ಚಿನಕುರಳಿ – ೧೭

– ಮರ್ಕಟ

`ಚೀನಾ ಸಿಂಗಾಪುರಗಳಂತೆ ಭ್ರಷ್ಟರನ್ನೆಲ್ಲ ಗಲ್ಲಿಗೆ ಏರಿಸಿ’ -ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು.
ಹಾಗೆ ಮಾಡಿದರೆ ಸಂಸತ್ತಿನ ಕಾರ್ಯಕಲಾಪಗಳಲ್ಲಿ ಪಾಲ್ಗೊಳ್ಳಲು ಸಂಸದರೆಲ್ಲಿ ಉಳಿಯುತ್ತಾರೆ?

`ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದ ತಪ್ಪು ನೀತಿಯಿಂದಾಗಿ ದೇಶದ ಜನತೆಯ ಜೀವನ ದಿನದಿಂದ ದಿನಕ್ಕೆ ಹದಗೆಡುತ್ತಿದೆ’ -ಸೋನಿಯಾ ಗಾಂಧಿ.
ದೇಶದ ಜನತೆಯ ಜೀವನವೋ, ಅಧಿಕಾರಹೀನ ಕಾಂಗ್ರೆಸ್ ಕಾರ್ಯಕರ್ತರ ಜೀವನವೋ ಎಂದು ಕುಹಕಿಗಳು ಕೇಳುತ್ತಿದ್ದಾರೆ.

`ಲಾಯರ್ ಆಗಾಗ ತನ್ನ ಆತ್ಮಸಾಕ್ಷಿಯ ವಿರುದ್ಧ ಹೋರಾಡಬೇಕಾಗುತ್ತದೆ. ಅದಕ್ಕೆ ನಾನು ಲಾಯರ್ ವೃತ್ತಿ ಬಿಟ್ಟು ರಾಜಕೀಯ ಸೇರಿದೆ’ -ಮಾಜಿ ಲೋಕಸಭಾ ಸ್ಪೀಕರ್ ಪಿ. ಎ. ಸಂಗ್ಮಾ.
ರಾಜಕೀಯದಲ್ಲಿ ಇರುವವರಿಗೆ ಆತ್ಮಸಾಕ್ಷಿಯ ಅಗತ್ಯವಿಲ್ಲ ಎಂದು ನಮಗೂ ಗೊತ್ತು.

`ನಮಗೆ ಬೇಕಾಗಿರುವುದು ಮಾಹಿತಿ ತಂತ್ರಜ್ಞಾನವಲ್ಲ, ರೈತರಿಗೆ ಹಾಗೂ ಬಡವರಿಗೆ ಬೇಕಾದ ಅಗತ್ಯ ಸವಲತ್ತು ನೀಡಿದರೆ ಸಾಕು’ -ಮಾಜಿ ಪ್ರಧಾನಿ ದೇವೇಗೌಡ.
ದೇವೇಗೌಡರಿಗೆ ಮಾಹಿತಿ ತಂತ್ರಜ್ಞಾನದ ಬಗ್ಗೆ ಸರಿಯಾದ “ಮಾಹಿತಿ” ನೀಡುವುದು ಅತೀ ಅಗತ್ಯ.

`ರಾಜ್ಯಾದ್ಯಂತ ನಾನು ಪ್ರವಾಸ ಮಾಡಲು ಪಕ್ಷ ಒಂದು ಹೆಲಿಕಾಪ್ಟರ್ ಬಾಡಿಗೆಗೆ ಪಡೆದಿದೆ. ಏಕೆಂದರೆ ರಸ್ತೆಗಳು ಅಪಾರವಾಗಿ ಕೆಟ್ಟಿರುವ ಕಾರಣ ಕಾರಿನಲ್ಲಿ ಪ್ರಯಾಣ ಮಾಡಲು ಸಾಧ್ಯವಿಲ್ಲ’ -ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು.
ಸಮಾನತೆಯನ್ನು ಸಾರುವ ಕಮ್ಯೂನಿಸ್ಟ್ ಪಕ್ಷವು ರಾಜ್ಯದ ಪ್ರತಿಯೊಬ್ಬ ಪ್ರಜೆಗೂ ಹೆಲಿಕಾಪ್ಟರ್ ಸೇವೆಯನ್ನು ಒದಗಿಸುವುದೇ ಎಂದು ಕುಹಕಿಗಳು ಕೇಳುತ್ತಿದ್ದಾರೆ.

`ನನಗೆ ಮರ ಸುತ್ತಿ ಸುತ್ತಿ ಸಾಕಾಗಿ ಹೋಗಿದೆ’ -ಹಿಂದಿ ನಟಿ ಮೊನಿಷಾ ಕೊಯಿರಾಲ.
ನಮಗೂ ಅಷ್ಟೆ. ಸಿನಿಮಾದಲ್ಲಿ ನಟ ನಟಿಯರು ಮರಸುತ್ತುವುದನ್ನು ನೋಡಿ ನೋಡಿ ಸಾಕಾಗಿದೆ.

`ಭಾರತೀಯ ಕ್ರಿಕೆಟಿನಲ್ಲಿ ಮೋಸದಾಟ ನಡೆಯುತ್ತಿದೆ ಎಂದು ಮೊಟ್ಟಮೊದಲು ಹೇಳಿದವನು ನಾನು. ಆದರೆ ಸಿ. ಬಿ. ಐ. ನನ್ನನ್ನೇ ಆರೋಪಿಗಳ ಪಟ್ಟಿಯಲ್ಲಿ ಸೇರಿಸಿದೆ’ -ಮಾಜಿ ಕ್ರಿಕೇಟ್ ಆಟಗಾರ ಮನೋಜ್ ಪ್ರಭಾಕರ್.
ಕಳ್ಳನ ಜಾಡನ್ನು ಕಳ್ಳನೇ ಬಲ್ಲ ಎಂದು ಸಿ. ಬಿ. ಐ. ನವರ ಯೋಚನೆಯೇ?

`ಜನರ ನೋವಿನ ಅನುಭವ ಪಡೆಯಲು ನಾನು ಭಾರತದ ಮೂಲೆ ಮೂಲೆಯಲ್ಲಿರುವ ಹಳ್ಳಿಗಳಿಗೆಲ್ಲ ಭೇಟಿ ನೀಡಲು ಯೋಚಿಸಿದ್ದೇನೆ’ -ಫಿರೋಜ್ ವರುಣ್ ಗಾಂಧಿ, ಮೇನಕಾ ಗಾಂಧಿ-ಸಂಜಯ ಗಾಂಧಿ ಅವರ ಪುತ್ರ.
ಅದಕ್ಕಾಗಿ ಹಳ್ಳಿಗಳಿಗೇಕೆ ಭೇಟಿ ನೀಡಬೇಕು? ವಿದ್ಯುದ್ವೀಪವಿಲ್ಲದ ಗುಡಿಸಲಿನಲ್ಲಿ, ಚಾಪೆ ಮೇಲೆ ಮೂರು ದಿನ ಉಪವಾಸ ಮಲಗಿದರೆ ಸಾಕು.

`ವಿದೇಶಿಯರು ಕಲೆಯನ್ನೋ, ಕಲಾವಿದರನ್ನೋ ಗುರುತಿಸುವ ಮುಂಚೆ ಭಾರತೀಯರು ಅವುಗಳನ್ನು ಗುರುತಿಸುವುದೇ ಇಲ್ಲ’ -ಖ್ಯಾತ ಬಾನ್ಸುರಿವಾದಕ ಹರಿಪ್ರಸಾದ್ ಚೌರಾಸಿಯಾ.
ಸಮಯ ಸಾಧಕರ್‍ನು ಹೊರತುಪಡಿಸಿ ಉಳಿದೆಲ್ಲ ಭಾರತೀಯ ಸಾಧಕರ ಪರಿಸ್ಥಿತಿ ಹೀಗೇ ಇದೆ.

ಮಡಚಿದಾಗ ಒಂದು ಬೆಂಕಿಪೊಟ್ಟಣದಲ್ಲಿ ಹಿಡಿಸಬಹುದಾದ ಸೀರೆ ತಯಾರಾಗಿದೆ -ಸುದ್ದಿ.
ಸೌಂದರ್ಯಸ್ಪರ್ಧೆಗಳಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ನಮ್ಮ ಸುಂದರಿಯರು ಈಗಾಗಲೆ ಬೆಂಕಿಪೊಟ್ಟಣದಲ್ಲಿ ಹಿಡಿಯುವಷ್ಟೆ ಬಟ್ಟೆ ಧರಿಸುತ್ತಿದ್ದಾರಲ್ಲಾ!

`ನಾನೊಬ್ಬ ಶೂದ್ರನಾಗಿರುವುದರಿಂದ ಬೆಳೆಯುವುದಕ್ಕೆ ಸಾಧ್ಯವಾಗಿಲ್ಲ, ಎಲ್ಲೆಲ್ಲೂ ಜಾತಿ ಕಾಟಾಂತ ಸಿನಿಮಾ ರಂಗಕ್ಕೆ ಬಂದೆ. ಇಲ್ಲೂ ಅದೇ ಶಾಪವಾಗಿದೆ’ -ಕನ್ನಡ ಚಿತ್ರನಟ ಜಗ್ಗೇಶ್.
ವರನಟ, ಪದ್ಮಭೂಷಣ ಡಾ| ರಾಜ್‌ಕುಮಾರ್ ಬ್ರಾಹ್ಮಣನಲ್ಲ ಎಂಬುದು ಜಗ್ಗೇಶ್‌ಗೆ ಮರೆತೇ ಹೋಯಿತೇ?

ಮನುಷ್ಯನ ಜೀನ್‌ಗಳಲ್ಲಿ ಪ್ರಾಣಿಗಳ ಜೀನ್‌ಗಳೂ ಇವೆಯೆಂದು ವಿಜ್ಞಾನಿಗಳೂ ಪತ್ತೆ ಹಚ್ಚಿದ್ದಾರೆ.
ಮನಷ್ಯರು ಆಗಾಗ ಪ್ರಾಣಿಗಳಂತೆ ವರ್ತಿಸುವುದು ಯಾಕೆ ಎಂದು ಈಗ ತಿಳಿಯಿತು.

ಭಾರತದ ಪ್ರಿಯಾಂಕ ಛೋಪ್ರ ವಿಶ್ವಸುಂದರಿ-೨೦೦೦ ಆಗಿ ಆಯ್ಕೆಯಾಗಿದ್ದಾರೆ.
ಮಾರಾಟ ಸಾಕಷ್ಟಿಲ್ಲವೆಂದು ಕೊರಗುತ್ತಿರುವ, ಭಾರತದಲ್ಲಿ ಬೀಡುಬಿಟ್ಟಿರುವ, ಬಹುರಾಷ್ಟ್ರೀಯ ಸೌಂದರ್ಯ ಸಾಧನ ತಯಾರಕ ಕಂಪೆನಿಗಳಿಗೆ ಸಂತಸದ ಸುದ್ದಿ.

`ಒಬ್ಬ ಭಾರತೀಯಳಾದ್ದರಿಂದ ನಾನು ಪಡೆದುಕೊಂಡಿರುವ ಮೌಲ್ಯಗಳು ಹಾಗು ನೀತಿಗಳು ನನ್ನಲ್ಲಿ ಬಲವಾಗಿ ಹುದುಗಿಕೊಂಡಿವೆ. ಇವು ನನ್ನನ್ನು ಎಲ್ಲರಿಗಿಂತ ಭಿನ್ನವಾಗಿ ನಿಲ್ಲಿಸುತ್ತವೆ’ -ಪ್ರಿಯಾಂಕ ಛೋಪ್ರ.
ದೇಹ ಸೌಂದರ್ಯ ಪ್ರದರ್ಶನ ಭಾರತೀಯ ಮೌಲ್ಯ ಹಾಗೂ ನೀತಿಯಲ್ಲಿ ಸೇರಿಲ್ಲವಲ್ಲ!

೧೦೮ ದಿನಗಳ ಕಾಲ ವೀರಪ್ಪನ್ ಸೆರೆಯಲ್ಲಿದ್ದು ಬಿಡುಗಡೆಯಾಗಿ ಬಂದ ಡಾ| ರಾಜ್‌ಕುಮಾರ್ ಅವರು ನರಹಂತಕ ವೀರಪ್ಪನ್‌ನ್ನು ಕೆಟ್ಟವನು ಎಂದು ಇದುವರೆಗೆ ಹೇಳಿಲ್ಲ.
`ಒಬ್ಬ ಬ್ರಾಹ್ಮಣನನ್ನೂ, ನಾಯಿಯನ್ನೂ, ನಾಯಿಮಾಂಸ ತಿನ್ನುವವನನ್ನೂ ಸಮಾನವಾಗಿ ಕಾಣುವವನೇ ಯೋಗಿ’ ಎಂದು ಭಗವದ್ಗೀತೆಯಲ್ಲಿ ಹೇಳಿರುವುದನ್ನು ಯೋಗಾಭ್ಯಾಸ ಕಲಿತಿರುವ ಡಾ| ರಾಜ್ ಅಕ್ಷರಶಃ ಪಾಲಿಸುತ್ತಿರುವಂತಿದೆ.

`ಸಂವಿಧಾನದಲ್ಲಿ ಅವಕಾಶ ಇದ್ದರೆ ನಾನು ಮೂರನೆಯ ಬಾರಿಗೆ ಅಮೆರಿಕದ ಅಧ್ಯಕ್ಷ ಚುನಾವಣೆಯ ಕಣಕ್ಕೆ ಇಳಿಯಲು ಸಿದ್ಧವಿದ್ದೆ. ಜತೆಗೆ ಜಯಶಾಲಿಯಾಗುತ್ತಲೂ ಇದ್ದೆ’ -ಬಿಲ್ ಕ್ಲಿಂಟನ್.
ಭಾರತದಲ್ಲಿ ಆಗಿದ್ದರೆ ಸಂವಿಧಾನವನ್ನೇ ತಿದ್ದುಪಡಿ ಮಾಡಬಹುದಿತ್ತು.

ಹೆಂಗಸರು ಮಾತನಾಡುವಾಗ ಗಂಡಸರು ಗಮನವಿಟ್ಟು ಕೇಳಿಸಿಕೊಳ್ಳುವುದಿಲ್ಲ ಎಂಬುದನ್ನು ವಿಜ್ಞಾನಿಗಳು ಅತಿ ದುಬಾರಿಯಾದ ಮೆದುಳಿನ ಮ್ಯಾಗ್ನೆಟಿಕ್ ರೆಸೊನನ್ಸ್ ಟೊಮಾಗ್ರಫಿ (ಚುಂಬಕೀಯ ಪ್ರತಿಸ್ಪಂದನ ಬುರುಡೆಚಿತ್ರ) ತಂತ್ರಜ್ಞಾನವನ್ನು ಬಳಸಿ ಕಂಡು ಹಿಡಿದಿದ್ದಾರೆ.
ಇದು ಶತಮಾನಗಳಿಂದ ತಿಳಿದಿರುವ ಸತ್ಯ. ಇದಕ್ಕಾಗಿ ಅಷ್ಟು ಖರ್ಚು ಮಾಡುವ ಅಗತ್ಯವೇನಿತ್ತು?

ಡಿಸಂಬರ್ ೧೫ರ ಮೊದಲು ಬೆಂಗಳೂರಿನ ಎಲ್ಲ ರಸ್ತೆ ಹೊಂಡಗಳನ್ನು ಮುಚ್ಚಲಾಗುವುದು ಎಂದು ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ತಿಂಗಳ ಹಿಂದೆ ಹೇಳಿದ್ದರು.
ಯಾವ ಇಸವಿಯ ಡಿಸಂಬರ್ ೧೫ ಎಂದು ಅವರು ಹೇಳಿಲ್ಲವಾದುದರಿಂದ ಅವರನ್ನು “ರಸ್ತೆ ಹೊಂಡಗಳು ಇನ್ನೂ ಹಾಗೆ ಇವೆಯಲ್ಲಾ” ಎಂದು ಪ್ರಶ್ನಿಸುವಂತಿಲ್ಲ.

ತಿಂಗಳ ಕಾಲ ಗುದ್ದಾಟದ ನಂತರ ಕೊನೆಗೂ ಜಾರ್ಜ್ ಡಬ್ಲ್ಯೂ ಬುಷ್ ಅವರು ಅಮೇರಿಕದ ಅಧ್ಯಕ್ಷರೆಂದು ಘೋಷಿಸಲಾಗಿದೆ.
ನಾಯಕನ ಆಯ್ಕೆಯ ಒಳಗುಟ್ಟನ್ನು ಅಮೇರಿಕಾಕ್ಕೆ ರಫ್ತು ಮಾಡಲು ಉತ್ಸುಕರಾಗಿದ್ದ ಭಾರತದ ರಾಜಕೀಯ ಪಕ್ಷಗಳಿಗೆ ನಿರಾಸೆಯಾಗಿದೆ.

[೨೦೦೦]

Leave a Reply