ಚಿನಕುರಳಿ – ೧೪

– ಮರ್ಕಟ

ಮಾಹಿತಿ ತಂತಜ್ಞಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಗೈದ ಅನಿವಾಸಿ ಭಾರತೀಯರನ್ನು ಪ್ರಧಾನಿ ವಾಜಪೇಯಿಯವರು ಶ್ಲಾಘಿಸಿ ಅವರಿಗೆ ಧನ್ಯವಾದಗಳನ್ನು ಸಮರ್ಪಿಸಿದ್ದಾರೆ.
ಹಾಗೆಯೇ ಭಾರತದಲ್ಲಿ ಉಳಿದು ದೇಶಕ್ಕಾಗಿ ಶ್ರಮಿಸುತ್ತಿರುವ ನಿವಾಸಿ ಭಾರತೀಯರನ್ನೂ ಶ್ಲಾಘಿಸಿದ್ದರೆ ಚೆನ್ನಾಗಿತ್ತು.

`ಬೆಂಗಳೂರನ್ನು ಪೂರ್ವದ ಸಿಲಿಕಾನ್ ವ್ಯಾಲಿ ಎಂದು ಕರೆಯಲಾಗುತ್ತಿದೆ. ಆದರೆ ನಮಗೆ ಹಲವಾರು ಬೆಂಗಳೂರುಗಳು ಬೇಕಾಗಿವೆ’ -ಪ್ರಧಾನಿ ಅಟಲ ಬಿಹಾರಿ ವಾಜಪೇಯಿ.
ಖಂಡಿತ. ಮಾಹಿತಿ ತಂತ್ರಜ್ಞಾನದಲ್ಲಿ ಮುಂದುವರಿದ ಬೆಂಗಳೂರಿನ ಜತೆ, ಹೊಂಡ ತುಂಬಿದ ರಸ್ತೆ, ಅಸಮರ್ಪಕ ವಿದ್ಯುತ್ ಸಂಪರ್ಕ ಮತ್ತು ಅಸ್ತಿತ್ವದಲ್ಲಿಲ್ಲದ ಚರಂಡಿ ವ್ಯವಸ್ಥೆಗಳನ್ನು ಉಚಿತವಾಗಿ ನೀಡಲಾಗುವುದು.

ಭಾರತೀಯ ಕ್ರಿಕೆಟ್ಟಿಗೆ ಈಗ ಬೇಕಾಗಿರುವುದು ಉತ್ತಮ ಶಿಕ್ಷಕ (ಕೋಚ್) ಅಲ್ಲ, ದೇವರು -ಸುನೀಲ್ ಗವಾಸ್ಕರ್.
ಸದ್ಯದ ಭಾರತೀಯ ಕ್ರಿಕೆಟನ್ನು ದೇವರೇ ಕಾಪಾಡಬೇಕು.

ಇನ್ನು ಹದಿನೈದು ದಿನ ಅಧಿಕಾರದಲ್ಲಿದ್ದಿದ್ದರೆ ವೀರಪ್ಪನನ್ನು ಬಂಧಿಸಿ ಬಿಡುತ್ತಿದ್ದೆ -ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ.
ಈ ಮಾತಿಗೆ ವರ್ಷದ ಶ್ರೇಷ್ಠ ಹಾಸ್ಯ (ಜೋಕು) ಪ್ರಶಸ್ತಿ ನೀಡಬಹುದು.

ವಿದ್ಯುತ್ ಬಿಲ್ ಪಾವತಿ ಮಾಡದಿರುವುದರಿಂದ ಕರ್ನಾಟಕ ನಗರ ಒಳಚರಂಡಿ ಮಂಡಳಿಯ ವಿದ್ಯುತ್ ಸಂಪರ್ಕವನ್ನು ಕಡಿದು ಹಾಕಲಾಗುವುದು ಎಂದು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ಎಚ್ಚರಿಕೆ ನೀಡಿದೆ.
ಅಸ್ತಿತ್ವದಲ್ಲಿಲ್ಲದ ಒಳಚರಂಡಿಗಳಿಗೆ ಇದರಿಂದ ಏನೂ ತೊಂದರೆಯಾಗದು.

`ದೇವತಾ ಮನುಷ್ಯ ಕಾಡಿನಲ್ಲಿದ್ದಾರೆ. ಅವರನ್ನು ಯಾರು ಹೇಗೆ ಕರೆತರುತ್ತಾರೆ ಎಂಬುದು ಮುಖ್ಯವಲ್ಲ. ನಮಗೆ ಅಪ್ಪಾಜಿ ಬೇಕು’ -ಶಿವರಾಜ್‌ಕುಮಾರ್.
ಗುರಿ ಮಾತ್ರವಲ್ಲ, ದಾರಿಯೂ ಶ್ರೇಷ್ಠವಾಗಿರಬೇಕು ಎಂದಿದ್ದರು ಮಹಾತ್ಮಾಗಾಂಧಿ.

`ರಾಜ್ ಅಪಹರಣವಾದ ೪೫ ದಿನಗಳಿಂದ ಕಣ್ಣಿಗೆ ನಿದ್ದೆ ಹತ್ತಿಲ್ಲ, ಹೊಟ್ಟೆಗೆ ಅನ್ನ ಸೇರಿಲ್ಲ, ನನ್ನ ಕಷ್ಟ ನಿಮಗ್ಯಾರಿಗೂ ಅರ್ಥವಾಗೊಲ್ಲ’ -ಕರ್ನಾಟಕದ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ.
ಖಂಡಿತ ಅರ್ಥವಾಗುತ್ತೆ. ಹಿಂದಿನವರು ಉಳಿಸಿ ಹೋದ ಹೇಸಿಗೆಯನ್ನು ಬಾಚಬೇಕಾಗಿ ಬಂದ ಕೃಷ್ಣರಿಗೆ ನಮ್ಮ ಅನುಕಂಪ ಇದೆ.

`ಪ್ರಸ್ತುತ ರಾಜಕಾರಣ ವೈಯಕ್ತಿಕ ಆಕಾಂಕ್ಷೆಗಳನ್ನು ಪೂರೈಸಿಕೊಳ್ಳುವ ಸಾಧನಗಳಾಗಿವೆ. ರಾಜಕೀಯ ಪಕ್ಷಗಳು ಅಧಿಕಾರಕ್ಕಾಗಿ ತಮ್ಮ ತತ್ತ್ವಗಳಿಗೆ ತಿಲಾಂಜಲಿ ನೀಡಿವೆ’ -ಸೋನಿಯಾ ಗಾಂಧಿ, ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ.
ಮೇಲೆ ನೋಡಿ ಉಗುಳಿದರೆ ಮುಖದ ಮೇಲೆ ಬೀಳುತ್ತದೆ.

ಡಾ| ರಾಜ್‌ಕುಮಾರ್ ಅಪಹರಣವಾದಂದಿನಿಂದ ಕರ್ನಾಟಕ ಸರ್ಕಾರದ ಬಹುತೇಕ ಇಲಾಖೆಗಳಲ್ಲಿ ಕೆಲಸಗಳೇ ನಡೆಯುತ್ತಿಲ್ಲ.
ಸರಕಾರಿ ನೌಕರರು ಊಟಮಾಡುವುದನ್ನು ಮಾತ್ರ ನಿಲ್ಲಿಸಿಲ್ಲ.

`ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಎಲ್ಲರಿಗೂ ಅವಕಾಶ ದೊರೆಯುತ್ತಿಲ್ಲ. ಹಿಂದುಳಿದ ವರ್ಗಗಳಿಗೆ ತೀವ್ರ ಅನ್ಯಾಯ ಆಗುತ್ತಿದೆ’ -ಮಾಜಿ ಉಪಮುಖ್ಯಮಂತ್ರಿ ಸಿದ್ಧರಾಮಯ್ಯ.
.ದಲಿತ, .ಹಿಂದುಳಿದವರು, ಇತ್ಯಾದಿ ಹೊಸ ಡೊಮೈನ್‌ಗಳನ್ನು ತೆರೆಯಲು ವಿಶ್ವ ಅಂತರಜಾಲ ಸಮುದಾಯಕ್ಕೆ ([http://www.w3c.org|world wide web consortium]) ಬೇಡಿಕೆ ಸಲ್ಲಿಸಬಹುದು.

`ನೂರು ಕೋಟಿ ಜನಸಂಖ್ಯೆ ಹೊಂದಿರುವ ದೇಶದ ಹೆಸರು ಒಲಂಪಿಕ್ಸ್ ಪದಕ ಪಟ್ಟಿಯಲ್ಲಿ ಇರುವುದಿಲ್ಲ ಎಂದರೆ ನಾಚಿಕೆಯಾಗುತ್ತದೆ’ ಕೆ. ಪಿ. ಎಸ್. ಗಿಲ್, ಭಾರತ ಹಾಕಿ ಫೆಡರೇಶನ್ ಅಧ್ಯಕ್ಷ.
ಯಾಕಿಲ್ಲ? ಜನಸಂಖ್ಯೆಯಲ್ಲಿ ಈಗಾಗಲೇ ನಾವು ಬೆಳ್ಳಿಯ ಪದಕ ಗಿಟ್ಟಿಸಿದ್ದೇವೆ. ಚಿನ್ನದ ಪದಕದತ್ತ ದಾಪುಗಾಲು ಹಾಕುತ್ತಿದ್ದೇವೆ.

`ಸಾಹಿತ್ಯ ಚಳವಳಿಗಳು ಕೇವಲ ಭಾಷಣಗಳಾಗಿವೆ. ಆದ್ದರಿಂದ ಸಾಹಿತ್ಯ ಕೂಡ ಭಾಷಣದಂತೆ ಪೂಳ್ಳಾಗಿದೆ’ – ಎಸ್.ಎಲ್.ಬೈರಪ್ಪ.
ಇದನ್ನು ಅವರು ಮೈಸೂರಿನಲ್ಲಿ ನಡೆದ ಸಾಹಿತ್ಯಕ ಸಭೆಯೊಂದರಲ್ಲಿ ಭಾಷಣ ಮಾಡುತ್ತಾ ಹೇಳಿದರು.

`ನಾವು ಕಂಪ್ಯೂಟರ್ ಕಲಿತಿಲ್ಲ ಎಂದು ಕಂಪ್ಯೂಟರ್‌ವಾಲಾಗಳು ನಮ್ಮನ್ನು ಗೇಲಿ ಮಾಡುತ್ತಿದ್ದಾರೆ’ -ಲಾಲೂ ಪ್ರಸಾದ ಯಾದವ್, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಬಗ್ಗೆ.
ಲಾಲೂ ಪ್ರಸಾದ್ ಯಾದವರಿಗೆ dummys ಪುಸ್ತಕಗಳನ್ನು ಕಳುಹಿಸಿಕೊಡೋಣ.

ಸಿಡ್ನಿ ಒಲಿಂಪಿಕ್ಸ್ ಗದ್ದಲದಿಂದ ಅಲ್ಲಿಯ ನಾಯಿಗಳಿಗೆ ಕಿವುಡು ಹಾಗೂ ಇತರ ಕಾಯಿಲೆಗಳು ಕಾಣಿಸಿಕೊಂಡಿವೆ.
ಶಬ್ದಮಾಲಿನ್ಯಕ್ಕೆ ಹೊಂದಿಕೊಂಡಿರುವ ಬೆಂಗಳೂರಿನ ಬೀದಿ ನಾಯಿಗಳನ್ನು ಸಿಡ್ನಿಗೆ ನಿರ್ಯಾತ ಮಾಡಬಹುದು.

`ಭಾರತದಲ್ಲಿ ತಂತ್ರಾಂಶ ತಯಾರಿ ಕಡಿಮೆ ವೆಚ್ಚದಲ್ಲಿ ಆಗುತ್ತದೆ ಎಂಬ ಕಾರಣದಿಂದ ಭಾರತದಲ್ಲಿ ತಂತ್ರಾಂಶ ತಯಾರಿ ಮಾಡಿಸುತ್ತಿದ್ದೇವೆ ಎಂಬ ಆಪಾದನೆ ಸುಳ್ಳು. ಭಾರತದಲ್ಲಿ ತಂತ್ರಾಂಶ ತಯಾರಿಯ ಗುಣಮಟ್ಟ ಅತ್ಯುತ್ಕೃಷ್ಟವಾಗಿದೆ’ -ಬಿಲ್ ಗೇಟ್ಸ್, ಮೈಕ್ರೋಸಾಫ್ಟ್ ಕಂಪೆನಿಯ ಮುಖ್ಯಸ್ಥ.
ತಂತ್ರಾಂಶ ತಯಾರಿಯಲ್ಲಿಯ ಉತ್ಕೃಷ್ಟತೆಯ ಪೂರ್ಣಫಲ ಭಾರತಕ್ಕೇ ಸಿಗುವಂತಾಗಲಿ ಎಂದು ನಾವು ಆಶಿಸುತ್ತೇವೆ.

ಎಲ್ಲ ಗ್ರಾಹಕರು ವಿದ್ಯುತ್ ಬಾಕಿಯನ್ನು ಪೂರ್ಣವಾಗಿ ನವಂಬರ್ ೩೦ರ ಒಳಗೆ ಪಾವತಿಸಿದಲ್ಲಿ ಕರ ಸಮಾಧಾನ ಯೋಜನೆಯಡಿ ಬಡ್ಡಿ ಮನ್ನ ಮಾಡಲು ಕರ್ನಾಟಕ ಸರ್ಕಾರ ತೀರ್ಮಾನಿಸಿದೆ.
ಪ್ರಾಮಾಣಿಕತೆಯಿಂದ ಅಸಲು, ದಂಡ, ಬಡ್ಡಿ ಕಟ್ಟಿದವರು ಈಗ ಕೈ ಕೈ ಹೊಸೆಯುತ್ತಿದ್ದಾರೆ.

ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಿಸಿದೊಡನೆ ಬಸ್ಸು ದರ ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.
ಬೆಲೆ ಹೆಚ್ಚಳವನ್ನು ಪ್ರತಿಭಟಿಸಿ ಬಸ್ಸುಗಳನ್ನು ಸುಡಲು ಕಷ್ಟ ಸಾಧ್ಯ. ಸುಡಲು ಬೇಕಾದ ಪೆಟ್ರೋಲು, ಸೀಮೆ ಎಣ್ಣೆಗಳ ಬೆಲೆಯೂ ಹೆಚ್ಚಾಗಿರುತ್ತದೆ.

ವೀರಪ್ಪನ್‌ನ ಶರತ್ತುಗಳಿಗೆ ತಲೆಬಾಗಿ, ನೂರಾರು ಜನರ, ದಕ್ಷ ಪ್ರಾಮಾಣಿಕ ಪೋಲಿಸ್ ಅಧಿಕಾರಿಗಳಾದ ಹರಿಕೃಷ್ಣ, ಶಕೀಲ್ ಅಹಮದ್ ಮುಂತಾದವರ ಕೊಲೆಗೈಯಲು ಸಹಾಯಕಾರಿಯಾದ ಟಾಡಾ ಬಂಧಿಗಳ ಬಿಡುಗಡೆಗೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳು ತೀರ್ಮಾನಿಸಿವೆ.
ಇಂತಹ ಹೇಯ ಕೃತ್ಯ ಗೈದವರನ್ನೇ ಬಿಡಬಹುದಾದರೆ ಚಿಕ್ಕ ಪುಟ್ಟ ತಪ್ಪು ಮಾಡಿದ ಸಾವಿರಾರು ಜನರನ್ನು ಜೈಲುಗಳಿಂದ ಬಿಡುಗಡೆ ಮಾಡಬಹುದು. ಹಾಗೆ ಖಾಲಿಯಾದ ಜೈಲುಗಳನ್ನು ಶಾಲೆಗಳಾಗಿ ಪರಿವರ್ತಿಸಿದರೆ ನಿಜವಾಗಿ ಲೋಕೋಪಯೋಗವಾಗುವುದು.

Leave a Reply