ಎನ್. ಆರ್. ನಾರಾಯಣಮೂರ್ತಿ ಸಂದರ್ಶನ
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೇಲೆ ಬರಬೇಕಾದರೆ ಒಂದನೇ ತರಗತಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಓದಬೇಕೆಂದೇನೂ ಇಲ್ಲ
-ಎನ್. ಆರ್. ನಾರಾಯಣಮೂರ್ತಿ
ಇನ್ಫೋಸಿಸ್‌ನ ನಾರಾಯಣಮೂರ್ತಿಯವರಿಗೆ ೧೯೯೯ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದ ಸಂದರ್ಭದಲ್ಲಿ ಬೆಂಗಳೂರು ಆಕಾಶವಾಣಿ ಅವರೊಂದಿಗೆ ಸಾರ್ವಜನಿಕರಿಂದ ಫೋನ್-ಇನ್ ಕಾರ್ಯಕ್ರಮವನ್ನು ನೇರ ಪ್ರಸಾರಗೊಳಿಸಿತ್ತು. ಆ ಸಂದರ್ಭದಲ್ಲಿ ವಿಶ್ವಕನ್ನಡ ಪತ್ರಿಕೆಯ ಸಂಪಾದಕ ಯು. ಬಿ. ಪವನಜ ಅವರು ಸಂದರ್ಶಕರಾಗಿ ಭಾಗವಹಿಸಿದ್ದರು. ಆ ದಿನ ಪವನಜ ಅವರು ಕೇಳಿದ ಪ್ರಶ್ನೆಗಳು ಮತ್ತು ಅವುಗಳಿಗೆ ನಾರಾಯಣ ಮೂರ್ತಿಯವರು ನೀಡಿದ ಉತ್ತರಗಳು ಇಲ್ಲಿವೆ.
ಭಾರತ ದೇಶವು ಮಾಹಿತಿ ತಂತ್ರಜ್ಞಾನದಲ್ಲಿ ವಿಶ್ವದ ಗಮನ ಸೆಳೆದಿದೆ. ಸಾವಿರಾರು ಕೋಟಿ ರೂ. ವಿದೇಶಿ ವಿನಿಮಯ ದೇಶಕ್ಕೆ ಹರಿದು ಬರುತ್ತಿದೆ. ಈ ರೀತಿ ಸಂಪಾದನೆಯಾಗುತ್ತಿರುವ ಹಣದ ಬಹುಪಾಲು, ಸುಮಾರು ಶೇಕಡಾ ೮೦ರಷ್ಟು, ವಿದೇಶಿಯರಿಗೆ ನೀಡುತ್ತಿರುವ ಸೇವೆ ಮೂಲಕ ಬರುತ್ತಿದೆ. ಉತ್ಪನ್ನಗಳ ಪಾಲು ನಗಣ್ಯ. ನಮ್ಮ ತಂತ್ರಜ್ಞರ ಸೇವೆ ಪಡೆದು ವಿದೇಶಿ ಕಂಪೆನಿಗಳು ತಯಾರಿಸಿದ ಉತ್ಪನ್ನಗಳನ್ನು ನಾವು ದುಬಾರಿ ಡಾಲರ್ ಬೆಲೆಯಲ್ಲಿ ಪಡೆಯಬೇಕಾಗಿದೆ. ಇದಕ್ಕೆ ನೀವೇನು ಹೇಳುತ್ತೀರಿ?
ಉತ್ಪನ್ನಗಳ ತಯಾರಿಗಿಂತಲೂ ಅದನ್ನು ಮಾರುವುದು ಕಷ್ಟದ ಕೆಲಸ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಳ್ಳೆಯ ಬ್ರಾಂಡಿಂಗ್ ಇಲ್ಲದಿದ್ದರೆ ಉತ್ಪನ್ನ ಎಷ್ಟೇ ಒಳ್ಳೆಯದಿದ್ದರೂ ಅದನ್ನು ಮಾರುವುದು ಕಷ್ಟ. ಭಾರತೀಯ ಕಂಪೆನಿಗಳಿಗೆ ಒಳ್ಳೆಯ ಬ್ರಾಂಡ್‌ನೇಮ್ ಇನ್ನೂ ಬಂದಿಲ್ಲ. ಮೊದಮೊದಲು ಸೇವೆಯ ವಿಷಯದಲ್ಲೂ ಇದೇ ಪರಿಸ್ಥಿತಿ ಇತ್ತು. ಈಗ ನಿಧಾನವಾಗಿ ಕಾಲ ಬದಲಾಗುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕಂಪೆನಿಗಳು ಒಳ್ಳೆಯ ಹೆಸರು ಮಾಡಿವೆ. ನಾವು ಈಗ ಇದನ್ನು ಸದುಪಯೋಗ ಪಡಿಸಿಕೊಂಡು ಉತ್ಪನ್ನಗಳ ತಯಾರಿಗೆ ಹೊರಡಲು ಒಳ್ಳೆಯ ಕಾಲ ಬಂದಿದೆ ಎನ್ನಬಹುದು.
ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮೇಲೆ ಬರಬೇಕಾದರೆ ಒಂದನೆ ತರಗತಿಯಿಂದಲೇ ಇಂಗ್ಲೀಷ್ ಮಾಧ್ಯಮದಲ್ಲಿ ಕಲಿಯಬೇಕು ಎಂದು ಬಹುಪಾಲು ಜನರು ತಿಳಿದುಕೊಂಡಿದ್ದಾರೆ ಇದು ನಿಜವೇ?
ಈ ನಂಬಿಕೆ ಸರಿಯಲ್ಲ. ಒಳ್ಳೆಯ ಆಲೋಚನಾ ಶಕ್ತಿ, ಮುಖ್ಯವಾಗಿ ತರ್ಕಬದ್ಧವಾಗಿ ಯೋಚಿಸುವ ಶಕ್ತಿ ಇದ್ದರೆ ಸಾಕು. ಹತ್ತನೆ ತರಗತಿಯ ತನಕ ಕನ್ನಡ ಮಾಧ್ಯಮದಲ್ಲಿ ಕಲಿತರೆ ಏನೂ ಅಡ್ಡಿಯಿಲ್ಲ. ಒಳ್ಳೆಯ ಮೆದುಳಿಗೂ ವಿದ್ಯಾಭ್ಯಾಸದ ಮಾಧ್ಯಮಕ್ಕೂ ಯಾವುದೇ ಸಂಬಂಧವಿಲ್ಲ.
ಜನಸಾಮಾನ್ಯರಲ್ಲಿ ಇನ್ನೂ ಒಂದು ನಂಬಿಕೆಯಿದೆ. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರವೇಶ ಪಡೆಯಬೇಕಾದರೆ ಇಂಜಿನಿಯರಿಂಗ್ ಪದವಿ ಪಡೆದಿರಬೇಕು ಎಂದು. ಇದು ನಿಜವೇ?
ಇದೂ ನಿಜವಲ್ಲ. ಮುಂಚಿನ ಪ್ರಶ್ನೆಯ ಉತ್ತರದಲ್ಲಿ ಹೇಳಿದಂತೆ ಉತ್ತಮ ತರ್ಕಬದ್ಧವಾದ ಆಲೋಚನಾ ಶಕ್ತಿ ಇದ್ದರೆ ಸಾಕು. ಬಿ. ಎಸ್‌ಸಿ., ಬಿ. ಕಾಂ. ಇತ್ಯಾದಿ ಯಾವ ಡಿಗ್ರಿಯಾದರೂ ಅಡ್ಡಿ ಇಲ್ಲ. ನಮ್ಮ ಕಂಪೆನಿಯಲ್ಲಿ ಎಲ್ಲಾ ಡಿಗ್ರಿಯವರನ್ನು ತೆಗೆದುಕೊಳ್ಳುತ್ತೇವೆ. ಡಿಗ್ರಿ ಮತ್ತು ಅದರಲ್ಲಿ ಪಡೆದ ಅಂಕಗಳಿಗೆ ನಾವು ಆಧ್ಯತೆ ನೀಡುವುದಿಲ್ಲ. ನಾವು ನಡೆಸುವ ಪ್ರವೇಶ ಪರೀಕ್ಷೆಯಲ್ಲಿ ಗಳಿಸುವ ಅಂಕಗಳಿಗೆ ಮಾತ್ರ ನಾವು ಮಾನ್ಯತೆ ನೀಡುತ್ತೇವೆ.
ನಿಮ್ಮ ಯಶಸ್ಸಿನ ಗುಟ್ಟೇನು?
ಶ್ರದ್ಧೆ ಮತ್ತು ಸಾಧನೆ.
ಇದನ್ನೂ ಓದಿ: ನಾರಾಯಣ ಮೂರ್ತಿಯವರ ಪರಿಚಯ
July 16th, 2015 at 5:41 am
Good old memories of Infosys chief. Thank you…