ಚಿನಕುರಳಿ – ೧೩
– ಮರ್ಕಟ
ವೀರಪ್ಪನನ್ನು ಹಿಡಿಯುವುದಿರಲಿ ಅವನು ಎಲ್ಲಿದ್ದಾನೆಂದು ಪತ್ತೆ ಹಚ್ಚಲು ಕೂಡ `ಕರ್ನಾಟಕ ಮೀಸಲು ಪಡೆ’ ಅಸಮರ್ಥವಾಗಿದೆ. ವೀರಪ್ಪನ ಥರವೇ ದೊಡ್ಡ ಮೀಸೆ ಹೊತ್ತ ನಕ್ಕೀರನ್ ಸಂಪಾದಕ ಗೋಪಾಲ್ ನಿರಾಯಾಸವಾಗಿ ವೀರಪ್ಪನ್ ಬಳಿ ಮತ್ತೆ ಮತ್ತೆ ಹೋಗಿ ಬರುತ್ತಿದ್ದಾರೆ.
ವೀರಪ್ಪನನ್ನು ಹಿಡಿಯಲು `ಕರ್ನಾಟಕ ಮೀಸೆ ಪಡೆ’ ಸ್ಥಾಪಿಸುವದು ಒಳಿತು.
ಕ್ರಿಕೆಟ್ ಮೂರ್ಖರ ಆಟ. ದೈಹಿಕವಾಗಿ ಅನರ್ಹರಾದವರೂ ಕ್ರಿಕೆಟ್ ಆಡಬಹುದು -ಕೆ. ಪಿ. ಎಸ್. ಗಿಲ್, ಹಾಕಿ ಫೆಡರೇಶನ್ ಮುಖ್ಯಸ್ಥ.
ಕ್ರಿಕೆಟ್ ಆಡಲು ಬೇಕಾಗಿರುವ ಅರ್ಹತೆ ಒಂದೇ -ಹಣ ತೆಗೆದುಕೊಂಡು ಸೋಲಲು ಸಿದ್ಧನಾಗಿರುವುದು.
ಕೇಡಿಗಳನ್ನು ಸುದ್ದಿ ಮಾಧ್ಯಮಗಳು ವೈಭವೀಕರಿಸುತ್ತಿವೆ -ಕೆ. ಆರ್. ನಾರಾಯಣನ್, ರಾಷ್ಟ್ರಾಧ್ಯಕ್ಷರು.
ಕೇಡಿಗಳೇ ದೇಶವನ್ನು ಆಳುತ್ತಿರಲು ಅವರು ಇನ್ನೇನು ತಾನೆ ಮಾಡಲು ಸಾಧ್ಯ?
ನನ್ನ ಬಹುದೊಡ್ಡ ಶಕ್ತಿ ಎಂದರೆ ನನ್ನ ಆಂತರಿಕ ಸೌಂದರ್ಯ -ವಿಶ್ವಸುಂದರಿ ಲಾರಾದತ್ತ.
`ಆಂತರಿಕ ಸೌಂದರ್ಯ’ವನ್ನು ಬಹಿರಂಗ ಪ್ರದರ್ಶನ ಮಾಡಿದ್ದಕ್ಕೆ ತಾನೆ ವಿಶ್ವಸುಂದರಿ ಆಗಿದ್ದು.
ಪ್ರಸಕ್ತ ರಾಜಕಾರಣಿಗಳಲ್ಲಿ ಉತ್ತಮ ನಟನಾಗುವ ಎಲ್ಲ ಅರ್ಹತೆಗಳೂ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರಿಗೆ ಇದೆ -ಮಹೇಶ್ ಭಟ್, ಚಿತ್ರ ನಿರ್ದೇಶಕ.
ಅಣ್ಣಾವ್ರು ಹೇಗೂ ವೀರಪ್ಪನ್ ಒತ್ತೆಯಾಳಾಗಿ ಕಾಡಿನಲ್ಲಿರುವುದರಿಂದ ಎಮ್ಮೆ ಹಾಡಿನ ಹೊಸ ಆವೃತ್ತಿಯನ್ನು ಲಾಲೂ ಯಾದವರಿಂದ ಮಾಡಿಸಬಹುದು.
ವರನಟ ರಾಜ್‌ಕುಮಾರ್ ಅಪಹರಣ ಬಿಕ್ಕಟ್ಟು ಒಳ್ಳೆಯ ಬಟ್ಟೆ ಮುಳ್ಳು ಪೊದೆಯ ಮೇಲೆ ಬಿದ್ದಂತಾಗಿದೆ -ಎಂ. ಕರುಣಾನಿಧಿ, ತಮಿಳುನಾಡು ಮುಖ್ಯಮಂತ್ರಿ.
ಮುಳ್ಳು ಪೊದೆಯನ್ನು ಗೊತ್ತಿದ್ದು ಗೊತ್ತಿದ್ದು ಬೆಳೆಯಲು ಬಿಟ್ಟದ್ದು ಯಾಕೆ?
ಕಾಶ್ಮೀರದಲ್ಲಿ ನಡೆಯುತ್ತಿರುವ ಸ್ವಾತಂತ್ರ ಹೋರಾಟಕ್ಕೆ ಪಾಕಿಸ್ತಾನ ಸದಾ ಬೆಂಬಲ ನೀಡುತ್ತದೆ. ಆದರೆ ನೆರೆ ರಾಷ್ಟ್ರಗಳೊಡನೆ ಶಾಂತಿಯುತವಾಗಿ ಬಾಳ್ವೆ ನಡೆಸುವುದು ಪಾಕಿಸ್ತಾನದ ಉದ್ದೇಶ -ಪರ್ವೇಜ್ ಮುಶ್ರಾಫ್, ಪಾಕಿಸ್ತಾನದ ಸೇನಾ ಆಡಳಿತಗಾರ.
`ತೊಟ್ಟಿಲೂ ತೂಗುತ್ತೇವೆ, ಮಗುವನ್ನೂ ಚಿವುಟುತ್ತೇವೆ’ ಎಂದಂತಾಯಿತು.
ವೀರಪ್ಪನ್ ಆಡಗುತಾಣದ ಮೇಲೆ ಧಾಳಿ ನಡೆಸಿ ಕುಪ್ರಸಿದ್ಧ ಅಪರಾಧಿಯನ್ನು ಗುಂಡು ಹೊಡೆದು ಸಾಯಿಸಬೇಕು -ಜಯಲಲಿತ.
ಅದನ್ನು ಅವರು ಮುಖ್ಯಮಂತ್ರಿಯಾಗಿದ್ದಾಗ ಯಾಕೆ ಮಾಡಲಿಲ್ಲ?
[೨೦೦೦]