮವಾಗಿ ಬೆರಳಚ್ಚಿಸಿದರೆ “ಕಾ” ಮೂಡುವಂತೆ, K ಮತ್ತು i ಒತ್ತಿದರೆ “ಕಿ” ಮೂಡುವಂತೆ ಹೊಸ ತರ್ಕವನ್ನು ಬಳಸಿ ಕನ್ನಡಕ್ಕೆ ಹೊಸ ಕೀಲಿಮಣೆ ವಿನ್ಯಾಸವನ್ನೇ ಕೆ.ಪಿ ರಾವ್ರವರು ರೂಪಿಸಿದರು. ಈಗಿರುವ ೨೬ ಇಂಗ್ಲಿಷ್ ಕೀಲಿಗಳನ್ನೇ ಬಳಸಿ ಕನ್ನಡದ ಎಲ್ಲಾ ಒತ್ತಕ್ಷರಗಳನ್ನು ಹಾಗೂ ಗುಣಿತಾಕ್ಷರಗಳನ್ನು ಮೂಡಿಸುವ ಹೊಸ ಕ್ರಮವನ್ನು ಅನ್ವೇಷಿಸಿದರು. ಇಂಗ್ಲಿಷ್ನ ಸ್ವರಗಳನ್ನು ಮತ್ತು ವ್ಯಂಜನಗಳನ್ನು ಉಚ್ಛಾರಣಾ ಧ್ವನಿ ಆಧರಿಸಿ ಕ್ರಮವಾಗಿ ಕನ್ನಡದ ಸ್ವರಗಳಿಗೆ ಮತ್ತು ವ್ಯಂಜನಗಳಿಗೆ ಸಂವಾದಿಯಾಗಿಸಲಾಗಿದೆ. ಆದುದರಿಂದಲೇ ಈ ವಿನ್ಯಾಸಕ್ಕೆ “ಧ್ವನ್ಯಾತ್ಮಕ” ವಿನ್ಯಾಸ ಎಂಬ ಹೆಸರೂ ಬಂತು. ಧ್ವನಿ ಆಧಾರಿತ, ತರ್ಕಬದ್ಧ ಕ್ರಮದಿಂದಾಗಿ ಕನ್ನಡ ಭಾಷೆಯ ಲಿಪಿ ಮೂಡಿಸಲು ಕಂಪ್ಯೂಟರ್ ಬಳಕೆದಾರರಿಗೆ ನೆನಪಿನ ಶಕ್ತಿಗೆ ಹೆಚ್ಚಿನ ಒತ್ತಡ ಇಲ್ಲ. ವ್ಯಂಜನ ಮತ್ತು ಸ್ವರ ಸೇರಿ ಗುಣಿತಾಕ್ಷರವಾಗುತ್ತದೆ ಹಾಗೂ ಲಿಂಕ್ ಕೀಲಿ ಬಳಕೆಯೊಂದಿಗೆ ಒಂದು ವ್ಯಂಜನ ಮತ್ತೊಂದು ವ್ಯಂಜನ ಸೇರಿ ಒತ್ತಕ್ಷರವಾಗುತ್ತದೆ ಎಂಬ ಸರಳ ತರ್ಕವನ್ನು ಬಳಕೆದಾರ ನೆನಪಿಟ್ಟುಕೊಂಡರೆ ಸಾಕು. ಈ ವಿನ್ಯಾಸವು ಧ್ವನಿ ಆಧಾರಿತವಾಗಿರುವುದರಿಂದ ಇರುವ ಇಂಗ್ಲಿಷ್‌ನ ಕೀಲಿಮಣೆಯನ್ನೇ ಬಳಸಿ ಕನ್ನಡದ ವೇಗದ ಬೆರಳಚ್ಚು ಕಲಿಯುವುದು ಸುಲಭ. ಇದಕ್ಕೆ ಒಂದು ಉದಾಹರಣೆಯನ್ನು ನೋಡೋಣ. ಕನ್ನಡ ಬೆರಳಚ್ಚು ಯಂತ್ರದಲ್ಲಿ “ಯೋ” ಎಂಬುದನ್ನು ಮೂಡಿಸಲು ಆರು ಕೀಲಿಗಳನ್ನು ಒತ್ತಬೇಕು!. ಬೆರಳಚ್ಚು ಯಂತ್ರದ ವಿನ್ಯಾಸವೇ ಇರುವ ಕಂಪ್ಯೂಟರ್ ತಂತ್ರಾಂಶದಲ್ಲಿ “ಯೋ” ಮೂಡಿಸಲು ಕನಿಷ್ಠ ಮೂರು ಕೀಲಿಗಳನ್ನಾದರೂ ಒತ್ತಬೇಕು. ಆದರೆ, ಕೆ.ಪಿ.ರಾವ್ರವರ ಕೀಲಿಮಣೆ ವಿನ್ಯಾಸದಲ್ಲಿ ಕೇವಲ ಯ (y) ಮತ್ತು ಓ (O) ಎಂಬ ಎರಡು ಕೀಲಿಗಳನ್ನು ಒತ್ತಿದರೆ “ಯೋ” ಮೂಡುತ್ತದೆ. ಒತ್ತಲಾದ ಎರಡು ಕೀಲಿಗಳನ್ನು ಆಧರಿಸಿ ಗುಣಿತಾಕ್ಷರಗಳು ಮತ್ತು ಒತ್ತಕ್ಷರಗಳನ್ನೂ ಮೂಡಿಸುವ ಈ ತಂತ್ರಗಾರಿಕೆ ಮೊದಲಿಗೆ ಹೊಳೆದದ್ದು ಶ್ರೀ ಕೆ.ಪಿ.ರಾವ್ರವರಿಗೆ. ಲಿಪಿ ಮೂಡಿಕೆಯ ತರ್ಕವು ಇತರ ಎಲ್ಲಾ ಭಾರತೀಯ ಭಾಷೆಗಳಿಗೂ ಸಮಾನವಾಗಿರುವುದರಿಂದ ಭಾಷಾ ಶಾಸ್ತ್ರೀಯವಾಗಿಯೂ ಸಹ ಧ್ವನ್ಯಾತ್ಮಕತೆಯನ್ನು ಈ ವಿನ್ಯಾಸವು ಪ್ರತಿಪಾದಿಸುತ್ತದೆ. ಇದೇ ವಿಶೇಷತೆಯಿಂದಾಗಿ ಕೆ.ಪಿ ರಾವ್ರವರ ಈ ವಿನ್ಯಾಸವು ಇತರ ಭಾರತೀಯ ಭಾಷೆಗಳ ಕಂಪ್ಯೂಟರ್ ತಂತ್ರಾಂಶಗಳಲ್ಲಿಯೂ ಅಳವಡಿಕೆಯಾಗಿ ಜನಪ್ರಿಯವಾಗಿದೆ.

ಇದೇ ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸ

ಶ್ರೀ ಕೆ.ಪಿ ರಾವ್ರವರ ಇದೇ ವಿನ್ಯಾಸವನ್ನು ಸುಧಾರಣೆಯ ಹೆಸರಿನಲ್ಲಿ ಅಲ್ಪಸ್ವಲ್ಪ ಬದಲಿಸಿದ “ಕನ್ನಡ ಗಣಕ ಪರಿಷತ್ತು” ಕರ್ನಾಟಕ ಸರಕಾರವು ಇದನ್ನು “ಕನ್ನಡದ ಶಿಷ್ಟ ಕೀಲಿಮಣೆ ವಿನ್ಯಾಸ” (ಸ್ಟ್ಯಾಂಡರ್ಡ್ ಕೀಬೋರ್ಡ್ ಲೇಔಟ್) ಎಂದು ಅಂಗೀಕರಿಸಲು ಕಾರಣವಾಗಿದೆ. ವಿಪರ್ಯಾಸವೆಂದರೆ, ಸರಕಾರದ ಅನುದಾನದಿಂದ ಕನ್ನಡ ಗಣಕ ಪರಿಷತ್ತು ತಯಾರಿಸಿದ “ನುಡಿ” ತಂತ್ರಾಂಶದಲ್ಲಿ ಅಳವಡಿಸಿರುವ ಈ ವಿನ್ಯಾಸಕ್ಕೆ “ಕೆ.ಪಿ ರಾವ್ ವಿನ್ಯಾಸ” ಎಂದು ಹೆಸರನ್ನು ನೀಡದೆ “ಕರ್ನಾಟಕ ಸರ್ಕಾರದ ಅಧಿಕೃತ ಕೀಲಿಮಣೆ ವಿನ್ಯಾಸ” ಎಂದು ಹೆಸರಿಸಿ “ಮೂಲ: ಶ್ರೀ ಕೆ.ಪಿ ರಾವ್” ಹಾಗೂ “ಸುಧಾರಣೆ: ಕನ್ನಡ ಗಣಕ ಪರಿಷತ್ತು” ಎಂಬುದನ್ನು ಮಾತ್ರ ನಮೂದಿಸಿದೆ. ಈ ಹಿಂದೆ ಶ್ರೀಲಿಪಿ, ಆಕೃತಿ ಮತ್ತಿತರೆ ಕನ್ನಡ ಲಿಪಿ ತಂತ್ರಾಂಶಗಳಲ್ಲಿ ಈ ವಿನ್ಯಾಸಕ್ಕೆ “ಕೆ.ಪಿ.ರಾವ್ ಕೀಲಿಮಣೆ ವಿನ್ಯಾಸ” ಎಂದೇ ಸ್ಪಷ್ಟ ನಮೂದು ಇತ್ತು. ಆದರೆ, ಇದೇ ವಿನ್ಯಾಸವನ್ನು ಸುಧಾರಣೆಯನ್ನು ಮಾಡಿದ ಕಾರಣಕ್ಕೆ ಇಂದು ಇತರೆ ತಂತ್ರಾಂಶ ತಯಾರಕರು ಈ ವಿನ್ಯಾಸವನ್ನು “ಕೆಜಿಪಿ ವಿನ್ಯಾಸ” ಎಂದು ನಮೂದಿಸಿದ್ದಾರೆ. ಉದಾಹರಣೆಗೆ – “ಬರಹ” ತಂತ್ರಾಂಶ ಮತ್ತು ಮೈಕ್ರೋಸಾಫ್ಟ್‌ನವರ ಕನ್ನಡದ “ಇಂಡಿಕ್-ಐಎಂಇ” (ವಿಂಡೋಸ್ ವೇದಿಕೆಯಲ್ಲಿ ಕನ್ನಡ ಲಿಪಿ ಮೂಡಿಕೆಗಾಗಿರುವ ಇನ್ಪುಟ್ ಮೆಥೆಡ್ ಎಡಿಟರ್).

ಲಭಿಸದ ರಾಜ್ಯ ಪ್ರಶಸ್ತಿ

ಲಭ್ಯವಿದ್ದ ತಂತ್ರಜ್ಞಾನವನ್ನು ಬಳಸಿಕೊಂಡು ಮೊದಲ ಬಾರಿಗೆ ಸಹಕಾರಿ ಸಂಘದ ಕೆಲಸಕಾರ್ಯಗಳನ್ನು ಗಣಕೀಕರಿಸಿದ ಪ್ರಯತ್ನವನ್ನು ಗುರುತಿಸಿ ರಾಜ್ಯ ಸರ್ಕಾರವು ವ್ಯಕ್ತಿಯೊಬ್ಬರಿಗೆ ರಾಜ್ಯಪ್ರಶಸ್ತಿಯನ್ನು ನೀಡಿದೆ. ಬಹಳ ಕಾಲದ ಹಿಂದೆಯೇ ವ್ಯಕ್ತಗತವಾಗಿ ರಾಷ್ಟ್ರ ಮಟ್ಟದಲ್ಲಿ ಆಧುನಿಕ ಮುದ್ರಣ ತಂತ್ರಜ್ಞಾನದಲ್ಲಿ ಶ್ರಮವಹಿಸಿ ದುಡಿದ, ಭಾರತೀಯ ಭಾಷೆಗಳ ಲಿಪಿ ಮೂಡಿಕೆಗೆ ಅತ್ಯುತ್ತಮ ಕೀಲಿಮಣೆ ವಿನ್ಯಾಸವನ್ನು ಆವಿಷ್ಕರಿಸಿದ, ಒಂದು ತಂತ್ರಜ್ಞಾನವನ್ನೇ ಕನ್ನಡಕ್ಕೆ ತಂದ ಶ್ರೀ ಕೆ.ಪಿ ರಾವ್ ರವರ ಸಾಧನೆಗಳು ರಾಜ್ಯ ಸರ್ಕಾರದ ಗಮನಕ್ಕೆ ಬಾರದಿರುವುದು ಮತ್ತು ಅವರಿಗೆ ರಾಜ್ಯ ಪ್ರಶಸ್ತಿಯು ಲಭಿಸದಿರುವುದು ಒಂದು ವಿಪರ್ಯಾಸವೇ ಸರಿ.

ವೃತ್ತಿ ಬದುಕಿನ ಪರಿಚಯ

ಕೆ.ಪಿ.ರಾವ್ರವರ (ಕನ್ನಿಕಂಬಳ ಪದ್ಮನಾಭ ರಾವ್) ಜನನ ಮಂಗಳೂರು ಬಳಿಯ ಕನ್ನಿಕಂಬಳ ಎಂಬ ಚಿಕ್ಕಹಳ್ಳಿಯಲ್ಲಿ. ಮೈಸೂರು ವಿ.ವಿ.ಯಿಂದ ವಿಜ್ಞಾನ ಪದವಿ. ಮುದ್ರಣಾಲಯದಲ್ಲಿ ಅಕ್ಷರ ಜೋಡಿಸುವ ಅರೆಕಾಲಿಕ ಕೆಲಸದಿಂದ ವೃತ್ತಿಜೀವನ ಆರಂಭಿಸಿದರು. ನಂತರ, ಪ್ರತಿಷ್ಠಿತ ಟಾಟಾ ಪ್ರೆಸ್ ಸೇರಿದ ರಾವ್ ಕಂಪನಿಯಲ್ಲಿ ಫೋಟೋ ಕಂಪೋಸಿಂಗ್ನ್ನು ಹೊಸದಾಗಿ ಆರಂಭಿಸಲು ಶ್ರಮವಹಿಸಿದರು. ಇಂತಹ ಸತತ ಪರಿಶ್ರಮ ಮತ್ತು ಅನ್ವೇಷಣಾ ಮಾರ್ಗಗಳ ಮೂಲಕ ಮೊನೋಟೈಪ್ ಕಂಪನಿಯ ನಿರ್ದೇಶಕ ಸ್ಥಾನಕ್ಕೆ ಏರಿದವರು ಇವರು. ಆಧುನಿಕ ಮುದ್ರಣ ಕ್ಷೇತ್ರಕ್ಕೆ ತಮ್ಮದೇ ರೀತಿಯ ಅಮೂಲ್ಯ ಕೊಡುಗೆಗಳನ್ನು ನೀಡಿದ್ದಾರೆ.

ಅಂದಿನ ಕಾಲಕ್ಕೆ ಬಹಳ ಸಂಕೀರ್ಣವಾದ ಕೀಲಿಮಣೆ ಹೊಂದಿದ (ಬ್ಲೈಂಡ್ ಕೀಬೋರ್ಡ್) ಕನ್ನಡದ ಫೋಟೋಟೈಪನ್ನು ಇವರು ಸಿದ್ಧಪಡಿಸಿದ್ದಾರೆ. ಆಧುನಿಕ ಮುದ್ರಣದಲ್ಲಿ ಬಳಸಲಾಗುವ ಟೈಪೋಸೆಟ್ಟಿಂಗ್ ಉದ್ದೇಶಕ್ಕಾಗಿ ಪ್ರೋಗ್ರಾಮಿಂಗ್ ಮೂಲಕ ಲೇಸರ್‌ಟೈಪ್‌ಸೆಟ್ಟರ್ ಯಂತ್ರಗಳಿಗೆ ಅಕ್ಷರ ಮೂಡಿಸುವ ವ್ಯವಸ್ಥೆಯನ್ನು ಅಳವಡಿಸಿದ್ದಾರೆ. ಕಂಪ್ಯೂಟರ್‌ನ ಡಾಟ್ ಮ್ಯಾಟ್ರಿಕ್ಸ್ ಪ್ರಿಂಟರ್‌ನಲ್ಲಿ ಕನ್ನಡ ಲಿಪಿ ಮುದ್ರಣಕ್ಕಾಗಿ ವ್ಯವಸ್ಥೆಯೊಂದನ್ನು ಅಭಿವೃದ್ಧಿಪಡಿಸಿದ್ದಾರೆ. ಇವರು ಕಾಲಕಾಲಕ್ಕೆ ಲಭ್ಯವಿದ್ದ ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ದೇವನಾಗರಿ, ಕನ್ನಡ, ತುಳು ಮತ್ತು ತೆಲುಗು ಭಾಷೆಗಳ ಫಾಂಟ್‌ಗಳನ್ನು ಸೃಜಿಸಿದ್ದಾರೆ; ಮಣಿಪಾಲ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್‌ಗಳು ಮತ್ತು ಆಧುನಿಕ ಮುದ್ರಣ ಶಾಸ್ತ್ರ ಕುರಿತು ಸ್ವಲ್ಪಕಾಲ ಬೋಧಿಸಿದ ಇವರು ಚಂದೀಗಡದಲ್ಲಿನ ಕ್ವಾರ್ಕ್ ಎಕ್ಸ್‌ಪ್ರೆಸ್ ಮತ್ತು ಅಡೋಬಿ ಸಿಸ್ಟಂಸ್‌ಗೆ ಸಲಹೆಗಾರರಾಗಿಯೂ ಸಹ ಕಾರ್ಯನಿರ್ವಹಿಸಿದ್ದಾರೆ.

ಶ್ರೀ ಕೆ.ಪಿ ರಾವ್‌ವರ ಸಾಧನೆಗಳನ್ನು ಗುರುತಿಸಿ, ಅವರನ್ನು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ “ಪ್ರಥಮ ಕನ್ನಡ ಗಣಕ ಸಮ್ಮೇಳನ”ದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು.

ಶ್ರೀ ಕೆ.ಪಿ ರಾವ್‌ವರ ಸಂದರ್ಶನ ಓದಿ.

(ಕೃಪೆ: ಉದಯವಾಣಿ, ನವಂಬರ್ ೧, ೨೦೦೬)

Leave a Reply