ಚಿನಕುರಳಿ – ೨೨
– ಮರ್ಕಟ
ಸಾರ್ವಜನಿಕರ ಕುಂದು ಕೊರತೆಗಳ ಬಗ್ಗೆ ತೀವ್ರ ನಿಗಾ ವಹಿಸುವ ಸಲುವಾಗಿ ಸಾರ್ವಜನಿಕ ಕುಂದು ಕೊರತೆ ವಿಭಾಗವನ್ನು ಮೈಸೂರು ವಿಶ್ವವಿದ್ಯಾಲಯ ಪ್ರಾರಂಭಿಸಿದೆ. ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಅರ್ಜಿಗೆ ೧೦ ದಿನಗಳ ಒಳಗೆ ಉತ್ತರ ದೊರಕದಿದ್ದಲ್ಲಿ ಈ ಕುಂದು ಕೊರತೆಗಳ ವಿಭಾಗಕ್ಕೆ ನೇರವಾಗಿ ದೂರು ಸಲ್ಲಿಸಬಹುದು.
ಈ ವಿಭಾಗಕ್ಕೆ ಸಲ್ಲಿಸಿದ ದೂರಿಗೆ ಉತ್ತರ ಬಾರದಿದ್ದಲ್ಲಿ ಯಾರನ್ನು ಸಂಪರ್ಕಿಸಬೇಕೆಂಬುದನ್ನು ವಿಶ್ವವಿದ್ಯಾಲಯದ ಪ್ರಕಟಣೆಯಲ್ಲಿ ತಿಳಿಸಿಲ್ಲ.
ನಗರದಲ್ಲಿ ಅಂತರಜಾಲ ಸೇವೆ ಕಲ್ಪಿಸಲು ಅಳವಡಿಸಲಾಗುತ್ತಿರುವ ಆಪ್ಟಿಕ್ ಫೈಬರ್ ಕೇಬಲ್ ಅಳವಡಿಕೆ ಕಾರ್ಯವನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸುವಂತೆ ಎಸ್. ಎಂ. ಕೃಷ್ಣ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರಿನ ರಸ್ತೆಹೊಂಡಗಳನ್ನು ಮುಚ್ಚಲೂ ಇದೇ ರೀತಿ ಗಡುವು ನೀಡಿ ಎಚ್ಚರಿಕೆ ನೀಡಲಾಗಿತ್ತು. ಆ ಹೊಂಡಗಳು ಹಾಗೇ ಇವೆ ಮಾತ್ರವಲ್ಲ ಅವುಗಳ ಸಂಖ್ಯೆಯೂ ಜಾಸ್ತಿಯಾಗಿದೆ.
ಕಾರು ಅಗ್ಗವಾದರೂ ಕೊಂಡುಕೊಳ್ಳುವವರು ಕಡಿಮೆ ಆಗಿದ್ದಾರಂತೆ -ಸುದ್ದಿ.
ಕಾರುಗಳ ಜೊತೆಗೆ `ಕಾರುಗಳನ್ನು ಓಡಿಸಲು ಯೋಗ್ಯವಾದ’ ರಸ್ತೆಗಳನ್ನೂ ಉಚಿತವಾಗಿ ಕೊಡಬೇಕಾಗಿದೆ.
`ಶ್ರೀಮಂತವಾದ ಕನ್ನಡ ಭಾಷೆ ವಿಜ್ಞಾನ ಹಾಗೂ ತಂತ್ರಜ್ಞಾನ ಭಾಷೆಯಾಗಿ ಬೆಳೆಯಬೇಕು’ -ಡಾ| ಎಂ. ಚಿದಾನಂದಮೂರ್ತಿ.
ಈಗಾಗಲೇ ಬಹುಮಂದಿ `ಕನ್ನಡಿಗರು (?)’ ಕನ್ನಡದಲ್ಲಿ ಇಂಗ್ಲೀಷನ್ನು ಧಾರಾಳವಾಗಿ ಬೆರೆಸಿ ಭಾಷೆಯನ್ನು `ಬೆಳೆಸು’ತ್ತಿದ್ದಾರಲ್ಲ.
`ಕರ್ನಾಟಕ ಕಾಂಗ್ರೆಸ್ ಪಕ್ಷದಲ್ಲಿ ಕಿಸೆಗಳ್ಳರಿದ್ದಾರೆ’ -ರಾಜ್ಯ ಪ್ರದೇಶ ಕಾಂಗ್ರೆಸ್‌ನ ಪದಚ್ಯುತ ಅಧ್ಯಕ್ಷ ಕೌಜಲಗಿ.
ಛೇ ಛೇ! ಕೋಟಿಗಟ್ಟಲೆ ಹಣ ನುಂಗುವುದಕ್ಕೆ (ಭೋಫೋರ್‍ಸ್ ನೆನೆಸಿಕೊಳ್ಳಿ) ಹೆಸರುವಾಸಿಯಾದ ಜನರ ಪಕ್ಷಕ್ಕೆ ಈಗ ಜುಜುಬಿ ಕಿಸೆಗಳ್ಳರ ಪಕ್ಷ ಎಂದೆನಿಸಿಕೊಳ್ಳುವಂತಹ ಗತಿ ಬಂತೇ!
`ಜನರಿಗೆ ಬೇಕಾಗಿರುವುದು ಮೂಲಭೂತ ಸೌಲಭ್ಯಗಳು’ -ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಅಲ್ಲಂ ವೀರಭದ್ರಪ್ಪ, ಕೌಜಲಗಿ ಟೇಪ್ ಹಗರಣದ ಬಗ್ಗೆ.
ಹಾಗಿದ್ದರೆ ಕಾಂಗ್ರೆಸ್‌ನವರು ದೆಹಲಿಯಲ್ಲಿ ತೆಹಲ್ಕಾ ಹಗರಣದ ಬಗ್ಗೆ ಗದ್ದಲ ಎಬ್ಬಿಸುತ್ತಿರುವುದು ಯಾಕೆ?
ಬೆಂಗಳೂರಿನ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯಲು ಹೊನೊಲುಲುಗೆ, ಸಾರ್ವಜನಿಕರ ದುಡ್ಡಿನಲ್ಲಿ ಹೋಗಬೇಕಾಗಿದ್ದ, ನಗರದ ಮೇಯರ್ ಅವರ ಪ್ರವಾಸವನ್ನು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ತಡೆಹಿಡಿದಿದ್ದಾರೆ.
ಭೇಷ್! ಇಲ್ಲಿನ ಸಮಸ್ಯೆಗಳಿಗೆ ಇಲ್ಲಿಯೇ ಪರಿಹಾರ ಇದೆ ಎಂದು ಒಬ್ಬರಿಗಾದರೂ ತಿಳಿಯಿತಲ್ಲ.
`ಎರಡಾದ ದಳವನ್ನು ಒಂದು ಬಣವಾಗಿ ಮಾಡಲು ಮಾತುಕತೆಗೆ ಚಾಲನೆ ಕೊಟ್ಟದ್ದು ನಾನು, ಬೊಮ್ಮಾಯಿ ಹಾಗೂ ಪಟೇಲ್. ಆಗ ಹೆಗಡೆ ಎಲ್ಲಿದ್ದರು?’ -ದೇವೇಗೌಡ.
`ಒಂದಾಗಿದ್ದ ದಳವನ್ನು ಎರಡಾಗಿ ಒಡೆಯಲು ಚಾಲನೆ ಕೊಟ್ಟದ್ದೂ ನಾವೇ’ ಎಂದು ಅವರು ಬಾಯಿಬಿಟ್ಟು ಹೇಳಿಲ್ಲ.
ಜಿ. ಎಸ್. ಎಲ್. ವಿ. ಯ ಯಶಸ್ವಿ ಉಡಾವಣೆಯಿಂದ ಬೀಗುತ್ತಿರುವ ಇಸ್ರೋ ಚಂದ್ರನ ಮೇಲೆ ಕಣ್ಣಿಟ್ಟಿದೆ.
ಹೊಂಡಗಳಿಂದ ತುಂಬಿದ ಚಂದ್ರನ ಮೇಲೆ ನಡೆಯುವ ತಯಾರಿಗೆ ಇಸ್ರೋದವರು ಜಾಗ ಹುಡುಕಬೇಕಾಗಿಲ್ಲ. ಬೆಂಗಳೂರಿನ ರಸ್ತೆಗಳಲ್ಲೇ ಅಭ್ಯಾಸ ಮಾಡಬಹುದು.
ಕರ್ನಾಟಕ ವಿಧಾನಸಭೆಯ ಬಜೆಟ್ ಅಧಿವೇಶನದ ಕೊನೆಯ ದಿನ ಶಾಸಕರ ಸಂಬಳ ಮತ್ತು ಇತರ ಭತ್ಯೆಗಳನ್ನು ಹೆಚ್ಚಿಸುವ ಮಸೂದೆಯನ್ನು ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು.
ವಿರೋಧಿಸುವುದನ್ನೇ ತಮ್ಮ ಪರಮೋಚ್ಚ ಧ್ಯೇಯವಾಗಿಸಿಕೊಂಡ ವಿರೋಧ ಪಕ್ಷಗಳು ಕೂಡ ಈ ವಿಧೇಯಕವನ್ನು ವಿರೋಧಿಸಲಿಲ್ಲ.
೨೫ ಅಡಿ ಉದ್ದದ ಗಿನ್ನೆಸ್ ದಾಖಲೆಯ ದೋಸೆ ತಯಾರಾಗಿದೆ -ಸುದ್ದಿ.
ಅದನ್ನು ನೀವೊಬ್ಬರೇ ಕೂತು ತಿಂದರೆ ಗಿನ್ನೆಸ್ ದಾಖಲೆಯ ಬಿಲ್ಲನ್ನು ವೈದ್ಯರಿಗೆ ಪಾವತಿ ಮಾಡಬೇಕಾಗಬಹುದು.
ಬೆಳಗಾವಿ ನಗರ ಪಾಲಿಕೆಯ ಚುನಾವಣೆಗೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳಲ್ಲಿ ೨೦ ಜನ, ವಿಚಾರಣೆ ಎದುರಿಸುತ್ತಿರುವ, ಕೇಡಿಗಳಿದ್ದಾರೆ. ಒಬ್ಬ ಉಮೇದುವಾರರಂತೂ ಜೈಲಿನಿಂದಲೇ ನಾಮಪತ್ರ ಸಲ್ಲಿಸಿದ್ದಾರೆ.
ಹಿಂದುಳಿದ ಜಾತಿಗಳವರಿಗೆ ಮೀಸಲಾತಿ ಇರುವಂತೆ ಕೇಡಿಗಳಿಗೂ ಚುನಾವಣೆಯಲ್ಲಿ ಮೀಸಲಾತಿ ಪ್ರಾರಂಭಿಸಬಹುದು.
ಮುಂಬಯಿಯ ಖ್ಯಾತ ಅಂಗಡಿಯೊಂದಕ್ಕೆ ಭೇಟಿ ಇತ್ತ, ಅಮೇರಿಕಾದ ಮಾಜಿ ಅಧ್ಯಕ್ಷ, ಬಿಲ್ ಕ್ಲಿಂಟನ್ ಅವರು ಗಣೇಶನ ಮೂರ್ತಿಯೊಂದನ್ನು ಕೊಂಡು ಕೊಂಡು ಅದರ ಬಿಲ್ ಪಾವತಿ ಮಾಡಿಯೇ ಹೊರ ನಡೆದ ಸುದ್ದಿ ಬಂದಿದೆ.
೧. ಇಂಗ್ಲೆಂಡಿನ ಹೋಟೆಲೊಂದರಲ್ಲಿ ಬಿಲ್ ಪಾವತಿ ಮಾಡದೆ ಹೋದುದನ್ನು ಪತ್ರಿಕೆಗಳವರು ದೊಡ್ಡ ಸುದ್ದಿ ಮಾಡಿದುದು ಅವರಿಗೆ ಎಚ್ಚರಿಕೆ ನೀಡಿರಬೇಕು.
೨. ಈಗ ಮಾಜಿ ಅಧ್ಯಕ್ಷರಾದ ಕಾರಣ ಬಿಲ್ ಪಾವತಿ ಮಾಡುವುದೇ ಉಚಿತ ಎಂಬ ತೀರ್ಮಾನಕ್ಕೆ ಬಂದಿರಬಹುದೇನೊ?
`೩೦ ಕೋಟಿ ಭಾರತೀಯರು ಬಡತನ ರೇಖೆಗಿಂತ ಕೆಳಗಿದ್ದಾರೆ. ಈ ಸಂಖ್ಯೆಯನ್ನು ನಾವು ಇಳಿಮುಖಗೊಳಿಸಬೇಕಾಗಿದೆ’ -ಡಾ| ಎ. ಪಿ. ಜೆ. ಅಬ್ದುಲ್ ಕಲಂ.
ಅದಕ್ಕೇನಂತೆ. ಬಡತನ ರೇಖೆಯನ್ನೇ ಸ್ವಲ್ಪ ಕೆಳಗೆ ತೆಗೆದುಕೊಂಡು ಹೋದರೆ ಆಯಿತು.
ಪದ್ಮಭೂಷಣ ಅಮಿತಾಬ್ ಬಚ್ಚನ್ ಅವರು ದೇಶಕ್ಕೆ ಸುಮಾರು ೧೫ ಕೋಟಿ ರೂ. ತೆರಿಗೆ ನೀಡದೆ ಬಾಕಿ ಇಟ್ಟುಕೊಂಡಿದ್ದಾರೆ -ಸುದ್ದಿ.
ಅವರ ತೆರಿಗೆ ಬಾಕಿ ೧೦೦ ಕೋಟಿ ರೂ. ತಲುಪಿದಾಗ ಅವರಿಗೆ `ಭಾರತ ರತ್ನ’ ಪ್ರಶಸ್ತಿ ನೀಡಬಹುದು. ಅಥವಾ `ಭಾರತ ತೆರಿಗೆ ಬಾಕಿ ರತ್ನ’ ಎಂಬ ಹೊಸ ಪ್ರಶಸ್ತಿಯನ್ನು ಹುಟ್ಟು ಹಾಕಬಹುದು.
(೨೦೦೧)