ಅಭಿವೃದ್ಧಿಯ ರಥದ ಚಕ್ರದಡಿ ಸಿಕ್ಕಿಬಿದ್ದವರು
-ಪ್ರೊ. ದೇವೀಂದ್ರ ಶರ್ಮಾ
ಲಿಪಿಕಾರ: ನಾಗೇಶ ಹೆಗಡೆ
ದೇಶದ ಹೆಸರಾಂತ ಕೃಷಿ ಚಿಂತಕ ಪ್ರೊ. ದೇವೀಂದ್ರ ಶರ್ಮಾ ಈಚೆಗೆ ಬೆಂಗಳೂರಿನ ಕೃಷಿ ಎಂಜಿನಿಯರ್ಗಳ ಸಂಸ್ಥೆಯಲ್ಲಿ ಹೇಳಿದ ಮಾತುಗಳನ್ನು ಇಲ್ಲಿ ಕೊಡಲಾಗುತ್ತಿದೆ. ಇದು ಶಬ್ದಶಃ ತರ್ಜುಮೆಯಲ್ಲ. ಅವರ ಭಾಷಣದ ಸಂದರ್ಭದಲ್ಲಿ ಬರೆದಿಟ್ಟುಕೊಂಡ ಟಿಪ್ಪಣಿಯನ್ನು ಆಧರಿಸಿ ಅಂಕಿ ಅಂಶ ಕುರಿತು ಸಂಶಯ ಎದ್ದಾಗ ಶರ್ಮಾರ ಪ್ರಕಟಿತ ಲೇಖನಗಳನ್ನು ರೆಫರ್ ಮಾಡಿ (ಉದಾ: www.countercurrents.org/glo-crop.htm) ಸಿದ್ಧಪಡಿಸಿದ ಕನ್ನಡ ಲೇಖನ ಇದು. ಪಾಶ್ಚಾತ್ಯ ತಜ್ಞರು ಹೇಳಿದ್ದೇ ವೇದವಾಕ್ಯ ಎಂಬಂತೆ ನಮ್ಮ ತಜ್ಞರು ನಮಗೆ ಅದನ್ನೇ ಬೋಧಿಸುತ್ತ ನಮ್ಮ ರೈತರ ಹಿತವನ್ನು ಹೇಗೆ ಬಲಿಗೊಡುತ್ತಿದ್ದಾರೆ ಎಂಬ ವಿಚಾರ ಈ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದ ಚಿಂತನೆಗೆ ಸೂಕ್ತವಾದೀತು.
ಇದೆಂಥ ವಿಪರ್ಯಾಸ ನೋಡಿ:
‘ಇಂಡಿಯಾದ ಪ್ರಗತಿಯ ಗತಿ ಶೇಕಡಾ ೮ ದಾಟಿತು, ೯ಕ್ಕೇರಿತು, ೧೦ನ್ನು ತಲುಪಲಿದೆ, ೧೨ಕ್ಕೂ ಏರಬಹುದು’ ಎಂದು ಪೈಪೋಟಿಗೆ ಬಿದ್ದವರಂತೆ ನಮ್ಮ ಪುಢಾರಿಗಳು ಈಚಿನ ವರ್ಷಗಳಲ್ಲಿ ಪರಾಕು ಹಾಕುತ್ತಲೇ ಇದ್ದಾರೆ. ೧೯೯೩ರೀಚಿನ ಜಾಗತೀಕರಣದ ಪ್ರಭಾವವೇ ಇದೆಂತಲೂ ಹೇಳುತ್ತಾರೆ.
೧೯೯೩ರೀಚಿನ ಹದಿನೈದು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಆತ್ಮಹತ್ಯೆಗೆ ಶರಣಾದ ರೈತರ ಸಂಖ್ಯೆ ಹೀಗೆಯೇ ಏರುತ್ತ ಬಂದಿದೆ. ಸಾವಿರಕ್ಕೇರಿತು; ಹತ್ತು ಸಾವಿರ ದಾಟಿತು. ಒಂದು ಲಕ್ಷವನ್ನೂ ಮೀರಿತು. ಈಚೆಗೆ ಒಂದೂವರೆ ಲಕ್ಷ ದಾಟಿದೆ.
ಈ ಲೇಖನವನ್ನು ಓದಿ ಮುಗಿಸುವ ಅವಧಿಯಲ್ಲಿ ಇನ್ನೂ ಎಂಟು ಮಂದಿ ರೈತರು ಇಹಲೋಕ ತ್ಯಜಿಸಲಿದ್ದಾರೆ.
ಯಾರೂ ಅದರ ಬಗ್ಗೆ ಚಕಾರ ಎತ್ತುವುದಿಲ್ಲ.
ವಿಪರ್ಯಾಸ ಅಷ್ಟಕ್ಕೇ ಮುಗಿದಿಲ್ಲ.
ಬೆಂಗಳೂರು ಎಂದರೆ ಐಟಿ ಹಬ್, ಬಿಟಿ ಹಬ್. ಭಾರತೀಯರ ಸಮಸ್ಯೆಗಳಿಗೆ ಉತ್ತರ ಹುಡುಕಲೆಂದು ಟೆಕ್ನಾಲಜಿಗಾಗಿ ಇಲ್ಲಿ ವಿನಿಯೋಗ ಆದಷ್ಟು ಹಣ ಬೇರೆಲ್ಲೂ ಆಗಿಲ್ಲ.
ಕರ್ನಾಟಕ ಎಂದರೆ ವಿಜ್ಞಾನ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ನಾಡು.
ರೈತರ ಆತ್ಮಹತ್ಯೆಯ ಅಂಕಿಸಂಖ್ಯಾ ಪೈಪೋಟಿಯಲ್ಲಿ ಕರ್ನಾಟಕವೇ ಎಲ್ಲಕ್ಕಿಂತ ಮುಂದಿದೆ.
ರಾಷ್ಟ್ರದ ರೈತರ ಈವರೆಗಿನ ಆತ್ಮಹತ್ಯೆಗಳಲ್ಲಿ ಶೇಕಡಾ ೪೦ರಷ್ಟು ಕರ್ನಾಟಕದವರೇ ಇದ್ದಾರೆ.
ವಿಜ್ಞಾನ ರಾಜಧಾನಿಯ ಆಸುಪಾಸಿನಲ್ಲಿ ಅದೆಷ್ಟು ಆತ್ಮಹತ್ಯೆಗಳು!
ಬಾಯಿಪಾಠ ಮಾಡಿದ ಹಾಗೆ ಇನ್ನೊಂದು ಮಾತನ್ನು ಹೇಳುತ್ತಿರುತ್ತಾರೆ: ‘ಪಾಶ್ಚಾತ್ಯ ರೈತರನ್ನು ನೋಡಿ; ನಮ್ಮ ರೈತರೂ ಅವರಷ್ಟೇ ಸುಧಾರಿಸಬೇಕು’ ಎನ್ನುತ್ತಿರುತ್ತಾರೆ. ಅಲ್ಲಿನ ರೈತ ಮತ್ತು ಇಲ್ಲಿನ ರೈತರನ್ನು ಏಕೆ ಹೋಲಿಸುತ್ತೀರಿ? ಅಲ್ಲಿನ ದನ ಮತ್ತು ಇಲ್ಲಿನ ರೈತರನ್ನು ಹೋಲಿಸಿ ನೋಡಿ. ಪಾಶ್ಚಾತ್ಯ ದನಗಳಿಗೆ ಸೆಕೆಯಾದರೆ ಫ್ಯಾನ್ ಗಾಳಿ ಬೀಸುತ್ತದೆ. ಸೆಕೆ ಹೆಚ್ಚಾದರೆ ತುಂತುರು ನೀರಿನ ಸಿಂಪಡನಾ ವ್ಯವಸ್ಥೆ ಇರುತ್ತದೆ. ಚಳಿ ಹೆಚ್ಚಾದರೆ ಕೊಟ್ಟಿಗೆಯನ್ನು ಬೆಚ್ಚಗೆ ಮಾಡಲಾಗುತ್ತದೆ. ದನಗಳ ನಿತ್ಯದ ಅಗತ್ಯಗಳ ನಿರ್ವಹಣೆಗೆಂದೇ ಕಂಪ್ಯೂಟರ್ಗಳಿವೆ. ದನದ ಕತ್ತಿನ ಪಟ್ಟಿಗೆ ಒಂದು ಬಿಲ್ಲೆ ಇರುತ್ತದೆ. ಅಲ್ಲೇ ಪಕ್ಕದ ಗೋಡೆಯ ಮೇಲೆ ಒಂದು ಗಣಕಫಲಕ ಇರುತ್ತದೆ. ದನದ ದೇಹದ ಉಷ್ಣತೆ, ರಕ್ತದೊತ್ತಡ, ಬೆದೆಬಯಕೆ ಎಲ್ಲವನ್ನೂ ಅದು ಮಾನಿಟರ್ ಮಾಡುತ್ತದೆ. ಯಾವ ದನಕ್ಕೂ ತುಸುವೂ ಕಷ್ಟ ಬಾರದಂತೆ ಕಾಲಕಾಲಕ್ಕೆ ಆಹಾರ, ಪೋಷಕಾಂಶ, ಹಾರ್ಮೋನು, ವೈದ್ಯಕೀಯ ಪರೀಕ್ಷೆ ಸಿಗುತ್ತದೆ. ಒಂದು ದನವನ್ನು ಅಲ್ಲಿ ಸಾಕಬೇಕೆಂದರೆ ಹತ್ತು ಹೆಕ್ಟೇರಿನಲ್ಲಿ ಬೆಳೆಯುವಷ್ಟು ಹುಲ್ಲು, ಜೋಳ, ಹಿಂಡಿಕಾಳು ಬೆಳೆಸುತ್ತಾರೆ. ಅಲ್ಲಿ ಅತ್ಯಂತ ಗರಿಷ್ಠ ‘ಆಹಾರ ಭದ್ರತೆ’ ಪಡೆದ ಜೀವಿಯೆಂದರೆ ದನ.
ನಮ್ಮ ರೈತರ ಸರಾಸರಿ ಹಿಡುವಳಿ ಎರಡು ಹೆಕ್ಟೇರ್ಗಿಂತ ಕಮ್ಮಿ ಇದೆ. ಕರ್ನಾಟಕದಲ್ಲಿ ಸುಮಾರು ೧.೭ ಹೆಕ್ಟೇರ್. ಅದರಲ್ಲೇ ರೈತ ಮತ್ತು ಆತನ ಕುಟುಂಬದ ಐದು ಸದಸ್ಯರ ಜೀವನ ನಿರ್ವಹಣೆ ನಡೆಯಬೇಕು. ಜತೆಗೆ ಆತ ಸಾಕಿಟ್ಟುಕೊಂಡ ದನ, ಎಮ್ಮೆ, ಕುರಿ, ನಾಯಿ, ಕೋಳಿಗಳ ಜೀವನವೂ ಸಾಗಬೇಕು.
ಪಾಶ್ಚಾತ್ಯ ದೇಶಗಳಲ್ಲಿ ಪ್ರತಿ ಹಸುವಿನ ಸಾಕಣೆಗೆ ಪ್ರತಿ ದಿನ ೧೫೦ ರೂಪಾಯಿ ಸಬ್ಸಿಡಿ ನೀಡಲಾಗುತ್ತದೆ.
ಜಗತ್ತಿನಲ್ಲಿ ಪ್ರತಿ ದಿನ ೮೫ ಕೋಟಿ ಜನರು ಅರೆಹೊಟ್ಟೆಯಲ್ಲಿ ನಿದ್ರೆ ಹೋಗುತ್ತಾರೆ. ಅವರಲ್ಲಿ ಶೇಕಡಾ ೩೦ ಪಾಲು ಅಂದರೆ ಸುಮಾರು ೩೩ ಕೋಟಿ ಜನರು ಭಾರತೀಯರು. ಅವರಿಗೆ ಅಗತ್ಯ ಪೋಷಕಾಂಶಗಳು ಸಿಗುತ್ತಿಲ್ಲ.
‘ಪಾಶ್ಚಾತ್ಯ ರೈತರನ್ನು ನೀವೂ ಅನುಸರಿಸಿ’ ಎಂದರೆ ಆದೀತೆ?
ಹೋಲಿಕೆ ಮಾಡುವುದಾದರೆ ಹೀಗೆ ಮಾಡಿ:
ಅಮೆರಿಕದ ಪ್ರಜೆಗಳಲ್ಲ್ಲಿ ರೈತರ ಸಂಖ್ಯೆ ಶೇಕಡಾ ೧ಕ್ಕಿಂತ ಕಡಿಮೆ ಇದೆ. ಇಪ್ಪತ್ತು ವರ್ಷಗಳ ಹಿಂದೆ ಶೇಕಡಾ ೭ರಷ್ಟಿತ್ತು. ಅದು ಕಡಿಮೆ ಆಗುತ್ತ ಆಗುತ್ತ ಬಂದು ಈಗಂತೂ ಜನಗಣತಿಯಲ್ಲಿ ರೈತರ ಸಂಖ್ಯೆಯ ಲೆಕ್ಕ ಇಡುವುದನ್ನೇ ಮರೆತುಬಿಟ್ಟಿದ್ದಾರೆ. ಅಲ್ಲಿ ಸುಮಾರು ಏಳು ಲಕ್ಷ ಜನರು ಆಹಾರ ಉತ್ಪಾದನೆಯಲ್ಲಿ ತೊಡಗಿದ್ದಾರೆ. ಎಪ್ಪತ್ತು ಲಕ್ಷ ಜನರು ಜೈಲಿನಲ್ಲೊ, ಪ್ಯರೋಲ್ ಮೇಲೊ ಅಂತೂ ಸರ್ಕಾರದ ಕಟ್ಟಾ ನಿಗಾದಲ್ಲಿ ಬದುಕುತ್ತಿದ್ದಾರೆ.
ಇಷ್ಟಿದ್ದರೂ ಜಗತ್ತಿನ ಆಹಾರ ಭದ್ರತೆಯ ಸಂಗತಿಗಳೆಲ್ಲ ಅಮೆರಿಕದ ಬಿಗಿ ಮುಷ್ಟಿಯಲ್ಲೇ ಇರಬೇಕೆಂದು ಅಲ್ಲಿನವರು ಬಯಸುತ್ತಾರೆ.
ಅಮೆರಿಕದ ನಿವ್ವಳ ರಾಷ್ಟ್ರೀಯ ಉತ್ಪನ್ನದಲ್ಲಿ ಕೃಷಿಯ ಪಾಲು ಕೇವಲ ಶೇಕಡಾ ೪ರಷ್ಟಿದೆ. ಅದೇ ಭಾರತದ ರಾಷ್ಟ್ರೀಯ ಉತ್ಪನ್ನದಲ್ಲಿ ಕೃಷಿಯ ಪಾಲು ತುಂಬಾ ದೊಡ್ಡದು. ಸರಕಾರಿ ಲೆಕ್ಕದ ಪ್ರಕಾರ ಅದು ಶೇಕಡಾ ೧೮ರಷ್ಟಿದೆ. ಆದರೆ ಕೃಷಿಯನ್ನೇ ಆಧರಿಸಿ ಬೆಳೆದು ನಿಂತ ಉದ್ಯಮಗಳನ್ನೂ ಸೇವೆಗಳನ್ನೂ (ಇಫ್ಕೊ, ಗಿಫ್ಕೊ ಎಲ್ಲ) ಸೇರಿಸಿದರೆ ಅದು ಶೇಕಡಾ ೬೦ರಷ್ಟಾಗುತ್ತದೆ.
ಅಮೆರಿಕದಲ್ಲಿ ಎಂಭತ್ತರ ದಶಕದಲ್ಲಿ ತಲಾ ಕೃಷಿಕನಿಗೆ ೫೦ ಹೆಕ್ಟೇರ್ ಜಮೀನು ಇತ್ತು. ಈಗ ಅದು ಸಹಜವಾಗಿ ಏರಿದೆ. ೨೦೦ ಹೆಕ್ಟಾರ್ಗೆ ಏರಿದೆ. ಭಾರತದಲ್ಲಿ ಇದರ ಉಲ್ಟಾ! ವರ್ಷ ವರ್ಷವೂ ಕೃಷಿಕನ ಜಮೀನಿನ ಹಿಡುವಳಿಯ ಪ್ರಮಾಣ ತಗ್ಗುತ್ತ ಹೋಗಿದೆ. ಹಿಂದೆ ಸರಾಸರಿ ಮೂರು ಹೆಕ್ಟಾರ್ ಇತ್ತು. ಈಗ ೧.೪೭ಗೆ ಇಳಿದಿದೆ.
ಮತ್ತೆ ಅದೇ ಪ್ರಶ್ನೆ: ಪಾಶ್ಚಾತ್ಯ ಕೃಷಿಕರೊಂದಿಗೆ ಪೈಪೋಟಿ ಮಾಡಿರೆಂದು ನಮ್ಮ ಕೃಷಿಕರಿಗೆ ಹೇಳಬಹುದೆ?
ಈಗ ಬಹು ಮುಖ್ಯವಾದ ಕೃಷಿ ಸಬ್ಸಿಡಿಯ ವಿಚಾರಕ್ಕೆ ಬರೋಣ. ಹತ್ತಿ ಬೆಳೆಯುವವರಿಗೆ ಅಮೆರಿಕದಲ್ಲಿ ೩೯೦ ಕೋಟಿ ಡಾಲರ್ಗಳ ಸಬ್ಸಿಡಿ ಸಿಗುತ್ತದೆ. ಸಹಜವಾಗಿಯೇ ಅಲ್ಲಿನ ಕೃಷಿಕ ತನ್ನ ಹತ್ತಿಯನ್ನು ಅಗ್ಗಕ್ಕೆ ಮಾರುತ್ತಾನೆ. ಅವನ ಜತೆ ಪೈಪೋಟಿ ಮಾಡಿ ಜಗತ್ತಿನ ಇತರ ರೈತರು ಇನ್ನೂ ಕಡಿಮೆ ಬೆಲೆಗೆ ಹತ್ತಿಯನ್ನು ಮಾರಬೇಕು. ಸಾಧ್ಯವೊ ಅಸಾಧ್ಯವೊ ಅಂತೂ ಈ ಬೆಳೆ ಇಳಿಕೆ ಪೈಪೋಟಿಯ ಪರಿಣಾಮವಾಗಿ ಇಡೀ ಜಗತ್ತಿನಲ್ಲಿ ಇಂದು ಹತ್ತಿ ಬೆಳೆಯ ಬೆಲೆ ಶೇಕಡಾ ೪೫ರಷ್ಟು ತಗ್ಗಿದೆ. ನಮ್ಮ ರೈತ ಈ ಮಾರುಕಟ್ಟೆಯಲ್ಲಿ ಕಾಲಿಡಲಾರ. ಕಾಲಿಟ್ಟು ಬದುಕಲಾರ.
ಎಕರೆವಾರು ಉತ್ಪಾದನೆಯನ್ನು ಹೆಚ್ಚಿಸಿದರೆ ಆತ ಬದುಕಿಕೊಳ್ಳಬಲ್ಲ ಎಂದು ನಮ್ಮ ತಜ್ಞರು ವಾದಿಸುತ್ತಾರೆ. ಇದೂ ಒಂದು ತಪ್ಪು ಕಲ್ಪನೆಯೇ ಸರಿ. ಅದು ಹೇಗೆಂದು ಹೇಳುತ್ತೇನೆ ತಾಳಿ. ಮೊದಲು ಇಲ್ಲಿನ ಚಿತ್ರಣ ನೋಡೋಣ.
ರಾಷ್ಟ್ರಪತಿ ಕಲಾಂ ಸಾಹೇಬರು ಹೈದರಾಬಾದ್ನ ‘ಇಕ್ರಿಸಾಟ್’ ಕೃಷಿ ಸಂಸ್ಥೆಯಲ್ಲಿ ಭಾಷಣ ಮಾಡುತ್ತ, ಎಕರೆವಾರು ಉತ್ಪಾದನೆಯನ್ನು ಹೆಚ್ಚಿಸುವತ್ತ ರೈತರಿಗೆ ನಮ್ಮ ವಿಜ್ಞಾನಿಗಳು ಸಹಾಯ ಮಾಡಬೇಕು ಎಂದು ಕರೆ ನೀಡಿದರು. ಅದಾಗಿ ೧೫ ದಿನಗಳಲ್ಲೇ ಕರ್ನೂಲ್ ಜಿಲ್ಲೆಯ ನೂರಾರು ರೈತರು ತಾವು ಬೆಳೆದ ಟೊಮ್ಯಾಟೊಕ್ಕೆ ಕಿಲೊಕ್ಕೆ ೫೦ ಪೈಸೆಯೂ ಸಿಗುತ್ತಿಲ್ಲವೆಂದು ಕುಪಿತರಾಗ ರಸ್ತೆಯ ತುಂಬೆಲ್ಲ ಅದನ್ನು ಚೆಲ್ಲಾಡಿ ಹೋದರು. ಉತ್ತರ ಪ್ರದೇಶ, ಹರ್ಯಾಣಾ, ಪಂಜಾಬ್ಗಳ ರೈತರು ಆಲೂಗಡ್ಡೆಯನ್ನು ಹೀಗೆ ರಸ್ತೆಗೆ ಸುರುವಿ ಹೋದದ್ದನ್ನು ನೀವು ಓದಿರಬಹುದು.
ಭತ್ತ, ಗೋಧಿ, ಕಬ್ಬು, ಹತ್ತಿ, ಹಣ್ಣು, ತರಕಾರಿಗಳ ವಿಷಯ ಬಂದಾಗ ಭಾರತದ ಬಿತ್ತನೆ ಕ್ಷೇತ್ರ ಭಾರೀ ದೊಡ್ಡದಿದೆ. ಜಗತ್ತಿನ ಅತಿ ವಿಸ್ತಾರ ಹೊಲಗಳ ಶ್ರೇಯಾಂಕದಲ್ಲಿ ಭಾರತ ಸದಾ ಮುಂಚೂಣಿಯಲ್ಲಿದೆ. ಮೊದಲ ಐದು ಶ್ರೇಯಾಂಕಗಳಲ್ಲೇ ಅದರ ಸ್ಥಾನ ಸದಾ ಇರುತ್ತದೆ. ಆದರೆ ಎಕರೆವಾರು ಉತ್ಪಾದನೆಯ ವಿಷಯ ಬಂದಾಗ ಜಗತ್ತಿನ ಅತಿ ಕೆಳಗಿನ ಶ್ರೇಯಾಂಕ ನಮ್ಮದೇ. ಒಪ್ಪಿಕೊಳ್ಳೋಣ. ೨೦೦೦ದಲ್ಲಿ ಭಾರತದಲ್ಲಿ ಪ್ರತಿ ಹೆಕ್ಟಾರಿಗೆ ಭತ್ತದ ಇಳುವರಿ ೩೦ ಕ್ವಿಂಟಾಲ್ ಆಸುಪಾಸು ಇತ್ತು. ಥಾಯ್ಲೆಂಡಿನಲ್ಲಿ ಅದು ೨೩ ಕ್ವಿಂಟಾಲ್ ಇತ್ತು. ಅದೇ ವರ್ಷ ಅಮೆರಿಕದ ಭತ್ತದ ಇಳುವರಿ ಹೆಕ್ಟೇರಿಗೆ ೭೦ ಕ್ವಿಂಟಾಲ್! ಈ ಲೆಕ್ಕ ಗೊತ್ತಿದ್ದರಿಂದಲೇ ಇಳುವರಿ ಹೆಚ್ಚಿಸಿದರೆ ರೈತನನ್ನು ಬಚಾವು ಮಾಡಬಹುದು ಎಂದು ಎಲ್ಲರೂ ಹೇಳುತ್ತಾರೆ.
ಆದರೆ ಅಸಲೀ ಚಿತ್ರಣ ಬೇರೆಯದೇ ಇದೆ.
ಜಗತ್ತಿನಲ್ಲಿ ಅತಿ ಹೆಚ್ಚು ಅಕ್ಕಿಯನ್ನು ರಫ್ತು ಮಾಡುವ ದೇಶವೆಂದರೆ ಥಾಯ್ಲೆಂಡ್. ನಾವೂ ಏನ್ ಕಮ್ಮಿ ಇಲ್ಲ. ಸರಕಾರಿ ಗೋದಾಮುಗಳಿಗೆ ಲೆವಿ ಭತ್ತ ಅದೆಷ್ಟು ದೊಡ್ಡ ಪ್ರಮಾಣದಲ್ಲಿ ಸಂಗ್ರಹ ಆಗಿತ್ತೆಂದರೆ, ಅದು ಎರಡು ಕೋಟಿ ಟನ್ಗಳ ಗುರಿ ಮುಟ್ಟಿ, ಮುಂದೆ ೨೦೦೨ರಲ್ಲಿ ಐದು ಕೋಟಿ ಟನ್ಗೆ ಏರಿ, ಇಡಲೂ ಕೂಡ ಜಾಗ ಇಲ್ಲದೆ, ಪಂಜಾಬ್, ಹರ್ಯಾಣಾ ಮತ್ತು ಆಂಧ್ರ ಪ್ರದೇಶ ಸರಕಾರಗಳು ರೈತರಿಗೆ ‘ಇಷ್ಟೆಲ್ಲ ಭತ್ತ ಉತ್ಪಾದಿಸಬೇಡಿ, ಜಾಗ ಇಲ್ಲ’ ಎಂದು ಗೋಗರೆದಿದ್ದವು. (ಸರಕಾರಿ ಗೋದಾಮುಗಳಲ್ಲಿ ಅಷ್ಟೆಲ್ಲವನ್ನು ರಕ್ಷಿಸಲೆಂದು ಪ್ರತಿ ದಿನಕ್ಕೆ ನಾಲ್ಕು ಕೋಟಿ ರೂಪಾಯಿ ವೆಚ್ಚ ಮಾಡುವ ಬದಲು ಅಷ್ಟೂ ಅಕ್ಕಿಯನ್ನು ಸಮುದ್ರಕ್ಕೆ ಸುರಿಯೋದು ಒಳ್ಳೇದಿತ್ತು’ ಎಂದು ನಮ್ಮ ಹಿರಿಯ ಆರ್ಥಿಕ ತಜ್ಞನೊಬ್ಬ ಸಲಹೆ ಮಾಡಿದ್ದ!)
ಕಡಿಮೆ ಇಳುವರಿ ಇದ್ದವರ ಗತಿ ಹೀಗಾದರೆ ಅಮೆರಿಕದ ಸ್ಥಿತಿ ಹೇಗಿದ್ದೀತು? ಅಲ್ಲಿ ನಮಗಿಂತ ಇಮ್ಮಡಿ ಇಳುವರಿ ಸಿಗುತ್ತಿದ್ದರೂ ಆ ರೈತನ ದೃಷ್ಟಿಯಲ್ಲಿ ಭತ್ತ ಬೆಳೆಯುವುದೆಂದರೆ ಬರೀ ನಷ್ಟದ ಬಾಬ್ತೇ. ಅದಕ್ಕೇ ಆತ ಸರಕಾರದಿಂದ ಸಬ್ಸಿಡಿ ಕೇಳಿ ಪಡೆಯುತ್ತಾನೆ. ಅಲ್ಲಿನ ಸರಾಸರಿ ರೈತ ಕುಟುಂಬ ಪ್ರತಿ ವರ್ಷ ೩೦ ಸಾವಿರ ಡಾಲರ್ ಸಬ್ಸಿಡಿ ಪಡೆಯುತ್ತದೆ. ಮುಂದಿನ ಹತ್ತು ವರ್ಷಗಳಲ್ಲಿ ೧೮೦ ಶತಕೋಟಿ ಡಾಲರ್ ಹಣವನ್ನು ಕೃಷಿ ಸಬ್ಸಿಡಿಗೆಂತಲೇ ಅಲ್ಲಿನ ಸರಕಾರ ಮೀಸಲು ಇಟ್ಟಿದೆ.
ಇಳುವರಿ ಹೆಚ್ಚಾದರೆ ಜಾಗತಿಕ ಮಾರುಕಟ್ಟೆಯಲ್ಲಿ ಪೈಪೋಟಿ ಸುಲಭವೆಂದಾದರೆ, ಅಮೆರಿಕದ ಕೃಷಿಕ ಸರಕಾರದಿಂದ ಏಕೆ ನೆರವು ಪಡೆಯಬೇಕು?
ಭಾರತದಲ್ಲಿ ಅತಿ ಹೆಚ್ಚು ಇಳುವರಿ ಪಡೆದ ರೈತ ಹೈರಾಣಾಗುತ್ತಾನೆ. ಸರಕಾರ ಏನೇನೋ ಸಬೂಬು ಹೇಳಿ ಲೆವಿ ಭತ್ತ ಖರೀದಿಸಲು ನಿರಾಕರಿಸುತ್ತದೆ. ಬೆಲೆ ಏರೀತೆಂದು ಕಾದು ಕಾದು ರೈತ ಕೊನೆಗೂ ತನ್ನ ಫಸಲಿಗೆ ಗಿರಾಕಿ ಸಿಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ.
ಹತ್ತಿಯ ವಿಚಾರಕ್ಕೆ ಬಂದರೆ ಇನ್ನೂ ವಿಲಕ್ಷಣ ಚಿತ್ರಣಗಳು ನಮಗೆ ಸಿಗುತ್ತವೆ. ಜಗತ್ತಿನಲ್ಲಿ ಹತ್ತಿ ಬೆಳೆಯುವ ಅತ್ಯಂತ ವಿಸ್ತೀರ್ಣ ಕ್ಷೇತ್ರ ಭಾರತದಲ್ಲಿದೆ. ಅತ್ಯಂತ ಕನಿಷ್ಠ ಇಳುವರಿ ಪಡೆಯುವ ದೇಶವೆಂಬ ಅಗ್ಗಳಿಕೆಯೂ ನಮ್ಮದೇ ಆಗಿದೆ. ಇಂಥ ಅಂಕಿ ಸಂಖ್ಯೆಗಳನ್ನು ನೋಡಿ, ಮನ ಕರಗಿ ನಮ್ಮ ರೈತರನ್ನು ಉದ್ಧಾರ ಮಾಡಲೆಂದೇ ಮೊನ್ಸಾಂಟೊ ಕಂಪನಿ ‘ಬಿಟಿ’ ಹತ್ತಿಯನ್ನು ನಮಗೆ ಪರಿಚಯಿಸಲೆಂದು ಬಂತು. ಅದಕ್ಕೆ ನೆರವು ನೀಡಲೆಂದು ನಮ್ಮ ಕೃಷಿ ಸಂಶೋಧನ ಮಂಡಲಿ ಮುಂದೆ ಬಂತು. ಬಯೊಟೆಕ್ನಾಲಜಿ ಇಲಾಖೆಯೂ ಮುಂದೆ ಬಂತು. ಹತ್ತಿಗೆ ತಗಲುವ ಬೊಲ್ ವರ್ಮ್ ಎಂಬ ಹುಳವನ್ನು ತಾನು ವಿಷ ಸಿಂಪಡನೆ ಮಾಡದೆಯೇ ಕೊಲ್ಲುತ್ತೇನೆಂದು ಮೊನ್ಸಾಂಟೊ ಹೇಳಿತು. ಈ ಹೊಸ ತಳಿಯಿಂದ ಉತ್ಪಾದನೆಯೇನೂ ಹೇಳಿಕೊಳ್ಳುವಷ್ಟು ಏರಲಿಲ್ಲ. ಆದರೆ ರೈತರ ಆತ್ಮಹತ್ಯೆಯ ಅಂಕಿಸಂಖ್ಯೆ ಮಾತ್ರ ಏರುತ್ತ ಹೋಯಿತು.
ಕಳೆದ ೨೫ ವರ್ಷಗಳಲ್ಲಿ ಹತ್ತು ಸಾವಿರಕ್ಕೂ ಹೆಚ್ಚು ಹತ್ತಿ ಬೆಳೆಗಾರರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಳುವರಿ ಹೆಚ್ಚಿಲ್ಲವೆಂತಲ್ಲ, ಈ ಅವಧಿಯಲ್ಲಿ ಇಳುವರಿ ಶೇಕಡಾ ೭೫ರಷ್ಟು ಹೆಚ್ಚಾಗಿದೆ. ಆದರೆ ಅದರಿಂದ ರೈತರ ಸಂಕಷ್ಟಗಳೇನೂ ಪರಿಹಾರ ಆಗಿಲ್ಲ.
ಈಗ ಜಗತ್ತಿನ ಅತಿ ದೊಡ್ಡ ಹತ್ತಿ ರಫ್ತುದಾರ ಎನಿಸಿದ ಅಮೆರಿಕವನ್ನು ಹೋಲಿಕೆಗೆ ಪರಿಶೀಲಿಸೋಣ. ಅಲ್ಲಿ ಹತ್ತಿ ಬೆಳೆಗಾರರ ಸಂಖ್ಯೆ ತೀರಾ ಕಡಿಮೆ ಇದೆ. ಒಟ್ಟೂ ೯ ಲಕ್ಷ ರೈತರಲ್ಲಿ ಹತ್ತಿ ಬೆಳೆಗಾರರ ಸಂಖ್ಯೆ ಕೇವಲ ೨೫ ಸಾವಿರ ಅಷ್ಟೆ. ಆದರೆ ಅವರಿಗೆ ಬೆಂಬಲವಾಗಿ ಸರಕಾರ ೩೮೦ ಕೋಟಿ ಡಾಲರ್ ಸಬ್ಸಿಡಿ ನೀಡುತ್ತಿದೆ. ಪ್ರತಿ ಬೆಳೆಗಾರನ ಸರಾಸರಿ ಆಸ್ತಿ ಮೌಲ್ಯ ಎಂಟು ಲಕ್ಷ ಡಾಲರ್ನಷ್ಟಿದೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಸರಕಾರಿ ಕೃಪೆ. ಆತ ಅದೆಷ್ಟು ಅಗ್ಗದಲ್ಲಿ ತನ್ನ ಹತ್ತಿಯನ್ನು ಅಂತರ ರಾಷ್ಟ್ರೀಯ ಮಾರುಕಟ್ಟೆಗೆ ಬಿಡುತ್ತಾನೆಂದರೆ, ಚೀನಾ, ಭಾರತ, ಪಶ್ಚಿಮ ಆಫ್ರಿಕಾ ಎಲ್ಲವೂ ಪೈಪೋಟಿ ನಡೆಸಲಾರದೆ ತತ್ತರಿಸುತ್ತಿವೆ. ಸಾಲದ್ದಕ್ಕೆ ಭಾರತ ಸರಕಾರ ಅದೇ ಅಮೆರಿಕದ ಅಗ್ಗದ ಹತ್ತಿಯನ್ನು ಖರೀದಿಸಿ (ಇಸವಿ ೨೦೦೦ದಲ್ಲಿ ೪೮ ಸಾವಿರ ಟನ್) ನಮ್ಮ ರೈತರ ಗಾಯಕ್ಕೆ ಉಪ್ಪು ಸವರಿದೆ.
ಏನಾಗಿದೆ ನಮ್ಮ ಸರಕಾರೀ ಧುರೀಣರಿಗೆ? ಅಥವಾ ಅವರಿಗೆ ಉಪದೇಶ ಮಾಡುವ ಆರ್ಥಿಕ ತಜ್ಞರಿಗೆ? ಅಥವಾ ಕೃಷಿಕರಿಗೆ ಮಾರ್ಗದರ್ಶನ ಮಾಡುವ ಕೃಷಿ ತಜ್ಞರಿಗೆ? ಏಕೆ ಅವರು ಅಮೆರಿಕ ಮತ್ತು ಯುರೋಪಿನ ಮಾದರಿಗಳನ್ನು ಒಪ್ಪಿಕೊಂಡು ಅವರದ್ದೇ ಆರ್ಥಿಕ ಸಲಹೆಗಳನ್ನು ಪಾಲಿಸುತ್ತ, ಅಲ್ಲಿನ ರೈತರ ಹೊಟ್ಟೆಯನ್ನು ತಂಪಾಗಿಸುವಂಥ ನೀತಿಯನ್ನೇ ನಮ್ಮ ರೈತರ ಮೇಲೆ ಹೇರುತ್ತ ಬರುತ್ತಿದ್ದಾರೆ?
(ಇಲ್ಲಿಗೆ ಮುಗಿದಿಲ್ಲ. ಮುಂದಿನ ಕಂತಿನಲ್ಲಿ: ಎರೆಹುಳುಗಳೇ ಇಲ್ಲದ ಅಮೆರಿಕದ ಹೊಲಗಳು ನಮ್ಮವರಿಗೆ ಮಾದರಿಯಾಗಬೇಕೆ? ಬ್ರಝಿಲ್ ದೇಶ ಭಾರತೀಯ ಜಾನುವಾರು ತಳಿಗಳನ್ನು ಟ್ರ್ಯಾಕ್ಟರ್ ಕಂಪನಿಗಳ ಉದ್ಧಾರಕ್ಕೆಂದು ರೈತರ ಹಿತ ಬಲಿ…. ಇತ್ಯಾದಿ)
ಈ ಲೇಖನದ ಮುಂದಿನ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ