Press "Enter" to skip to content

ಚಿನಕುರಳಿ – ೧೦

– ಮರ್ಕಟ

ಬೆಂಗಳೂರಿನ ರಸ್ತೆಗಳು ತುಂಬಾ ಕೆಟ್ಟಿವೆ ಎಂದು ನನಗೆ ಯುರೋಪಿನ ರಸ್ತೆಗಳನ್ನು ನೋಡಿದ ನಂತರ ಮನವರಿಕೆಯಾಗಿದೆ. -ಸಚಿವ ಅನಂತನಾಗ್.
ಇದನ್ನು ಮನವರಿಕೆ ಮಾಡಿಕೊಳ್ಳಲು ಅವರು ಸಾರ್ವಜನಿಕರ ದುಡ್ಡಿನಲ್ಲಿ ಯುರೋಪಿನ ಪ್ರವಾಸ ಕೈಗೊಳ್ಳಬೇಕಾಗಿರಲಿಲ್ಲ.

ಉಪೇಂದ್ರ `A’ ಚಿತ್ರ ಮಾಡಿದರೆಂದು ಪ್ರವೀಣ ನಾಯಕ್ `Z’ ಚಿತ್ರ ಮಾಡಿದರು.
ಈಗ ಉಪೇಂದ್ರ `ಉಪೇಂದ್ರ’ ಎಂಬ ಹೆಸರಿನ ಚಿತ್ರ ಮಾಡುತ್ತಿದ್ದಾರೆಂದು ಪ್ರವೀಣ ನಾಯಕ್ `ನಾಯಕ್ ಪ್ರವೀಣ’ ಎಂಬ ಚಿತ್ರ ಮಾಡುತ್ತಾರೆಯೆ?

ಗಿರೀಶ ಕಾರ್ನಾಡರಿಗೆ ಜ್ಞಾನಪೀಠ ಪ್ರಶಸ್ಥಿ ಬಂದಾಗ ಕೆಲವರು ಅಪಸ್ವರವೆತ್ತಿದ್ದಾರೆ.
ಎಟುಕದ ದ್ರಾಕ್ಷಿ ಹುಳಿ ಎನ್ನಬಹುದೆ?

ಇತ್ತೀಚೆಗಿನ ಕನ್ನಡ ಚಲನಚಿತ್ರಗಳ ಹೆಸರುಗಳನ್ನು ನೋಡಿರಿ -A, AK-47, Mr.X, Z, …
ಈ ವರ್ಷದ ಕನ್ನಡ ಚಿತ್ರಗಳನ್ನು A to Z ಎಂದು ಕರೆಯಬಹುದೇನೋ?

`ಸಿಂಗಾಪುರಕ್ಕೆ ಹೆದಾಗ ಅಲ್ಲಿನ ಸೋಫ್ಟ್‌ವೇರ್ ಟೆಕ್ನೋಲೋಜಿ ಪಾರ್ಕ್ ಹಾಗು ಕಂಪ್ಯೂಟರ್‌ಗಳನ್ನು ನೋಡಿದ್ದೇನೆ’ -`ಮಾಹಿತಿ ತಂತ್ರಜ್ಞಾನದ ಬಗ್ಗೆ ನಿಮಗೇನು ಗೊತ್ತು’ ಎಂದು ಕೇಳಿದಾಗ ಇತ್ತೀಚೆಗಷ್ಟೆ ಮಾಹಿತಿ ತಂತ್ರಜ್ಞಾನ ಖಾತೆಗೆ ಮಂತ್ರಿಯಾದ ಅನಂತನಾಗ್ ಹೇಳಿದ್ದಾರೆ.
ಕೇವಲ ನೋಡುವುದರಿಂದಲೆ ಪ್ರವೀಣತೆ ಪಡೆಯಬಹುದು ಎಂಬುದು ಅಮೇರಿಕ ದೇಶದವರಿಗೆ ಗೊತ್ತಿಲ್ಲದಿರುವುದು ನಮ್ಮ ಅದೃಷ್ಟ. ಅವರಿಗೆ ಅದು ಗೊತ್ತಿದ್ದರೆ ನಮ್ಮ ಹಲವಾರು ಹುಡುಗರು ಅಮೇರಿಕಾಕ್ಕೆ ಹೋಗುವ ಅವಕಾಶ ಕಳೆದುಕೊಳ್ಳುತ್ತಿದ್ದರು.

ಇನ್ನು ಹದಿನೈದು ದಿನಗಳಲ್ಲಿ ಬೆಂಗಳೂರಿನ ರಸ್ತೆ ಹೆಂಡಗಳು ಇತಿಹಾಸವಾಗುತ್ತವೆ -ಬೆಂಗಳೂರಿನ ಮಾಜಿ ಮೇಯರ್ ಹುಚ್ಚಪ್ಪ.
ಈಗ ಇತಿಹಾಸವಾಗಿದೆ -ಹೆಂಡಗಳಲ್ಲ., ಹುಚ್ಚಪ್ಪ ಅವರು ಬೆಂಗಳೂರಿನ ಮೇಯರ್ ಆಗಿದ್ದರೆಂಬುದು ಮತ್ತು ಅವರ ಮಾತು.

[೧೯೯೯]

Be First to Comment

Leave a Reply

Your email address will not be published. Required fields are marked *