ಪ್ರವೇಶವಿಲ್ಲದ ಗರ್ಭಗುಡಿಯಲ್ಲಿ ಪೂಜಾರಿಯಾದವರು

– ಪ್ರಕಾಶ ಹೆಬ್ಬಾರ

ನಾಗೇಶ ಹೆಗಡೆ ಎಂದೊಡನೆ ಯಾವುದರಿಂದ ಅವರನ್ನು ಗುರುತಿಸಬೇಕು? ಅವರನ್ನು ನಿಕಟವಾಗಿ ಬಲ್ಲ ಎಲ್ಲರಿಗೂ ಒಂದಲ್ಲ ಒಂದು ಸಂದರ್ಭದಲ್ಲಿ ಈ ತಬ್ಬಿಬ್ಬು ಆಗುತ್ತದೆ. ಮನುಷ್ಯನ ಎಲ್ಲ ಅಂಗಾಂಗಗಳೂ ಪ್ರಮಾಣಬದ್ಧವಾಗಿದ್ದು ಒಂದಕ್ಕೊಂದು ಪೂರಕವಾಗಿ ಕ್ರಿಯಾಶೀಲವಾಗಿರುವಂತೆ ಹೆಗಡೆಯವರ ಸಾಧನೆಯ ನೆಲೆ ಕೂಡ. ಅವರನ್ನು ಅವರವರ ಅಳವಿಗೆ ತಕ್ಕಂತೆ ಭೂವಿಜ್ಞಾನಿ, ಪತ್ರಕರ್ತ, ನುಡಿಚಿತ್ರಕಾರ, ಪರಿಸರವಾದಿ, ಪತ್ರಕರ್ತರ ವೃತ್ತಿಬದುಕನ್ನು ರೂಪಿಸುವಾತ, ಸಂಪಾದಕ, ವಿಜ್ಞಾನ ಸಂವಹನಕಾರ- ಏನೆಲ್ಲಾ ಅನ್ನಬಹುದು. ರೈತರನ್ನು ಪ್ರಗತಿಪರರನ್ನಾಗಿ ಮಾಡಲು ಹೊರಟ, ಸದ್ದಿಲ್ಲದ ಕೃಷಿಕ ಎಂದರೂ ಒಪ್ಪೀತು. ವಾಮನ ತ್ರಿವಿಕ್ರಮನಾಗಿ ಬೆಳೆದು, ಎಷ್ಟು ತಿಣುಕಿದರೂ ಸಮಕಾಲೀನರ ವಿಮರ್ಶೆಗೆ ಸಿಕ್ಕದ ಗಟ್ಟಿ ವ್ಯಕ್ತಿತ್ವ. ನೀವು ಅವರನ್ನು ವೃತ್ತಿಪರ ಛಾಯಾಗ್ರಾಹಕ ಎಂದು ಕರೆದರೆ ಅದಕ್ಕೂ ನ್ಯಾಯ ಒದಗೀತು. ಅವರು ತೆಗೆದ ಕಪ್ಪುಬಿಳುಪಿನ ಚಿತ್ರಗಳನ್ನು ದಿನವಿಡೀ ನೋಡುತ್ತಾ ಹೋದರೂ ಅದೊಂದು ಹೊಸ ಅನುಭವವೇ.


ನಾಗೇಶ ಹೆಗಡೆಯವರದು ಬಹುಮುಖೀ ವ್ಯಕ್ತಿತ್ವ ಅಂದರೆ ಅದು ಕ್ಲೀಷೆಯ ಮಾತು. ಈ ಮನುಷ್ಯನ ಸಾಧನೆಯನ್ನು ಪ್ರತೀಕಿಸುವ ಇನ್ನೊಂದು ಸಮಾನಾರ್ಥ ಪದ ಇರಬಾರದಿತ್ತೆ? ‘ಇಷ್ಟೆಲ್ಲ ನೀವಾಗಿದ್ದೀರಿ’ ಎಂದು ಅವರಿಗೆ ನೀವು ಹೇಳುತ್ತೀರ ಅನ್ನಿ. ಆ ಮಾತಿಗೆ ಅವರು ಬೀಗುವುದಿಲ್ಲ, ಬಾಗುವುದಿಲ್ಲ, ಎದೆ ಉಬ್ಬಿಸಿ ಗಂಟಲು ಸರಿಪಡಿಸಿಕೊಳ್ಳುವುದಿಲ್ಲ. ಬದಲಿಗೆ, ‘ಎಂಥ ದುರಂತರೀ, ದಾಬಸಪೇಟೆಯ ಬಳಿ ರಾಸಾಯನಿಕ ಕಚಡಾವನ್ನು ಹೂಳುವ ಹುನ್ನಾರು ನಿಮಗೆ ಗೊತ್ತಾ?’ ಎಂದು ಥಟ್ಟನೆ ಮಾತು ಹೊರಳಿಸುತ್ತಾರೆ. ಪೊಗದಸ್ತಾಗಿ ಬೆಳೆದ ಅವರ ತೋಟದ ತೊಂಡೆ ಕಾಯಿಗಳ ಕಡೆ ನಮ್ಮ ಲಕ್ಷ್ಯವನ್ನು ಸೆಳೆದು, ‘ಇದಕ್ಕೆ ಯಾವ ಗೊಬ್ಬರವೂ ಇಲ್ಲ ಗೋಡೂ ಇಲ್ಲ, ಉದುರಿದ ಎಲೆಯೇ ಇದರ ಗೊಬ್ಬರವಾಗಬೇಕು’ ಎನ್ನುತ್ತಾರೆ. ಅವರನ್ನು ಸ್ತುತಿ ಮಾಡದ ಹಾಗೆ ನಿಭಾಯಿಸುವ ಚಾತುರ್ಯವನ್ನು ಖರಗಪುರದ ಐಐಟಿಯಿಂದ ಅವರು ಕಲಿತಿದ್ದೇನಲ್ಲ. ಸದ್ದಿಲ್ಲದೆ ಎಲ್ಲೋ ಮೂಲೆಗೆ ಸರಿದಿರುವ ಅವರಿಗೆ ಸಂದಿರುವ ಪ್ರಶಸ್ತಿ ಫಲಕಗಳು ಎಂದು ಗಡಿಪಾರಾಗುತ್ತವೋತಿಳಿಯದು.

ಬರವಣಿಗೆ ಇವರು ಪ್ರೌಢಶಾಲೆಯಿಂದಲೇ ಬೆಳೆಸಿಕೊಂಡು ಬಂದ ಹವ್ಯಾಸ. ಎಚ್.ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್ (ಎಚ್ಚೆಸ್ಕೆ) ಪ್ರಭಾವ ಅಧಿಕವಾಗಿತ್ತು. ಇವರು ಕಾಲೇಜು ಸೇರಿದ ಹೊಸತರಲ್ಲಿ ಅದೇ ‘ಸುಧಾ’ದ ಆರಂಭವಾಗಿ ಅದರಲ್ಲಿ ಪ್ರಕಟವಾಗುತ್ತಿದ್ದ ಎಚ್ಚೆಸ್ಕೆ ಲೇಖನಗಳು ಇವರಿಗೆ ಮಾದರಿಯಾಗಿದ್ದವು. ಆ ಸ್ಫೂರ್ತಿಯಿಂದಲೇ ಕಾಲೇಜು ಪತ್ರಿಕೆಗೆ ವಿeನ ಲೇಖನ ಬರೆಯಲು ಆರಂಭಿಸಿದರು. ಬರವಣಿಗೆ ಕುರಿತಾದ ಬಹುಮಾನ ಪ್ರತಿ ಸಲವೂ ಇವರ ಪಾಲಿಗೇ. `ಬಹುಪಾಲು ವಿದ್ಯಾರ್ಥಿಗಳಿಗೆ ಬರವಣಿಗೆ ಎಂಬುದು ಶಿಕ್ಷೆಯೇ. ಹಾಗಾಗಿ ನಾನು ಬರೆದಿದ್ದೇ ಉತ್ತಮ ಎನಿಸಿಕೊಳ್ಳುತ್ತಿತ್ತು. ನನಗೇ ಬಹುಮಾನ ದಕ್ಕುತ್ತಿತ್ತು’ ಎಂಬುದು ನಾಗೇಶ್ ಹೆಗಡೆಯವರೇ ಸ್ಮರಿಸಿದ ಮಾತು.
ಇವರ ತಂದೆ ಸ್ವಾತಂತ್ರ ಹೋರಾಟಗಾರರು. ಆದ್ದರಿಂದ ನಾಡು, ನುಡಿ, ಪರಿಸರದ ಬಗೆಗಿನ ಹೋರಾಟ ಕುಟುಂಬ ಬಳುವಳಿ. ಹಾಗಾಗಿಯೇ ಊರಲ್ಲಿ ಯಾರೂ ಉನ್ನತ ಶಿಕ್ಷಣದತ್ತ ನೋಡದಿದ್ದರೂ ಇವರ ತಂದೆ ಧೈರ್ಯ ಮಾಡಿ ಹಿರಿಯ ಮಗನನ್ನೇ ಕಾಲೇಜಿಗೆ ಅಟ್ಟಿದರು. ಶಿರಸಿಯಲ್ಲಿ ಬಿ.ಎಸ್ಸಿ ಮುಗಿದ ಬಳಿಕ ಮಶ್ಚಿಮ ಬಂಗಾಲದ ಖರಗಪುರದ ಐಐಟಿಯಲ್ಲಿ ಅನ್ವಯಿಕ ಭೂ ವಿeನದಲ್ಲಿ ಎಂ.ಎಸ್ಸಿ. ಇವರ ಬರವಣಿಗೆ ಹವ್ಯಾಸಕ್ಕೆ ಇನ್ನಷ್ಟು ಇಂಬು ಬಂದಿದ್ದು ಕನ್ನಡದಿಂದ ದೂರವಿದ್ದ ಆ ಅವಧಿಯಲ್ಲೇ.

ಖರಗಪುರದಲ್ಲಿದ್ದಾಗ ಸುಧಾಕ್ಕೆ ಹಾಸ್ಯ ಲೇಖನವೊಂದನ್ನು ಬರೆದು ಕಳುಹಿಸಿದರು. ಅದು ಪ್ರಕಟವಾಗಿದ್ದು ಮಾತ್ರ ಪ್ರಜಾವಾಣಿ ಸಾಪ್ತಾಹಿಕದಲ್ಲಿ. ಜೀವನದಲ್ಲಿ ಮುಂದೆ ಬರಬೇಕೆಂದರೆ ಸಮಯ, ಸಂದರ್ಭಗಳನ್ನು ಹೇಗೆ ಉಪಯೋಗಿಸಿಕೊಳ್ಳಬೇಕು ಎಂಬುದಕ್ಕೆ ನಾಗೇಶ್ ಇಲ್ಲಿ ಮಾದರಿಯಾಗುತ್ತಾರೆ. ಲೇಖನ ಪ್ರಕಟವಾದ ಸಾಪ್ತಾಹಿಕದ ಪ್ರತಿಯೊಂದು ಬಂಗಾಲಿ ನಾಡಿನಲ್ಲಿನ ಇವರ ಹಾಸ್ಟೆಲ್ ಕೋಣೆಯ ಬಾಗಿಲು ಬಡಿದಾಗ ಎಲ್ಲಿಲ್ಲದ ಸಂತೋಷ. ಅದರಲ್ಲಿನ ಪುಸ್ತಕ ವಿಮರ್ಶೆ, ಸಾದರ ಸ್ವೀಕಾರ ವಿಭಾಗ ನೋಡಿ, ‘ಅಕ್ಷರ ಪ್ರಕಾಶನ’ಕ್ಕೆ ಪತ್ರ ಬರೆದು ಜಯಂತ್ ಕಾಯ್ಕಿಣಿ, ಕೆ. ಎಸ್. ನಿಸ್ಸಾರ್ ಅಹ್ಮದ್, ಲಂಕೇಶ್ ಮೊದಲಾದವರ ಪುಸ್ತಕ ತರಿಸಿಕೊಳ್ಳಲಾರಂಭಿಸಿದರು. ತಮಗಿಂತ ಕಿರಿಯನಾದರೂ ಜಯಂತ್ ಕಾಯ್ಕಿಣಿಯವರ ಬರಹಗಳನ್ನು ಹೆಚ್ಚು ಇಷ್ಟಪಡುತ್ತಿದ್ದರು. ಕನ್ನಡದಲ್ಲಿ ಸೃಜನಶೀಲ ಸಾಹಿತ್ಯಕ್ಕೆ ಕೊಡುತ್ತಿರುವ ಬೆಲೆ ಎಂಥದ್ದು ಎಂಬುದು ಇವರಿಗೆ ತಿಳಿದಿದ್ದು ಆಗಲೇಯಂತೆ. ಅದೇ ಗೌರವ ವಿಚಾರ ಸಾಹಿತ್ಯಕ್ಕೂ ಲಭಿಸಬೇಕೆಂಬುದು ಇವರ ಬಯಕೆಯಾಗಿತ್ತು. ಸುಧಾ ಮತ್ತು ಸಾಪ್ತಾಹಿಕಕ್ಕೆ ಲೇಖನ ಬರವಣಿಗೆ ಮುಂದುವರಿಯಿತು. ಕಂಬಾರರಂಥವರ ಕಥೆ ಜತೆ ತಮ್ಮ ಲೇಖನವೂ ಪ್ರಕಟವಾಗವುದನ್ನು ನೋಡಿ ಖುಷಿ ಪಟ್ಟರು.
ಆದರೆ ಐಐಟಿಯ ಓದು, ಓಡಾಟಗಳ ನಡುವೆ ಕೆಲ ಕಾಲ ಲೇಖನ ಬರೆಯಲು ಸಾಧ್ಯವಾಗಲಿಲ್ಲ. ಅಂಥ ಒಂದು ದಿನ ಇವರಿದ್ದಲ್ಲಿಗೆ ಬಂದಿದ್ದು ‘ಸುಧಾ’ ಸಂಪಾದಕ ಎಂ. ಬಿ. ಸಿಂಗ್ ಅವರ ಪತ್ರ. `ಇತ್ತೀಚೆಗೆ ನಿಮ್ಮಿಂದ ಯಾವುದೇ ಬರಹ ಬಂದಿಲ್ಲ. ಲೇಖನ ಕಳಿಸಿ’ ಎಂದು ಅದರಲ್ಲಿ ಬರೆಯಲಾಗಿತ್ತು. ಅದನ್ನು ಓದಿ ಪ್ರಶಸ್ತಿಯೇ ಸಿಕ್ಕಷ್ಟು ಆನಂದ. ಪ್ರಮುಖ ಪತ್ರಿಕೆಯ ಸಂಪಾದಕನ ಪತ್ರವೊಂದು ಬರಹಗಾರನಲ್ಲಿ ಎಂಥ ಹುಮ್ಮಸ್ಸು ತುಂಬುತ್ತದೆ, ಎಂಥ ಖುಷಿ ಕೊಡುತ್ತದೆ ಎಂಬುದಕ್ಕೆ ಸಾಕ್ಷಿಯಾದರು. ಮುಂದೆ ಇವರೂ ಅದೇ ಅಂಶವನ್ನು ಅಳವಡಿಸಿಕೊಂಡು ಹೇಗೆ ಬರಹಗಾರರ ಪ್ರಿಯರಾದರು ಎಂಬುದನ್ನು ಮುಂದೆ ನೋಡೋಣ.

ಪೂರ್ಣ ಮಾಡಲಾಗದಿದ್ದರೂ ಮರೆಯಲಾಗದ ಪಿಎಚ್.ಡಿ.

ನಾಗೇಶ್ ಹೆಗಡೆಯವರ ಪ್ರತಿಯೊಂದು ಅನುಭವ ಯುವ ಪೀಳಿಗೆಗೊಂದು ಪಾಠವಾಗುವಂಥದ್ದು. ಎಂ.ಎಸ್ಸಿ. ಬಳಿಕ ಪಿಎಚ್.ಡಿ. ಮಾಡಲು ದೆಹಲಿಯ ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯಕ್ಕೆ ಹೋದರು. ಭಾರತದಿಂದ ಜಪಾನ್ಗೆ ಅದಿರು ರಫ್ತು ಮಾಡಿ ಕಬ್ಬಿಣ ಮತ್ತು ಉಕ್ಕು ಆಮದು ಮಾಡಿಕೊಳ್ಳುತ್ತಿದ್ದ ಕಾಲ ಅದು. ಕೇಂದ್ರದಲ್ಲಿ ಇಂದಿರಾಗಾಂಧಿ ಆಡಳಿತ. ಅದಿರುಗಳನ್ನು ಎಷ್ಟು ಕಡಿಮೆ ಬೆಲೆಗೆ ಕಳಿಸಲಾಗುತ್ತಿತ್ತೆಂದರೆ, ಅದಿರಿನ ಬೆಲೆ ಹೇಗೂ ಇರಲಿ, ಅದನ್ನು ತೆಗೆಯುವ ಕೂಲಿ ಕೂಡ ಹುಟ್ಟುತ್ತಿರಲಿಲ್ಲ. ಅದೇ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು `ಸೈನ್ಸ್ ಪಾಲಿಸಿ’ ಎನ್ನುವ ವಿಷಯದ ಮೇಲೆ ತನಿಖೆ, ಸಂಶೋಧನೆ ಆರಂಭ. ಅಧ್ಯಯನದಿಂದಾಗಿ ಬಯಲಾದ ಹಲವು ಅಂಶಗಳನ್ನೊಳಗೊಂಡ ಇವರ ಲೇಖನ ಹೆಸರಾಂತ ಇಪಿಡಬ್ಲೂದಲ್ಲಿ ಪ್ರಕಟವಾಯಿತು. ಪರಿಸರ ಹೋರಾಟದ ನಿಟ್ಟಿನಲ್ಲಿ ಇದೇ ಇವರ ಮೊದಲ ಹೆಜ್ಜೆ, ಇದೇ ಮೊದಲ ಲೇಖನ. ಈ ಬರಹ ಲೋಕಸಭೆ ಅಧಿವೇಶನದಲ್ಲಿ ಗಲಾಟೆಗೆ ಕಾರಣವಾಯಿತು.

ಕಾರ್ಟೂನ್, ಚಿತ್ರಕಲೆ, ಫೋಟೋಗ್ರಫಿ ಇವರ ನೆಚ್ಚಿನ ಹವ್ಯಾಸಗಳು. ನೆಹರೂ ವಿವಿಯ ಪಕ್ಕದ ಐಐಟಿಯಲ್ಲಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಸತತ ಮೂರು ವರ್ಷ ಪ್ರಥಮ ಬಹುಮಾನ ಪಡೆದು ರೋಲಿಂಗ್ ಶೀಲ್ಡನ್ನು ತಮ್ಮದಾಗಿಸಿಕೊಂಡರು. ನೆಹರೂ ವಿವಿಯ ಆಗಿನ ಕುಲಪತಿ ಕೆ.ಆರ್. ನಾರಾಯಣನ್ ಇವರನ್ನು ಸನ್ಮಾನಿಸಿದರು. ವಿಶ್ವ ವಿದ್ಯಾಲಯದಲ್ಲಿ ಸ್ಕೇಟಿಂಗ್ ಕ್ಲಬ್, ಕಲಾ ವೇದಿಕೆ, ಪೋಟೋಗ್ರಫಿ ಕ್ಲಬ್‌ಗಳಂಥವುಗಳ ಸ್ಥಾಪನೆಗೆ ಕಾರಣರಾಗಿ, ನಾನಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ನೆಹರೂ ವಿಶ್ವ ವಿದ್ಯಾಲಯದಲ್ಲಿ ಉತ್ತಮ ವಾಚನಾಲಯವಿತ್ತು. ಅಂತಾರಾಷ್ಟ್ರೀಯ ಮಟ್ಟದ ನಿಯತಕಾಲಿಕೆಗಳು, ಮಾಹಿತಿಪೂರ್ಣ ಪುಸ್ತಕಗಳು ಸಿಗುತ್ತಿದ್ದವು. ಅವುಗಳನ್ನು ಓದಿ, ಮಾಹಿತಿ ಸಂಗ್ರಹಿಸಿ, ಸುಧಾ ಪತ್ರಿಕೆಗೆ ಪುನಃ ಲೇಖನಗಳನ್ನು ಕಳುಹಿಸಲು ಪ್ರಾರಂಭಿಸಿದರು. ಅಲ್ಲೇ ಸಂಶೋಧಕರಾಗಿದ್ದ ಪ್ರಕಾಶ್ ಕರಾಟ್, ಯೆಚೂರಿ, ಪ್ರೊ. ರೊಮಿಲಾ ಥಾಪರ್, ಟಿಕೆ ಊಮ್ಮೆನ್ ಮುಂತಾದವರ ಒಡನಾಟದಲ್ಲಿ ವಿಜ್ಞಾನದಾಚಿನ ವಿದ್ಯಮಾನಗಳಲ್ಲೂ ಶಾಮೀಲಾದರು.

ಇವರ ಪಿ.ಎಚ್‌ಡಿ ಅಧ್ಯಯನ ವಿಷಯ ಗಲಾಟೆ ಸೃಷ್ಟಿಸಿದ ದಿನಗಳಲ್ಲೇ ಜೆಪಿ ಚಳವಳಿ ಜೋರಾಗಿತ್ತು. ಜಯಪ್ರಕಾಶ್ ನಾರಾಯಣ್ ಅವರು ನೆಹರೂ ವಿವಿ ಕ್ಯಾಂಪಸ್ಸಿಗೂ ಬಂದು ಇವರನ್ನೆಲ್ಲ ಚಳವಳಿಗೆ ಹುರಿದುಂಬಿಸಿದರು. ಚಳವಳಿ ಕಾವೇರುತ್ತ ಹೋಗಿ ಹಠಾತ್ತಾಗಿ ಒಂದು ದಿನ ನೆಹರೂ ವಿವಿಯ ಹಾಸ್ಟೆಲ್ಗಳ ಸುತ್ತ ಪೊಲೀಸರು ಜಮಾಯಿಸಿ ವಿದ್ಯಾರ್ಥಿ ಮುಖಂಡರನ್ನೆಲ್ಲ ಹಿಡಿದು ವ್ಯಾನ್ಗಳಲ್ಲಿ ತುಂಬತೊಡಗಿದರು.

ಅಂದು ಬೆಳಿಗ್ಗೆ ಬೇಗ ಎದ್ದು ಇವರು ಸ್ನಾನಕ್ಕೆ ಸಿದ್ಧರಾಗುತ್ತಿದ್ದರು. ಸೊಂಟಕ್ಕೊಂದು ಟವೆಲ್, ತಲೆಗೆ ರುಮಾಲಿನ ಥರ ಇನ್ನೊಂದು ಟವೆಲ್ ಸುತ್ತಿಕೊಂಡು ಬಾಯ್ಲರ್ಗೆ ಬೆಂಕಿ ಒಟ್ಟುತ್ತಿದ್ದರು. ಧಾವಿಸಿ ಬಂದ ಪೊಲೀಸರು `ನಾಗೇಶ್ ಹೆಗಡೆ ಎಲ್ಲಿ’ ಎಂದು ಅವರ ಬಳಿಯೇ ಕೇಳಬೇಕೇ? ಆ ವೇಷದಲ್ಲಿ ಅವರು ಬಹುಶಃ ಆಳುಗಳ ತರ ಕಾಣಿಸಿರಬೇಕು. ಏನೆಂದು ತಿಳಿಯದ ನಾಗೇಶ್ ಥಟ್ಟನೆ `ಆತ ಹೊರಗೆಲ್ಲೋ ಹೋಗಿದ್ದಾನೆ. ಅಲ್ಲೆಲ್ಲೋ ಬಯಲಲ್ಲಿ ಆಡುತ್ತಿರಬಹುದು ನೋಡಿ’ ಎಂದು ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರು. ಹೊರಗೆ ಬಂದು ನೋಡಿದಾಗಲೇ ತಿಳಿದಿತ್ತು ಪರಿಸ್ಥಿತಿಯ ಗಂಭೀರತೆ. ಬಟ್ಟೆ ಬದಲಿಸಿದರೆ ಪೊಲೀಸರು ಪರಿಚಯ ಹಿಡಿದಾರು ಎನ್ನುವ ಕಾರಣಕ್ಕೆ ಉಟ್ಟ ಬಟ್ಟೆಯಲ್ಲೇ ಸಮೀಪದ ಮಿತ್ರರ ಮನೆಗೆ ಹೋಗಿ, ಅವರ ಸಹಾಯದಿಂದ ಮೂರ್ನಾಲ್ಕು ತಿಂಗಳು ನಾಪತ್ತೆಯಾದರು. ಅತ್ತ ಅವರು ಕಾರ್ಬೆಟ್ ಪಾರ್ಕ್, ಕುಲು ಮನಾಲಿಗಳ ಬೆಟ್ಟಗಳಲ್ಲಿ ಅಲೆಯುತ್ತಿದ್ದಾಗ ಇತ್ತ ಅವರ ಪಿಎಚ್.ಡಿ ಕಥೆ ಮುಗಿದಿತ್ತು. ಈ ತನಕ ಮಾಡಿದ್ದೆಲ್ಲ ನೀರಿನಲ್ಲಿನ ಹೋಮದಂತೆ.

ತುರ್ತುಸ್ಥಿತಿಯ ಕಾವು ಕಡಿಮೆಯಾದ ನಂತರ ಹಿಂದಿರುಗಿ ನಾಗೇಶ್ ಮತ್ತೊಂದು ಪಿಎಚ್.ಡಿಗೆ ಅಣಿಯಾದರು. ಹಿಮಾಲಯ ಸುತ್ತಿ ಬಂದಿದ್ದರಿಂದಲೋ ಏನೊ ಈ ಬಾರಿ ನೆಹರೂ ವಿವಿಯಲ್ಲೇ ಹೊಸದಾಗಿ ಆರಂಭವಾದ ಪರಿಸರ ವಿಜ್ಞಾನ ವಿಭಾಗದಲ್ಲಿ ಮತ್ತೊಮ್ಮೆ ಸಂಶೋಧನಾ ಪ್ರಾಜೆಕ್ಟ್ಗೆ ಸೇರಿಕೊಂಡರು. ಎಮ್.ಫಿಲ್ ಪದವಿ ಪಡೆದರು. ಉಪ್ಪು ನೀರಿನ ಚಿಲ್ಕಾ ಸರೋವರದ ಮಾಲಿನ್ಯ ಮಟ್ಟದ ಬಗ್ಗೆ ಅಧ್ಯಯನ ಕೈಗೊಂಡರು. ಅಲ್ಲಿ ಅಧ್ಯಯನಕ್ಕಿಂತ ಗುರುಸೇವೆಯೇ ಜಾಸ್ತಿಯಾಯಿತು. ಮಾರ್ಗದರ್ಶಕ ಪ್ರೊಫೆಸರ್ ಹೇಳಿದ್ದನ್ನು ಮಾಡಬೇಕು, ಅವರ ಬ್ಯಾಂಕ್ ಕೆಲಸ; ಅವರ ಪತ್ನಿ ಜತೆ ಮಾರುಕಟ್ಟೆಗೆ ಸುತ್ತಾಟ, ಅವರ ಖಾಸಗಿ ಸಂಶೋಧನೆಗೆ ಇವರ ಶ್ರಮ. ಇದು ಇವರಿಗೆ ಎದುರಾದ ತೊಂದರೆ ಮಾತ್ರವಲ್ಲ. ದೇಶದಲ್ಲಿ ಪಿಎಚ್.ಡಿ ಮಾಡುವ ಬಹುತೇಕ ಮಂದಿಯ ಹಣೆಬರಹ ಇದೇ ಎನ್ನುತ್ತಾರೆ ಅವರು. ಇವುಗಳಿಂದಾಗಿ ಅಲ್ಲಿನ ವ್ಯವಸ್ಥೆ ಬಗ್ಗೆಯೇ ಹೇಸಿಗೆ ಹುಟ್ಟಿಸಿತು. ಈ ಮಧ್ಯೆ ಇಂಗ್ಲಿಷ್ ಪತ್ರಿಕೆಗಳಿಗೆ ಪರಿಸರ ಕುರಿತ ಲೇಖನ ಬರವಣಿಗೆ ಮುಂದುವರೆದಿತ್ತು.

ಆಗಲೇ ಎಂ.ಎಸ್ಸಿ ಮುಗಿಸಿ ಐದು ವರ್ಷಗಳು ಕಳೆದಿದ್ದವು. ಇನ್ನೂ ಏನೂ ಮಾಡಿಲ್ಲವಲ್ಲ ಎಂಬ ಕೊರಗು ಕಾಡತೊಡಗಿತು. ಏನೇ ಆಗಲಿ, ಸಿಕ್ಕಿದ ಕೆಲಸಕ್ಕೆ ಸೇರಿಕೊಳ್ಳಬೇಕು ಎಂಬ ನಿರ್ಧಾರಕ್ಕೆ ಬಂದರು. ಹಿಮಾಲಯದ ನೈನಿತಾಲ್ನಲ್ಲಿರುವ ಕುಮಾಂವು ವಿಶ್ವವಿದ್ಯಾಲಯದಲ್ಲಿ ಪರಿಸರ ಭೂ ವಿeನ ಉಪನ್ಯಾಸಕನಾಗಿ ಸೇರಿದರು. ಎಲ್ಲರೂ ಬೇಸಿಗೆ ಕಳೆಯಲು ಹೋಗುವಂಥ ಸ್ಥಳ ಅದು. ಅಂದರೆ ಅಷ್ಟು ಚಳಿಯ ವಾತಾವರಣ. ಚಳಿಗಾಲದ ಕೆಲವು ತಿಂಗಳು ಆಹಾರಕ್ಕೂ ಕೊರತೆ ಎನ್ನುವ ಸ್ಥಿತಿ. ಇಂಥಲ್ಲಿ ಕಾಲ ಕಳೆಯುವುದು ಹೇಗೆಂಬ ಪ್ರಶ್ನೆ ಸದಾ ಕಾಡುತಿತ್ತು. `ಹೊರಗಿನ ವಾತಾವರಣ ಮಾತ್ರವಲ್ಲ, ವಿಶ್ವ ವಿದ್ಯಾಲಯದಲ್ಲಿನ ವಾತಾವರಣವೂ ನನಗೆ ಬೇಸರ ತರುತ್ತಿತ್ತು. ವಿeನವನ್ನು ಇಂಗ್ಲಿಷ್ನಲ್ಲಿ ಹೇಳುವುದೇ ಕಷ್ಟ. ಹೀಗಿರುವಾಗ ಅದನ್ನು ಹಿಂದಿಯಲ್ಲಿ ಹೇಳಬೇಕಾದ ಬವಣೆ ನನ್ನದಾಗಿತ್ತು’ ಎಂದು ಅಂದಿನ ಸ್ಥಿತಿ ನೆನಪಿಸಿಕೊಳ್ಳುತ್ತಾರೆ. `ತುರ್ತುಸ್ಥಿತಿ ಕಾರಣದಿಂದಾಗಿಯೇ ನಾನು ಪರಿಸರ ವಿಜ್ಞಾನಕ್ಕೆ ಬರುವಂತಾಯಿತು. ಒಂದು ರೀತಿಯಲ್ಲಿ ಆದದ್ದೆಲ್ಲ ಒಳ್ಳೆಯಕ್ಕೇ ಆಯಿತು’ ಎಂದು ನೆನೆಯುತ್ತಾರೆ ನಾಗೇಶ್ ಹೆಗಡೆ.

ದೆಸೆ ತಿರುಗಿಸಿತು ಲೇಖನ

‘ಸುಧಾ’ ಪತ್ರಿಕೆಯಲ್ಲಿ ನಾಗೇಶ ಹೆಗಡೆಯವರ ಲೇಖನಗಳನ್ನು ಪ್ರಕಟಿಸುತ್ತಿದ್ದ ಎಸ್.ಆರ್. ರಾಮಸ್ವಾಮಿ ಅದೇ ತಾನೆ ‘ಉತ್ಥಾನ ಪತ್ರಿಕೆ’ಗೆ ಸಂಪಾದಕತ್ವ ವಹಿಸಿ ತಮ್ಮ ಪತ್ರಿಕೆಗೊಂದು ಲೇಖನ ಬರೆದು ಕಳುಹಿಸುವಂತೆ ನೈನಿತಾಲ್ನಲ್ಲಿದ್ದ ಹೆಗಡೆಯವರಿಗೆ ಪತ್ರ ಬರೆದರು. ಈ ಪತ್ರವು ಅವರ ಕನ್ನಡನ್ನು ಕನ್ನಡ ಲೋಕಕ್ಕೆ ಮತ್ತೆ ಕರೆದು ತಂದಿತು. ಆಗೆಲ್ಲ ಪರಿಸರ ವಿಷಯ ಎಲ್ಲರಿಗೂ ಹೊಸದೆನಿಸಿತ್ತು. ವಿ . `ನದಿ ನೀರಿಗೆ ವಿಷ ಪ್ರಾಶನ’ ಎನ್ನುವ ಲೇಖನವೊಂದನ್ನು ಬರೆದು ಕಳುಹಿಸಿದರು. ಅದು ಮುಂದೆ ಶಾಲಾ ಪಠ್ಯಪುಸ್ತಕಗಳಲ್ಲೂ ಸೇರ್ಪಡೆಯಾಯಿತು. ಕರ್ನಾಟಕದಲ್ಲಷ್ಟೇ ಅಲ್ಲ ಮಹಾರಾಷ್ಟ್ರದ ಶಿಕ್ಷಣ ಇಲಾಖೆಯೂ ತನ್ನ ಕನ್ನಡ ವಿದ್ಯಾರ್ಥಿಗಳಿಗೆ ಈ ಪಾಠವನ್ನು ಆಯ್ಕೆ ಮಾಡಿಕೊಂಡಿತು.

`ಸೈನ್ಸ್ ಆಂಡ್ ಡೆವಲಪ್ಮೆಂಟ್ ಕರೆಸ್ಪಾಂಡೆಂಟ್’ (ವಿಜ್ಞಾನ ಮತ್ತು ಅಭಿವೃದ್ಧಿ ಬಾತ್ಮೀದಾರ) ಎಂದು ೧೯೮೦ರಲ್ಲಿ ಕೆಲಸಕ್ಕೆ ಸೇರಿದಾಗ ಪ್ರಜಾವಾಣಿಯ ಎಲ್ಲರಿಗೂ ಆದೊಂದು ಹೊಸ ವಿಷಯ. ಈವರೆಗೆ ವರದಿಗಾರಿಕೆ ಎಂದರೆ ರಾಜಕೀಯ, ಅಪರಾಧ, ಕ್ರೀಡೆ, ರಂಜನೆ, ವಾಣಿಜ್ಯ, ಸಂಸ್ಕೃತಿ ಇವಿಷ್ಟೇ ಇದ್ದವು. ವಿಜ್ಞಾನ ಮತ್ತು ಅಭಿವೃದ್ಧಿ ಇವೆಲ್ಲ ಕನ್ನಡ ಪತ್ರಿಕಾ ರಂಗಕ್ಕೆ ಹೊಸದು. ಅದೂ ವರದಿಗಾರ, ಹಿರಿಯ ವರದಿಗಾರ, ಮುಖ್ಯ ವರದಿಗಾರ ಎಂಬ ಹುದ್ದೆಗಳಷ್ಟೆ. ಈ ಹೊಸಬನ ಸ್ಥಾನ ಯಾವುದು? ವರದಿ ವಿಭಾಗದಲ್ಲಿ ಸೇರುತ್ತಾನೊ ಅಥವಾ ಅವನದೇ ವಿಶೇಷ ವಿಭಾಗವೋ ಎನ್ನುವ ಗೊಂದಲ. ಇದರಿಂದಾಗಿ ಹಿರಿಯ ವರದಿಗಾರರು ಇವರನ್ನು ತಮ್ಮ ವ್ಯಾಪ್ತಿಗೆ ಸೇರಿಸಿಕೊಳ್ಳಲಿಲ್ಲ. ಯಾರೂ ಇವರಿಗೆ ಇಂಥದ್ದನ್ನೇ ವರದಿ ಮಾಡಿ ಎನ್ನಲೂ ಇಲ್ಲ. ಹಾಗಾಗಿ ಎಲ್ಲೂ ಸಲ್ಲದವರಾಗಿದ್ದು, ಯಾರೂ ಕರೆಯದ ವಿಜ್ಞಾನದ ಲ್ಯಾಬ್ಗಳಿಗೊ, ಉದ್ಯಮಿಗಳ ಫ್ಯಾಕ್ಟರಿಗಳಿಗೊ ಎಲ್ಲೋ ಸುತ್ತಾಡಿ ಬಂದು ಎಲ್ಲೋ ಒಂದು ಕಡೆ ಕುಳಿತು ಲೇಖನ ಬರೆಯತೊಡಗಿದರು.


ರಾಜ್ಯೋತ್ಸವ ಪ್ರಶಸ್ತಿ ಸ್ವೀಕಾರ

ವೃತ್ತಿನಿರತ ಪತ್ರಕರ್ತರಾಗಿ ನಾಗೇಶ ಹೆಗಡೆ ‘ಪ್ರಜಾವಾಣಿ’ಗೆ ಒಪ್ಪಿಸಿದ ಮೊದಲ ವರದಿಗೆ ವಿಶೇಷ ಸ್ಥಾನವಿದೆ. ಬ್ರೂಕ್ಬಾಂಡ್ ಕಂಪನಿ ಒಂದು ಪತ್ರಿಕಾಗೋಷ್ಠಿ ಕರೆದಿತ್ತು. ಚಹಾಪುಡಿಯ ಹೊರತಾಗಿ ಹೊಸದಾಗಿ ತಾನು ಪಶು ಆಹಾರ ತಯಾರಿಕಾ ರಂಗಕ್ಕೂ ಕಾಲಿಡುತ್ತಿರುವ ಬಗ್ಗೆ ಅದು ಹೇಳಿದ್ದೆಲ್ಲ ವಾಣಿಜ್ಯ ಪುಟಗಳಲ್ಲಿ ಪ್ರಕಟವಾದವು. ನಾಗೇಶ ಹೆಗಡೆ ಬರೆದ ಒಂದು ಪುಟ್ಟ ವರದಿ ‘ಬಾಕ್ಸ್ ಐಟೆಮ್’ ಆಗಿ ಮೊದಲ ಪುಟದಲ್ಲಿ ಪ್ರಕಟವಾಯಿತು. ‘ಗೋವುಗಳಿಗೇ ಗೋಮಾಂಸ’ ಎಂಬ ಹೆಸರಿನ ಶಿರೋನಾಮೆಯಲ್ಲಿ ಬ್ರೂಕ್ ಬಾಂಡ್ ಕಸಾಯಿಖಾನೆಯ ತ್ಯಾಜ್ಯವಸ್ತುಗಳನ್ನು ಸಂಸ್ಕರಿಸಿ ಪಶು ಆಹಾರ ತಯಾರಿಸುವ ಸುದ್ದಿ ಇತ್ತು. ಈ ಗೋಪ್ಯ ವಿಷಯವನ್ನು ಹೆಗಡೆ ಅದು ಹೇಗೊ ಪತ್ತೆ ಮಾಡಿದ್ದರು. ಮುಂದೆ ಇಪ್ಪತ್ತು ವರ್ಷಗಳ ನಂತರ ಐರೋಪ್ಯ ದೇಶಗಳಲ್ಲಿ ‘ಹುಚ್ಚು ಹಸು ಕಾಯಿಲೆ’ ಹರಡಿ ಬ್ರಿಟನ್ನಿನ ಹತ್ತಾರು ಲಕ್ಷ ಹಸುಗಳನ್ನು ಕೊಂದು ಹೂಳುವ ಸಂದರ್ಭದಲ್ಲಿ ಅಲ್ಲಿನ ಪಶುಗಳಿಗೆ ಇಂಥ ಗೋಮಾಂಸ ತಿನ್ನಿಸುವುದೇ ಮುಖ್ಯ ಕಾರಣವೆಂಬ ವೈಜ್ಞಾನಿಕ ಸತ್ಯ ಬೆಳಕಿಗೆ ಬಂದಿತು.
ಆಗಿನ ದಿನಗಳಲ್ಲಿ ನಾಗೇಶ್ ಬರೆದ ಒಂದೊಂದು ವರದಿಯೂ ಎಂಭತ್ತರ ದಶಕದ ಸಮಾಜದ ಒಂದೊಂದು ವಿಶಿಷ್ಟ ಮಗ್ಗಲುಗಳನ್ನು ತೋರಿಸುತ್ತ ಹೋದವು. ನೀಲಗಿರಿ ನೆಡುತೋಪುಗಳಿಂದಾಗಿ ಅಂತರ್ಜಲ ಬತ್ತುತ್ತಿರುವ ವಿದ್ಯಮಾನ; ಸಿನೇಮಾ ಪ್ರೊಜೆಕ್ಟರ್ಗಳಿಗೆ ಸರಬರಾಜಾಗುತ್ತಿರುವ ಕಳಪೆ ಗುಣಮಟ್ಟದ ಆರ್ಕ್ ಬಲ್ಬುಗಳಿಂದಾಗಿ ವೀಕ್ಷಕರ ಮೇಲಾಗುವ ದುಷ್ಪರಿಣಾಮ; ಸರಕಾರಿ ನಿಧಾನ ನೀತಿಯಿಂದಾಗಿ ಬಸ್ ಷಾಸಿಗಳು ಆರಾರು ತಿಂಗಳು ಮಳೆಬಿಸಿಲಲ್ಲಿ ಸಾಲುಗಟ್ಟಿ ಕ್ಷಯವಾಗುತ್ತಿರುವ ಸಂಗತಿ, ಬೆಂಗಳೂರಿನ ಸಾಲು ಸಾಲು ಬಹುಮಹಡಿ ಕಟ್ಟಡಗಳಿಂದಾಗಿ ಅಂತರ್ಜಲದ ಮೇಲೆ ಆಗುವ ದುಷ್ಪರಿಣಾಮ; ಅರಣ್ಯದಿಂದ ಹೊರದಬ್ಬಿಸಿಕೊಂಡು ಹುಣಸೂರಿನ ಬಯಲುಗಳಲ್ಲಿ ತ್ರಿಶಂಕುವಾದವರ ದುಃಸ್ಥಿತಿ; ನಂಜನಗೂಡಿನ ಬಳಿಯ ಕಾರ್ಖಾನೆಗಳಿಂದಾಗಿ ಕಪಿಲಾ ನದಿಗೆ ವಿಷಮಾರ್ಜನ; ಹರಿಹರದ ಬಳಿ ತುಂಗಭದ್ರೆಗೆ ಪಾಲಿಫೈಬರ್ ಕಾರ್ಖಾನೆಯಿಂದಾಗಿ ಕ್ಷಾರತರ್ಪಣ ಇತ್ಯಾದಿ ವಿಶೇಷ ವರದಿಗಳು ಮುಖಪುಟದಲ್ಲಿ ಪ್ರಕಟವಾದವು. ಈ ವರದಿಗಳು ಹೊರಗೆ ಮಾತ್ರವಲ್ಲ, ಪ್ರಜಾವಾಣಿ ಸಂಪಾದಕೀಯ ಬಳಗದಲ್ಲೂ ಕಿಡಿ ಹೊತ್ತಿಸಿದವು. ನಾಗೇಶ ಹೆಗಡೆಯ ಎಲ್ಲ ವರದಿಗಳೂ ಬೈಲೈನ್ ಸಮೇತ ಮುಖಪುಟಕ್ಕೆ ಬರುತ್ತವೆ; ಅವರಿಗೆ ಮಾತ್ರ ಮುಕ್ತ ಸ್ವಾತಂತ್ರ್ಯ ಏಕೆ ಎಂಬ ಪ್ರಶ್ನೆ ಅಲ್ಲಲ್ಲಿ ಏಳುತ್ತಿತ್ತು.

ತಂದೆಯನ್ನೇ ದಸ್ತಗಿರಿ ಮಾಡಿಸಿದ ವರದಿ

ಕೆಲವು ಸಲ ಎಲ್ಲೋ ಎಸೆದ ಕಲ್ಲು ಇನ್ನಾರಿಗೋ ತಾಗುತ್ತದೆ ಅಥವಾ ತಿರುಗಿ ನಮಗೇ ಹೊಡೆಯುತ್ತದೆ. ಪತ್ರಕರ್ತರಿಗೆ ಅದರ ಅನುಭವ ಹೆಚ್ಚು. ನಾಗೇಶ್ ಹೆಗಡೆಯವರ ಬದುಕಿನಲ್ಲೂ ಇಂಥ ಪ್ರಕರಣಗಳಿಗೆ ಕಮ್ಮಿ ಇಲ್ಲ. ಪರಿಸರ ಕಾಳಜಿ ತೋರಿ ಬರೆದ ವರದಿಯೊಂದು ಇವರ ತಂದೆಯನ್ನೇ ಅರಣ್ಯ ಇಲಾಖೆಯವರು ಅಪರಾಧಿ ಸ್ಥಾನದಲ್ಲಿ ನಿಲ್ಲಿಸುವಂತೆ ಮಾಡಿತ್ತು!

ಉತ್ತರ ಕನ್ನಡ ಜಿಲ್ಲೆ ಅದರಲ್ಲೂ ಸಿದ್ದಾಪುರದ ಸುತ್ತಲಿನ ಹಳ್ಳಿಗಳಲ್ಲಿ ಬೀಟೆ ಮರ ಕಳ್ಳಸಾಗಣೆ ತೀವ್ರವಾಗಿದ್ದ ದಿನಗಳವು. ಸುಳಿವು ತಿಳಿದು ನಾಗೇಶ್ ತಮ್ಮೂರಿಗೆ ಕ್ಯಾಮರಾ ಹಿಡಿದು ಕಾಡಿಗೆ ಹೊರಟರು. ಊರಿನ ಕೆಲವರು ಉತ್ಸಾಹದಿಂದ ನಡುಕಾಡಿನಲ್ಲಿ ಉರುಳಿ ಬಿದ್ದ ಬೀಟೆಮರಗಳನ್ನು ತೋರಿಸಿದರು. ಯಥಾ ಪ್ರಕಾರ ಮುಖಪುಟದಲ್ಲಿ ಸಚಿತ್ರ ವರದಿ. ಊರಲ್ಲಿ ಹೊತ್ತಿತು ಬೆಂಕಿ. ಬೆಳಕು ಬಲವಾಗುವುದರೊಳಗೆ ಅರಣ್ಯ ಇಲಾಖೆ ದಂಡೇ ಊರಿನೊಳಗಿತ್ತು.

ಪ್ರಾಥಮಿಕ ತನಿಖೆ ನಡೆದು ಕೆಲವು ಗಟ್ಟಿ ಕುಳಗಳ ಮೇಲೆ ಅನುಮಾನ ಬಂದರೂ ಯಾರೂ ಬಾಯಿ ಬಿಡಲಿಲ್ಲ. ನಾಳೆ ಬೆಳಗಾಗುವುದರೊಳಗಾಗಿ ತಪ್ಪಿತಸ್ಥರು ತಾವಾಗಿ ಮುಂದೆ ಬಾರದಿದ್ದರೆ ಪೊಲೀಸರ ಬೂಟುಗಾಲಿನ ಏಟು ಬಿದ್ದೀತೆಂದು ಬೆದರಿಸಿ ಅಧಿಕಾರಿಗಳು ಮರಳಿ ಹೋದರು. ಇವೆಲ್ಲ ನಾಗೇಶನ ಕಿತಾಪತಿ ಎಂದುಕೊಂಡ ಕೆಲವರು ರಾತ್ರೋ ರಾತ್ರಿ ಒಂದಿಷ್ಟು ಬೀಟೆ ನಾಟಾಗಳನ್ನು ತಂದು ನಾಗೇಶ್ ಹೆಗಡೆಯ ತಂದೆಯವರ ಮನೆಯ ಗೊಬ್ಬರದ ಗುಂಡಿಯ ಬಳಿ ಅವಿತಿರಿಸಿ, ಸ್ವಾತಂತ್ರ್ಯ ಯೋಧ ನಾರಾಯಣ ಹೆಗಡೆಯವರ ಮೇಲೇ ಆರೋಪ ಹೊರಿಸಿದರು. ಮರುದಿನ ಅರಣ್ಯ ಇಲಾಖೆ ಅಧಿಕಾರಿಗಳು ಈ ಹಿರಿಯರನ್ನು ಜೀಪ್ ಮೇಲೆ ಕೂರಿಸಿ ‘ಅಪರಾಧಿ’ಯ ಹೇಳಿಕೆ ಪಡೆಯಲೆಂದು ಶಿರಸಿಗೆ ಕೊಂಡೊಯ್ದರು.

ಅದು ಗೊತ್ತಾಗಿ ಬೆಂಗಳೂರಿನ ಪ್ರಧಾನ ಅರಣ್ಯ ಸಂರಕ್ಷಕರಿಗೆ ‘ಪ್ರಜಾವಾಣಿ’ಯ ಮೂಲಕ ನಿಜ ಸಂಗತಿಯ ಮನವರಿಕೆ ಮಾಡಿಸಿ ನಾಗೇಶ ತನ್ನ ತಂದೆಯವರನ್ನು ಬಿಡಿಸಿದ್ದು, ನಿಜ ಅಪರಾಗಳ ಮೇಲೆ ಕೇಸ್ ಹಾಕಿಸಿದ್ದು ಇವೆಲ್ಲ ಬೇರೆ ಮಾತು. `ಬ್ರಿಟಿಷರ ಬೂಟುಗಾಲಿಗೂ ಹೆದರದ ತಂದೆಯ ಕಾಲು ನಡುಗಿಸಿದ್ದು ಮಾತ್ರ ನಾನೇ ಮೊದಲು’ ಎಂದು ವಿಷಾದದ ಮಾತು ಸೇರಿಸುತ್ತಾರೆ ನಾಗೇಶ್ ಹೆಗಡೆ.

ಗರ್ಭಗುಡಿಗೆ ಪ್ರವೇಶ

ಊರೂರು ಸುತ್ತುತ್ತ ಆಗಾಗ ವಿಶೇಷ ಲೇಖನ ಬರೆಯವುದನ್ನು ಬಿಟ್ಟರೆ ಬೇರೆ ಕೆಲಸ ಇರಲಿಲ್ಲ. ಕಚೇರಿಗೆ ಬಂದು ಸುಮ್ಮನೆ ಕುಳಿತಿರುವ ಮನೋಭಾವ ಇವರದ್ದಲ್ಲ. ಸಂಪಾದಕರಲ್ಲಿಯೇ ಪರಿಹಾರ ಕೇಳಲು ನಿರ್ಧಾರ. ಆಗ ಪ್ರಜಾವಾಣಿ ಸಂಪಾದಕರಾಗಿದ್ದವರು ವೈಎನ್ಕೆ. ವರದಿಗಾರ, ಉಪಸಂಪಾದಕ ಎಲ್ಲೂ ಸೇರದ ತನಗೆ ಯಾವುದಾದರೂ ನಿರ್ದಿಷ್ಟ ಕೆಲಸ ಕೊಡುವಂತೆ ವೈಎನ್ಕೆ ಬಳಿ ನಾಗೇಶ್ ಕೇಳಿದರು. ವೈಎನ್ಕೆ ‘ಕಚೇರಿಯಲ್ಲಿ ಕೂತು ಏನು ಬರೆಯಬಲ್ಲಿರಿ?’ ಕೇಳಿದರು. ನಾಗೇಶ್ ಹೆಗಡೆಯವರಿಗೆ ಏನು ಹೇಳಬೇಕೋ ತಿಳಿಯಲಿಲ್ಲ. ಎತ್ತಿದ ಬಾಯಿಗೆ `ಸಂಪಾದಕೀಯ ಬರೆಯುತ್ತೇನೆ’ ಎಂದುಬಿಟ್ಟರು.

ವೈಎನ್ಕೆಯವರಿಗೆ ಇವರ ಧೈರ್ಯ ಕಂಡು ಒಂದು ಕಡೆ ಸಂತೋಷ, ಇನ್ನೊಂದು ಕಡೆ ಇವರ ಸಾಮರ್ಥ್ಯದ ಕಡೆಗೆ ಅನುಮಾನ. `ಎಲಾ ಇವನಾ, ಸಂಪಾದಕೀಯ ಬರೆಯುವವರು ಎಂತೆಂಥ ಹಿರಿಯರು, ಅನುಭವಿಗಳು. ಈತ ಈಗಲೇ ಸಂಪಾದಕೀಯ ಬರೆಯುತ್ತೇನೆ ಎನ್ನುತ್ತಾನಲ್ಲ’ ಎಂಬಂತೆ ನೋಡಿದರು. `ಆಗಲಿ, ಒಂದು ಬರೆದುಕೊಂಡು ಬಾ ನೋಡೋಣ’ ಎಂದರು.

ಆಗ ಪ್ರಜಾವಾಣಿಯ ಥರ್ಡ್ ಎಡಿಟೋರಿಯಲ್ (ಮೂರನೇ ಸಂಪಾದಕೀಯ) ಅತ್ಯಂತ ಜನಪ್ರಿಯವಾಗಿತ್ತು. ಅದು ಸ್ವತಃ ವೈಎನ್ಕೆ ಬರೆಯುತ್ತಿದ್ದ ಅಂಕಣ. ಅದೊಂದು ರೀತಿಯ ಬಿಗಿ ಭದ್ರತೆಯ ಗರ್ಭಗುಡಿ. ಅಲ್ಲಿ ಯಾರಿಗೂ ಪ್ರವೇಶವಿಲ್ಲ. ವೈಎನ್ಕೆ ಅಂದರೆ ಥರ್ಡ್ ಎಡಿಟೋರಿಯಲ್, ಥರ್ಡ್ ಎಡಿಟೋರಿಯಲ್ ಅಂದರೆ ವೈಎನ್ಕೆ ಎನ್ನುವಂಥ ಸ್ಥಿತಿ. ಅಂಥ ಗರ್ಭಗುಡಿಗೇ ಇಣುಕು ಹಾಕಿದ ನಾಗೇಶ್ ಹೆಗಡೆ, ಅದೇ ಮೂರನೇ ಸಂಪಾದಕೀಯ ಬರೆದುಬಿಟ್ಟರು.
ವೈಎನ್ಕೆಗೆ ಇದನ್ನು ನೋಡಿ ಆಶ್ಚರ್ಯ. ಬರವಣಿಗೆ ಇಷ್ಟವಾಯಿತು. ನಂತರದ ದಿನಗಳಲ್ಲಿ ವೈಎನ್ಕೆಗೆ ಸಾಧ್ಯವಾಗದಿದ್ದಾಗಲೆಲ್ಲ ಮೂರನೇ ಸಂಪಾದಕೀಯ ಬರೆಯುವ ಜವಾಬ್ದಾರಿ ನಾಗೇಶ್ ಹೆಗಡೆ ಬಳಿ ಬರುತ್ತಿತ್ತು. ಪ್ರವೇಶವೇ ಇಲ್ಲದ ಗರ್ಭಗುಡಿಯಲ್ಲಿ ಪೂಜಾರಿಯ ಸ್ಥಾನ-ಮಾನ ದಕ್ಕಿತ್ತು. ಕ್ರಮೇಣ ಎರಡನೇ ಹಾಗೂ ಒಂದನೇ ಸಂಪಾದಕೀಯವನ್ನೂ ಬರೆಯತೊಡಗಿದರು.

ಮುಂದೆ ವೈಎನ್ಕೆ ‘ಪ್ರಜಾವಾಣಿ’ಯನ್ನು ಬಿಟ್ಟ ನಂತರವೂ, ನಾಗೇಶ ಹೆಗಡೆ ‘ಸುಧಾ’ಕ್ಕೆ ಹೋದ ಮೇಲೂ ಸತತ ಐದು ವರ್ಷಗಳ ಕಾಲ ಮೂರನೆಯ ಸಂಪಾದಕೀಯವನ್ನು ಬರೆದರು. ಅವುಗಳಲ್ಲಿ ಕೆಲವು ‘ಕ್ಯಾಪ್ಸೂಲಗಿತ್ತಿ’ ಹೆಸರಿನಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಗಿವೆ. ಅದಕ್ಕೆ ಯು. ಆರ್. ಅನಂತಮೂರ್ತಿಯವರ ಮೆಚ್ಚುಗೆಯ ಮುನ್ನುಡಿಯಿದೆ.
ನಾಗೇಶ್ಗೆ ಇಷ್ಟದ ಹವ್ಯಾಸಗಳಾದ ಫೋಟೋಗ್ರಫಿ, ವ್ಯಂಗ್ಯಚಿತ್ರ, ರೇಖಾಚಿತ್ರಗಳಿಗೂ ಪ್ರಜಾವಾಣಿಯಲ್ಲಿ ಮನ್ನಣೆ ಸಿಕ್ಕಿತು. ಹಲವು ಸಲ ಅವು ಆದ್ಯತೆಯ ಮೇರೆಗೆ ಮುಖಪುಟಗಳಲ್ಲೂ ಪ್ರಕಟವಾದವು. ೧೯೮೨ರ ಚುನಾವಣೆಯ ಮುನ್ನಾದಿನ ಬೆಂಗಳೂರಿನ ಬೀದಿವಾಸಿಗಳ ನಸುಮುಂಜಾನೆಯ ಪರದಾಟದ ಚಿತ್ರವೊಂದು ‘ಮನೆ-ಮತ ಕಳಕೊಂಡವರು’ ಹೆಸರಿನಲ್ಲಿ ಆರು ಅಂಕಣಗಳ ವಿಸ್ತಾರದಲ್ಲಿ ಬೈಲೈನ್ ಸಮೇತ ಪ್ರಕಟವಾಯಿತು. ಅಧಿಕೃತ ಛಾಯಾಗ್ರಾಹಕರಿಗೂ ಅಪರೂಪಕ್ಕೆ ಮಾತ್ರ ಸಿಗುವ ಮನ್ನಣೆ ಅದು. ಹಾಗೇ ಜೂನ್ ೫ರಂದು ‘ವಿಶ್ವ ಪರಿಸರ ದಿನ’ ಆಚರಿಸಬೇಕೆಂದು ವಿಶ್ವಸಂಸ್ಥೆ ನಿರ್ಧರಿಸಿದಾಗ ಆ ಮೊದಲನೆಯ ದಿನಾಚರಣೆಯ ದಿನವೇ ಇವರು ಸೆರೆಹಿಡಿದ ವಾಯುಮಾಲಿನ್ಯದ ವಿಶಿಷ್ಟ ಛಾಯಾಚಿತ್ರವೊಂದು ಇವರದೇ ವಿಶೇಷ ವರದಿಯ ಜತೆಗೆ ಪ್ರಕಟವಾಯಿತು.
ವಿಜ್ಞಾನ, ಕಲೆ, ಛಾಯಾಚಿತ್ರ ಹಾಗೂ ಲವಲವಿಕೆ ಬರವಣಿಗೆ ಕಲೆ ಮೇಳವಿಸಿರವ ಹೆಗಡೆಯ ಹೆಗಲಿಗೆ ವೈಎನ್ಕೆ ಎರಡು ವಿಶೇಷ ಹೊಣೆಗಳನ್ನು ಹೊರಿಸಿದರು. ಒಂದು, ಪ್ರತಿ ವಾರವೂ ‘ವಿಜ್ಞಾನ ವಿಶೇಷ’ ಎಂಬ ಅಂಕಣವನ್ನು ಇವರು ಬರೆಯಬೇಕು; ಇನ್ನೊಂದು, ‘ನಾಡು-ನಾಡಿ’ ಹೆಸರಿನ ಅಂಕಣವನ್ನು ಸಹೋದ್ಯೋಗಿಗಳಿಂದ ಬರೆಸಿ ಮುದ್ರಣಕ್ಕೆ ಸಜ್ಜುಗೊಳಿಸಬೇಕು. ಕೆಲಸಕ್ಕೆ ಸೇರಿ ಆರು ತಿಂಗಳೂ ಆಗಿರದ ಯುವ ಪತ್ರಕರ್ತನಿಗೆ ಇಷ್ಟೊಂದು ಮಾನ್ಯತೆ ಕೊಟ್ಟಿದ್ದು ಇತರರಿಗೆ ಸಹಜವಾಗಿಯೇ ಕಿರಿಕಿರಿ ಆಗಿರಬೇಕು. ಕಿರುಕುಳಗಳು ಆರಂಭವಾದವು. ಕಿರಿಯನಿಂದ ತಿದ್ದಿಸಿಕೊಳ್ಳುವ ಪಡಿಪಾಟಲು ಏಕೆ ಬೇಕೆಂದು ಹಿರಿಯರು ‘ನಾಡು ನಾಡಿ’ಗೆ ಸಹಕರಿಸಲು ನಿರಾಕರಿಸಿದರು. ಎದೆಗುಂದದ ಇವರು ಹೊರಗಿನವರ ಬರಹಗಳನ್ನು ತರಿಸಿ, ಕೆಲವನ್ನು ತಿದ್ದಿ ಬರೆದು ಪ್ರಕಟಿಸಲು ತೊಡಗಿದ ಮೇಲೆ ಈ ಅಂಕಣ ಬಲುಬೇಗ ಜನಪ್ರಿಯವಾಯಿತು. ಅಂದು ಆರಂಭವಾದ ‘ವಿಜ್ಞಾನ-ವಿಶೇಷ’ ಅಂಕಣ ಸತತ ೨೫ ವರ್ಷಗಳವರೆಗೆ ಸಾಗಿ ಬಂದು ಇಂದಿಗೂ ಪ್ರಕಟವಾಗುತ್ತಿದೆ.

ಕುದುರೆಮುಖ ಕಬ್ಬಿಣದ ಅದಿರು ಯೋಜನೆಗೂ ನಾಗೇಶ ಹೆಗಡೆಗೂ ವಿಲಕ್ಷಣ ಸಂಬಂಧವಿದೆ. ದಿಲ್ಲಿಯ ಜವಾಹರಲಾಲ್ ನೆಹರೂ ವಿವಿಯಲ್ಲಿ ಇವರು ಕಬ್ಬಿಣ ಅದುರಿನ ರಫ್ತಿನ ಸಂಶೋಧನೆ ಆರಂಭಿಸಿದಾಗಲೇ ಕುದುರೆಮುಖದಲ್ಲಿ ಅಗೆತ ಆರಂಭವಾಗಿತ್ತು. ಆಗ ಒಮ್ಮೆ ಭೇಟಿ ನೀಡಿ ಅದರ ಆರ್ಥಿಕ ದುರಂತಗಳ ಬಗ್ಗೆ ವರದಿ ತಯಾರಿಸಿದ ಮೇಲೆ ಅವರು ಪತ್ರಕರ್ತರಾಗಿ ಅಲ್ಲಿನ ಪರಿಸರ ದುರಂತಗಳ ಬಗ್ಗೆ ಮತ್ತೆ ಬರೆದರು. ಅದುರು ಪುಡಿ ಸಿದ್ಧವಾಗಿ ಇನ್ನೇನು ಮೊದಲ ಹಡಗು ಹೊರಡುವ ಮುಹೂರ್ತ ಬಂದಾಗ ಇರಾನ್ ಯುದ್ಧದಿಂದಾಗಿ ಇಡೀ ಯೋಜನೆ ನೆಲಕಚ್ಚುವ ಹಂತ ಸ್ಥಿತಿ ಬಂದಾಗ ಮತ್ತೆ ಬರೆದರು. ಮೂರು ವರ್ಷಗಳ ಕಾಲ ಅದುರಿಗೆ ಗಿರಾಕಿ ಇಲ್ಲದೆ ಅಲ್ಲಿನ ಯಂತ್ರೋಪಕರಣಗಳು ನೆಲಕಚ್ಚಿದಾಗ ಮತ್ತೆ ಬರೆದರು. ಸುತ್ತಲಿನ ನಿಸರ್ಗ ಧ್ವಂಸಗೊಂಡು ಇಡೀ ಯೋಜನೆ ಕಾಲ್ತೆಗೆಯುವ ಹಂತ ಬಂದಾಗ ಮತ್ತೆ ಬರೆದರು.

ಕುದುರೆಮುಖ ಗಣಿಗಾರಿಕೆ ವಿರೋಧದ ಆಂದೋಲನ ತೀವ್ರಗತಿ ಪಡೆಯುವಲ್ಲಿ ಈ ತ್ರಿಮೂರ್ತಿಗಳ ಪಾತ್ರ ಪ್ರಮುಖವಾದುದು. ನಾಗೇಶ ಹೆಗಡೆ ಪತ್ರಿಕೆ ಹಾಗೂ ಲೇಖನಗಳ ಮೂಲಕ ಪ್ರಹಾರ ನಡೆಸಿದರೆ ಎಚ್.ಆರ್. ಕೃಷ್ಣಮೂರ್ತಿ ಆಕಾಶವಾಣಿ ಮೂಲಕ ಮಿದುವಾಗಿ ಅಲ್ಲಿನ ಅದ್ಭುತ ರಮ್ಯ ನಿಸರ್ಗದ ಬಗೆಗೆ `ವಾಯುದಾಳಿ’ ನಡೆಸುತ್ತಿದ್ದರು. ಉಲ್ಲಾಸ ಕಾರಂತ್ ತಮ್ಮ ಎನ್ಜಿಓ ಮೂಲಕ ಕಾನೂನು ಸಮರ ಸಾರುತ್ತಿದ್ದರು. ಹೀಗೆ ಕುದುರೆಮುಖದ ಸ್ಥಿತಿಗತಿ, ಪರಿಸರದ ಮೇಲಾಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಪ್ರಪ್ರಥಮವಾಗಿ ಲೇಖನಿ ಹಿಡಿದ ನಾಗೇಶ್ ಹೆಗಡೆ ವೃತ್ತಿ ಜೀವನದ ಕೊನೆಯ ದಿನಗಳವರೆಗೂ ಬರವಣಿಗೆ ಮೂಲಕ ಹೋರಾಟ ಮುಂದುವರಿಸಿದರು. ನಿವೃತ್ತರಾಗುವ ಕೆಲವೇ ದಿನಗಳ ಮೊದಲೂ ಕುದುರೆಮುಖದ ಕುರಿತಾದ ಲೇಖನವೊಂದನ್ನು ಬರೆದು ಅದಕ್ಕೊಂದು ಪೂರ್ಣ ವಿರಾಮ ಇಟ್ಟರು.

ಕನ್ನಡ ಪತ್ರಿಕೋದ್ಯಮದ ಎರಡು ವಿಶಿಷ್ಟ ಹುದ್ದೆಗಳು

ಒಂದೂವರೆ ವರ್ಷಗಳವರೆಗೆ ‘ವಿಜ್ಞಾನ ಮತ್ತು ಅಭಿವೃದ್ಧಿ ಬಾತ್ಮೀದಾರ’ರಾಗಿ ವಿಶಿಷ್ಟ ಕೆಲಸ ಮಾಡಿದ ಹೆಗಡೆ ಕೇವಲ ವರದಿ ಒಪ್ಪಿಸುತ್ತ ಕೂತಿರುವುದು ಕೆಲವರಿಗೆ ಸರಿಹೋಗಲಿಲ್ಲವೇನೊ. ಒಂದು ದಿನ ಇದ್ದಕ್ಕಿದ್ದಂತೆ ಇವರು ಕನ್ನಡದ ಮೊತ್ತ ಮೊದಲ ‘ಫೀಚರ್ ರೈಟರ್’ ಆದರು. ಸುದ್ದಿಮನೆಯಲ್ಲಿ ಮತ್ತೆ ಅದೇ ಗೊಂದಲ. ಇವರ ಮೇಲಧಿಕಾರಿ ಯಾರು? ಇವರನ್ನು ಎಲ್ಲಿ ಕೂರಿಸಬೇಕು? ಇವರಿಗೆ ಶಿಫ್ಟ್ ಇದೆಯೆ? ಉತ್ತರ ಯಾರ ಬಳಿಯೂ ಇಲ್ಲ. ಮತ್ತೆ ಅಲ್ಲಿ ಇಲ್ಲಿ ಕೂತೆದ್ದು ತನಗಿಷ್ಟ ಬಂದ ವಿಷಯದ ಬಗ್ಗೆ ಫೀಚರ್ ಬರೆಯುತ್ತಿದ್ದ ಹೆಗಡೆಯ ಬಳಿ ಒಂದು ದಿನ ಎಂ. ಬಿ. ಸಿಂಗ್ ಬಂದು ‘ಸುಧಾ’ಕ್ಕೆ ಬರ್ತೀರಾ?’ ಕೇಳಿದರು. ಕೂರಲು ಒಂದು ನಿರ್ದಿಷ್ಟ ಜಾಗ ಸಿಗುತ್ತದೆಂಬ ಒಂದೇ ಒಂದು ಕಾರಣದಿಂದ ‘ಸುಧಾ’ಕ್ಕೆ ಹೊರಟೆ’ ಎಂದ ಹೆಗಡೆ ಈಗ ನೆನಪಿಸಿಕೊಳ್ಳುತ್ತಾರೆ. , ಹೊಸ ಹುದ್ದೆ ಕಾದಿದೆ ನಿಮಗೆ’ ಎಂದರು. ಸೈ ಎಂದಿದ್ದೇ ತಡ, `ಫೀಚರ್ ರೈಟರ್’ ಎನ್ನುವ ಹೊಸ ಹುದ್ದೆ ನೀಡಿ ಸುಧಾಕ್ಕೆ ಕಳುಹಿಸಿದರು. ಆ ಮೂಲಕ ಕನ್ನಡದ ಪ್ರಪ್ರಥಮ (ಮತ್ತು ಈವರೆಗಿನ ಏಕೈಕ) ಫೀಚರ್ ರೈಟರ್ ಎಂಬ ಹೆಗ್ಗಳಿಕೆಗೂ ನಾಗೇಶ್ ಹೆಗಡೆ ಪಾತ್ರರಾದರು.

ಎಂಥ ಪರಿಸ್ಥಿತಿಯೇ ಬರಲಿ, ಸಮರ್ಥವಾಗಿ ಎದುರಿಸಬೇಕು. ಎಲ್ಲಿದ್ದರೂ ಅಲ್ಲೊಂದು ಸಾಧನೆ ಮಾಡಿ ತೋರಿಸಬೇಕು ಎಂಬಂತಿತ್ತು ನಾಗೇಶ್ ಹೆಗಡೆಯವರ ಪ್ರತಿಯೊಂದು ಹೆಜ್ಜೆ. ಹಾಗಾಗಿಯೇ ಅವರು ಸುಧಾಕ್ಕೆ ಬಂದಾಗಲೂ ಹೆದರಲಿಲ್ಲ. ಹೊಸ ಹೊಸ ವಿಷಯಗಳನ್ನು ಹುಡುಕಿದರು. ವಿಶೇಷ ಲೇಖನಗಳನ್ನು ಬರೆದರು, ಬರೆಸಿದರು.
`ಮುಖಪುಟ ಲೇಖನ’ ಎನ್ನುವ ಹೊಸ ಪದ್ಧತಿ ಸುಧಾದಲ್ಲಿ ಆಗತಾನೇ ಪ್ರಾರಂಭವಾಗಿತ್ತು. ಹೆಗಡೆಯವರ ನುಡಿ ಚಿತ್ರಕ್ಕೆ ಒಂದು ಛಾಪು ಇತ್ತು. ಅದು ಯಾವ ಮಟ್ಟದಲ್ಲಿತ್ತು ಎಂದರೆ, ನಾಗೇಶ್ ಹೆಗಡೆ ಶೈಲಿ ಎಂಬ ಹೊಸ ಶೈಲಿಯೇ ಹುಟ್ಟಿಕೊಂಡಿತು. ಪತ್ರಿಕೆಯನ್ನು ಹಿಂದಿನಿಂದ ಓದುವ ಹಂತಕ್ಕೆ ಅವರ ‘ಸುದ್ದಿ ಸ್ವಾರಸ್ಯ’ ಅಂಕಣ ಜನಪ್ರಿಯವಾಯಿತು.

ಕೈಗಾ ಹೋರಾಟ

ಇವರು ಬರೆದ ಪ್ರತಿ ಮುಖಪುಟ ಲೇಖನಗಳೂ ಒಂದೊಂದು ಕ್ರಾಂತಿ ಮಾಡಿದವು. ಹೋರಾಟಕ್ಕೆ ನಾಂದಿಯಾದವು. ಪಶ್ಚಿಮಘಟ್ಟಗಳ ಬಗ್ಗೆ ಬರೆದಾಗ `ಪಶ್ಚಿಮಘಟ್ಟ ಉಳಿಸಿ’ ಹೋರಾಟ ಪ್ರಾರಂಭವಾಯಿತು. ಅದು ಹೈಸ್ಕೂಲ್ ಪಠ್ಯಗಳಲ್ಲೂ ಸೇರಿತು. ಶರಾವತಿ ಟೇಲರೇಸ್, ಅದರಿಂದಾಗುವ ಅನಾನುಕೂಲ, ಪರಿಸರದ ಮೇಲಿನ ಹಾನಿಗಳ ಕುರಿತು ಬರೆದಾಗ ಆ ಯೋಜನೆಯ ವಿರುದ್ಧ ಹೋರಾಟ ಆರಂಭ. ಹರಿಹರ ಪಾಲಿಫೈಬರ್ ಕಂಪನಿಗಳ ವಿರುದ್ಧ, ನೀಲಗಿರಿ ನೆಡುತೋಪುಗಳ ವಿರುದ್ಧ ಹೋರಾಟಗಳು ನಡೆಯಲಿಕ್ಕೆ ಇವರ ಲೇಖನಗಳೇ ಮುಖ್ಯ ಆಧಾರವೆಂಬ ಪ್ರತೀತಿ ಈಗಲೂ ಇದೆ. ಹಿಂದುಳಿದ ನಾಡಿಗೆ ‘ವರ’ ಎಂಬಂತೆ ಬೀದರ್ಗೆ ಬಂದ ಔಷಧ ಕಂಪನಿಯ ಬಗ್ಗೆ, ಅದು ಸೃಷ್ಟಿಸಿದ ಅವಾಂತರಗಳ ಬಗ್ಗೆ ಬರೆದಾಗ ಆ ಕಂಪನಿಯ ವಿರುದ್ಧವೂ ಹೋರಾಟ ಆರಂಭ.

ಇವರು ಬರೆದ ಅನೇಕ ಲೇಖನಗಳು ಶಿಕ್ಷಣರಂಗದ ನಾನಾ ಸ್ತರಗಳಲ್ಲಿ ಪಾಠದ ವಿಷಯಗಳಾಗಿವೆ. ಅಣುಬಾಂಬ್ ಬಿದ್ದೇ ಬಿಟ್ಟರೆ ಉಂಟಾಗುವ ‘ಅಣುಚಳಿಗಾಲ, ಅಡಗಲು ಸ್ಥಳವೆಲ್ಲಿ?’ ಎಂಬ ಇವರ (ಸುಧಾ ಮುಖಪುಟ) ಲೇಖನ ಪಿಯೂಸಿಗೆ ಪಾಠವಾಗಿ ರಾಜ್ಯಾದ್ಯಂತ ಇವರ ಲೇಖನಗಳನ್ನು ಹುಡುಕಿ ಓದುವವರ ಸಂಖ್ಯೆ ಹೆಚ್ಚಿತು. ಸರಳ ಶೈಲಿಯ ಕ್ಲಿಷ್ಟ ವಿಷಯಗಳ ಅನೇಕ ಗಂಭೀರ ಲೇಖನಗಳು ರಾಜ್ಯದ ನಾನಾ ವಿಶ್ವವಿದ್ಯಾಲಯಗಳ ಪಠ್ಯಕ್ಕೆ ಸೇರ್ಪಡೆಗೊಂಡವು. ಹಾಗಾಗಿಯೇ ಇಂದು ಯಾವುದೇ ವಿಶ್ವವಿದ್ಯಾಲಯದ ಪಠ್ಯ ನೋಡಿ, ಬಹುತೇಕವಾಗಿ ಅಲ್ಲೊಂದು ನಾಗೇಶ್ ಹೆಗಡೆ ಲೇಖನ ಕಾಣಸಿಗುತ್ತದೆ.

ಇನ್ನು ಕೈಗಾ ವಿಷಯವಂತೂ ಎಲ್ಲಕ್ಕಿಂತ ಭಿನ್ನವಾದದ್ದು. ಕೈಗಾಕ್ಕೆ ಅಣುವಿದ್ಯುತ್ ಸ್ಥಾವರ ಬರುತ್ತದೆ ಎಂದಾದಾಗ ಅದೊಂದು ಬೃಹತ್ ಅಭಿವೃದ್ಧಿ ಕಾರ್ಯ ಎಂಬಂತೆ ಬಿಂಬಿಸುವ ಕಾರ್ಯ ಮಾಧ್ಯಮಗಳಲ್ಲಿ ನಡೆದಿತ್ತು. ಕಾರಣ, ವಿದ್ಯುತ್ ಸ್ಥಾವರಗಳ ಬಗ್ಗೆ ನಮ್ಮವರಲ್ಲಿದ್ದ ತಿಳಿವಳಿಕೆ ಕೊರತೆ. ವಿeನದ ಹಿನ್ನೆಲೆ ಉಳ್ಳ ನಾಗೇಶ್ ಹೆಗಡೆ ಅದನ್ನು ಕೈಗೆತ್ತಿಕೊಂಡರು. ಪ್ರಪಂಚದಲ್ಲಿ ಎಲ್ಲೆಲ್ಲಿ ಅಣು ವಿದ್ಯುತ್ ಸ್ಥಾವರಗಳಿವೆ, ಯಾವ ಸ್ಥಿತಿಯಲ್ಲಿವೆ, ಅವು ಸೃಷ್ಟಿಸಿದ ಅವಾಂತರಗಳೇನು ಎಂಬೆಲ್ಲ ಮಾಹಿತಿಗಳನ್ನು ಕಲೆಹಾಕಿ ಬರೆದ ಲೇಖನ ಒಂದು ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತು. ಇಡೀ ರಾಜ್ಯದಲ್ಲಿ ಹೋರಾಟದ ಅಲೆ ಹಬ್ಬಿಸಿತು. ದೇಶದ ಮಹಾನ್ ಅಣು ವಿeನಿ ರಾಜಾರಾಮಣ್ಣ ಕೈಗಾ ಬಂದಾಗ ಜನರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವುದು ಕಷ್ಟವಾಯಿತು. ಅಣು ವಿದ್ಯುತ್ ಬಗ್ಗೆ ಏನೂ ಅರಿವಿಲ್ಲದ ಜನರಲ್ಲೂ ಈ ಲೇಖನ ಅಷ್ಟೊಂದು ಮಾಹಿತಿ ತುಂಬಿತ್ತು. ಚಳವಳಿಯ ಕಾವು ತೀವ್ರವಾಗಿದ್ದಾಗಲೇ ಚೆರ್ನೊಬಿಲ್ ಪರಮಾಣು ಸ್ಥಾವರ ಸ್ಫೋಟಿಸಿತು.

ಪರಮಾಣುಸ್ಥಾವರಗಳ ಕುರಿತು ಇವರಲ್ಲಿನ ಮಾಹಿತಿ ಕಂಡು ನಾನಾ ರಾಜ್ಯಗಳು ಮಾತ್ರವಲ್ಲ, ನಾನಾ ದೇಶಗಳೂ ಇವರನ್ನು ತಮ್ಮಲ್ಲಿಗೆ ಆಹ್ವಾನಿಸಿ, ತಮ್ಮ ಚಳವಳಿಗೆ ಅಂತರರಾಷ್ಟ್ರೀಯ ಬಲ ತುಂಬಿದವು. ಈ ಕಾರಣಕ್ಕಾಗಿಯೇ ಮಲೇಶ್ಯ, ಹಾಂಕಾಂಗ್, ಸ್ವಿಡ್ಸರ್ಲೆಂಡ್ ದೇಶಗಳಲ್ಲಿ ಇವರು ಉಪನ್ಯಾಸ ನೀಡಿದರು. ಅಮೆರಿಕ ಸರಕಾರ ತನ್ನ ಪರಿಸರ ಸ್ನೇಹಿ ಸಾಧನಗಳನ್ನು ತೋರಿಸಲೆಂದು ಇವರನ್ನು ಅತಿಥಿಯಾಗಿ ಕರೆಸಿಕೊಂಡಿತು. ಬ್ರಝಿಲ್ ದೇಶದ ರಿಯೊ ಡಿ ಜನೈರೊ ನಗರದಲ್ಲಿ ನಡೆದ ಮೊದಲ ವಿಶ್ವ ಪರಿಸರ ಶೃಂಗಸಭೆಗೆ ಪ್ರಧಾನಿಯವರ ತಂಡದ ಜತೆಗೆ ‘ಪ್ರಜಾವಾಣಿ’ಯ ಪರವಾಗಿ ‘ಸುಧಾ’ದ ಇವರೇ ಪ್ರತಿನಿಧಿಯಾದರು. ರಿಯೊ ಮಹಾಮೇಳದ ಸ್ವಾಗತ ಕಮಾನಿನಲ್ಲೇ ಸಿದ್ಧಗಂಗಾ ಮಠದ ಕನ್ನಡ ಅಕ್ಷರಗಳಿರುವುದನ್ನು ಕುರಿತು ಇವರು ಬರೆದ ಹತ್ತು ವಾಕ್ಯಗಳ ಫೀಚರ್ ಲೇಖನ ‘ಪ್ರಜಾವಾಣಿ’ಯ ಬೈಲೈನ್ ಪಡೆದ ಅತಿ ಚಿಕ್ಕ ಲೇಖನವೆಂತಲೂ ದಾಖಲಾಯಿತು.
‘ಪ್ರಜಾವಾಣಿ’ಗೆ ಮರಳಿದಾಗ ಇವರ ಕೈಗೆ ಬಂದಿದ್ದು `ಕರ್ನಾಟಕ ದರ್ಶನ’ ಪುರವಣಿ. ಇದು ನಾಗೇಶ ಹೆಗಡೆ ಮಟ್ಟಿಗಲ್ಲ, ಹವ್ಯಾಸಿ ಬರಹಗಾರರ ಮಟ್ಟಿಗೆ ಹೊಸ ಮನ್ವಂತರವನ್ನೇ ಸೃಷ್ಟಿಸಿತು. ಅಲ್ಲಿಯ ತನಕ ಸ್ವಂತದ ಬರವಣಿಗೆಗೆ ಒತ್ತು ನೀಡುತ್ತಿದ್ದ ಹೆಗಡೆ ನಂತರ ಬೇರೆಯವರಿಂದ ನುಡಿಚಿತ್ರ ಬರೆಸುವ ಕಾರ್ಯದಲ್ಲಿ ತೊಡಗಿಕೊಂಡರು. ರಾಜ್ಯದ ಮೂಲೆ ಮೂಲೆಯಿಂದ ಲೇಖಕರನ್ನು ಹುಡುಕಿದರು. ವಿಷಯ ಕೊಟ್ಟು ಬರೆಸಿದರು, ತಿದ್ದಿದರು. ಲೇಖನ ಮಾತ್ರವನ್ನಲ್ಲ, ಅವರ ಬರವಣಿಗೆ ಶೈಲಿಯನ್ನೂ. ಆ ಮೂಲಕ ಒಂದು ಯುವ ಬರಹಗಾರರ ಪಡೆಯನ್ನೇ ಸೃಷ್ಟಿಸಿದರು.

ಈ ಹಂತದಲ್ಲಿ ನಾವು ನಾಗೇಶ್ ಹೆಗಡೆ ಜೀವನದ ಇನ್ನೊಂದು ಮುಖ ನೋಡಬಹುದು. ಇಲ್ಲಿ ಇವರು ಒಬ್ಬ ಬರಹಗಾರನಾಗಿ ಉಳಿದಿಲ್ಲ, ಛಾಯಾಗ್ರಾಹಕನಲ್ಲ, ಪರಿಸರ ಹೋರಾಟಗಾರನಲ್ಲ. ಬದಲಿಗೆ ಒಬ್ಬ ಅಪ್ಪಟ ಗುರು. ಬರವಣಿಗೆ ಕಲಿಸುವ ಉತ್ತಮ ಶಿಕ್ಷಕ. ಬಂದ ಲೇಖನ ಪ್ರಕಟಿಸಿ ಕೂರುವ ಬದಲು ಪತ್ರಿಕೆಯ ಗುಣಮಟ್ಟಕ್ಕೆ ಬೇಕಾದ ಲೇಖನ ಬರೆಸಲು ಆರಂಭಿಸಿದರು.

‘ಕರ್ನಾಟಕ ದರ್ಶನ’ಕ್ಕೆ ಯಾರೇ ಲೇಖನ ಕಳುಹಿಸಲಿ ಅದಕ್ಕೊಂದು ಪ್ರತ್ಯುತ್ತರ. ಲೇಖನ ಚೆನ್ನಾಗಿದ್ದರೆ ಶಹಬ್ಬಾಸ್ಗಿರಿ. ಇಲ್ಲವಾದರೆ ಅದರಲ್ಲಿನ ನ್ಯೂನತೆಗಳ ಪಟ್ಟಿ. ಲೇಖನಕ್ಕೆ ಇನ್ನೇನು ಸೇರಬೇಕು, ಎಂಥ ಮಾಹಿತಿ ಬೇಕು, ಫೋಟೋ ಹೇಗಿರಬೇಕು ಎಂಬೆಲ್ಲ ಸಂಕ್ಷಿಪ್ತ ವಿವರಗಳನ್ನೊಳಗೊಂಡ ಕಾರ್ಡ್ ಲೇಖಕರ ಕೈ ಸೇರುತ್ತದೆ. ರಾಜ್ಯದ ಅಭಿವೃದ್ಧಿ ಕುರಿತಂತೆ ಯಾವುದೇ ಜಿಲ್ಲೆಯಲ್ಲಿ ಉತ್ತಮ ವಿಷಯವಿರುವ ವಾಸನೆ ಬಡಿದರೂ ಸಾಕು ಸಮೀಪವಿರುವ ಹವ್ಯಾಸಿ ಬರಹಗಾರನಿಗೊಂದು ಕಾಗದ ಹೋಗುತ್ತದೆ. ತರಿಸಿಕೊಂಡ ಲೇಖನಕ್ಕೆ ಒಂದು ಹೊಸ ರೂಪ ಕೊಟ್ಟು ಪ್ರಕಟಿಸಿದಾಗ ಸ್ವತಃ ಬರಹಗಾರನೂ ಬೆರಗಾಗುವಂಥ ಅಂದ ಆ ಲೇಖನಕ್ಕೆ.

ಕೃಷಿಯಲ್ಲಿ ಕೌಟುಂಬಿಕ ಹಿನ್ನೆಲೆ, ಸತತ ಅಧ್ಯಯನ ಹಾಗೂ ಸಂಪರ್ಕದಿಂದ ತಿಳಿದುಕೊಂಡ ಆರೋಗ್ಯ ಮಾಹಿತಿ ಇವುಗಳಿಂದಾಗಿ ಕೃಷಿ ಮತ್ತು ಆರೋಗ್ಯ ಪತ್ರಕರ್ತನೆಂಬ ಹೆಗ್ಗಳಿಕೆಗೂ ಪಾತ್ರರಾದರು ಹೆಗಡೆ. ಆದರೆ ಈ ಕ್ಷೇತ್ರಗಳಲ್ಲಿ ಅವರು ಲೇಖನ ಬರೆದದ್ದಿಕ್ಕಿಂತ ಲೇಖಕರನ್ನು ಬೆಳೆಸಿದ್ದೇ ಹೆಚ್ಚು. ಪರಿಸರ ಮತ್ತ ಅಭಿವೃದ್ಧಿ ಕ್ಷೇತ್ರದಲ್ಲಿ ಇವರ ಪರಿಣತಿಯನ್ನು ಗುರುತಿಸಿ ನಗರದ ಹೊಸ ಮಾಧ್ಯಮ ವಿದ್ಯಾಸಂಸ್ಥೆ ‘ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜರ್ನಲಿಸಂ ಅಂಡ್ ನ್ಯೂಮೀಡಿಯಾ (ಐಐಜೆಎನ್ಎಮ್) ಇವರಿಗೆ ಸಂದರ್ಶಕ ಪ್ರಾಧ್ಯಾಪಕ ಹುದ್ದೆಯನ್ನು ನೀಡಿತು.

ನಿವೃತ್ತರಾಗಲು ಕೆಲವೇ ತಿಂಗಳು ಬಾಕಿ ಇರುವಾಗ ಪುನಃ ಸುಧಾ ಮುಖ್ಯಸ್ಥರಾಗಿ ಜವಾಬ್ದಾರಿ ಹೊರಿಸಲಾಯಿತು. ಪುನಃ ಸುಧಾ ಖದರು ಬದಲು. ನಾಗೇಶ್ ಹೆಗಡೆ ಬಂದಿದ್ದಾರೆ ಎಂದೇ ‘ಸುಧಾ’ ಖರೀದಿಸಲು ಆರಂಭಿದವರು ಕೆಲವರಾದರೆ, ಸುಧಾದಲ್ಲಾದ ಬದಲಾವಣೆ ಕಂಡು `ನಾಗೇಶ್ ಹೆಗಡೆ ಮತ್ತೆ ಸುಧಾಕ್ಕೆ ಬಂದಿದ್ದಾರಾ?’ ಎಂದು ಪ್ರಶ್ನಿಸಿದವರು ಹಲವರು. ಒಬ್ಬ ಬರಹಗಾರನ ಛಾಪು ಪತ್ರಿಕೆಯ ಮೇಲೆ ಹೇಗೆ ಬೀಳುತ್ತದೆ ಎಂಬುದಕ್ಕೆ ಇವರು ಸಾಕ್ಷಿಯಾದರು.

ನಿವೃತ್ತಿಯ ಮುಂಚಿನ ಕೇವಲ ಆರು ತಿಂಗಳಲ್ಲಿ ‘ಸುಧಾ’ಕ್ಕೆ ಹೊಸ ರೂಪ ಕೊಟ್ಟ ಹೆಗಡೆ ಹೊರ ಹೊರಡಲು ಅಣಿಯಾದರು. ನಿವೃತ್ತಿಯ ನಂತರವೂ ಮುಂದುವರೆಯುವಂತೆ ಸಂಸ್ಥೆಯ ಮುಖ್ಯಸ್ಥರು ಕೇಳಿಕೊಂಡರೂ ವಿನಯದಿಂದ ನಿರಾಕರಿಸಿ ‘ಸುಧಾ’ದಿಂದ ಮಾತ್ರವಲ್ಲ, ಬೆಂಗಳೂರು ನಗರದ ಸಹವಾಸವನ್ನೇ ತೊರೆದು, ಸೂಲಿಕೆರೆ ಬಳಿಯ ಸ್ವಂತ ಫಾರ್ಮ್ ಹೌಸ್ಗೆ ವಾಸ್ತವ್ಯ ಬದಲಿಸಿದರು.

‘ಸುಧಾ’ದಿಂದ ಬೀಳ್ಕೊಟ್ಟು ಹೊರಟ ಕ್ಷಣದ ಒಂದು ಸಂಗತಿಯನ್ನು ಹೆಗಡೆ ಮರೆಯುತ್ತಿಲ್ಲ. ಡೆಸ್ಕ್ ಖಾಲಿ ಮಾಡುತ್ತಿದ್ದಾಗ ಇವರೇ ೩೦ ವರ್ಷಗಳ ಹಿಂದೆ ದಿಲ್ಲಿಯ ನೆಹರೂ ವಿವಿಯಿಂದ ಬರೆದು ಕಳಿಸಿ ಮರೆತಿದ್ದ ಲೇಖನದ ಪ್ಲೇಟ್ ಅಲ್ಲಿತ್ತು. ಪ್ಲೇಟ್ ಅಂದರೆ ಮುದ್ರಣಕ್ಕೆ ಹೊರಡುವ ಹಂತಕ್ಕೆ ಬಂದು ಸ್ಥಗಿತಗೊಂಡ ಲೇಖನ ಅದಾಗಿತ್ತು. ಭಾರತದ ವಿಜ್ಞಾನ ಏಕೆ ದುಃಸ್ಥಿತಿಯಲ್ಲಿದೆ ಎಂಬುದು ಲೇಖನದ ವಿಷಯವಾಗಿತ್ತು. ತುರ್ತುಸ್ಥಿತಿಯ ಸಂದರ್ಭದಲ್ಲಿ ಬರೆದಿದ್ದ ಅದನ್ನು ಮುದ್ರಣಪೂರ್ವದಲ್ಲಿ ಯಾವುದೋ ಸರಕಾರಿ ಅಧಿಕಾರಿ ಬಂದು ಸೆನ್ಸಾರ್ ಮಾಡಿದ್ದರು. ನಿವೃತ್ತಿಯ ದಿನದಂದು ಇದಕ್ಕಿಂತ ಉತ್ತಮ ಸ್ಮರಣಿಕೆ ಯಾವ ಪತ್ರಕರ್ತನಿಗಾದರೂ ಲಭಿಸಿದ್ದುಂಟೆ?

ಅದೆಷ್ಟೊ ಕೃಷಿಕರ ಕೈಗೆ ಲೇಖನಿ ಹಿಡಿಸಿದ ಈ ಲೇಖಕ ಸ್ವತಃ ಕೃಷಿಕನಾಗುವ ಛಲ ಹೊತ್ತು
ಹಳ್ಳಿ ಸೇರಿದ ಮಾತ್ರಕ್ಕೆ ಬದುಕು ಬದಲಾದೀತೆ? ‘ಇವರ ಕೆಲಸ ಈಗ ಇನ್ನಷ್ಟು ಹೆಚ್ಚಾಗಿದೆ’ ಎಂದು ದೂರುತ್ತಾರೆ, ಹಿಂದೊಮ್ಮೆ ಗಗನ ಸಖಿಯಾಗಿದ್ದ ಇವರ ಪತ್ನಿ ನಾಗೇಶ ಹೆಗಡೆ. ಪತ್ರಿಕೋದ್ಯಮ ಕಾಲೇಜಿನ ಉಪನ್ಯಾಸ, ಅಂಕಣ ಬರಹ, ನಾನಾ ಊರುಗಳಲ್ಲಿ ಪತ್ರಕರ್ತರಿಗೆ ತರಬೇತಿ ಶಿಬಿರ, ಪರಿಸರ ಉಪನ್ಯಾಸ ಇವೆಲ್ಲವುಗಳ ಮಧ್ಯೆ ಕೃಷಿ ಕೆಲಸಕ್ಕೆ ಬಿಡುವೆಲ್ಲಿ?

ಸಂಗಾತಿಯಾದಳು ಗಗನ`ಸಖಿ’

`ಗಗನ ಸಖಿಯರ ಸೆರಗ ಹಿಡಿದು’ ಎಂಬುದು ನಾಗೇಶ್ ಹೆಗಡೆಯವರ ಪುಸ್ತಕಗಳಲ್ಲಿ ಒಂದು. ಅದು `ಗಗನ ಸಖಿಯರ’ ಅಲ್ಲ `ಗಗನ ಸಖಿಯ’ ಅಂತ ಬದಲಾಗಬೇಕಿತ್ತು ಎಂದು ಆಕ್ಷೇಪಿಸುತ್ತಾರೆ ನಾಗೇಶ್ ಪತ್ನಿ ರೇಖಾ.
ರೇಖಾ ಮೂಲತಃ ಮಧ್ಯಪ್ರದೇಶದವರು. ಹಾಗಾಗಿಯೇ ನಾಗೇಶ್ ಹೆಗಡೆ ಊರಿನವರಿಗೆ `ಚಂಬಲ್ ಕಣಿವೆ ರಾಣಿ’ ಎಂದರೆ ಬೇಗ ಪರಿಚಯವಾಗುತ್ತಿತ್ತು. ದೆಹಲಿಯ ಜವಾಹರ್ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ನಾಗೇಶ್ ಹೆಗಡೆ ಎಂ.ಫಿಲ್ ಮಾಡುವಾಗ ಇವರೂ ರಷ್ಯನ್ ಭಾಷೆಯಲ್ಲಿ ಎಂ.ಎ. ಮಾಡುತ್ತಿದ್ದರು. ಅಲ್ಲಿಯೇ ಪರಸ್ಪರರ ಪರಿಚಯ, ಪ್ರೀತಿ. ಗಗನ ಸಖಿಯರ ನೇಮಕಾತಿ ಕುರಿತಾದ ಜಾಹಿರಾತೊಂದು ನೋಡಿ, ಇಬ್ಬರೂ ಸೇರಿಯೇ ರೇಖಾ ಅವರ ಅರ್ಜಿ ನಮೂನೆ ತುಂಬಿ ಕಳುಹಿಸಿದ್ದರು. ಅಗತ್ಯವಾದ ನಾನಾ ಭಂಗಿಯ ಭಾವಚಿತ್ರಗಳನ್ನು ತೆಗೆದವರೂ ನಾಗೇಶ್ ಹೆಗಡೆಯವರೇ. ರೇಖಾ ಆಯ್ಕೆಯಾದರು. ಏರ್ ಇಂಡಿಯಾದಲ್ಲಿ ಕೆಲಸ.


ಪತ್ನಿ ರೇಖಾ ಜೊತೆ ಸನ್ಮಾನ ಸ್ವೀಕಾರ

ಊರಲ್ಲಿ ನಾಗೇಶ್ ಹೆಗಡೆ ಕುಟುಂಬದವರು ಅಂಥ ಆಸ್ತಿವಂತರೇನಲ್ಲ. ಬೇಕೆಂದ ಹಾಗೆ ಖರ್ಚು ಮಾಡಲು, ಅಗತ್ಯಗಳನ್ನೆಲ್ಲ ಪೂರೈಸಿಕೊಳ್ಳಲು ಆಗಿನ ಕಾಲದಲ್ಲಿ ಸ್ಕಾಲರ್ಶಿಪ್ ಹಣ ಸಾಲುತ್ತಿರಲಿಲ್ಲ. ಅಂಥ ಕಾಲದಲ್ಲಿ ಇವರಿಗೆ ಮೊದಲು ಬೈಕ್ ಕೊಡಿಸಿದ್ದು ಇದೇ ಗಗನ `ಸಖಿ’ ರೇಖಾ. ಇವರ ಫೋಟೋಗ್ರಫಿ ಹವ್ಯಾಸ ಕಂಡು ಉತ್ತಮ ಕ್ಯಾಮರಾವೊಂದನ್ನು ವಿದೇಶದಿಂದ ತಂದುಕೊಟ್ಟು ಪ್ರೋತ್ಸಾಹಿಸಿದ್ದೂ ಅವರೇ!

ರೇಖಾ ಏರ್ ಇಂಡಿಯಾದಲ್ಲಿ ವಿದೇಶಕ್ಕೆ, ಇತ್ತ ನಾಗೇಶ್ ಅವರು ದೆಹಲಿಯಿಂದ ನೈನಿತಾಲ್ಗೆ. ಇನ್ನು ಪರಸ್ಪರರ ಭೇಟಿ ಕಷ್ಟ ಎಂದೇ ನಂಬಿದ್ದರು. ಆದರೆ ಕಾಲ ಹಾಗೆ ಮೋಸ ಮಾಡಲಿಲ್ಲ. ರೇಖಾ ಕೆಲ ದಿನ ರಜೆ ಪಡೆದು ನೈನಿತಾಲ್ಗೆ ಬರುತ್ತಿದ್ದರು. ನಾಗೇಶ್ ಹೆಗಡೆ ಬೆಂಗಳೂರಿಗೆ ಬಂದಾಗಲೂ ಈ ಭೇಟಿ ತಪ್ಪಲಿಲ್ಲ.

ನಾಗೇಶ್ ಹೆಗಡೆಯವರಿಗೆ ನಾನಾ ದೇಶಗಳನ್ನು ಸುತ್ತಬೇಕೆಂಬ ಹಂಬಲ ಮೊದಲಿನಿಂದಲೂ ಇತ್ತು. ಪರಿಸರ ಪತ್ರಕರ್ತನಾಗಿ ವಿದೇಶಕ್ಕೆ ಹಾರವುದರ ಜತೆಗೆ ಗಗನ ಸಖಿಯರಿಗಿರುವ ಉಚಿತ ಕೋಟಾದಲ್ಲಿ ಇನ್ನಷ್ಟು ದೇಶಗಳನ್ನು ಸುತ್ತುವ ಅವಕಾಶ ಇವರಿಗೆ ಬಂತು. ಆದರೆ ಅದಕ್ಕೆ ಮುಂಚೆ ಮದುವೆ ಶಾಸ್ತ್ರ ನಡೆಯಬೇಕಲ್ಲ? ೧೯೮೩ರಲ್ಲಿ ಬೆಂಗಳೂರಿನ ಆರ್ಯ ಸಮಾಜದಲ್ಲಿ ಎಂಟು ಜನ ಪತ್ರಕರ್ತರೆದುರು ಮದುವೆ. `ಅಂದು ನಾನು ಅವಳಿಗೆ ೮೦ ರೂ.ನ ತಾಳಿ ಕಟ್ಟಿದೆ. ಅವಳಿಗಾಗಿ ಬಂಗಾರ ಮಾಡಿಸಿದ್ದು ಅದೇ ಮೊದಲು, ಅದೇ ಕೊನೆ’ ಎನ್ನುತ್ತಾರೆ ನಾಗೇಶ್ ಹೆಗಡೆ. ಒಬ್ಬ ಪುತ್ರನನ್ನು ಹೊಂದಿರುವ ಚಿಕ್ಕ-ಚೊಕ್ಕ ಸಂಸಾರ ಇವರದ್ದು.

ತಾನು ಏನೇ ಸಾಧಿಸಿದ್ದರೂ ಅದು ನಿರ್ದಿಷ್ಟ ಗುರಿ, ಉದ್ದೇಶ ಇಟ್ಟು ಮಾಡಿದ್ದಲ್ಲ, ತಾನೊಬ್ಬ ನಿಮಿತ್ತ ಮಾತ್ರ ಎಂಬಂಥ ಮನೋಭಾವ ಅವರದ್ದು. `ನಂದೆಲ್ಲ ಏನ್ ಮಹಾ ಬಿಡು. ಕೆಲವು ಸಂದರ್ಭದಲ್ಲಿ ಭೂಮಿ ತನ್ನ ರಕ್ಷಣೆಗೆ ಒಂದೊಂದು ಕಡೆ ಒಬ್ಬೊಬ್ಬರನ್ನು ಎತ್ತಿ ನಿಲ್ಲಿಸುತ್ತದೆ. ಅದಕ್ಕೆ ನಾನೂ ನಿಮಿತ್ತನಾದೆ ಅಷ್ಟೇ’ ಎಂಬ ಅವರ ಮಾತೇ ವಿನಯವಂತಿಕೆಗೆ ಸಾಕ್ಷಿ.

ಕನ್ನಡ ಪತ್ರಕರ್ತನಾದರೂ ಇವರು ಇಂಗ್ಲಿಷ್ ಮಾಧ್ಯಮ ವಿದ್ಯಾರ್ಥಿಗಳಿಗೆ ಅಚ್ಚುಮೆಚ್ಚಿನ ಗುರು ಆಗಿದ್ದಾರೆ. ಐಐಜೆಎನ್ಎಮ್ನಲ್ಲಿ ಪತ್ರಿಕೋದ್ಯಮದ ಪ್ರತಿ ಸೆಮೆಸ್ಟರ್ ಅಂತ್ಯದಲ್ಲೂ ವಿದ್ಯಾರ್ಥಿಗಳ ಮೌಲ್ಯಮಾಪನದ ಜೊತೆಗೆ ಉಪನ್ಯಾಸಕರ ಮೌಲ್ಯಮಾಪನವನ್ನೂ ವಿದ್ಯಾರ್ಥಿಗಳಿಂದ ಮಾಡಿಸುತ್ತಾರೆ. ‘ನಿಮಗೆ ಅಭಿವೃದ್ಧಿ ಪತ್ರಿಕೋದ್ಯಮ ಇಷ್ಟವಾಗಿದ್ದರೆ ಅದು ಏಕೆಂದು ನಾಲ್ಕು ಕಾರಣಗಳನ್ನು ಕೊಡಿ’ ಎಂದು ವಿದ್ಯಾರ್ಥಿಗಳಿಗೆ ಸಂಸ್ಥೆಯ ಮುಖ್ಯಸ್ಥರಿಂದ ಪ್ರಶ್ನೆ ಬಂದಿತ್ತು. ಒಬ್ಬ ಅನಾಮಿಕ ವಿದ್ಯಾರ್ಥಿ/ನಿ ನೀಡಿದ ಕಾರಣಗಳೆಂದರೆ: ೧. ನಾಗೇಶ ಹೆಗಡೆ, ೨. ನಾಗೇಶ ಹೆಗಡೆ, ೩. ನಾಗೇಶ ಹೆಗಡೆ, ಮತ್ತು ೪. ನಾಗೇಶ ಹೆಗಡೆ.

ಅದಕ್ಕೇ ಲೇಖನದ ಆರಂಭದಲ್ಲೇ ಹೇಳಿದ್ದು – `ನಾಗೇಶ್ ಹೆಗಡೆ ಇಂದಿಗೂ ಹಲವರಿಗೆ ಗುರು, ಮಾರ್ಗದರ್ಶಕ’.

ಸಾಧನೆಯ ಸಂಕ್ಷಿಪ್ತ ನೋಟ

ಜನ್ಮಸ್ಥಳ: ಉತ್ತರ ಕನ್ನಡ ಜಿಯ ಸಿದ್ದಾಪುರ ತಾಲ್ಲೂಕಿನ ಬಕ್ಕೆಮನೆ ಎಂಬ ಮಲೆನಾಡಿನ ಹಳ್ಳಿ.
ಜನ್ಮದಿನ: ಫೆಬ್ರುವರಿ ೧೪, ೧೯೪೮

ಶಿಕ್ಷಣ:
ಶಿರಸಿಯಲ್ಲಿ ಬಿ ಎಸ್ಸಿ ಪದವಿ;
ಪಶ್ಚಿಮ ಬಂಗಾಲದ ಖರಗಪುರದ ಐಐಟಿಯಲ್ಲಿ ಆನ್ವಯಿಕ ಭೂವಿಜ್ಞಾನದಲ್ಲಿ ಎಮ್ಎಸ್ಸಿ ಪದವಿ;
ದೆಹಲಿಯ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಪರಿಸರ ವಿಜ್ಞಾನದಲ್ಲಿ ಎಮ್ಫಿಲ್;

ವೃತ್ತಿ:

೧೯೭೯: ನೈನಿತಾಲ್ನಲ್ಲಿರುವ ಕುಮಂವೊ ವಿಶ್ವವಿದ್ಯಾಲಯದಲ್ಲಿ ಪರಿಸರ ಭೂವಿಜ್ಞಾನ ಉಪನ್ಯಾಸಕ;
೧೯೮೦: `ಪ್ರಜಾವಾಣಿ’ಯಲ್ಲಿ ವಿಜ್ಞಾನ ಮತ್ತು ಅಭಿವೃದ್ಧಿ ಬಾತ್ಮೀದಾರ:
೧೯೮೨: `ಸುಧಾ’ ವಾರಪತ್ರಿಕೆಯಲ್ಲಿ ನುಡಿಚಿತ್ರ ಲೇಖಕ; ೧೯೯೮ರಲ್ಲಿ ಸಹಾಯಕ ಸಂಪಾದಕ;
೧೯೯೯: `ಪ್ರಜಾವಾಣಿ’ಯಲ್ಲಿ ಸಹಾಯಕ ಸಂಪಾದಕ;
೨೦೦೫: ‘ಸುಧಾ’ ದಲ್ಲಿ ಸಹಾಯಕ ಸಂಪಾದಕ
ಈಗ: ಕೆಂಗೇರಿ ಬಳಿಯ ತೋಟದಲ್ಲಿ ವಿಶ್ರಾಂತ ಜೀವನ
೨೦೦೧ರಿಂದ ಇದುವರೆಗೆ (೨೦೦೮): ಐಐಜೆಎನ್ಎಮ್ನಲ್ಲಿ ಸಂದರ್ಶನ ಪ್ರಾಧ್ಯಾಪಕ ಮತ್ತು ‘ಪ್ರಜಾವಾಣಿ’ಯಲ್ಲಿ ಅಂಕಣಕಾರ.

ವೃತ್ತಿ ಸಂಬಂಧಿ ಪ್ರಶಸ್ತಿಗಳು:

* ಕೆಯುಡಬ್ಲ್ಯೂಜೆ `ಅತ್ಯುತ್ತಮ ಮನವೀಯ ವರದಿ’ ಪ್ರಶಸ್ತಿ;
* ಕೆನರಾ ಬ್ಯಾಂಕ್ನ `ಅತ್ಯುತ್ತಮ ಗ್ರಾಮೀಣ ವರದಿ’ ಪ್ರಶಸ್ತಿ;
* ಶಾಮರಾವ್ ದತ್ತಿ ನಿಧಿ ಪುರಸ್ಕಾರ;
* ರೋಟರಿ ಬೆಂಗಳೂರಿನ `ಅತ್ಯುತ್ತಮ ಪರಿಸರ ಪತ್ರಕರ್ತ’ ಪ್ರಶಸ್ತಿ;
* ಕೆಂಪೇಗೌಡ ಪ್ರಶಸ್ತಿ
* ಪಿಆರ್ಎಸ್ಐ `ಅತ್ಯುತ್ತಮ ಪರಿಸರ ಪತ್ರಕರ್ತ’ ರಾಷ್ಟ್ರೀಯ ಪ್ರಶಸ್ತಿ;
* ಕರ್ನಾಟಕ ಸರಕಾರದ `ಅತ್ಯುತ್ತಮ ಪರಿಸರ ಪತ್ರಕರ್ತ’ ಪ್ರಶಸ್ತಿ.
* ಮಾಧ್ಯಮ ಅಕಾಡೆಮಿಯ ‘ಜೀವಮಾನ’ ಪ್ರಶಸ್ತಿ.
* ಕರ್ನಾಟಕ ಸರಕಾರದ ‘ರಾಜ್ಯೋತ್ಸವ ಪ್ರಶಸ್ತಿ’

ಪ್ರಮುಖ ಸಾಹಿತ್ಯ ಕೃತಿಗಳು, ಸಾಹಿತ್ಯ ಪ್ರಶಸ್ತಿಗಳು:

೧. ಇರುವುದೊಂದೇ ಭೂಮಿ (ಸಾಹಿತ್ಯ ಅಕಾಡೆಮಿ ಬಹುಮನ);
೨. ಗಗನಸಖಿಯರ ಸೆರಗ ಹಿಡಿದು (ಆರ್ಯಭಟ ಪ್ರಶಸ್ತಿ; ವಿಶ್ವೇಶ್ವರಯ್ಯ ಪ್ರಶಸ್ತಿ);
೩. ನಮ್ಮೊಳಗಿನ ಬ್ರಹ್ಮಾಂಡ (ಶಿವರಾಮ ಕಾರಂತ ಪುರಸ್ಕಾರ);
೪. ಕೆರೆಯಲಿ ಚಿನ್ನ, ಕೆರೆಯೇ ಚಿನ್ನ (ಸಾಹಿತ್ಯ ಅಕಾಡೆಮಿ ಬಹುಮನ; ೨೦ನೇ ಶತಮಾನದ ಶ್ರೇಷ್ಠ ಮಕ್ಕಳ ಸಾಹಿತ್ಯ ಮಾಲಿಕೆಯಲ್ಲಿ ಸೇರ್ಪಡೆ);
೫. ಕ್ಯಾಪ್ಸೂಲಗಿತ್ತಿ (ಪ್ರಜಾವಾಣಿ ಲಲಿತ ಸಂಪಾದಕೀಯಗಳ ಸಂಗ್ರಹ);
೬. ಮಂಗಳನಲ್ಲಿ ಜೀವಲೋಕ;
೬. ಪ್ರತಿದಿನ, ಪರಿಸರ ದಿನ;
೭. ಮುಷ್ಟಿಯಲ್ಲಿ ಮಿಲೆನಿಯಂ;
೮. ಗುರುಗ್ರಹದಲ್ಲಿ ದೀಪಾವಳಿ (ಅಂಕಣ ಸಂಗ್ರಹ):
೯. ಗುಳಿಗೆ ಗುಮ್ಮ (ಮಕ್ಕಳ ನಾಟಕ);
೧೦. ಅದು ವಿಸ್ಮಯ, ಇದು ವಿಷಮಯ;
೧೧. ಅಂತರಿಕ್ಷದಲ್ಲಿ ಮಹಾಸಾಗರ (ಅಂಕಣ ಸಂಗ್ರಹ);
೧೨. ಮಿನುಗುವ ಮೀನು, ಕುಲಾಂತರಿ ಕೋತಿ (ಅಂಕಣ ಸಂಗ್ರಹ);
೧೩. ಎಂಥದೊ ತುಂತುರು (ವಿಜ್ಞಾನ ಲೇಖನಗಳು);
೧೪. ನ್ಯಾನೊ ಹೇನು (ಅಂಕಣ ಸಂಗ್ರಹ);
೧೫. ನಮ್ಮ ಬೆಂಗಳೂರು (ಮಕ್ಕಳಿಗಾಗಿ ನಗರ ಪರಿಸರ);
೧೬. ಸುರಿಹೊಂಡ ಭರತಖಂಡ;
೧೭. ಆಚಿನ ಲೋಕಕ್ಕೆ ಕಾಲಕೋಶ (ಅಂಕಣ ಸಂಗ್ರಹ);
೧೮. ಶತ್ರುವಿಲ್ಲದ ಸಮರ (ಅಂಕಣ ಸಂಗ್ರಹ);

ಸಂಪಾದನೆ:

೧೯. ಶತಮಾನದ ಕುಸುಮ (ಶಾರದಾ ಗೋಪಾಲ ಜತೆ))
೨೦. ವಿಜ್ಞಾನ ಗಂಗೆಯ ಬಿಂದುಸಾರ (ಸುವರ್ಣ ಕರ್ನಾಟಕ ಮಾಲಿಕೆ)

ಅನುವಾದಗಳು:

೨೧. ಕರ್ನಾಟಕ ಪರಿಸರ ಪರಿಸ್ಥಿತಿ (ನಾಲ್ಕು ಸಂಪುಟಗಳು);
೨೨. ಅಳಿವಿನಂಚಿನಲ್ಲಿ ಜೀವಿಗಳು;
೨೩. ಗಾಳಿಗೆ ವಿಷ, ನೀರಿಗೆ ವಿಷ;
೨೪. ಪರಿಸರ ಮಲಿನ್ಯ
೨೫. ಕ್ಯಾನ್ಸರ್ ಕ್ರೀಡೆ
೨೬. ವನ ಸಂಜೀವನ

ದಾಖಲೆ: ಸತತ ೨೫ ವರ್ಷಗಳಿಂದ ‘ಪ್ರಜಾವಾಣಿ’ಯಲ್ಲಿ ‘ವಿಜ್ಞಾನ ವಿಶೇಷ’ ಅಂಕಣ ಬರವಣಿಗೆ
ಪ್ರವಾಸ: ಮಲೇಶ್ಯ, ಹಾಂಗ್ಕಾಂಗ್, ಸಿಂಗಪೂರ್, ಸ್ವಿತ್ಸರ್ಲೆಂಡ್, ಕೆನ್ಯಾ, ಬ್ರಿಟನ್, ಸ್ಪೇನ್, ಪೋರ್ಚುಗಲ್, ಯುಎಸ್ಎ, ಮತ್ತು ಬ್ರಝಿಲ್.

ವಿಳಾಸ: ನಾಗೇಶ ಹೆಗಡೆ, ‘ಮೈತ್ರಿ ಫಾರ್ಮ್’ ಸೂಲಿಕೆರೆ ಅಂಚೆ, ಕೆಂಗೇರಿ ಹೋಬಳಿ, ಬೆಂಗಳೂರು-೫೬೦೦೬೦
ದೂರವಾಣಿ: ೦೮೦-೨೨೭೩೯೭೫೭

18 Responses to ಪ್ರವೇಶವಿಲ್ಲದ ಗರ್ಭಗುಡಿಯಲ್ಲಿ ಪೂಜಾರಿಯಾದವರು

 1. Hema

  Sir,

  Really a great job done by Mr.NageshJi. I loved to read it. The writings of nageshji should come in the school texts. difinitely it will improve the the thinking capacity of students, writers and people who are conscious about the environment.

  Sir, Hats of for your work and responsibility about the society.

 2. ಮಾಲಾ

  ಓದಿ ಬಹಳ ಸಂತಸವಾಯಿತು.
  ಮಾಲಾ

 3. technophilo

  Now a days also he writes occasionally on Prajavani. It will be pleasure to read. it sparks some light on our consciousness and duty towards nature.

  Wish his tribe increases…

 4. ಡಾ.ಗಣೇಶ ಎಂ.ಹೆಗಡೆ,ನೀಲೇಸರ

  ಬರವಣಿಗೆಯಲ್ಲಿ ನನ್ನಂತಹ ಎಷ್ಟೋ ಜನರಿಗೆ ಮಾರ್ಗದರ್ಶಕರೂ,ಆದರ್ಶಪ್ರಾಯರೂ ಆದ ನಾಗೇಶ ಹೆಗಡೆಯವರ ಕುರಿತು ವಿವರವಾದ ಮಾಹಿತಿ ನೀಡಿದ್ದಕ್ಕಾಗಿ ಹೆಬ್ಬಾರರಿಗೆ ಅಭಿನಂದನೆಗಳು.

 5. Veerappa Yallappa Kamannavar

  Nil

 6. Veerappa Yallappa Kamannavar

  Good

 7. Veerappa Yallappa Kamannavar

  I like

 8. Veerappa Yallappa Kamannavar

  Think!

 9. srinidhi ammannaya

  Hat’s of.
  Nagesh hegde avara bagge Tumba tilisi kottiddiri.
  Nijavagalu avaru adbuta vyakti.
  nanna danyavadagalu avarige. .

 10. Manjunath Bhat

  hegade avar bagge detail mahiti khushi kottitu. nimage thanks, nanu hegade avar sishya. nange baravanige helikottavaru avare. great man

 11. ಪ್ರಶಾಂತ ನಾಯ್ಕ

  ನಾಗೇಶ ಹೆಗ್ದೆ ಅಂದರೆ ಎಲ್ಲರಿಗೂ ಇಷ್ಟ. ಅವರ ಲೇಖನಗಳನ್ನು ಓದುವುದೆಂದರೆ, ತುಂಬಾಇಷ್ಟ. ಏಕೆಂದರೆ ಅದು ಬರಿ ಓದು ಅಲ್ಲ, ಒಂದು ಅನುಭವ. ಅವರ ಪ್ರತಿ ವಾಕ್ಯದಲ್ಲೂ ಜೀವಂತಿಕೆ ಇದೆ. ಪ್ರಶಾಂತ ನಾಯ್ಕ, ಮಂಗಳೂರು ವಿವಿ

 12. SHIVANAND SHETTY

  what a great personality ! makes a wonderful reading. Proud to know that he is a Kannadiga. unfortunately, like many others he didn’t get enough exposure he should have got.

  wish them a long healthy retired life.

 13. Pramod

  Suoer article

 14. Shivakumar N

  Sumaaru 15 varshadinda avara lekhana oduthiddene. Avara parisara, aarogya haagu samashti bagegina kaalaji matthu baddathe anukaraneeyavadaddu.

 15. madhu katte

  inspiring personality….. and neat article…..

 16. ಸಚಿನ್ ಎನ್ ರತ್ನಂ

  ಮೊದಲಿಗೆ ಧನ್ಯವಾದಗಳು.

  ಬದುಕನ್ನು ಸ್ಮರಣೀಯವಾಗಿ ರೂಪಿಸಿಕೊಳ್ಳಲು ಸ್ಪೂರ್ತಿ ತುಂಬಿದ ಬರಹ. ನಾಗೇಶ ಹೆಗಡೆಯವರು ‘ವಿಜ್ಞಾನ ವಿಶೇಷ’ ಅಂಕಣಕಾರರಾಗಿ, ಪತ್ರಕರ್ತರಾಗಿ ಪರಿಚಿತರು, ಆದರೆ ಈ ಲೇಖನ ಅವರ ವ್ಯಕ್ತಿತ್ವದ ವಿಶ್ವರೂಪ ದರ್ಶನ ಮಾಡಿಸಿತು. ಅವರ ಬಹುಮುಖ ಪ್ರತಿಭೆಯ ಪ್ರಭೆಯನ್ನು ಇಂದಿನ ಮಕ್ಕಳಿಗೆ ಅವರ ಬರವಣಿಗೆಯಷ್ಟೇ ಆಕರ್ಷಕವಾಗಿ, ಪರಿಣಾಮಕಾರಿಯಾಗಿ ತಲುಪಿಸಬೇಕು.

 17. ಮಾಧವ

  ನಾಗೇಶ ಹೆಗಡೆಯವರು ಕೇವಲ ಬರಹಗಾರರನ್ನು ಸೃಷ್ಟಿಸಿದ್ದು ಮಾತ್ರವಲ್ಲ, ಕನ್ನಡದಲ್ಲಿ ಅನೇಕ ಉತ್ತಮ ಓದುಗರನ್ನೂ ಸೃಷ್ಟಿಸಿದರು. ಅವರು ನಿವೃತ್ತರಾದ ಮೇಲೆ ಸುಧಾ-ಪ್ರಜಾವಾಣಿಗಳು ಮೌಲಿಕ ಬರಹಗಳಿಲ್ಲದೇ ಬರಿಯ ಪೊಳ್ಳು ವಾದ-ಬರಹಗಳಿಂದ ತುಂಬಿವೆ!

 18. nandini Heddurga

  ನಾಗೇಶ ಹೆಗಡೆ..ನಿಜಕ್ಕೂ ನಮ್ಮ ದೇಶ ಕಂಡ ಅಪರೂಪದ ವ್ಯಕ್ತಿತ್ವ..

Leave a Reply