ಕಲಾಲೋಕದ ಅಪೂರ್ವ ರತ್ನ – ಕುಮಾರಿ ನಿವೇದಿತ

ಲಕ್ಷ್ಮೀ ಶಿವಕುಮಾರ್

ಕುಮಾರಿ ನಿವೇದಿತ ಜನಿಸಿದ್ದು ೧೧-೨-೧೯೮೯-ಬೆಂಗಳೂರು. ಹುಟ್ಟುತ್ತಲೇ ಶಸ್ತ್ರಚಿಕಿತ್ಸೆಗೆ ಗುರಿಯಾಗಿ ಮಾನಸಿಕ ಹಾಗು ದೈಹಿಕವಾಗಿ ಅಸ್ವಸ್ಥಗೊಂಡು ಜೀವನ ನಡೆಸುತ್ತಿರುವ ಮುಗ್ಧೆ. ಈಕೆಗೆ ಶ್ರವಣ, ವಾಚಿಕ ಹಾಗೂ ಮಾನಸಿಕ ತೊಂದರೆಯ ಕಾರಣ “ವಿಶೇಷ ಅಗತ್ಯವುಳ್ಳ ಮಕ್ಕಳ” ಸಾಲಿಗೆ ಸೇರಬೇಕಾದ ಅನಿವಾರ್ಯತೆ ಉಂಟಾಯಿತು. ನಿವೇದಿತ ಪ್ರಖ್ಯಾತ ಗಾಯಕಿ ಶ್ರೀಮತಿ ರಮಾಜಗನ್ನಾಥ್(ರಮಾ ಅವರು ಪ್ರಖ್ಯಾತ ನೃತ್ಯಕಲಾವಿದರಾದ ಮಂಜೂ ಭಾರ್ಗವಿ, ರಾಜರೆಡ್ಡಿ-ರಾಧಾ ರೆಡ್ಡಿ, ನಟರಾಜ ರಾಮಕೃಷ್ಣ, ಕಲಾ ಕೃಷ್ಣ ಮತ್ತು ವೈಜಯಂತಿ ಕಾಶಿ ಇವರನೃತ್ಯಕ್ಕೆ ಹಾಡಿದರೆ) ಹಾಗೂ ಇ.ಎಸ್.ಐ ಕೇಂದ್ರ ಕಛೇರಿಯಲ್ಲಿ ಗೌರವಾನ್ವಿತ ಹುದ್ದೆಯಲ್ಲಿರುವ ಶ್ರೀ ಜಗನ್ನಾಥ ಅವರ ಹಿರಿಯ ಹಾಗು ಹೆಮ್ಮೆಯ ಪುತ್ರಿ. ಈ ಷೋಡಶಿ ಜೆ.ಎಸ್.ಎಸ್ “ಸಹನಾ” ಶಾಲೆಯಲ್ಲಿ ತನ್ನ ವಿದ್ಯಾಭ್ಯಾಸವನ್ನು ನಡೆಸುತ್ತಿದ್ದಾಳೆ.

ನಿವೇದಿತಾಗೆ ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ನೃತ್ಯದ ಕಡೆ ಬಹಳ ಒಲವು ಹಾಗೂ ಆಸಕ್ತಿ. ಶ್ರವಣದ ನ್ಯೂನತೆಯಿದ್ದರೂ ಈಕೆ ಹೇಗೆ ನರ್ತಿಸಲು ಸಾಧ್ಯ ಎಂದು ಊಹಿಸಿಕೊಳ್ಳುವಿರಾ? ನರ್ತನಾ! ಹೌದು ಈಕೆ ಅತ್ಯಂತ ಭಾವಪೂರ್ಣವಾಗಿ ಎಲ್ಲ ಸಹಜ ಮಕ್ಕಳಂತೆ ನರ್ತಿಸ ಬಲ್ಲಳು. ಅತ್ತೆ ಸುಭದ್ರಾ ಪ್ರಭು ತಮ್ಮ ನಟರಾಜ ನೃತ್ಯ ಕಲಾಮಂದಿರದಲ್ಲಿ ನೃತ್ಯ ಶಿಕ್ಷಣವನ್ನು ೩೦ ವರ್ಷಗಳಿಂದ ನೀಡುತ್ತಾ ಬಂದಿದ್ದಾರೆ. ನಿವೇದಿತ ಚಿಕ್ಕ ವಯಸ್ಸಿನಿಂದಲೂ ನೃತ್ಯಾಭ್ಯಾಸ ನಡಿಯುತ್ತಿರುವ ಸ್ಥಳಕ್ಕೆ ಬಂದು ನೃತ್ಯವನ್ನು ನೋಡಿ ಅದರ ನಕಲು ಮಾಡಲು ಪ್ರಯತ್ನಿಸುತ್ತಿದ್ದಳು. ಇದನ್ನು ಗಮನಿಸಿದ ತಾಯಿ ಹಾಗೂ ಅತ್ತೆ ಉತ್ತೇಜನವನ್ನು ನೀಡಿ ಪ್ರೋತ್ಸಾಹಿಸಿ ಅವಳಲ್ಲಿರುವ ಪ್ರತಿಭೆಯನ್ನು ಬೆಳೆಸಿದರು. ದಿನನಿತ್ಯ ಗಾನದ ನಿನಾದ, ಗೆಜ್ಜೆಯ ಝೇಂಕಾರ ತುಂಬಿರುವಂತಹ ಮನೆಯಲ್ಲಿ ನಿವೇದಿತ ಜನಿಸಿರುವುದು ಅವಳ ಅದೃಷ್ಟವೇ ಸರಿ.
ನಿವೇದಿತ ಈಗ ರಂಗ ಕಾರ್ಯಕ್ರಮಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿದ್ದಾಳೆ. ೨೦೦೦ ಇಸವಿಯಲ್ಲಿ “ability 2000 utsav” ಎಂಬ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ೨ನೇ ಬಹುಮಾನವನ್ನು ಪಡೆದುಕೊಂಡಿರುವ ಹೆಗ್ಗಳಿಕೆ ಇವಳದು. ಏನು ಅರಿಯದ ಮುಗ್ಧ ಬಾಲಕಿ ರಸ ಪೂರ್ಣವಾಗಿ ನರ್ತಿಸಿ ಎಲ್ಲರ ಮನ ಸೆಳೆಯುವದರಲ್ಲಿ ಯಶಸ್ವಿಯಾಗಿದ್ದಾಳೆ. ಅಲ್ಲದೆ ಅವಳ ಶಾಲಾ ಕಾರ್ಯಕ್ರಮಗಳಲ್ಲಿ, ನೃತ್ಯಶಾಲೆಯ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾಳೆ.

ಜೆ.ಎಸ್.ಎಸ್ ಶಾಲೆಯ ಅವಳ ಎಲ್ಲ ಗುರುಗಳು ಮುಖ್ಯ ಉಪಾಧ್ಯಾಯಿನಿಯವರು ಅವಳ ಶಾಂತ ಸ್ವಭಾವ, ನಡತೆ ಅವಳಲ್ಲಿರುವ ಕಲೆಯಬಗ್ಗೆ ಬಹಳ ಹೆಮ್ಮೆ ಪಡುತ್ತಾರೆ. “ಇಂದು ನಿವೇದಿತ ತಮ್ಮ ಸಮವಯಸ್ಕರೊಂದಿಗೆ ಸರಾಗವಾಗಿ ಬೆರೆತು ಸಮಾಜದ ಮುಖ್ಯ ವಾಹಿನಿಯಲ್ಲಿ ಒಂದಾಗಿದ್ದಾಳೆ. ಪೋಷಕರು ಶಾಲೆಯಲ್ಲಿ ನೀಡಿದ ಸಲಹೆಯನ್ನು ತಪ್ಪದೆ ಪಾಲಿಸುವುದರಿಂದ ಈ ಪ್ರಗತಿ ಸಾಧ್ಯ. ಅಂದು ಶಾಲೆಗೆ ಬಂದ ಪರಪುಟ್ಟಿ ನಿವೇದಿತ ಇಂದು ತನ್ನ ಕೆಲಸಗಳನ್ನು ಸಾಧ್ಯವಾದಷ್ಟು ಮಟ್ಟಿಗೆತಾನೇ ಮಾಡಿಕೊಳ್ಳುವ ಸಾಮರ್ಥ್ಯವಿರುವ ಯುವತಿಯಾಗಿ ಮಾರ್ಪಾಡಾಗಿದ್ದಾಳೆ”. ಇಂತಹ ಮಕ್ಕಳಬಗ್ಗೆ ಪೋಷಕರು ತೋರಿಸುವ ಶ್ರದ್ಧೆ, ಪರಿಶ್ರಮ, ತಾಳ್ಮೆಯಿಂದ ಮಕ್ಕಳ ಜೀವನವನ್ನು ಸುಂದರವಾಗಿಸಲು ಸಾಧ್ಯ.

ನಿವೇದಿತ ರಂಗದಮೇಲೆ ನರ್ತಿಸಲು, ಅವಳ ಅತ್ತೆ ಸುಭದ್ರಾ ಅವರ ಸಹಾಯವನ್ನು ಪಡೆಯುತ್ತಾಳೆ. ಎಂದರೆ-ಮೊದಲೇ ಶಾಲೆಯಲ್ಲಿ ನೃತ್ಯವನ್ನು ಗಮನವಿಟ್ಟು ಕಲಿತು ನಂತರ ಕಾರ್ಯಕ್ರಮದಲ್ಲಿ ಅವಳ ನೃತ್ಯಗುರುವಿನ ಸ್ಥಾನದಲ್ಲಿರುವ ಅತ್ತೆ ನೃತ್ಯದ ಹಾಡಿಗೆ ಅನುಗುಣವಾಗಿ ಹಸ್ತ ಮುದ್ರೆಗಳನ್ನು ಆಕೆಗೆ ರಂಗದ ಕೆಳಗೆ ನಿಂತು ತೋರಿಸುತ್ತಾರೆ. ನಿವೇದಿತ ತನ್ನ ಪಾದಚಲನ ವಲನಗಳೊಂದಿಗೆ ಅದನ್ನು ಅನುಕರಣೆ ಮಾಡುತ್ತಾಳೆ. ಹೀಗೆ ಅವಳ ನೃತ್ಯದಲ್ಲಿನ ಚಾತುರ್ಯತೆಯನ್ನು ಎಲ್ಲರಿಗೂ ತೋರಿಸಿಕೊಟ್ಟಿದ್ದಾಳೆ.

ಎಲ್ಲ ಕಲಾವಿದರಂತೆ ಇವಳೂ ಪೂರ್ಣಾವಧಿಯ ರಂಗ ಪ್ರವೇಶವನ್ನು ಮಾಡಬೇಕೆಂಬ ಹಿರಿಯರ ಆಕಾಂಕ್ಷೆಯನ್ನು ಪೂರೈಸುವ ನಿಟ್ಟಿನಲ್ಲಿ ಪರಿಶ್ರಮಿಸುತ್ತಿದ್ದಾಳೆ. ಭಗವಂತನು ಆಕೆಯ ಜೀವನದಲ್ಲಿ ಮತ್ತಷ್ಟು ಯಶಸ್ಸನ್ನು ಕೊಡಲಿ ಎಂದು ಹಾರೈಸೋಣ.

Leave a Reply