ಚಿನಕುರಳಿ – ೧೮

– ಮರ್ಕಟ

ಅಮೇರಿಕಾದ ಅಧ್ಯಕ್ಷ ಬಿಲ್ ಕ್ಲಿಂಟನ್ ಇಂಗ್ಲೆಂಡಿನ ಪಬ್ ಒಂದರಲ್ಲಿ ಊಟ ಮಾಡಿ ಬಿಲ್ ಪಾವತಿ ಮಾಡುವುದನ್ನು ಮರೆತಿದ್ದಾರೆ.
`ಬಿಲ್’ ಕ್ಲಿಂಟನ್ ಹೆಸರು ಈಗ ಅನ್ವರ್ಥನಾಮ.

`ರಾಜಕಾರಣಿಗಳಿಗೆ ಐದು ವರ್ಷಗಳಿಗೊಮ್ಮೆ ಜನಸೇವೆ ಜವಾಬ್ದಾರಿ ನೆನಪಾಗುತ್ತದೆ’ -ಮುಖ್ಯಮಂತ್ರಿ ಎಸ್. ಎಂ. ಕೃಷ್ಣ.
ಸರಕಾರಿ ಅಧಿಕಾರಿಗಳಿಗೆ ಎಂದಿಗೂ ಆಗುವುದಿಲ್ಲ.

`ಜನಸೇವೆಗೆ ಬದ್ಧರಾಗಿರಿ’ ಎಂದು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಸರಕಾರಿ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.
ತಮ್ಮ `ಸೇವೆ’ ಮಾಡಿದ ಜನರ ಸೇವೆಯನ್ನು ಅವರು ಈಗಾಗಲೇ ಮಾಡುತ್ತಿದ್ದಾರಲ್ಲ.

ಅಮೇರಿಕಾದ ಡೇವಿಡ್ ಬ್ಲೇನ್ ಆಹಾರ ಮತ್ತು ನಿದ್ದೆಯಿಲ್ಲದೆ ಮಂಜುಗಡ್ಡೆ ಒಳಗೆ ೫೮ ಗಂಟೆಗಳ ಕಾಲವಿದ್ದು ಅಪೂರ್ವ ವಿಶ್ವದಾಖಲೆ ನಿರ್ಮಿಸಿದ್ದಾರೆ. ಭಾರತೀಯರು ಯಾಕೆ ಸಾಹಸ ಪ್ರದರ್ಶನ ಮಾಡುತ್ತಿಲ್ಲ ಎಂದು ಕೆಲವರು ಕೇಳುತ್ತಿದ್ದಾರೆ.
ಬದುಕುವುದೇ ಒಂದು ದೊಡ್ಡ ಸಾಹಸವಾಗಿರುವಾಗ ಬೇರೆ ಯಾವ ಸಾಹಸ ಪ್ರದರ್ಶಿಸುವ ಅಗತ್ಯವಿದೆ?

ಸತತ ೬೦ಕ್ಕಿಂತ ಹೆಚ್ಚು ದಿನಗಳ ಕಾಲ ಗೈರು ಹಾಜರಾದುದರಿಂದ ಬಾರ್ಜಿಂದರ್ ಸಿಂಗ್ ಹಂದರ್ದ್ ಅವರ ರಾಜ್ಯಸಭೆಯ ಸದಸ್ಯತ್ವವನ್ನು ರದ್ದು ಪಡಿಸಲಾಗಿದೆ.
ಹಾಜರಿ ಪುಸ್ತಕವನ್ನು ತಿದ್ದುಪಡಿ ಮಾಡಿಸುವ `ವ್ಯವಹಾರ’ ಅವರಿಗೆ ಕರಗತವಾಗಿಲ್ಲವೆಂದು ಕಾಣುತ್ತದೆ.

ಮಣಿಪುರ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ. ಮುಖ್ಯಮಂತ್ರಿ, ಜವಾನ, ಕಾನ್‌ಸ್ಟೇಬಲ್ ಇವರುಗಳಿಗೂ ಸಂಬಳ ಕೊಡಲು ಹಣವಿಲ್ಲವಂತೆ.
ಇವರೆಲ್ಲ ಕೇವಲ ಸರ್ಕಾರದ ಸಂಬಳದಿಂದಲೇ ಬದುಕುತ್ತಿಲ್ಲವೆಂದು ಎಲ್ಲರಿಗೂ ಗೊತ್ತು.

`ಹೇಗಾದರೂ ಸರಿ, ಡಿಸಂಬರ್ ೧೫ರ ಒಳಗೆ ಅಂಚೆ ಇಲಾಖೆ ನೌಕರರ ಮುಷ್ಕರವನ್ನು ನಿಲ್ಲಿಸತಕ್ಕದ್ದು’ ಎಂದು ದೆಹಲಿ ಉಚ್ಚ ನ್ಯಾಯಾಲಯ ಸರಕಾರಕ್ಕೆ ಆಜ್ಞೆ ಮಾಡಿದುದರ ಪರಿಣಾಮವಾಗಿ ಮುಷ್ಕರ ನಿಂತಿತು.
ಸರಕಾರಿ ಅಧಿಕಾರಿಗಳು ಬೆಳಿಗ್ಗೆ ಎದ್ದು ಹಲ್ಲು ತೊಳೆಯತಕ್ಕದ್ದು ಎಂದು ನ್ಯಾಯಾಲಯ ಆಜ್ಞೆ ಮಾಡುವ ದಿನವೂ ಬರಬಹುದು.

`ಭಾರತವು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಾರ್ವಭೌಮ ಎಂದು ಹೇಳಿಕೊಳ್ಳುವ ಎಲ್ಲ ಹಕ್ಕನ್ನು ಹೊಂದಿದೆ’- ರಾಷ್ಟ್ರಪತಿ ಕೆ. ಆರ್. ನಾರಾಯಣನ್.
`ಮಾಹಿತಿ ತಂತ್ರಜ್ಞಾನ ಕ್ಷೇತ್ರದ “ಸೇವಾ” ಸಾರ್ವಭೌಮ’ ಎನ್ನುವುದು ಹೆಚ್ಚು ಸೂಕ್ತ.

ಕನ್ನಡಿಗರಲ್ಲಿನ ಅನ್ಯಭಾಷಾ ಪ್ರೇಮದಿಂದಾಗಿ ರಾಜ್ಯದಲ್ಲಿ ಕನ್ನಡಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ ಎಂದು ಸಾರಿಗೆ ಸಚಿವ ಸಗೀರ್ ಅಹಮದ್ ಅವರು ವಿಷಾದ ವೃಕ್ತಪಡಿಸಿದ್ದಾರೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತನ್ನ ವ್ಯವಹಾರ, ಟಿಕೆಟ್ ಮುಂಗಡ ನೀಡಿಕೆ, ನೌಕರರ ಸಂಬಳ ಚೀಟಿ ಇತ್ಯಾದಿಗಳನ್ನು ಗಣಕೀಕರಣದ ನೆಪದಲ್ಲಿ ಕನ್ನಡವನ್ನು ಬಿಟ್ಟು ಇಂಗ್ಲಿಷ್ ಭಾಷೆಯ ಮೂಲಕ ಮಾಡುತ್ತಾ ಕನ್ನಡಕ್ಕೆ ಕೊಡಲಿ ಪೆಟ್ಟು ನೀಡುತ್ತಿದೆ ಎಂದು ನಾವು ವಿಷಾದಿಸುತ್ತಿದ್ದೇವೆ.

`ಇತರರು ಗುಡ್ಡಗಾಡು ಜನರ ಭೂಮಿ ಖರೀದಿಸುವುದನ್ನು ನಿರ್ಬಂದಿಸುವ ಕಾಯಿದೆಯನ್ನು ಮತ್ತಷ್ಟು ಬಲಪಡಿಸಬೇಕು. ಈಗಿರುವ ಕಾಯಿದೆ ಏನೇನೂ ಸಾಲದು’ -ಬಾಬುಲಾಲ್ ಮರಾಂಡಿ, ಜಾರ್ಖಂಡ್ ಮುಖ್ಯಮಂತ್ರಿ.
ಇದೊಂದೇ ಅಲ್ಲ, ಭಾರತದಲ್ಲಿ ನಡೆಯುವ ಎಲ್ಲ ಅನ್ಯಾಯ, ಮೋಸ, ವಂಚನೆ, ಅಪರಾಧಗಳನ್ನು ತಡೆಗಟ್ಟಲು ಯಾವುದೇ ಹೊಸ ಕಾಯಿದೆ ಬೇಕಾಗಿಲ್ಲ. ಇರುವ ಎಲ್ಲ ಕಾಯಿದೆಗಳನ್ನು ಸರಿಯಾಗಿ ಪಾಲಿಸಿದರೆ ಸಾಕು.

`ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರು ಹಿಂದಿನ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಜೊತೆ ಪೈಪೋಟಿ ನಡೆಸುತ್ತಿದ್ದಾರೆ’ -ಮಾಜಿ ಉಪ ಮುಖ್ಯಮಂತ್ರಿ ಸಿದ್ದರಾಮಯ್ಯ.
`ನನ್ನ ಜತೆ ಪೈಪೋಟಿಗಿಳಿಯಲಿ. ನನ್ನನ್ನು ಸೋಲಿಸಲು ಸಾಧ್ಯವಿಲ್ಲ’ – ಎಂದು ಅವರು ಬಾಯಿಬಿಟ್ಟು ಹೇಳಿಲ್ಲ.

`ಈಗ ರಾಜಕೀಯ ಎಂದರೆ ಅಧಿಕಾರ ಹಾಗೂ ಹಣ ಮಾಡುವುದಕ್ಕಾಗಿ ವ್ಯಕ್ತಿಗಳು ಪಡೆದುಕೊಳ್ಳುವ ಪಾಸ್‌ಪೋರ್ಟ್’
-ಎಲ್. ಕೆ. ಅಡ್ವಾಣಿ.
ಇದು ಈಗ ಆಗಿರುವ ಪರಿಸ್ಥಿತಿಯಲ್ಲ. ದೇಶಕ್ಕೆ ಸ್ವಾತಂತ್ರ ಬಂದಾಗಲೇ ಇದರ ಬೀಜ ಹಾಕಲಾಗಿತ್ತು.

`ಹೈಟೆಕ್ ಮುಖ್ಯಮಂತ್ರಿ ಎನಿಸಿಕೊಳ್ಳಲೂ ಯೋಗ್ಯತೆ ಬೇಕು, ಅರ್ಹತೆ ಬೇಕು. ಇದು ಮಣ್ಣಿನ ಮಗ ಎಂದು ಸ್ವಯಂ ಘೋಷಿಸಿಕೊಂಡಂತಲ’ -ಮುಖ್ಯಮಂತ್ರಿ ಎಸ್. ಎಂ. ಕೃಷ್ಣ.
ಖಂಡಿತ. ಮಣ್ಣಿನ ಮಗ ಎನಿಸಿಕೊಳ್ಳಲು ಯಾವ ಯೋಗ್ಯತೆ, ಅರ್ಹತೆಗಳು ಬೇಕಾಗಿಲ್ಲ.

`ರಂಗೋಲಿ ಕಲೆಗೆ ರಾಜ್ಯ ಪ್ರಶಸ್ತಿ ನೀಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ’ -ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ರಾಣಿ ಸತೀಶ್.
ಚಿನ್ನಿ ದಾಂಡುವಿಗೂ ರಾಜ್ಯ ಪ್ರಶಸ್ತಿ ನೀಡಬಹುದು.

`ಆಧುನಿಕ ಯುಗದಲ್ಲಿ ಮತ್ತೆ ತಪ್ಪು ಮಾಡುವ ಮೂಲಕ ಪ್ರಾಚೀನ ಯುಗದಲ್ಲಿ ಮಾಡಿದ ತಪ್ಪನ್ನು ಸರಿಪಡಿಸಲು ಸಾಧ್ಯವಿಲ್ಲ’ -ಪ್ರಧಾನಿ ವಾಜಪೇಯಿ, ಅಯೋಧ್ಯೆ ವಿವಾದದ ಬಗ್ಗೆ.
ಅಂದರೆ ಹಿಂದಿನ ಕಾಲದಲ್ಲಿ ಪುರೋಹಿತಶಾಹಿ ನಡೆಸಿದ್ದ ಅನ್ಯಾಯ ಸರಿಪಡಿಸಲು ಈಗ ಪಾಲಿಸುತ್ತಿರುವ ಜಾತಿ ಆಧಾರಿತ ಮೀಸಲಾತಿಯನ್ನು ರದ್ದುಪಡಿಸೋಣವೇ?

`ಮಹಿಳೆಯರಿಗೆ ಮೀಸಲಾತಿಯ ಅಗತ್ಯವಿಲ್ಲ. ಮೀಸಲಾತಿ ಇದ್ದರೆ ಮಹಿಳೆಯರು ಮುಂಬರಲು ಸಾಧ್ಯವಿಲ್ಲ’ -ಎಸ್. ಎಲ್. ಭೈರಪ್ಪ.
ಮಹಿಳೆಯರಿಗೆ ಮಾತ್ರವಲ್ಲ, ಯಾರಿಗೂ ಯಾವುದೇ ರೀತಿಯ ಮೀಸಲಾತಿಯ ಅಗತ್ಯವಿಲ್ಲ. ಮೀಸಲಾತಿ ಪ್ರಯೋಜನ ಪಡೆದವರಿಂದ ಆ ಕೀಳರಿಮೆಯಿಂದಾಗಿ ಯಾವುದೇ ಉನ್ನತ ಸಾಧನೆ ಸಾಧ್ಯವಿಲ್ಲ.

ಮಹಿಳೆಯರ ಜೀನ್‌ಗಳು ಪುರುಷರ ಜೀನ್‌ಗಳಿಗಿಂತ ಹೆಚ್ಚು ಗಟ್ಟಿಮುಟ್ಟಾಗಿವೆ ಎಂದು ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ.
ಸ್ತ್ರೀ ಸಮುದಾಯವನ್ನು Weaker Sex (ದುರ್ಬಲ ಲಿಂಗ?) ಎಂದು ಕರೆಯುವುದನ್ನು ನಿಲ್ಲಿಸುವುದೊಳ್ಳೆಯದು.

ಶಿವರಾಜ್ ಕುಮಾರ್ ಅವರು ನಾಯಕನಾಗಿ ನಟಿಸುತ್ತಿರುವ ಹೊಸ ಚಿತ್ರದ ಹೆಸರು `ಬಹಳ ಚೆನ್ನಾಗಿದೆ’.
ಚಿತ್ರ ನೋಡಿದ ಎಲ್ಲರೂ `ನಾನು ನೋಡಿದ ಚಿತ್ರ ಬಹಳ ಚೆನ್ನಾಗಿದೆ’ ಎಂದು ಖಂಡಿತ ಹೇಳಬಹುದು.

ವಿಶ್ವನಾಥನ್ ಆನಂದ ಚದುರಂಗದ ವಿಶ್ವ ಚಾಂಪಿಯನ್ ಆಗಿದ್ದಾರೆ.
ಆನಂದ ಈಗ ನಿಜವಾಗಿಯೂ `ವಿಶ್ವನಾಥ’.

(೨೦೦೧)

Leave a Reply