ಚಿನಕುರಳಿ – ೧೯

– ಮರ್ಕಟ

`ಮನುಷ್ಯರನ್ನು ಒಗ್ಗೂಡಿಸುವ ಶಕ್ತಿ ರಾಜಕಾರಣಿಗಳು ಅಥವಾ ವಿಜ್ಞಾನಿಗಳಿಗೆ ಇಲ್ಲ. ಸಾಹಿತಿ ಮತ್ತು ಕಲಾವಿದರಿಂದ ಮಾತ್ರ ಮನುಷ್ಯ ಸಂಬಂಧಗಳನ್ನು ಬೆಸೆಯಲು ಸಾಧ್ಯ’ -ಮಾಜಿ ಮುಖ್ಯಮಂತ್ರಿ, ಸಾಹಿತಿ, ಎಂ. ವೀರಪ್ಪ ಮೊಯಿಲಿ.
ಅಂದರೆ ಇನ್ನು ಮುಂದೆ ಮೊಯಿಲಿಯವರು ರಾಜಕಾರಣ ಬಿಟ್ಟು ಸಾಹಿತಿಯಾಗಿ ಮುಂದುವರೆಯುತ್ತಾರೆಂದು ಆಶಿಸೋಣವೇ!

ಜನವರಿ ೩೧ರ ಒಳಗೆ ಬೆಂಗಳೂರನ್ನು ಸ್ವಚ್ಛ ನಗರವನ್ನಾಗಿ ಮಾಡಬೇಕೆಂದು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಬೆಂಗಳೂರು ಮಹಾನಗರ ಪಾಲಿಕೆಗೆ ಆದೇಶ ನೀಡಿದ್ದರು.
ಈ ಹಿಂದೆ ರಸ್ತೆ ಹೊಂಡಗಳನ್ನು ಮುಚ್ಚಲು ಗಡುವು ನೀಡಿ ಹೊರಡಿಸಿದ ಆದೇಶದ ಗತಿಯೇ ಇದಕ್ಕೂ ಆಯಿತು.

`ನನ್ನ ಆರೋಗ್ಯಕ್ಕೆ ಕವಿತೆಗಳೇ ಕಾರಣ’ -ಕವಿ ಕೆ. ಎಸ್. ನರಸಿಂಹಸ್ವಾಮಿ.
ಕವಿತೆಗಳ ಔಷಧೀಯ ಗುಣಗಳನ್ನು ಆದಷ್ಟು ಬೇಗನೇ ಪೇಟೆಂಟ್ ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲವಾದಲ್ಲಿ ಬಾಸುಮತಿ ಅಕ್ಕಿ, ಶುಂಠಿ, ಬೇವು ಇತ್ಯಾದಿಗಳಿಗೆ ಆದಂತೆ ಕವಿತೆಯ ಪೇಟೆಂಟೂ ವಿದೇಶೀಯರ ಪಾಲಾಗಬಹುದು.

ವಿದ್ಯುಚ್ಛಕ್ತಿ ಕಳವು ಮಾಡುವವರನ್ನು ಹಿಡಿಯಲು ಪುಲಕೇಶಿ ಪಡೆಯನ್ನು ಕ. ವಿ. ಪ್ರ. ನಿ. ನಿ. ಹುಟ್ಟುಹಾಕಿದೆ.
ಕೃತಿಚೌರ್ಯ ಮಾಡುವವರನ್ನು ಹಿಡಿಯಲು ನೃಪತುಂಗ ಪಡೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಸೃಷ್ಟಿಸಬಹುದು.

`ಸಮಾಜ ತಿದ್ದುವ ಕೆಲಸ ರಾಜಕಾರಣಿಗಳಿಂದ ಸಾಧ್ಯವಿಲ್ಲ. ಮಠಾಧೀಶರು ಮತ್ತು ಧರ್ಮ ಗುರುಗಳಿಂದ ಮಾತ್ರ ಈ ಕಾರ್ಯ ಸಾಧ್ಯ’ -ಕೇಂದ್ರ ಪ್ರವಾಸೋದ್ಯಮ ಸಚಿವ ಅನಂತಕುಮಾರ್.
ಅಂದರೆ ಅನಂತಕುಮಾರ್ ಅವರು ಸದ್ಯದಲ್ಲಿಯೇ ರಾಜಕಾರಣ ಬಿಟ್ಟು ಮಠಾದೀಶರಾಗುತ್ತಾರೆಂದು ಭಾವಿಸೋಣವೇ?

ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ಕುಟುಂಬ ಸಮೇತ ಹೋಟೆಲೊಂದರಲ್ಲಿ ಊಟ ಮಾಡಿ ಬಿಲ್ ಪಾವತಿ ಮಾಡಿಯೇ ಹೊರ ನಡೆದ ಸುದ್ದಿ ಬಂದಿದೆ.
ಈ ರೀತಿ ಊಟ ಮಾಡಿದ್ದಕ್ಕೆ ಸ್ವತಃ ಹಣ ಕೊಡುವ ಪದ್ಧತಿ ಪ್ರಾರಂಭಿಸಿದ್ದಕ್ಕೆ ಇತರ ರಾಜಕಾರಣಿಗಳು ಕೃಷ್ಣರನ್ನು ಶಪಿಸುತ್ತಿರಬೇಕು.

ಬೆಂಗಳೂರಿನ ಕುಳ್ಳರ ಸಂಘಕ್ಕೆ ಎಸ್. ಎಂ. ಕೃಷ್ಣ ಅವರು ಮನೆ ನಿವೇಶನಗಳನ್ನು ಹಂಚಿದರು.
ಅವರು ಕಟ್ಟಿಕೊಳ್ಳುವ ಮನೆಗಳು ಕುಳ್ಳಗಿರಬೇಕು ಎಂಬ ಷರತ್ತನ್ನು ಅವರು ವಿಧಿಸಿದ್ದಾರೆಯೇ ಎಂದು ತಿಳಿದು ಬಂದಿಲ್ಲ.

`ಭಾರತದಲ್ಲಿಯೂ ಯಶಸ್ಸು ಸಾಧಿಸಲು ಸಾಧ್ಯ ಎಂಬುದನ್ನು ಬೆಂಗಳೂರಿನಲ್ಲಿರುವ ಮಾಹಿತಿ ತಂತ್ರಜ್ಞಾನ ಕಂಪೆನಿಗಳು ತೋರಿಸಿಕೊಟ್ಟಿವೆ’ -ಪ್ರಧಾನಿ ಅಟಲ್‌ಬಿಹಾರಿ ವಾಜಪೇಯಿ.
ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಈ ಸಾಧನೆಯನ್ನು ಸರಕಾರದ ಯಾವುದೇ `ನೆರವು’ (ಕೆಂಪುಪಟ್ಟಿ, ಕಿರುಕುಳ ಎಂದು ಓದಿಕೊಳ್ಳಿ) ಇಲ್ಲದೆ ಮಾಡಿದ್ದಾರೆ ಎಂಬುದನ್ನು ಜ್ಞಾಪಿಸೋಣ.

ಮತ ಪ್ರಚಾರಕರಿಗೆ ಭಿಕ್ಷೆ ಬೇಡುವ ತರಬೇತಿ ನೀಡುತ್ತಿರುವ ಸುದ್ದಿ ಜರ್ಮನಿಯಿಂದ ಬಂದಿದೆ.
`ಮಾಹಿತಿ ತಂತ್ರಜ್ಞಾನ ಪರಿಣತಿ’ ಜೊತೆ `ಭಿಕ್ಷೆ ಬೇಡುವ ತರಬೇತಿ’ ಯನ್ನೂ ಭಾರತದಿಂದ ಜರ್ಮನಿಗೆ ನಿರ್ಯಾತ ಮಾಡಬಹುದು.

ಬಳುಕಬಲ್ಲ ಸೌರಕೋಶ (solor cell) ವನ್ನು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿಗಳು ತಯಾರಿಸಿದ್ದಾರೆ. ಇನ್ನು ಮುಂದೆ ವಿದ್ಯುತ್ ಉತ್ಪಾದಿಸಬಲ್ಲ ಸೀರೆಗಳನ್ನು ಕೂಡ ತಯಾರಿಸಬಹುದೆಂದು ಅವರು ಹೇಳಿದ್ದಾರೆ.
ಪೋಕರಿಗಳೇ ಎಚ್ಚರಾಗಿರಿ. ಮಾನಿನಿಯರ ಸೀರೆಗೆ ಕೈ ಹಾಕಿ ಶಾಕ್ ಹೊಡೆಸಿಕೊಂಡೀರಿ, ಜೋಕೆ!

`ಚುನಾವಣೆಗೆ ಟಿಕೇಟು ಹಂಚುವಾಗ ದಯವಿಟ್ಟು ಕ್ರಿಮಿನಲ್‌ಗಳನ್ನು ಹೊರಗಿಡಿ’ ಎಂದು ರಾಷ್ಟ್ರಪತಿ ಕೆ. ಆರ್. ನಾರಾಯಣನ್ ರಾಜಕೀಯ ಪಕ್ಷಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಹಾಗೆ ಮಾಡಿದರೆ ಚುನಾವಣೆಯಲ್ಲಿ ಸ್ಪರ್ಧಿಸಲು ಉಮೇದುವಾರರು ಎಲ್ಲಿ ಉಳಿಯುತ್ತಾರೆ?

`ನನಗೆ ಭಾರತದ ಪ್ರಧಾನಮಂತ್ರಿಯಾಗುವ ಆಸೆಯಿಲ್ಲ’ -ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು.
ಎಟುಕದ ದ್ರಾಕ್ಷಿ……???

ಗುಜರಾತ್‌ನಲ್ಲಿ ಸಂಭವಿಸಿದ ಭೂಕಂಪ, ಅಲ್ಲಿ ಕೆಸ್ತರ ಮೇಲೆ ನಡೆದ ದೌರ್ಜನ್ಯದ ಫಲ ಎಂದು ರಾಜ್ಯ ವಿಮಾನಯಾನ ಖಾತೆ ಮಾಜಿ ಸಚಿವ ಟಿ. ಜಾನ್ ಹೇಳಿದ್ದಾರೆ.
ಜಾನ್ ಹೀಗೆ ಹೊಣೆಗೇಡಿಯಾಗಿ ಮಾತನಾಡಿದ್ದಕ್ಕೆ ಏಸುವೇ ಅವರನ್ನು ಶಿಕ್ಷಿಸಿ ಮಂತ್ರಿ ಪದವಿ ಕಳೆದುಕೊಳ್ಳುವಂತೆ ಮಾಡಿದ್ದು ಎಂದು ಕುಹಕಿಗಳು ಆಡಿಕೊಳ್ಳುತ್ತಿದ್ದಾರೆ.

`ನಮ್ಮ ದೇಶದ ಎಲ್ಲ ಸಮಸ್ಯೆಗಳಿಗೆ ಹಿಂದಿನ ಕೇಂದ್ರ ಸರಕಾರಗಳೇ ಹೊಣೆ’ -ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ.
ತಾವು ಹಿಂದೊಮ್ಮೆ ಕೇಂದ್ರ ಸರಕಾರದ ಚುಕ್ಕಾಣಿ ಹಿಡಿದಿದ್ದೆ ಎಂಬುದು ದೇವೇಗೌಡರಿಗೆ ಇಷ್ಟು ಬೇಗನೇ ಮರೆತು ಹೋಯಿತೇ? “ಮೇಲೆ ನೋಡಿ ಉಗುಳಿದರೆ…”.

(೨೦೦೧)

Leave a Reply